ಧರ್ಮದ ನೆಲೆ

ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ.

ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ ಪರಿಗಣಿತವಾಗಿದೆ.

ಐದು ಸಾವಿರ ವರ್ಷಗಳ ಹಿಂದೆ ಅಲ್ಲಿ ಒಂದು ಧರ್ಮ ಸಭೆ ನಡೆಯಿತು. ಶುಕ ಮುನಿಗಳ ಶಿಷ್ಯರಲ್ಲೊಬ್ಬರಾದ ಸೂತ ಪೌರಾಣಿಕರು ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕೆಂದೂ, ಅಧ್ಯಕ್ಷರು ಅಂದಿನ ಗೋಷ್ಠಿಯಲ್ಲಿ ಕೃಷ್ಣಪ್ರಜ್ಞೆಯ ವಿಷಯವಾಗಿ ಮಾತನಾಡಬೇಕೆಂದೂ ಸಭೆ ನಿರ್ಧರಿಸಿತು.

ಅಂದಿನ ಆ ಸಭೆಯಲ್ಲಿ ನೆರೆದಿದ್ದ ಸಂತರು ಸೂತ ಪೌರಾಣಿಕರೆದುರಿಗೆ ಕೃಷ್ಣನ ತೀರೋಭಾವದ ತರುವಾಯ ಧರ್ಮ ಹಾಗೂ ಜ್ಞಾನ ಪ್ರಸಾರದ ಹೊಣೆಯನ್ನು ಯಾರಿಗೆ ವಹಿಸಲಾಯಿತು? ಇತ್ಯಾದಿ ಹಲವು ಪ್ರಶ್ನೆಗಳನ್ನು ಮಂಡಿಸಿದರು.

ಯಾವುದು ಲೋಕಕ್ಕೆ ಹಿತವನ್ನುಂಟು ಮಾಡುತ್ತದೋ ಅದೇ ಧರ್ಮ. ಜ್ಞಾನ ಎಂದರೆ ತಿಳಿವು. ಕೃಷ್ಣನು ಈ ಭೂಮಿಯಲ್ಲಿ ಅವತರಿಸಿದಾಗ ಹೀಗೆಂದು ನುಡಿದನು –

”ಧರ್ಮಪರಾಯಣರಾದವರನ್ನು ಸ೦ರಕ್ಷಿಸಿ, ದುಷ್ಟರನ್ನು ಶಿಕ್ಷಿಸಲು, ಹಾಗೆಯೇ ಧರ್ಮತತ್ತ್ವಗಳನ್ನು ಎತ್ತಿ ಹಿಡಿಯಲು ನಾನು ಯುಗ ಯುಗಗಳಲ್ಲಿಯೂ ಅವತಾರ ಮಾಡುತ್ತಿರುತ್ತೇನೆ. ವೇದಗಳು ಹೇಳುವ ಪ್ರಕಾರ ಬ್ರಹ್ಮನ ಲೆಕ್ಕದ ಪ್ರತಿದಿನವೂ ಕೃಷ್ಣನು ಅವತರಿಸುತ್ತಾನೆ. ಬ್ರಹ್ಮನ ಆಯುಷ್ಯ ಎಷ್ಟೆಂಬುದನ್ನು ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. ಅದು ತುಂಬ ದೀರ್ಘಾವಧಿಯದು.

 ಬ್ರಹ್ಮನ ಒಂದು ಹಗಲನ್ನು – (ಬೆಳಗ್ಗಿನಿಂದ ಸಂಜೆಯತನಕದ ಹನ್ನೆರಡು ಗಂಟೆಗಳನ್ನು) ಗೀತೆ ಹೀಗೆ ವರ್ಣಿಸುತ್ತದೆ: ಸಹಸ್ರ ಯುಗ ಪರ್ಯಂತಮ್ ಅಹರ್ ಯದ್ ಬ್ರಹ್ಮಣೋ ವಿಧುಃ. ಯುಗ ಎಂದರೆ ಕಾಲ. ವೈದಿಕ ಸಂಸ್ಕೃತಿಯ ಪ್ರಕಾರ ಈಗ ನಾವಿರುವ ಕಾಲಮಾನವನ್ನು ಕಲಿಯುಗ ಎಂದು ಕರೆಯಲಾಗಿದೆ. ಯುಗಗಳು ನಾಲ್ಕು: ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ.

ಈ ನಾಲ್ಕು ಯುಗಗಳನ್ನು ಒಳಗೊಂಡರೆ ಸುಮಾರು 4.3 ಮಿಲಿಯ ವರ್ಷಗಳಾಗುತ್ತವೆ. ಈ ಸಂಖ್ಯೆಯನ್ನು 1000 ದಿಂದ ಗುಣಿಸಿದರೆ ಬರುವ ಗುಣಲಬ್ಧವು ಬ್ರಹ್ಮನ ಹನ್ನೆರಡು ಘಂಟೆಗಳಿಗೆ ಸಮನಾಗುತ್ತದೆ. ಈ ಲೆಕ್ಕಾಚಾರವನ್ನು ಅನುಸರಿಸಿ ಬ್ರಹ್ಮನು ಒಂದು ನೂರು ವರ್ಷಗಳ ಕಾಲ ಜೀವಿಸುತ್ತಾನೆ.

ಬ್ರಹ್ಮನ ಆಯುಷ್ಯದ ಒಂದೊಂದು ದಿನವೂ ಕೃಷ್ಣನು ಅವತರಿಸುತ್ತಾನೆ. ಇದು ನಮಗೆ ವೈದಿಕ ಸಾಹಿತ್ಯದಿಂದ ತಿಳಿದುಬರುವ ಸಂಗತಿ. ತಾನು ಈ ಲೋಕಕ್ಕೆ ಬರುವುದರ ಉದ್ದೇಶವನ್ನು ಕೃಷ್ಣನು ವಿವರಿಸುತ್ತಾನೆ. ಕೃಷ್ಣನು ಜಗದೊಡೆಯ. ಇಲ್ಲಿಗೆ ಬರಬೇಕಾದ ಪ್ರಮೇಯವೇನೂ ಅವನಿಗಿಲ್ಲ. ಆದರೆ ಅವನು ಇಲ್ಲಿಗೆ ಬರುವುದರಲ್ಲಿ ಒಂದು ಉದ್ದೇಶವಿದೆ. ಭಗವಂತನು ಭೂಮಿಗೆ ಬರಬೇಕೆ೦ದು ಬಯಸಿದರೆ ಅವನನ್ನು ಯಾರೂ ತಡೆಯಲಾರರು.

“ಭಗವಂತನು ಭೂಮಿಗೆ ಬರಬೇಕೇಕೆ? ಇದು ಜನಗಳ ಬಾಯಿಂದ ಬರುವ ಪ್ರಶ್ನೆ.

ನಮ್ಮ ಉತ್ತರ: ಭಗವಂತನು ಭೂಮಿಗೆ ಬರಬಾರದೇಕೆ? ಭಗವಂತನು ಸರ್ವಶಕ್ತ ಎಂದ ಮೇಲೆ ಅವನು ಇಲ್ಲಿಗೆ ಬರುವುದನ್ನು ತಡೆಯಬಲ್ಲವರು ಯಾರಿದ್ದಾರೆ? ಭಗವಂತನು ಭೂಮಿಗೆ ಬರುವಂತಿಲ್ಲ ಎಂದು ನಾವು ಹೇಳಿದೆವಾದರೆ, “ಅವನು ಇಲ್ಲಿಗೆ ಬಂದರೆ ನಾವು ಹಾಕುವ ವಿಧಿನಿಷೇಧಗಳಿಗೆ ಒಳಪಟ್ಟು ಬರಬೇಕು’ ಎಂದು ಹೇಳಿದಂತಾಗುತ್ತದೆ.

ವೈದಿಕ ಧರ್ಮಗ್ರಂಥಗಳ ಪ್ರಕಾರ ಪರಮ ಪ್ರಭುವು ಭೂಮಿಗೆ ಬರುತ್ತಾನೆ ಮತ್ತು ತಾನು ಬರುವುದೇಕೆಂಬುದನ್ನು ತಿಳಿಸುತ್ತಾನೆ. ಯದಾ ಯದಾಹಿ ಧರ್ಮಸ್ಯ ಗ್ಲಾನಿ‌ರ್‌ ಭವತಿ – ಧರ್ಮತತ್ತ್ವಗಳ ಅನುಷ್ಠಾನದಲ್ಲಿ ಎಲ್ಲಾದರೂ ಏರುಪೇರುಗಳು ಕಂಡು ಬಂದರೆ ಭಗವಂತನು ಬರುತ್ತಾನೆ. ಯದಾ ಯದಾಹಿ ಧರ್ಮಸ್ಯ ಜ್ಞಾನಿರ್‌‌ ಭವತಿ… ಅಭ್ಯುತ್ಥಾನಾಮ್‌ ಅಧರ್ಮಸ್ಯ. ಧರ್ಮತತ್ತ್ವಗಳ ಆಚರಣೆಯ ಹಾದಿಯಲ್ಲಿ ಅಡಚಣೆಗಳು ಎದುರಾದಾಗ ಅಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಇದು ಸ್ವಾಭಾವಿಕ, ಬಿಗಿನೀತಿಯಿಲ್ಲದ ಸರಕಾರವೊಂದು ಆಡಳಿತ ನಡೆಸುತ್ತಿರುವಾಗ ಕಳ್ಳರ, ಧೂರ್ತರ ಸಂಖ್ಯೆ ಹೆಚ್ಚಾಗುತ್ತದೆ. ಅದೇ

ಸರಕಾರವು ಕಠಿಣತೆಯಿ೦ದ ವರ್ತಿಸಿದರೆ ಕಾಕಪೋಕರು ಪ್ರಾಧಾನ್ಯಕ್ಕೆ ಬರಲು ಆಸ್ಪದವಿರುವುದಿಲ್ಲ: ಇರಲಿ. ಕೃಷ್ಣನು ಬರುವಾಗ ಅವನ ಬರುವಿನಲ್ಲಿ ಎರಡು ಉದ್ದೇಶಗಳಿರುತ್ತವೆ. ಪರಿತ್ರಾಣಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ದೈವಭಕ್ತರಿಗೆ, ಪ್ರಾಮಾಣಿಕರಿಗೆ ರಕ್ಷಣೆ ಒದಗಿಸುವುದು ಮತ್ತು ರಾಕ್ಷಸರನ್ನು ಸಂಹಾರ ಮಾಡುವುದು.

ಕೃಷ್ಣನು ಈ ಭೂಮಿಯಲ್ಲಿದ್ದಾಗ ಈ ಎರಡು ಗುಣಗಳನ್ನೂ ಪ್ರದರ್ಶಿಸಿದನು. ನಾರಾಯಣ ಅಥವಾ ವಿಷ್ಣುವಿನ ಚಿತ್ರವನ್ನು ನೀವೆಲ್ಲ ನೋಡಿರಬಹುದು. ವಿಷ್ಣುವಿಗೆ ನಾಲ್ಕು ಕೈಗಳಿವೆ. ಎರಡು ಕೈಗಳಲ್ಲಿ ಪದ್ಮ ಹಾಗೂ ಶಂಖಗಳಿವೆ.

ಇನ್ನೆರಡು ಕೈಗಳಲ್ಲಿ ಕ್ರಮವಾಗಿ ಗದೆ ಹಾಗೂ ಚಕ್ರಗಳಿವೆ. ಗದೆ ಹಾಗೂ ಚಕ್ರಗಳು ವಿನಾಶಾಯ ಚ ದುಷ್ಕೃತಮ್- ದುಷ್ಟರನ್ನು ಸಂಹರಿಸುವುದಕ್ಕಾಗಿ ಇವೆ. ದೈವಭಕ್ತರನ್ನು ಆಶೀರ್ವದಿಸಲೆಂದು, ಅವರಿಗೆ ವರಪ್ರದಾನ ಮಾಡಲೆಂದು ಶಂಖ ಹಾಗೂ ಪದ್ಮಪುಷ್ಪಗಳಿವೆ.

ಕೃಷ್ಣನ ವಿಷಯವು ನಮಗೆ ಭಗವದ್ಗೀತೆಯಿಂದ ತಿಳಿದು ಬರುತ್ತದೆ. ಪ್ರಸುತ್ತ ಭಗವದ್ಗೀತೆಯು ವಿಶ್ವಮಾನ್ಯವಾದ ಕೃತಿ, ಜಗತ್ತಿನ ಎಲ್ಲರೂ ಓದಿರುವ ಧರ್ಮಗ್ರಂಥ. ಯಾವುದೇ ದೇಶವನ್ನು ಉದಾಹರಣೆಗಾಗಿ ತೆಗೆದುಕೊಂಡರೂ ಆ ದೇಶದ ಭಾಷೆಯಲ್ಲಿ ಭಗವದ್ಗೀತೆಯು ಪ್ರಕಟವಾಗಿರುವುದನ್ನು ನೀವು ನೋಡುತ್ತೀರಿ.

ಧರ್ಮ ಅಥವಾ ‘ರಿಲಿಜನ್’ನ ವಿಷಯವನ್ನು ಕುರಿತು ಕೃಷ್ಣನ ಬೋಧನೆಗಳು ಭಗವದ್ಗೀತೆಯಲ್ಲಿರುವುದನ್ನು ನೀವು ಕಾಣಬಹುದು. ತನ್ನ ಉಪದೇಶದ ಕೊನೆಯಲ್ಲಿ ಕೃಷ್ಣನು ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ “ಎಲ್ಲ ಬಗೆಯ ಧರ್ಮತತ್ತ್ವಗಳನ್ನೂ ಕೊಡವಿಹಾಕಿ, ನನಗೆ ಶರಣಾಗತರಾಗಿ” ಎಂದು ಹೇಳುತ್ತಾನೆ.

ಬೇರೆ ಇನ್ನೊಂದೆಡೆ ಎಂದರೆ ಶ್ರೀಮದ್ಭಾಗವತ ಗ್ರಂಥದಲ್ಲಿ ಧರ್ಮ೦ತು ಸಾಕ್ಷಾದ್ ಭಗವತ್ ಪ್ರಣೀತಮ್: ಧರ್ಮ ಎಂದರೆ ಸ್ವಯಂ ಭಗವಂತನು ವಿಧಿಸಿರುವ ನಿಯಮಗಳು ಎಂಬ ಮಾತನ್ನು ಹೇಳಿದೆ. ಧರ್ಮ ನಿಯಮಗಳಾದರೋ ರಾಷ್ಟ್ರವೊಂದು ಮಾಡಿಕೊಂಡಿರುವ ಕಾನೂನುಗಳಂತೆ.

ನಮ್ಮ ಬಾಳ್ವೆ ಸುಗಮವಾಗಿ ನಡೆಯಲೆಂದು ದೇಶವು ನಮ್ಮ ಮೇಲೆ ಕೆಲವು ವಿಧಿ ನಿಷೇಧಗಳನ್ನು ವಿಧಿಸುತ್ತದೆ. ಈ ನಿಯಮಗಳ ಪಾಲನೆ ಮಾಡಿದವನನ್ನು ಸತ್ಪ್ರಜೆ ಎನ್ನುತ್ತಾರೆ; ನಿಯಮಗಳ ಉಲ್ಲಂಘನೆ ಮಾಡಿದವನನ್ನು ಧೂರ್ತನೆಂದು, ಧರ್ಮಬಾಹಿರನೆಂದು ಕರೆಯುತ್ತಾರೆ.

ಇದೇ ರೀತಿ ಧರ್ಮವು ತುಂಬ ಸರಳವಾದ ವಿಷಯ. ಸ್ವಯಂ ಭಗವಂತನು ವಿಧಿಸಿರುವ ನಿಯಮಗಳನ್ನು ಒಪ್ಪಿಕೊಳ್ಳುವುದೇ ಧರ್ಮ, ಅಷ್ಟೆ ನೀವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲ, ನೀವು ಕೈಸ್ತರಾಗಿರಬಹುದು, ನಾನು ಹಿಂದೂ ಆಗಿರಬಹುದು.

ಮತ್ತೊಬ್ಬ ಯಾರೋ ಮಹಮ್ಮದೀಯನಾಗಿರಬಹುದು. ಒಬ್ಬ ವ್ಯಕ್ತಿಯು ಎಷ್ಟರಮಟ್ಟಿಗೆ ದೈವಪ್ರಜ್ಞೆಯನ್ನು ಬೆಳೆಸಿಕೊಂಡಿದ್ದಾನೆ ಎಂಬುದು ಆಯಾ ಧರ್ಮವನ್ನು ಪರೀಕ್ಷೆಗೊಡ್ಡುವ ಅಂಶ. ಧರ್ಮ ಎನ್ನುವ ಶಬ್ದಕ್ಕೆ ಶ್ರೀಮದ್ಭಾಗವತದಲ್ಲಿ ನೀಡಲಾಗಿರುವ ವ್ಯಾಖ್ಯಾನ ಇದು: ಸವೈ ಪುಂಸಾಂ ಪರೋ ಧರ್ಮಃ ಧರ್ಮದಲ್ಲಿ ಅನೇಕ ಬಗೆಯುಂಟು. “ಪರಾ” ಎಂದರೆ “ಉತ್ತಮೋತ್ತಮ” ಅಥವಾ ಅತ್ಯಂತ ಶ್ರೇಷ್ಠವಾದದ್ದು.

ಸವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿ‌ರ್‌ ಅಧೋಕ್ಷಜೇ. ಅಧೋಕ್ಷಜ ಎನ್ನುವುದು ಭಗವಂತನ ವರ್ಣನೆ. ಈ ಶಬ್ದಕ್ಕೆ “ಐಹಿಕ ಇಂದ್ರಿಯಗಳಿಗೆ ಎಟುಕದ್ದು” ಎಂದು ಅರ್ಥ. ನೇರವಾದ ಪ್ರಯೋಗಾತ್ಮಕ ಜ್ಞಾನವು ಭಗವಂತನನ್ನು ಅರಿಯಲಾರದು.

”ಕೋಟಿ ಕೋಟಿ ಜನಗಳ ಪೈಕಿ ಎಲ್ಲೋ ಒಬ್ಬನು ತನ್ನ ಬದುಕನ್ನು ಯಶಸ್ವಿಗೊಳಿಸಿಕೊಳ್ಳುವುದರಲ್ಲಿ ಆಸಕ್ತನಾಗಿರುತ್ತಾನೆ. ಅಂತಹ ಕೋಟಿ ಕೋಟಿ ಯಶಸ್ವೀ ವ್ಯಕ್ತಿಗಳಲ್ಲಿ ಎಲ್ಲೋ ಒಬ್ಬನು ಮಾತ್ರ ಭಗವಂತನನ್ನು ಅರ್ಥಮಾಡಿಕೊಳ್ಳಬಲ್ಲ.”

ಭಗವದ್ಗೀತೆಯಲ್ಲಿರುವ ಉಕ್ತಿ ಇದು. ದಿಟದಲ್ಲಿ ಜನ ಆರ್ಥಿಕವಾಗಿ ಸಂಪನ್ನರಾಗಲು ಯತ್ನಿಸುವುದನ್ನು ಹಾಗೂ ಇಂದ್ರಿಯತುಷ್ಟಿಯಲ್ಲಿ ಮಗ್ನರಾಗುವುದನ್ನು ನಾವು ಸಾಧಾರಣವಾಗಿ ಕಾಣಬಹುದು. ನಾನು ಪ್ರಪಂಚದಾದ್ಯಂತ ಸಂಚಾರ ಮಾಡುತ್ತಿದ್ದೇನೆ; ಜನ ಅನ್ನ ವಸತಿಗಳಿಗಾಗಿ ಬಹು ಗಂಭೀರವಾಗಿ ಪ್ರಯತ್ನಿಸುತ್ತಿರುವುದು ನನಗೆ ಕಂಡು ಬಂದಿದೆ.

ಆದರೆ ವೈದಿಕ ಧರ್ಮಗ್ರಂಥಗಳ ಪ್ರಕಾರ ಅನ್ನ ವಸತಿಗಳು ಈಗಾಗಲೇ ಲಭ್ಯವಿದೆ; ಅವುಗಳನ್ನು ದೇವರು ಕೊಟ್ಟಿದ್ದಾನೆ. ಸೃಷ್ಟಿಯಲ್ಲಿ 84,00,000 ಜೀವಜಾತಿಗಳಿವೆ. ಈ ಜೀವ ವರ್ಗಗಳಲ್ಲಿ ಮನುಷ್ಯ ಜಾತಿಯ ಸಂಖ್ಯೆ ತೀರ ಕಡಮೆ. ಬೇರೆ ಬೇರೆ ಗ್ರಹ ಲೋಕಗಳಲ್ಲಿರುವ ಮಾನವ ಜೀವವರ್ಗಕ್ಕೆ ಸೇರಿರುವ ಪ್ರಭೇದ ಸ೦ಖ್ಯೆ 4,00,000. ಇವರಲ್ಲಿಯೂ ನಾಗರಿಕರು ಎನ್ನಿಸಿಕೊಳ್ಳುವವರ ಸಂಖ್ಯೆ ಬಹಳವೇ ಕಡಮೆ, ಆದರೆ ಭಗವಂತನಂತೂ ಎಲ್ಲರಿಗೂ ಅನ್ನ ನೀಡುತ್ತಾನೆ.

ವೇದಗಳು ಹೀಗೆನ್ನುತ್ತವೆ: ನಿತ್ಯೋ ನಿತ್ಯಾನಾಂ ಚೇತನಶ್ವೇತನಾಮ್ ಏಕೋ ಬಹುನಾಂ ಯೋ ವಿದಧಾತಿ ಕಾಮಾನ್‌: ”ಜೀವಿಗಳಲ್ಲೆಲ್ಲ ಭಗವಂತನು ಪರಮೋತ್ಕೃಷ್ಟಪುರುಷ” ನಿತ್ಯರಲ್ಲೆಲ್ಲ ಅವನೇ ಪರಮ ನಿತ್ಯನೂ ಆಗಿದ್ದಾನೆ. ನಾವು ಕೂಡ ನಿರಂತರರೇ. ನಾವು ಭಗವಂತನ ಸೂಕ್ಷ್ಮಾತಿಸೂಕ್ಷ್ಮ ಅಂಶಗಳಾದ್ದರಿಂದ, ಭಗವಂತನ ಎಲ್ಲ ಗುಣಗಳು ನಮ್ಮಲ್ಲಿ ಅತಿ ಕಡಮೆ ಪ್ರಮಾಣದಲ್ಲಿವೆ.

ಈ ಮಾತಿಗೆ ಕಡಲನ್ನು ಉದಾಹರಿಸಬಹುದು. ಒಟ್ಟು ಕಡಲ ನೀರಿನ ರಾಸಾಯನಿಕ ಗುಣಗಳೆಲ್ಲವನ್ನೂ ಅದೇ ಸಮುದ್ರದ ಒಂದು ತೊಟ್ಟು ನೀರಿನಲ್ಲಿ ಕಾಣಬಹುದು. ವ್ಯತ್ಯಾಸವಿರುವುದು (ರಾಸಾಯನಿಕ ಗುಣಗಳ) ಪ್ರಮಾಣದಲ್ಲಿ ಒಂದು ಹನಿ ಕಡಲ ನೀರಿನಲ್ಲಿ ಉಪ್ಪಿದೆ. ಹಾಗೆಯೇ ಸಮುದ್ರದ ಅಗಾಧ ಜಲರಾಶಿಯಲ್ಲಿಯೂ ಉಪ್ಪಿದೆ. ಆದರೆ ಒಟ್ಟು ಕಡಲ ನೀರಿನಲ್ಲಿನ ಉಪ್ಪಿನ ಪ್ರಮಾಣ ಹೆಚ್ಚು ತುಂಬಾ ಹೆಚ್ಚು.

ಬೆಂಕಿ ಮತ್ತು ಅದರಿಂದ ಹೊರಡುವ ಕಿಡಿಗಳ ಇನ್ನೂ ಒಂದು ಉದಾಹರಣೆಯನ್ನು ನೋಡಬಹುದು. ಇವು ವೈದಿಕ ಸಾಹಿತ್ಯ ಕೃತಿಗಳಲ್ಲಿ ಕಂಡುಬರುವ ಉದಾಹರಣೆಗಳು. ಒಂದು ಕಡೆ ಬೆಂಕಿ ಹಾಕಿರುವಾಗ, ಆ ಬೆಂಕಿಯಿಂದ ಛಿಟ್” ‘ಛಿಟ್’ ಎಂಬ ಶಬ್ದ ಹೊರಡುವುದನ್ನು ನಾವೆಲ್ಲ ಕಂಡಿದ್ದೇವೆ. ಆ ಶಬ್ದ ಬಂದೊಡನೆ ನೂರಾರು, ಸಹಸ್ರಾರು ಬೆಂಕಿ ಕಿಡಿಗಳು ಹೊರಬೀಳುತ್ತವೆ.

ಈ ಕಿಡಿಗಳಾದರೂ ಬೆಂಕಿಯೇ. ಆದರೆ ಮೂಲ ಬೆಂಕಿಯ ಉರಿಯಷ್ಟು ದೊಡ್ಡ ಪ್ರಮಾಣದ್ದಲ್ಲ. ಆದ್ದರಿಂದ ನಮ್ಮ – ಚೈತನ್ಯ ಮಹಾಪ್ರಭುಗಳ ಅನುಯಾಯಿಗಳಾದ ನಮ್ಮ-ತತ್ತ್ವ ಸಿದ್ಧಾಂತವನ್ನು ಅಂಚಿತ್ಯ ಭೇದಾಭೇದ ಎಂದು ಕರೆಯುತ್ತಾರೆ. ಹೀಗೆಂದರೆ ಜೀವಿಗಳಾದ ನಾವು ಏಕಕಾಲಕ್ಕೆ ದೇವರೊಡನೆ ಒಂದೂ ಆಗಿದ್ದೇವೆ, ಭಿನ್ನರೂ ಆಗಿದ್ದೇವೆ ಎಂದು ಅರ್ಥ.

ಗುಣಾತ್ಮಕವಾಗಿ ನಾವು ದೇವರೊಡನೆ ಒಂದಾಗಿದ್ದೇವೆ. ಭಗವಂತನು ಒಂದು ಚೇತನ; ನಾವೂ ಚೇತನರೇ. ಭಗವಂತನು ಪರಮಾತ್ಮ; ನಾವು ವ್ಯಕ್ತಿಗತ ಆತ್ಮಗಳು, ಭಗವಂತನು ಮಹತ್ತಾದವನು. ನಾವಾದರೋ ಪುಟ್ಟಪುಟ್ಟ ಅಂಶಗಳು. ಇರುವ ವ್ಯತ್ಯಾಸ ಇದು.

ಹೀಗೆ ಏಕಕಾಲಕ್ಕೆ ನಾವು ಭಗವಂತನಲ್ಲಿ ಒಂದಾದವರು, ಅವನಿಗಿಂತ ಬೇರೆಯಾದವರೂ ಆಗಿದ್ದೇವೆ. ಗುಣದಲ್ಲಿ ಒಂದು, ಪ್ರಮಾಣದಲ್ಲಿ ಬೇರೆ. “ದೇವರು ಸರ್ವಶ್ರೇಷ್ಠ” ಎಂದು ನೀವೂ ಒಪ್ಪಿಕೊಳ್ಳುತ್ತೀರಿ. ಭಗವಂತನಿಗಿಂತ ದೊಡ್ಡವರು ಯಾರೂ ಇರಲಿಕ್ಕೆ ಸಾಧ್ಯವಿಲ್ಲವೆಂದು ನಾವು ಹೇಳುತ್ತೇವೆ. ದೇವರಿಗೆ ಸಮನಾದವರು ಕೂಡ ಯಾರಾದರೂ ಇರುವುದು ಸಾಧ್ಯವಿಲ್ಲ. ಇರುವ ವ್ಯತ್ಯಾಸ ಇದು.

ಭಗವಂತನಿಗೆ ಸಮನಾದವರು ಇರಲಿಕ್ಕೆ ಸಾಧ್ಯವಿಲ್ಲ. ಖಂಡಿತ ಸಾಧ್ಯವಿಲ್ಲ. ದೇವರು ಒಬ್ಬನೆ. ವೇದ ಸಾಹಿತ್ಯದಲ್ಲಿ ಹಲವು ಬೇರೆ ಬೇರೆ ದೇವತೆಗಳ ಹೆಸರು ಅಲ್ಲಲ್ಲಿ ಬರುವುದನ್ನು ನೀವು ಕ೦ಡಿರಬಹುದು, ಕೇಳಿರಬಹುದು. ಆದರೆ ದೇವತೆಗಳು ಕೂಡ ಜೀವಿಗಳೇ! ಮನುಷ್ಯರಿಗಿಂತ ಸ್ವಲ್ಪ ಹೆಚ್ಚು ಬಲಶಾಲಿಗಳು, ಅಷ್ಟೆ.

ನಮ್ಮ ಈ ಭೂಮಿಯಲ್ಲೇ ಯಾರೋ ಒಬ್ಬನು ಇತರರಿಗಿಂತ ಹೆಚ್ಚು ಬಲಶಾಲಿ ಆಗಿರುವುದನ್ನು ನಾವು ಕಾಣುತ್ತೇವೆ. ಆದರೆ ಅಂತಹ ಬಲಶಾಲಿಯು ದೇವರೆಂದೇ ಅರ್ಥವಲ್ಲ. ಭಗವಂತನು ಪರಮ ಪುರುಷ, ಸರ್ವಶಕ್ತ. ಇಲ್ಲಿ – ಈ ಲೋಕದಲ್ಲಿ – ನೀವು ನನಗಿಂತ ಹೆಚ್ಚು ಸಮರ್ಥರಿರಬಹುದು.

ಆದರೆ ನಿಮಗಿಂತ ಹೆಚ್ಚು ಸಮರ್ಥ ಇನ್ನೊಬ್ಬನನ್ನು ನಾವು ಕಾಣುತ್ತೇವೆ. ಈ ಬಲಶಾಲಿಯನ್ನೂ ಮೀರಿದ ಇನ್ನೊಬ್ಬ ಶಕ್ತಿವಂತನನ್ನು ನಾವು ಕಾಣಬಹುದು. ಹೀಗೇ ಮುಂದು ಮುಂದಕ್ಕೆ ಹೋಗಿ, ಇದಕ್ಕೆ ಮಿತಿಯೇ ಇಲ್ಲ. ಯಾವುದೇ ಒಬ್ಬರ ಉದಾಹರಣೆಯನ್ನು ತೆಗೆದುಕೊಳ್ಳಿ ಅವನಿಗಿಂತ ಮೇಲಾದವನನ್ನೂ ಕೆಳಮಟ್ಟದಲ್ಲಿ ಇರುವವನನ್ನೂ ನೀವು ಕಾಣುತ್ತೀರಿ.

ಆದರೆ ಇವರಲ್ಲಿ ಯಾರೂ “ನಾನೇ ಪರಮೋನ್ನತ” ಎಂದು ಹೇಳಿಕೊಳ್ಳುವುದು ಸಾಧ್ಯವಿಲ್ಲ. ಯಾರೂ ಹೀಗೆನ್ನಲಾರರು. ಹಾಗೆಲ್ಲಾ ಹೇಳುವುದು ಸಾಧ್ಯವಿಲ್ಲ.

ನಮ್ಮ ವೈದಿಕ ಸಾಹಿತ್ಯದ ಪ್ರಕಾರ, ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಬ್ರಹ್ಮಾಂಡದ ಉನ್ನತೋನ್ನತ ಜೀವಿಯೆಂದು ಪರಿಗಣಿಸಲಾಗಿದೆ. ಆದರೆ ಬ್ರಹ್ಮನು ಭಗವಂತನಲ್ಲ – ಈ ಮಾತನ್ನು ಶ್ರೀಮದ್ಭಾಗವತದಲ್ಲಿ ಹೇಳಿದೆ: ತೇನೇ ಬ್ರಹ್ಮ ಹೃದಾಯ ಆದಿ ಕವಯೇ ಮುಹ್ಯಂತಿ ಯತ್ ಸೂರಯಃ. ‘ಸೃಷ್ಟಿಕಾರ್ಯ ಮಾಡು’ ಎಂದು ಭಗವಂತನು ಬ್ರಹ್ಮನಿಗೆ ಹೇಳಿದ. ಬ್ರಹ್ಮನು ಆದಿಕವಿ.

ಈ ಐಹಿಕ ಜಗತ್ತಿನಲ್ಲಿಯೇ ಉತ್ತಮೋತ್ತಮ ವ್ಯಕ್ತಿ ‘ಬ್ರಹ್ಮನು ಮೂಲ ಜೀವಿಯೇ ಆಗಿದ್ದಲ್ಲಿ ಸೃಷ್ಟಿಕರ್ತ ಮಾಡಲು ಬೇಕಾದ ಜ್ಞಾನವನ್ನು ಅವನು ಹೇಗೆ ಪಡೆದ?” ಅದನ್ನು ಈ ಮಾತುಗಳಲ್ಲಿ ವರ್ಣಿಸಲಾಗಿದೆ : ತೇನೇ ಬ್ರಹ್ಮ ಹೃದಾಯ ಆದಿ ಕವಯೇ, ‘ಹೃದಾ’ ಎಂದರೆ ಹೃದಯ. ಭಗವಂತನು ಬ್ರಹ್ಮನ ಹೃದಯದಲ್ಲಿ ಕುಳಿತು ಅಲ್ಲಿಂದ ಆದೇಶ ನೀಡಿದ.

ಭಗವ೦ತನು ಪ್ರತಿಯೊಬ್ಬರ ಹೃದಯದಲ್ಲೂ ಸ್ಥಿತನಾಗಿದ್ದಾನೆ. ದೇವರ ಈ ಮಗ್ಗುಲನ್ನು ಪರಮಾತ್ಮ ಎನ್ನುತ್ತಾರೆ. ಭಗವಂತನಿಗೆ ಮೂರು ಮಗ್ಗುಲುಗಳಿವೆ. ಬ್ರಹ್ಮನ್, ಪರಮಾತ್ಮ ಹಾಗೂ ಭಗವಾನ್ ಎಂಬುವೇ ಆ ಮೂರು ಮಗ್ಗುಲುಗಳು ಬ್ರಹ್ಮನ್ ಭಗವಂತನ ನಿರಾಕಾರ ಲಕ್ಷಣ, ಪರಮಾತ್ಮ ಸ್ಥಾನಿಕ ಲಕ್ಷಣ ಹಾಗೂ ಭಗವಾನ್ ದೇವರ ವೈಯಕ್ತಿಕ ಮಗ್ಗುಲು

ಪರಮಸತ್ಯವು ಒಂದೇ- ಅದ್ವಯ ಜ್ಞಾನ, ದ್ವಂದ್ವಗಳಿಲ್ಲದ್ದು. ಆದರೆ ನಮ್ಮ ನಮ್ಮ ಸಾಮರ್ಥ್ಯಕ್ಕನುಸಾರವಾಗಿ ನಾವು ಪರಮ ಸತ್ಯವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ಸಾಕ್ಷಾತ್ಕರಿಸಿಕೊಳ್ಳುತ್ತೇವೆ. ಇಂತಹ ಒಂದು ದೃಷ್ಟಿ ಭಗವಂತನನ್ನು ಅವನ ನಿರಾಕಾರ ಬ್ರಹ್ಮನ್ ಸ್ವರೂಪದಲ್ಲಿ ಸಾಕ್ಷಾತ್ಕರಿಸಿಕೊಳ್ಳುವುದು.

ಜ್ಞಾನಿಗಳು – ಎಂದರೆ ತತ್ತ್ವವೇತ್ತರು ಹಾಗೂ ಮನೋಕಲ್ಪನೆಗಳಲ್ಲಿ ತೊಡಗುವವರು – ತಮ್ಮ ತಿಳಿವಿನ ಬಲದಿಂದ ಭಗವಂತನನ್ನು ಅವನ ನಿರಾಕಾರ ಬ್ರಹ್ಮನ್ ರೂಪದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಯೋಗಿಗಳು ಪರಮ ಪ್ರಭುವನ್ನು ತಮ್ಮ ಹೃದಯದೊಳಗಿನ ಪರಮಾತ್ಮನಾಗಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ.

ಭಕ್ತರಾದರೋ ದೇವೋತ್ತಮ ಪರಮ ಪುರುಷನನ್ನು ಪರಮೋನ್ನತ ಪುರುಷನೆಂಬುದಾಗಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಆದರೆ ಪರಮಾತ್ಮ, ನಿರಾಕಾರ ಬ್ರಹ್ಮನ್ ಹಾಗೂ ವ್ಯಕ್ತಿಗತ ಭಗವಂತ – ಎಲ್ಲರೂ ಒಂದೇ.

ಒಂದು ಉದಾಹರಣೆ ಕೊಡಬಹುದು. ಆದು ಹೀಗಿದೆ. ಸೂರ್ಯಪ್ರಕಾಶ, ಸೂರ್ಯಗ್ರಹ ಹಾಗೂ ದೇವತೆ ಸೂರ್ಯ, ವೇದಗಳ ಗ್ರಹಿಕೆಯಂತೆ ಪ್ರತಿ ಗ್ರಹದಲ್ಲೂ ಜೀವಿಗಳಿದ್ದಾರೆ.

ಇಂತಹ ನಿರ್ಣಯಕ್ಕೆ ಬರುವುದು ಸ್ವಾಭಾವಿಕವಾಗಿಯೇ ಇದೆ. ಏಕೆಂದರೆ ಐಹಿಕ ಜಗತ್ತಿನಲ್ಲಿ ಪ್ರತಿಯೊ೦ದು ವಸ್ತುವೂ ಪಂಚಭೂತಗಳಿಂದ ನಿರ್ಮಿತವಾಗಿದೆ: ಭೂಮಿ, ಜಲ, ಅಗ್ನಿ ವಾಯು ಹಾಗೂ ಆಕಾಶ ಇವೇ ಪಂಚಭೂತಗಳು. ಸೂಕ್ಷ್ಮ ದ್ರವ್ಯಗಳು ಯಾವುದೆಂದರೆ ಮನಸ್ಸು, ಬುದ್ಧಿ ಹಾಗೂ ಅಹಂಕಾರ.

ಹೀಗಾಗಿ ಕೆಲವು ಗ್ರಹಲೋಕಗಳಲ್ಲಿ ಭೂಮಿಯು ಪ್ರಧಾನ ವಸ್ತು. ಕೆಲವು ಗ್ರಹಗಳಲ್ಲಿ ನೀರು ಪ್ರಧಾನ ಮತ್ತು ಕೆಲವು ಗ್ರಹವ್ಯೂಹಗಳಲ್ಲಿ ಅಗ್ನಿಯು ಪ್ರಧಾನವಾದ ವಸ್ತು.

ಐಹಿಕ ಜಗತ್ತಿನ ಪ್ರತಿಯೊಂದು ಗ್ರಹವೂ ಈ ಐದು ಸ್ಥೂಲ ದ್ರವ್ಯಗಳಿಂದ ಮಾಡಲ್ಪಟ್ಟಿದೆ. ಕೆಲವು ಜೀವಿಗಳು ನೀರಿನಲ್ಲಿ ಆರಾಮವಾಗಿ ಬದುಕುವುದನ್ನು ನಾವು ನೋಡುತ್ತೇವೆ. ಆದರೆ ನಿಮ್ಮನ್ನೇ ನೀರಿನಲ್ಲಿ ಬಿಟ್ಟರೆ ನೀವಂತೂ ಆರಾಮವಾಗಿರುವುದಿಲ್ಲ. ಬಹುಶಃ ನೀವು ಸತ್ತೇ ಹೋಗುತ್ತೀರೆಂದು ತೋರುತ್ತದೆ.

ಇದೇ ರೀತಿ ಮೀನುಗಳನ್ನು ನೀರಿನಿಂದ ಹೊರತೆಗೆದರೆ ಅವು ಸಾಯುತ್ತವೆ. ನೀರಿನಲ್ಲಿ ಸುಖವಾಗಿ ಬದುಕುವ ಜೀವಿಗಳನ್ನು ನಾವಿಲ್ಲಿ ನೋಡುತ್ತೇವೆ; ಗಾಳಿಯಲ್ಲಿ ಆರಾಮವಾಗಿ ಬದುಕುವ ಜೀವಿಗಳನ್ನು ಕಾಣುತ್ತೇವೆ. ಇದೇ ರೀತಿ ಬೆಂಕಿಯಲ್ಲಿ ಆರಾಮವಾಗಿ ಬದುಕುವ ಜೀವಿಗಳು ಇರಬಾರದೇಕೆ? ಏಕೆ೦ದರೆ ಬೆಂಕಿಯು ಕೂಡ ಒಂದು ಭೌತಿಕ ದ್ರವ್ಯವೇ ಆಗಿದೆ.

ವೈದಿಕ ಧರ್ಮಗ್ರಂಥಗಳ ಪ್ರಕಾರ ಸೂರ್ಯ ಗ್ರಹದಲ್ಲಿ ಕೂಡ ಜೀವಿಗಳಿದ್ದಾರೆ. ಅಲ್ಲಿನ ಜೀವಿಗಳಿಗೆ ಬೆಂಕಿಯಂತಹ ದೇಹವಿದೆ. ಇರುವ ವ್ಯತ್ಯಾಸ ಇಷ್ಟೆ. ಈ ನಮ್ಮ ಲೋಕದಲ್ಲಿ ನೀರಿಗೆ ಹೊಂದಿಕೊಳ್ಳುವಂತಹ ದೇಹವನ್ನು ಮೀನುಗಳು ಹೇಗೆ ಪಡೆದಿವೆಯೋ ಹಾಗೆ ಒಬ್ಬ ವ್ಯಕ್ತಿಯು ಬೆಂಕಿಗೆ ಹೊಂದಿಕೊಳ್ಳುವಂತಹ ದೇಹ ಪಡೆದಿರಬಹುದು. ತಾರ್ಕಿಕವಾಗಿ ನಾವು ಈ ಮಾತನ್ನು ನಿರಾಕರಿಸುವುದು ಸಾಧ್ಯವಿಲ್ಲ.

ಸೂರ್ಯ ಎಂಬ ಪ್ರಮುಖ ದೇವತೆ ಒಬ್ಬನಿದ್ದಾನೆ. ಇವನನ್ನು ಸೂರ್ಯಲೋಕದ ಅಧ್ಯಕ್ಷ ಎಂದೋ, ದೇವರು ಎಂದೋ ಯಾವ ಹೆಸರಿನಲ್ಲಿ ಬೇಕಾದರೂ ಕರೆದುಕೊಳ್ಳಿ.

ಸೂರ್ಯದೇವತೆಯ ಹೆಸರಿನ ಪ್ರಸ್ತಾವ ಭಗವದ್ಗೀತೆಯಲ್ಲಿದೆ. ವಿವಸ್ವಾನ್ ಎನ್ನುವುದು ಅವನ ಹೆಸರು. ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನ್ ಅಹಮ್ ಅವ್ಯಯಮ್ – ‘ಈ ಭಕ್ತಿಯೋಗವನ್ನು – ಭಗವದ್ಗೀತೆಯಲ್ಲಿ ಉಕ್ತವಾಗಿರುವ ಆದೇಶವನ್ನು – ನಾನು ಮೊದಲ ಬಾರಿಗೆ ‘ವಿವಸ್ವಾನ್’ಗೆ ಸೂರ್ಯಮಂಡಲದ ಅಧಿದೇವತೆ ವಿವಸ್ವಾನ್‌ಗೆ ಉಪದೇಶಿಸಿದೆ” ಎಂದು ಕೃಷ್ಣನು ಹೇಳುತ್ತಾನೆ.

ಇರಲಿ, ಇದು ನೀವು ನಂಬುತ್ತೀರೋ, ನಿರಾಕರಿಸುತ್ತೀರೋ ಎಂಬುದನ್ನು ಕುರಿತ ಪ್ರಶ್ನೆ. ನಾವಂತೂ ಇದನ್ನು ನಂಬುತ್ತೇವೆ. ಈ ಮಾತಿಗೆ ನಮ್ಮ ಸಮ್ಮತಿ ಉಂಟು. ನಂಬಿಕೆಯ ಜೊತೆ ನಾವು ವಿಚಾರಶೀಲತೆಯನ್ನೂ ಬೆರೆಸುತ್ತೇವೆ. ನಾವು ಯಾವ ಮಾತನ್ನೂ ಕುರುಡು ಕುರುಡಾಗಿ ಒಪ್ಪಿಕೊಳ್ಳುವುದಿಲ್ಲ.

ಈ ಭೂಗ್ರಹಕ್ಕೆ ಒಬ್ಬ ಅಧ್ಯಕ್ಷನಿರುವುದನ್ನು ನಾನು ಕಾಣುತ್ತೇನೆ. ಪೂರ್ವದಲ್ಲಿ ಒಬ್ಬನೇ ಒಬ್ಬ ರಾಜನು ಇಡೀ ಭೂಖಂಡವನ್ನು ಆಳುತ್ತಿದ್ದ ಕ್ರಮೇಣ ಜನರ ಆಸಕ್ತಿಗಳು ಬೇರೆ ಬೇರೆಯಾಗಿ ಅವರು ಬೇರೆ ಬೇರೆ ದೇಶಗಳ ಪ್ರಜೆಗಳಾದರು. ವೇದ ಕಾಲದ ಇತಿಹಾಸವನ್ನು ಗಮನಿಸಿದರೆ ನಮಗೆ ಈ ಬಗ್ಗೆ ತಿಳಿಯುತ್ತದೆ. ಆಸ್ಟ್ರೇಲಿಯಾದಲ್ಲಿ ಶಿವನ ದೇವಾಲಯ ಒಂದಿದೆಯೆಂದು ಯಾರೋ ನನಗೆ ಹೇಳಿದರು. ಅನೇಕ ಸ್ಥಳಗಳಲ್ಲಿ ಭೂಗರ್ಭಶೋಧ ನಡೆದಾಗ ವೇದಕಾಲೀನ ಪಳೆಯುಳಿಕೆಗಳು ಸಿಕ್ಕಿವೆ. ಏಷ್ಯಾ, ಯೂರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯ ಹಾಗೂ ಓಷೇನಿಯ – ಈ ಸಪ್ತದ್ವೀಪಗಳ ಪ್ರಸ್ತಾವವನ್ನು ನಾವು ವೈದಿಕ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು.

ಆದ್ದರಿ೦ದ, ವೇದಕಾಲೀನ ಸಂಸ್ಕೃತಿಗೆ ಪ್ರಪಂಚವೆಂಬುದು ತಿಳಿದೇ ಇರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬಾರದು. ಹೊರ ಜಗತ್ತಿನ ಅರಿವು ಅವರಿಗೆ ಸಂಪೂರ್ಣವಾಗಿ ಇತ್ತು. ಮೇಲಾಗಿ ಪೃಥು ಎಂಬ ಒಬ್ಬನೇ ಒಬ್ಬ ಮಹಾರಾಜನು ಇಡೀ ಜಗತ್ತನ್ನು ಆಳುತ್ತಿದ್ದ ಅವನ ರಾಜಧಾನಿ ಬ್ರಹ್ಮಾವರ್ತ ಆಗಿತ್ತಾದರೂ ಅವನು ಸಪ್ತದ್ವೀಪಗಳನ್ನು – ಯಮುನಾ ಹಾಗೂ ಗಂಗಾ ನದಿಗಳ ಮಧ್ಯದ ಭೂಪ್ರದೇಶಗಳನ್ನು – ಆಳುತ್ತಿದ್ದ.

ಬ್ರಹ್ಮಾವರ್ತ ಎನ್ನುವ ಭೂಪ್ರದೇಶವು ಇಂದಿಗೂ ಪವಿತ್ರ ಸ್ಥಳವೆಂದೇ ಪರಿಗಣಿತವಾಗುತ್ತಿದೆ. ಇಡೀ ವೈದಿಕ ಸಂಸ್ಕೃತಿಯು ಅಲ್ಲಿ ಈಗಲೂ ಜೀವಂತವಿದೆ.

ರಾಜನು ಭಗವಂತನ ಪ್ರತಿನಿಧಿ ಎಂದು ತಿಳಿಯಲಾಗಿದೆ. ಒಂದು ನಿರ್ದಿಷ್ಟ ಗ್ರಹವಲಯದಲ್ಲಿನ ಜೀವಿಗಳ ಹಿತವನ್ನು ಕಾಪಾಡಲು ಭಗವಂತನು ಯಾರೋ ಒಬ್ಬನಿಗೆ ಅಧಿಕಾರ ನೀಡುತ್ತಾನೆ. ಅದೇ ರೀತಿ ಸೂರ್ಯಗ್ರಹದಲ್ಲೂ ಒಬ್ಬ ದೊರೆಯಿದ್ದಾನೆ.

ನಾವು ಅವನನ್ನು ಸೂರ್ಯದೇವ ಎಂದೋ ಅಥವಾ ಆ ಅರ್ಥ ಬರುವ ಬೇರೆ ಯಾವ ಹೆಸರಿನಿ೦ದಲೋ ಕರೆಯಬಹುದು. ಆದರೆ ಸೂರ್ಯಮಂಡಲಕ್ಕೆ ಅಧಿದೇವತೆ ಇರುವುದಂತೂ ನಿಜ. ಆ ದೇವತೆಗೆ ವೈಯಕ್ತಿಕ ಪ್ರಭೆಯಿದೆ. ಬೆಂಕಿಗೆ ಪ್ರಭೆ – ಶಾಖ ಹಾಗೂ ಬೆಳಕು – ಉಂಟೋ ಹಾಗೆ ಸೂರ್ಯದೇವನೂ ಕೂಡ ಅಗ್ನಿ ಪುರುಷ. ಅವನ ಪ್ರಭೆ ಇಡೀ ಬ್ರಹ್ಮಾಂಡವನ್ನು ಆವರಿಸಿಕೊಂಡಿದೆ.

ಮೇಲಿನದು ಸೂರ್ಯಗ್ರಹದ ವರ್ಣನೆ. ಸೂರ್ಯಗ್ರಹವು ಉಳಿದೆಲ್ಲ ಗ್ರಹಗಳ ಕಣ್ಣುಗಳು ಎಂದು ವರ್ಣಿಸಲಾಗಿದೆ. ಯಚ್ಛಕ್ಷುರ್‌ ಯೇಷ ಸವಿತಾ ಸಕಲ ಗ್ರಹಾಣಾಂ ಎನ್ನುವ ಮಾತು ನಿಜ. ಸೂರ್ಯೋದಯವಾಗದ ಹೊರತು ನಾವು ನೋಡಲಾರೆವು. ನಮಗೆ ನೋಡುವ ಶಕ್ತಿಯಿದೆ ಎಂದು ನಾನು ಹೆಮ್ಮೆಪಟ್ಟುಕೊಳ್ಳಬಹುದು.

“ಆಹಾ! ನಾನದನ್ನು ನೋಡಬೇಕು” ಎನ್ನುವುದು ನಮ್ಮ ಬಾಯಿಯಿಂದ ಬರುವ ಮಾತು. ಆದರೆ ನೋಡಲು ನಮಗಿರುವ ಶಕ್ತಿಯು ಪರಿಮಿತವಾದದ್ದೂ, ಬದ್ಧವಾದದ್ದೂ ಆಗಿದೆ ಎಂಬುದು ನಮಗೆ ತಿಳಿಯದು. ಸೂರ್ಯೋದಯವಾದ ಹೊರೆತು ನಮ್ಮ ಈ ಕಣ್ಣುಗಳು ಕೆಲಸಕ್ಕೆ ಬಾರದವು. ಈಗ ಕತ್ತಲಿದೆ.

ನಮ್ಮಿಂದ ನಾಲ್ಕು ಮಾರು ದೂರದಲ್ಲಿರುವುದನ್ನು ನಾವು ನೋಡಲಾರೆವು. ಹಾಗಿರುವಾಗ ಕಣ್ಣುಗಳಿಗೇನು ಬೆಲೆ ಬಂತು? ನಮ್ಮ ನೋಡುವ ಕ್ರಿಯೆಗೆ ಕೆಲವು ಷರತ್ತುಗಳಿವೆ. ಸೂರ್ಯೋದಯವಾದರೆ ನಾವು ನೋಡಬಹುದು. ಈ ಷರತ್ತನು ಭಗವಂತನು ವಿಧಿಸಿದ್ದಾನೆ. ಆದ್ದರಿಂದಲೇ ಉಪನಿಷತ್ತುಗಳಲ್ಲಿ, “ದೇವರು ನೋಡಿದಾಗ ನೀವೂ ನೋಡಬಹುದು; ದೇವರು ನಡೆದಾಗ ನೀವೂ ನಡೆಯಬಹುದು” ಎಂದು ಹೇಳಿದೆ.

ವ್ಯಾವಹಾರಿಕವಾಗಿ ನೋಡಿದರೆ ಮೇಲಿನ ಮಾತು ನಿಜ. ನಾವು ಸಂಪೂರ್ಣವಾಗಿ ಅಸಹಾಯಕರು, ಭಗವಂತನನ್ನು ಅವಲಂಬಿಸಿರುವವರು. “ಭಗವಂತನ ಸಂಕಲ್ಪವಿಲ್ಲದೆ ಒಂದು ಹುಲ್ಲುಕಡ್ಡಿ ಕೂಡ ಚಲಿಸಲಾರದು” ಎಂಬ ಮಾತು ನಿಜ. ಭಗವದ್ಗೀತೆಯಲ್ಲಿಯೂ ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟಃ- “ನಾವು ಪ್ರತಿಯೊಬ್ಬರ ಹೃದಯದಲ್ಲಿಯೂ ವಾಸಿಸುತ್ತಿದ್ದೇನೆ” ಎಂಬ ಕೃಷ್ಣನ ಮಾತಿದೆ.

ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್‌ ಜ್ಞಾನಮ್‌ ಅಪೋಹನಂ ಚ: “ಸ್ಮರಣ ಶಕ್ತಿ ಹಾಗೂ ಮರೆವುಗಳು ನನ್ನಿಂದಲೇ ಬರುತ್ತವೆ.” ನಮಗೆ ಕೆಲವು ಸಲ ಮರೆವು ಅಡರುವುದುಂಟು, ಸ್ಮರಣಶಕ್ತಿ ಜಾಗೃತವಾಗುವುದೂ ಉಂಟು, ಇವೆರಡೂ ದೈವಾನುಗ್ರಹವೇ.

ಭಗವಂತನ ವಿಷಯವಾಗಿ ನಾವು ತಿಳಿದುಕೊಳ್ಳಬೇಕಾದ್ದು ಬಹಳಷ್ಟಿದೆ. ಪ್ರಪಂಚದಾದ್ಯಂತ ನಾವು ದೈವ ಪ್ರಜ್ಞೆಯನ್ನು ಬೋಧಿಸುತ್ತಿದ್ದೇವೆ. ಜನ ದೈವ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲಿ ಎಂಬುದು ನಮ್ಮ ಉದ್ದೇಶ. ನಾವು ಪಂಥವಾದಿಗಳೆಂದು ದಯವಿಟ್ಟು ಭಾವಿಸಬೇಡಿ.

ವಿಜ್ಞಾನಕ್ಕೆ ಸಂಬಂಧಿಸಿದಂತೆ ತೀರ ಇತ್ತೀಚಿನ ಜ್ಞಾನ ಬೇಕೆನ್ನುವವನು ಅಥವಾ ಗಣಿತಶಾಸ್ತ್ರದಲ್ಲಿ ಮುಂದುವರಿಯುವ ಅಪೇಕ್ಷೆಯುಳ್ಳವನು ಅಂತಹ ಜ್ಞಾನ ಎಲ್ಲಿ ಲಭ್ಯವಿರುವುದೋ ಅಲ್ಲಿಗೆ ಹೋಗುತ್ತಾನೆ. ಈ ವಿಷಯಗಳನ್ನು ಪಾಠ ಹೇಳಬೇಕಾದಲ್ಲಿ ಉಪಾಧ್ಯಾಯನೂ ಅಷ್ಟೆ, ಎಲ್ಲಿಗೆ ಬೇಕಾದರೂ ಹೋಗುತ್ತಾನೆ.

ಇದೇ ರೀತಿ ನಾವು ಜನರಿಗೆ ಭಗವದ್ವಿಜ್ಞಾನ ಬೋಧಿಸಲು ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಇದು ನಮ್ಮ ಕೆಲಸ.

ಒಂದು ಧರ್ಮವು ಎಷ್ಟು ಒಳ್ಳೆಯದು ಎಂಬುದರ ಮೌಲ್ಯಮಾಪನ ಮಾಡುವುದೆಂದರೆ ಆ ಧರ್ಮವನ್ನು ಪಾಲಿಸಿ ಜನ ಎಷ್ಟರಮಟ್ಟಿಗೆ ದೈವಪ್ರಜ್ಞೆ ಅಥವಾ ದೈವಪ್ರೇಮವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸುವುದೇ ಆಗಿದೆ. ಜಗತ್ತಿನ ಯಾವ ಭಾಗಕ್ಕೆ ಹೋಗಿ ಜನ ದೇವರನ್ನು ತಿರಸ್ಕರಿಸಿ ನಡೆಯುತ್ತಿರುವುದು ಕಂಡು ಬರುತ್ತಿದೆ.

ಈ ವಿಚಾರವೂ ನಿಮಗೆ ಚನ್ನಾಗಿಯೇ ತಿಳಿದಿದೆ. ಇಂಗ್ಲೆಂಡ್‌ನಲ್ಲಿ ಅನೇಕಾನೇಕ ಇಗರ್ಜಿಗಳು ಖಾಲಿಯಾಗಿವೆ. ಇಂತಹ ಹೆಚ್ಚುವರಿ ಇಗರ್ಜಿಗಳನ್ನು ಬೇರಿತರ ಉದ್ದೇಶಗಳಿಗೆ ಮಾರಿಬಿಡಬೇಕೆಂದು ಬ್ರಿಟನ್ನಿನ ಸಂಸತ್ತು ಒಂದು ಮಸೂದೆಯನ್ನು ಅಂಗೀಕರಿಸಿದೆ.

ಒಬ್ಬ ವ್ಯಕ್ತಿಯು ಕ್ರಿಶ್ಚಿಯನ್ನೆ, ಹಿಂದೂವೆ ಮಹಮ್ಮದೀಯನೆ ಎಂಬುದು ಮುಖ್ಯವಲ್ಲ. ನೀವು ಯಾವು ಧರ್ಮಕ್ಕೆ ಸೇರಿವರಾಗಿದ್ದರೂ ಭಗತ್ಪ್ರಜ್ಞೆಯನ್ನು ರೂಢಿಸಿಕೊಳ್ಳಿ ಎಂಬುದು ನಮ್ಮ ಮನವಿ. ಇದೇ ನಮ್ಮ ಕಾರ್ಯಕ್ರಮ. ಭಗವಂತನು ಏನೆಂಬುದನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಯತ್ನಿಸಿ ಮತ್ತು ವೈದಿ ಸಂಸ್ಕೃತಿಯನ್ನು ನೀವು ಅಧ್ಯಯನ ಮಾಡಿದಿರಾದರೆ ನಿಷ್ಕೃಷ್ಟವೂ, ವೈಜ್ಞಾನಿಕವೂ, ಪ್ರಮಾಣಬದ್ಧವೂ ಆದ ಸಂಗತಿಗಳು ತಿಳಿದುಬರುತ್ತವೆ.

ಭಗವಂತನನ್ನು ಅರ್ಥಮಾಡಿಕೊಳ್ಳಬೇಕೆಂಬ ಗಂಭೀರವಾದ ಅಭಿಲಾಷೆ ಯಾರಿಗಾದರೂ ಇದ್ದಲಿ ಅಂತಹವರಿಗೆ ನಾವು ಅಡ್ಡಿ ಹೇಳುವುದಿಲ್ಲ.

ಉದಾಹರಣೆಗೆ, ಯಾವುದೋ ಒಂದು ನಿರ್ದಿಷ್ಟ ವೈಜ್ಞಾನಿಕ ವಿಷಯವನ್ನು ಅಭ್ಯಸಿಸಲು ಒಬ್ಬ ವ್ಯಕ್ತಿಯು ಬೇರೆಯೇ ಒಂದು ದೇಶದ ವಿಶ್ವವಿದ್ಯಾಲಯಕ್ಕೆ ಹೋಗುತ್ತಾನೆ. ಆತ ಹೀಗೆ ಹೋದ ಎಂದ ಮಾತ್ರಕ್ಕೆ ಪತಿತನಾಗಿಬಿಟ್ಟ ಎಂದು ಅರ್ಥವಲ್ಲ. ಖಂಡಿತ ಅಲ್ಲ. ಆತ ತನಗೆ ಬೇಕಾದ ನಿರ್ದಿಷ್ಟ ವೈಜ್ಞಾನಿಕ ತಿಳಿವನ್ನು ಅರಸುತ್ತಿದ್ದಾನೆ.

ಅದೇ ರೀತಿ ಪ್ರತಿಯೊಬ್ಬರೂ ಮಾಡಬೇಕೆಂದು ನಾವು ಆಹ್ವಾನ ನೀಡುತ್ತೇವೆ. ದೈವಪ್ರಜ್ಞೆಯ ಅಗತ್ಯ ಇಂದು ಜಗತ್ತಿನಾದ್ಯಂತ ಇದೆ. ದೈವ ಪ್ರಜ್ಞೆಯಿಲ್ಲದೆ ಬೇರೆಲ್ಲ ಅರ್ಹತೆಗಳಿದ್ದೂ ನಿರರ್ಥಕ. ವೇದದ ಶ್ಲೋಕವೊಂದು ಈ ಮಾತನ್ನೇ ಹೇಳುತ್ತದೆ. ಅಪ್ರಾಣಸ್ಸೈವ ದೇಹಸ್ಯ ಮಂಡನಂ ಲೋಕರಂಜನಮ್‌. ದೇಹಕ್ಕೆ ಬೆಲೆಯಿರುವುದು ಅದರಲ್ಲಿ ಭಗವಂತನ ಕಿರಿದಾದ ಅಂಶವಾದ ಆತ್ಮವಿದೆ ಎಂಬ ಕಾರಣಕ್ಕಾಗಿ.

ವ್ಯಕ್ತಿಯೊಬ್ಬ “ಸರ್‌ ಇಂತಹವರು, ಲಾರ್ಡ್‌ ಅಂತಹವರು, ಮಹಾನ್‌ ವಿಜ್ಞಾನಿ ಅಥವಾ ಹಿರಿಯ ತತ್ತ್ವಜ್ಞಾನಿ” ಆಗಿದ್ದಾನೆ. ಏಕೆ? ಏಕೆಂದರೆ ಆತನಲ್ಲಿ ಭಗವಂತನ ಕಿಡಿ ಇದೆ.

ಆ ಕಿಡಿಯು ಹೊರಟುಹೋದ ಕೂಡಲೇ ದೇಹವು ಕೆಲಸಕ್ಕೆ ಬಾರದ್ದು. ಆ ಮೃತ ಶರೀರವು ಸರ್‌ ಇಂತಹವರ ಅಥವಾ ಲಾರ್ಡ್‌ ಅಂತಹವರದೇ ಆಗಿರಬಹುದು. ಆದರೂ ಆ ದೇಹ ಕೆಲಸಕ್ಕೆ ಬಾರದ್ದು. ಇಂತಹ ದೇಹ ಜಡವಸ್ತುವಿನ ಒಂದು ಮುದ್ದೆ ಅಷ್ಟೆ. ಆದರೂ ಜನ ಆತ್ಮಕ್ಕಿಂತ ದೇಹಕ್ಕೇ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದಾರೆ. ಇದಕ್ಕಿಂತ ಒಳ್ಳೆಯದೇನೂ ಅವರಿಗೆ ತಿಳಿಯದು.

ನಾನು ಅನೇಕ ದೇಶಗಳನ್ನು ಸುತ್ತಿದ್ದೇನೆ, ಅನೇಕ ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟಿದ್ದೇನೆ. ದೈವ ಅಥವಾ ಆತ್ಮ ವಿಜ್ಞಾನವನ್ನು ಬೋಧಿಸುವ ಒಂದು ಶಾಖೆ ಅಲ್ಲೆಲ್ಲೂ ನನಗೆ ಕಾಣಲಿಲ್ಲ. ಮನುಷ್ಯಕುಲಕ್ಕೆ ಇದೇನೂ ಆಶಾದಾಯಕವಾದ ಸ್ಥಿತಿಯಲ್ಲ. ಭಗವಂತನನ್ನು ಅರ್ಥಮಾಡಿಕೊಳ್ಳುವುದೇ ವಿಶೇಷವಾಗಿ ಮನುಜ ಸಂಸ್ಕೃತಿ ಎನ್ನುವುದರ ಉದ್ದೇಶ. ಆದ್ದರಿಂದ ಯಾವುದೇ ನಾಗರಿಕ ಸಮಾಜದಲ್ಲಿ ಒಂದು ಧರ್ಮಪದ್ಧತಿ ನೆಲೆಗೊಂಡಿರುತ್ತದೆ.

ನಾವು ಈಗಾಗಲೇ ವಿವರಿಸಿರುವಂತೆ ಧರ್ಮ ಎಂದರೆ ಭಗವಂತನ ಆದೇಶಗಳನ್ನು ಪಾಲಿಸುವುದೇ ಆಗಿದೆ. ಧರ್ಮದ ವಿವರಗಳಲ್ಲಿ ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ಕೆಲವು ವ್ಯತ್ಯಾಸಗಳಿರಬಹುದು. ಕಾನೂನಿನ ವಿವರಗಳಲ್ಲಿ ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ವ್ಯತ್ಯಾಸ ಕಾಣಿಸುವುದಿಲ್ಲವೆ? ಇದೂ ಹಾಗೆಯೆ.

ಆದರೆ ರಾಷ್ಟ್ರದ ನಿಬಂಧನೆಗಳಿಗೆ ತಲೆಬಾಗಿ ನಡೆಯುವುದು ಎಂದೂ ಇದ್ದಿದ್ದೆ. ಸಂವಿಧಾನ ರಚನೆಯಲ್ಲಿ ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ಕೆಲವು ವ್ಯತ್ಯಾಸಗಳು ಕಂಡು ಬರಬಹುದು. ಆದರೆ ರಾಷ್ಟ್ರದ ನಿಬಂಧನೆಗಳನ್ನು ಅನುಷ್ಠಾನ ಮಾಡಬೇಕಾದ್ದು ಮಾತ್ರ ಕಡ್ಡಾಯ.

ಇದೇ ರೀತಿ ಧರ್ಮ ಎನ್ನುವುದು ಕಾಲ, ದೇಶ ವರ್ತಮಾನ ಅಥವಾ ಅರ್ಥೈಸುವಿಕೆ ಇತ್ಯಾದಿಯನ್ನನುಸರಿಸಿ ಬೇರೆ ಬೇರೆ ಕಡೆ ಬೇರೆ ಬೇರೆ ಸ್ವರೂಪದಲ್ಲಿರಬಹುದು. ಆದರೆ ಭಗವಂತನಿಗೆ ವಿಧೇಯತೆ ತೋರುವುದು ಅತ್ಯಗತ್ಯ. ಹಾಗಲ್ಲವಾದರೆ ಅದು ಮನುಷ್ಯ ನಾಗರಿಕತೆ ಆಗುವುದಿಲ್ಲ.

ಕೃಷ್ಣಪ್ರಜ್ಞಾ ಆಂದೋಲನಕ್ಕೆ ಸಂಬಂಧಿಸಿದಂತೆ ನಮ್ಮ ಕಾರ್ಯಕ್ರಮ ಇದು: ಎಲ್ಲ ವಿದ್ವಜ್ಜನರೂ, ತತ್ತ್ವವೇತ್ತರೂ ಒಂದಾಗಿ ವಿಶ್ವವನ್ನು ಈ ಕುತ್ತಿನಿಂದ – ದೈವಪ್ರಜ್ಞೆ ಇಲ್ಲವೆಂಬ ಕಿಲ್ಬಿಷದಿಂದ ಪಾರು ಮಾಡಬೇಕೆಂದು ನಾವು ಬಿನ್ನವಿಸಿಕೊಳ್ಳುತ್ತೇವೆ. ಇದು ನಮ್ಮ ಮನವಿ. ಗೌರವಾನ್ವಿತ ಮಹನೀಯರಾದ ನೀವು ಈ ದಿಸೆಯಲ್ಲಿ ನನ್ನೊಂದಿಗೆ ಸಹಕರಿಸುತ್ತೀರೆಂದು ನಾವು ಭಾವಿಸುತ್ತೇನೆ. ಹೀಗಾದಲ್ಲಿ ನಾನು ಉಪಕೃತನಾದಂತೆಯೇ.

ವಂದನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi