ರಥಯಾತ್ರೆ:ಕೃಷ್ಣಭಕ್ತಿಯ ಮಹಾಜಾತ್ರೆ

ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣ, ಸುಭದ್ರೆ, ಬಲರಾಮರನ್ನು ನೋಡಲು ಕಾತರಿಸಿ, ಬಂದ ಗೋಪಗೋಪಿಯರ ಹಿಂಡೊಂದು ಶ್ರೀಕೃಷ್ಣನನ್ನು ಸುತ್ತುವರಿದಿದೆ. ವನಮಾಲಿ, ಗೋಗಾಹಿ, ಗೋಪಬಾಲ ಗೋಕುಲ ಕೃಷ್ಣನ ಬಗ್ಗೆ ಅತೀವ ಭಕ್ತಿಪ್ರೇಮ ತುಂಬಿದ್ದ ಗೋಪಿಯರು, ಗೋಪರು ಕೃಷ್ಣ ಬಲರಾಮರನ್ನು, ಗೋಕುಲ-ವೃಂದಾವನಕ್ಕೆ ಬರುವಂತೆ ಕರೆಯುತ್ತಿದ್ದಾರೆ. “ಭುವನೇಂದ್ರನಾದ, ರಾಜನಾದ ಶ್ರೀಕೃಷ್ಣನನ್ನು ನಾವೊಲ್ಲೆವು! ಅದೇ ಗೋಪಾಲಕೃಷ್ಣನನ್ನು ನಾವು ಕಾಣಬಯಸುತ್ತೇವೆ” ಎಂದು ಸ್ವತಃ ಶ್ರೀರಾಧಾರಾಣಿ ಹೇಳುತ್ತಿದ್ದಾರೆ. ಎಲ್ಲರಲ್ಲೂ ಬಾವೋದ್ವೇಗ.

ಕೃಷ್ಣ ಬಲರಾಮ, ಸುಭದ್ರೆಯರು, ವೃಂದಾವನಕ್ಕೆ ಬರಲು ಒಪ್ಪಿದರು. ಆನಂದ ತುಂದಿಲರಾದ ಗೋಪಗೋಪಿಯರು, ಶ್ರೀಕೃಷ್ಣ ಬಲರಾಮ ಮತ್ತು ಸುಭದ್ರೆಯರನ್ನು ರಥಗಳಲ್ಲಿ ತರುತ್ತಿದ್ದಂತೆ, ಭಾವೋದ್ವೇಗ ಭರಿತರಾದರು. ಹಲವು ವರ್ಷಗಳ ಮೇಲೆ ಕೃಷ್ಣ ನಮ್ಮ ಊರಿಗೆ, ನಮ್ಮ ಕೇರಿಗೆ, ನಮ್ಮ ಮನೆಗೆ, ನಮ್ಮಲ್ಲಿಗೆ ಬರುತ್ತಿದ್ದಾನೆ ಎಂಬುದು ಅವರೆಲ್ಲರನ್ನು ಅತ್ಯಂತ ಆನಂದಭರಿತರನ್ನಾಗಿಸಿತು.

ರಥದ ಕುದುರೆಗಳು, ಸಾರಥಿ, ರಾಜನ ಮುಂದಿನ ಪಹರೆ, ಪ್ರಹರಿಗಳ ಯಾವ ಗೋಜು ಅವರನ್ನು ಬಾಧಿಸಲಿಲ್ಲ. ಮುನ್ನುಗ್ಗಿದರು. ಕೃಷ್ಣಾ! ಕೃಷ್ಣಾ! ಬಲರಾಮಾ ಎಂದು ಉದ್ಗರಿಸುತ್ತಾ, ರಥಗಳನ್ನು ತಾವೇ ಸಂತೋಷಾತಿರೇಕದಿಂದ ಎಳೆದು, ವೃಂದಾವನಕ್ಕೆ ಹೊರಟರು.

ಶ್ರೀಕೃಷ್ಣ ಸುಭದ್ರೆ, ಬಲರಾಮರ ಈ “ರಥಯಾತ್ರೆ” ಜನಮಾನಸದಲ್ಲಿ, ಭಕ್ತರ ಕಣ್ಣಿನಲ್ಲಿ ಉಳಿದು ಬಿಟ್ಟಿದೆ. ಇದರ ಸಂಸ್ಮರಣೆಯೇ, ಪುರಿಯ ಜಗನ್ನಾಥ ದೇವಾಲಯದಲ್ಲಿ ಪ್ರತಿ ಜೂನ್‌, ಜುಲೈ ಮಾಸದಲ್ಲಿ ನಡೆಯುವ ಬೃಹತ್‌ ರಥೋತ್ಸವ.

ಪುರಿಯ ರಥೋತ್ಸವವು ಭಾರತದ ಎಲ್ಲಾ ದೇವಾಲಯಗಳಲ್ಲಿ ನಡೆಯುವ ವೈವಿಧ್ಯಮಯ ಉತ್ಸವಗಳಲ್ಲಿ ಅಗ್ರಗಣ್ಯವಾದ, ಜನಾದರಣೆ ಪಡೆದ ಉತ್ಸವ. ಅಕ್ಷರಶಃ ಲಕ್ಷಾಂತರ ಜನ ಈ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.

ಭಾರತದ ಎಲ್ಲಾ ಪಂಥ-ಪಂಗಡಗಳ (ಅದ್ವೈತ ಆಚಾರ್ಯರಾದ ಶ್ರೀ ಶಂಕರಾಚಾರ್ಯರೂ ಸೇರಿದಂತೆ) ಭಕ್ತರು ರಥಯಾತ್ರೆಯನ್ನು ಕೊಂಡಾಡಿದ್ದಾರೆ. ಸ್ತೋತ್ರ ಬರೆದಿದ್ದಾರೆ. ಪುರಿಯ ಜಗನ್ನಾಥ ರಥಯಾತ್ರೆಯು ಜನಸಾಮಾನ್ಯರಲ್ಲಿ ರಥಯಾತ್ರೆಯ, ಒಂದು ಪ್ರಬಲ ಸಂಕೇತವಾಗಿ ಶತಮಾನಗಳಿಂದ ಉಳಿದು ಬಂದಿದೆ. ಜಗನ್ನಾಥ ಸ್ವಾಮಿಯ ಈ ರಥೋತ್ಸವವು ಆಳವಾಗಿ ಜನಮಾನಸದಲ್ಲಿ ಬೇರೂರಿದೆ. ಅವರಲ್ಲಿ ಜಾಗೃತಿ ಮೂಡಿಸಲು, ಇಸ್ಕಾನ್‌ ಜಗತ್ತಿನಾದ್ಯಂತ ರಥಯಾತ್ರೆಗಳನ್ನು ಸಂಘಟಿಸುತ್ತಿದೆ.

ಇಸ್ಕಾನ್‌ ದೇವಾಲಯಗಳು ಸಂಘಟಿಸುವ ರಥಯಾತ್ರೆಗಳು, ಪುರಿಯ ಜಗನ್ನಾಥನ ರಥಯಾತ್ರೆಯ ಸಂಸ್ಮರಣಾ ಉತ್ಸವಗಳೇ ಆದರೂ, ಪುರಿಯಲ್ಲಿ ರಥಯಾತ್ರೆ ನಡೆಯುವಾಗಲೇ ಇಲ್ಲಿ ನಡೆಯುತ್ತವೆ ಎಂದೇನೂ ಅಲ್ಲ. ಕರ್ನಾಟಕದಲ್ಲಿಯೂ ಸಹ ಇಸ್ಕಾನ್‌ ಹಾಸನ, ಮಂಗಳೂರು, ಮೈಸೂರು, ಹುಬ್ಬಳಿ ಮತ್ತು ಬೆಂಗಳೂರಿನಲ್ಲಿ ರಥಯಾತ್ರೆಗಳನ್ನು ಸಂಘಟಿಸುತ್ತಿದ್ದು ಇವು ಜನವರಿ- ಫೆಬ್ರವರಿಯಲ್ಲಿ ನಡೆಯುತ್ತವೆ.

“ರಥ” ಯಾತ್ರೆಯ ಸಾಂಸ್ಕೃತಿಕ, ಪೌರಾಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಮಹತ್ವಗಳನ್ನು ಈ ಸಂದರ್ಭದಲ್ಲಿ ನಾವು ಒಂದಿಷ್ಟು ವಿ‍ಶ್ಲೇಷಿಸೋಣ.

“ರಥ” ಎಂಬ ಶಬ್ದ- ವಾಹನ ಎಂದು ಕರೆಯಬಹುದಾದ ಸಮಾನಾರ್ಥಕ ಪದವಾದರೂ ಅದು ಬರೀ ವಾಹನವಲ್ಲ. “ರಥ”ದ ಉಲ್ಲೇಖವು ಋಗ್ವೇದದಿಂದ ಆರಂಭಿಸಿ, 21ನೇ ಶತಮಾನದವರೆಗಿನ ಎಲ್ಲಾ ಸಾಹಿತ್ಯದಲ್ಲೂ ವರ್ಣಿತವಾಗಿದೆ. “ರಥ”ದ ಬಗ್ಗೆ ಪಾಣಿನಿಯು ಸಹ ತನ್ನ ಅಷ್ಠಾಧ್ಯಾಯಿಯಲ್ಲಿ ಉಲ್ಲೇಖಿಸುತ್ತಾನೆ. ರಥಸ್ತ, ರಥಾಂಗ, ರಥ ಗನಕ ಹೀಗೆ ಪಾಣಿನಿಯು ರಥ ಸಂಬಂಧಿ ಪದಗಳನ್ನು ವಿವರಿಸುತ್ತಾ ಸಾಗುತ್ತಾನೆ. ರಾಮಾಯಣದಲ್ಲಿ ವೈವಿಧ್ಯಮಯವಾದ ರಥಗಳ ವರ್ಣನೆಯಿದೆ.

ರಥವು ಸಾಮಾನ್ಯರ ವಾಹನವಾಗಿರದೆ, ಗಣ್ಯರ ವಾಹನವಾಗಿತ್ತೆಂದು ರಾಮಾಯಣ ವಿವರಿಸುತ್ತದೆ. “ರಥ” ಎಂಬ ಪದಕ್ಕೆ Car ಎಂಬ ಇಂಗ್ಲಿಷ್‌ ಪರ್ಯಾಯ ಪದವನ್ನು ಮೊದಲು ಜೋಡಿಸಿದ, ಪ್ರೊ.ಆಷ್ಟೆಯವರು ಸಹ “ರಥ” ವೆಂಬುದು ಅತೀ ಪ್ರಾಚೀನ ಕಾಲದಿಂದ ಗಣ್ಯರ ಓಡಾಟದ ವಾಹನ ಎಂದು ವಿವರಿಸಿದ್ದಾರೆ. Car ಸಹ ಗಣ್ಯರ ಓಡಾಟದ ವಾಹನವಾಗಿಯೇ ಉಳಿದಿಲ್ಲವೆ!

ಆಟೋಟಗಳಿಗೆ ಬಳಸುತ್ತಿದ್ದ ರಥಗಳನ್ನು “ಪುಷ್ಪ” ಎಂದು, ದೇವತೆಗಳ ರಥಗಳನ್ನು “ಮಾರುತ” ಎಂದೂ, ರಾಮಾಯಣ ವಿವರಿಸುತ್ತದೆ. ಭೂಮಿಯಂತೆ, ಆಕಾಶದಲ್ಲಿ ಹಾರಾಡುತ್ತಿದ್ದ, 2-3 ಅಂತಸ್ತುಗಳಿದ್ದ ಕುದುರೆಗಳೂ ಇರುವ ರಥಗಳನ್ನು “ವಿಮಾನ”ಗಳೆಂದು ಕರೆಯಲಾಗುತ್ತಿತ್ತೆಂದು ಯಾಸ್ಕರು ತಮ್ಮ ನಿರುಕ್ತದಲ್ಲಿ (ವೇದಾರ್ಥ ಶಬ್ದಕೋಶ) ವಿವರಿಸಿದ್ದಾರೆ.

ರಥಗಳ ಪ್ರಾಚೀನತೆಯಂತೆ, ಅವುಗಳ ಸಾಂಸ್ಕೃತಿಕ ಮಹತ್ವವೂ ಅಪಾರವಾಗಿದೆ. ಇಡೀ ದಕ್ಷಿಣ ಭಾರತದಾದ್ಯಂತ, ಬ್ರಹೋತ್ಸವದಲ್ಲಿ ಬ್ರಹ್ಮ ರಥಗಳನ್ನು ಎಳೆಯಲಾಗುತ್ತದೆ. ಭಗವಂತನನ್ನು ನಿತ್ಯದರ್ಶನ ಮಾಡಲಾಗದವರು, ಯಾವುದೋ ಕಾರಣಕ್ಕೆ ಗುಡಿಯ ಒಳಹೊಕ್ಕು ದರ್ಶನ ಮಾಡಲಾಗದವರು, ಪರಿತಪಿಸಬೇಕಾಗಿಯೇ ಇಲ್ಲ. ಭಗವಂತ ತಾನೇ, ಭಕ್ತರೆಲ್ಲರ ಬಳೀ ಸಾರಿ, ಬರುವ ಈ ಪ್ರಕ್ರಿಯೆ ಜಗತ್ತಿನ ಬೇರೆಲ್ಲಿಯೂ ಕಾಣಲಾಗುವುದಿಲ್ಲ.

ಭಗವಂತನೇ ನಮ್ಮ ಬಳಿ ಸಾರಿ ಬರುತ್ತಾನೆಂದರೆ, ಸಂಭ್ರಮಿಸದಿರುವವರು ಯಾರು? ಹಾಗಾಗಿ ರಥಯಾತ್ರೆಯ ಸುತ್ತಾ, ಸಂಗೀತಾದಿ ವಿವಿಧ ಸೇವೆಗಳು, ಜಾತ್ರೆ ಮಹೋತ್ಸವಗಳು, ವಸಂತೋತ್ಸವ, ಉರುಟಣೆ, ಉಯ್ಯಾಲೆ, ತೆಪ್ಪೋತ್ಸವಾದಿ ಸೇವೆಗಳು ನಡೆಯುತ್ತವೆ. ಸಮುದಾಯ ಪ್ರಜ್ಞೆ ವಿಶೇಷವಾಗಿ ವಿಕಸನವಾಗಿ, ವ್ಯಕ್ತಿಗಳಲ್ಲಿ ಸಮಷ್ಟಿಯ ಕಲ್ಪನೆ ತಾನೇ ತಾನಾಗಿ ಜಾಗೃತವಾಗುತ್ತದೆ. ಹಾಗಾಗಿ, “ರಥಯಾತ್ರೆ”ಗಳು ಇಂದಿಗೂ ಪ್ರಸ್ತುತವಾಗಿವೆ.

ಜಗನ್ನಾಥಸ್ವಾಮಿಯ ರಥಯಾತ್ರೆಯ ಉಲ್ಲೇಖ ಪುರಾಣಗಳಲ್ಲಿ ವ್ಯಾಪಕವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಬ್ರಹ್ಮ ಪುರಾಣದಲ್ಲಿ ರಥಯಾತ್ರೆಯ ವೈಶಿಷ್ಟ್ಯಗಳನ್ನು, ಪ್ರಾಮುಖ್ಯತೆಯನ್ನು, ರಥದ ವರ್ಣನೆಯನ್ನೂ ಗಮನಿಸಬಹುದು. ಪದ್ಮ ಹಾಗೂ ಸ್ಕಂಧ ಪುರಾಣಗಳಲ್ಲಿಯೂ ಸಹ ಪುರಿಯ ಜಗನ್ನಾಥಸ್ವಾಮಿ ರಥಯಾತ್ರೆಯ ವಿಷಯ ವರ್ಣನೆಗಳು, ಪ್ರಸ್ತಾಪಗಳೂ ಇವೆ. (ಉಲ್ಲೇಖ: Epigraphica Indica – Vol̤ xxx̧v pp 171-17̧7 1963-34 Edition)

ಪುರಿಯ ಜಗನ್ನಾಥ ರಥಯಾತ್ರೆ ಶತಮಾನಗಳಿಂದ ಸಂಸ್ಕೃತ ಹಾಗೂ ದೇಶೀಯ ಭಾಷೆಯ ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿದೆ. ಒರಿಯ ಭಾಷೆಯ ಸಾಹಿತ್ಯದ ಮೇಲೆ ಸಹಜವಾಗಿಯೇ ವಿಶೇಷ ಪ್ರಭಾವ ಬೀರಿದೆ. ಕೊನಾರ್ಕ್‌ ರಥಯಾತ್ರೆ, ಭುವನೇಶ್ವರದ ರಥಯಾತ್ರೆ (ಪ್ರತಿಷ್ಠಾ ಮತ್ತು ದೇವ ದಾಮನ ರಥಗಳೆಂದು ಇವು ಪ್ರಖ್ಯಾತಿ ಪಡೆದಿವೆ)ಗಳು ಸಹ ಶತಮಾನಗಳಿಂದ ಜರುಗುತ್ತಿದ್ದು, ಸಹಸ್ರಾರು ಜನರನ್ನು ಆಕರ್ಷಿಸುತ್ತವೆ.

ಈ ರಥಯಾತ್ರೆಯೇ ಪ್ರೇರಣೆಯಾಗಿದೆಯೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕಪಿಲಮುನಿಯ ಕಪಿಲ ಸಂಹಿತದಲ್ಲಿ ಹಲಾಧರ ಮಿಶ್ರನ ವಸಂತೋತ್ಸವ ಕಾವ್ಯದಲ್ಲಿ, ಚಕ್ರರಾಣಿ ಪಟ್ನಾಯಕ ಗುಂಡೇಚ ಚಂಪೂನಿನಲ್ಲಿ, ಭಾಗವತ ವರ್ಣನೆಗಳಿವೆ. ಈ ಎಲ್ಲಾ ಉಲ್ಲೇಖಗಳು, ರಥಯಾತ್ರೆಯ ಸಂದರ್ಭದಲ್ಲಿ ಆರು ರಥಗಳಿದ್ದವೆಂದು ತಿಳಿಸುತ್ತವೆ.

ಚೀನಿ ಪ್ರವಾಸಿ ಫಾಹಿಯಾನನು ರಥಯಾತ್ರೆಯ ಉಲ್ಲೇಖವನ್ನು ವಿಶೇಷವಾಗಿ ಮಾಡುತ್ತೇನೆ. “ಉತ್ಸವ ಮೂರ್ತಿಗಳು ನೂರು ಮೀಟರ್‌ ದೂರದಲ್ಲಿರುವಾಗಲೇ, ರಾಜನು ತನ್ನ ಕಿರೀಟ, ಪೇಟಗಳನ್ನು ತೆಗೆದಿರಿಸಿ, ಬರೀ ಕಾಲಲ್ಲಿ, ಶಸ್ತ್ರ ರಹಿತವಾಗಿ ನಡೆದು ಬರುತ್ತಾನೆ. ಕೈಯಲ್ಲಿ ಹೂವುಗಳು, ಸುಗಂಧ ದ್ರವ್ಯಗಳು ತುಂಬಿದ ಹರಿವಾಣ ಹಿಡಿದಿರುತ್ತಾನೆ. ಮೂರ್ತಿಗಳನ್ನು ಸಮೀಪಿಸುತ್ತಿದ್ದಂತೆ ನೆಲದ ಮೇಲೆ ಶಿರಸ್ಸನ್ನೂರಿ, ನಮಸ್ಕರಿಸಿ ರಾಜ ಗೌರವ ತೋರುತ್ತಾನೆ.

ಹೂವನ್ನು ಅರ್ಪಿಸಿ, ಸುಗಂಧ ದ್ರವ್ಯ ಸಿಂಪಡಿಸಿ, ಧೂಪ ಹಾಕುತ್ತಾನೆ. ತಾನೇ ಮುಂದೆ ಬಂದು, ಬಂಗಾರದ ಹಿಡಿ ಇರುವ ಉಪಕರಣವೊಂದರ ಸಹಾಯದಿಂದ ಬೀದಿಯ ಕಸವನ್ನು ಗುಡಿಸುತ್ತಾನೆ. ರಥ ಚಲಿಸುತ್ತಾ ಅರಮನೆ ಸಮೀಪಿಸುತ್ತಿದ್ದಂತೆ, ಆತನ ರಾಣಿಯರು ಅಂತಃಪುರ ನಿವಾಸಿಗಳು ಎರಡೂ ಬದಿಗೆ ನಿಂತು ಗೌರವಿಸುತ್ತಾರೆ.

ಇದೊಂದು ಬೃಹತ್‌ ಉತ್ಸವ. ಚಕ್ರಾಧಿಪತ್ಯದ ದೊಡ್ಡ ಸಂಭ್ರಮ” ಶ್ರೀರಂಗ, ಮೇಲುಕೋಟೆ, ದ್ವಾರಕಾ, ಅಹೋಬಲ, ಪಂಢರಾಪುರ, ಕಾಂಜೀವರಂ, ಶ್ರೀ ಪರೆಂಬದೂರು, ಉಡುಪಿ ಮುಂತಾದ ಎಲ್ಲಾ ಪ್ರಸಿದ್ಧ ಕ್ಷೇತ್ರದಲ್ಲಿ ಜರುಗುವ ರಥಯಾತ್ರೆಗಳಲ್ಲಿ ಅಲ್ಲಿನ ದೇವರಿಗೆ ಒಂದು ರಥವಿರುತ್ತದೆ. ಆದರೆ ಪುರಿಯ ಜಗನ್ನಾಥಸ್ವಾಮಿಯ ರಥಯಾತ್ರೆಯಲ್ಲಿ 3 ಪ್ರಮುಖ ಪ್ರತ್ಯೇಕ ರಥಗಳಿರುತ್ತವೆ.

ಇಸ್ಕಾನ್‌ನಲ್ಲಿ ರಥಯಾತ್ರೆಯು ಮೊದಲ ಬಾರಿಗೆ  ಸ್ಯಾನ್‌ ಫ್ರಾನ್ಸಿಸ್‌ಕೋ ನಗರದಲ್ಲಿ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು. ಶ್ರೀಲ ಪ್ರಭುಪಾದರು ಸ್ವತಃ ಸಂಕೀರ್ತನೆ ಮಾಡುತ್ತಾ ಮುಂಚೂಣಿಯಲ್ಲಿದ್ದರು. ಜುಲೈ 9, 1967 ರಂದು ನಡೆದ ಮೊದಲ ರಥಯಾತ್ರೆಯಲ್ಲಿ ಅಲಂಕೃತರಾದ ಜಗನ್ನಾಥ, ಸುಭದ್ರ ಹಾಗೂ ಬಲರಾಮರ ವಿಗ್ರಹಗಳಿದ್ದವು.

ಹೀಗೆ ಆರಂಭವಾದ ರಥಯಾತ್ರೆಯು ಮುಂದೆ ಅದೆಷ್ಟು ಬಹುಜನ ಪ್ರಿಯವಾಯಿತೆಂದರೆ, ಸ್ಯಾನ್‌ ಫ್ರಾನ್ಸಿಸ್‌ಕೋ ನಗರದ ಮೇಯರ್‌ ರಥಯಾತ್ರೆಯ ದಿನವನ್ನು ರಜಾದಿನವಾಗಿ ಘೋಷಿಸಿದ್ದರು.

ಲಂಡನ್‌ನಲ್ಲಿ ಸಹ ರಥಯಾತ್ರೆ ಬಹು ಪ್ರಸಿದ್ಧಿ ಹೊಂದಿತು. ಒಂದೊಮ್ಮೆ ಲಂಡನ್‌ನಲ್ಲಿನ ರಥಯಾತ್ರೆಗೆ 15,000 ಕ್ಕೂ ಹೆಚ್ಚು ಜನ ಸೇರಿದ್ದರು. ನೆಲ್ಸನ್‌ ಕಾಲಂ ಕಟ್ಟಡದ ಮುಂದೆ ಹಾದು, ಅದರ ಪಕ್ಕದಲ್ಲಿಯೇ ರಥಯಾತ್ರೆ ಸಾಗಿಬಂತು. ಪತ್ರಿಕೆಗಳಲ್ಲಿ ಈ ಬಗ್ಗೆ ದೊಡ್ಡ ಉದ್ಗಾರ.

ಸುಪ್ರಸಿದ್ಧ ಗಾರ್ಡಿಯನ್‌ ಪತ್ರಿಕೆ “ಇತಿಹಾಸ ಮಾಡಿದ ಹರೇಕೃಷ್ಣ ರಥಯಾತ್ರೆ”ಯೆಂಬ ಶೀರ್ಷಿಕೆಯಡಿ ಇತಿಹಾಸದಲ್ಲಿ ಪ್ರಖ್ಯಾತವಾದ ನೆಲ್ಸನ್‌ ಕಾಲಂ ಕಟ್ಟದ ಪಕ್ಕದಲ್ಲಿ ರಥ ನಿಂತಾಗ, ಅದರ ಎತ್ತರ “ನೆಲ್ಸನ್‌ ಕಾಲಂ” ಕಟ್ಟಡಕ್ಕಿಂತ ಹಲವು ಅಡಿಯಷ್ಟು ದೊಡ್ಡದಾಗಿತ್ತು. ಇತಿಹಾಸವನ್ನು ಹರಿದು ಹಾಕಿ, ದಾಖಲೆ ಮಾಡುತ್ತಾ ಇಸ್ಕಾನ್‌ ಬೆಳೆಯುತ್ತಿದೆ” ಎಂದೆಲ್ಲಾ ಬರೆಯಿತು.

“ಟ್ರಫಾಲ್ಗರ್‌ ಸ್ಕ್ವೇರ್‌” ಎಂಬ ಮುಖ್ಯ ಚೌಕದಲ್ಲಿರುವ ಈ ಕಟ್ಟಡ ಐತಿಹಾಸಿಕವಾಗಿತ್ತು. ಇದು ಲಂಡನ್ನಿನ ಪ್ರಮುಖ ಕಟ್ಟಡ ಮತ್ತು ಅತೀ ಎತ್ತರದ ಕಟ್ಟಡಗಳಲ್ಲೊಂದು. ಶ್ರೀಲ ಪ್ರಭುಪಾದರು ಇದನ್ನು ಕೇಳಿ, ಒಂದೆಡೆ ಉದ್ಗರಿಸಿದರು” Here afterwords it is not Nelson It is Lord Jagannatha!

ಪ್ರಭುಪಾದರು ಹಾಕಿಕೊಟ್ಟ ಸಂಪ್ರದಾಯದಂತೆ ಇಸ್ಕಾನ್‌ ರಥಯಾತ್ರೆಗಳನ್ನು ಸಂಘಟಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಇದು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜನಪ್ರಿಯತೆಯನ್ನು ಪಡೆಯುತ್ತಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi