ಯುಗಾವತಾರಿ ಶ್ರೀಚೈತನ್ಯ ಮಹಾಪ್ರಭು
-ಡಾ.ಬಿ.ಆರ್.ಸುಹಾಸ್
ಕೃಷ್ಣ ವರ್ಣಂ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ|
ಯಜ್ಞೈಃ ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸಮೇಧಸಃ ||
(ಭಾಗವತ 11.5.32)
ಮಹಾನ್ ಅವತಾರಿ ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುತ್ತಾನೆ ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ ಪ್ರಚಾರದ ಮೂಲಕ ಶ್ರೀ ಚೈತನ್ಯರು ನಾಶ ಮಾಡಿದರು.
ಅವರ ಲೀಲೆಗಳನ್ನು ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಚೈತನ್ಯ ಚರಿತಾಮೃತ ಎನ್ನುವ ಗ್ರಂಥದಲ್ಲಿ ಕ್ರೋಡೀಕರಿಸಿದ್ದಾರೆ. ಆ ಗ್ರಂಥವನ್ನೇ ಆಧಾರವಾಗಿಟ್ಟುಕೊಂಡು ಈ ಬಾರಿ ಚೈತನ್ಯರ ಬಾಲ ಲೀಲೆಯ ಕೆಲವು ಪ್ರಸಂಗಗಳನ್ನು ಮುಂದುವರಿಸಲಾಗಿದೆ.

ಒಂದು ದಿನ, ತೀರ್ಥಯಾತ್ರೆ ಮಾಡುತ್ತಿದ್ದ ಬ್ರಾಹ್ಮಣನೊಬ್ಬನು ಜಗನ್ನಾಥ ಮಿಶ್ರರ ಮನೆಯಲ್ಲಿ ಇಳಿದುಕೊಂಡನು. ಅವರ ಅನುಮತಿಯನ್ನು ಪಡೆದು ತನಗಾಗಿ ಅಡುಗೆ ಮಾಡಿಕೊಂಡನು. ಅಡುಗೆಯನ್ನು ವಿಷ್ಣುವಿಗೆ ನೈವೇದ್ಯ ಮಾಡಿ ಧ್ಯಾನ ಮಾಡುತ್ತಿದ್ದಾಗ ಬಾಲಕ ನಿಮಾಯ್ ಅಲ್ಲಿಗೆ ಬಂದು ಆ ಅಡುಗೆಯನ್ನು ತಿನ್ನಲಾರಂಭಿಸಿದನು! ತನ್ನ ನೈವೇದ್ಯ ಹಾಳಾಯಿತೆಂದು ಆ ಬ್ರಾಹ್ಮಣನು ಪುನಃ ಜಗನ್ನಾಥರ ಅನುಮತಿ ಪಡೆದು ಅಡುಗೆ ಮಾಡಿದನು.
ಅವನು ಅದನ್ನು ಭಗವದರ್ಪಣೆ ಮಾಡುತ್ತಿದ್ದಾಗ, ಪುನಃ ನಿಮಾಯ್ ಅದರ ರುಚಿ ನೋಡಿದನು! ಬ್ರಾಹ್ಮಣನು ಪುನಃ ಅಡುಗೆ ಮಾಡಿಕೊಂಡನು. ಈ ಬಾರಿ ನಿಮಾಯ್ಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಎಲ್ಲರೂ ಮಲಗಿದ್ದರು. ಆದರೂ ನಿಮಾಯ್ ಪ್ರತ್ಯಕ್ಷವಾಗಿ ಆ ಊಟವನ್ನು ತಿನ್ನಲಾರಂಭಿಸಿದನು! ಆ ದಿನ, ಭಗವಂತನು ಆಹಾರವನ್ನು ಸ್ವೀಕರಿಸಲು ಇಷ್ಟಪಡುತ್ತಿರಲಿಲ್ಲವೆಂದೂ, ತಾನು ಅದರಿಂದ ಉಪವಾಸವಿರಬೇಕೆಂದೂ ಭಾವಿಸಿ ಆ ಬ್ರಾಹ್ಮಣನು ಉದ್ವಿಗ್ನಗೊಂಡು, “ಅಯ್ಯೋ! ಎಂಥ ಕೆಲಸವಾಗಿ ಹೋಯಿತು!” ಎಂದು ಉದ್ಗರಿಸಿದನು.
ಆಗ ನಿಮಾಯ್ ನಸುನಗುತ್ತಾ ಹೇಳಿದನು, “ಹಿಂದೆ ನಾನು ಯಶೋದಾ ಮಾತೆಯ ಮಗನಾಗಿದ್ದೆ, ಆಗಲೂ ನೀವು ನನ್ನ ತಂದೆ ನಂದ ಮಹಾರಾಜರ ಅತಿಥಿಯಾಗಿದ್ದಾಗ ನಾನು ನಿಮ್ಮನ್ನು ಹೀಗೆಯೇ ತೊಂದರೆಪಡಿಸಿದೆ. ನಿಮ್ಮ ಭಕ್ತಿಯಿಂದ ನಾನು ಸಂಪ್ರೀತನಾಗಿದ್ದೇನೆ. ಆದ್ದರಿಂದಲೇ ನೀವು ಅಡುಗೆ ಮಾಡಿರುವ ಖಾದ್ಯಗಳನ್ನು ತಿನ್ನುತ್ತಿದ್ದೇನೆ.”
ಭಗವಂತನಿಂದ ತನಗಾದ ಕೃಪೆಯನ್ನರಿತು, ಆ ಬ್ರಾಹ್ಮಣನು ಸಂತೋಷಗೊಂಡನು. ಕೃಷ್ಣ ಪ್ರೇಮದಿಂದ ಪರವಶನಾದನು. ತಾನು ಪರಮ ಭಾಗ್ಯಶಾಲಿಯೆಂದು ತಿಳಿದು ಭಗವಂತನನ್ನು ಅಭಿನಂದಿಸಿದನು. ಆಗ ಪ್ರಭುವು, ಈ ಘಟನೆಯನ್ನು ಯಾರಿಗೂ ತಿಳಿಸಬಾರದೆಂದು ಆ ಬ್ರಾಹ್ಮಣನಿಗೆ ಹೇಳಿದನು.
ಬಾಲ ನಿಮಾಯ್ಗೆ ಒಳ್ಳೆಯ ಒಡವೆಗಳನ್ನು ಹಾಕುತ್ತಿದ್ದರು. ಒಂದು ದಿನ, ಅವನ ಒಡವೆಗಳನ್ನು ಕದಿಯಲೆಂದು ಇಬ್ಬರು ಕಳ್ಳರು ಅವನನ್ನು ಹೆಗಲ ಮೇಲೇ ಕೂರಿಸಿಕೊಂಡು ಕಾಡಿಗೆ ಹೊರಟರು. ಆದರೆ ಪ್ರಭುವು ಅವರ ಮೇಲೆ ತನ್ನ ಮಾಯೆಯ ಪ್ರಭಾವವನ್ನು ಬೀರಿ ಅವರನ್ನು ದಾರಿ ತಪ್ಪಿಸಿದನು! ಆ ಕಳ್ಳರು ಸುತ್ತಿ ಬಳಸಿ ಕಡೆಗೆ ಜಗನ್ನಾಥ ಮಿಶ್ರರ ಮನೆಗೇ ಬಂದರು! ಮಗುವಿಗಾಗಿ ಹುಡುಕಾಡುತ್ತಿದ್ದ ಮಿಶ್ರ ಮತ್ತು ಪರಿವಾರವನ್ನು ಕಂಡು ಹೆದರಿ ಮಗುವನ್ನು ಅಲ್ಲೇ ಬಿಟ್ಟು ಓಡಿ ಹೋದರು.

ಒಂದು ಏಕಾದಶಿಯ ದಿನದಂದು ನಿಮಾಯ್ ಕಾಯಿಲೆಗೊಳಗಾಗಿ ತನಗೆ ಆಹಾರ ಬೇಕೆಂದು ಕೇಳಿದನು. ಜಗದೀಶ ಮತ್ತು ಹಿರಣ್ಯರೆಂಬ ಇಬ್ಬರು ಪಂಡಿತರು ಅಂದು ವಿಷ್ಣುವಿಗೆ ವಿಶೇಷ ಪ್ರಸಾದವನ್ನರ್ಪಿಸುತ್ತಿದ್ದರು. ಆ ಪ್ರಸಾದವನ್ನು ತರಬೇಕೆಂದು ನಿಮಾಯ್ ತಂದೆಯ ಬಳಿ ಹಠ ಹಿಡಿದನು. ಆ ಪಂಡಿತರ ಮನೆ ಜಗನ್ನಾಥಮಿಶ್ರರ ಮನೆಯಿಂದ ಎರಡು ಮೈಲಿಗಳಷ್ಟು ದೂರವಿತ್ತು.
ಮಗನಿಗಾಗಿ ಜಗನ್ನಾಥರು ಅವರ ಮನೆಗೆ ಹೋಗಿ ಪ್ರಸಾದವನ್ನು ಬೇಡಿದರು. ತಾವು ಪ್ರಸಾದನ್ನು ತಯಾರಿಸಿದ ವಿಷಯ ನಿಮಾಯ್ಗೆ ಹೇಗೆ ತಿಳಿಯಿತೆಂದು ಆ ಪಂಡಿತರು ಆಶ್ಚರ್ಯಪಟ್ಟರು. ನಿಮಾಯ್ ವಿಶೇಷ ಶಕ್ತಿಗಳನ್ನು ಪಡೆದಿರಬಹುದೆಂದು ಭಾವಿಸಿ ಪ್ರಸಾದವನ್ನು ಜಗನ್ನಾಥರಿಗೆ ಕೊಟ್ಟು ಕಳಿಸಿದರು. ಜಗನ್ನಾಥರು ಪ್ರಸಾದವನ್ನು ತಂದು ನಿಮಾಯ್ಗೆ ಕೊಡಲು ಅವನು ಅದನ್ನು ತಿಂದು ಬೇಗನೆ ಗುಣಮುಖನಾದನು. ಅನಂತರ ಅವನು ಪ್ರಸಾದವನ್ನು ತನ್ನ ಗೆಳೆಯರಿಗೂ ಹಂಚಿದನು.
ನಿಮಾಯ್ ಬೆಳೆದಂತೆ ತುಂಟ ಹುಡುಗನಾದನು. ತನ್ನ ಗೆಳೆಯರೊಂದಿಗೆ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಹಾಲು, ಮೊಸರು, ಸಿಹಿ ಅನ್ನ ಮೊದಲಾದ ಖಾದ್ಯಗಳನ್ನು ಕದ್ದು ತಿನ್ನುತ್ತಿದ್ದನು. ಕೆಲವೊಮ್ಮೆ ಅಡುಗೆ ಮಾಡುವ ಮಡಿಕೆಗಳನ್ನು ಒಡೆದು ಹಾಕುತ್ತಿದ್ದನು. ಅಲ್ಲಿದ್ದ ಪುಟ್ಟ ಮಕ್ಕಳನ್ನು ಗದರಿಸಿ ಅಳಿಸುತ್ತಿದ್ದನು. ಮಕ್ಕಳೆಲ್ಲರೂ ಈತನ ತುಂಟಾಟಗಳ ಬಗ್ಗೆ ಶಚೀಮಾತೆಯ ಬಳಿ ದೂರಿಡುತ್ತಿದ್ದರು.
ಆಗ ಶಚೀದೇವಿ ಅವನನ್ನು ತರಾಟೆಗೆ ತೆಗೆದುಕೊಂಡು, “ಎಲ್ಲವೋ ಕಳ್ಳ! ನೀನೀಕೆ ಇತರರ ಪದಾರ್ಥಗಳನ್ನು ಕಳವು ಮಾಡುವೆ? ಇತರರ ಮಕ್ಕಳನ್ನೇಕೆ ಗದರಿಸಿ ಹೊಡೆಯುವೆ? ಇತರರ ಮನೆಗಳಿಗೇಕೆ ಹೋಗುವೆ? ನಿನ್ನ ಮನೆಯಲ್ಲೇನು ಕಡಿಮೆಯಾಗಿದೆ?” ಎಂದು ಕೋಪದಿಂದ ಬಯ್ಯುತ್ತಿದ್ದಳು. ಆಗ ನಿಮಾಯ್ ಕೋಪಗೊಂಡು ಮಡಿಕೆಗಳನ್ನೆಲ್ಲಾ ಒಡೆದು ಬಿಡುತ್ತಿದ್ದನು! ಶಚೀಮಾತೆ ಪುನಃ ಅವನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡಲು, ಅವನ ಕೋಪ ಕರಗಿ ತನ್ನ ತಪ್ಪಿಗೆ ನಾಚಿಕೊಳ್ಳುತ್ತಿದ್ದನು.
ಒಂದು ದಿನ ನಿಮಾಯ್, ತನ್ನು ಮೃದುವಾದ ಹಸ್ತದಿಂದ ತಾಯಿಗೆ ಹೊಡೆದುಬಿಟ್ಟನು. ಆಗ ಶಚೀಮಾತೆ ಸ್ಮೃತಿ ತಪ್ಪಿ ಬಿದ್ದು ಬಿಟ್ಟಳು! ಅದನ್ನು ನೋಡಿ ನಿಮಾಯ್ ಅಳಲಾರಂಭಿಸಿದನು. ಆಗ ಪಕ್ಕದ ಮನೆಯ ಹೆಂಗಸರು ಬಂದು ಅವನಿಗೆ ಹೇಳಿದರು, “ಮಗು, ಎಲ್ಲಿಂದಲಾದರೂ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಬಾ. ನಿನ್ನ ತಾಯಿ ಗುಣಮುಖಳಾಗುವಳು. “ನಿಮಾಯ್ ಕೂಡಲೇ ಓಡಿಹೋಗಿ ಎರಡು ತೆಂಗಿನಕಾಯಿಗಳನ್ನು ತೆಗೆದುಕೊಂಡು ಬಂದನು. ಬಾಲಕನು ಈ ಲೀಲೆಗಳನ್ನು ನೋಡಿ ಹೆಂಗಸರು ವಿಸ್ಮಿತರಾದರು.

ಒಮ್ಮೊಮ್ಮೆ ನಿಮಾಯ್ ತನ್ನ ಗೆಳೆಯರೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡಲೆಂದು ಹೋಗುತ್ತಿದ್ದನು. ಆಗ ಕೆಲವು ಕನ್ಯೆಯರು ದೇವತಾರಾಧನೆಗಾಗಿ ಅಲ್ಲಿಗೆ ಬರುತ್ತಿದ್ದರು. ಅವರು ಗಂಗೆಯಲ್ಲಿ ಮಿಂದು ವಿವಿಧ ದೇವತೆಗಳನ್ನು ಪೂಜಿಸುತ್ತಿದ್ದಾಗ, ಪ್ರಭುವು ಬಂದು ಅವರ ಮಧ್ಯೆ ಕುಳಿತು ಬಿಡುತ್ತಿದ್ದನು! ಆ ಹುಡಗಿಯರನ್ನು ಕುರಿತು ಅವನು ಹೇಳುತ್ತಿದ್ದನು, “ನನ್ನನ್ನು ಪೂಜಿಸಿ! ನಾನು ನಿಮಗೆ ಒಳ್ಳೆಯ ಗಂಡಂದಿರನ್ನು ಕರುಣಿಸುತ್ತೇನೆ. ಗಂಗೆಯೂ ದುರ್ಗಾದೇವಿಯೂ ನನ್ನ ದಾಸಿಯರು. ಮಹೇಶ್ವರನೂ ನನ್ನ ಕಿಂಕರ!”
ಅನಂತರ, ಅವರ ಅನುಮತಿ ಪಡೆಯದೆ ಅವರು ತಂದಿದ್ದ ಚಂದನ ಗಂಧವನ್ನು ತನ್ನ ಮೈಗೆ ಪೂಸಿಕೊಂಡು ಹಾರಗಳನ್ನು ಧರಿಸುತ್ತಿದ್ದನು. ಅವರು ತಂದಿದ್ದ ತಿಂಡಿ ತಿನಿಸುಗಳನ್ನೂ ಬಾಳೆ ಹಣ್ಣುಗಳನ್ನೂ ತಿಂದು ಬಿಡುತ್ತಿದ್ದನು!
ಇದರಿಂದ ಕೋಪಗೊಂಡ ಆ ಕನ್ಯೆಯರು, “ಹೇ ನಿಮಾಯ್, ನೀನು ನಮಗೆ ಅಣ್ಣನಿದಂತೆ. ಆದ್ದರಿಂದ ಹೀಗೆ ಮಾಡುವುದು ನಿನಗೆ ತಕ್ಕುದ್ದಲ್ಲ. ನಮ್ಮ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ತೊಂದರೆ ಕೊಡಬೇಡ!” ಎನ್ನುತ್ತಿದ್ದರು.
ಆಗ ಪ್ರಭುವು ಹೇಳುತ್ತಿದ್ದರು, “ನನ್ನ ಪ್ರಿಯ ತಂಗಿಯರಾ, ನಾನು ನಿಮಗೆ ವರ ಕೊಡುತ್ತೇನೆ: ನಿಮಗೆ ಬಹಳ ಸುಂದರರೂ, ಪಂಡಿತರೂ, ಬುದ್ಧಿವಂತರೂ, ಹಾಸ್ಯ ಪ್ರಿಯರೂ, ಯುವಕರೂ ಆದ ಒಳ್ಳೆಯ ಗಂಡಂದಿರು ದೊರೆಯುತ್ತಾರೆ! ಅಷ್ಟೇ ಅಲ್ಲ, ನಿಮ್ಮೆಲ್ಲರಿಗೂ ಏಳೇಳು ಪುತ್ರರಾಗುತ್ತಾರೆ! ನೀವೆಲ್ಲರೂ ದೀರ್ಘಾಯುಗಳಾಗಿ ಬಾಳುವಿರಿ!”
ಈ ಮಾತುಗಳನ್ನು ಕೇಳಿ ಅಂತರಂಗದಲ್ಲಿ ಸಂತೋಷಗೊಂಡರೂ ಈ ಕನ್ಯಾ ಮಣಿಗಳು ಹುಸಿಕೋಪವನ್ನು ಪ್ರಕಟಿಸುತ್ತಿದ್ದರು. ಆಗ ನಿಮಾಯ್ ಕೋಪದಿಂದ, “ನೀವು ನನಗೆ ನೈವೇದ್ಯವನ್ನು ಕೊಡದೆ ಜಿಪುಣರಂತಾಡಿದರೆ ಒಬ್ಬೊಬ್ಬರಿಗೂ ಆಗಲೇ ನಾಲ್ಕು ಪತ್ನಿಯರಿರುವ ಮುದಿ ಗಂಡ ದೊರೆಯುವನು!” ಎನ್ನುತ್ತಿದ್ದನು.
ಇದನ್ನು ಕೇಳಿ ಅವರು, ನಿಮಾಯ್ ನಿಜವಾಗಿಯೂ ದೇವತೆಗಳ ಶಕ್ತಿಯಿಂದ ಆವಿಷ್ಟನಾಗಿದ್ದನೆಂದು ತಿಳಿದು ಹೆದರಿಬಿಡುತ್ತಿದ್ದರು. ಆಗ ತಮ್ಮ ತಿಂಡಿ ತಿನಿಸುಗಳನ್ನು ಅವನಿಗೇ ಕೊಟ್ಟು ಬಿಡುತ್ತಿದ್ದರು. ಈ ತುಂಟಾಟ ಜನರಿಗೆ ತಿಳಿದರೂ, ಅವರು ಅದರಿಂದ ದುಃಖಿಸದೆ ಸಂತೋಷಪಡುತ್ತಿದ್ದರು.
ಒಂದು ದಿನ ವಲ್ಲಭಾರ್ಚಾಯರ ಮಗಳಾದ ಲಕ್ಷ್ಮಿಯೆಂಬುವಳು ಗಂಗಾನದಿಯಲ್ಲಿ ಮಿಂದು ದೇವತಾರ್ಚನೆ ಮಾಡಲು ಅಲ್ಲಿಗೆ ಬಂದಳು. ಅವಳು ಸಾಕ್ಷಾತ್ ಲಕ್ಷ್ಮೀಯೇ ಆಗಿದ್ದಳು. ವಿಷ್ಣುವಿನ ಅವತಾರವಾದ ಪ್ರಭುವಿಗೆ ಅವರ ನಡುವೆ ಇದ್ದ ಮಧುರ ಸಂಬಂಧದ ಸ್ಮರಣೆಯಾಯಿತು. ಪ್ರಭುವನ್ನು ನೋಡಿದ ಲಕ್ಷ್ಮಿಗೂ ಅವನಲ್ಲಿ ಪ್ರೇಮಾಂಕುರವಾಯಿತು. ಬಾಲ್ಯ ಭಾವನೆಗಳಿಂದ ತುಂಬಿದ್ದರೂ ಅವರೀರ್ವರ ಪ್ರೀತಿ ಸಹಜವಾಗಿದ್ದು ಅವರು ಒಬ್ಬರಿಗೊಬ್ಬರು ಆಕರ್ಷಿತರಾದರು.

ಭಗವತಿಯಾದ ಲಕ್ಷ್ಮಿಯೇ ಆಗಿದ್ದ ಅವಳನ್ನು ನೋಡಿ ಪ್ರಭು ಹೇಳಿದನು, “ನನ್ನನ್ನು ಪೂಜಿಸು! ನಾನೇ ಪರಮಪುರುಷ. ನೀನು ನನ್ನನ್ನು ಪೂಜಿಸಿದೆಯಾದರೆ ಅಭೀಷ್ಟಿತ ವರವನ್ನು ಪಡೆಯುವೆ.” ಅದರಂತೆ ಲಕ್ಷ್ಮಿಯು ಅವನನ್ನು ಹೂವು, ಗಂಧಗಳಿಂದ ಸಂಪೂಜಿಸಿದಳು.
ಅದರಿಂದ ತೃಪ್ತನಾದ ಪ್ರಭುವು ನಸುನಗುತ್ತಾ ಭಾಗವತದ ಒಂದು ಶ್ಲೋಕವನ್ನು ಹೇಳಿದನು, “ಪ್ರಿಯ ಗೋಪಿಯರೇ, ನನ್ನನ್ನೇ ಪತಿಯನ್ನಾಗಿ ಪಡೆಯಬೇಕೆಂದು ಸಂಕಲ್ಪಿಸಿ ನೀವು ಮಾಡಿರುವ ಈ ಪೂಜೆಯನ್ನು ಅನುಮೋದಿಸುತ್ತೇನೆ. ನಿಮ್ಮ ಆಸೆಯನ್ನು ಪೂರ್ಣಗೊಳಿಸುತ್ತೇನೆ. ಅದಕ್ಕೆ ನೀವು ಅರ್ಹರಾಗಿರುವಿರಿ. “ತಮ್ಮ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ ಬಳಿಕ ನಿಮಾಯಿಯೂ ಲಕ್ಷ್ಮಿಯೂ ತಮ್ಮ ಮನೆಗೆ ಹೋದರು.
ಬಾಲಕನ ತುಂಟಾಟಗಳನ್ನು ಕಂಡ ಜನರು ಪ್ರೀತಿಯಿಂದ ಅವನ ತಾಯ್ತಂದೆಯರ ಬಳಿ ಇದರ ಬಗ್ಗೆ ದೂರಿತ್ತರು. ಚೈತನ್ಯ ಮಹಾಪ್ರಭುಗಳ ಲೀಲೆಗಳನ್ನು ಅರ್ಥಮಾಡಿಕೊಳ್ಳುವುದೆಂತು?
ಒಂದು ದಿನ ಶಚೀಮಾತೆ ನಿಮಾಯಿಯನ್ನು ಗದರಿಸಿ ಅವನನ್ನು ಹಿಡಿಯಹೋಗಲು, ಅವನು ಓಡಿಹೋದನು. ತೊಳೆಯಲೆಂದು ಇಟ್ಟಿದ್ದ ಕೆಲವು ಪಾತ್ರೆಗಳ ಮೇಲೆ ಕುಳಿತುಬಿಟ್ಟನು! ಅದನ್ನು ನೋಡಿ ತಾಯಿಯು ಕೋಪದಿಂದ, “ಛೇ! ಏಕೆ ಈ ಅಶುಚಿಯಾದ ಪಾತ್ರೆಗಳನ್ನು ಮುಟ್ಟಿದೆ? ಅಪವಿತ್ರನಾಗಿರುವ ನೀನು ಈಗ ಗಂಗೆಯಲ್ಲಿ ಸ್ನಾನಮಾಡಬೇಕು! ಬೇಗ ಹೋಗು!” ಎಂದಳು.
ಅದನ್ನು ಕೇಳಿ ಬಾಲ ನಿಮಾಯ್ ಮುದ್ದು ಮುದ್ದಾಗಿ ಮಾತನಾಡುತ್ತಾ, “ಅಮ್ಮ! ಇದು ಶುಚಿ, ಅದು ಅಶುಚಿ ಎನ್ನುವುದು ಪ್ರಾಪಂಚಿಕ ಭಾವನೆಯಷ್ಟೇ! ಆದರೆ ಸತ್ಯವಲ್ಲ. ಈ ಪಾತ್ರೆಗಳಲ್ಲಿ ನೀನು ಭಗವಾನ್ ವಿಷ್ಣುವಿಗೆ ಆಹಾರ ತಯಾರಿಸಿದೆಯಷ್ಟೆ? ಅನಂತರ ಇವನ್ನು ಅವನಿಗೆ ಅರ್ಪಿಸಿದೆ ಕೂಡ.
ಅಂದ ಮೇಲೆ ಇವು ಅಶುಚಿಯಾಗಲು ಹೇಗೆ ಸಾಧ್ಯ? ವಿಷ್ಣುವಿಗೆ ಸಂಬಂಧಿಸಿರುವ ಪ್ರತಿ ವಸ್ತುವೂ ಅವನ ಶಕ್ತಿಯ ವಿಸ್ತರಣೆಯೇ ಆಗಿರುತ್ತದೆ. ಪರಮಾತ್ಮನಾದ ವಿಷ್ಣುವು ನಿತ್ಯವೂ, ನಿಷ್ಕಲ್ಮಶನೂ ಆಗಿರುವನು. ಹೀಗಿರುವಾಗ ಈ ಪಾತ್ರೆಗಳನ್ನು ಶುದ್ಧ, ಅಶುದ್ಧ ಎಂದು ಹೇಗೆ ಹೇಳಲು ಸಾಧ್ಯ?” ಮಗನ ಈ ಜ್ಞಾನಭರಿತ ಮಾತುಗಳನ್ನು ಕೇಳಿ ಆಶ್ಚರ್ಯಗೊಂಡ ಶಚೀಮಾತೆ ಅವನನ್ನು ಆಗ ಸ್ನಾನ ಮಾಡಲು ಬಲವಂತಪಡಿಸಲಿಲ್ಲ.
ಕೆಲವೊಮ್ಮೆ ತಾಯಿ ಶುಚಿಯು ಮಗನೊಂದಿಗೆ ಮಲಗಿರುವಾಗ, ಸ್ವರ್ಗ ಲೋಕದ ದಿವ್ಯ ಪುರುಷರು ಬಂದು ಮನೆಯನ್ನು ತುಂಬಿರುವುದಾಗಿ ಕಾಣುತ್ತಿದ್ದಳು!
ಒಂದುದಿನ ತಾಯಿ ಶುಚಿಯು ನಿಮಾಯ್ಗೆ “ನಿನ್ನ ತಂದೆಯನ್ನು ಕರೆ ಹೋಗು” ಎಂದಳು. ಅದರಂತೆ ಅವನು ತಂದೆಯನ್ನು ಕರೆಯಲು ಹೊರ ಹೋದನು. ಅವನು ಹಾಗೆ ಹೋಗುತ್ತಿರಲು, ಅವನ ಪುಟ್ಟಚರಣಗಳಲ್ಲಿ ನೂಪುರಗಳ ಘಲು ಘಲು ಶಬ್ದ ಕೇಳಿಸುತ್ತಿತ್ತು! ಇದನ್ನು ಕೇಳಿ ತಾಯ್ತಂದೆಯರಿಬ್ಬರಿಗೂ ಆಶ್ಚರ್ಯವಾಯಿತು. “ಇದೊಂದು ಅದ್ಭುತ! ಬರಿಗಾಲಿನಲ್ಲಿ ನಡೆಯುತ್ತಿರುವ ನನ್ನ ಕಂದನಿಂದ ಗೆಜ್ಜೆಯ ನಾದ ಹೇಗೆ ಬರುತ್ತಿದೆ?” ಜಗನ್ನಾಥಮಿಶ್ರರು ಪತ್ನಿಯನ್ನು ಕೇಳಿದರು.
“ನಾನೂ ಒಂದು ಅದ್ಭುತವನ್ನು ಕಂಡೆ! ದೇವಲೋಕದ ವ್ಯಕ್ತಿಗಳು ಬಂದು ಅಂಗಳವನ್ನೆಲ್ಲಾ ತುಂಬಿಕೊಂಡಂತೆ ಕಂಡೆ! ಅವರೇನೋ ಸದ್ದು ಮಾಡುತ್ತಿದ್ದರು. ಬಹುಶಃ ಅದು ಅವರ ಪ್ರಾರ್ಥನೆ ಇರಬೇಕು!” ಆಶ್ಚರ್ಯಪೂರಿತನಾಗಿ ಪತ್ನಿ ಹೇಳಿದಳು. “ಅದೇನಾದರೂ ಆಗಲಿ! ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಮ್ಮ ವಿಶ್ವಂಭರನಿಗೆ ಒಳ್ಳೆಯದಾದರೆ ಸಾಕು!” ಜಗನ್ನಾಥರು ಹೇಳಿದರು.

ಒಂದು ದಿನ ಜಗನ್ನಾಥಮಿಶ್ರರು ನಿಮಾಯ್ಗೆ ತುಂಟತನ ಮಾಡಬಾರದೆಂದು ನೀತಿಪಾಠವನ್ನು ಹೇಳಿದರು.ಅದೇ ರಾತ್ರಿ ಅವರಿಗೆ ಒಂದು ಸ್ವಪ್ನವಾಯಿತು. ಆ ಸ್ವಪ್ನದಲ್ಲಿ ಒಬ್ಬ ಬ್ರಾಹ್ಮಣನು ಪ್ರತ್ಯಕ್ಷನಾಗಿ ಕೋಪದಿಂದ ಹೇಳಿದನು. “ಮಿಶ್ರರೇ ನಿಮಗೆ ನಿಮ್ಮ ಮಗನ ಬಗ್ಗೆ ಏನೂ ತಿಳಿಯದು. ಅವನನ್ನು ನಿಮ್ಮ ಮಗನೆಂದು ಭಾವಿಸಿ ಅವನ ಮೇಲೆ ರೇಗುವಿರಿ!”
ಅದಕ್ಕೆ ಜಗನ್ನಾಥರು ಹೇಳಿದರು, “ನನ್ನ ಮಗನು ಒಬ್ಬ ದೇವತೆಯಾಗಿರಬಹುದು, ಸಿದ್ಧನೋ, ಯೋಗಿಯೋ ಆಗಿರಬಹುದು, ಆದರೆ ನಾನವನನ್ನು ನನ್ನ ಮಗನೆಂದೇ ಭಾವಿಸಿದ್ದೇನೆ. ಮಗನಿಗೆ ಧರ್ಮ, ನೀತಿಗಳ ಬಗ್ಗೆ ತಿಳಿಸಿಕೊಡುವುದು ತಂದೆಯ ಕರ್ತವ್ಯ. ಇವನ್ನೆಲ್ಲಾ ಕಲಿಸದಿದ್ದರೆ ಅವನು ತಿಳಿಯುವುದಾದರೂ ಹೇಗೆ?”
“ನಿಮ್ಮ ಮಗ ಒಬ್ಬ ಸಿದ್ಧ ಪುರುಷನಾಗಿದ್ದು ಸ್ವಯಂ ಜ್ಞಾನಿಯಾಗಿದ್ದರೆ ನಿಮ್ಮ ಪಾಠದಿಂದೇನು ಪ್ರಯೋಜನ?” ಬ್ರಾಹ್ಮಣ ಕೇಳಿದನು.
“ನನ್ನ ಮಗ ಒಬ್ಬ ಸಾಮಾನ್ಯ ಮಾನವನಾಗಿರದೆ ಸಾಕ್ಷಾತ್ ನಾರಾಯಣನಾಗಿದ್ದರೂ ಅವನಿಗೆ ಶಿಕ್ಷಣ ಕೊಡುವುದು ತಂದೆಯ ಕರ್ತವ್ಯ.” ಜಗನ್ನಾಥಮಿಶ್ರರು ಹೇಳಿದರು. ಆಗ ಆ ಬ್ರಾಹ್ಮಣನು ಅವರೊಂದಿಗೆ ಕೆಲವು ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡಿದನು. ಪುತ್ರನ ಮೇಲೆ ಅತೀವ ವಾತ್ಸಲ್ಯವಿರಿಸಿದ್ದ ಮಿಶ್ರರಿಗೆ ಬೇರೇನೂ ತಿಳಿದುಕೊಳ್ಳುವ ಮನಸ್ಸಿರಲಿಲ್ಲ. ಸಂತೋಷಗೊಂಡ ಬ್ರಾಹ್ಮಣನು ಹೊರಟು ಹೋದನು.
ನಿದ್ರೆಯಿಂದ ಎಚ್ಚೆತ್ತ ಮಿಶ್ರರಿಗೆ ಸ್ವಪ್ನವನ್ನು ನೆನೆದು ಆಶ್ಚರ್ಯವಾಯಿತು. ತಮ್ಮ ಸ್ನೇಹಿತರಿಗೂ ಬಂಧುಗಳಿಗೂ ಅದರ ಬಗ್ಗೆ ಹೇಳಿದರು. ಎಲ್ಲರಿಗೂ ಅದನ್ನು ಕೇಳಿ ಆಶ್ವರ್ಯವಾಯಿತು.
ಹೀಗೆ, ಗೌರ ಹರಿಯೆಂದೂ ಕರೆಯಲಾಗುತ್ತಿದ್ದ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಅದ್ಭುತ ಬಾಲಲೀಲೆಗಳಿಂದ ಎಲ್ಲರ ಮನಸೆಳೆವ ಮುದ್ದು ಕಂದನಾಗಿ ಬೆಳೆದರು.






Leave a Reply