ವರಾಹಾವತಾರ

ಹಿರಣ್ಯಾಕ್ಷ ಸಂಹಾರ

ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್‌‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ.

ಪ್ರಸ್ತುತ ಕಥೆಯನ್ನು ಭಾಗವತದ ಮೂರನೇ ಸ್ಕಂಧವನ್ನು ಆಧರಿಸಿ ಶ್ರೀ ಬೆನಕ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ.

ಭಗವಾನ್ ಶ್ರೀಕೃಷ್ಣನು ಭಕ್ತಜನ ರಕ್ಷಣೆಗಾಗಿ ಮೊರೆಯಿಟೊಡೆ ಅವತರಿಸಿ ಬರುತ್ತಾನೆ. ದುಷ್ಟರನ್ನು ದಮನ ಮಾಡಿ ಪ್ರಪ೦ಚವನ್ನು ಕಾಪಾಡುತ್ತಾನೆ. ಭಗವಂತನ ಅಸದೃಶ ಲೀಲೆಯನ್ನು ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡಲೋ ಎಂಬಂತೆ, ಆಗಾಗ

ದುಷ್ಟಶಕ್ತಿಗಳ ಜನನವಾಗುತ್ತಲೇ ಇರುತ್ತದೆ. ಅಂಥ ಸ೦ದರ್ಭಗಳಲ್ಲೆಲ್ಲ ಭಗವಂತನು ಯಾವ ರೂಪದಲ್ಲಿ ಬೇಕಾದರೂ ಅವತರಿಸಬಲ್ಲ. ವಿಶ್ವನಿಯಾಮಕನೇ ಆತನಾಗಿರುವಾಗ ಯಾವೊಂದು ರೂಪವೂ ಆ ಬ್ರಹ್ಮಾಂಡದೊಡೆಯನಿಗೆ ಅಸಾಧ್ಯವಲ್ಲ. ಮತ್ಸ್ಯಾವತಾರ ತಾಳಿ ವೇದಗಳನ್ನು ಪ್ರಳಯದಿಂದ ರಕ್ಷಿಸಲಿಲ್ಲವೆ? ಹಾಗೆ.

ಈಗ ಮತ್ತೆ ಭೂದೇವಿಗೆ ಸಂಕಟ ಬಂದೊದಗಿದೆ. ವಿಷ್ಣುವಿನಲ್ಲಿ ಮೊರೆ ಇಡುತ್ತಿದ್ದಾಳೆ, ‘ದೇವ ದೇವೋತ್ತಮ, ಈ ರಕ್ಕಸನ ಉಪಟಳದಿಂದ ನನ್ನನ್ನು ಪಾರುಮಾಡು.” ಯಾರಾತ? ಭೂಮಿಯನ್ನೆ ರಸಾತಲದಲ್ಲಿ ಅಡಗಿಸಿ ಇಟ್ಟಾತ, ದೇವತೆಗಳಲ್ಲೂ ಭೀತಿ ಹುಟ್ಟಿಸಿದಾತ. ಆತನೇ ದಿತಿಯ ಮಗ ಹಿರಣ್ಯಾಕ್ಷ!

ಮಹಾಸಾಧ್ವಿಯಾದ ದಿತಿಯ ಗರ್ಭದಲ್ಲಿ ಹಿರಣ್ಯಾಕ್ಷ,ಹಿರಣ್ಯಕಶಿಪುವಿನಂತಹ ರಕ್ಕಸರು ಜನಿಸುವುದು ಹೇಗೆ ಸಾಧ್ಯ? ಕಶ್ಯಪ ಪ್ರಜಾಪತಿಯಂತಹ ಮಹಾ ತಪಸ್ವಿಯಿಂದ ಗರ್ಭ ಪಡೆದ ದಿತಿಗೆ ಅಸುರರು ಜನಿಸುವುದೆ?

ಇದನ್ನೇ ಅಲ್ಲವೆ ಭಗವಂತನ ಲೀಲೆ ಎನ್ನುವುದು. ಶಾಸ್ತ್ರೋಕ್ತ  ನೀತಿ ಅನುಸರಿಸಿ, ವಂಶೋದ್ಧಾರಕ್ಕಾಗಿ ಗರ್ಭದಾನ ಸಂಸ್ಕಾರ ಮಾಡಿ ಸ್ತ್ರೀ-ಪುರುಷರು ಒ೦ದಾದರೆ ಸಾತ್ವಿಕ ಗುಣಗಳುಳ್ಳ ಉತ್ತಮ ಸಂತಾನ ಪ್ರಾಪ್ತಿಯಾಗುತ್ತದೆ.

ಅವೇಳೆಯಲ್ಲಿ ಕೇವಲ ಕಾಮತೃಷೆ ತೀರಿಸಲೋಸುಗ ಹೊಂದುವ ಲೈಂಗಿಕ ಸಂಪರ್ಕ ವರ್ಣಸಂಕರ ಸಂತಾನ ಪ್ರಾಪ್ತಿಗೆ ಕಾರಣವಾಗುತ್ತದೆ. ದಿತಿ, ಎಂತಹ ಮಹಾಸಾಧ್ವಿಯಾದರೇನು, ಯಾವುದೋ ಅವೇಳೆಯಲ್ಲಿ ಕಾಮಮೋಹಕ್ಕೊಳಗಾಗಿ ಪತಿಯ ಸಂಗ ಬಯಸಿ ಕೂಡಿದಳಲ್ಲ! ಅದೇ ರಕ್ಕಸ ಸಂತಾನಕ್ಕೆ ಕಾರಣವಾಯಿತು.

ಆದರೆ ದಿತಿಯಂಥ ಪುಣ್ಯವತಿಯ ಗರ್ಭವಾಸದ ಸೌಭಾಗ್ಯ ಪಡೆದ ಆ ರಕ್ಕಸರಾದರೂ ಎಂತಹ ಪುಣ್ಯ ಮಾಡಿರಬಹುದು! ಇದಕ್ಕೆ ಕಾರಣ ಅವರ ವಿಷ್ಣುಸಂಸರ್ಗ. ಅದೊಂದು ರೋಚಕ ಕಥೆ. ವೈಕುಂಠದಲ್ಲಿ ಶ್ರೀಲಕ್ಷ್ಮಿಯಿಂದ ಪಾದಸೇವಿತನಾದ ಶ್ರೀವಿಷ್ಣುವಿನ ದ್ವಾರಪಾಲಕರು ಜಯ-ವಿಜಯರು. ಸದಾ ವಿಷ್ಣುವಿನ ಸೇವೆಯಲ್ಲಿ ನಿರತರಾಗಿರುವ ಅವರು ಐಹಿಕ ಕಲ್ಮಷ ರಹಿತರು, ಅಸೂಯೆ ಇತ್ಯಾದಿಗಳಿ೦ದ ಮುಕ್ತರು.

ಒಮ್ಮೆ ಕುಮಾರರು ಭಗವಾನ್ ವಿಷ್ಣುವಿನ ಚರಣ ಕಮಲ ಪೂಜಾಕಾಂಕ್ಷೆಯಿಂದ ವೈಕುಂಠಕ್ಕೆ ಬಂದಿಳಿದಾಗ, ದಾರಿ ಬಿಡದೆ ಋಷಿವರೇಣ್ಯರನ್ನು ತಡೆದರು. ಕ್ರುದ್ಧರಾದ ಅವರು, ‘ಮನುಷ್ಯರಾಗಿ ನೂರು ಜನ್ಮವೆತ್ತಿ’ ಎಂದು ಶಾಪ ನೀಡುತ್ತಾರೆ. ಜನನ-ಮರಣ ಚಕ್ರದಿಂದ ಮುಕ್ತರಾಗಿ ಸದಾ ಶ್ರೀಹರಿಯ ಸೇವೆಯ ಭಾಗ್ಯ ಹೊಂದಿದ್ದ ಅವರು, ಯಾವ ಜೀವಾತ್ಮವೂ ಬಯಸದ ಆ ಸುಳಿಗೆ ಮತ್ತೆ ಮತ್ತೆ ಸಿಲುಕುವ ಶಾಪ ಹೊಂದಿದರಲ್ಲ ಇದಕ್ಕಿಂತ ದೌರ್ಭಾಗ್ಯ ಇನ್ನೇನಿದೆ? ಕೂಡಲೆ ವಿಷ್ಣುವಿನ ಬಳಿಗೋಡಿ, ವಿಷಯ ನಿವೇದಿಸಿ, ಈ ಶಾಪದಿಂದ ತಮ್ಮನ್ನು ಮುಕ್ತಿಗೊಳಿಸೆಂದು ಪರಿಪರಿಯಾಗಿ ರೋಧಿಸುತ್ತಾರೆ.

‘ಋಷಿಗಳ ಶಾಪ, ಅನುಭವಿಸಲೇಬೇಕು’ – ಮುಗುಳ್ನಗುತ್ತಾನೆ ಶ್ರೀವಿಷ್ಣು. ಅವನಿಗೆ ತಿಳಿಯದ್ದೇನಿದೆ? ಅವನಿಂದ ಪರಿಹಾರವಾಗದ್ದೇನಿದೆ? ಆದರೂ ಆ ಲೀಲಾವಿನೋದಿ ತನ್ನ ಭಕ್ತರಾದ ಕುಮಾರರ ಆತ್ಮೋನ್ನತಿಯನ್ನು ಸಮಸ್ತಲೋಕದೆದುರು ಎತ್ತಿಹಿಡಿಯುವುದಕ್ಕೋಸ್ಕರ, ಶಾಪ ಪರಿಹಾರಕ್ಕೆ ಅವರೇ ಮಾರ್ಗ ತೋರಿಸಬೇಕೆಂದು ಹೇಳುತ್ತಾನೆ. ಕೊನೆಗೆ ಕುಮಾರರು, ‘ಮಾನವರಾಗಿ ನೂರು ಜನ್ಮ ಇಲ್ಲವೆ, ದಾನವರಾಗಿ ಮೂರು ಜನ್ಮ’ ಎಂಬ ಆಯ್ಕೆ ಮುಂದಿಡುತ್ತಾರೆ.

ಶ್ರೀವಿಷ್ಣುವಿನ ಪದತಲವನ್ನು ದೀರ್ಘಕಾಲ ಅಗಲಿರುವ ದುಃಖ ಭರಿಸಲು ತಮ್ಮಿಂದ ಸಾಧ್ಯವಿಲ್ಲ. ಭಗವಂತನ ವೈರಿಯಾಗಿ ಜನಿಸಿದರೇನಂತೆ, ಆ ಮೂರೇ ಜನ್ಮತಮಗಿರಲಿ. ಅವನಿಂದ ಹತನಾಗುವ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ. ಭಗವದ್ಭಕ್ತರಾಗಿ ಜನಿಸಿದರೂ, ನೂರು ಜನ್ಮ ಎತ್ತುವ ಸಂಕಟ ಸಹಿಸಲಾರೆವು’ ಎಂದು ದಾನವ ಜನ್ಮವನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರೇ ದಿತಿಯ ಗರ್ಭದಲ್ಲಿ ಹಿರಣ್ಯಾಕ್ಷ- ಹಿರಣ್ಯಕಶಿಪುವಾಗಿ ಅಂಕುರಿಸುತ್ತಾರೆ.

ಅದು ಅಂತಿಂಥ ಗರ್ಭವಲ್ಲ, ರಾಕ್ಷಸ ಗರ್ಭ. ನೂರು ವರ್ಷಗಳ ಪರ್ಯಂತ ಆ ಗರ್ಭವನ್ನು ಹೊತ್ತಳು ದಿತಿ. ಒ೦ದು ಅಶುಭ ವೇಳೆಯಲ್ಲಿ ಹಿರಣ್ಯಾಕ್ಷ-ಹಿರಣ್ಯಕಶಿಪುಗಳ ಜನನವಾಯಿತು. ಭೂಮಿ ಅಲ್ಲೋಲಕಲ್ಲೋಲವಾಯಿತು. ಧೂಮಕೇತುಗಳು ಉದುರಿದವು. ಸಾಗರ ಅಬ್ಬರಿಸಿತು. ಮಹಾ ಉತ್ಪಾತವಾಯಿತು. ದೇವತೆಗಳೂ ಭೀತರಾದರು.

ನಿಜ. ಲೋಕದಲ್ಲಿ ಅಧರ್ಮ ಹೆಚ್ಚಾದಾಗ ಇಂಥ ಉತ್ಪಾತಗಳು ಸಂಭವಿಸುತ್ತವೆ. ಗರ್ಭದಾನವನ್ನು ಶಾಸ್ತ್ರೋಕ್ತ ರೀತಿಯಲ್ಲಿ ಪಡೆಯದ, ವರ್ಣಸಂಕರಗಳಿಂದ ಜನಿಸುವ ಸಂತಾನಗಳು ಸದಾ ಲೋಕಕಂಟಕವೇ ಸೈ. ಇಂಥ ಸಂತಾನ ಭೂಮಿಯ ಮೇಲೆ ಹೆಚ್ಚಿದಂತೆಲ್ಲ ಉತ್ಪಾತಗಳು ಹೆಚ್ಚುತ್ತಲೇ ಹೋಗುತ್ತವೆ. ಆಗೇನೋ, ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಇಬ್ಬರು ಜನಿಸಿದ ಸಂದರ್ಭದಲ್ಲಿ ಮಾತ್ರ ಅಂಥ ಉತ್ಪಾತ ಸಂಭವಿಸಿತ್ತು.

ಈ ಕಲಿಯುಗದಲ್ಲಿ ಎಲ್ಲಿ ನೋಡಿದರೂ ದಿನನಿತ್ಯ ಉತ್ಪಾತ. ಎಲ್ಲಿ ನೋಡಿದರೂ ಪ್ರವಾಹ, ಯುದ್ಧ ಸಾವು, ಆಕ್ರಮಣದಂತಹ ಸುದ್ದಿಗಳೇ. ಸ್ತ್ರೀ-ಗೋ-ಸಜ್ಜನರನ್ನು ಹಿಂಸಿಸುವವರು ಹೆಚ್ಚಾಗಿದ್ದಾರೆ. ಲೋಕ ಅಲ್ಲೋಲವಾಗುತ್ತಿದೆ. ಆದರೆ “ಕಲಿಯುಗದಲ್ಲಿ ಹರಿನಾಮವ ನೆನೆದರೆ…” ಎಂಬಂತೆ ಭಗವಂತ ಸದಾ ಸಜ್ಜನರ ರಕ್ಷಣೆಗೆ ಧಾವಿಸಿ ಬರುತ್ತಾನೆ. ದುರ್ಜನರನ್ನು ನಿಗ್ರಹಿಸಿ ಭೂಭಾರ ಇಳಿಸುತ್ತಾನೆ. ಲೋಕದಲ್ಲಿ ಸುಖ-ಶಾಂತಿ ಮತ್ತೆನೆಲೆಸುತ್ತದೆ.

ಹಿರಣ್ಯಾಕ್ಷ-ಹಿರಣ್ಯಕಶಿಪುಗಳು ಜನಿಸಿದ ಕೂಡಲೆ ಎತ್ತರೆತ್ತರಕೆ ಬೆಳೆಯತೊಡಗಿದರು. ಉಕ್ಕಿನಂತಹ ಮೈಕಟ್ಟು, ಆಕಾಶದೆತ್ತರದ ಶರೀರ, ಸೂರ್ಯನಿಗೇ ಸವಾಲು ಹಾಕುವಂತೆ ಹೊಳೆ ಹೊಳೆವ ಕಿರೀಟ, ವಜ್ರಾಭರಣ- ಕರ್ಣಕುಂಡಲಗಳು, ಕಣ್ಣು ಕೋರೈಸುವ ರೌದ್ರಕಾಂತಿಯನ್ನು ನೋಡಿ ಬ್ರಹ್ಮಾಂಡವೇ ತಲ್ಲಣಿಸಿತು. ಒಂದೊಂದು ಹೆಜ್ಜೆ ಇಟ್ಟಾಗಲೂ ಭೂಮಿ ಅದುರಿ, ಪಾತಾಳ ನಡುಗಿತು. ಇದರಿಂದ ಕೊಬ್ಬಿದ ಆತ ಅಹಂಕಾರದ ಪರ್ವತವೇ ಆಗಿಹೋಗಿದ್ದ.

ಹಿರಣ್ಯಾಕ್ಷನು ಹಿರಣ್ಯಕಶಿಪುವಿಗಿಂತ ಮೊದಲು ಜನಿಸಿದವ. ಆದರೆ ಆಮೇಲೆ ಜನಿಸಿದ ಹಿರಣ್ಯಕಶಿಪುವೇ ಅಣ್ಣನೆಂದು ಪರಿಗಣಿಸಲ್ಪಡುತ್ತಾನೆ. ಪಿಂಡಸಿದ್ಧಿಯೆಂಬ ವೈದಿಕ ಪ್ರಮಾಣದಂತೆ ಗರ್ಭ ಧರಿಸುವ ಸಂದರ್ಭದಲ್ಲಿ ಮೊದಲು ಸೃಷ್ಟಿಗೊಂಡ ಭ್ರೂಣ ಹಿಂಭಾಗದಲ್ಲಿ ಇರುತ್ತದೆ. ಆಮೇಲೆ ಉತ್ಪನ್ನವಾದ ಭ್ರೂಣ ಮುಂಭಾಗದಲ್ಲಿರುತ್ತದೆ. ಆದ್ದರಿಂದ ಮೊದಲು ಅವಳಿ ಜವಳಿಗಳಲ್ಲಿ ಮೊದಲು ಹುಟ್ಟಿದ ಶಿಶು ಕಿರಿಯನೆನಿಸುತ್ತಾನೆ.

ಹೀಗೆ ತಮ್ಮನಾದ ಹಿರಣ್ಯಾಕ್ಷ ಅಸಾಮಾನ್ಯ ಅಸುರೀ ಬಲದಿಂದ ದೇವತೆಗಳನ್ನೆಲ್ಲ ಕಂಗೆಡುವಂತೆ ಮಾಡಿದನು. ಸಮಸ್ತ ಲೋಕದಲ್ಲೂ ತನ್ನದೇ ಪರಮಾಧಿಕಾರ ಸ್ಥಾಪಿಸಿದನು. ಅಂತರಕ್ಷದಲ್ಲಿದ್ದ ದೇವತೆಗಳು ಮಾತ್ರವಲ್ಲ ಜಲಚರಗಳ ಮೇಲೂ ಅವನ ಅಧಿಪತ್ಯ ಮುಂದುವರಿಯಿತು. ಸಕಲ ಚರಾಚರ ವಸ್ತುಗಳೂ ತನ್ನ ಉಪಯೋಗಕ್ಕೇ ಸೃಷ್ಟಿಸಲ್ಪಟ್ಟಿಯೋ ಎಂಬಂತೆ ವರ್ತಿಸತೊಡಗಿದನು. ಅಪಾರ ಕೋಪಿಷ್ಟನಾಗಿದ್ದ ಅವನನ್ನು ನಿಗ್ರಹಿಸುವ ಜೀವಿಯೇ ಇರಲಿಲ್ಲ.

ಆತ ಸ್ವರ್ಗಲೋಕದ ಮೇಲೆ ದಾಳಿ ನಡೆಸಿದಾಗ, ಗರುಡನನ್ನು ಕಂಡ ಹಾವುಗಳು ಹುತ್ತದಲ್ಲಿ ಅಡಗಿಕೊಳ್ಳುವಂತೆ ದೇವತೆಗಳು ಅಡಗಿಕೊಂಡರು. ಇ೦ದ್ರಾದಿ ದೇವತೆಗಳೂ ಹಿಂದೆ ಅಧಿಕಾರದಿಂದ ಮದೋನ್ಮತ್ತರಾಗಿದ್ದರಿಂದ ಅವರಿಗೆ ಈ ಅವಸ್ಥೆ ಬಂದೊದಗಿತ್ತು. ತನ್ನ ಶಕ್ತಿಯ ಮುಂದೆ ಅವರೆಲ್ಲ ಅದೃಶ್ಯರಾಗಿದ್ದುದನ್ನು ಕಂಡು ದೈತ್ಯರಾಜನು ಜೋರಾಗಿ ಒಮ್ಮೆ ಘರ್ಜಿಸಿದನು. ಅಲ್ಲಿಂದ ಜಲಕ್ರೀಡೆಗೆಂದು ನೇರವಾಗಿ ಭೋರ್ಗರೆಯುತ್ತಿದ್ದ ಸಮುದ್ರಕ್ಕೆ ಜಿಗಿದನು.

ಅವನು ಜಿಗಿದ ಅಬ್ಬರಕ್ಕೆ ಇಡೀ ಸಾಗರವೇ ಅಲ್ಲೋಲಕಲ್ಲೋಲವಾಯಿತು. ಜಲಚರಗಳು ತಲ್ಲಣಿಸಿದವು. ಎತ್ತರೆತ್ತರಕ್ಕೆ ಏರಿಬರುವ ಅಲೆಗಳನ್ನು ತನ್ನ ಗದೆಯಿ೦ದ ಚಚ್ಚುತ್ತ ಜಲಕ್ರೀಡೆಯಾಡುತ್ತ ಹಿರಣ್ಯಾಕ್ಷ ಸಮುದ್ರರಾಜ ವರುಣನ ರಾಜಧಾನಿ ವಿಭಾವರಿಯನ್ನು ತಲುಪಿದನು.

ಮದೋನ್ಮತ್ತನಾಗಿದ್ದ ಹಿರಣ್ಯಾಕ್ಷನಿಗೆ ಯುದ್ಧದ ಗುಂಗು ತಲೆಗೇರಿತ್ತು. ಜೊತೆಗೆ ವಿಶ್ವವಿಜೇತನೆ೦ಬ ಅಹಂಕಾರದ ಮದ ಬೆರೆತಿತ್ತು. ಹೀಗಾಗಿ ಎದುರಾಳಿಗಳು ಕ್ಷುಲ್ಲಕವಾಗಿ ತೋರುತ್ತಿದ್ದರು. ಆತ ವರುಣನೊ೦ದಿಗೆ ವ್ಯಂಗ್ಯವಾಗಿಯೇ ಮಾತಿಗಿಳಿದನು. ಏಕಾಏಕಿ ವರುಣನ ಪಾದಗಳಿಗೆ ಅಡ್ಡಬಿದ್ದು “ನನಗೆ ಯುದ್ಧಭಿಕ್ಷೆ ನೀಡಿ ಪರಮ ಪ್ರಭುವೇ” ಎಂದು ಬೊಗಸೆಯೊಡ್ಡಿ ಬೇಡಿದನು! ಅಲ್ಲದೆ ಅವನನ್ನು ಹೀಗೆ ಹೊಗಳಿದನು – ‘ನೀನು ಈ ವಲಯದ ಪಾಲಕ. ಕೀರ್ತಿ ಪಡೆದ ಆಡಳಿತಗಾರ.

ಕೊಬ್ಬಿದವರ ಮದ ಇಳಿಸಿದವನು. ದೈತ್ಯ-ದಾನವರನ್ನು ಜಯಿಸಿದವನು. ರಾಜಸೂಯ ಯಾಗವನ್ನೂ ಮಾಡಿದವನು.’ – ಎನ್ನುತ್ತ ಯುದ್ಧಕ್ಕೆ ಎದುರಾಳಿಯಾಗಿ ನಿನ್ನನ್ನು ಆಯ್ದುಕೊಂಡಿದ್ದೇನೆ ಎಂಬರ್ಥದಲ್ಲಿ ಮಾತನಾಡಿದನು.

ಆದರೆ ಜಲಾಧಿಪ ವರುಣ ವಿವೇಚನೆಯುಳ್ಳವನು. ದೈತ್ಯನ ಅಣಕದಿ೦ದ ಉ೦ಟಾದ ಕೋಪಾಗ್ನಿಯನ್ನು ನಿಗ್ರಹಿಸಿಕೊಂಡು ತಾಳ್ಮೆಯಿಂದ ಉತ್ತರಿಸಿದನು – ‘ಓ ಪ್ರೀತಿಪಾತ್ರನೆ, ನಾವೀಗ ವೃದ್ಧರಾಗಿದ್ದೇವೆ. ಯುದ್ಧವೆಂದರೆ ನಮಗಾಗದು. ನಿನ್ನ ಯುದ್ಧಕೌಶಲಕ್ಕೆ ಪುರಾತನ ಪ್ರಭು ವಿಷ್ಣುವೇ ಸರಿಸಾಟಿ. ಆತನೊಬ್ಬನೆ ನಿನಗೆ ಯುದ್ಧದಲ್ಲಿ ತೃಪ್ತಿಪಡಿಸಬಲ್ಲನು’ ಎಂದು ಸಲಹೆ ನೀಡಿದನು. ತಾವು ಮಾಡುತ್ತಿರುವ ಅನಾಚಾರವೇ ಧರ್ಮವೆ೦ದು ಬಗೆದವರಿಗೆ ವಿಧಿಯು ಸರಿಯಾದ ದಾರಿಯನ್ನೆ ತೋರಿಸುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ವರುಣನ ಮಾತಿನ ಮರ್ಮವನ್ನರಿಯದ ಹಿರಣ್ಯಾಕ್ಷನು ಶ್ರೀಹರಿಯನ್ನು ಹುಡುಕುತ್ತ ರಣೋತ್ಸಾಹದಿ೦ದ ವೈಕುಂಠದೆಡೆಗೆ ಧಾವಿಸತೊಡಗಿದನು. ಅಷ್ಟರಲ್ಲಿ ನಾರದರು ಎದುರಾಗಿ ಅವನಿಗೆ ಶ್ರೀವಿಷ್ಣುವಿದ್ದ ಠಾವಿನ ಪಥವನ್ನು ತೋರಿದರು.

ಹಿರಣ್ಯಾಕ್ಷನ ವೇಗದ ರಭಸಕ್ಕೆ ಸಮುದ್ರದಲ್ಲಿ ಮಹಾ ಮಹಾ ತೆರೆಗಳೆದ್ದವು. ಜಲಚರಗಳು ಕಂಗಾಲಾದವು. ಜಲಲೋಕದಲ್ಲಿ ಹಾಹಾಕಾರವೆದ್ದಿತು. ವಿಷ್ಣುವನ್ನು ಹುಡುಕುತ್ತ ಆತ ರಸಾತಲ ತಲುಪಿದನು.

ಅಲ್ಲಿ ಭಗವಾನ್ ಶ್ರೀವಿಷ್ಣು ಆಗಲೇ ವರಾಹ ರೂಪದಲ್ಲಿ ಅವತರಿಸಿ, ಭೂದೇವಿಯನ್ನು ಪಾರುಮಾಡಲೆ೦ದು ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಎತ್ತಿ ಹಿಡಿದಿದ್ದನು. ಅದನ್ನು ಕಂಡು ಬೆರಗಾದ ಹಿರಣ್ಯಾಕ್ಷ ಉದ್ಧರಿಸಿದ – ‘ಓ, ಇದು ನೆಲ

ಮತ್ತು ಜಲ ಎರಡಕ್ಕೂ ಸಂಬಂಧಪಟ್ಟ ಒಂದು ಮೃಗ!”

ಅವನಿಗೆ ಭಗವಂತನ ಅವತಾರ ಅರ್ಥವಾಗಲೇ ಇಲ್ಲ. ದಾನವರೇ ಹಾಗೆ, ಶ್ರೀವಿಷ್ಣುವಿನ ಮತ್ಸ್ಯ,  ಕೂರ್ಮಾದಿ ಅವತಾರಗಳನ್ನೂ ಅವರು ದೊಡ್ಡ ಮೃಗವೆಂದೇ ಭಾವಿಸಿದವರು. ದೇವೋತ್ತಮ ಪರಮ ಪುರುಷ ಖಗ-ಮೃಗ- ಮನುಷ್ಯಾದಿ ಯಾವುದೇ ರೂಪ ಧರಿಸಬಲ್ಲ. ಬುದ್ಧಿಹೀನರು ಅದನ್ನು ಭೌತಿಕ ಶರೀರದ ಮೂಲಕ ಮಾತ್ರ ಗುರ್ತಿಸುತ್ತಾರೆ. ನಿಜವಾದ ಭಕ್ತರು ಮಾತ್ರ ಅವತಾರದ ಹಿ೦ದಿನ ಮರ್ಮ ಅರಿಯಬಲ್ಲರು.

ಹೀಗೆ ಶ್ರೀವಿಷ್ಣುವಿನ ವರಾಹಾವತಾರವನ್ನು ಅರ್ಥೈಸಿಕೊಳ್ಳಲಾಗದೆ ಅವನನ್ನು ವನದಲ್ಲಿ ಕಾಣಸಿಗುವ ಮೃಗ – ‘ವನಗೋಚರಃ ಮೃಗಃ’ ಎಂದು ಹೀಗಳೆದನು. ಅಲ್ಲದೆ ಅಜ್ಜ, ಸುರಾಧಮ ಎ೦ದೆಲ್ಲ ಬಗೆಬಗೆಯಾಗಿ ನಿ೦ದಿಸಿದನು. ಹೀಗೆ ಹೇಳುತ್ತ ಪರೋಕ್ಷವಾಗಿ ಆತ ಭಗವಂತನನ್ನು ಹೊಗಳುತ್ತಿದ್ದುದು ಆತನಿಗೇ ಗೊತ್ತಿರಲಿಲ್ಲ. ಭಗವಂತ ಸರ್ವಾಂತರಾಮಿಯಾದ್ದರಿಂದ ಯಾವುದೇ ವಿಧದಲ್ಲಿ ಆತನನ್ನು ಸಂಬೋಧಿಸಿದರೂ ಆತನ ನಾಮಸ್ಮರಣೆಯೇ ಆಗುತ್ತದೆ.

ಹಿರಣ್ಯಾಕ್ಷ ಮತ್ತೂ ಮುಂದುವರಿದು ಹೇಳಿದನು – ವರಾಹ ರೂಪ ಧರಿಸಿದ ದೇವೋತ್ತಮನೆ, ಈ ಭೂಮಿಯ ಅಧೋಭಾಗವು ಅಸುರರಾದ ನಮಗೆ ಸೇರತಕ್ಕದ್ದು. ಆದ್ದರಿಂದ ಅದನ್ನು ಸುಮ್ಮನೆ ನಮಗೆ ಬಿಟ್ಟುಕೊಡು.’

ಹೀಗೆ ಹೇಳುತ್ತ ಹೇಳುತ್ತ ಅಸುರನ ಕೋಪಾವೇಶ ಹೆಚ್ಚತೊಡಗಿತು. ಈ ಹಿಂದೆ ಶ್ರೀಹರಿಯು ಅನೇಕ ಅವತಾರಗಳನ್ನು ತಾಳಿ ಅಸುರರನ್ನು ಸಂಹರಿಸಿದ್ದು ನೆನಪಿಗೆ ಬ೦ದು ಕುದಿಯತೊಡಗಿದ.

ಒಮ್ಮಿಂದೊಮ್ಮೆಲೆ ಶ್ರೀಮನ್ನಾರಾಯಣನ ಮೇಲೆ ಆರೋಪ ಹೊರಿಸತೊಡಗಿದ – ‘ಎಲೈ ಧೂರ್ತ, ದಾನವರನ್ನು ನಿರ್ನಾಮ ಮಾಡಲೆಂದೇ ಶತ್ರುಗಳು (ದೇವತೆಗಳು) ನಿನ್ನನ್ನು ಪೋಷಿಸಿಕೊಂಡು ಬಂದಿದ್ದಾರೆ. ಮಾಯೆಯ ಬಲದಿಂದ ಅದೃಶ್ಯವಾಗಿದ್ದುಕೊಂಡು ಅನೇಕ ದಾನವರನ್ನು ಸಂಹರಿಸಿದವನು ನೀನು. ಇಂದು ನಾನು ನಿನ್ನನ್ನು ಸಂಹರಿಸಿ ನನ್ನ ಬಂಧು ಬಾಂಧವರನ್ನು ಸಂತುಷ್ಟಪಡಿಸುತ್ತೇನೆ.’

ಪಾಪ! ಭೌತಿಕ ದೇಹಬಲದಿಂದ ಭಗವಂತನನ್ನೂ ಸಂಹರಿಸಬಹುದೆಂದು ತಿಳಿದಿದ್ದ ಮೂರ್ಖ ಹಿರಣ್ಯಾಕ್ಷ.

ಈ ಹಿಂದೆ ಇಂತಹ ಅನೇಕ ಅಸುರರು ಕೂಡ ಮಾತು ಮತ್ತು ಅನೀತಿಯಿಂದ ದೇವರನ್ನು ನಿಂದಿಸಿ, ಭೌತಿಕವಾಗಿ ಅವನನ್ನು ಕೊಲ್ಲಬಹುದೆಂದು ನಂಬಿ, ಕೊನೆಗೆ ತಾವೇ ಹತರಾಗಿದ್ದರು. ಆದರೆ ಒಬ್ಬರು ಮಾಡಿದ ತಪ್ಪಿನಿಂದ ಇನ್ನೊಬ್ಬರು ಪಾಠ ಕಲಿತ ಉದಾಹರಣೆ ಅಸುರ ಕುಲದಲ್ಲಿಯೇ ಇರಲಿಲ್ಲ.

ಪ್ರತಿಯೊಬ್ಬರು ಅದೇ ತಪ್ಪನ್ನು – ಹರಿಯನ್ನು ನಿಂದಿಸುವ, ಅವನನ್ನು ಶತ್ರುವೆಂದು ಬಗೆಯುವುದನ್ನು – ಪದೇ ಪದೇ ಮಾಡುತ್ತಿದ್ದರು ಮತ್ತು ಅದಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದರು. ಹಿರಣ್ಯಾಕ್ಷನ ಪಾಡೂ ಅದೇ ಆಗಿತ್ತು. ದೇವ ಸರ್ವವ್ಯಾಪಿಯಾಗಿದ್ದು, ತನ್ನ ಅದ್ಭುತವಾದ ಶಕ್ತಿಯಿಂದ ಕಾರ್ಯ ನಿರ್ವಹಿಸಬಲ್ಲ ಎ೦ಬುದು ಕೊನೆಗೂ ಅವನಿಗೆ ಅರ್ಥವಾಗಲೇ ಇಲ್ಲ.

ವಿಚಿತ್ರವೆಂದರೆ ಅವನಿಗೆ ‘ಭಕ್ತರಿಲ್ಲದೆ ಭಗವಂತನಿಲ್ಲ. ಭಗವಂತನಿಲ್ಲದೆ ಭಕ್ತರಿಲ್ಲ’ ಎಂಬುದು ಗೊತ್ತಿತ್ತು. “ನನ್ನ ಲಾಳಮು೦ಡಿಗೆಯ ಹೊಡೆತದಿಂದ ನೀನು ಸತ್ತು ಬಿದ್ದರೆ, ನಿನಗೆ ಯಜ್ಞ ಯಾಗಾದಿಗಳಲ್ಲಿ ಹವಿಸ್ಸನ್ನು ಅರ್ಪಿಸುವ ಋಷಿಗಳು ಮತ್ತು ದೇವತೆಗಳು ಬೇರು ಸತ್ತ ಮರದಂತೆ ತಮ್ಮಷ್ಟಕ್ಕೆ ತಾವು ಅವಸಾನ ಹೊಂದುತ್ತಾರೆ’ ಎಂದು ನುಡಿದ ಹಿರಣ್ಯಾಕ್ಷ. ಅಸುರೀ ಭಾವ ಹೊಂದಿರುವವರು ತಮ್ಮ ಅಲ್ಪ ಜ್ಞಾನವನ್ನೂ ಐಹಿಕ ಭೋಗ ಸಂಪ್ರಾಪ್ತಿಗೇ ವಿನಿಯೋಗಿಸುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಭಗವಂತನ ಕೊನೆಯಾದರೆ ಆತನ ಭಕ್ತರ ಇತಿಶ್ರೀ ಆಗುತ್ತದೆ. ಆಗ ಎಲ್ಲೆಲ್ಲೂ ಅಸುರ ಸಾಮ್ರಾಜ್ಯ ವಿಸ್ತರಿಸುತ್ತದೆ ಎಂಬುದು ಅವರ ಕನಸು. ಇದಕ್ಕಾಗಿ ಅವರು ಕಾರಣವಿಲ್ಲದೆಯೂ ಕಾಲು ಕೆದಕಿ ಜಗಳಕ್ಕೆ ಬರಬಲ್ಲರು. ಭಗವ೦ತನಿ೦ದ, ಪೂಜೆ – ಪುನಸ್ಕಾರಗಳಿ೦ದ ಭಗವದ್ಭಕ್ತರನ್ನು ಹೇಗಾದರೂ ಮಾಡಿ ವಿಮುಖಗೊಳಿಸಿ ತಮ್ಮ ‘ಅಧರ್ಮ’ ಸಾಮ್ರಾಜ್ಯ ಸ್ಥಾಪನೆ ಮಾಡುವ ಉದ್ದೇಶದಿಂದ ಅವರು ಸದಾ ಹೋರಾಡುತ್ತಿರುತ್ತಾರೆ.

ಅಸುರನ ಬಾಯಿಯಿಂದ ಭಗವಂತನನ್ನು ಕೊಲ್ಲುವ ಮಾತು ಹೊರಟ್ಟಿದ್ದು ಕೇಳಿ ವರಾಹ ರೂಪಿಯ ಕೋರೆ ದಾಡೆಯ ಮೇಲಿದ್ದ ಭೂದೇವಿ ಹೆದರಿ ಕ೦ಪಿಸಿದಳು. ಇದನ್ನು ಗಮನಿಸಿದ ವರಾಹನಿಗೆ ಅಸುರನ ಮೇಲೆ ಕೋಪವುಕ್ಕಿ ಬಂದರೂ, ಭೂಮಿಯನ್ನು ಪಾರು ಮಾಡುವ ಏಕೈಕ ಉದ್ದೇಶದಿಂದ ಹಿರಣ್ಯಾಕ್ಷನನ್ನು ನಿರ್ಲಕ್ಷಿಸಿ ರಸಾತಲದಿಂದ ರೊಂಯ್ಯನೆ ಹೊರಟು ನೀರಿನಿಂದ ಮೇಲೆದ್ದು ಭೂಮಿಯನ್ನು ಸ್ವಸ್ಥಾನದಲ್ಲಿ ಇರಿಸಿದನು.

ಮತ್ತೆ ಆಕೆ ನೀರಿನಲ್ಲಿ ಮುಳುಗದ೦ತೆ ತನ್ನ ಸ್ವಂತ ಶಕ್ತಿಯನ್ನು ಧಾರೆ ಎರೆದು ಅವಳಲ್ಲಿ ಚೈತನ್ಯ ತುಂಬಿದನು. ಇದನ್ನು ಕಂಡು ಹರ್ಷೋದ್ಗಾರಗೈದ ಬ್ರಹ್ಮಾದಿ ದೇವತೆಗಳು ವರಾಹ ರೂಪಿ ಭಗವ೦ತನ ಮೇಲೆ ಹೂವಿನ ಮಳೆಗರೆದರು. ಭಗವಂತನು ಭೂಮಿಯನ್ನೆತ್ತಿಕೊಂಡು ನೀರಿನಾಳದಿಂದ ಮೇಲೆದ್ದುದನ್ನು ಕ೦ಡ ಹಿರಣ್ಯಾಕ್ಷ ಇವನು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಂಡು ಹೆದರಿ ಓಡಿಹೋಗುತ್ತಿದ್ದಾನೆ ಎಂದು ತಪ್ಪಾಗಿ ತಿಳಿದುಕೊಂಡನು.

ಅಷ್ಟೇ ಅಲ್ಲ ಅವನನ್ನು ನಾನಾ ವಿಧದಿಂದ ನಿ೦ದಿಸತೊಡಗಿದನು – ‘ಸವಾಲು ಎದುರಿಸುವ ತಾಕತ್ತಿಲ್ಲದೆ ಶತ್ರುವಿನ ಮು೦ದೆ ಓಡಿಹೋಗುವುದಕ್ಕೆ ನಾಚಿಕೆಯಾಗುವುದಿಲ್ಲವೆ ನಿನಗೆ? ನಾಚಿಕೆಗೆಟ್ಟವರಿಗೆ ಅವಮಾನ ಎಂಬುದಾದರೂ ಎಲ್ಲಿದೆ?’

ಆದರೆ ಈ ಮಾತುಗಳಿಂದ ಭಗವ೦ತ ವಿಚಲಿತನಾಗಲಿಲ್ಲ. ಭಕ್ತರನ್ನು ರಕ್ಷಿಸುವ ಏಕೈಕ ಗುರಿ ಹೊ೦ದಿದ ಆತ ಯಾವುದೇ ನಿಂದಾಸ್ತುತಿಗಳಿಗೂ ಕಿವಿಗೊಡುವುದಿಲ್ಲ.

ಅಲ್ಲದೆ ಎದುರಾಳಿಯ ಸಾಮರ್ಥ್ಯದ ಬಗ್ಗೆ ತಿಳಿದು, ತನ್ನ ಬಗ್ಗೆ ವಿಶ್ವಾಸವಿರಿಸಿಕೊ೦ಡ ಯಾರೇ ಬಲಿಷ್ಠರು ಶತ್ರುವಿನ ನಿಷ್ಠುರ ಮಾತುಗಳಿಗೆ ಪ್ರತಿಕ್ರಿಯಿಸಬೇಕಾಗಿಲ್ಲ. ಅಂತಹವರಿಗೆ ನಿರ್ಲಕ್ಷ್ಯವೇ ಮದ್ದು.

ಆದರೆ ಭೂಮಿಯನ್ನು ರಕ್ಷಿಸುವ ಕಾರ್ಯ ಸಂಪನ್ನವಾದ ಕೂಡಲೆ ಭಗವಂತ ಮುಂದಿನ ಕರ್ತವ್ಯ ನೆರವೇರಿಸಲು ಅಣಿಯಾದ. ಅದೇ ಹಿರಣ್ಯಾಕ್ಷ ಸಂಹಾರ. ಹಿರಣ್ಯಾಕ್ಷನೋ ಸುಂದರವಾದ ಕಿರೀಟ, ಕವಚ, ರಾಶಿ ರಾಶಿ ಚಿನ್ನಾಭರಣಗಳನ್ನು ಹೇರಿಕೊಂಡು ಒಂದು ದೊಡ್ಡ ಗದೆಯನ್ನು ಹಿಡಿದುಕೊಂಡು ಭಗವಂತನ ಮೇಲೇರಿ ಬರತೊಡಗಿದ. ಅಪಾರ ಸಂಪತ್ತು ಮತ್ತು ದೇಹಬಲವು ಭಗವ೦ತ ಸೇರಿದಂತೆ ಯಾವುದೇ ಶತ್ರುವಿನಿಂದಲೂ ತಮ್ಮನ್ನು ಪಾರುಮಾಡಬಲ್ಲವೆಂದು ಎಲ್ಲ ಅಸುರರಂತೆ ಹಿರಣ್ಯಾಕ್ಷನೂ ನಂಬಿದ್ದ.

ಜನನ-ಮರಣಗಳ ನಿಯಮಕ್ಕೆ ತಾನೂ ಒಳಪಟ್ಟಿದ್ದೇನೆ ಎಂಬುದನ್ನು ಆತ ಮರೆತಿದ್ದ! ಭಗವಂತ ತನ್ನ ಪ್ರತ್ಯುತ್ತರಗಳಿಂದ ಹಿರಣ್ಯಾಕ್ಷನಿಗೆ ಇದನ್ನು ನೆನಪು ಮಾಡಿಕೊಟ್ಟ. ಇಷ್ಟೇ ಅಲ್ಲ ಅವನನ್ನು ತನ್ನ ಪರೋಕ್ಷ ಮಾತುಗಳಿಂದ ಘಾಸಿಗೊಳಿಸುವ ಸರದಿ ಈಗ ವರಾಹ ರೂಪಿ ಶ್ರೀವಿಷ್ಣುವಿನದಾಗಿತ್ತು. ಅವನು ದಾನವನನ್ನು ಎಡೆಬಿಡದೆ ತನ್ನ ಮಾತಿನ ಬಾಣಗಳಿಂದ ಹೀಗೆ ಕಾಡಿದ ‘ನೀನಾದರೋ ಎಷ್ಟೊಂದು ಪ್ರಬಲ.

ನಿನ್ನಂಥವನೊ೦ದಿಗೆ ದ್ವೇಷ ಕಟ್ಟಿಕೊಂಡಮೇಲೆ ನಮಗೆ ಈ ಬ್ರಹ್ಮಾಂಡದಲ್ಲಿ ಹೋಗಲು ಜಾಗವಾದರೂ ಎಲ್ಲಿದೆ? ಹೀಗಾಗಿ ನಾವು ನಾಚಿಕೆ ಇಟ್ಟುಕೊ೦ಡು ಮಾಡುವುದಾದರೂ ಏನು? ನೀನು ನಿನ್ನ ಪ್ರಬಲ ಗದಾ ಪರಿಘದಿಂದ ನನ್ನನ್ನು ಘಾಸಿಗೊಳಿಸಿದರೂ, ಈ ನಿನ್ನ ಸಾಮ್ರಾಜ್ಯದಲ್ಲಿ ನಾನು ಸ್ವಲ್ಪ ಕಾಲವಾದರೂ ಇರುತ್ತೇನೆ. ಅಷ್ಟೇ ಏಕೆ, ನೀನೊಬ್ಬ ಅತುಲ ಪರಾಕ್ರಮಿಯೆಂದೂ, ಅನೇಕ ಪದಾತಿಗಳ ಸೇನಾಪತಿಯೆಂದೂ ಕೇಳಿದ್ದೇನೆ.

ನನ್ನಂಥವನನ್ನು ಹೊರಹಾಕುವುದು ನಿನಗೆ ಅದಾವ ಶ್ರಮ? ಇದಕ್ಕಾಗಿ ನೀನು ಅನೇಕ ಕ್ರಮಗಳನ್ನು ಕೈಗೊಳ್ಳಬಹುದು. ಹೀಗಾಗಿ ನಿನ್ನ ಮೂರ್ಖತನದ ಮಾತುಗಳನ್ನು ಬಿಟ್ಟು ಮೊದಲು ಆ ಕೆಲಸ ಮಾಡು. ನನ್ನನ್ನು ಕೊಂದು ನಿನ್ನ ಮಿತ್ರರಿಗೆ ಸಂತಸ ಉಂಟು ಮಾಡು. ಯಾಕೆಂದರೆ ನೀನು ಹಾಗೆ ಆಣೆ ಮಾಡಿದ್ದೀಯೆ. ಕೊಟ್ಟ ಮಾತು ಉಳಿಸಿಕೊಳ್ಳದೇ ಹೋದರೆ ಕವಡೆ ಕಾಸಿನ ಕಿಮ್ಮತ್ತೂ ಇರುವುದಿಲ್ಲ ಎಂಬುದು ನೆನಪಿರಲಿ.”

ಭಗವ೦ತನ ಈ ಪರಿಯ ಮಾತುಗಳಿಂದ ದಾನವ ಹಿರಣ್ಯಾಕ್ಷನ ರಕ್ತ ಕುದಿಯತೊಡಗಿತು. ಕ್ರೋಧದಿಂದ ನಾಗರಹಾವಿನಂತೆ ಆತ ಭುಸುಗುಟ್ಟತೊಡಗಿದ. ಅವನ ಪಂಚೇಂದ್ರಿಯಗಳೂ ಕಂಪಿಸತೊಡಗಿದವು. ಗದೆಯನ್ನೆತ್ತಿ ಒಮ್ಮೆ ಹೂಂಕಾರ ಮಾಡಿ ವೇಗವಾಗಿ ಭಗವಂತನ ಮೇಲೆರಗಿ ಒಂದು ಬಲವಾದ ಹೊಡೆತ ಕೊಡುವ ಯತ್ನ ಮಾಡಿದ. ಆದರೆ ಶತ್ರುವು ಬೀಸಿದ ಗದೆಯೇಟಿನಿಂದ ತಪ್ಪಿಸಿಕೊಳ್ಳುವುದಕ್ಕೆ ಭಗವಂತನಿಗೆ ಅದಾವ ಶ್ರಮವೂ ಆಗಲಿಲ್ಲ.

ಸಾವನ್ನು ತಪ್ಪಿಸಿಕೊಳ್ಳುವ ಸಿದ್ಧಯೋಗಿಯಂತೆ ಕೊಂಚ ವಾಲಿ ಗದೆಯೇಟು ಗುರಿ ತಪ್ಪುವಂತೆ ಮಾಡಿ ಅಸುರನ ಕ್ರೋಧಾಗ್ನಿಗೆ ಆಜ್ಯ ಸುರಿದ. ಇದರಿಂದ ಮತ್ತಷ್ಟು ಉಗ್ರನಾದ ದಾನವ ರೋಷದಿಂದ ಅವಡು ಕಚ್ಚಿ ಗದೆಯನ್ನು ಯದ್ವಾತದ್ವಾ ಬೀಸಲಾರಂಭಿಸಿದ.

ಭಗವಾನ್ ಶ್ರೀವಿಷ್ಟು ಇದೀಗ ಉಗ್ರರೂಪ ತಾಳತೊಡಗಿದ. ವರಾಹರೂಪಿಯಾದ ಆತನೂ ತನ್ನ ಕೈಲಿರುವ ಗದೆಯಿಂದ ಹಿರಣ್ಯಾಕ್ಷನ ಹುಬ್ಬುಗಳ ಮೇಲೆ ಪ್ರಹಾರಗೈದ. ಯುದ್ಧನಿಪುಣ ಹಿರಣ್ಯಾಕ್ಷ ಪ್ರಹಾರದಿಂದ ತಪ್ಪಿಸಿಕೊಂಡು ಅಟ್ಟಹಾಸ ಮಾಡಿದ.

ಇಬ್ಬರೂ ಕ್ರೋಧತಪ್ತರಾಗಿದ್ದರು. ತಮ್ಮ ಆಗಾಧ ಗದಾ ಪರಿಘಗಳಿಂದ ಇಬ್ಬರೂ ಹೊಡೆದಾಡಿದರು. ಗದೆಯ ಚೂಪಾದ ತುದಿಗಳು ಚುಚ್ಚಿ ಇಬ್ಬರ ಶರೀರದ ಮೇಲೂ ಗಾಯಗಳಾಗಿ ರಕ್ತ ಸುರಿಯತೊಡಗಿತು. ಆ ರಕ್ತದ ವಾಸನೆ ಇಬ್ಬರಲ್ಲೂ ಶತ್ರುಸಂಹಾರದ ದಾಹವನ್ನು ಇನ್ನಷ್ಟು ತೀವ್ರಗೊಳಿಸಿತು. ಎರಡು ಕಾಡಾನೆಗಳು ಕಾದಾಡಿದಂತೆ ಈ ಇಬ್ಬರ ಕಾದಾಟದಿ೦ದ ಲೋಕವೇ ಅಲ್ಲೋಲಕಲ್ಲೋಲವಾಯಿತು.

ಬ್ರಹ್ಮದೇವನು ಸ್ವತಃ ಈ ದೇವೋತ್ತಮ – ದಾನವರ ನಡುವಿನ ಯುದ್ಧ ನೋಡಲು ಅಲ್ಲಿಗೆ ಆಗಮಿಸಿದ. ಆತನ ಜೊತೆಗೆ ದೇವಾನುದೇವತೆಗಳೂ ನೆರೆದರು. ಋಷಿಪು೦ಗವರು ಬಿಜ೦ಗೈದರು. ಆ ಹೊತ್ತಿಗೆ ಬ್ರಹ್ಮದೇವನಿಗೆ ದಾನವ ಹಿರಣ್ಯಾಕ್ಷನ ಅಗಣಿತ ಶಕ್ತಿಯ ಪ್ರಖರತೆ ಗೋಚರವಾಯಿತು. ಈ ಹಿಂದೆ ದೀರ್ಘ ತಪಸ್ಸುಗಳನ್ನು ಮಾಡಿ ಸಂಪಾದಿಸಿದ್ದ ಅತೀತ ಶಕ್ತಿ ಅವನನ್ನು ಕಾಪಾಡುತ್ತಿರುವುದು ವೇದ್ಯವಾಯಿತು.

ಮೊತ್ತ ಮೊದಲಬಾರಿಗೆ ಬ್ರಹ್ಮನು ವರಾಹ ರೂಪಿ ಶ್ರೀಮನ್ನಾರಾಯಣನನ್ನು ಕುರಿತು ಹೀಗೆಂದನು – ‘ಹೇ ದೇವರ ದೇವ, ಇನ್ನು ತಡ ಮಾಡಬೇಡ, ಸಂಜೆ ಸಮೀಪಿಸುತ್ತಿದೆ. ವಿಜಯಕ್ಕೆ ಯೋಗ್ಯವಾದ ಮಧ್ಯಾಹ್ನದ ಅಭಿಜಿತ್‌ ಕಾಲ ಮುಗಿಯುತ್ತಿದೆ. ಕತ್ತಲು ಕವಿಯುತ್ತಿದ್ದಂತೆ ಅಸುರರ ಪಾಶವೀ ಶಕ್ತಿಗೆ ಹೆಚ್ಚು ಬಲ ಬರುತ್ತದೆ. ಈ ಹಿಂದೆ ಗೋ-ಬ್ರಾಹ್ಮಣ-ಸ್ತ್ರೀ-ಸತ್ಪುರುಷರಿಗೆ ಆತ ನೀಡಿದ ಹಿಂಸೆ ಅಷ್ಟಿಷ್ಟಲ್ಲ. ಇನ್ನು ಅವನ ಕಾಟ ತಡೆಯಲಾಗದು.

ಆಟವಾಡದೆ ಹಿರಣ್ಯಾಕ್ಷನನ್ನು ಸಂಹರಿಸು ಪರಮ ಪ್ರಭುವೆ!’ ಬ್ರಹ್ಮನ ಈ ಮಾತಿನಲ್ಲಿ ಹೆಚ್ಚು ಅರ್ಥವಿದ್ದಿತ್ತು. ಹಿಂದೆಯೂ ಇಂತಹ ವಿವೇಚನೆಯಿಲ್ಲದೆ ವರ ನೀಡಿ, ದೇವತೆಗಳು ಶ್ರೀವಿಷ್ಣುವಿನ ಮೊರೆ ಹೋಗಿ ಜೀವ ಉಳಿಸಿಕೊಂಡ ಅನೇಕ ಉದಾಹರಣೆಗಳಿವೆ. ಅಲ್ಲದೆ ಬ್ರಹ್ಮ ಹಾಗೆ ವಿನಂತಿಸಲು ಕಾರಣಗಳೂ ಇದ್ದವು. ವರಾಹರೂಪಿ ವಿಷ್ಣುವು ಮೇಲ್ನೋಟಕ್ಕೆ ಕ್ರೋಧಪೂರಿತನಾಗಿ ಹೋರಾಡುತ್ತಿದ್ದಂತೆ ಕಂಡುಬಂದರೂ ಆಂತರಂಗಿಕವಾಗಿ ಪಿತೃವಾತ್ಸಲ್ಯದ ಸುಕೋಮಲ ಭಾವನೆ ಅವನಲ್ಲಿತ್ತು.

ತಂದೆ ತನ್ನ ಪುಟ್ಟ ಮಗುವಿನೊ೦ದಿಗೆ ಸುಳ್ಳು ಸುಳ್ಳೆ ಹೊಡೆದಾಟ ಮಾಡಿ, ತಾನು ಸುಮ್ಮನೆ ಹೊಡೆತ ತಿಂದಂತೆ ನಟಿಸಿ ಅದರಲ್ಲಿ ಆತ್ಮಾನಂದ ಪಡುವ ಚರ್ಯೆ ಆ ದೇವರ ದೇವನದಾಗಿತ್ತು.

ಇದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಆ ಶಾಪಗ್ರಸ್ತ ಜಯನಿರಲಿಲ್ಲ. ಆತ ಕ್ರೋಧೋನ್ಮತ್ತನಾಗಿ ಗದೆಯನ್ನು ತಿರುಗಿಸುತ್ತ ಶ್ರೀವಿಷ್ಣುವಿನ ಮೇಲೇರಿ ಬಂದ. ಭಗವಂತನು ಆ ಗಧಾಪ್ರಹಾರವನ್ನು ಮಧ್ಯದಲ್ಲೇ ಕಾಲಿನಿಂದ ತಡೆದು ಒದ್ದು ಹಾರಿಸಿದ. ಅದು ಬಂದಷ್ಟೇ ವೇಗದಲ್ಲಿ ಹಿ೦ದಿರುಗಿತು. ಮತ್ತೊಮ್ಮೆ ರೋಷಾವೇಶದಿಂದ ಬಂದ ದಾನವನು ತ್ರಿಶೂಲ ಸೃಷ್ಟಿಸಿ ಪ್ರಯೋಗಿಸಿದ. ಭಗವಂತನು ಸುದರ್ಶನ ಚಕ್ರವನ್ನು ಆಹ್ವಾನಿಸಿ ಬಿಟ್ಟಾಗ ತ್ರಿಶೂಲ ಚೂರುಚೂರಾಯಿತು.

ಕೊತಕೊತನೆ ಕುದಿದ ಹಿರಣ್ಯಾಕ್ಷ ವೇಗವಾಗಿ ಓಡಿಬಂದು ಪ್ರಹಾರ ಮಾಡಿದ. ಅಕಸ್ಮಾತ್ ಭಗವಂತನ ಕೈಯಿಂದ  ಗದೆ ಜಾರಿಹೋಗಿ, ತೇಜೋಮಯವಾಗಿ ಉರುಳತೊಡಗಿತು. ಇದನ್ನು ಕಂಡು ದೇವತೆಗಳು ಭೀತರಾದರು. ಇನ್ನು ಪ್ರಪಂಚದ ಕಥೆ ಮುಗಿಯಿತೆಂದೇ ಭಾವಿಸಿದರು. ಹಿರಣ್ಯಾಕ್ಷನೋ, ಯುದ್ಧಧರ್ಮವನ್ನು ತಪ್ಪದೇ ಪಾಲಿಸುವವನಂತೆ, ಮಲ್ಲಯುದ್ಧಕ್ಕೆ ಆಹ್ವಾನಿಸಿದ. ಭಗವ೦ತ ಇದರಿಂದ ಕೆರಳಿದ೦ತೆ ಕ೦ಡ.

ಅತ್ತ ಈ ಮಹಾಯುದ್ಧದಿಂದ ಮೂಲೋಕವೂ ತತ್ತರಿಸತೊಡಗಿತು. ಆಕಾಶದಿಂದ ಆಶುಭದ ಮಳೆ ಸುರಿಯತೊಡಗಿತು. ಸ೦ಜೆಯಾಗುತ್ತಿದ್ದುದರಿಂದ ದಾನವರು ಆಕಾಶದಲ್ಲಿ ಗೋಚರಿಸಿ ಹಿರಣ್ಯಾಕ್ಷನನ್ನು ಹುರಿದು೦ಬಿಸತೊಡಗಿದರು. ನಗ್ನ ರಕ್ಕಸಿಯರು ಕೂದಲನ್ನು ಹರಡಿಕೊಂಡು ಕಿರುಚತೊಡಗಿದರು. ಜಗತ್ಪ್ರಳಯವಾಗುವುದೆ೦ದು ಸಮಸ್ತರೂ ಭಯಭೀತರಾದರು.

ಹಿರಣ್ಯಾಕ್ಷ ಮಾಯಾಯುದ್ಧ ಆರಂಭಿಸಿದ. ಆದರೆ ಭಗವಂತನ ಮುಂದೆ ಅವನ ಆಟ ನಡೆಯಲಿಲ್ಲ. ಆತ ಭಗವಂತನನ್ನು ಅಪ್ಪಿಕೊಂಡು ಉಸಿರುಗಟ್ಟಿ ಸಾಯಿಸಬೇಕೆ೦ದು ಬ೦ದ. ಆದರೆ ಆತನ ಅಪ್ಪುಗೆಗೆ ಭಗವಂತ ಸಿಗಲೇ ಇಲ್ಲ. ಆ ಮಾಯಾವಿ ರಕ್ಕಸ ಬೆಕ್ಕಸ ಬೆರಗಾದ. ಆದರೂ ಎದೆಗುಂದದೆ ವಿವಿಧ ರೀತಿಯಲ್ಲಿ ಆಕ್ರಮಣ ಮಾಡತೊಡಗಿದ.

ಇನ್ನು ತಡ ಮಾಡಿದರೆ ಪ್ರಯೋಜನವಿಲ್ಲವೆಂದು ನಿಶ್ಚಯಿಸಿದ ಭಗವಂತನು, ಸರಿಯಾದ ಸಮಯ ನೋಡಿ ಆಯಕಟ್ಟಿನ ಸ್ಥಳವಾದ ಹಿರಣ್ಯಾಕ್ಷನ ಕಿವಿಯ ಹಿಂಭಾಗದಲ್ಲಿ ಬಲವಾಗಿ ಹೊಡೆದ. ಒಂದೇ ಹೊಡೆತಕ್ಕೆ ಆತನ ತಲೆ ಗಿರಕ್ಕೆ೦ದು, ಹೊಟ್ಟೆಯಲ್ಲಿ ಅಂಕುಶ ತಿವಿದಂತಾಗಿ, ಬಾಯಿಂದ ರಕ್ತ ಚಿಮ್ಮಿ, ಕಣ್ಣುಕತ್ತಲು ಕವಿದು ಧೋಪ್ ಎ೦ದು ಉರುಳಿ ಬಿದ್ದ. ಆತನ ಪ್ರಾಣಪಕ್ಷಿ ಹಾರಿ ಹೋಯಿತು.

ದೇವಾನುದೇವತೆಗಳು ಹರ್ಷೋದ್ಗಾರ ಗೈದು ಹೂಮಳೆಗರೆದರು. ಪರಮಾತ್ಮನ ಪ್ರಹಾರದಿಂದ ಪರಂಧಾಮವನ್ನೈದ ಅಸುರರೂಪಿ ಜಯನ ಪುಣ್ಯವನ್ನೂ ಲೋಕಕಂಟಕ ನಿವಾರಿಸಿದ ಪರಮಪಿತ ವಿಷ್ಣುವನ್ನೂ ಕೊಂಡಾಡಿದರು.

ಹಿರಣ್ಯಾಕ್ಷ ದೈತ್ಯನು ಹತನಾಗಿ ಬಿದ್ದಿದ್ದರೂ ಅವನ ಮುಖದ ಮೇಲಿನ ಕಾಂತಿ ಕುಂದದೆ ಹಾಗೆಯೇ ಉಳಿದಿತ್ತು. ಇದನ್ನು ಕಂಡು ಬ್ರಹ್ಮನು ಉದ್ಧರಿಸಿದನು ” ಅದೆಂತಹ ವೈಭವೋಪೇತ ಮರಣವಿದು! ಪರಮ ದೇವೋತ್ತಮನ ಪಾದಗಳ ಮೇಲೆ ಮೋಕ್ಷಾಪೇಕ್ಷಿ ಮಹಾ ಯೋಗಿಗಳು ಧ್ಯಾನಿಸುತ್ತಾರೆ. ಆ ಪಾದಪದ್ಮದಿ೦ದಲೇ ಹತನಾದನಲ್ಲ ಅದೆಷ್ಟು ಭಾಗ್ಯವಂತನು ಈ ಅಸುರ!”

ಪರಮ ಪುರುಷನ ಮುಖಾರವಿಂದದ ದರಶನದೊಂದಿಗೆ ಇವನು ಈ ಲೌಕಿಕ ದೇಹವನ್ನು ತ್ಯಜಿಸಿದ್ದಾನೆ! ಅದೆಂತಹ ಮಹಾಪುಣ್ಯ ಇತನದು.” ಹೀಗೆ ಹಿರಣ್ಯಾಕ್ಷನನ್ನು ಕೊಂದ ಶ್ರೀಹರಿಯು ತನ್ನ ಧಾಮಕ್ಕೆ ಹಿಂದುರಿಗಿದನು.

ವಿಜಯನಗರದ ಅರಸರು ವರಾಹ ಸ್ವಾಮಿಯ ಅನನ್ಯ ಭಕ್ತರಾಗಿದ್ದರು. ಸುತ್ತಲೂ ಹಬ್ಬಿದ್ದ ಮ್ಲೇಚ್ಛ ಆಕ್ರಮಣಕಾರರ ವಿರುದ್ಧ ನಿರಂತರವಾಗಿ ಸೆಣಸಾಡಿದ ವಿಜಯನಗರದ ಸಾಮ್ರಾಟರಿಗೆ, ಸಹಜವಾಗಿಯೇ, ವರಾಹಸ್ವಾಮಿಯು ರಾಜ ಲಾಂಛನವಾದ. ಹಾಗಾಗಿ ವಿಜಯನಗರದ ಧ್ವಜವು ವರಾಹ ಧ್ವಜವಾಯಿತು.

ವಿಜಯನಗರದವರು ‘ವರಾಹ’ ನಾಣ್ಯಗಳನ್ನು ಚಾಲನೆಗೆ ತಂದರು. ತೆರಿಗೆ ನೀಡಲು ಧಾನ್ಯದ ಬದಲು ಚಿನ್ನದ ‘ವರಾಹ’ ನಾಣ್ಯಗಳನ್ನು ನೀಡುವ ಕ್ರಮವನ್ನು ಇಮ್ಮಡಿ ದೇವರಾಯ ಜಾರಿಗೆ ತಂದನು. ಚಿನ್ನದ ನಾಣ್ಯದ ಬಳಕೆಯೇ ಬಹುತೇಕವಾಗಿದ್ದರೂ, ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳ ಬಳಕೆಯೂ ಇತ್ತು.

ಮಹಾನ್ ವೈಷ್ಣವ ಭಕ್ತ ವಿಜಯನಗರದ ಅರಸ ಕೃಷ್ಣದೇವರಾಯನು ತನ್ನ ಒರಿಸ್ಸಾ ವಿಜಯದ ಸಂಕೇತವಾಗಿ ತಿರುಪತಿ ತಿಮ್ಮಪ್ಪನಿಗೆ ಮಾಡಿಸಿದ ಕನಕಾಭಿಷೇಕ ಸಂದರ್ಭದಲ್ಲಿ ವಿಶೇಷ ನಾಣ್ಯಗಳನ್ನು ಟಂಕಿಸಿದ್ದನು. ಇವುಗಳಲ್ಲಿ ವೆಂಕಟೇಶ್ವರನ ಹಾಗೂ ವರಾಹಸ್ವಾಮಿಯ ಚಿತ್ರವಿತ್ತು. ಇದರ ತೂಕ ಕೂಡ 117 ಗ್ರೇನ್ ಆಗಿದ್ದು ಗಮನಾರ್ಹವಾಗಿತ್ತು. ಇಮ್ಮಡಿ ರಂಗರಾಯ, ಇಮ್ಮಡಿ ದೇವರಾಯ, ಅಚ್ಯುತರಾಯ ಎರಡನೆಯ ಬುಕ್ಕ ಮೊದಲಾದ ಅರಸರೆಲ್ಲ ವರಾಹ ನಾಣ್ಯಗಳನ್ನು ಜನಪ್ರಿಯಗೊಳಿಸಿದರು.

ಇವುಗಳು 247 ಗ್ರೇನ್‌ನಿಂದ 15 ಗ್ರೇನ್ ತೂಕದವರೆಗೂ ದೊರೆತಿವೆ. ಗ್ರೇನ್ ಎಂದರೆ ಗುಲಗಂಜಿ. ಈ ‘ ವರಾಹ’ ನಾಣ್ಯ ಅದೆಷ್ಟು ಜನಪ್ರಿಯವಾಯಿತೆ೦ದರೆ, ನಾಣ್ಯಕ್ಕೆ ಆ ಕಾಲದಲ್ಲಿದ್ದ ಗಡ್ಯಾಣ, ಪಗೋಡ, ಪೊನ್ ಮುಂತಾದ ಪದಗಳಿಗೆ ಪರ್ಯಾಯವಾಗಿ ವರಾಹ ಎಂಬುದು ನಾಣ್ಯದ ಪರ್ಯಾಯ ಪದವಾಯಿತು.

ವರಾಹ ಕಾಲದ ಶಾಸನಗಳು ಹಾಗೂ ಸಮಕಾಲೀನ ವಿದೇಶಿ ಪ್ರವಾಸಿಗರ ಬರಹದಿಂದ ಅಂದಿನ ಕೋಷ್ಠಕವನ್ನು ವಿದ್ವಾಂಸರು ತಯಾರಿಸಿದ್ದಾರೆ.

  • 1 ದೊಡ್ಡ ವರಾಹ = 2 ವರಾಹ
  • 1 ವರಾಹ = 2 ಪ್ರತಾಸ
  • 1 ಪ್ರತಾಸ = 2 ಕಾಟ
  • 1 ಸಮ = 1/10 ವರಾಹ
  • 1 ಚಿನ್ನ – 1/8 ವರಾಹ
  • 1 ಪಣ = 4 ಹಾಗ
  • 1 ಹಾಗ = 2 ಬೇಳೆ

ತಿರುಪತಿ ತಿರುಮಲ ದೇವಾಲಯದ ಮ್ಯೂಸಿಯಂನಲ್ಲಿ (ತಿರುಪತಿ), ಮತ್ತು ಹೈದರಾಬಾದ್‌ನ ಸಾಲಾರ್ ಜಂಗ್ ಮ್ಯೂಸಿಯಂನಲ್ಲಿ ಈ ನಾಣ್ಯಗಳಲ್ಲಿ ಬಹುತೇಕವು ಪ್ರದರ್ಶಿತವಾಗಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi