ಆಧ್ಯಾತ್ಮಿಕ ಬದುಕಿನಲ್ಲಿ ಕ್ಷಿಪ್ರ ಪ್ರಗತಿ

ಧರ್ಮಾರ್ಥ ಉತ್ತಮ ಶ್ಲೋಕಂ ತಂತುಃ ತನ್ವನ್‌ ಪಿತೃನ್‌ ಯಜೇತ್‌ ।

ರಕ್ಷಾಕಾಮಃ ಪುಣ್ಯ ಜನಾನೋಜಸ್‌ ಕಾಮೋ ಮರುದ್‌ ಗಣಾನ್‌ ॥

ಅಧ್ಯಾತ್ಮ ಜ್ಞಾನವೃದ್ಧಿಗಾಗಿ ಶ್ರೀ ವಿಷ್ಣುವನ್ನು ಅಥವಾ ಅವನ ಭಕ್ತನನ್ನು ಪೂಜಿಸಬೇಕು. ಸಂತಾನ ರಕ್ಷಣೆಗಾಗಿ ಮತ್ತು ವಂಶವೃದ್ಧಿಗಾಗಿ ನಾನಾ ದೇವತೆಗಳನ್ನು ಪೂಜಿಸಬೇಕು.

ಪರಿಶುದ್ಧ ಭಕ್ತಿ ಸೇವೆಯು ವಿಶೇಷವಾಗಿ ಬುದ್ಧಿವಂತರಿಗಾಗಿ. ದೇವತೆಗಳನ್ನು ಪೂಜಿಸುವ ಇತರರು ಅಷ್ಟೇನು ಬುದ್ಧಿವಂತರಲ್ಲ. ವೇದಗಳು ವಿವಿಧ ವರ್ಗದ ಜನರಿಗೆ ವಿವಿಧ ಪೂಜಾ ರೀತಿಯನ್ನು ವಿವರಿಸುತ್ತವೆ. ವ್ಯಕ್ತಿಯು ದೇವತೆಗಳನ್ನು ಪೂಜಿಸಿ ಅಥವಾ ಯಜ್ಞ ಮಾಡಿ ಲೌಕಿಕ ಲಾಭ ಪಡೆದು ತೃಪ್ತರಾಗುವಂತೆ ಮಾಡುವುದು ವೇದಗಳ ನಿಜವಾದ ಉದ್ದೇಶವಲ್ಲ.

ಭಕ್ತರಿಗೆ ಫಲಗಳನ್ನು ನೀಡಲು ಅಂತಿಮವಾಗಿ ದೇವತೆಗಳು ಸ್ವತಂತ್ರರಲ್ಲ. ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ ಮಾತ್ರ ಕೆಲವು ಲಾಭಗಳನ್ನು ಅವರು ನೀಡಬಲ್ಲರು. ಯಾರಿಗಾದರೂ ನಿರಾಕಾರವಾದಿ ಬ್ರಹ್ಮ ಜ್ಯೋತಿ ತೇಜಸ್ಸಿನಲ್ಲಿ ತಲ್ಲೀನವಾಗಬೇಕೆನಿಸಿದರೆ ಅವರು ಬ್ರಹ್ಮನ್‌ ಅನ್ನು ಪೂಜಿಸಬೇಕು ಅಥವಾ ಪ್ರಬಲ ಲೈಂಗಿಕ ಕ್ರಿಯೆಯ ಅಪೇಕ್ಷೆ ಇದ್ದರೆ ಇಂದ್ರನನ್ನು ಪೂಜಿಸಬೇಕೆಂದು ಶುಕದೇವ ಗೋಸ್ವಾಮಿ ಅವರು ಹೇಳುತ್ತಾರೆ.

ನಿರ್ದಿಷ್ಟ ದೇವತೆಯನ್ನು ಪೂಜಿಸಿ ಎಂದು ಕಡಮೆ ಬುದ್ಧಿವಂತರಿಗೆ ಸಲಹೆ ಮಾಡಲಾಗುತ್ತದೆ. ಹೀಗೆ, ದೇವತೆಗಳಿಗೆಲ್ಲ ದೇವೋತ್ತಮನಾದ ಶ್ರೀ ವಿಷ್ಣುವಿನ ಒಪ್ಪಿಗೆ ಪಡೆಯಬೇಕೆಂಬ ಗ್ರಹಿಕೆಯ ಮಟ್ಟಕ್ಕೆ ಅವರನ್ನು ಕ್ರಮೇಣ ತರಲಾಗುವುದು. ಸಾವು ಸಂಭವಿಸಿದಾಗ ಅಥವಾ ಅಂತಹ ಲೌಕಿಕ ಲಾಭವು ತಾತ್ಕಾಲಿಕ ಎಂಬುವುದನ್ನು ವ್ಯಕ್ತಿ ಅರ್ಥಮಾಡಿಕೊಂಡಾಗ ಆ ಅರಿವಾಗುತ್ತದೆ. ಆದರೆ, ದೇವತೆಗಳನ್ನು ಪೂಜಿಸುವವರು ಆ ನಿರ್ದಿಷ್ಟ ದೇವತೆಯ ಗ್ರಹದಿಂದ ಆಚೆಗೆ, ಎತ್ತರಕ್ಕೆ ಹೋಗಲಾರರು ಎಂದು ಭಗವದ್ಗೀತೆ ಮತ್ತು ಎಲ್ಲ ವೈದಿಕ ಸಾಹಿತ್ಯಗಳು ಸೂಚಿಸಿವೆ. ವ್ಯಕ್ತಿಯು ಸಾಕಷ್ಟು ಬುದ್ಧಿವಂತನಾಗಿಲ್ಲದಿದ್ದರೆ ಭಗವದ್ಗೀತೆಯ ಅಂತಹ ಬೋಧನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಕೃಷ್ಣನು ಇಡೀ ವೈದಿಕ ಜ್ಞಾನವನ್ನು ಸಂಕ್ಷಿಪ್ತಗೊಳಿಸಿ ಅದರ ಸಾರವನ್ನು ನೀಡುತ್ತಾನೆ.

ವೇದಗಳ ಬಹು ಪಾಲನ್ನು ಕರ್ಮಕಾಂಡ ಎಂದು ಕರೆಯುತ್ತಾರೆ. ಏಕೆಂದರೆ ಈ ಜಗತ್ತಿನ ಬಹುತೇಕ ಜನರು ಲೌಕಿಕ ಆನಂದದಲ್ಲಿಯೇ ಆಸಕ್ತರು, ಆದುದರಿಂದ ದೇವತೆಗಳನ್ನಾದರೂ ಪೂಜಿಸಿ ಅಥವಾ ಯಜ್ಞವನ್ನಾದರೂ ಮಾಡಿ ತಮಗೆ ಅರಿವಿಲ್ಲದಂತೆಯೇ ಅವರು ದೇವೋತ್ತಮನ ಸಂಪರ್ಕಕ್ಕೆ ಬರುತ್ತಾರೆ.

ದೇವೋತ್ತಮನೊಂದಿಗೆ ಪರೋಕ್ಷ ಸಂಪರ್ಕವೂ ಕೂಡ ವ್ಯಕ್ತಿಯನ್ನು ಎತ್ತರದ ಸ್ಥಾನಕ್ಕೆ ತರುತ್ತದೆ, ಅವನ ಬುದ್ಧಿ ವಿಸ್ತಾರವಾಗುತ್ತದೆ. ಇದು ಜ್ಞಾನದ ನಿಜವಾದ ಆಧ್ಯಾತ್ಮಿಕ ಪ್ರಗತಿ.

ಭಗವದ್ಗೀತೆಯು ಮಾನವರಿಗಾಗಿ ಇರುವುದು, ನಾಯಿ-ಬೆಕ್ಕುಗಳಿಗಲ್ಲ ಎಂದು ಶ್ರೀಲ ಪ್ರಭುಪಾದರು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ. ವ್ಯಾಸರು ವೈದಿಕ ಸಾಹಿತ್ಯವನ್ನು ರಚಿಸಿದ್ದು ಮಾನವರಿಗಾಗಿ. ಮಾನವ ಜೀವಿಗೆ ಬ್ರಹ್ಮನ್‌ ಏನೆಂದು ವಿಚಾರಿಸಲು ಅವಕಾಶವಿದೆ. ಆದುದರಿಂದ, ಭಾಗವತದ ಆರಂಭದಲ್ಲಿ, ಪ್ರಾರಂಭದ ಶ್ಲೋಕದಲ್ಲಿ ವ್ಯಾಸದೇವರು ಹೇಳುತ್ತಾರೆ – ಸತ್ಯಂ ಪರಂ ಧೀಮಹಿ – ನಾನು ದೇವೋತ್ತಮ ಪರಮ ಪುರುಷ ವಾಸುದೇವನನ್ನು ಧ್ಯಾನಿಸುವೆ – ಓಂ ನಮೋ ಭಗವತೇ ವಾಸುದೇವಾಯ – ಏಕೆಂದರೆ ಅವನು ಪರಮ ಸತ್ಯ – ಸತ್ಯಂ ಪರಂ. ಈ ಲೌಕಿಕ ಲೋಕದಲ್ಲಿ ನಮಗೆ ಕಾಲ್ಪನಿಕ ಸತ್ಯದ ಅನುಭವವಿದೆ, ಅದು ಬದುಕಿನ ಎಲ್ಲ ಹಂತದಲ್ಲಿಯೂ ಸತ್ಯವಲ್ಲ.

ಕಾಲ್ಪನಿಕ ಸತ್ಯವು ಸತ್ಯವಲ್ಲ ಎಂಬುವುದನ್ನು ಗುರುತಿಸುವಷ್ಟು ಬುದ್ಧಿಯನ್ನು ಮಾನವ ಜೀವಿ ಬೆಳೆಸಿಕೊಂಡಿದ್ದಾನೆ. ಏಕೆಂದರೆ ಅದು ಎಲ್ಲ ಸಮಯದಲ್ಲಿಯೂ ನಿಜವಲ್ಲ ಎಂಬುವುದನ್ನು ಅವನು ಕಂಡಿದ್ದಾನೆ. ಆದುದರಿಂದ ಅವನು ತನ್ನ ಕಾಲ್ಪನಿಕ ಸತ್ಯವನ್ನು ಬಿಟ್ಟು ಪರಮ ಸತ್ಯದ ಲೋಕದಲ್ಲಿ ಪ್ರಗತಿ ಸಾಧಿಸಲು ಆಶಿಸುತ್ತಾನೆ.

ಕೆಲವರು ಯಾವುದೋ ಲೌಕಿಕ ಲಾಭ ಅಪೇಕ್ಷಿಸುತ್ತ ಜ್ಞಾನದ ವೇದಿಕೆಗೆ ಬರುತ್ತಾರೆ. ಇನ್ನೂ ಕೆಲವರಿದ್ದಾರೆ. ಅವರು ಪ್ರಾಣಿಗಳಂತೆ ಬದುಕುತ್ತಿರುತ್ತಾರೆ – ದ್ವಿಪಾದ ಪಶು. ಅವರು ಊಟ, ನಿದ್ರೆ, ಲೈಂಗಿಕ ತೃಪ್ತಿ ಅಥವಾ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಚಟುವಟಿಕೆ, ಜ್ಞಾನ ಮುಂತಾದುವುಗಳನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಅವರ ಬುದ್ಧಿ ಮಾನವನ ಮಟ್ಟಕ್ಕೆ ಇರುವುದಿಲ್ಲ, ಅದು ಪ್ರಾಣಿಗಳ ಮಟ್ಟದಲ್ಲಿರುತ್ತದೆ. ಆದುದರಿಂದ ಮಾನವ ಜೀವಿಗಳಿಗೆ ಹೆಚ್ಚುವರಿ ಚಟುವಟಿಕೆ ಇರುತ್ತದೆ ಮತ್ತು ಅದು ಧಾರ್ಮಿಕ ಪಥದತ್ತ ಸಾಗುವುದು ಎಂದು ಧರ್ಮ ಗ್ರಂಥಗಳು ಹೇಳುತ್ತವೆ. ವಾಸ್ತವವಾಗಿ ಇದು, ಶ್ರೀಲ ಪ್ರಭುಪಾದರು ಹೇಳುವಂತೆ ಆಧ್ಯಾತ್ಮಿಕ ಪ್ರಗತಿಗಾಗಿ ಶ್ರೀ ವಿಷ್ಣು ಅಥವಾ ಅವನ ಭಕ್ತರನ್ನು ಪೂಜಿಸುವ ಅಗತ್ಯವನ್ನು ಸೂಚಿಸುತ್ತದೆ.

ದೇಹ ಮತ್ತು ಆತ್ಮದ ನಡುವಣ ವ್ಯತ್ಯಾಸವನ್ನು ಭಗವದ್ಗೀತೆ ಸ್ಪಷ್ಟಪಡಿಸಿದೆ. ಇದನ್ನು ವಿವರಿಸುತ್ತ ಕೃಷ್ಣನು ಹೇಳುತ್ತಾನೆ, ನಿಜವಾಗಿಯೂ ತಿಳವಳಿಕೆ ಉಳ್ಳವನು ದೇಹದ ಯಾವುದೇ ಸ್ಥಿತಿಗೂ ಮರುಗುವುದಿಲ್ಲ. ಈ ಬೋಧನೆಯಿಂದ ವ್ಯಕ್ತಿಯು, ಲೈಂಗಿಕ ಆನಂದದ ಹಿನ್ನೆಲೆಯಲ್ಲಿ ಲೌಕಿಕ ಲಾಭದ ಆಚೆಗೆ ಉನ್ನತ ಸ್ಥಾನ ಏರುತ್ತಾನೆ. ಕೃಷ್ಣ ಹೇಳುತ್ತಾನೆ, ದೇಹವು ತಾತ್ಕಾಲಿಕ, ಆದರೆ ನೀನು ದೇಹವಲ್ಲ, ನೀನು ಆಧ್ಯಾತ್ಮಿಕ ಆತ್ಮ. ಮಾನವ ಜೀವಿಗಳಾಗಿ ಈ ಬದುಕಿನಲ್ಲಿಯೂ ಕೂಡ ನಮ್ಮ ದೇಹ ಬದಲಾಗುತ್ತಿದೆ, ನಾನು ಅದೇ ವ್ಯಕ್ತಿ, ಆದುದರಿಂದ ನಾನು ದೇಹವಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳಬಲ್ಲೆವು. ದೇಹಿನೋ ಅಸ್ಮಿನ್‌ ಯಥಾ ದೇಹೇ ಕೌಮಾರಂ ಯೌವನಂ ಜರಾ ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ , ಮುಪ್ಪಿಗೆ ಒಂದೇ ಸಮನೆ ಸಾಗುತ್ತದೆ.

ಕೃಷ್ಣನು ನಮ್ಮನ್ನು ಆಧ್ಯಾತ್ಮಿಕ ಪ್ರಗತಿಯ ಪಥದ ಮೇಲೆ, ಈ ಎಲ್ಲ ಭಿನ್ನ ಸಾಕ್ಷಾತ್ಕಾರಗಳ ಮೂಲಕ ವ್ಯವಸ್ಥಿತವಾಗಿ ಕರೆದೊಯ್ಯುತ್ತಿದ್ದಾನೆ ಮತ್ತು ವೈದಿಕ ಬೋಧನೆಗಳನ್ನು ಸಂಕ್ಷಿಪ್ತಗೊಳಿಸುತ್ತಿದ್ದಾನೆ. ಮುಖ್ಯವಾಗಿ ವೈದಿಕ ಬೋಧನೆಗಳನ್ನು ಅನುಸರಿಸುತ್ತ ಕ್ರಮೇಣ ಎತ್ತರಕ್ಕೆ ಹೋಗುವ ಮಾನವ ಜೀವದ ರೂಪದ ಲಾಭವನ್ನು ಜನರು ಈ ಕಲಿಯುಗದಲ್ಲಿ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದಲೇ ಕಲಿಯುಗದಲ್ಲಿ ಭಗವದ್ಗೀತೆ ಮತ್ತು ಭಾಗವತವು ಜನರಿಗಾಗಿ ಇರುವುದು.

ಮಹಾಭಾರತದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಬೋಧಿಸುವಾಗ ವಿಶೇಷವಾಗಿ ಈ ಧರ್ಮದ ಬಗೆಗೆ ವಿವರಿಸುತ್ತಾನೆ. ಮಾನವ ಜೀವಿಗಳೆಂದರೆ ಅವರು ಧರ್ಮವನ್ನು ಅನುಸರಿಸಬೇಕು, ಧರ್ಮವನ್ನು ಆಚರಿಸಬೇಕು. ಅದೇ ಬಹುಪಾಲು ಮಹಾಭಾರತ ಪಠ್ಯ. ಆದರೂ ಈ ಎಲ್ಲ ಧರ್ಮದ ಸಾರವೇನೆಂದು ಯುಧಿಷ್ಠಿರ ಪುನಃ ಕೇಳುತ್ತಾನೆ. ಆ ಎಲ್ಲ ನಿರ್ದೇಶನಗಳನ್ನು ಅನುಸರಿಸುತ್ತ ಧರ್ಮದ ಪಥದಲ್ಲಿ ನಿಜವಾಗಿಯೂ ಜನರಿಗೆ ಪ್ರಗತಿಯ ಸಾಧ್ಯತೆ ಇಲ್ಲ. ಕೃಷ್ಣನು ಇದೇ ಸಾರವನ್ನು ಭಗವದ್ಗೀತೆಯಲ್ಲಿ ನೀಡಿದ್ದಾನೆ.

ವ್ಯಾಸರು ಮಹಾಭಾರತದಲ್ಲಿ ಧರ್ಮದ ವಿವಿಧ ರೀತಿಗಳನ್ನು ವಿವರಿಸುತ್ತಾರೆ. ಯಾರಾದರೂ ಅಕಸ್ಮಾತ್‌ ಅದನ್ನು ಗಮನಿಸದಿದ್ದರೆ, ಅವರಿಗಾಗಿ ಭಗವದ್ಗೀತೆಯಲ್ಲಿ ಇಡೀ ಧರ್ಮ ಭಾಗದ ಸಾರವನ್ನು ನೀಡಿದ್ದಾರೆ. ಲೌಕಿಕ ಬಂಧನದಿಂದ ಮುಕ್ತರಾಗುವ ಅವಕಾಶವಿರುವ ಇಡೀ ಮಾನವ ಸಮಾಜದ ಕಲ್ಯಾಣವೇ ಅವರ ಉದ್ದೇಶ. ಭಾಗವತವು ವಿವರಿಸುವಂತೆ, ಜನರ ಜೀವಿತಾವಧಿ ಅಲ್ಪ, ಮತ್ತು ಅವರನ್ನು ಧರ್ಮದ ದಾರಿಯಲ್ಲಿಯೂ ಕೂಡ ಸುಲಭವಾಗಿ ತಪ್ಪುದಾರಿಗೆಳೆಯಬಹುದು. ವ್ಯಾಸದೇವರು ನಮ್ಮ ಮೇಲೆ ಕೃಪೆ ತೋರಿ ನಮಗೆ ಭಗವದ್ಗೀತೆ ಮತ್ತು ಭಾಗವತವನ್ನು ನೀಡಿದ್ದಾರೆ. ಶ್ರೀ ಚೈತನ್ಯ ಮಹಾಪ್ರಭುಗಳು ಮುಖ್ಯವಾಗಿ ಈ ಎರಡು ಧರ್ಮ ಗ್ರಂಥಗಳ ಬಗೆಗೆ ಒತ್ತಿ ಹೇಳಿದ್ದಾರೆ. ಮಾನವ ಜೀವಿಗೆ ಬದುಕಿನ ಅಂತಿಮಗುರಿ ಸಾಧನೆಗೆ ಅಗತ್ಯವಾದ ಎಲ್ಲವೂ ಅವುಗಳಲ್ಲಿವೆ.

ಭಗವದ್ಗೀತೆಯನ್ನು ಭಾಗವತದ ಪೂರ್ವಭಾವಿ ಅಧ್ಯಯನ ಎಂದು ಹೇಳುತ್ತಾರೆ. ಭಾಗವತವನ್ನು ಕೇಳುವುದರಿಂದಲೇ ಲೌಕಿಕ ಆನಂದ ಸೇರಿದಂತೆ ಎಲ್ಲ ಅಪೇಕ್ಷೆಗಳ ತೃಪ್ತಿ ಸಾಧ್ಯ. ಅದು ಹೃದಯದ ಪರಿಶುದ್ಧತೆಗೂ ಸಹಾಯಕಾರಿ.

ಜ್ಞಾನದ ಆಧ್ಯಾತ್ಮಿಕ ಪ್ರಗತಿ ಎಂದರೆ, ಹೃದಯ ಪರಿವರ್ತನೆಯಾಗಬೇಕು. ಯಾವ ರೀತಿ ಬುದ್ಧಿವಂತರಾಗುವುದೆಂದರೆ, ಐಹಿಕ ಪ್ರಗತಿಯ ವಿವಿಧ ಮಟ್ಟಗಳ ಮೂಲಕ ನಾನು ಹೇಗೆ ಎತ್ತರಕ್ಕೆ ಏರುವುದರ ಬಗೆಗೆ ವಿಚಾರಿಸುವುದೆಂದಲ್ಲ, ಪರಮ ಸತ್ಯವನ್ನು ಕುರಿತು ಕೇಳುವ ಹಂತಕ್ಕೆ ನಾನು ಹೇಗೆ ಬರುವುದು ಎಂಬುವುದು. ಕೃಷ್ಣನ ಪೂಜೆ ಅಥವಾ ಪರಿಶುದ್ಧ ಭಕ್ತಿ ಸೇವೆಯ ಮೂಲಕ ಇದು ಸಾಧ್ಯ.

ಆದುದರಿಂದ ಶುಕದೇವ ಗೋಸ್ವಾಮಿಯವರು ಆರಂಭದಲ್ಲಿ ಭಗವಂತನ ವಿರಾಟ್‌ರೂಪ ಅಥವಾ ಹೃದಯದಲ್ಲಿ ಪರಮಾತ್ಮನ ರೂಪದಲ್ಲಿ ಪೂಜಿಸಬೇಕೆಂದು ಹೇಳಿದರೂ ಅಂತಿಮವಾಗಿ, ಈ ರೀತಿ ಪರಿಸಮಾಪ್ತಗೊಳಿಸುತ್ತಾರೆ : ಅತ್ಯುತ್ತಮವೆಂದರೆ ನೀವು ಭಗವಂತನ ರೂಪದಲ್ಲಿ ದೇವೋತ್ತಮ ಪರಮ ಪುರುಷನನ್ನು ನೇರವಾಗಿ ಪೂಜಿಸಿ. ಆದುದರಿಂದ ಪ್ರಭುಪಾದರು ಹೇಳುತ್ತಾರೆ, ಆಧ್ಯಾತ್ಮಿಕ ಪ್ರಗತಿ ಪಥದಲ್ಲಿ ಮುನ್ನಡೆಯುವುದೆಂದರೆ ಅವನ ನಿರಾಕಾರ ಕಾಂತಿಯಲ್ಲಿ, ಅವನ ಅಂತರ್ಯಾಮಿ ರೂಪದಲ್ಲಿ ಮತ್ತು ಅಂತಿಮವಾಗಿ ಅವನ ಮೂರ್ತ ರೂಪದಲ್ಲಿ ಶ್ರೀ ವಿಷ್ಣುವಿನೊಂದಿಗೆ ಬಾಹ್ಯ ಸಂಪರ್ಕವನ್ನು ಪುನರ್‌ ಸ್ಥಾಪಿಸುವುದಾಗಿದೆ. ಪರಮ ಸತ್ಯವನ್ನು ಮೂರು ಹಂತಗಳಲ್ಲಿ ಗ್ರಹಿಸಿಕೊಳ್ಳಲಾಗುವುದೆಂದು ಭಗವದ್ಗೀತೆ ಮತ್ತು ಭಾಗವತಗಳಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ ಅತ್ಯುತ್ತಮ ಗ್ರಹಿಕೆ ಎಂದರೆ ದೇವೋತ್ತಮ ಪರಮ ಪುರುಷನಾಗಿ ಪರಮ ಸತ್ಯವನ್ನು ಅರ್ಥಮಾಡಿಕೊಳ್ಳುವುದು.

ವ್ಯಕ್ತಿಯ ಬದುಕಿನ ಅಂತ್ಯದಲ್ಲಿ, ಅವನ ಅಪೇಕ್ಷೆಗಳ ಆಧಾರದ ಮೇಲೆ ಸಾಯುತ್ತಿರುವ ಅವನ ಕರ್ತವ್ಯವೇನು? ಅವನು ಏನು ಹೊಂದಬೇಕು? ಪರೀಕ್ಷಿತ ಮಹಾರಾಜನ ಈ ಪ್ರಶ್ನೆಗೆ ಶುಕದೇವ ಗೋಸ್ವಾಮಿ ಅವರು ಮುಕ್ತಾಯ ಹಾಡಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi