ಶ್ರೀಮತಿ ಪದ್ಮಿನಿ ಬಾಲು
ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ.

ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ ಮೌಲ್ಯಗಳ ಸಂದೇಶವನ್ನು ತಿಳಿಸಿ ಹೇಳುವ ಕಾವ್ಯ ಮಾತ್ರವಾಗಿರಬಾರದೇಕೆ ಎಂದು ಪ್ರಶ್ನಿಸುವವರು ಅನೇಕರಿದ್ದಾರೆ. ಇಂತಹವರ ವಿತಂಡ ವಾದಕ್ಕೆ ಭಗವದ್ಗೀತೆಯ ಇತಿಹಾಸವನ್ನು ಹಂತ ಹಂತವಾಗಿ ನೀಡುವುದರ ಮೂಲಕ ಅವರ ಸಂದೇಹವನ್ನು ಪರಿಹರಿಸಿದ್ದಾರೆ.
(ಭಗವದ್ಗೀತಾ 4.1)
ಶ್ರೀ ಭಗವಾನುವಾಚ:
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾದ ಹಮವ್ಯಯಮ್|
ವಿವಸ್ವಾನ್ಮವೇ ಪ್ರಾಹ
ಮನುರಿಕ್ಷ್ವಾವೇsಬ್ರವೀತ್||
“ದೇವೊತ್ತಮ ಪುರಷನಾದ ಶ್ರೀಕೃಷ್ಣನು ನುಡಿದನು: ಅನಂತವಾದ ಈ ಯೋಗ ವಿಜ್ಞಾನವನ್ನು ನಾನು ಸೂರ್ಯದೇವ ವಿವಸ್ವಾನನಿಗೆ ಉಪದೇಶಿಸಿದೆನು, ನಂತರ ವಿವಸ್ವಾನನು ಮಾನವ ಕುಲಪಿತ ಮನುವಿಗೆ ಉಪದೇಶ ಮಾಡಿದನು, ಮುಂದುವರೆದು ಮನುವು ಇದನ್ನು ಇಕ್ಷ್ವಾಕು ಮಹಾರಾಜನಿಗೆ ಉಪದೇಶಿಸಿದನು.”

ಮೇಲಿನ ಶ್ಲೋಕವು ನಮಗೆ ಭಗವದ್ಗೀತೆಯು ಸೂರ್ಯಲೋಕದ ಅಧಿಪತಿಯಾದ ವಿವಸ್ವಾನನಿಗೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನಿಂದ ಉಪದೇಶಿತವಾಗಿ, ನಂತರ ಮನುವಿಗೆ ಮತ್ತು ಶ್ರೀರಾಮಚಂದ್ರನು ಅವತರಿಸಿದ ರಘುವಂಶದ ಪೂರ್ವಜ, ಇಕ್ಷ್ವಾಕು ಮಹಾರಾಜನಿಗೆ ನೀಡಲ್ಪಟ್ಟಿತು. ಈ ಕಾಲಮಾನಗಳನ್ನು ಪರಿಗಣಿಸಿ ಭಗವದ್ಗೀತೆಯು ಎಷ್ಟು ಪುರಾತನವೆಂದು ಶ್ರೀ ಪ್ರಭುಪಾದರು ಕ್ರಮವಾಗಿ ಲೆಕ್ಕಹಾಕಿದ್ದಾರೆ. 4,32,000 ವರ್ಷಗಳ ಪರ್ಯಂತ ನಡೆಯುವ ಕಲಿಯುಗದಲ್ಲಿ ಈಗ ಕೇವಲ ಐದು ಸಾವಿರ ವರ್ಷಗಳು ಕಳೆದಿವೆ.
ಇದಕ್ಕೆ ಮೊದಲು ದ್ವಾಪರ ಯುಗದಲ್ಲಿ 8,00,000 ವರ್ಷಗಳು ಮತ್ತು ತ್ರೇತಾಯುಗದಲ್ಲಿ 12,00,000 ವರ್ಷಗಳು ಕಳೆದಿವೆ. ಇಕ್ಷ್ವಾಕು ಜೀವಿಸಿದ ಯುಗ ತ್ರೇತಾಯುಗ. ಹೀಗೆ 20,05,000 ವರ್ಷಗಳ ಹಿಂದೆ ಮನು ತನ್ನ ಪುತ್ರ, ಶಿಷ್ಯ ಮತ್ತು ಭೂಲೋಕದ ಅಧಿಪತಿಯಾದ ಇಕ್ಷ್ವಾಕು ಮಹಾರಾಜನಿಗೆ ಭಗವದ್ಗೀತೆಯನ್ನು ಉಪದೇಶಿಸಿದನು. ಈಗಿರುವ ಮನುವಿನ ಆಯುರ್ಮಾನವು 30,53,00,000 ವರ್ಷಗಳೆಂದು ಲೆಕ್ಕ ಹಾಕಲಾಗಿದೆ. ಇದರಲ್ಲಿ ಈಗಾಗಲೇ 12,04,00,000 ವರ್ಷಗಳು ಕಳೆದಿವೆ.
ಮನುವು ಹುಟ್ಟುವುದಕ್ಕಿಂತಲೂ ಮೊದಲೇ ಶ್ರೀಕೃಷ್ಣನು ಗೀತೆಯನ್ನು ತನ್ನ ಶಿಷ್ಯನಾದ ಸೂರ್ಯದೇವ ವಿವಸ್ವಾನನಿಗೆ ಉಪದೇಶಿಸಿದನೆಂದು ತಿಳಿಸಿರುವುದರಿಂದ ಕನಿಷ್ಠ ಪಕ್ಷ 12,04,00,000 ವರ್ಷಗಳಿಗಿಂತ ಹಿಂದೆಯೇ ಶ್ರೀಮದ್ಭಗವದ್ಗೀತೆಯನ್ನು ಉಪದೇಶಿಸಲಾಗಿದೆಯೆಂದು ಸ್ಥೂಲವಾಗಿ ಅಂದಾಜು ಮಾಡಬಹುದು.
ಭಗವದ್ಗೀತೆಯು ಅರ್ಪೂವ, ಅಮೂಲ್ಯ ಮತ್ತು ಅಪೌರುಷೇಯ. ಆದ್ದರಿಂದಲೇ ಶ್ರೀಕೃಷ್ಣನು ಇದನ್ನು ತನಗೆ ಅತ್ಯಂತ ಪ್ರಿಯನಾದವನೂ ಮತ್ತು ನಂಬಿಕಸ್ಥನೂ ಆದ ವಿವಸ್ವಾನನ ಕೈಲಿಟ್ಟನು. ಪುರುಷ ಸೂಕ್ತದಲ್ಲಿ “ಚಕ್ಷೋ ಸೂರ್ಯೋ ಅಜಾಯತ” (ಸೂರ್ಯನು ಭಗವಂತನ ಕಣ್ಣುಗಳಿಂದ ಹುಟ್ಟಿದನು) ಎಂದು ಹೇಳಿದೆ. ಸೂರ್ಯನು ಗ್ರಹಮಂಡಲದ ಅಧಿಪತಿ. ಮನವು ಮಾನವ ಕುಲದ ಅಧಿಪತಿ. ಇಕ್ಷ್ವಾಕು ಭೂಲೋಕಾಧಿಪತಿ.
ಗೀತೆಯೆಂಬ ರತ್ನವನ್ನು ಪರಂಪರಾಗತವಾಗಿ ಸತ್ಪಾತ್ರರಿಗೆ ನೀಡುವ ಮೂಲಕ ಶ್ರೀಕೃಷ್ಣನು ಆಳುವವರಿಗೆ ಭಗವದ್ಗೀತಾ ಜ್ಞಾನವು ಎಷ್ಟು ಅವಶ್ಯಕವೆಂಬುದನ್ನು ತೋರಿಸಿದ್ದಾನೆ.
ಕಾಲಾನುಕ್ರಮದಲ್ಲಿ ಈ ಸರ್ವೋತ್ಕೃಷ್ಟ ವಿಜ್ಞಾನವು ಖಿಲವಾಯಿತೆಂದು ಶ್ರೀಕೃಷ್ಣನು ತಿಳಿಸುತ್ತಾನೆ ಮತ್ತು ಪುನಶ್ಚೇತನಗೊಳಿಸಲು ಕುರುಕ್ಷೇತ್ರ ರಣರಂಗದಲ್ಲಿ ಅರ್ಜುನನಿಗೆ ಬೋಧಿಸುತ್ತಾನೆ.

ಸ ಏವಾಯಂ ಮಾಯಾ ತೇsದ್ಯ ಯೋಗಃ ಪ್ರೋಕ್ತಃ ಪುರಾತನ|
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್|| (ಭಗವದ್ಗೀತಾ 4.3)
“ಪ್ರಾಚೀನವಾದ ಮತ್ತು ಭಗವತ್ಸಂಬಂಧವಾದ ಗೀತಾ ಜ್ಞಾನವನ್ನು ನಾನು ಇಂದು ನಿನಗೆ ಧಾರೆಯೆರೆಯುತ್ತಿದ್ದೇನೆ. ನೀನು ನನ್ನ ಪ್ರಿಯ ಸಖನೂ ಮತ್ತು ಭಕ್ತನೂ ಆಗಿರುವ ಕಾರಣ ಈ ವಿಜ್ಞಾನದ ರಹಸ್ಯವನ್ನು ಅರಿಯಬಲ್ಲೆ.”
ಆದರೆ ಸೂರ್ಯದೇವನು ಶ್ರೀಕೃಷ್ಣನಿಗಿಂತಲೂ ಮೊದಲು ಹುಟ್ಟಿದವನು.
ಹೀಗಿರುವಾಗ ಶ್ರೀಕೃಷ್ಣನು ವಿವಸ್ವಾನನಿಗೆ ಗೀತೆಯನ್ನು ಉಪದೇಶಿಸಲು ಹೇಗೆ ಸಾಧ್ಯ ಎಂಬ ಅನುಮಾನ ಸಾಮಾನ್ಯರಿಗೆ ಉಂಟಾಗಬಹುದು. ಇಂತಹ ಅನುಮಾನವನ್ನು ಪರಿಹರಿಸಲು ಅರ್ಜುನನು ಭಗವಂತನನ್ನು ವಿನೀತವಾಗಿ ಪ್ರಶ್ನಿಸುತ್ತಾನೆ.
ಅಪರಂ ಭವತೋ ಜನ್ಮಪರಂ ಜನ್ಮ ವಿವಸ್ವತಃ|
ಕಥಮೇತದ್ ವಿಜಾನೀಯಾಂ
ತ್ವಮಾದೌ ಪ್ರೋಕ್ತವಾನಿತಿ||
(ಭಗವದ್ಗೀತಾ 4.4)

“ಸೂರ್ಯ ದೇವನು ಹುಟ್ಟಿನಲ್ಲಿ ನಿನಗಿಂತಲೂ ಹಿರಿಯನು. ಪ್ರಾರಂಭದಲ್ಲಿ ಈ ವಿಜ್ಞಾನವನ್ನು ವಿವಸ್ವಾನನಿಗೆ ಬೋಧಿಸಿದೆಯೆಂಬುದರ ಅರ್ಥವೇನು?”
ಇದಕ್ಕೆ ಉತ್ತರವಾಗಿ ದೇವೋತ್ತಮ ಪರಮ ಪುರುಷ ಕೃಷ್ಣನು ಹೀಗೆಂದನು. ಅರ್ಜುನ ನಾನು, ನೀನು ಅನೇಕ ಜನ್ಮಗಳನ್ನು ಪಡೆದಿದ್ದೇವೆ. ಆದರೆ ನನಗೆ ನೆನಪಿದೆ ನಿನಗೆ ನೆನಪಿಲ್ಲ. ಅಷ್ಟೇ ಅಲ್ಲದೆ, ನಾನು ಎಂದೂ ಹುಟ್ಟುವುದಿಲ್ಲ ಮತ್ತು ನನ್ನ ಆಧ್ಯಾತ್ಮಿಕ ಶರೀರವು ಎಂದೂ ಕ್ಷಯಿಸುವುದಿಲ್ಲ. ಹೀಗಾದರೂ ನಾನು ಯುಗಯುಗಾಂತರದಲ್ಲಿ ನನ್ನ ಮೂಲ ಆಧ್ಯಾತ್ಮಿಕ ರೂಪದಲ್ಲೇ ಅವತರಿಸುತ್ತೇನೆ.
ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣೀಭೂತನಾದ ತಾನು ಕಾಲಾತೀತನೆಂಬ ಅರಿವನ್ನು ಶ್ರೀಕೃಷ್ಣನು ಅರ್ಜುನನಲ್ಲಿ ಮೂಡಿಸಿದಾಗ, ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ (10.12-14) ಪಾರ್ಥನು ಪಾರ್ಥಸಾರಥಿಯನ್ನು ಸ್ತುತಿಸುತ್ತಾನೆ.
“ನೀನು ಪರಮ ಪುರುಷನು, ಪರಂಧಾಮನು, ಪರಮ ಪವಿತ್ರನು, ಪರತತ್ವ ಸ್ವರೂಪನು, ಆದಿಪುರುಷನು, ಅಚ್ಯುತನು ಮತ್ತು ಸರ್ವೋತ್ತಮನು.”
ಇದೇ ಗೀತೆಯ ಸಂದೇಶ. ಪರಮ ಪರಾತ್ಪರನಾದ ಶ್ರೀಕೃಷ್ಣನಲ್ಲಿ ಶರಣಾಗುವುದೇ ಅದರ ವಸ್ತು. ಈ ಜ್ಞಾನವನ್ನು ಸವೆದು ನಾವೆಲ್ಲರೂ ಅಮರರಾಗೋಣ ಬನ್ನಿ.
Leave a Reply