ಮೆಲ್ಬೋರ್ನ್ನಲ್ಲಿ 1976ರ ಏಪ್ರಿಲ್ 21 ರಂದು ಪ್ರಭುಪಾದರು ಹೇಳಿದ ಕಥೆ
ದೇವರ್ಷಿ ನಾರದರ ಬಗ್ಗೆ ಗೊತ್ತಲ್ಲ? ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಅರ್ಥಾತ್ ಶ್ರೀಮನ್ನಾರಾಯಣನ ಪರಮ ಭಕ್ತರು. ಅವರು ನಿತ್ಯವೂ ನಾರಾಯಣ ದರ್ಶನ ಪಡೆಯುತ್ತಾರೆ. ಒಮ್ಮೆ ನಾರದರು ಎಂದಿನಂತೆ ನಾರಾಯಣನ ದರ್ಶನಕ್ಕೆ ಹೋಗುತ್ತಿದ್ದರು.

ದಾರಿಯಲ್ಲಿ ಅವರಿಗೊಬ್ಬ ಮಹಾಬ್ರಾಹ್ಮಣ ಎದುರಾದ. ಆತನಾದರೋ ನಿತ್ಯವೂ ವೇದಾಧ್ಯಯನ, ಪೂಜೆ-ಪುನಸ್ಕಾರಾದಿಗಳನ್ನು ಕಟ್ಟುನಿಟ್ಟಾಗಿ ಮಾಡುವ ಪರಮ ವ್ರತನಿಷ್ಟ. ನಾರದರು ಎದುರಾದ ತಕ್ಷಣ ಆತ ಪ್ರಶ್ನಿಸಿದ, “ಮಹಾಮುನಿಗಳಿಗೆ ಪ್ರಣಾಮಗಳು. ತಾವು ಶ್ರೀಕೃಷ್ಣನ ಬಳಿಗೆ ಹೋಗುತ್ತಿದ್ದೀರಲ್ಲವೆ? ಆತನ ಬಳಿ ದಯವಿಟ್ಟು ನನಗೆ ಎಂದು ಮೋಕ್ಷ ಸಿಗುವುದೆಂದು ಕೇಳುವಿರಾ?” ಬ್ರಾಹ್ಮಣನ ಸಹಜ ಕುತೂಹಲಭರಿತ ಕೋರಿಕೆಗೆ ನಾರದರು ಆಗಬಹುದೆಂದರು.
ಹಾಗೇ ವೈಕುಂಠದತ್ತ ಮುಂದುವರಿದ ನಾರದರಿಗೆ ಒಬ್ಬ ಚಮ್ಮಾರ ಎದುರಾದ. ಆತ ಒಂದು ಮರದಡಿ ಕುಳಿತು ಹಳೆ ಚಪ್ಪಲಿ ಹೊಲಿಯುತ್ತಿದ್ದ. ನಾರದರನ್ನು ಕಾಣುತ್ತಲೇ ಎದ್ದು ನಿಂತು ಭಯ-ಭಕ್ತಿಯಿಂದ ನಮಸ್ಕರಿಸಿದ. “ಸ್ವಾಮೀ, ತಾವು ಭಗವಂತ ಶ್ರೀಕೃಷ್ಣನನ್ನು ಕಾಣಲು ಹೊರಟ್ಟಿದ್ದೀರಿ. ದಯವಿಟ್ಟು, ನನಗೆ ಈ ಜೀವನದಿಂದ ಮುಕ್ತಿ ಯಾವಾಗ ಸಿಗುತ್ತದೆ ಎಂಬುದನ್ನು ಕೇಳಿಕೊಂಡು ಬರುತ್ತೀರಾ?” ಎಂದು ವಿನಮ್ರವಾಗಿ ಕೇಳಿಕೊಂಡ. ನಾರದರು ಅವನಿಗೂ ಆಗಬಹುದೆಂದು ಉತ್ತರಿಸಿ ಮುನ್ನಡೆದರು.
ನಾರದರು ಕೃಷ್ಣಧಾಮ ಪ್ರವೇಶಿದವರೇ ಭಗವಂತನಿಗೆ ನಮಿಸಿ, ಬ್ರಾಹ್ಮಣ ಮತ್ತು ಚಮ್ಮಾರ ಕೇಳಿದ ಪ್ರಶ್ನೆಗಳನ್ನು ಕೃಷ್ಣನ ಮುಂದಿಟ್ಟರು. ಕೃಷ್ಣ ನಸುನಗುತ್ತಾ ಉತ್ತರಿಸಿದ, “ಚಮ್ಮಾರ ಇಷ್ಟರಲ್ಲೇ ತನ್ನ ಐಹಿಕ ದೇಹ ತೊರೆದು ನನ್ನ ಬಳಿ ಬರುತ್ತಾನೆ. ಆದರೆ ಬ್ರಾಹ್ಮಣನಿಗೆ ಸದ್ಯಕ್ಕೆ ಮುಕ್ತಿ ಇಲ್ಲ. ಆತ ಇನ್ನೂ ಹಲವಾರು ಬಾರಿ ಭೂಮಿಯಲ್ಲಿ ಜನ್ಮ ತಾಳಬೇಕು!”
ಕೃಷ್ಣನ ಉತ್ತರ ಕೇಳಿ ನಾರದರು ಒಂದು ಕ್ಷಣ ಅವಕ್ಕಾದರು. ಅರೇ ಒಬ್ಬ ಸಾಮಾನ್ಯ ಚಮ್ಮಾರ ಕೃಷ್ಣಪಾದ ಸೇರುವುದು! ಮಹಾ ಬ್ರಾಹ್ಮಣ ಇನ್ನೂ ಭೂಮಿ ಮೇಲೇ ಪುನರ್ಜನ್ಮ ತಾಳುವುದು! ನಾರದರಿಗೆ ಆಶ್ವರ್ಯ ತಡೆಯಲಾಗಲಿಲ್ಲ.” ಇದೇನು ಕೃಷ್ಣ? ನಿನ್ನ ಲೀಲೆಯೇ ನನಗೆ ಅರ್ಥವಾಗುತ್ತಿಲ್ಲವಲ್ಲ. ಚಮ್ಮಾರನಿಗೆ ಮೋಕ್ಷ, ಬ್ರಾಹ್ಮಣನಿಗೆ ಪುನರ್ಜನ್ಮ ಶಿಕ್ಷೆ. ಹೀಗೇಕೆ? ಎಂದು ಪ್ರಶ್ನಿಸಿದರು.
ಕೃಷ್ಣ ಶಾಂತ ಚಿತ್ತದಿಂದ, ಮಾರ್ಮಿಕವಾಗಿ ಉತ್ತರಿಸಿದ. “ಸ್ವಲ್ಪ ತಾಳಿರಿ. ನಿಮಗೆಲ್ಲವೂ ಅರ್ಥವಾಗುತ್ತದೆ. ನಾರದರೇ, ನೀವು ಭೂಲೋಕಕ್ಕೆ ಮರಳಿದ ತಕ್ಷಣ ಬ್ರಾಹ್ಮಣ ಮತ್ತು ಚಮ್ಮಾರ ನಿಮ್ಮ ಬಳಿ ಬರುತ್ತಾರೆ. ಕೃಷ್ಣ ತನ್ನ ಧಾಮದಲ್ಲಿ ಏನು ಮಾಡುತ್ತಿದ್ದ ಎಂದು ಕೇಳುತ್ತಾರೆ. ಅಲ್ಲವೇ?” ನಾರದರು ಹೌದೆಂದು ತಲೆಯಾಡಿಸಿದರು. “ಕೃಷ್ಣ ಸೂಜಿಯ ಕಣ್ಣಿನೊಳಗೆ ಆನೆಯನ್ನು ಪೋಣಿಸುತ್ತಿದ್ದ ಎಂದು ನೀವು ಅವರಿಬ್ಬರಿಗೂ ಹೇಳಬೇಕು! ಆಗ ಅವರಿಬ್ಬರ ಪ್ರತಿಕ್ರಿಯೆ ನೋಡಿ. ನಿಮಗೆ ಎಲ್ಲವೂ ಅರ್ಥವಾಗುತ್ತದೆ” ಎಂದ ಶ್ರೀಕೃಷ್ಣ.

ನಾರದರು ಹಿಂತಿರುಗಿ ಭೂಲೋಕಕ್ಕೆ ಬಂದರು. ಅವರ ಬರುವಿಕೆಯನ್ನೇ ಎದುರು ನೋಡುತ್ತಿದ್ದ ಬ್ರಾಹ್ಮಣ ಎದುರಾದ. ಯಥಾ ಪ್ರಕಾರ ನಾರದರಿಗೆ ವಂದಿಸಿ, “ಕೃಷ್ಣನನ್ನು ನೋಡಿ ಬಂದಿರಾ?” ಎಂದು ಪ್ರಶ್ನಿಸಿದ. ಹೌದೆಂದರು ನಾರದರು. “ಹೇಗಿದ್ದ ಕೃಷ್ಣ ಏನು ಮಾಡುತ್ತಿದ್ದ?” ಕುಶಲ ವಿಚಾರಿಸಿದ ಬ್ರಾಹ್ಮಣ. ನಾರದರೆಂದರು, “ಕೃಷ್ಣ ಸೂಜಿ ಕಣ್ಣಿನೊಳಗೆ ಆನೆಯನ್ನು ಪೋಣಿಸುತ್ತಿದ್ದ!” ಬ್ರಾಹ್ಮಣ ಜೋರಾಗಿ ನಗಲಾರಂಭಿಸಿದ. “ಸೂಜಿ-ಕಣ್ಣಿನೊಳಗೆ ಆನೆ! ನಾರದರೇ, ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ.
ಆದರೆ ಇಂಥ ಪೊಳ್ಳು ಕಥೆಗಳನ್ನು ನಾನು ನಂಬುವುದಿಲ್ಲ” ಎಂದು ಗಹಗಹಿಸಿದ ಆ ಬ್ರಾಹ್ಮಣ. ನಾರದರಿಗೀಗ ಅರ್ಥವಾಯಿತು; ಈ ಬ್ರಾಹ್ಮಣನಿಗೆ ಜ್ಞಾನ ಇದೆ. ಆಚರಣೆ ಇದೆ. ಆದರೆ ಭಗವಂತನಲ್ಲಿ ಅಚಲ ಶ್ರದ್ಧೆ ಇಲ್ಲ. ಈತ ಬರೀ ಪುಸ್ತಕ ಓದುತ್ತಾನೆ ಅಷ್ಟೆ.
ಮರು ಮಾತನಾಡದೇ ಮುಂದಡಿ ಇಟ್ಟ ನಾರದರಿಗೆ ಚಮ್ಮಾರ ಎದುರಾದ. ತಲೆಬಾಗಿ ನಮಸ್ಕರಿಸಿದವನೇ, “ಸ್ವಾಮೀ, ಕೃಷ್ಣನ ಕಂಡಿರಾ? ಹೇಗಿದ್ದಾನೆ? ಈಗ ಏನು ಮಾಡುತ್ತಿದ್ದಾನೆ?” ಕಾತರದಿಂದ ಪ್ರಶ್ನಿಸಿದ. ನಾರದರದು ಮತ್ತೆ ಅದೇ ಉತ್ತರ; “ಕೃಷ್ಣ ಸೂಜಿ ಕಣ್ಣಿನೊಳಗೆ ಆನೆ ಪೋಣಿಸುತ್ತಿದ್ದ!” ಇದನ್ನು ಕೇಳಿ ಆನಂದಾಶ್ಚರ್ಯದಿಂದ ಆ ಚಮ್ಮಾರನ ಕಣ್ಣಿನಿಂದ ಹನಿ ಉದುರಿತು.
ನಾರದರು ಮರು ಪ್ರಶ್ನಿಸಿದರು. “ಇದನ್ನು ನೀನು ನಂಬುತ್ತಿಯಾ? ಸೂಜಿ ಕಣ್ಣಿನೊಳಗೆ ಆನೆಯನ್ನು ಪೋಣಿಸಲು ಸಾಧ್ಯವೇ?”
“ಯಾಕೆ ಸಾಧ್ಯವಿಲ್ಲ?” ಚಮ್ಮಾರನ ಪ್ರಶ್ನಾರ್ಥಕ ಉತ್ತರ! ನಾರದರು ಸುಮ್ಮನಿರಲಿಲ್ಲ “ಅದು ಹೇಗೆ ಸಾಧ್ಯ?” ಮತ್ತೆ ಪ್ರಶ್ನಿಸಿದರು.
“ಸ್ವಾಮಿ, ಇಲ್ಲಿ ನೋಡಿ ನಾವು ದಿನವೂ ಈ ಮರದ ಕೆಳಗೆ ಕೂರುತ್ತೇನೆ. ಅದರಿಂದ ಸಾವಿರಾರು ಹಣ್ಣುಗಳು ಬೀಳುತ್ತವೆ. ಪ್ರತಿ ಹಣ್ಣಿನೊಳಗೂ ಹತ್ತಾರೂ ಬೀಜಗಳಿರುತ್ತವೆ. ಅದರಲ್ಲಿ ಪ್ರತಿಯೊಂದು ಬೀಜವೂ ಮತ್ತೆ ಮರವಾಗಿ ಹಣ್ಣು ನೀಡುತ್ತದೆ. ಅಂದರೆ ಅಷ್ಟು ಚಿಕ್ಕ ಬೀಜಗಳಲ್ಲೂ ಒಂದೊಂದು ಮರ ಹುದುಗಿರುತ್ತದೆ!” ಚಮ್ಮಾರ ವಿವರಿಸಿದ. ನಾರದರಿಗೆ ಮತ್ತೆ ಅಚ್ಚರಿ.
ಚಮ್ಮಾರ ಮುಂದುವರಿಸಿದ, “ಚಿಕ್ಕ ಬೀಜದೊಳಗೆ ಬೃಹತ್ ಮರ ಹುದುಗಿಸಿಡುವ ಕೃಷ್ಣ, ತನ್ನ ಅದಮ್ಯ ಶಕ್ತಿಯಿಂದ ಸಮಸ್ತ ಗ್ರಹಗಳೂ ಆಗಸದಲ್ಲಿ ತೇಲುವಂತೆ ಮಾಡಿದ್ದಾನೆ. ಇಂಥ ಅದ್ಭುತ ಶಕ್ತಿಯಿರುವ ಕೃಷ್ಣನಿಂದ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದ ಚಮ್ಮಾರ. ಕೃಷ್ಣನ ಮೇಲೆ ಆತನಿಗಿರುವ ತರ್ಕಬದ್ಧ ಶ್ರದ್ಧೆಗೆ ನಾರದರು ತಲೆದೂಗಿದರು.
ಶ್ರದ್ಧೆ ಎಂದರೆ ಇದು. ಇದು ಅಂಧ ಶ್ರದ್ಧೆಯಲ್ಲ. ಅದರ ಹಿಂದೆ ಬಲವಾದ ಕಾರಣಗಳಿವೆ. ಬೀಜದೊಳಗೆ ಮರವನ್ನು ಅಡಗಿಸಿಟ್ಟಿರುವ ಕೃಷ್ಣ, ಸೂಚಿಯ ಕಣ್ಣಿನೊಳಗೆ ಖಂಡಿತವಾಗಿಯೂ ಆನೆಯನ್ನು ಪೋಣಿಸಬಲ್ಲ ಎಂಬುದು ಚಮ್ಮಾರನ ತರ್ಕ. ಈ ಅಚಲ ಶ್ರದ್ಧೆಯೇ ಅವನಿಗೆ ಮೋಕ್ಷ ದೊರೆಯಲು ಕಾರಣ. ಅದೇ ಬ್ರಾಹ್ಮಣ ಎಷ್ಟೇ ಅಧ್ಯಯನ, ಆಚರಣೆ, ಅನುಷ್ಠಾನವಿದ್ದರೂ ಶ್ರದ್ಧೆಇಲ್ಲ. ಹೀಗಾಗಿ ಅವನಿಗೆ ಮುಕ್ತಿಯೂ ಇಲ್ಲ!






Leave a Reply