ರಾಧಾಕುಂಡ ಮತ್ತು ಗೋವರ್ಧನ

ವ್ರಜಮಂಡಲ ಪರಿಕ್ರಮ- ಭಾಗ:6

ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ.

ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. 1514ರಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ಶ್ರೀ ಚೈತನ್ಯ ಮಹಾಪ್ರಭುಗಳು ಈ ಸ್ಥಳಗಳನ್ನು ಪತ್ತೆ ಹಚ್ಚಿದರು. ರಘುನಾಥ ಗೋಸ್ವಾಮಿಯವರು ಮೊದಲ ಬಾರಿ ಇಲ್ಲಿ ತಂಗಿದ್ದಾಗ ರಾಧಾಕುಂಡ ಮತ್ತು ಶ್ಯಾಮಲಕುಂಡಗಳು ಬಹಳ ಕಿರಿದಾಗಿ ಅಂದರೆ ಕೇವಲ 1212 ಅಡಿ ವಿಸ್ತೀರ್ಣ ಹೊಂದಿದ್ದವು.

ನಂತರ ಸಂಪನ್ನ ಎಂಬ ಶ್ರೀಮಂತರೊಬ್ಬರ ನೆರವಿನಿಂದ ರಘುನಾಥದಾಸ ಗೋಸ್ವಾಮಿ ಹಾಗೂ ಜೀವಾ ಗೋಸ್ವಾಮಿಯವರು 1554ರಲ್ಲಿ ಈ ಕುಂಡಗಳ ವಿಸ್ತರಣೆ ಮತ್ತು ಜೀರ್ಣೋದ್ಧಾರ ಕಾರ್ಯ ನೆರವೇರಿಸಿದರು. ರಾಧಾಕುಂಡದ ನಡುವೆ ಗೋಡೆಯಿಂದಾವೃತವಾದ ಕಾಂಚನ ಕುಂಡ ಎಂಬ ಸ್ಥಳವಿದೆ. ಇದನ್ನು ರಾಧಾರಾಣಿ ಮತ್ತು ಇತರೆ ಗೋಪಿಯರು ತಮ್ಮ ಬಳೆಗಳ ಸಹಾಯದಿಂದ ಈ ನೆಲವನ್ನು ಅಗೆದು ಈ ಕುಂಡವನ್ನು ನಿರ್ಮಿಸಿದರು.

ಕೃಷ್ಣ ಅರಿಷ್ಟಾಸುರನನ್ನು ಸಂಹರಿಸಿದ ಸ್ಥಳದಲ್ಲಿ ವ್ರಜನಾಭನು ಶ್ಯಾಮಾಕುಂಡ ಕೊಳವನ್ನು ನಿರ್ಮಿಸಿದ. ಶ್ಯಾಮಾಕುಂಡದ ತುಂಬ ನೀರಿರುವಾಗ ಕಾಂಚನ ಕುಂಡ ಗೋಚರವಾಗುವುದಿಲ್ಲ. ಶ್ಯಾಮಾಕುಂಡ ಬತ್ತಿ ಹೋಗಿರುವಾಗ ಈ ಕುಂಡವನ್ನು ಕಾಣಬಹುದು. ಈ ಕುಂಡವನ್ನು ವ್ರಜನಾಥ ಕುಂಡ ಎಂದೂ ಕರೆಯುತ್ತಾರೆ.

ರಾಧಾಕುಂಡದ ಸುತ್ತ ಎಂಟು ದಿಕ್ಕಿಗೆ ತಲಾ ಒಂದೊಂದು “ಕುಂಜ” (ತೋಪು, ತೋಟ)ಗಳಿವೆ. ಇವೆಲ್ಲಾ ಶ್ರೀಮತಿ ರಾಧಾರಾಣಿಯ ಆಪ್ತ ಸಖಿಯರಾದ ಲಲಿತಾ, ವಿಶಾಖಾ ದೇವಿ, ಚಿತ್ರಾದೇವಿ, ಇಂದುಲೇಖಾ ದೇವಿ, ಚಂಪಕಲಾ ದೇವಿ,  ರಂಗಾ ದೇವಿ, ತುಂಗಾವಿದ್ಯಾದೇವಿ ಮತ್ತು ಸುದೇವಿ ಕುಂಜಗಳು, ಇದಲ್ಲದೇ ಶ್ರೀ ಆನಂಗ ಮಂಜರಿ ಕುಂಜ ರಾಧಾಕುಂಡದ ಮಧ್ಯ ಭಾಗದಲ್ಲಿದೆ.

ಕಾರ್ತಿಕ ಮಾಸದ ಬಹುಳ ಅಷ್ಟಮಿಯಂದು ರಾತ್ರಿ 12 ಗಂಟೆಗೆ ರಾಧಾ ಕುಂಡ ಉದ್ಭವವಾಯಿತು. ಅಂದು ಮಧ್ಯ ರಾತ್ರಿ, ಇದರ ನೆನಪಿಗಾಗಿ ಈಗಲೂ ಸಾವಿರಾರು ಜನರು ರಾಧಾಕುಂಡದಲ್ಲಿ ಸೇರಿ ಪವಿತ್ರ ಸ್ನಾನ ಮಾಡುತ್ತಾರೆ.

“ವೈಕುಂಠಕ್ಕಿಂತ ಮಥುರಾ ಪವಿತ್ರ ತಾಣ. ಏಕೆಂದರೆ, ಶ್ರೀ ಕೃಷ್ಣ ಜನ್ಮಸ್ಥಳವಿದು. ಮಥುರಾಗಿಂತ ವೃಂದಾವನ ಪವಿತ್ರವಾದುದು. ಏಕೆಂದರೆ, ಶ್ರೀ ಕೃಷ್ಣ ತನ್ನ ರಾಸ ಲೀಲೆಗಳನ್ನು ಪ್ರದರ್ಶಿಸಿದ್ದು ಇಲ್ಲಿಯೇ. ವೃಂದಾವನಕ್ಕಿಂತ ಗೋವರ್ಧನ ಶ್ರೇಷ್ಠವಾದುದು. ಏಕೆಂದರೆ, ಈ ಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ಹಿಡಿದ ಕೃಷ್ಣ ನೂರಾರು ಲೀಲೆಗಳನ್ನು ಇಲ್ಲಿ ಪ್ರದರ್ಶಿಸಿದ.

ಆದರೆ ಈ ಎಲ್ಲಾ ತಾಣಗಳಿಗಿಂತ ಪರಮ ಪವಿತ್ರವಾದುದು ರಾಧಾಕುಂಡ. ಏಕೆಂದರೆ, ರಾಧಾಕೃಷ್ಣರ ಅಮರ ಪ್ರೇಮದ ಅಮೃತ ಧಾರೆ ಹರಿದುದು ಈ ಪವಿತ್ರ ಕುಂಡದಲ್ಲಿ ಎಂದು ‍ಶ್ರೀ ಉಪದೇಶಾಮೃತದಲ್ಲಿ (9ನೇ ಶ್ಲೋಕ) ಹೇಳಲಾಗಿದೆ.

“ಶ್ರೀ ಕೃಷ್ಣ ರಾಧಾ ಕುಂಡವನ್ನು ರಾಧೆಯಷ್ಟೇ ಆಳವಾಗಿ ಪ್ರೀತಿಸುತ್ತಿದ್ದ. ರಾಧಾಕುಂಡ ಮತ್ತು ಶ್ರೀಮತಿ ರಾಧಾರಾಣಿಯೊಡಗಿನ ಶ್ರೀ ಕೃಷ್ಣನ ಪ್ರೀತಿ ಯಾವುದೇ ರೀತಿಯಲ್ಲಿ ನೋಡಿದರೂ ಸರಿಸಮನಾಗಿತ್ತು ಎಂದು ಶ್ರೇಷ್ಠ ಋಷಿ-ಮುನಿಗಳು ಹೇಳಿದ್ದಾರೆ” ಎಂಬುದಾಗಿಯೂ ಅದರಲ್ಲಿ (11ನೇ ಶ್ಲೋಕ) ಹೇಳಲಾಗಿದೆ. ಹೀಗೆ ವ್ರಜಮಂಡಲದ ಅತ್ಯಂತ ಪವಿತ್ರ ತಾಣಗಳಲ್ಲಿ ರಾಧಾಕುಂಡ ಪ್ರಮುಖವಾದುದು.

ರಾಧಾಕುಂಡದಲ್ಲಿ ಸ್ನಾನ ಮಾಡಿದರೆ ಗೋಹತ್ಯೆ, ನರಹತ್ಯೆ, ಬ್ರಾಹ್ಮಣ ಹತ್ಯೆ ಪಾಪಾಗಳು ದೂರಾಗುವುವು. ಹಾಗೆಯೇ ರಾಧಾಕುಂಡ ಮತ್ತು ಶ್ಯಾಮಕುಂಡದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ರಾಜಾಸೂಯ ಮತ್ತು ಅಶ್ವಮೇಧ ನೆರವೇರಿಸಿದ ಪುಣ್ಯ ಪ್ರಾಪ್ತವಾಗುವುದು ಎಂದು ಆದಿ ವರಾಹ ಪುರಾಣದಲ್ಲಿ ಹೇಳಲಾಗಿದೆ.

ಟ್ಯಾಕ್ಸಿ ಮೂಲಕ ರಾಧಾಕುಂಡಕ್ಕೆ ಹೋಗಲು ನಲವತ್ತೈದು ನಿಮಿಷ ಸಮಯ ಬೇಕಾಗುತ್ತದೆ. ಈ ರಸ್ತೆ ತುಂಬಾ ಏರು ತಗ್ಗುಗಳಿಂದ ಕೂಡಿದ್ದು, ಬಾಡಿಗೆ ಟ್ಯಾಕ್ಸಿಯಲ್ಲಿ ಹೋಗುವುದೇ ಉತ್ತಮ. ಇನ್ನು ಹತ್ತಾರು ಮಂದಿ ಒಟ್ಟಾಗಿ, ಖರ್ಚನ್ನು ಸಮನಾಗಿ ಹಂಚಿಕೊಂಡು ಬಾಡಿಗೆ ಟೆಂಪೋ ಮೂಲಕ ಹೋಗುವುದು ಇನ್ನೂ ಒಳ್ಳೆಯದು. ಇದಲ್ಲದೇ ನಿತ್ಯ ಮುಂಜಾನೆ 6 ಗಂಟೆಗೆ ಇಲ್ಲಿನ ಇಸ್ಕಾನ್‌ ಮಂದಿರದ ಮುಂಭಾಗದಿಂದ ಒಂದು ಬಸ್‌ ರಾಧಾಕುಂಡಕ್ಕೆ ಹೊರಡುತ್ತದೆ.

1670ರಲ್ಲಿ ಮುಸ್ಲಿಮರ ದಾಳಿಯಿಂದ ರಕ್ಷಿಸಲು ವೃಂದಾವನದ ಬಹುತೇಕ ವಿಗ್ರಹಗಳನ್ನು ಜೈಪುರಕ್ಕೆ ಸ್ಥಳಾಂತರಿಸಲಾಯಿತು. ಹಾಗೆ ವಿಗ್ರಹಗಳನ್ನು ಸಾಗಿಸುವವರು ರಾಧಾಕುಂಡಲ್ಲಿ ಕೆಲ ಕಾಲ ತಂಗಿದ್ದರು. ಹೀಗಾಗಿ ವೃಂದಾವನದ ಎಲ್ಲಾ ದೇವಾಲಯಗಳ ಚಿಕ್ಕ ಪ್ರತಿಕೃತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಮೂಲ ವಿಗ್ರಹಗಳನ “ಪ್ರತಿಭೂ ಮೂರ್ತಿ” ಅಂದರೆ, ಪ್ರತಿ ಕೃತಿಗಳೂ ಇಲ್ಲಿವೆ.

ಇಲ್ಲಿ ರಾಧಾ ಗೋಕುಲಾನಂದ “ಪ್ರತಿಭು ಮೂರ್ತಿಗಳಿವೆ. ಮೂಲ ವಿಗ್ರಹಗಳು ವೃಂದಾವನದಲ್ಲಿವೆ.

ಈ ದೇವಾಲಯದ ಪಕ್ಕದಲ್ಲೇ ನರೋತ್ತಮ ದಾಸ ಠಾಕೂರರ ಮತ್ತು ಲೋಕನಾಥ ಗೋಸ್ವಾಮಿಯವರ ಪುಷ್ಪ ಸಮಾಧಿಗಳಿವೆ.

ರಾಧಾಕುಂಡದಲ್ಲಿ ಹಾಗೆಯೇ ಮುಂದುವರಿದರೆ ರಸ್ತೆ ಪಕ್ಕದಲ್ಲೇ ಒಂದು ಚಿಕ್ಕ ಅಮೃತಶಿಲೆಯ ದೇವಾಲಯ ಕಣ್ಣಿಗೆ ಕಾಣಿಸುತ್ತದೆ. ಅದೇ ಶ್ರೀ ಕುಂದೇಶ್ವರ ಮಹಾದೇವ ದೇವಾಲಯ. ರಾಧಾಕುಂಡದ ಸುತ್ತ ನಾಲ್ಕು ದಿಕ್ಕಿಗೂ ಒಂದೊಂದು ಶಿವ ದೇವಾಲಯಗಳಿವೆ. ಅದರ ಪೈಕಿ ಇದೂ ಒಂದು.

ಕುಂದೇಶ್ವರ ಮಹಾದೇವ ದೇವಾಲಯ ನೋಡಿಕೊಂಡು ಹಾಗೆಯೇ ಸುಮಾರು 200 ಅಡಿ ಮುಂದುವರಿದರೆ, ರಸ್ತೆಯ ಬಲ ಭಾಗದಲ್ಲಿ ರಾಧಾಕೃಷ್ಣರ ಉಯ್ಯಾಲೆಯಾಡಿದ ಸ್ಥಳವಿದೆ.

ಜೂಲನ ಸ್ಥಲಿಯಿಂದ ಮುಂದೆ ಏರು ರಸ್ತೆಯಲ್ಲಿ ಸಾಗಿದರೆ,ಕಪ್ಪು ಬಣ್ಣದ ಪಿರಮಿಡ್‌ ಆಕೃತಿಯ ರಾಧಾಕೃಷ್ಣ ದೇವಾಲಯ ಕಾಣಿಸುತ್ತದೆ. ರಾಧಾಕುಂಡದಲ್ಲಿರುವ ಅತ್ಯಂತ ಪುರಾತನ ದೇವಾಲಯವಿದು. ಇಲ್ಲಿರುವ ವಿಗ್ರಹಗಳನ್ನು ಸಂಶೋಧಿಸಿದವರು ರಘುನಾಥದಾಸ ಗೋಸ್ವಾಮಿ. ಪರಸ್ಪರ ಹೆಣೆದುಕೊಂಡಿರುವ ಬೇವು ಮತ್ತು ಆಲದ ಮರಗಳು ಇಲ್ಲಿವೆ. ಈ ಜೋಡಿ ವೃಕ್ಷವನ್ನು ರಾಧಾಕೃಷ್ಣರೆಂದೇ ಪೂಜಿಸಲಾಗುತ್ತದೆ. ಇದರ ಪಕ್ಕದಲ್ಲೇ ಚಿಕ್ಕ ಇಸ್ಕಾನ್‌ ಮಂದಿರವಿದೆ.

ಇಸ್ಕಾನ್‌ ಮಂದಿರದಿಂದ ಪರಿಕ್ರಮ ಪಥಕ್ಕೆ ಹಿಂತಿರುಗಿ, ಎಡಕ್ಕೆ ತಿರುಗಿ ಸುಮಾರು 20 ಮೀಟರ್‌ ಸಾಗಿದರೆ ಸಿಗುವುದು ಗೋವರ್ಧನ ಪರಿಕ್ರಮ ಪಥ. ಈ ಮಂದಿರದ ಎದುರಿನಲ್ಲೇ ಇರುವ ಬಿಳಿಯ ಕಟ್ಟದಲ್ಲಿ ರಾಧಾಕಾಂತ  “ಪ್ರತಿಭು” ಮೂರ್ತಿಗಳಿವೆ.

ರಾಧಾಕಾಂತ ಮಂದಿರದ ಸಮೀಪ (15 ನಿಮಿಷ ನಡಿಗೆ) ಕೆಂಪು ಶಿಲೆಯ ರಾಧಾಕುಂಜ ಬಿಹಾರಿ ದೇವಾಲಯವಿದೆ. ಇದು ಗೋವರ್ಧನ ಪರಿಕ್ರಮ ಪಥದಲ್ಲೇ ಇದೆ. ಇಲ್ಲಿ ರಾಧಾಕುಂಜ ಬಿಹಾರಿ ಮತ್ತು ಚೈತನ್ಯ ಮಹಾಪ್ರಭುಗಳ ವಿಗ್ರಹಗಳಿವೆ. ಈ ದೇವಾಲಯದ ಪಕ್ಕದಲ್ಲೇ ಗೌರ ಕಿಶೋರದಾಸ ಬಾಬಾಜಿ ಮಹಾರಾಜ ಅವರ ಪುಷ್ಪ ಸಮಾಧಿ ಇದೆ. ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿಗಳ ಆಧ್ಯಾತ್ಮಿಕ ಗುರುಗಳಾಗಿದ್ದ ಗೌರ ಕಿಶೋರ ದಾಸರು ಸುಮಾರು 30 ವರ್ಷ ಕಾಲ ವೃಂದಾವನದಲ್ಲಿ ನೆಲೆಸಿದ್ದರು. ಭಕ್ತಿ ಸಿದ್ಧಾಂತರು 1935ರಲ್ಲಿ ಈ ದೇವಾಲಯವನ್ನು ಸ್ಥಾಪಿಸಿದರು.

ಪುನಃ ರಾಧಾ ಕುಂಡ ಪರಿಕ್ರಮ ಪಥಕ್ಕೆ ಹಿಂತಿರುಗಿದರೆ, ಅಲ್ಲೇ ಸಮೀಪದಲ್ಲೇ ರಾಧಾ ಶ್ಯಾಮಸುಂದರ ದೇವಾಲಯವಿದೆ. ಶ್ಯಾಮಸುಂದರ ಪ್ರಭುಗಳು ಕುಳಿತುಕೊಳ್ಳುತ್ತಿದ್ದ ಸ್ಥಳ ಮತ್ತು ಪುಷ್ಪ ಸಮಾಧಿಯೂ ಇಲ್ಲಿದೆ. ಈ ದೇವಾಲಯದಿಂದ ಹಾಗೆಯೇ ಮುಂದುವರಿದರೆ ಕೆಂಪು ವರ್ಣದ ಚಿಕ್ಕ ಗುಡಿಯೊಂದು ಕಾಣಿಸುತ್ತದೆ. ಅದೇ ರಾಧಾ ದಾಮೋದರ ದೇವಾಲಯ. ಈ ದೇವಾಲಯದಲ್ಲಿ ಶ್ರೀನಿವಾಸ ಆಚಾರ್ಯರು ಕುಳಿತುಕೊಳ್ಳುತ್ತಿದ್ದ ಸ್ಥಳವಿದೆ.

ಮುಖ್ಯ ರಸ್ತೆಗೆ ಹಿಂತಿರುಗಿ ಸ್ವಲ್ಪ ಮುಂದೆ ಸಾಗಿದರೆ ಅಲ್ಲೇ ಬಲಭಾಗದಲ್ಲಿ ಗೋಪಿನಾಥ ದೇವಾಲಯವಿದೆ. ಈ ದೇವಾಲಯ ರಾಧಾಕುಂಡದ ಬಲಭಾಗದಲ್ಲೇ ಇದೆ. ಇಲ್ಲಿ ಮ‍ಧ್ಯ ಭಾಗದಲ್ಲಿ ಗೋಪಿನಾಥ, ಬಲ ಭಾಗದಲ್ಲಿ ರಾಧಾರಾಣಿ ಮತ್ತು ಎಡ ಭಾಗದಲ್ಲಿ ಅನಂಗ ಮಂಜರಿ ವಿಗ್ರಹಗಳಿವೆ. (ಅನಂಗ ಮಂಜರಿ ರಾಧಾರಾಣಿಯ ಕಿರಿಯ ಸೋದರಿ).

ಇಲ್ಲಿ ರಘುನಾಥ ಗೋಸ್ವಾಮಿಯವರ ಸಮಾಧಿ ಇದ್ದು, ಅದರಲ್ಲಿ ಅವರ ಭಸ್ಮವನ್ನು ಇರಿಸಲಾಗಿದೆ. ಇಲ್ಲಿ ದಿನ 24 ಗಂಟೆ ಕಾಲವೂ ಸಂಕೀರ್ತನೆ ನಡೆಯುತ್ತದೆ.

ಗೋಪಿನಾಥ ದೇವಾಲಯದ ಎಡ ದ್ವಾರದಿಂದ ಹೊರಬಂದರೆ ಎದುರಿಗೆ ಒಂದು ಚಿಕ್ಕ ಮಂಟಪ ಸಿಗುತ್ತದೆ. ನಿತ್ಯಾನಂದ ಪ್ರಭುಗಳ ಪತ್ನಿ ಜಾಹ್ನವಿ ದೇವಿ 1582ರಲ್ಲಿ ಇಲ್ಲಿಯೇ ನೆಲೆಸಿದ್ದರು. ಇದನ್ನು ಜಾಹ್ನವ ಬೈಟಾಕಾ, ಅಂದರೆ ಜಾಹ್ನವಿ ಕುಳಿತುಕೊಳ್ಳುತ್ತಿದ್ದ ಸ್ಥಳ ಎಂದು ಕರೆಯುತ್ತಾರೆ.

ಗೂಳಿಯ ರೂಪದಲ್ಲಿ ಬಂದು ವೃಂದಾವನ ನಿವಾಸಿಗಳನ್ನು ಬೆದರಿಸಿದ ಅರಿಷ್ಟಾಸುರನನ್ನು ಬಾಲಕೃಷ್ಣ ಸಂಹರಿಸಿದ್ದು ಇದೇ ಸ್ಥಳದಲ್ಲಿ. ಕೃಷ್ಣನು ಅರಿಷ್ಟಾಸುರನನ್ನೂ ಕೊಂದ ನಂತರ ಗೋಪಾಲಕರ ಮಧ್ಯೆ ಒಂದು ಜಿಜ್ಞಾಸೆ ಆರಂಭವಾಯಿತು. ಅರಿಷ್ಟಾಸುರ ಗೋವಿನ ರೂಪದಲ್ಲಿದ್ದುದರಿಂದ, ಅವನ ಸಂಹಾರದಿಂದ ಕೃಷ್ಣನಿಗೆ ಗೋಹತ್ಯೆ ಪಾಪ ತಟ್ಟಿದೆ. ಹೀಗಾಗಿ ಮೂರು ಲೋಕದಲ್ಲಿರುವ ಎಲ್ಲಾ ಪವಿತ್ರ ಸ್ಥಳಗಳನ್ನು ಸಂದರ್ಶಿಸುವ ಮೂಲಕ ಕೃಷ್ಣ ತನ್ನ ಪಾಪ ತೊಳೆದುಕೊಳ್ಳಬೇಕು ಎಂದು ಅವರು ವಾದಿಸಿದರು.

“ನಾನೇಕ ಎಲ್ಲಾ ಪವಿತ್ರ ಸ್ಥಳಗಳನ್ನು ಸುತ್ತಬೇಕು? ಎಲ್ಲಾ ಪವಿತ್ರ ತಾಣಗಳ ಜಲವನ್ನು ಇಲ್ಲಿಗೇ ತರಿಸಿ, ಅದರಲ್ಲಿ ಮಿಂದು ಪಾಪ ಮುಕ್ತನಾಗುತ್ತೇನೆ ಎಂದು ಕೃಷ್ಣ ಉತ್ತರಿಸಿದ. ಅದರಂತೆ ತಾನು ನಿಂತ ನೆಲವನ್ನು ಒಮ್ಮೆ ಜೋರಾಗಿ ಹಿಮ್ಮಡಿಯಿಂದ ಗುದ್ದಿದ. ಆ ರಭಸಕ್ಕೆ ಮೂರು ಲೋಕಗಳ ಎಲ್ಲಾ ಪವಿತ್ರ ತಾಣಗಳ ಪವಿತ್ರ ಜಲ ಶ್ಯಾಮಕುಂಡದಲ್ಲಿ ಉಕ್ಕಿ ಹರಿಯಿತು. ಆ ಪವಿತ್ರ ಜಲದಲ್ಲಿ ಮಿಂದು ಕೃಷ್ಣ ಪಾಪ ತೊಳೆದುಕೊಂಡ.

ಸ್ನಾನ ಮುಗಿಸಿದ ನಂತರ ಕೃಷ್ಣ ತನ್ನ ವಾದ ಮಂಡಿಸಿದ. ಅರಿಷ್ಟಾಸುರ ಗೋವಿನ ರೂಪದಲ್ಲಿದ್ದರೂ ಅವನೊಬ್ಬ ರಕ್ಕಸ. ಗೋಪಿಕೆಯರು ರಾಕ್ಷಸನ ಪಕ್ಷವಹಿಸುವ ಮೂಲಕ ಅಪವಿತ್ರಗೊಂಡಿದ್ದಾರೆ ಎಂದು ಆತ ಪ್ರತಿಪಾದಿಸಿದ. ಆಗ ರಾಧಾರಾಣಿ ನೇತೃತ್ವದಲ್ಲಿ ಗೋಪಿಕೆಯರು ತಮ್ಮ ಬಳೆಗಳನ್ನೇ ಆಯುಧವನ್ನಾಗಿಸಿಕೊಂಡು, ಸನಿಹದಲ್ಲೇ ನೆಲವನ್ನು ಅಗೆಯಲಾರಂಭಿಸಿದರು. ಎಷ್ಟು ಅಗೆದರೂ ಅದರಲ್ಲಿ ನೀರು ಉಕ್ಕಲೇ ಇಲ್ಲ. ಕೊನೆಗೆ ಗೋಪಿಕೆಯರು ಒಬ್ಬರ ಪಕ್ಕ ಒಬ್ಬರು ಸಾಲಾಗಿ ನಿಂತು, ಮಾನಸ ಗಂಗೆಯಿಂದ ನೀರು ತಂದು ತುಂಬಿಸಲಾರಂಭಿಸಿದರು.

ಅದರೂ ಕೊಳ ಭರ್ತಿಯಾಗಲಿಲ್ಲ. ಕೊನೆಗೆ ರಾಧಾರಾಣಿಯ ಅನುಮತಿ ಮೇರೆಗೆ ಶ್ಯಾಮಾಕುಂಡದಲ್ಲಿದ್ದ ಪವಿತ್ರ ಜಲ ಹೊಸ ಕೊಳಕ್ಕೆ ಉಕ್ಕಿ ಹರಿಯಿತು. ಇದೇ ಮುಂದೆ ರಾಧಾಕುಂಡ ಎಂದು ಜನಪ್ರಿಯವಾಯಿತು. ಹೀಗೆ ರಾಧಾಕುಂಡದಲ್ಲಿ ಮೂರು ರಾಧಾಕುಂಡದ ಸುತ್ತಲೂ ಕದಂಬ, ಚಂಪಕ, ಅಶೋಕ, ಮಾವು ಪುನ್ನಾಗ (ಬಿಳಿ ಕಮಲ) ಮತ್ತು ಬಕುಳ ವೃಕ್ಷಗಳಿವೆ. ಲವಂಗ ಮತ್ತು ವಸಂತಿ ವೃಕ್ಷಗಳ ಪೊದೆಗಳು ಇವೆ. ಇಲ್ಲಿಯೇ ಬೃಹತ್‌ ವೃಕ್ಷವೊಂದಕ್ಕೆ ತೂಗು ಹಾಕಿದ್ದ ರತ್ನ ಖಚಿತವಾದ ಬಂಗಾರದ ಉಯ್ಯಾಲೆಯಲ್ಲಿ ರಾಧಾಕೃಷ್ಣರು ಸಂಭ್ರಮದಿಂದ ಜೋಕಾಲಿಯಾಡುತ್ತಿದ್ದರು.

ಶ್ರೀಲ ಭಕ್ತಿ ವಿನೋದ ಠಾಕೂರರು ತಮ್ಮ “ಗೀತ ಮಾಲಾ” ಪುಸ್ತಕದಲ್ಲಿ ರಾಧಾಕುಂಡರ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ. ಶ್ರೀಕೃಷ್ಣ ಕವಿರಾಜ ದಾಸರ “ಶ್ರೀ ಗೋವಿಂದ ಲೀಲಾಮೃತ” ಮತ್ತು ಶ್ರೀ ವಿ‍ಶ್ವನಾಥ ಚಕ್ರವರ್ತಿಯವರ “ಶ್ರೀ ಕೃಷ್ಣ ಭಾವನಾಮೃತ”ದಲ್ಲೂ ರಾಧಾಕುಂಡದ ವರ್ಣನೆ ಇದೆ.

ರಾಧಾಕುಂಡದಂತೆಯೇ ಶ್ಯಾಮಕುಂಡದ ಸುತ್ತ 8 ದಿಕ್ಕಿಗೂ ಶ್ರೀ ಕೃಷ್ಣನ ಆಪ್ತ ಸ್ನೇಹಿತರ “ಕುಂಜ”ಗಳಿವೆ. ಅವುಗಳೆಂದರೆ ಸುಬಾಲ ಕುಂಜ, ಮಧುಮಂಗಳ ಕುಂಜ, ಉಜ್ವಲ ಕುಂಜ, ಅರ್ಜುನ ಕುಂಜ, ಗಂಧರ್ವ ಕುಂಜ, ವಿದಗ್ಧಕುಂಜ, ಕೋಕಿಲ ಕುಂಜ ಮತ್ತು ಸನಂದನಂದ ಕುಂಜ.

ಶ್ರೀ ಚೈತನ್ಯ ಮಹಾಪ್ರಭುಗಳು ಹದಿನೈದನೆಯ ಶತಮಾನದಲ್ಲಿ ರಾಧಾಕುಂಡದ ಉತ್ಖನನವನ್ನು ಮಾಡಿದರು.

ಅವರು ವೃಂದಾವನಕ್ಕೆ ಬಂದಾಗ ರಾಧಾಕುಂಡವು ಭತ್ತದ ಗದ್ದೆಯಲ್ಲಿನ ಎರಡು ಕೊಳಗಳಾಗಿತ್ತಷ್ಟೆ. ರಘುನಾಥದಾಸ ಗೋಸ್ವಾಮಿಯವರಿಗೆ ರಾಧಾಕುಂಡದಲ್ಲಿರುವಂತೆ ಆದೇಶ ಮಾಡಿದರು.

ಒಮ್ಮೆ ಸಂಪನ್ನನೆಂಬ ದೈವೀಕ ಭಕ್ತವಣಿಕನು ಬದರಿನಾಥಕ್ಕೆ ಹೋಗಿ ದಾನವನ್ನು ನೀಡಲು ಬಯಸಿದನು. ಬದರಿನಾಥಕ್ಕೆ ಹೋದಾಗ ಅವನ ಕನಸಿನಲ್ಲಿ ಬದರಿನಾರಾಯಣನು ಬಂದು “ವೃಂದಾವನದ ರಾಧಾಕುಂಡದ ಹತ್ತಿರ ನನ್ನ ಭಕ್ತ (ರಘುನಾಥದಾಸರು ಈಗಾಗಲೇ ಅಲ್ಲಿ ತಂಗಿದ್ದರು) ಇದ್ದಾನೆ. ಅವನಿಗೆ ನಿನ್ನ ದಾನವನ್ನು ನೀಡು” ಎಂದು ಹೇಳಿದನು. ಸಂಪನ್ನನು ರಘುನಾಥರ ಹತ್ತಿರ ಬಂದು ದಾನವನ್ನು ನೀಡಲು ಮುಂದಾದನು. ರಘುನಾಥರು ಅವನಿಗೆ ಬೃಹತ್‌ ಕುಂಡವನ್ನು ನಿರ್ಮಿಸುವಂತೆ ಆಜ್ಞೆ ಮಾಡಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi