-ಕೃಷ್ಣದಾಸ
ಧರ್ಮ ಸಂಸ್ಥಾಪನೆಗಾಗಿ ಕಾಲ ಕಾಲಕ್ಕೆ ಧರೆಗವತರಿಸುವ ದೇವೋತ್ತಮ ಪರಮ ಪುರುಷ ತಾನೊಬ್ಬನೇ ಭೂಮಿಗೆ ಬರುವುದಿಲ್ಲ. ತನ್ನ ಆತ್ಮೀಯ ಒಡನಾಡಿಗಳು, ಸ್ನೇಹಿತರು, ಸೇವಕರ ಜೊತೆಗೇ ಅವತರಿಸುತ್ತಾನೆ. ಅಷ್ಟೇ ಅಲ್ಲ, ಭೂಮಿ ಮೇಲೆ ತನ್ನದೇ ಆದ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಆಧ್ಯಾತ್ಮಿಕ ಲೋಕದಲ್ಲಿರುವ ಅವನ ಮೂಲ ನಿವಾಸಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ.

ಹೀಗೆ ದೇವೋತ್ತಮ ಪರಮ ಪುರುಷನ ಈ ಐಹಿಕ ಲೋಕದಲ್ಲಿ ಸೃಷ್ಟಿಸುವ ಆಧ್ಯಾತ್ಮಿಕ ಲೋಕದ ಪ್ರತಿರೂಪವನ್ನು “ಧಾಮ” ಎನ್ನುತ್ತೇವೆ. 5000 ವರ್ಷಗಳ ಹಿಂದೆ ಕೃಷ್ಣನಾಗಿ ಹುಟ್ಟಿ ಈ ಭೂಮಿಯನ್ನು ಪಾವನಗೊಳಿಸಿದ ದೇವೊತ್ತಮನು, ಇಲ್ಲೊಂದು ಧಾಮವನ್ನು ಧರೆಗೆ ತಂದನು. ಅದೇ ವೃಂದಾವನ.
ಯಮುನಾ ತೀರದ ಮಥುರೆಯಲ್ಲಿ ಭೋಜ ವಂಶದ ದೊರೆ ಕಂಸನ ದುರಾಚಾರ ಮಿತಿಮೀರಿದಾಗ ಕೃಷ್ಣ ಅವತಾರವೆತ್ತಿದ. ಪೂರ್ವ ಯೋಜನೆಯಂತೆ ಕಂಸನ ಸೋದರಿ ದೇವಕಿಯ ಗರ್ಭದಲ್ಲಿ ವಸುದೇವ ಸುತನಾಗಿ ಜನ್ಮತಳೆದ.
ದೇವಕಿಗೆ ಹುಟ್ಟುವ ಎಂಟನೇ ಮಗುವಿನಿಂದ ನಿನಗೆ ಮೃತ್ಯು ಎಂದು ಕಂಸನಿಗೆ ಅಶರೀರವಾಣಿಯಾಗಿದ್ದು, ಕಂಸನು ವಸುದೇವ-ದೇವಕಿಯರನ್ನು ಜೈಲಿಗಟ್ಟಿದ್ದು, ದೇವಕಿಯ ಎಂಟನೇ ಮಗುವಾಗಿ ಕೃಷ್ಣ ಮಧ್ಯರಾತ್ರಿಯಲ್ಲಿ ಜನಿಸಿದ್ದು ಅಭೇದ್ಯ ಜೈಲಿನ ದ್ವಾರಗಳು ಪವಾಡ ಸದೃಶವಾಗಿ ತೆರೆದುಕೊಂಡಿದ್ದು, ವಸುದೇವ ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ಶಿಶುವನ್ನು ಗೋಕುಲಕ್ಕೆ ಒಯ್ದಿದ್ದು, ಶ್ರೀ ಕೃಷ್ಣ ಗೋಕುಲದಲ್ಲಿ ನಂದ ಮಹಾರಾಜನ ಮತ್ತು ಯಶೋಧೆಯ ಮುದ್ದಿನ ಮಗುವಾಗಿ ಬೆಳೆದಿದ್ದು, ವೃಂದಾವನದಲ್ಲಿ ಬಲರಾಮ ಗೋಪಬಾಲರು, ಗೋಪಿರ ಮಧ್ಯೆ ವಿವಿಧ ಲೀಲೆಗಳನ್ನು ಪ್ರದರ್ಶಿಸಿದ್ದು, ಆತ ಮಥುರೆಗೆ ಬಂದು ಕಂಸನನ್ನು ಸಂಹರಿಸಿದ್ದು, ಎಲ್ಲವೂ ಭಗವಂತನ ಪೂರ್ವಯೋಜಿತ ಕೃತ್ಯಗಳು.
ಹೀಗೆ ಶ್ರೀಕೃಷ್ಣನ ಪ್ರಮುಖ ಲೀಲೆಗಳೆಲ್ಲ ನಡೆದದ್ದು ಯಮುನಾ ತೀರದ ಮಥುರಾ ನಂದ ಗ್ರಾಮ ಮತ್ತು ವೃಂದಾವನಗಳಲ್ಲೇ. ಈ ಪ್ರದೇಶವೇ ಅವನ ಪವಿತ್ರ ಧಾಮವಾಗಿತ್ತು. ಆಧ್ಯಾತ್ಮಿಕ ಲೋಕದಲ್ಲಿ ಅವನ ಜತೆಗಿದ್ದವರೆಲ್ಲ ಇಲ್ಲಿಯೂ ಲೀಲೆಗಳಲ್ಲಿ ಪಾತ್ರಧಾರಿಗಳಾಗಿದ್ದರು.
5000 ವರ್ಷಗಳ ಹಿಂದೆ ಕೃಷ್ಣ ಲೀಲೆಗೆ ಸಾಕ್ಷಿಯಾಗಿದ್ದ ಆ ಪವಿತ್ರ ಧಾಮಗಳಲ್ಲಿ ಅತ್ಯಂತ ಪ್ರಮುಖವೂ, ಶ್ರೇಷ್ಠವೂ ಆಗಿರುವುದು ಶ್ರೀ ವೃಂದಾವನ ಧಾಮ. ಕೃಷ್ಣ ತನ್ನ ಪರಮಾಪ್ತರ ಜತೆ ಅತ್ಯಂತ ದಿವ್ಯವೂ, ಪ್ರೇಮಮಯವು ಆದ ಲೀಲೆಗಳನ್ನು ಪ್ರದರ್ಶಿಸಿದ್ದು ಇಲ್ಲೇ! ಅದು ನಮ್ಮ ರಾಜಧಾನಿ ದಿಲ್ಲಿಯ ಸಮೀಪದಲ್ಲೇ ಇವೆ.
ಗೆಳೆಯರ ಜೊತೆಗಿನ ಬಾಲಲೀಲೆ, ಗೋಪಿಯರ ಜೊತೆಗಿನ ರಾಸಲೀಲೆ, ರಾಧಾಕೃಷ್ಣರ ಪ್ರಣಯ ಲೀಲೆಗಳಿಗೆ ಸಾಕ್ಷಿಯಾಗಿದ್ದು ಇದೇ ವೃಂದಾವನ ಧಾಮ. ಇಡೀ ವೃಂದಾವನ ಧಾಮ ಸುಮಾರು 42 ಕಿ.ಮೀ ಪರಧಿ ಹೊಂದಿದೆ. ಮಥುರಾ ಇದರ ಕೇಂದ್ರ ಬಿಂದು. ಇದೇ “ವ್ರಜಮಂಡಲ”. ಇಲ್ಲಿ ಕೃಷ್ಣ ತನ್ನ ಸಂಗಾತಿಗಳ ಜೊತೆಗೆ ಮೆರೆದ ಅನೇಕ ಸ್ಥಳಗಳಿವೆ.
ಭದ್ರವನ, ಬಿಲ್ವವನ, ಲೋಹವನ, ಬಂಢೀರವನ, ಮಧುವನ, ಮಹಾವನ, ತಲವನ, ಕುಮುದವನ, ಬಹುಲಾವನ, ಕಾಮ್ಯವನ, ಖಧೀರವನ ಮತ್ತು ವೃಂದಾವನ ಹೆಸರಿನ ಹನ್ನೆರಡು ವನಗಳಿವೆ. ಮಥುರಾ ನಗರ, ರಾಧಾರಾಣಿಯ ಜನ್ಮಸ್ಥಳ ರಾವಲ್, ಬಲರಾಮನ ವಿಶೇಷ ಮಂದಿರವಿರುವ ದೌಜಿ, ಗೋವರ್ಧನಗಿರಿ, ರಾಧಾಕುಂಡ, ಶ್ರೀಮತಿ ರಾಧಾರಾಣಿ ವಾಸಿಸುತ್ತಿದ್ದ ವರ್ಷಾನ ಹಾಗೂ ಜಾವತ್, ಕೋಕಿಲವನ, ಬ್ರಹ್ಮಾಂಡ ಘಾಟ ಇವೇ ಮೊದಲಾದ ಲೀಲಾ ಸ್ಥಳಗಳಿವೆ.

ಪ್ರತಿ ವರ್ಷ ಅನೇಕ ಭಕ್ತರು ಕಾರ್ತಿಕ ಮಾಸದಲ್ಲಿ ಈ ಎಲ್ಲಾ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಕೃಷ್ಣನ ಲೀಲೆಗಳನ್ನು ಸ್ಮರಿಸಿ ಪರಿಶುದ್ಧರಾಗುತ್ತಾರೆ. ಲೀಲಾ ಸ್ಥಳಗಳನ್ನು ದರ್ಶನ ಮಾಡಲು ಸುಮಾರು ಒಂದು ತಿಂಗಳ ಸಮಯವೇ ಬೇಕಾಗುತ್ತದೆ. ಇಸ್ಕಾನ್ ಸೇರಿದಂತೆ ಅನೇಕ ಸಂಸ್ಥೆಗಳು, ಮಠಗಳು ವ್ರಜಮಂಡಲ ಪರಿಕ್ರಮವೆಂದೇ ಖ್ಯಾತವಾದ ಈ ತೀರ್ಥಯಾತ್ರೆಯನ್ನು ನಡೆಸಿಕೊಡುತ್ತಾರೆ.
ಶ್ರೀ ಚೈತನ್ಯ ಮಹಾಪ್ರಭುಗಳು ಸುಮಾರು 500 ವರ್ಷಗಳ ಹಿಂದೆ ವೃಂದಾವನಕ್ಕೆ ಭೇಟಿ ನೀಡಿ ಆನಂದಾತಿರೇಕದಲ್ಲಿ ಮುಳುಗಿದ್ದರು. ವೃಂದಾವನ ಧಾಮವನ್ನು ಕಾಣುವುದು ಹೇಗೆ ಎಂಬುದಕ್ಕೆ ಶ್ರೀ ಚೈತನ್ಯರೇ ನಮಗೆ ಆದರ್ಶಪ್ರಾಯರು. ಶ್ರೀ ಚೈತನ್ಯರು ಕೂಡ ಈ ಎಲ್ಲ ಪವಿತ್ರ ತಾಣಗಳಿಗೆ ಭೇಟಿ ನೀಡಿದ್ದರು. ಅವರು ನಡೆದ ಪಥವನ್ನೇ ಅನುಸರಿಸಿ ಶ್ರೀಲ ಭಕ್ತಿಸಿದ್ಧಾಂತರು (ಶ್ರೀಲ ಪ್ರಭುಪಾದರ ಗುರುಗಳು) ಸುಮಾರು 80 ವರ್ಷಗಳ ಹಿಂದೆಯೇ ಈ “ವ್ರಜಮಂಡಲ ಪರಿಕ್ರಮ” ವನ್ನು ಪ್ರಾರಂಭಿಸಿದ್ದರು.
ಈ ಪರಿಕ್ರಮದಲ್ಲಿ ವ್ರಜಮಂಡಲದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಭೇಟಿ ನೆರವೇರುತ್ತದೆ. ಇತ್ತೀಚೆಗೆ ಇಸ್ಕಾನ್ ವ್ರಜಮಂಡಲ ಪರಿಕ್ರಮವನ್ನು ಪುನಃ ಪ್ರಾರಂಭಿಸಿ, ಕಾರ್ತಿಕ ಮಾಸದಲ್ಲಿ ಅದನ್ನು ಪ್ರತಿ ವರ್ಷ ನಡೆಸಿಕೊಡುತ್ತದೆ. ಇಸ್ಕಾನ್ ಬೆಂಗಳೂರು ಈ ಬಾರಿ ಯುವಕರಿಗಾಗಿ ಒಂದು ವಾರಗಳ ಕಾಲಾವಧಿ ಪರಿಕ್ರಮವನ್ನು ಆಯೋಜಿಸಿತ್ತು.
ಶ್ರೀ ಚೈತನ್ಯರು ಪರಿಶುದ್ಧ ಹೃದಯದಿಂದ ವೃಂದಾವನ ಧಾಮಕ್ಕೆ ಹೋದಾಗ ಪ್ರತಿಯೊಂದು ವಸ್ತುವು ಕೃಷ್ಣನ ನೆನಪಿನ ಅಲೆಗಳಲ್ಲಿ ಅವರನ್ನು ಮುಳುಗಿಸುತ್ತಿತ್ತು. ಮಥುರಾ ನಗರಿಯನ್ನು ಕಂಡೊಡನೆ ಅವರು ಪ್ರಜ್ಞಾಶೂನ್ಯರಾದರು. ವ್ರಜಮಂಡಲ ಯಾತ್ರೆ ನಮ್ಮ ಮೈನವಿರೇಳಿಸುತ್ತದೆ. ಭಕ್ತಿವೇದಾಂತ ದರ್ಶನ ಓದುಗರಿಗಾಗಿ ವ್ರಜಮಂಡಲ ಪರ್ಯಟನೆಯನ್ನಿಲ್ಲಿ ದಾಖಲಿಸುತ್ತಿದ್ದೇವೆ. ಮನೆಯಲ್ಲೇ ಕುಳಿತು ವ್ರಜಮಂಡಲ ಯಾತ್ರೆ ಹೋಗೋಣ ಬನ್ನಿರಿ. ಯಾತ್ರೆಯನ್ನು ಮೊದಲ ವೃಂದಾವನ ಧಾಮದಿಂದ ಪ್ರಾರಂಭಿಸೋಣ.
ವೃಂದಾವನ
ವ್ರಜಮಂಡಲದ ಪ್ರಮುಖ ವನವೆಂದರೆ ಶ್ರೀ ವೃಂದಾವನ ವೃಂದಾ ಎಂದರೆ ತುಳಸಿ, ವನ ಎಂದರೆ ಕಾಡು. ಇಲ್ಲಿ ತುಳಸಿ ಹೇರಳವಾಗಿ ಬೆಳೆಯುವುದರಿಂದ ವೃಂದಾವನವೆಂಬ ಹೆಸರು. ಶ್ರೀ ಕೃಷ್ಣನು ತನ್ನ ಕಿಶೋರ (5ನೇ ವರ್ಷದಿಂದ 10ನೇ ವರ್ಷ) ಲೀಲೆಗಳನ್ನು ಇಲ್ಲಿ ಮೆರೆದಿದ್ದನು. ಶ್ರೀ ಚೈತನ್ಯರು ಈ ವನಕ್ಕೆ ಪ್ರವೇಶಿಸಿದಾಗ ಅಲ್ಲಿನ ಹಸುಗಳು, ಕರುಗಳು ಮತ್ತಿತರ ಪ್ರಾಣಿಗಳು ತಮ್ಮ ಕಳೆದು ಹೋದ ಮಿತ್ರನನ್ನು ಪಡೆದಂತೆ ಸ್ವಾಗತಿಸಿದವು. ಚೈತನ್ಯರ ಸಂಗವನ್ನು ಬಿಡಲಾಗದೆ ಅವರ ಹಿಂದೆಯೇ ನಡೆದವು.
ವೃಂದಾವನವನ್ನು ಕಂಡ ಶ್ರೀ ಚೈತನ್ಯರ ದೇಹದಲ್ಲಿ ಅಷ್ಟ ಸಾತ್ವಿಕ ವಿಕಾರಗಳುಂಟಾಯಿತು. ಕಂಠಕಗಳು, ಕಲ್ಲುಗಳನ್ನು ಲೆಕ್ಕಿಸದೆ ವೃಂದಾವನದ ರಜದಲ್ಲಿ ಹೊರಳಾಡುತ್ತ ಕೃಷ್ಣ ಕೀರ್ತನೆಯನ್ನು ಮಾಡಿದರು. ಜಿಂಕೆ, ನವಿಲು ಮೊದಲಾದ ಪ್ರಾಣಿ ಪಕ್ಷಿಗಳು ಯಾವುದೇ ಭೀತಿಯಿಲ್ಲದೆ ನರ್ತಿಸಿದವು. ಜಿಂಕೆಗಳಂತೂ ಅವರನ್ನು ಮುದ್ದಾಡಿದವು. ಕೃಷ್ಣ ಪ್ರೇಮದಲ್ಲಿ ಅತ್ಯುತ್ಕೃಷ್ಟ ಹಂತವನ್ನು ವೃಂದಾವನದ ಎಲ್ಲ ಪ್ರಾಣಿ ಪಕ್ಷಿಗಳು ಅನುಭವಿಸಿದವು. ಮಥುರಾ ನಗರದಲ್ಲಿ ಚೈತನ್ಯರ ಕೃಷ್ಣಪ್ರೇಮವು ಸಾವಿರ ಬಾರಿ ಹಿಮ್ಮಡಿಸಿದರೆ ವೃಂದಾನದಲ್ಲಿ ಅದು ಲಕ್ಷಾಂತರಪಟ್ಟು ಹೆಚ್ಚಿತ್ತು.
ವೃಂದಾವನ ಪರಿಕ್ರಮ
ವೃಂದಾವನ ಧಾಮವು ಆಧ್ಯಾತ್ಮಿಕ ಲೋಕದ ವೃಂದಾವನಕ್ಕಿಂತ ಭಿನ್ನವಲ್ಲವಾದ್ದರಿಂದ ಅದರ ಪ್ರದಕ್ಷಿಣೆಯನ್ನು ಮಾಡುವುದು ಸಾಮಾನ್ಯ ಸಂಪ್ರದಾಯ. ಈ ಪ್ರದಕ್ಷಿಣೆಯನ್ನು ವೃಂದಾವನ ಪರಿಕ್ರಮವೆನ್ನುತ್ತಾರೆ.
ವೃಂದಾವನದ ಪವಿತ್ರ ಯಾತ್ರೆಗೆ 10 ಕಿ.ಮೀ ಕಾಲ್ನಡಿಗೆಯ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕೆ ಸುಮಾರು 3 ತಾಸು ಸಮಯ ಬೇಕಾಗುತ್ತದೆ. ವೃಂದಾವನ ಪರಿಕ್ರಮಕ್ಕೆ ಬರುವ ಯಾತ್ರಾರ್ಥಿಗಳು ಉಪವಾಸವಿದ್ದು ಯಮುನೆಯಲ್ಲಿ ಪವಿತ್ರ ಸ್ನಾನ ಮಾಡಿ ಬರಿಗಾಲಿನಲ್ಲಿ ಪರಿಕ್ರಮ ಆರಂಭಿಸುತ್ತಾರೆ. ಒಮ್ಮೆ ವೃಂದಾವನ ಪರಿಕ್ರಮ ಪೂರೈಸಿದರೆ ಅಲ್ಲಿರುವ ಸುಮಾರು 5000 ದೇವಾಲಯಗಳಿಗೆ ಪ್ರದಕ್ಷಿಣೆ ಹಾಕಿದಂತಾಗುತ್ತದೆ! ಇದರಿಂದ ನಾವು ಜನ್ಮ ಜನ್ಮಾಂತರದ ಪಾಪಗಳೆಲ್ಲ ದೂರಾಗಿ ಪವಿತ್ರರಾಗುತ್ತೇವೆ.
ಸ್ಥಳೀಯರಾದ ಬೃಜವಾಸಿಗಳು ಪ್ರತಿ ಏಕಾದಶಿಯಂದು ಪರಿಕ್ರಮ ಕೈಗೊಳ್ಳುತ್ತಾರೆ.
ಪವಿತ್ರ ಯಮುನೆ

ಭರತ ಭೂಮಿಯ ಪರಮ ಪವಿತ್ರ ನದಿಗಳಲ್ಲಿ ಒಂದೆನಿಸಿರುವ ಯಮುನೆ ವೃಂದಾವನದ ದಿವ್ಯಭೂಮಿಯ ಮೂಲಕ ಹಾದು ಹೋಗುತ್ತದೆ. ದೇವನದಿ ಗಂಗೆ ಒಮ್ಮೆ ಭಗವಾನ್ ವಿಷ್ಣುವಿನ ಪಾದ ಸ್ಪರ್ಶಿಸಿದರೆ, ಸ್ವತಃ ಶ್ರೀಕೃಷ್ಣನೇ ಈಜಾಡಿ, ನಲಿದಾಡಿದ ಪವಿತ್ರ ಜಲ ಯಮುನೆಯಾಗಿದ್ದಾಳೆ.
ಹಿಮಾಲಯದ ಗರ್ಭದ ಯಮುನೋತ್ರಿಯಲ್ಲಿ ಜನಿಸುವ ಯಮುನೆ ನಂತರ ಬಯಲು ಪ್ರದೇಶಗಳಲ್ಲಿ ಹರಿದು ವೃಂದಾವನ ತಲುಪುತ್ತಾಳೆ. ಒಂದಾನೊಂದು ಕಾಲದಲ್ಲಿ ಯಮುನೆ ವೃಂದಾವನವನ್ನು ಸುತ್ತುವರಿದಿದ್ದಳಂತೆ. ಆದರೆ ಈಗ ಆಕೆ ಎರಡು ಭಾಗಗಳಾಗಿ ವೃಂದಾವನವನ್ನು ಸೀಳಿಕೊಂಡು ಹರಿಯುತ್ತಾಳೆ.
ವೃಂದಾವನ ಯಾತ್ರೆಯ ಒಂದು ಪ್ರಮುಖ ಭಾಗ ಯಮುನಾ ಸ್ನಾನ. ಇಲ್ಲಿ ಯಮುನೆ ತಟದಲ್ಲಿ ಹಲವಾರು ಸ್ನಾನ ಘಟ್ಟಗಳಿವೆ. ಈ ಪೈಕಿ ಪ್ರಮುಖವಾದುದು ಕೇಶೀ ಘಾಟ್. ಕೇಶಿ ಎಂಬ ರಕ್ಕಸನನ್ನು ಸಂಹರಿಸಿದ ಬಳಿಕ ಶ್ರೀಕೃಷ್ಣ ಇದೇ ಸ್ಥಳದಲ್ಲಿ ಸ್ನಾನ ಮಾಡಿದ್ದನೆಂಬ ನಂಬಿಕೆ ಇದೆ. ಪಾಪ ಮುಕ್ತರಾಗಿ, ಶ್ರೀಕೃಷ್ಣನ ನಿಜ ಭಕ್ತರೆನಿಸಿಕೊಂಡು, ಈ ಐಹಿಕ ಜಗತ್ತಿನಿಂದ ಬಿಡುಗಡೆಗೊಂಡು ಆಧ್ಯಾತ್ಮ ಲೋಕದೆಡೆಗೆ ಸಾಗುವಲ್ಲಿ ಯಮುನಾ ಸ್ನಾನ ಒಂದು ಪ್ರಮುಖ ಘಟ್ಟ.
17 ಮತ್ತು 18ನೇ ಶತಮಾನದಲ್ಲಿ ರಜಪೂತ ದೊರೆಗಳು ವೃಂದಾವನವನ್ನು ಅಭಿವೃದ್ಧಿಪಡಿಸಿದರು. ಯಮುನಾ ತೀರದುದ್ದಕ್ಕೂ ಕೆಂಪು ಕಲ್ಲಿನ ಅನೇಕ ಸ್ನಾನ ಘಟ್ಟಗಳನ್ನು ನಿರ್ಮಿಸಿದರು. ಆದರೆ ಈಗ ಬಹಳಷ್ಟು ಘಟ್ಟಗಳು ಶಿಥಿಲಾವಸ್ಥೆಯಲ್ಲಿವೆ. ಮತ್ತೆ ಕೆಲವು ಘಟ್ಟಗಳು ಮರಳಿನಡಿ ಹೂತು ಹೋಗಿವೆ.
ಇಲ್ಲಿನ ಪ್ರಮುಖ ಸ್ನಾನ ಘಟ್ಟಗಳು
ವರಾಹ ಘಟ್ಟ, ಮೋಹನ ತೇರ್ ಘಟ್ಟ, ರಾಮ್ಗೋಲ್ ಘಟ್ಟ, ಕಾಲಿ-ದಹ ಘಟ್ಟ, ಗೋಪಾಲ ಘಟ್ಟ, ನಭವಾಲ ಘಟ್ಟ, ಪ್ರಸ್ಕಾಂದನ ಘಟ್ಟ, ಸೂರಜ್ ಘಟ್ಟ, ಕೊರಿಯಾಘಟ್ಟ, ಜಗುಲ್ ಘಟ್ಟ, ಧುಸರ್ ಘಟ್ಟ, ನಯಾ ಘಟ್ಟ, ಶ್ರೀಜಿ ಘಟ್ಟ, ಬಿಹಾರ್ ಘಟ್ಟ, ಧುರಾವರೆ ಘಟ್ಟ, ನಗರಿದಾಸ್ ಘಟ್ಟ, ಭೀಮ್ ಘಟ್ಟ, ಅಂಧಾ ಘಟ್ಟ, ತೆದ್ರಿವಾರ ಘಟ್ಟ,ಇವಿಲ್ಲ ಘಟ್ಟ, ಭರ್ದ್ವಾನ್ ಘಟ್ಟ, ಬರ್ವಾರಾ ಘಟ್ಟ, ರಾಣಾವತ್ ಘಟ್ಟ, ಶೃಂಗಾರ್ ಘಟ್ಟ, ಗಂಗಾಮೋಹನ ಘಟ್ಟ, ಗೋವಿಂದ ಘಟ್ಟ, ಹಿಮ್ಮನ್ ಬಹದ್ದೂರ್ ಘಟ್ಟ, ಚಿರ ಘಟ್ಟ, ಹನುಮಾ/ನ್ ಘಟ್ಟ, ಬ್ರಹ್ಮರ ಘಟ್ಟ, ಕಿಶೋರ್ ರಾಣಿ ಘಟ್ಟ, ಪಾಂಡವರ ಘಟ್ಟ, ಕೇಶಿ ಘಟ್ಟ, ಧೀರ ಸಮೀರ ಘಟ್ಟ, ತೆಕಾರಿ ಘಟ್ಟ, ಪಾನಿ ಘಟ್ಟ,ಆದಿ ಭದ್ರಿ ಘಟ್ಟ, ರಾಜ್ ಘಟ್ಟ.
ಪರಿಕ್ರಮ ಫಥ
ವೃಂದಾವನ ಪರಿಕ್ರಮ ಪಥ ಇಲ್ಲಿನ ಇಸ್ಕಾನ್ ಮಂದಿರದ ಮುಂಭಾಗದ ಮುಖ್ಯರಸ್ತೆಯಿಂದ ಆರಂಭವಾಗುತ್ತದೆ. ಕೃಷ್ಣ ಬಯಲು ಮಂದಿರದ ಬಳಿಯಿರುವ ಈ ರಸ್ತೆಯಲ್ಲಿ ಸುಮಾರು 440 ಮೀ. ಸಾಗಿದರೆ ನೀವು ಕೃಷ್ಣ-ಬಲರಾಮ ವೃಕ್ಷದ ಬಳಿ ತಲುಪುತ್ತೀರಿ. ಅಲ್ಲಿಂದ ಮುಂದುವರಿದು 120 ಮೀ ನೇರವಾಗಿ ಸಾಗಿ, ಮೊದಲು ಎಡಕ್ಕೆ ಮತ್ತು ನಂತರ ತಕ್ಷಣ ಬಲಕ್ಕೆ ತಿರುಗಿ, ಅಲ್ಲಿಂದ 3 ನಿಮಿಷ ಸಾಗಿದರೆ ರಸ್ತೆಯ ಬಲ ಭಾಗದಲ್ಲಿ ಗೌತಮಿ ಋಷಿ ಆಶ್ರಮ ಸಿಗುತ್ತದೆ.
ಅಲ್ಲೇ ಬಲ ಭಾಗದಲ್ಲಿ ವರಾಹ ಘಟ್ಟವಿದೆ. ಅಲ್ಲಿಂದ 50 ಮೀ. ಸಾಗಿದರೆ ಆ ರಸ್ತೆ ಕೊನೆಗೊಂಡು ಎಡ-ಬಲಕ್ಕೆ ಕವಲೊಡೆಯುತ್ತದೆ. ಅಲ್ಲಿ ನೀವು ಬಲಭಾಗದ ಇಸ್ಕಾನ್ ರಸ್ತೆಯಲ್ಲಿ ಸಾಗಿ 5 ನಿಮಿಷ ನಡೆದರೆ ಬಲ ಭಾಗದಲ್ಲಿ ಇಸ್ಕಾನ್ ಗೋಶಾಲೆಗೆ ಸೇರಿದ ಸುಂದರ ಉದ್ಯಾನ ಕಾಣಿಸುತ್ತದೆ. ಹಾಗೆಯೇ 1 ನಿಮಿಷ ಸಾಗಿದರೆ ಸಂರಕ್ಷಿತ ಗೋವುಗಳು ಕಾಣಿಸುತ್ತವೆ.
ಅಲ್ಲಿಂದ 400 ಮೀ. ಮುಂದೆ ನಡೆದರೆ ಕೆಂಪು ಕಲ್ಲಿನ ಬೃಹತ್ ಮದನ ಮೋಹನ ದೇವಾಲಯ ತಲುಪುತ್ತೀರಿ. ಈ ದೇವಾಲಯ ಸಂದರ್ಶಿಸಿ ಸುಮಾರು 200 ಮೀ. ಸಾಗಿದರೆ ಕಾಲಿಯಾ ಘಟ್ಟ ಸಿಗುತ್ತದೆ.
ಅಲ್ಲಿಂದ ಒಂದು ಕಿ.ಮೀ (15 ನಿಮಿಷ) ಸಾಗಿದರೆ ಒಂದು ಚಿಕ್ಕ ಮರದ ಸೇತುವೆ ಸಿಗುತ್ತದೆ. ಹಾಗೆಯೇ 800 ಮೀ. (12 ನಿಮಿಷ) ಸಾಗಿದರೆ ಬಲಭಾಗದಲ್ಲಿ ಸಿಗುವುದೇ ಇಮ್ಲಿ ತಾಲಾ. ಇದರ ಸುತ್ತ ಹಳದಿ ಗೋಡೆ ಇದೆ. ನೀವು ದ್ವಾರದ ಮೂಲಕ ಇಮ್ಲಿ ತಾಲಾ ವೃಕ್ಷ ನೋಡಬಹುದು. ಅಲ್ಲಿಂದ 240 ಮೀ ಸಾಗಿದರೆ ಬಲ ಭಾಗದಲ್ಲಿ ಶ್ರೀರಂಗ ವಟವಿದೆ.
ಇಲ್ಲಿಂದ ಹಾದಿ ಸ್ವಲ್ಪ ಕಿರಿದಾಗುತ್ತದೆ. ಶ್ರೀರಂಗ ವಟ ನೋಡಿಕೊಂಡು 400 ಮೀ. (6 ನಿಮಿಷ) ಸಾಗಿದರೆ, ಕೆಂಪು ಕಲ್ಲಿನಿಂದಾವೃತ ಘಟ್ಟ ಪ್ರದೇಶ ತಲುಪುತ್ತೀರಿ. ಇದೇ ಕೇಶಿ ಘಟ್ಟ ಪ್ರದೇಶ. ಹಾಗೆ 5 ನಿಮಿಷ ನಡೆದು ಬಲಕ್ಕೆ ತಿರುಗಿ, ತಕ್ಷಣ ಎಡಕ್ಕೆ ಹೊರಳಿ 100 ಮೀ. ಸಾಗಿದರೆ ಆ ಹಾದಿ ಇನ್ನೊಂದು ದಾರಿಯನ್ನು ಕೂಡಿಕೊಳ್ಳುತ್ತದೆ. ಅಲ್ಲಿ ಎಡಕ್ಕೆ ತಿರುಗಿ, ತಕ್ಷಣ ಬಲಕ್ಕೆ ಹೊರಳಿ.

ಅಲ್ಲಿಂದ ಅರ್ಧ ಕಿ.ಮೀ. ಸಾಗಿದರೆ ಹಾದಿ ಕವಲೊಡೆಯುತ್ತದೆ. ಇಲ್ಲಿ ಯಾತ್ರಿಗಳಿಗೆ ತುಸು ಗೊಂದಲವಾಗುವ ಸಾಧ್ಯತೆ ಇದೆ. ಕೆಲವರು ಎಡಕ್ಕೆ ಹೊರಳಿ ಮುಂದುವರೆಯುತ್ತಾರೆ. ಮತ್ತೆ ಕೆಲವರು ಬಲಕ್ಕೆ ಹೊರಳಿ ತೇಕ್ರ ರಾಣಿ ಮತ್ತು ಜಗನ್ನಾಥ ದೇವಾಲಯಕ್ಕೆ ಹೋಗುತ್ತಾರೆ.
ಹಾಗೆಯೇ ಸಾಗಿದರೆ ಎಡ ಭಾಗದಲ್ಲಿ ಖಾಲಿ ಜಾಗವೂ ಬಲ ಭಾಗದಲ್ಲಿ ಕೆಲವು ಆಶ್ರಮಗಳು ಕಾಣಸಿಗುತ್ತವೆ. ಮುಂದೆ ಒಂದೂವರೆ ಕಿ.ಮೀ. ಸಾಗಿದರೆ ಗಟ್ಟಿಮರಳಿನ ಹಾದಿ ಮೃದು ಮಣ್ಣಿನ ಹಾದಿಯಾಗಿ ಬದಲಾಗುತ್ತದೆ. ಅಲ್ಲಿಯೇ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯಲ್ಲಿ ನೇರ ಸಾಗಿ. ಸುಮಾರು 200 ಮೀ.ಸಾಗಿದರೆ ಒಂದು ತಿರುವಿನಲ್ಲಿ ಚಿಕ್ಕದೊಂದು ಗುಡಿ ಇದೆ. ರಸ್ತೆ ಬಲ ಭಾಗದಲ್ಲಿರುವ ಈ ಗುಡಿಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ವಿಗ್ರಹವಿದೆ. ಚೈತನ್ಯರು ವೃಂದಾವನಕ್ಕೆ ಬಂದಾಗ ಇಲ್ಲಿ ಕುಳಿತಿದ್ದರಂತೆ.
ಅಲ್ಲಿಂದ 1 ಕಿ.ಮೀ. ಸಾಗಿದರೆ ರಸ್ತೆ ಕವಲೊಡೆಯುತ್ತದೆ. ಒಂದು ರಸ್ತೆ ನೇರ ಮಥುರಾಗೆ ಸಾಗಿದರೆ, ಮತ್ತೊಂದು ಬಲಕ್ಕೆ ಹೊರಳುತ್ತದೆ. ನೀವು ಬಲ ರಸ್ತೆಯಲ್ಲಿ ಸಾಗಿ ಅಲ್ಲಿ ರಸ್ತೆ ಎಡಭಾಗದಲ್ಲಿ ಒಂದು ವಾಟರ್ ಪಂಪ್ ಮತ್ತು ಬಲ ಭಾಗದಲ್ಲಿ ದೀಪದ ಕಂಬವಿದೆ. ಹಾಗೆಯೇ ಅರ್ಧ ಕಿ.ಮೀ ಸಾಗಿದರೆ ರಸ್ತೆ ಎಡಕ್ಕೆ ಹೊರಳುತ್ತದೆ. ಅಲ್ಲಿಂದ ಮುಂದೆ ರೈಲ್ವೆ ಹಳಿಗಳನ್ನು ದಾಟಿ 2 ಕಿ.ಮೀ ಸಾಗಿದರೆ ಮಥುರಾ-ವೃಂದಾವನ ರಸ್ತೆ ಸಿಗುತ್ತದೆ. ಈ ರಸ್ತೆ ದಾಟಿ 1 ಕಿ.ಮೀ. ಸಾಗಿದರೆ ನಿಮ್ಮ ಪರಿಕ್ರಮ ಪೂರ್ಣವಾದಂತೆ.
ಮುಖ್ಯ ದೇವಾಲಯಗಳು
ವೃಂದಾವನದಲ್ಲಿ ಏಳು ಪ್ರಮುಖ ದೇವಾಲಯಗಳಿವೆ. ಇವೆಲ್ಲವೂ ಅತ್ಯಂತ ಪುರಾತನ ಮತ್ತು ಪ್ರಸಿದ್ಧಿ ದೇವಾಲಯಗಳು. ಚೈತನ್ಯ ಮಹಾಪ್ರಭುಗಳ ಅನುಯಾಯಿಗಳಾದ ಗೋಸ್ವಾಮಿಗಳು ಮತ್ತು ಅವರ ಸಮಕಾಲೀನ ಕೃಷ್ಣ ಭಕ್ತರು ಈ ದೇವಾಲಯಗಳನ್ನು ಸ್ಥಾಪಿಸಿದರು.
ವೃಂದಾವನದ ಒಂದು ತುದಿಗೆ ಗೋವಿಂದಜಿ ದೇವಾಲಯವಿದ್ದರೆ, ಮತ್ತೊಂದು ತುದಿಯಲ್ಲಿ ಮದನಮೋಹನ ದೇಗುಲವಿದೆ. ಇಲ್ಲಿರುವ ಇತರ ದೇವಾಲಯಗಳೆಂದರೆ, ಶ್ರೀ ಗೋಪಿನಾಥ, ಶ್ರೀ ರಾಧಾಮರಣ, ಶ್ರೀ ರಾಧಾ ದಾಮೋದರ, ಶ್ರೀ ಗೋಕುಲಾನಂದ ಮತ್ತು ಶ್ರೀ ಶ್ಯಾಮಸುಂದರ ದೇವಾಲಯಗಳು.
ವೃಂದಾವನದ ಪವಿತ್ರ ತಾಣಗಳು
ಕಾಲಿಯಾ ಹ್ರದಾ (ಕಾಲಿಯಾ ಘಟ್ಟ)
ಇಲ್ಲೊಂದು 5000 ವರ್ಷ ಹಳೆಯ ಕದಂಬ ವೃಕ್ಷವಿದೆ. ಕಾಳಿಂಗ ಸರ್ಪವನ್ನು ಮರ್ದಿಸಲು ಶ್ರೀಕೃಷ್ಣ ಯಮುನೆಗೆ ಧುಮುಕಿದ್ದು ಇದೇ ಮರದಿಂದ. ಇಲ್ಲಿ ಪವಿತ್ರ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳು ದೂರಾಗುವುದರ ಜತೆಗೆ ವ್ಯಾಪಾರದಲ್ಲಿ ಉತ್ತಮ ಏಳಿಗೆ ಸಾಧಿಸಬಹುದು ಎಂದು “ಭಕ್ತಿರತ್ನಾಕರ” ದಲ್ಲಿ ಹೇಳಲಾಗಿದೆ.
ಮದನ ಮೋಹನ ದೇವಾಲಯ
ವೃ೦ದಾವನದಲ್ಲಿ ಮೊದಲು ನಿರ್ಮಾಣಗೊಂಡ ದೇವಾಲಯಗಳಲ್ಲಿ ಇದೂ ಒಂದು. ಇದನ್ನು ನಿರ್ಮಿಸಿದವರು ಸನಾತನ ಗೋಸ್ವಾಮಿ. ಈ ದೇವಾಲಯದಲ್ಲಿ ಮದನ ಮೋಹನ, ರಾಧಾರಾಣಿ ಮತ್ತು ಲಲಿತಾ ವಿಗ್ರಹಗಳಿವೆ. ಯಮುನಾ ತೀರದಲ್ಲಿ 50 ಅಡಿ ಎತ್ತರದ ಬೆಟ್ಟದ ಮೇಲಿರುವ ದೇವಾಲಯವನ್ನು 1580ರಲ್ಲಿ ನಿರ್ಮಿಸಲಾಯಿತು.
ಸನಾತನ ಗೋಸ್ವಾಮಿ ಇಹಲೋಕ ತ್ಯಜಿಸಿದ ಬಳಿಕ ಕೃಷ್ಣದಾಸ ಇದರ ಪೂಜೆಯ ಉಸ್ತುವಾರಿ ವಹಿಸಿಕೊಂಡರು. ಇದೊಂದು ಐತಿಹಾಸಿಕ ದೇವಾಲಯ ಎಂದು ಪರಿಗಣಿಸಲಾಗಿದ್ದು, ಭಾರತ ಸರಕಾರದ ಅಧೀನಕ್ಕೆ ಒಳಪಟ್ಟಿದೆ.
ಇಮ್ಲಿ ತಲ

ಶ್ರೀಕೃಷ್ಣನ ಕಾಲಕ್ಕೆ (5000 ವರ್ಷ ಹಿಂದೆ) ಸೇರಿದ ಹುಣಸೆ ಮರವೊಂದು ವೃಂದಾವನದಲ್ಲಿದೆ. ಆದೇ ಇಮ್ಲಿ ತಲ. ಅಂದರೆ ಹುಣಸೆ ಮರ. ಚೈತನ್ಯ ಮಹಾಪ್ರಭುಗಳು ವೃಂದಾವನದಲ್ಲಿದ್ದಾಗ ಈ ಮರದಡಿ ಕುಳಿತು ಶ್ರೀಕೃಷ್ಣ ಜಪ ಮಾಡುತ್ತಿದ್ದರು. ಆ ಕಾಲದಲ್ಲಿ ಇದೊಂದು ನಿರ್ಜನ ಅರಣ್ಯವಾಗಿತ್ತು. ಯಮುನಾ ನದಿ ಇಮ್ಲಿ ತಾಲಾದ ಪಕ್ಕದಲ್ಲೇ ಹರಿಯುತ್ತಿತ್ತು.
ಈಗದು ಇಲ್ಲಿಂದ ಅರ್ಧ ಕಿ.ಮೀ. ದೂರ ಸರಿದಿದೆ. ಇಲ್ಲಿ ಗೌರ ನಿತಾಯ್ ಮತ್ತು ರಾಧಾಕೃಷ್ಣ ವಿಗ್ರಹಗಳನ್ನೊಳಗೊಂಡ ಚಿಕ್ಕ ದೇವಾಲಯವಿದೆ. ಇಮ್ಲಿ ತಲ ಮದನ ಮೋಹನ ದೇವಾಲಯದಿಂದ 1 ಕಿ.ಮೀ. ದೂರದಲ್ಲಿದೆ.
ಚೀರ್ ಘಾಟ್
ರಾಕ್ಷಸ ಕೇಶಿಯನ್ನು ಸಂಹರಿಸಿದ ಬಳಿಕ ಶ್ರೀಕೃಷ್ಣ ಇಲ್ಲಿ ವಿಶ್ರಾಂತಿ ಪಡೆದಿದ್ದನಂತೆ. ಶ್ರೀ ಚೈತನ್ಯರ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವಿದು. ತುಂಟ ಕೃಷ್ಣ ಗೋಪಿಕಾ ಸ್ತ್ರೀಯರ ವಸ್ತ್ರಗಳನ್ನು ಅಪಹರಿಸಿದ್ದೂ ಇದೇ ಸ್ಥಳದಲ್ಲಿ ಎಂದೂ ಕೆಲವರು ಹೇಳುತ್ತಾರೆ.
ಸೇವಾ ಕುಂಜ
ಕೃಷ್ಣ ತನಗಾಗಿ ಓಡೋಡಿ ಬರುವ ರಾಧಾರಾಣಿಯ ಪಾದಗಳನ್ನು ಒತ್ತುತ್ತಿದ್ದುದು ಮತ್ತು ಆಕೆಯ ಜಡೆಯನ್ನು ಹೂಗಳಿಂದ ಅಲಂಕರಿಸುತ್ತಿದ್ದುದು ಇದೇ ಸ್ಥಳದಲ್ಲಿ ಎಂಬ ನಂಬಿಕೆ ಇದೆ. ಈ ಸ್ಥಳಕ್ಕೆ ನಿಕುಂಜವನ ಎಂಬ ಹೆಸರೂ ಇದೆ. ರಾಧಾ- ಕೃಷ್ಣರು ಪ್ರತಿ ರಾತ್ರಿ ಸಂಧಿಸುತ್ತಿದ್ದುದು ಇದೇ ಹೂದೋಟದಲ್ಲಿ. ಅಲ್ಲದೇ ಕಾರ್ತಿಕ ಮಾಸ ಹುಣ್ಣಿಮೆ ದಿನ ಶ್ರೀಕೃಷ್ಣನು ರಾಧೆ ಮತ್ತು ಇತರ ಗೋಪಿಕೆಯರ ಜತೆ ರಾಸಲೀಲೆ ನೃತ್ಯ ಮಾಡುತ್ತಿದ್ದುದೂ ಇಲ್ಲೇ.
ರಾಧಾ-ಕೃಷ್ಣರು ಪ್ರತಿ ರಾತ್ರಿ ಸಂಧಿಸುತ್ತಿದ್ದ ಸ್ಥಳವಾದ್ದರಿಂದ ರಾತ್ರಿ ವೇಳೆ ಇಲ್ಲಿ ಪ್ರವೇಶ ನಿಷಿದ್ಧ. ಯಾರಾದರೂ ರಾತ್ರಿ ಹೊತ್ತು ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸಿದರೆ ಅವರು ಹುಚ್ಚರಾಗುತ್ತಾರೆ ಎಂಬ ನಂಬಿಕೆ ಇದೆ. ರಾಧಾಕೃಷ್ಣರ ವಿಗ್ರಹಗಳುಳ್ಳ ‘ರಂಗ ಮಹಲ್’ ಎಂಬ ಚಿಕ್ಕ ದೇವಾಲಯವೊ ಇಲ್ಲಿದೆ. ಈ ಸ್ಥಳ ರಾಧಾ ದಾಮೋದರದಿಂದ ಸುಮಾರು 200 ಮೀ. ದೂರದಲ್ಲಿದೆ.
ರಾಧಾ ದಾಮೋದರ ದೇವಾಲಯ

ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿಗಳ ಸೋದರಿಯ ಮಗನಾದ ಜೀವಾ ಗೋಸ್ವಾಮಿ ದೇವಾಲಯದ ಸ್ಥಾಪಕರು. ಇಲ್ಲಿ ರಾಧಾಕೃಷ್ಣಚಂದ್ರರ ಸುಂದರ ವಿಗ್ರಹಗಳಿವೆ. ಇದಲ್ಲದೇ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರ ರಾಧಾ ವೃಂದಾವನ ಚ೦ದ್ರ, ಜಯದೇವ ಗೋಸ್ವಾಮಿಯವರ ರಾಧಾಮಾಧವ ಮತ್ತು ಭೂಗರ್ಭ ಗೋಸ್ವಾಮಿಯವರ ರಾಧಾ ಚಲಚಿಕಾನ ವಿಗ್ರಹಗಳೂ ಇಲ್ಲಿದೆ.
ಇಲ್ಲಿನ ಮೂಲ ವಿಗ್ರಹಗಳನ್ನೆಲ್ಲಾ ಜೈಪುರಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿರುವುದು “ಪ್ರತಿಭು ಮೂರ್ತಿ” ಎಂದು ಕರೆಯಲಾಗುವ ಪ್ರತಿರೂಪಗಳು.
ಇಲ್ಲಿ ಶ್ರೀಕೃಷ್ಣನ ಹೆಜ್ಜೆಗುರುತಿನ “ಗಿರಿಚರಣ ಶಿಲೆ” ಇದೆ. ಇದನ್ನು ಗೋವರ್ಧನ ಶಿಲೆ ಎ೦ದೂ ಕರೆಯುತ್ತಾರೆ. ಇದನ್ನು ಸನಾತನ ಗೋಸ್ವಾಮಿಗಳು ನಿತ್ಯ ಪೂಜಿಸುತ್ತಿದ್ದರು ಎನ್ನಲಾಗಿದೆ.
ಈ ದೇವಾಲಯವೂ ಸೇವಾಕುಂಜದಲ್ಲಿದೆ. ಜೀವಾ ಗೋಸ್ವಾಮಿ, ರೂಪಾ ಗೋಸ್ವಾಮಿ, ಭೂಗರ್ಭ ಗೋಸ್ವಾಮಿಗಳ ಸಮಾಧಿಗಳು, ಭಕ್ತಿಸಿದ್ಧಾಂತ ಗೋಸ್ವಾಮಿಗಳ ಪುಷ್ಪ ಸಮಾಧಿ, ಶ್ರೀಲ ಪ್ರಭುಪಾದರು ಮತ್ತು ರೂಪ ಗೋಸ್ವಾಮಿಗಳ ಭಜನ ಕುಟೀರಗಳು ಇಲ್ಲಿವೆ. ಚೈತನ್ಯರ ಅನುಯಾಯಿಗಳಾದ ಗೋಸ್ವಾಮಿಗಳೆಲ್ಲಾ ಇಲ್ಲಿ ಸೇರಿ ಕೃಷ್ಣಪ್ರಜ್ಞೆ ಪ್ರಸಾರದ ಬಗ್ಗೆ ಚರ್ಚಿಸುತ್ತಿದ್ದರಂತೆ. ಅಂಬರ್ (ಜೈಪುರ) ನ ಮಹಾರಾಜ ಮಾನ್ ಸಿಂಗ್ ಈ ದೇವಾಲಯ ನಿರ್ಮಾಣಕ್ಕೆ ಹಣ ನೀಡಿದವನು.
ಶ್ರೀಲ ಪ್ರಭುಪದಾರ ಭಜನ ಕುಟೀರ
ಶ್ರೀಲ ಪ್ರಭುಪಾದರು 1959ರಿಂದ 1965ರ ವರೆಗೆ 6 ವರ್ಷ ಕಾಲ ರಾಧಾ ದಾಮೋದರ ದೇವಾಲಯದಲ್ಲಿ ನೆಲೆಸಿದ್ದರು. ಶ್ರೀಮದ್ಭಾಗವತದ ಮೊದಲ ಮೂರು ಸಂಪುಟಗಳ ಮೇಲೆ ಉಪೋದ್ಧಾತ ಬರೆದಿದ್ದು ಇಲ್ಲೇ. ರಾಧಾ ದಾಮೋದರ ದೇವಾಲಯ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಪ್ರಭುಪಾದರ ಭಜನ ಕುಟೀರ ಮತ್ತು ಅಡುಗೆ ಮನೆ ಇದೆ.
ರಾಧಾ ಶ್ಯಾಮಸುಂದರ ದೇವಾಲಯ
ವೃಂದಾವನದ 7 ಮುಖ್ಯ ದೇವಾಲಯಗಳಲ್ಲಿ ಇದೂ ಒಂದು. ಇಲ್ಲಿ ಚೈತನ್ಯರ ಮಹಾನ್ ಭಕ್ತರಾದ ಶ್ಯಾಮಾನಂದ ಪಂಡಿತರು ಪೂಜಿಸುತ್ತಿದ್ದ ರಾಧಾಶ್ಯಾಮ ಸುಂದರ ವಿಗ್ರಹವಿದೆ. ಅಲ್ಲಿ ಶ್ಯಾಮಾನಂದರ ಸಮಾಧಿ ಮತ್ತು ಭಜನ ಕುಟೀರಗಳಿವೆ.
ರಾಧಾ ಗೋಪಿನಾಥ ದೇವಾಲಯ
ಇಲ್ಲಿ ಗೋಪಿನಾಥ, ರಾಧಾರಾಣಿ ಮತ್ತು ಆಕೆಯ ಸೋದರಿ ಆನಂಗ ಮಂಜರಿ ವಿಗ್ರಹಗಳಿವೆ. ಈ ದೇವಾಲಯ ನಿರ್ಮಿಸಿದವರು ಮಧು ಪ೦ಡಿತರು. ವಾಸ್ತವವಾಗಿ ಗೋಪಿನಾಥ ವಿಗ್ರಹವನ್ನು ವೃಂದಾವನದಲ್ಲಿ ಮೊದಲು ಸ್ಥಾಪಿಸಿದ್ದು ಕೃಷ್ಣನ ಮರಿಮಗ ವಜ್ರನಾಭ. ಆದರೆ 1670ರಲ್ಲಿ ಮುಸ್ಲಿಮರು ಇಲ್ಲಿಗೆ ದಾಳಿ ಮಾಡಿದಾಗ ಮೂಲ ವಿಗ್ರಹವನ್ನು ಜೈಪುರಕ್ಕೆ ಸಾಗಿಸಲಾಯಿತು. ಈ ದೇವಾಲಯ ರಾಧಾರಮಣ ದೇವಾಲಯ ಮತ್ತು ಗೋಪಿನಾಥ ಬಜಾರ್ ಮಧ್ಯದಲ್ಲಿದೆ.
ಮಧು ಪಂಡಿತ ಸಮಾಧಿ
ಮಧು ಪಂಡಿತರು ಗದಾಧರ ಪಂಡಿತರ ಅನುಯಾಯಿ, ಈ ಸಮಾಧಿ ಗೋಪಿನಾಥ ದೇವಾಲಯದ ಬಳಿ ಇದೆ.
ರಾಧಾ ಗೋಕುಲಾನಂದ ಮಂದಿರ

ಈ ದೇವಾಲಯದಲ್ಲಿ ಶ್ರೀ ಚೈತನ್ಯರ ಎರಡನೆಯ ಪೀಳಿಗೆಯಲ್ಲಿ ಪ್ರಮುಖ ಅನುಯಾಯಿಗಳಾದ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರ, ಶ್ರೀಲ ನರೋತ್ತಮ ದಾಸ ಠಾಕುರ, ಶ್ರೀಲ ಬಲದೇವ ವಿದ್ಯಾಭೂಷಣ ಮತ್ತು ಶ್ರೀಲ ಲೋಕನಾಥ ಗೋಸ್ವಾಮಿಯವರು ಸ್ಥಾಪಿಸಿದ ವಿಗ್ರಹಗಳಿವೆ. ಅವುಗಳು ಕ್ರಮವಾಗಿ ಶ್ರೀ ಶ್ರೀ ರಾಧಾ ಗೋಕುಲಾನಂದ, ರಾಧಾ ಮಾಧವ ಮತ್ತು ರಾಧಾ ವಿನೋದ.
ರಾಧಾ ರಮಣ ದೇವಾಲಯ
ಇದನ್ನು ಸ್ಥಾಪಿಸಿದವರು ಗೋಪಾಲಭಟ್ಟ ಗೋಸ್ವಾಮಿ. 1542ರ ವೈಶಾಖ ಪೂರ್ಣಿಮೆಯಂದು ಈ ವಿಗ್ರಹ ಪ್ರತಿಷ್ಠಾಪನೆ ಯಾಯಿತು. ಪ್ರತಿವರ್ಷ ಈ ದಿನದ೦ದು ರಾಧಾರಮಣ ವಿಗ್ರಹಕ್ಕೆ ಅಭಿಷೇಕ ನೆರವೇರಿಸಲಾಗುತ್ತದೆ. ವೃಂದಾವನದಲ್ಲಿರುವ ಕೆಲವೇ ಮೂಲ ವಿಗ್ರಹಗಳಲ್ಲಿ ಇದೂ ಒಂದು.
ಈಗ ಅಸ್ತಿತ್ವದಲ್ಲಿರುವ ದೇವಾಲಯವನ್ನು ಲಖನೌನ ಶಾಹ್ ಬಿಹಾರಿ ಲಾಲ್ ಜಿ ಎಂಬುವರು 1826ರಲ್ಲಿ 80 ಸಾವಿರ ರೂ. ಖರ್ಚಿನಲ್ಲಿ ನಿರ್ಮಿಸಿದರು. ಈ ದೇವಾಲಯದ ಇನ್ನೊಂದು ವಿಶೇಷವೆಂದರೆ ಇಲ್ಲಿ ಚೈತನ್ಯ ಮಹಾಪ್ರಭುಗಳು ಧರಿಸುತ್ತಿದ್ದ ಕೌಪೀನ ಮತ್ತು ಅವರು ಕುಳಿತುಕೊಳ್ಳುತ್ತಿದ್ದ ಕಪ್ಪು ಮರದ ಪೀಠಗಳಿವೆ. ಇವುಗಳನ್ನು ಜಗನ್ನಾಥ ಪುರಿಯಿಂದ ತಂದು ಇಲ್ಲಿರಿಸಿದವರು ಗೋಪಾಲ ಭಟ್ಟ ಗೋಸ್ವಾಮಿ. ಗೋಪಾಲ ಭಟ್ಟ ಗೋಸ್ವಾಮಿಯವರ ಸಮಾಧಿಯೂ ಈ ದೇವಾಲಯದ ಬಳಿಯೇ ಇದೆ.
ರಂಗನಾಥ ದೇವಾಲಯ
ಇದು ಶ್ರೀರ೦ಗ೦ನಲ್ಲಿರುವ ರ೦ಗನಾಥ ದೇವಾಲಯದಷ್ಟೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಶ್ರೀ ಲಕ್ಷ್ಮಿಗೂ ಪೂಜೆ ಸಲ್ಲುತ್ತದೆ. ಈ ದೇವಾಲಯ ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿದೆ. 1845-51ರ ಅವಧಿಯಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ವೃಂದಾವನದಲ್ಲೇ ಅತಿದೊಡ್ಡ ದೇವಾಲಯವಾಗಿದೆ. ರಾಮಾನುಜಾಚಾರ್ಯರು ಹಾಕಿಕೊಟ್ಟ ಸಂಪ್ರದಾಯದಂತೆ ಇಲ್ಲಿ ಪೂಜೆ ನಡೆಯುತ್ತದೆ.






Leave a Reply