ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಕದನದಲ್ಲಿ ಪಾಂಡವರು ವಿಜಯ ಸಾಧಿಸಿದರು. ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮನು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬಯಸಿ ಅವರನ್ನು ಕೊಲ್ಲಲು ಒಂದು ಹೇಯ ಕಾರ್ಯತಂತ್ರವನ್ನು ರೂಪಿಸಿದನು. ಪಾಂಡವರಿಗೆ ತಾರುಣ್ಯಕ್ಕೆ ಬಂದಿದ್ದ ಐವರನ್ನು ಪುತ್ರರು ಇದ್ದರು.
ಆ ಐವರು ಪಾಂಡವರೇ ಎಂದು ಭ್ರಮಿಸಿದ ಅಶ್ವತ್ಥಾಮನು ಅವರೆಲ್ಲರ ತಲೆಗಳನ್ನು ಕೊಚ್ಚಿಹಾಕಿದನು. ನಿದ್ರಿಸುತ್ತಿದ್ದ ತನ್ನ ಐವರು ಪುತ್ರರು ಕೊಲೆಯಾದ ಸಂಗತಿಯನ್ನು ಕೇಳಿದಾಗ ದ್ರೌಪದಿಯು ಪುತ್ರಶೋಕದ ಯಾತನೆಯಿಂದ ಕಣ್ಣೀರು ಹರಿಸಿದಳು. ಅವಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಾ ಅರ್ಜುನನು, “ಹೇ ಕೋಮಲೆ, ಆ ಬ್ರಾಹ್ಮಣನ (ಅಶ್ವತ್ಥಾಮ) ತಲೆಯನ್ನು ತರಿದು ನಿನಗೊಪ್ಪಿಸಿದಾಗ ಮಾತ್ರ ನನಗೆ ಸಮಾಧಾನ. ಹಾಗೆ ಮಾಡಿ ನಿನ್ನ ಕಣ್ಣೀರನ್ನು ತೊಡೆದು ನಿನ್ನನ್ನು ಸಂತಸಪಡಿಸುತ್ತೇನೆ.” ಎಂದನು.
ಅರ್ಜುನನು ಉಗ್ರ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡು ಸಜ್ಜಾದನು. ಸ್ವಯಂ ಪರಮ ಪ್ರಭುವೇ ಸಾರಥಿಯಾಗಿದ್ದರಥದಲ್ಲಿ ಕುಳಿತು ಅರ್ಜುನನು ಅಶ್ವತ್ಥಾಮನನ್ನು ಬೆನ್ನಟ್ಟಿದನು. ತನ್ನ ಕುದುರೆಗಳ ಕಾಲುಗಳು ಸೋಲುತ್ತಿದ್ದುದನ್ನು ಅಶ್ವತ್ಥಾಮನು ಗಮನಿಸಿದ. ಆಗ ಅವನು ತನ್ನ ಕೊನೆಯ ಬಾಣ ಬ್ರಹ್ಮಾಸ್ತ್ರವನ್ನು ಪ್ರಯೋಗಿಸದೆ ಗತ್ಯಂತರವಿಲ್ಲವೆಂಬುದನ್ನು ಮನಗ೦ಡನು.
ಬ್ರಹ್ಮಾಸ್ತ್ರದಿಂದ ಹೊಮ್ಮುತ್ತಿದ್ದ ಪ್ರಭೆಯು ಎಷ್ಟು ಪ್ರಖರವಾಗಿತ್ತೆಂದರೆ ತನ್ನ ಪ್ರಾಣವೇ ಅಪಾಯಕ್ಕೆ ಸಿಕ್ಕಿರುವುದಾಗಿ ಅರ್ಜುನನು ಭಾವಿಸಿದನು. ಆಗ ಅವನು ಭಗವಾನ್ ಕೃಷ್ಣನನ್ನುದ್ದೇಶಿಸಿ, ”ಹೇ ಪ್ರಭುಗಳ ಪ್ರಭುವೆ, ಈ ಅಪಾಯಕಾರಿಯಾದ ಬೆಳಕು ಎಲ್ಲೆಡೆ ಹರಡುತ್ತಿದೆಯಲ್ಲ ಅದು ಹೇಗೆ? ಈ ಪ್ರಭೆಯು ಬರುತ್ತಿರುವುದೆಲ್ಲಿ೦ದ ? ನನಗೊಂದು ಅರ್ಥವಾಗುತ್ತಿಲ್ಲ’ ಎಂದನು. ಪ್ರಭುವು ಉತ್ತರಕೊಟ್ಟ : “ದ್ರೋಣಪುತ್ರನು ಬೇರಾವ ದಾರಿಯನ್ನೂ ಕಾಣದೆ ಈ ಕೃತ್ಯಕ್ಕಿಳಿದಿದ್ದಾನೆ.
ಅವನೀಗ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದಾನೆ. ಅದರ ಪ್ರಭೆಯನ್ನು ಹಿಂತೆಗೆದುಕೊಳ್ಳುವುದು ಹೇಗೆಂಬುದು ಅವನಿಗೆ ತಿಳಿಯದು. ಓ ಅರ್ಜುನ, ಇನ್ನೊಂದು ಬ್ರಹ್ಮಾಸ್ತ್ರವು ಮಾತ್ರ ಅಶ್ವತ್ಥಾಮನ ಪ್ರಯೋಗಿಸಿರುವ ಅಸ್ತ್ರವನ್ನು ನಿವಾರಿಸಬಲ್ಲುದು. ನೀನೇ ಒಂದು ಅಸ್ತ್ರವನ್ನು ಪ್ರಯೋಗಿಸಿ ಅದರ ಶಕ್ತಿಯಿ೦ದ ಅವನು ಪ್ರಯೋಗಿಸಿರುವ ಅಸ್ತ್ರದ ಪ್ರಭೆಯನ್ನು ತಗ್ಗಿಸು.”
ಭಗವಂತನು ಅಪೇಕ್ಷಿಸಿದಂತೆ ಅರ್ಜುನನು ಆ ಕೂಡಲೇ ಎರಡು ಬ್ರಹ್ಮಾಸ್ತ್ರಗಳನ್ನೂ ಹಿಂತೆಗೆದುಕೊಂಡನು.

ತರುವಾಯ ಅರ್ಜುನನು ಅಶ್ವತ್ಥಾಮನನ್ನು ಬಹು ಸಾಹಸದಿಂದ ಬಂಧಿಸಿದನು. ಅವನನ್ನು ಸೇನಾ ಶಿಬಿರಕ್ಕೆ ಕೊಂಡೊಯ್ಯು ಉದ್ದೇಶದಿಂದ ಅವನೊಂದು ಜಂತುವೋ ಎಂಬಂತೆ ಹಗ್ಗಗಳಿಂದ ಕಟ್ಟಿಹಾಕಿದನು. ಕೋಪಾವಿಷ್ಟನಾಗಿದ್ದ ಅರ್ಜುನನ್ನು ನೋಡಿ ಶ್ರೀಕೃಷ್ಣನು, “ಓ ಅರ್ಜುನ, ಈ ಬ್ರಹ್ಮಬಂಧುವನ್ನು ಬಿಟ್ಟುಬಿಡುವ ಮೂಲಕ ನೀನು ಇವನಿಗೆ ಮರುಕ ತೋರಿಸಬಾರದು. ನಿದ್ರಿಸುತ್ತಿದ್ದ ಮುಗ್ಧ ಬಾಲಕರನ್ನು ಕೊಂದ ಪಾಪಿ ಇವನು. ಧರ್ಮತತ್ವಗಳನ್ನು ಬಲ್ಲ ವ್ಯಕ್ತಿಯು, ಅಜಾಗರೂಕರಾಗಿರುವವರನ್ನು, ಪಾನಮತ್ತರನ್ನು, ಬುದ್ಧಿಭ್ರಮಣೆಗೆ ಒಳಗಾಗಿರುವವರನ್ನು, ನಿದ್ರಿಸುತ್ತಿರುವವರನ್ನು, ಹೆದರಿದವರನ್ನು ಅಥವಾ ರಥದಲ್ಲಿ ಕುಳಿತು ಯುದ್ಧಕ್ಕೆ ಬಂದಿಲ್ಲದಿರುವವರನ್ನು ಕೊಲ್ಲುವುದಿಲ್ಲ.
ಹಾಗೆಯೇ ಧರ್ಮಜ್ಞಾನವಿದ್ದವನು ಹುಡುಗನನ್ನು, ಹೆಂಗಸನ್ನು, ಮೂಕಪ್ರಾಣಿಯನ್ನು ಅಥವಾ ಶರಣಾಗತರನ್ನು ಕೊಲ್ಲುವುದಿಲ್ಲ – ಅಲ್ಲದೆ, ಈ ಪಾಪಿಯ ತಲೆಯನ್ನು ತರಿದು ತರುವುದಾಗಿ ನೀನು ದ್ರೌಪದಿಗೆ ವಚನವಿತ್ತಿದ್ದನ್ನು ನಾನು ಕಿವಿಯಾರೆ ಕೇಳಿದ್ದೇನೆ. ಇವನನ್ನು ಈ ಕೊಡಲೇ ಕೊಂದುಹಾಕು.”
ಅರ್ಜುನನು ಧರ್ಮಸೂಕ್ಷ್ಮಗಳನ್ನು ಬಲ್ಲವನೋ ಅಲ್ಲವೋ ಎನ್ನುವುದನ್ನು ಪರೀಕ್ಷಿಸುತ್ತಿದ್ದ ಕೃಷ್ಣನು ಅಶ್ವತ್ಥಾಮನನ್ನು ಕೊಲ್ಲುವಂತೆ ಅವನನ್ನು ಪ್ರೋತ್ಸಾಹಿಸುತ್ತಿದ್ದ. ಆದರೂ ಅಶ್ವತ್ಥಾಮನನ್ನು ಕೊಲ್ಲಲು ಅರ್ಜುನನಿಗೆ ಮನಸ್ಸು ಬರಲಿಲ್ಲ. ತನ್ನ ಪಾಳೆಯಕ್ಕೆ ಹಿಂತಿರುಗಿದ ಮೇಲೆ ಅರ್ಜುನನ್ನು ಪುತ್ರಶೋಕದಿಂದ ಪ್ರಲಾಪಿಸುತ್ತಿದ್ದ ತನ್ನ ಪತ್ನಿಗೆ ಅಶ್ವತ್ಥಾಮನನ್ನು ಕೊಲ್ಲುವ ಕೆಲಸವನ್ನು ವಹಿಸಿದನು. ಅಶ್ವತ್ಥಾಮನನ್ನು ಹಗ್ಗಗಳಿಂದ ಬಿಯಲಾಗಿದ್ದುದನ್ನು ಕಂಡ ದ್ರೌಪತಿಯು ಅದನ್ನು ಸ್ವಲ್ಪವೂ ಸಹಿಸಲಿಲ್ಲ.
ಸಜ್ಜನ ಸಾಧುಗಳಲ್ಲಿ ಭಕ್ತಿಗೌರವಗಳಿದ್ದ ಆಕೆಯು, “ಇವನು ಬ್ರಾಹ್ಮಣ. ಆದ್ದರಿಂದ ಇವನನ್ನು ಬಿಟ್ಟುಬಿಡಿ. ಅರ್ಜುನ, ನೀನು ಯುದ್ಧಾಭ್ಯಾಸ ಮಾಡಿದ್ದು ದ್ರೋಣಾಚಾರ್ಯರ ಅನುಗ್ರಹದಿಂದ. ದ್ರೋಣರು ಇನ್ನೂ ಜೀವಂತರಿದ್ದಾರೆ. ಅವರ ಪುತ್ರನು ಅವರನ್ನು ಪ್ರತಿನಿಧಿಸುತ್ತಿದ್ದಾನೆ. ಪ್ರಭುವೆ, ದ್ರೋಣಾಚಾರ್ಯರ ಪತ್ನಿಯು ನನ್ನ ಹಾಗೆಯೇ ಅಳುವಂತೆ ದಯವಿಟ್ಟು ಮಾಡಬೇಡ. ನಾನು ನನ್ನ ಮಕ್ಕಳು ಹೋದರೆಂದು ಪರಿತಪಿಸುತ್ತಿದ್ದೇನೆ. ಆಚಾರ್ಯರ ಪತ್ನಿಯು ನನ್ನ ಹಾಗೇ ಸದಾ ದುಃಖಿತಳಾಗಿರುವುದು ಬೇಡ ಎಂದಳು.”

ರಾಜನಾದ ಯುಧಿಷ್ಠರನು ರಾಣಿ ಆಡಿದ ಮಾತುಗಳಿಗೆ ಪೂರ್ಣ ಬೆಂಬಲವಿತ್ತನು. ಆಕೆ ಆಡಿದ ಮಾತು ಧರ್ಮಸಮ್ಮತವಾಗಿತ್ತು. ಅಲ್ಲದೆ ಅನುಕಂಪಪೂರಿತವೂ, ನ್ಯಾಯದೃಷ್ಟಿಯುಳ್ಳದ್ದೂ ಆಗಿತ್ತು. ರಾಜನಾಡಿದ ಮಾತಿಗೆ ನಕುಲ, ಸಹದೇವ ಹಾಗೆಯೇ ಅರ್ಜುನ, ಸಾತ್ಯಕಿ, ಪ್ರಭು ಕೃಷ್ಣ ಸಭೆಯಲ್ಲಿದ್ದ ಸ್ತ್ರೀಯರು ಹಾಗೂ ಇತರ ಗಣ್ಯರು ಏಕಕಂಠದ ಬೆಂಬಲ ವ್ಯಕ್ತಪಡಿಸಿದರು. ಆದರೆ ಭೀಮನು ರಾಜನ ಮಾತನ್ನು ಅನುಮೋದಿಸಲಿಲ್ಲ. ದುಷ್ಟ ಅಶ್ವತ್ಥಾಮನನ್ನು ಕೊಲ್ಲಬೇಕೆಂದು ಭೀಮನು ಆಗ್ರಹಪಡಿಸಿದನು.
ಭೀಮ, ದ್ರೌಪದಿ ಹಾಗೂ ಇತರರು ಆಡಿದ ಮಾತುಗಳನ್ನು ಕೇಳಿದ ಪ್ರಭುವು ತನ್ನ ಪ್ರಿಯ ಶಿಷ್ಯ ಅರ್ಜುನನ ಮುಖ ನೋಡಿ ನುಡಿದನು: “ಬ್ರಾಹ್ಮಣ ಬಂಧುವನ್ನು ಕೊಲ್ಲತಕ್ಕದ್ದಲ್ಲ. ಆದರೆ ಆ ಬಂಧುವು ಪಾತಕಿಯಾಗಿದ್ದಲ್ಲಿ ಅವನನ್ನು ಕೊಲ್ಲಲೇಬೇಕು. ಈ ಎಲ್ಲ ನಿಯಮಗಳು ಧರ್ಮಗ್ರಂಥಗಳಲ್ಲಿವೆ. ಅವುಗಳಲ್ಲಿ ಹೇಳಿರುವಂತೆ ನೀನು ನಡೆಯಬೇಕು. ನಿನ್ನ ಪತ್ನಿಗೆ ನೀನು ನೀಡಿರುವ ವಚನವನ್ನು ಈಡೇರಿಸಬೇಕು. ನಾನು ಹಾಗೂ ಭೀಮ ಇಬ್ಬರೂ ತೃಪ್ತರಾಗುವಂತೆ ನೀನು ನಡೆದುಕೊಳ್ಳಬೇಕು.
” ಕೃಷ್ಣನು ನೀಡಿದ ದ್ವಂದ್ವಾರ್ಥದ ಆಜ್ಞೆಯ ಹಿಂದಿದ್ದ ಉದ್ದೇಶವನ್ನು ಅರ್ಜುನನು ಅದೇ ತಾನೆ ಅರ್ಥಮಾಡಿಕೊಂಡನು. ಬಳಿಕ ತನ್ನ ಖಡ್ಗದಿಂದ ಅಶ್ವತ್ಥಾಮನ ತಲೆಗೂದಲನ್ನೂ ಮಕುಟಮಣಿಯನ್ನೂ ತರಿದು ಹಾಕಿದನು. ಶಿಶುಹತ್ಯೆಯಿಂದಾಗಿ ಅಶ್ವತ್ಥಾಮನು ಅದಾಗಲೇ ತನ್ನ ಮೈಕಾಂತಿಯನ್ನು ಕಳೆದುಕೊಂಡಿದ್ದ. ಅಲ್ಲದೆ ತನ್ನ ಶಿರೋರತ್ನವನ್ನು ಕಳೆದುಕೊಂಡ ಬಳಿಕ ಇನ್ನಷ್ಟು ಬಲಹೀನನಾದ. ಆದ್ದರಿಂದ ಅವನಿಗೆ ಸುತ್ತಿದ್ದ ಹಗ್ಗಗಳನ್ನು ಬಿಚ್ಚಿ ಅವನನ್ನು ಪಾಳೆಯದಿಂದ ಹೊರಹಾಕಲಾಯಿತು.
ತಲೆಗೂದಲನ್ನು ಬೋಳಿಸುವುದು, ಅವನ ಸಂಪತ್ತನ್ನು ವಶಪಡಿಸಿಕೊಳ್ಳುವುದು ಹಾಗೂ ಅವನನ್ನು ಮನೆಯಿಂದ ಆಚೆ ಓಡಿಸುವುದು – ಇವು ಬ್ರಹ್ಮಬಂಧುವಿಗೆ ನಿಯಮಿತವಾಗಿರುವ ಶಿಕ್ಷೆಗಳು. ಅವನನ್ನು ಕೊಲ್ಲಬೇಕೆ೦ಬ ಆಣತಿ ಎಲ್ಲೂ ಕಂಡುಬರುವುದಿಲ್ಲ. ತರುವಾಯ ದುಃಖತಪ್ತರಾದ ಪಾಂಡುಪುತ್ರರು ಹಾಗೂ ದ್ರೌಪದಿ ತಮ್ಮ ಮೃತ ಬಂಧುಗಳಿಗೆ ಸೂಕ್ತರೀತಿಯಲ್ಲಿ ಉತ್ತರಕ್ರಿಯಾವಿಧಿಗಳನ್ನು ಪೂರೈಸಿದರು.






Leave a Reply