ಜೀವನದ ಸಾರ್ಥಕತೆ

ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಆತನಿಗೊಬ್ಬ ಸೇವಕ. ಪ್ರತಿನಿತ್ಯ ದೂರದ ತೊರೆಯಿಂದ ಬಿಂದಿಗೆಗಳಲ್ಲಿ ನೀರು ತುಂಬಿ ತರುವುದು ಅವನ ಕೆಲಸ. ಅವನ ಬಳಿ ಮಾರುದ್ದದ ಒಂದು ದೊಣ್ಣೆ ಇತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಿಂದಿಗೆ ಕಟ್ಟಿಕೊಂಡು ನೀರು ತರುತ್ತಿದ್ದ. ಆ ಬಿಂದಿಗೆಗಳ ಪೈಕಿ ಒಂದು ಹಳತಾಗಿತ್ತು.

ಅಲ್ಲಲ್ಲಿ ತೂತುಗಳಾಗಿದ್ದವು. ಹೀಗಾಗಿ ತೊರೆಯಿಂದ ನೀರು ತುಂಬಿಕೊಂಡು ಮನೆ ತಲುಪುವಷ್ಟರಲ್ಲಿ ಆ ಬಿಂದಿಗೆಯ ಅರ್ಧಕ್ಕರ್ಧ ನೀರು ಖಾಲಿಯಾಗಿರುತ್ತಿತ್ತು. ತನ್ನ ಈ ನ್ಯೂನತೆಗಾಗಿ ಆ ತೂತು ಬಿಂದಿಗೆ ಒಳಗೊಳಗೇ ಅವಮಾನಪಟ್ಟುಕೊಳ್ಳುತ್ತಿತ್ತು. ಆದರೆ ಇನ್ನೊಂದು ಬಿಂದಿಗೆ ಹೊಚ್ಚ ಹೊಸತಾಗಿದ್ದು, ನಿತ್ಯ ತನ ಒಡಲ ತುಂಬಾ ನೀರು ತುಂಬಿಕೊಂಡು ಮನೆ ತಲುಪುತ್ತಿತ್ತು. ಹೀಗಾಗಿ ತನ್ನ ತಾಕತ್ತಿನ ಬಗ್ಗೆ ಅದಕ್ಕೆ ಒಳಗೊಳಗೇ ಗರ್ವವೂ ಮೂಡಿತ್ತು.

ಹೀಗೇ ಎರಡು ವರ್ಷ ಕಳೆಯಿತು. ಹೊಸ ಬಿಂದಿಗೆ ಗರ್ವ ಪ್ರದರ್ಶಿಸುವುದೂ, ತೂತು ಬಿಂದಿಗೆ ನಿತ್ಯ ಅವಮಾನದಿಂದ ಕೊರವುದೂ ಸಾಗಿತ್ತು. ಆದರೆ ಆ ಸೇವಕ ಮಾತ್ರ ಇದಾವುದರ ಪರಿವೇ ಇಲ್ಲದವನಂತೆ ತನ್ನ ಪಾಡಿಗೆ ತಾನು ಬಡಿಗೆಗೆ ಬಿಂದಿಗೆಳನ್ನು ಕಟ್ಟಿಕೊಂಡು ಮಾಲೀಕನ ಮನೆಗೆ ನೀರು ತುಂಬಿಸುತ್ತಿದ್ದ. ಹೀಗೆ ಒಂದು ದಿನ ಆತ ನೀರು ತರಲು ಹೋಗುವಾಗ, ತೂತು ಬಿಂದಿಗೆಗೆ ದುಃಖ ತಡೆಯಲಾಗಲಿಲ್ಲ.

ಅದು ಸೇವಕನ ಬಳಿ ತನ್ನ ಅಳಲು ತೋಡಿಕೊಂಡಿತು. ನನಗೆ ನನ್ನ ಬಗ್ಗೆಯೇ ಅಸಹ್ಯ ಮೂಡಿದೆ. ಅವಮಾನವೆನಿಸುತ್ತಿದೆ. ನೀನು ನನ್ನನ್ನು ಕ್ಷಮಿಸುವೆಯಾ? ಎಂದು ಅದು ಸೇವಕನನ್ನು ಪ್ರಶ್ನಿಸಿತು. ಅದಕ್ಕೆ ಆತ, “ಏಕೆ? ನಿನಗೇನಾಗಿದೆ? ನೀನೇಕೆ ಅವಮಾನಪಟ್ಟುಕೊಳ್ಳಬೇಕು?” ಎಂದು ದುಃಖಿತ ಬಿಂದಿಗೆಯನ್ನು ಮರುಪ್ರಶ್ನಿಸಿದ. “ನೋಡು. ಕಳೆದ ಎರಡು ವರ್ಷಗಳಿಂದ ಒಡಲು ತುಂಬ ನೀರು ಸಾಗಿಸಲು ನಾನು ಅಸಮರ್ಥನಾಗಿದ್ದೇನೆ. ನೀನು ಕಷ್ಟಪಟ್ಟು ಇಲ್ಲಿಂದ ನೀರು ತುಂಬಿಸಿಕೊಂಡು ಹೋಗುತ್ತೀಯಾ.

ಆದರೆ ಮನೆ ತಲುಪುವಷ್ಟರಲ್ಲಿ ನನ್ನ ಒಡಲಲ್ಲಿರುವ ಅರ್ಧ ನೀರು ಸೋರಿ ಹೋಗಿರುತ್ತದೆ. ನನ್ನ ತಪ್ಪಿನಿಂದಾಗಿ ನಿನ್ನ ಶ್ರಮ ವ್ಯರ್ಥವಾಗುತ್ತಿದೆ…” ಇದನ್ನು ಕೇಳಿ ಸೇವಕನಿಗೆ ಬೇಸರವಾಯಿತು. ಅಷ್ಟೇ ಅಲ್ಲ, ಆ ಬಿಂದಿಗೆ ಬಗ್ಗೆ ಅನುಕಂಪ ಮೂಡಿತು. “ಸುಮ್ಮನೆ ನೊಂದುಕೊಳ್ಳಬೇಡ. ನಾವು ಮಾಲೀಕನ ಮನೆಗೆ ಹಿಂತಿರುಗುವವರೆಗೆ ಸಹನೆಯಿಂದಿರು. ನಾವು ಮಾಲೀಕನ ಮನೆಗೆ ಹಿಂತಿರುಗುವಾಗ ರಸ್ತೆ ಪಕ್ಕದಲ್ಲಿ ಬಣ್ಣಬಣ್ಣದ ಹೂವುಗಳು ಅರಳಿರುವುದನ್ನು ನೋಡು” ಎಂದು ಆತ ಆ ಬಿಂದಿಗೆಗೆ ಸಮಾಧಾನ ಹೇಳಿದ.

ನಂತರ ಎರಡೂ ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಮನೆಯತ್ತ ಹೊರಟ. ದಾರಿಯುದ್ದಕ್ಕೂ, ತಾನು ಸಾಗುವ ಮಗ್ಗುಲಲ್ಲಿ ವಿವಿಧ ರೀತಿಯ ಬಣ್ಣಬಣ್ಣದ ಹೂವುಗಳು ಅರಳಿವುದನ್ನು ಆ ತೂತು ಬಿಂದಿಗೆ ನೋಡಿತು. ಸೂರ್ಯ ಪ್ರಭೆಯಲ್ಲಿ ಆ ಹೂವುಗಳು ನಳನಳಿಸುತ್ತಿರುವುದನ್ನು ಕಂಡು ಅದಕ್ಕೆ ಖುಷಿಯಾಯಿತು.

ಆದರೂ ತನ್ನಿಂದ ಒಡಲು ತುಂಬಾ ನೀರು ತರುವುದು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಬೇಸರ ಅದನ್ನು ಕಾಡುತ್ತಲೇ ಇತ್ತು. ಅಷ್ಟರಲ್ಲಿ ಮಾಲೀಕನ ಮನೆ ಬಂತು. ಸೇವಕ ಎರಡೂ ಬಿಂದಿಗೆಗಳನ್ನು ಖಾಲಿ ಮಾಡಿದ. ತೂತು ಬಿಂದಿಗೆ ಮತ್ತೆ ಸೇವಕನ  ಬಳಿ ಕ್ಷಮೆ ಯಾಚಿಸಿತು. ತನ್ನ ನ್ಯೂನತೆಗಾಗಿ ಮರುಗಿತು.

ಸೇವಕ ಸಾವಧಾನವಾಗಿ ಸಾಂತ್ವನದ ದನಿಯಲ್ಲಿ ಮಾತನಾಡಲಾರಂಭಿಸಿದ. “ತೊರೆಯಿಂದ ನೀರು ತುಂಬಿಕೊಂಡು ದಾರಿಯಲ್ಲಿ ಬರುವಾಗಿ ನಿನ್ನ ಮಗ್ಗುಲಲ್ಲಿ ಮಾತ್ರ ಹೂವುಗಳು ಅರಳಿರುವುದನ್ನು ನೀನು ಗಮನಿಸಿದೆಯಾ? ರಸ್ತೆಯ ಇನ್ನೊಂದು ಮಗ್ಗುಲ್ಲಲ್ಲಿ ಹೂವುಗಳು ಏಕೆ ಅರಳುತ್ತಿಲ್ಲ ಎಂಬುದನ್ನು ಯೋಚಿಸಿದೆಯಾ? ನೋಡು, ನನಗೆ ನಿನ್ನ ನ್ಯೂನತೆ ಬಗ್ಗೆ ಮೊದಲೇ ಗೊತ್ತಿತ್ತು. ಆದ್ದರಿಂದ ನಿತ್ಯವೂ ನೀನು ರಸ್ತೆಯ ಒಂದೇ ಬದಿಯಲ್ಲಿ ಚೆಲ್ಲುವಂತೆ ನೋಡಿಕೊಂಡೆ.

ನಿನ್ನಿಂದ ಸೋರುವ ನೀರು ರಸ್ತೆಯ ಒಂದೇ ಬದಿಯಲ್ಲಿ ಚೆಲ್ಲುವಂತೆ ಮಾಡಿದೆ. ಅಷ್ಟೇ ಅಲ್ಲ. ರಸ್ತೆಯ ಆ ಮಗ್ಗುಲಲ್ಲಿ ಬಣ್ಣ ಬಣ್ಣದ ಹೂಗಿಡಗಳನ್ನು ಬೆಳೆಸಿದೆ. ನೀನು ನಿನಗೇ ಅರಿವಿಲ್ಲದಂತೆ ನಿತ್ಯ ಆ ಗಿಡಗಳಿಗೆ ನೀರೆರೆದೆ. ಈಗ ಆ ಗಿಡಗಳು ಬೆಳೆದು ನಿಂತಿವೆ. ಮೈತುಂಬಾ ಹೂತಳೆದು ಕಂಗೊಳಿಸುತ್ತಿವೆ. ನಾನು ಆ ಹೂವನ್ನು ಕಿತ್ತು, ಮಾಲೀಕನ ಮನೆ ಅಲಂಕರಿಸುತ್ತಿದ್ದೇನೆ. ಆತನ ಮನಃಸಂತೋಷಪಡಿಸುತ್ತಿದ್ದೇನೆ. ನಿನ್ನ ನೆರವಿಲ್ಲದೆ ಇಷ್ಟೊಂದು ಹೂಗಳು ಅರಳುವುದು ಸಾಧ್ಯವಿತ್ತೆ? ಸೇವಕನ ಸಾಂತ್ವನ ಕೇಳಿ ದುಃಖಿತ ಬಿಂದಿಗೆ ಮುಖ ಅರಳಿತು. ಅದರ ಚಿಂತೆ ದೂರಾಯಿತು.

ಈ ಪ್ರಪಂಚದಲ್ಲಿ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ನ್ಯೂನತೆಗಳಿರುತ್ತವೆ. ನಾವೆಲ್ಲರೂ ಒಂದು ರೀತಿಯಲ್ಲಿ ತೂತು ಬಿಂದಿಗೆಗಳೇ! ಆದರೆ ಭಗವಂತ ನಮ್ಮ ನ್ಯೂನತೆಗಳನ್ನೇ ಸಕಾರಾತ್ಮವಾಗಿ ಬಳಸಿಕೊಳ್ಳಬಲ್ಲ. ನಮ್ಮ ದೌರ್ಬಲ್ಯವನ್ನೇ ನಮ್ಮ ಬಲವನ್ನಾಗಿ ಪರಿವರ್ತಿಸಬಲ್ಲ. ಬಿಂದಿಗೆಯ ಬಿರುಕಿನಿಂದ ಬಣ್ಣ ಬಣ್ಣದ ಹೂವುಗಳನ್ನು ಅರಳಿಸಿದಂತೆ!

ಆದ್ದರಿಂದ ನಾವು ನಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೃಷ್ಣ ಸೇವೆಯ ಮಾರ್ಗ ಅರಸಬೇಕು. ನಮ್ಮಲ್ಲಿರುವ ನ್ಯೂನತೆಗಳನ್ನು ಆ ಭಗವಂತನಿಗೆ ಬಿಡಿ. ಅದನ್ನು ಆತ ಮರೆಮಾಚುತ್ತಾನೆ. ನಮ್ಮ ಮುಖದಲ್ಲೂ ಹೂವರಳಿಸುತ್ತಾನೆ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi