– ಸುನಿಧಿ
ಇತ್ತೀಚೆಗೊಂದು ದಿನ ಸಂಜೆ ಟಿವಿಯಲ್ಲಿ ವಾರ್ತೆ ವೀಕ್ಷಿಸುತ್ತಿದ್ದೆ. ಮುಂಬಯಿಯಲ್ಲಿ ಬಾಂಬ್ ಸ್ಫೋಟಿಸಿ 50 ಮಂದಿ ಬಲಿ, ಸಾಲಬಾಧೆ ತಾಳದೇ ಒಂಬತ್ತು ರೈತರ ಆತ್ಮಹತ್ಯೆ, ಕೋಲಾರ ಬಳಿ ಟ್ರಾಕ್ಟರ್ ಅಪಘಾತಕ್ಕೀಡಾಗಿ ನಾಲ್ವರು ಸಾವು, ಇಸ್ರೇಲ್-ಪ್ಯಾಲಸ್ಟೀನ್ ಕಾಳಗ, ಸಾಹಿತಿ- ವಿಚಾರವಾದಿ ಎ.ಎನ್. ಮೂರ್ತಿರಾಯರಿಗೆ ಶ್ರದ್ಧಾಂಜಲಿ….. ಒ೦ದು ತಾಸಿನ ಸುದ್ದಿ ತು೦ಬಾ ಬರೀ ಸಾವು, ಕೊಲೆ, ಆತ್ಮಹತ್ಯೆ, ಯುದ್ಧಗಳದ್ದೇ ವರದಿ.

ಸಾವಿನ ಸುದ್ದಿಯನ್ನು ಅತಿರ೦ಜಿತವಾಗಿ ತೋರಿಸುವುದೆ೦ದರೆ ಈ ಮಾಧ್ಯಮದವರಿಗೆ ಅಷ್ಟೊಂದು ಖುಷಿಯೆ? ಅಥವಾ ನಾವೇ ಈ ಸಾವಿನ ಸುದ್ದಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಗಮನ ನೀಡುತ್ತೇವೆಯೇ?
ಒ೦ದು ದೃಷ್ಟಿಯಿ೦ದ ನೋಡಿದರೆ ಈ ಇತಿಹಾಸದ ತುಂಬಾ ತುಂಬಿರುವುದು ಬರೀ ಸಾವಿನ ಕಥೆಗಳೇ. ದ್ವೇಷ, ಹತ್ಯೆ, ಸೇನೆ ಜಮಾವಣೆ, ಶತ್ರುಗಳ ಬಲಿ, ಸಾಮ್ರಾಜ್ಯಗಳ ಸರ್ವನಾಶವೇ ಇತಿಹಾಸ ಎಂಬಂತಾಗಿದೆ. ಹೀಗಾಗಿ ಜನ ಈ ಪರಿ ಚಿತ್ರ ವಿಚಿತ್ರವಾಗಿ ಸಾಯುವುದರಲ್ಲಿ ಅಂಥ ವಿಶೇಷವೇನೂ ಇಲ್ಲ ಎನಿಸುತ್ತದೆ.
ಇತರರ ಸಾವಿನ ಬಗ್ಗೆ ಇಷ್ಟೆಲ್ಲಾ ಕುತೂಹಲ ಹೊಂದಿರುವ ನಾವು ನಮ್ಮ ಸಾವಿನ ಅನಿವಾರ್ಯತೆ ಒಪ್ಪಿಕೊಳ್ಳಲು ನಿರಾಕರಿಸುವುದು ಮಾತ್ರ ವಿಚಿತ್ರವೆನಿಸುತ್ತದೆ. “ನಿತ್ಯ ಲಕ್ಷಾಂತರ ಜೀವಿಗಳು ಸಾವಿನ ಸಾಮ್ರಾಜ್ಯ ಸೇರುತ್ತಾರೆ. ಆದರೂ ಜನ ಈ ಐಹಿಕ ಜಗತ್ತಿನಲ್ಲಿ ತಾವು ಶಾಶ್ವತ ಎಂಬ ಭ್ರಮೆಯಲ್ಲೇ ಜೀವಿಸುತ್ತಾರೆ. ಇದಕ್ಕಿಂತ ವಿಚಿತ್ರವಾದುದು ಬೇರೇನಿದೆ?” ಎಂದು ಮಹಾಭಾರತದಲ್ಲಿ
ಹೇಳಲಾಗಿದೆ.
“ಒ೦ದಲ್ಲಾ ಒ೦ದು ದಿನ ಎಲ್ಲರೂ ಸಾಯಲೇಬೇಕು’ ಎಂದು ನಾವೆಲ್ಲರೂ ತೋರಿಕೆಗೆ ಸಾವನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ನಂತರ ಬದುಕುಳಿವ ನಮ್ಮವರಿಗೆ ನೆರವಾಗಲೆ೦ದು ಜೀವವಿಮೆ ಮಾಡಿಸಿಕೊಳ್ಳುತ್ತೇವೆ. ನಮ್ಮ ಸ್ವತ್ತು ನಮ್ಮವರಿಗೆ ಸಿಗಲೆ೦ದು ಉಯಿಲು (Will) ಬರೆಯುತ್ತೇವೆ.
ಇಷ್ಟಲ್ಲದೇ ನಮ್ಮ ಉತ್ತರ ಕ್ರಿಯೆಗಾಗಿಯೂ ಒಂದಿಷ್ಟು ಹಣ ಜೋಡಿಸಿಡುತ್ತೇವೆ! ಆದರೆ ಸಾವಿಗಾಗಿ ಸಿದ್ಧತೆ ಮಾಡಿಕೊಳ್ಳುವುದು ಖಂಡಿತಾ ಹೀಗಲ್ಲ.
ಸಾವಿನ ನ೦ತರ ಏನಾಗುತ್ತದೆ೦ಬುದನ್ನು ಬಲ್ಲವರಾರು? ಸಾವಿನ ಬಗ್ಗೆ ನಾವು ಎಷ್ಟೇ ಸಿದ್ಧಾಂತಗಳನ್ನು ಮಂಡಿಸಬಹುದು. ಆದರೆ ಸತ್ತನಂತರ ಎಲ್ಲಿಗೆ ಹೋಗುತ್ತೇವೆ ಎಂಬುದು ನಮಗೆ ನಿಖರವಾಗಿ ಗೊತ್ತಿಲ್ಲ. ಈ ಬಗ್ಗೆ ಯಾರೂ ಗಂಭೀರವಾಗಿ ಚಿಂತಿಸುವುದೇ ಇಲ್ಲ. ಹೆಚ್ಚಿನವರು ನಮಗೆ ಸಾವಿಲ್ಲ ಎಂಬ ಭ್ರಮೆಯಲ್ಲೇ ಬದುಕುತ್ತಾರೆ. ಮುಂದಿನದರ ಬಗ್ಗೆ ಚಿಂತಿಸದೇ ಇಂದಿನ ಜೀವನವನ್ನು ಸಾಧ್ಯವಾದಷ್ಟು ಮೋಜಿನಿ೦ದ ಕಳೆಯುವತ್ತ ಗಮನ ಹರಿಸುತ್ತಾರೆ.
ಇಂಥವರ ಮಧ್ಯೆಯೂ ಬೆರಳೆಣಿಕೆಯಷ್ಟು ಮಂದಿ ತಮ್ಮ ಸಾವಿನ ಬಗ್ಗೆ ಗಂಭೀರವಾಗಿ ಚಿಂತಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಾವಿನ ಮನೋವಿಶ್ಲೇಷಣೆ’ (Psychology of Death) ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿದೆ. ಪ್ರತಿಯೊಬ್ಬರೂ ನಿಶ್ಚಿಂತೆಯಿಂದ, ಶಾಂತಿಯುತ ಸಾವಿಗೆ ಸಿದ್ಧರಾಗುವಂತೆ ಮಾಡುವುದು ಇದರ ಉದ್ದೇಶ. ಇಲ್ಲಿ ಸಾವು ಅನಿವಾರ್ಯ ಎಂಬ ವಾಸ್ತವವನ್ನು ಮನದಟ್ಟು ಮಾಡಿಸುವ ಮೂಲಕ, ನಾವು ಸಾವಿನ ಕುರಿತು ಅತಿಯಾದ ಕಾತರ ಬೆಳೆಸಿಕೊಳ್ಳದಂತೆ ಮನಃಶಾಸ್ತ್ರಜ್ಞರು ಪ್ರಯತ್ನಿಸುತ್ತಾರೆ.
ಆದರೆ ನಾಸ್ತಿಕವಾದಿಗಳು ಇಂಥ ಪ್ರಯತ್ನಗಳನ್ನು ವಿರೋಧಿಸುತ್ತಾರೆ. ಸಾವಿನ ಕುರಿತ ಕೆಲ ಅಧ್ಯಯನಗಳನ್ನು “ಪಲಾಯನವಾದ” ಎಂದು ಅವರು ಟೀಕಿಸಿದ್ದಾರೆ. ನಾಸ್ತಿಕವಾದಿಗಳ ಪ್ರಕಾರ ಈ ತಾತ್ಕಾಲಿಕ ಶರೀರವೇ ಸರ್ವಸ್ವ. ಈ ಐಹಿಕ ಜಗತ್ತಿನಲ್ಲಿ ಸಾಧ್ಯವಾದಷ್ಟು ಸುಖ ಅನುಭವಿಸುವುದು ಮತ್ತು ಅ೦ಥ ಸುಖ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದೇ ಜೀವನ ಎಂಬುದು ಅವರ ವಾದ. ಯಾವುದೇ ಪಶ್ಚಾತ್ತಾಪಗಳಿಲ್ಲದೇ, ಗರ್ವದಿಂದ ಸಾಯಬೇಕು ಎ೦ಬುದಷ್ಟೇ ಇದರ ಅಪೇಕ್ಷೆ. ಆದರೆ ಸಾವು ಎ೦ದರೇನೆಂಬುದು ಮಾತ್ರ ಇವರಿಗೂ ನಿಖರವಾಗಿ ತಿಳಿದಿಲ್ಲ!
ಆತ್ಮ ಮತ್ತು ಶರೀರ ಎರಡೂ ಪ್ರತ್ಯೇಕ ಎ೦ಬ ತಿಳಿವಳಿಕೆಯೇ ಜೀವನ ಮತ್ತು ಸಾವಿನ ಕುರಿತ ನಿಜವಾದ ಜ್ಞಾನ. ಈ ನಿದರ್ಶನ ಗಮನಿಸಿ, “ಅಯ್ಯೋ, ನನ್ನ ಪತಿ ಹೊರಟು ಹೋಗಿದ್ದಾರೆ” ಎಂದು ವಿಧವೆಯೊಬ್ಬಳು, ಸತ್ತು ಹೋಗಿರುವ ಪತಿಗಾಗಿ ಎದುರು
ರೋಧಿಸುತ್ತಿದ್ದಾಳೆ. ಆಗ ಅಲ್ಲಿದ್ದವನೊಬ್ಬ ಹೇಳುತ್ತಾನೆ, ಅವನು ಹೊರಟು ಹೋಗಿದ್ದಾನೆಂದು ಏಕೆ ಹೇಳುವೆ? ಅವನು ಇಲ್ಲಿಯೇ ಮಲಗಿದ್ದಾನೆ.” ಆಗ ಆಕೆ ಹೇಳುತ್ತಾಳೆ, “ಇಲ್ಲ, ಅವರು ಇನ್ನೆಂದೂ ಹಿಂತಿರುಗಿ ಬರದಂತೆ ಹೊರಟು ಹೋಗಿದ್ದಾರೆ.” ಅ೦ದರೆ ಸತ್ತಿರುವ ವ್ಯಕ್ತಿಯ ಶರೀರ ಮತ್ತು ಆತನ ನೈಜ ಆತ್ಮ (real self) ಎರಡೂ ಬೇರೆ ಬೇರೆ ಎಂಬುದು ಆಕೆಯ ಮಾತಿನಿಂದ ಸ್ಪಷ್ಟವಾಗುತ್ತದೆ.
ದೇಹ ಮುಪ್ಪಾಗಿರಬಹುದು ಅಥವಾ ಯೌವ್ವನವಿರಬಹುದು, ಕಪ್ಪಿರಬಹುದು ಅಥವಾ ಬಿಳಿಪಿರಬಹುದು, ಸ್ತ್ರೀ ಇರಬಹುದು ಅಥವಾ ಪುರುಷನಾಗಿರಬಹುದು, ದೇಹವೆಂಬುದು ಆತ್ಮದ ಅಥವಾ ಒಳಗಿರುವ ಅಮರ ಆಧ್ಯಾತ್ಮಿಕ ಅಂಶದ ಹೊದಿಕೆ. ಈ ಪಾಠವನ್ನು ನಾವು ಮೊದಲು ಅರಿತುಕೊಳ್ಳಬೇಕು. ಇದರಿಂದ ನಮ್ಮ ಶರೀರ ಸತ್ತರೂ ಒಳಗಿರುವ ‘ನಾವು’ ಸಾಯುವುದಿಲ್ಲ ಎಂಬುದು ತಿಳಿಯುತ್ತದೆ.

ದೇಹವೇ ಸರ್ವಸ್ವ ಎಂಬುದು ಪ್ರಾಣಿಗಳ ಚಿಂತನೆ ಎಂದು ವೇದಗಳು ಹೇಳುತ್ತವೆ. ಒಂದು ಹಸುವಿನ ಮುದ್ದಿನ ಕರು ಸತ್ತಿದೆ ಎಂದಿಟ್ಟುಕೊಳ್ಳಿ. ಆಗ ಆ ಹಸು ಹಾಲು ಕೊಡುವುದಿಲ್ಲ. ಆಗ ಆ ಹಸುವಿನ ಒಡೆಯ ಒಂದು ಉಪಾಯ ಮಾಡುತ್ತಾನೆ. ಸತ್ತಿರುವ ಕರುವಿನ ದೇಹವನ್ನು ಹಸುವಿನ ಮುಂದೆ ತಂದಿರಿಸುತ್ತಾನೆ. ಮುಗ್ಧ ಹಸು ಕರುವಿನ ದೇಹವನ್ನು ಪ್ರೀತಿಯಿಂದ ನೆಕ್ಕುತ್ತದೆ. ಕರು ಇನ್ನು ಬದುಕಿದೆ ಎಂಬ ಭ್ರಮೆ ಅದಕ್ಕೆ! ತಂಟೆಯಿಲ್ಲದೇ ಹಾಲು ಕೊಡುತ್ತದೆ. ದೇಹವೇ ಸರ್ವಸ್ವ. ಶರೀರವೇ ಆತ್ಮಕ್ಕಿಂತ ಮಿಗಿಲಾದುದು ಎಂದು ವಾದಿಸುವವರು ಈ ಹಸುವಿನಂತೆಯೇ ಮೂರ್ಖರು.
ಇಂಥವರು ಸದಾ ಐಹಿಕ ಸುಖದ ಗುಂಗಿನಲ್ಲೇ ಇರುತ್ತಾರೆ. ನಾವು ಸತ್ತ ನಂತರ ವಿಜ್ಞಾನಿಗಳು ನಮ್ಮ ಶರೀರವನ್ನು ಶೈತ್ಯಾಗಾರದಲ್ಲಿರುಸುತ್ತಾರೆ. ಮುಂದೊಂದು ದಿನ ಅದಕ್ಕೆ ಜೀವ ತುಂಬುತ್ತಾರೆ ಎಂದು ನಂಬುವವರಿದ್ದಾರೆ. ಆದರೆ ತೊರೆದು ಹೋಗಿರುವ ಆತ್ಮವನ್ನು ಮರಳಿ ದೇಹದೊಳಕ್ಕೆ ಸೇರಿಸುವುದು ಯಾವ ವಿಜ್ಞಾನಿಗೂ ಸಾಧ್ಯವಿಲ್ಲ. ವ್ಯಕ್ತಿಯೊಬ್ಬನ ‘ಆತ್ಮ’ವೇ ಅವನ ಸ್ವಂತಿಕೆ ಅಥವಾ ಅಸ್ತಿತ್ವ ಹೊರತೂ ದೇಹವಲ್ಲ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ನಾವು ಸಾವು ಎಂದರೇನೆಂಬುದನ್ನು ತಿಳಿದುಕೊಳ್ಳಬಹುದು.
ವ್ಯಕ್ತಿ ಸತ್ತನಂತರ ದೇಹದ ಚಟುವಟಿಕೆಗಳೆಲ್ಲಾ ನಿಂತು ಹೋಗುತ್ತದೆ. ಆದರೆ ಒಳಗಿರುವ ನಿರಂತರ ‘ಆತ್ಮ’ ಇನ್ನೊಂದು ದೇಹವನ್ನು ಸೇರಿಕೊಳ್ಳುತ್ತದೆ. ‘ಸತ್ತ ನಂತರ ನಾನು ಎಲ್ಲಿಗೆ ಹೋಗುತ್ತೇನೆ?’ ಎಂಬ ಪ್ರಶ್ನೆ ಮಾತ್ರ ನಮ್ಮಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ. ಸತ್ತ ನಂತರ ನಮ್ಮ “ಗುರಿ” ಏನೆಂಬುದನ್ನು ನಮ್ಮ ಕರ್ಮಗಳು ನಿರ್ಧರಿಸುತ್ತವೆ. ಈ ಜನ್ಮದಲ್ಲಿ ನಮ್ಮ ಚಟುವಟಿಕೆಯನ್ನಾಧರಿಸಿ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಈಗ ನಾವು ಒಳ್ಳೆಯತನದಿಂದ ಬದುಕಿದರೆ ಮುಂದಿನ ಜನ್ಮದಲ್ಲಿ ನಮ್ಮ ಆತ್ಮಕ್ಕೆ ಇನ್ನೂ ಉತ್ತಮ ಶರೀರ ಸಿಗುತ್ತದೆ. ಆದರೆ ಈ ಮಾನವ ಜನ್ಮವನ್ನು ನಾವು ದುರುಪಯೋಗಪಡಿಸಿಕೊಂಡರೆ ಮುಂದಿನ ಜನ್ಮದಲ್ಲಿ ನಮಗೆ ಹಿಂಬಡ್ತಿ ದೊರೆತು, ಪ್ರಾಣಿಗಳ ಶರೀರ ಸೇರಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಜೀವನ ಮುಂದಿನ ಜನ್ಮದ ಸಿದ್ಧತೆ ಎಂದು ತಿಳಿದು ಸನ್ನಡತೆಯಿಂದ ಬದುಕುವುದು ಬುದ್ಧಿವಂತಿಕೆ.
ಒಂದು ವೇಳೆ ನಾವು ಜೀವನದಲ್ಲಿ ‘ಒಳ್ಳೆಯ ಕರ್ಮ’ ಸಂಪಾದಿಸಿ, ಪುನರ್ಜನ್ಮದಲ್ಲಿ ಉತ್ತಮ ಶರೀರ ಪಡೆಯುತ್ತೇವೆ ಎಂದಿಟ್ಟುಕೊಳ್ಳೋಣ. ಅದರಿಂದ ಸಾವಿನ ಸಮಸ್ಯೆ ಪರಿಹಾರವಾಗುವುದಿಲ್ಲ, ಸಾವಿನ ಸರಪಳಿ ಹಾಗೆಯೇ ಮುಂದುವರಿಯುತ್ತದೆ. ಅಂದರೆ ಐಹಿಕವಾದಿಗಳ ಪಾಲಿಗೆ ಸಾವೆ೦ಬುದು ಪರಿಹಾರವಿಲ್ಲದ ಸಮಸ್ಯೆ.
ಕೃಷ್ಣಪ್ರಜ್ಞೆಯಿಂದ ಮಾತ್ರ ಈ ಸಮಸ್ಯೆ ಪರಿಹರಿಸಲು ಸಾಧ್ಯ. ಶರೀರದೊಂದಿಗೆ ಅಸ್ತಿತ್ವ ಗುರುತಿಸುವ ‘ದೈಹಿಕ ವಾದ’ ಬಿಟ್ಟು, ಆಧ್ಯಾತ್ಮ ಜ್ಞಾನದತ್ತ ಹೊರಳಬೇಕು. ಆ ಮೂಲಕ ಜನನ-ಮರಣದ ವರ್ತುಲದಿಂದ ಹೊರಬರಲು ಸಾಧ್ಯ. ಆತ್ಮ, ದೇವರು, ಇಹ, ಪರಗಳ ಬಗ್ಗೆ ತಿಳಿದುಕೊಂಡವನು. ಸಾವಿನ ನಂತರ ‘ಅಮರತ್ವ’ ಸಾಧಿಸುತ್ತಾನೆ. ಆಧ್ಯಾತ್ಮಿಕ ಲೋಕ ಸೇರುತ್ತಾನೆ. ದೇವ ಸೇವಕನಾಗಿ ತನ್ನ ಮೂಲ ಅಸ್ತಿತ್ವ ಕ೦ಡುಕೊಳ್ಳುತ್ತಾನೆ.
ಆದರೆ ಸಾವಿನಾಚೆಯ ಈ ಸಿಹಿ ಸಿದ್ದಿಯನ್ನು ಯಾವ ಟಿವಿಯೂ ಪ್ರಸಾರಮಾಡುವುದಿಲ್ಲ!
ಮೃತ್ಯು ಎಂಬ ಕಟುವಾಸ್ತವ
‘ಮೃತ್ಯು ಸರ್ವ ಹರಶ್ಚಾಮ್’ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಮೃತ್ಯು ಭೌತಿಕ ಲೋಕದ ಒಂದು ಅವಿಭಾಜ್ಯ ಅಂಗ. ನಾವು ಈ ಕಟು ಸತ್ಯವನ್ನು ಮರೆತು ನಮ್ಮದೇ ಆದ ಕೆಲಸ-ಕಾರ್ಯಗಳಲ್ಲಿ ಮಗ್ನರಾಗಿದ್ದೇವೆ. ಆದ್ದರಿಂದ ”ನಾನೇ ಮೃತ್ಯುವಾಗಿ ಬಂದು ಲೌಕಿಕ ಚಟುವಟಿಕೆಗಳನ್ನೆಲ್ಲಾ ನಿಲ್ಲಿಸುತ್ತೇನೆ” ಎಂದು ಶ್ರೀಕೃಷ್ಣ ಹೇಳಿದ್ದಾನೆ. ಈ ನಿತ್ಯ ಸತ್ಯವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದೇ ಬದುಕು ಶಾಶ್ವತ ಭ್ರಮೆಯಲ್ಲಿ ಬದುಕುತ್ತೇವೆ.
“ಆಶ್ಚರ್ಯದ ಸಂಗತಿ ಎಂದರೆ ಸಾವು ಬರಲಿದೆ ಎಂದು ಯಾರೂ ಒಪ್ಪಿಕೊಳ್ಳುವುದಿಲ್ಲ. ಆದರೆ ಸಾವು ಎಂಬ ಕರಾಳ ಸತ್ಯ ಪ್ರತಿಯೊಬ್ಬರ ಎದುರೂ ನಿಂತಿದೆ…” ಎಂಬ ಯುಧಿಷ್ಠಿರನ ಮಾತಿನಲ್ಲಿ ಎಷ್ಟೊಂದು ಅರ್ಥ ಅಡಗಿದೆಯಲ್ಲವೆ?






Leave a Reply