ಸ್ವಾಯಂಭುವ ಮನುವಿನ ಮಗ ರಾಜಾ ಉತ್ತಾನಪಾದನಿಗೆ ಸುನೀತಿ ಹಾಗೂ ಸುರುಚಿ ಎನ್ನುವ ಹೆಸರಿನ ಇಬ್ಬರು ರಾಣಿಯರಿದ್ದರು. ಸುರುಚಿಯು ರಾಜನಿಗೆ ಹೆಚ್ಚು ಪ್ರಿಯವಾಗಿದ್ದಳು. ಧ್ರುವ ಎನ್ನುವ ಹೆಸರಿನ ಪುತ್ರನನ್ನು ಪಡೆದಿದ್ದ ಸುನೀತಿ ಎಂದರೆ ರಾಜನಿಗೆ ಅಷ್ಟಕಷ್ಟೆ. ಒಂದು ದಿನ ಉತ್ತಾನಪಾದ ರಾಜನು ಸುರುಚಿಯ ಮಗನಾದ ಉತ್ತಮನನ್ನು ತೊಡೆಯಮೇಲೆ ಕುಳ್ಳಿರಿಸಿಕೊ೦ಡು ಮುದ್ದಾಡುತ್ತಿದ್ದನು.

ಧ್ರುವನು ತಾನೂ ತಂದೆಯ ತೊಡೆಯನ್ನೇರಲು ಹೋದನು. ಇದನ್ನು ನೋಡಿದ ಅವನ ಮಲತಾಯಿ ಸುರುಚಿಗೆ ವಿಪರೀತ ಹೊಟ್ಟೆಕಿಚ್ಚು ಹುಟ್ಟಿತು. ಆಗ ಆಕೆ ಸಿಟ್ಟಿನಿಂದ ಧ್ರುವನನ್ನು ಬೈದಳು. ತನ್ನ ಮಲತಾಯಿಯು ಆಡಿದ ಬಿರುನುಡಿಗಳಿಂದ ತುಂಬ ನೊಂದುಕೊಂಡ ಧ್ರುವ ತತ್‌ಕ್ಷಣವೇ ಅರಮನೆಯನ್ನು ಬಿಟ್ಟು ತನ್ನ ತಾಯಿಯಿದ್ದೆಡೆಗೆ ಹೋದನು. ಅವನ ತಾಯಿಯಾದ ಸುನೀತಿಯು ಹೇಳಿದ ಹಿತವಚನದಂತೆ ಧ್ರುವ ಮಹಾರಾಜನು ದೇವೋತ್ತಮ ಪರಮ ಪುರುಷನ ಆಶ್ರಯ ಪಡೆಯಲು ತನ್ನ ತಂದೆಯ ಮನೆಯನ್ನು ತ್ಯಜಿಸಿದನು.
ಮಹಾಮುನಿ ನಾರದರ ಕಿವಿಗೆ ಈ ವಿಷಯ ಬಿತ್ತು. ಅವರು ಧ್ರುವನನ್ನು ಕಂಡು ಮನೆಗೆ ಹಿಂತಿರುಗುವಂತೆ ಬಲವಂತಪಡಿಸಿದರು. ಆದರೆ ಧ್ರುವನು ತನ್ನ ದೃಢ ನಿಶ್ಚಯವನ್ನು ಬಿಟ್ಟುಕೊಡಲು ಒಪ್ಪದೆ ತನಗೆ ಅಮೂಲ್ಯ ಉಪದೇಶ ನೀಡಬೇಕೆಂದು ನಾರದರನ್ನು ಕೇಳಿದನು.
ಮಹಾಮುನಿಗಳಾದ ನಾರದರು ಬಾಲಕನ ವಿಷಯಕ್ಕೆ ಅನುಕಂಪ ತೋರಿ ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಉಚ್ಚರಿಸುತ್ತಾ ದೇವೋತ್ತಮ ಪರಮ ಪುರುಷನನ್ನು ಧ್ಯಾನಿಸಬೇಕೆಂಬ ಸಲಹೆಯನ್ನು ನೀಡಿದರು. ಇದು ಭಗವಾನ್ ಕೃಷ್ಣನನ್ನು ಪೂಜಿಸಲು ಬಳಸುವ ಹನ್ನೆರಡು ಅಕ್ಷರಗಳ ಮಂತ್ರ.

ನಾರದ ಮುನಿಗಳ ಸಲಹೆಯಂತೆ ಧ್ರುವ ಮಹಾರಾಜನು ದೇವೋತ್ತಮ ಪುರುಷನ ಪೂಜೆಯಲ್ಲಿ ನಿರತನಾದನು. ಮೊದಲ ತಿಂಗಳು ಧ್ರುವ ಮಹಾರಾಜನು ಮೂರು ದಿನಗಳಿಗೊಮ್ಮೆ ಹಣ್ಣುಹಂಪಲುಗಳನ್ನು ಮಾತ್ರ ತಿನ್ನುತ್ತಿದ್ದನು. ಎರಡನೆಯ ತಿಂಗಳಲ್ಲಿ ಅವನು ಆರು ದಿನಗಳಿಗೊಮ್ಮೆ ಹುಲ್ಲು ಹಾಗೂ ಎಲೆಗಳನ್ನು ತಿನ್ನುತ್ತಿದ್ದನು.
ಮೂರನೆಯ ತಿಂಗಳಲ್ಲಿ ಅವನು ಪ್ರತಿ ಒಂಬತ್ತು ದಿನಗಳಿಗೊಮ್ಮೆ ಬರೀ ನೀರನ್ನಷ್ಟೇ ಕುಡಿದನು. ನಾಲ್ಕನೆಯ ತಿಂಗಳಲ್ಲಿ ಅವನು ಪ್ರತಿ ಹನ್ನೆರಡು ದಿನಗಳಿಗೊಮ್ಮೆ ಒಂದಿಷ್ಟು ಗಾಳಿಯನ್ನು ಮಾತ್ರ ಸೇವಿಸುತ್ತಿದ್ದನು. ಹೀಗೆ ಮಾಡಿ ಧ್ರುವ ಮಹಾರಾಜನು ದೇವೋತ್ತಮ ಪರಮ ಪುರುಷನನ್ನು ಸೆಳೆದಾಗ ಮೂರು ಲೋಕಗಳೂ ನಡುಗಿ ಹೋದವು.

ಧ್ರುವ ಮಹಾರಾಜನು ಕಾರ್ಯತಃ ಭಗವಾನ್ ವಿಷ್ಣುವಿನಷ್ಟೇ ಮಹತ್ವವನ್ನು ಗಳಿಸಿಕೊಂಡಾಗ ಸಮಸ್ತ ಬ್ರಹ್ಮಾಂಡವು ಪ್ರಜ್ಞೆ ಕಳೆದುಕೊಂಡಿತು; ಅದರ ಉಸಿರಾಟವು ಗಂಟಲಿನಲ್ಲಿ ಸಿಕ್ಕಿಕೊಂಡಿತು. ಸಕಲ ಗ್ರಹಲೋಕಗಳ ಸಮಸ್ತ ದೇವತೆಗಳು ಉಸಿರು ಸಿಕ್ಕಿಕೊಂಡಂತವರಾಗಿ ಕಂಗೆಟ್ಟು ದೇವೋತ್ತಮ ಪರಮ ಪುರುಷನಲ್ಲಿ ಆಶ್ರಯ ಪಡೆದರು. ದೇವೋತ್ತಮ ಪುರುಷನಿಂದ ದೇವತೆಗಳಿಗೆ ಭರವಸೆಯ ವಚನಗಳು ಸಿಕ್ಕಾಗ ಅವರ ಎಲ್ಲ ಭಯವೂ ನಿವಾರಣೆಯಾಯಿತು. ಪ್ರಭುವಿಗೆ ನಮಸ್ಕರಿಸಿ ಅವರೆಲ್ಲರೂ ಅವರವರ ಗ್ರಹಲೋಕಗಳಿಗೆ ತೆರಳಿದರು.
ಧ್ರುವ ಮಹಾರಾಜನು ಸಂಪೂರ್ಣವಾಗಿ ಧ್ಯಾನದಲ್ಲಿ ಮಗ್ನನಾಗಿದ್ದ. ಇದ್ದಕ್ಕಿದ್ದಂತೆ ಅವನ ಹೃದಯದಲ್ಲಿದ್ದ ಪ್ರಭುರೂಪವು ಕಾಣೆಯಾಗಿ ಹೋಯಿತು. ಧ್ರುವ ದಿಗ್ಭ್ರಾಂತನಾದ. ಅವನ ತಪಸ್ಸಿಗೆ ಭಂಗ ಬಂದಿತು. ಧ್ರುವನು ಕಣ್ಣು ತೆರೆದು ನೋಡಿದಾಗ ದೇವೋತ್ತಮ ಪರಮ ಪುರುಷನು ಅವನೆದುರಿನಲ್ಲಿ ಪ್ರತ್ಯಕ್ಷವಾಗಿ ನಿಂತಿದ್ದ. ಧ್ರುವನ ಹೃದಯಸ್ತನಾಗಿದ್ದ ಪ್ರಭುವಿನ ರೂಪವೇ ಅವನ ಕಣ್ಣೆದುರು ನಿಂತಂತಿತ್ತು.
ಧ್ರುವ ಮಹಾರಾಜ ವಿಪರೀತವಾಗಿ ಆನಂದ ತುಂದಿಲನಾದ. ಆ ಕೂಡಲೇ ಪ್ರಭುವಿಗೆ ನಮಸ್ಕರಿಸಿ ಗೌರವ ತೋರಿಸಿದ ಪ್ರಭುವು ಕಾರಣವಿಲ್ಲದೆ ಕರುಣೆ ತೋರಿ ತನ್ನ ಶಂಖವನ್ನು ಕೈಜೋಡಿಸಿ ನಿಂತಿದ್ದ ಧ್ರುವನ ಹಣೆಗೆ ಸೋಕಿಸಿದ. ಆಗ ಧ್ರುವ ಮಹಾರಾಜನು ವೈದಿಕ ಸಿದ್ಧಾಂತದ ಜ್ಞಾನವನ್ನು ಪಡೆದು ತನ್ನ ಮನಸಾ ನಿರ್ಣಯಾತ್ಮಕ ಪ್ರಾರ್ಥನಾ ವಾಕ್ಯಗಳನ್ನು ಪ್ರಭುವಿಗೆ ನಿವೇದಿಸಿದ.
ದೇವೋತ್ತಮ ಪರಮ ಪುರುಷನು ತನ್ನ ಭಕ್ತರಿಗೆ ಹಾಗೂ ದಾಸರಿಗೆ ಸದಾ ಕರುಣೆ ತೋರುತ್ತಾನೆ. ಹಾಗೆಯೇ ಧ್ರುವನಿಗೆ ಧ್ರುವನಕ್ಷತ್ರ ಎಂಬ ಗ್ರಹಲೋಕವನ್ನು ದಯಪಾಲಿಸಿದ. ಆ ನಕ್ಷತ್ರವು ಮನ್ವಂತರದ ಕೊನೆಯಲ್ಲಿ ಬ್ರಹ್ಮಾಂಡವು ನಾಶವಾಗಿ ಹೋದ ಮೇಲೂ ಅಸ್ತಿತ್ವದಲ್ಲಿರುತ್ತದೆ. ಧ್ರುವನು ಇಡೀ ಜಗತ್ತನ್ನು ಮೂವತ್ತಾರು ಸಹಸ್ರ ವರ್ಷಗಳ ಕಾಲ ಆಳುತ್ತಾನೆಂದೂ, ಅವನು ಎಂದಿಗೂ ಮುದುಕನಾಗುವುದೇ ಇಲ್ಲವೆಂದು ಪ್ರಭುವು ಅವನಿಗೆ ವರ ನೀಡಿದನು.
ಬಾಲಕನಿಂದ (ಧ್ರುವನಿಂದ) ಪೂಜೆ ಹಾಗೂ ಗೌರವಗಳನ್ನು ಸ್ವೀಕರಿಸಿದ ಬಳಿಕ ಹಾಗೂ ಧ್ರುವನಿಗೆ ಒಂದು ಧಾಮವನ್ನು ನೀಡಿದ್ದಾದ ಬಳಿಕ ಭಗವಾನ್ ವಿಷ್ಣುವು ಗರುಡ ವಾಹನವನ್ನೇರಿ ತನ್ನ ಧಾಮಕ್ಕೆ ಹಿಂತಿರುಗಿದನು. ಬಾಲಕ ಧ್ರುವನು ನೋಡುತ್ತಾ ನಿಂತಿದ್ದನು.

ತಾನು ಅಪೇಕ್ಷಿಸಿದ ಫಲವನ್ನೇ ಪಡೆದರೂ ಧ್ರುವ ಮಹಾರಾಜನಿಗೆ ಹೆಚ್ಚಿನ ಸಂತೋಷವೇನೂ ಆಗಲಿಲ್ಲ. ದೇವೋತ್ತಮ ಪರಮ ಪುರುಷನು ತನ್ನಗೆ ಪ್ರತ್ಯಕ್ಷನಾಗಿದ್ದ ಕಾಲದಲ್ಲಿ, ತನ್ನ ಮನಸ್ಸಿನಲ್ಲಿದ್ದ ಲೌಕಿಕ ಬೇಡಿಕೆಗಳ ಬಗೆಗೆ ಧ್ರುವ ಮಹಾರಾಜನಿಗೆ ಬಹಳವೇ ನಾಚಿಕೆಯಾಯಿತು. ಇದನ್ನೇ ಮನಸ್ಸಿನಲ್ಲಿ ಆಲೋಚಿಸುತ್ತ ಧ್ರುವನು ಮನೆಗೆ ಹಿಂತಿರುಗಿದನು.
ಧ್ರುವ ಮಹಾರಾಜನೊಂದಿಗೆ ಪುನರ್ಮಿಲನವಾದದ್ದು ಉತ್ತಾನಪಾದನ ಬಹುಕಾಲದ ಬಯಕೆಯನ್ನು ಈಡೇರಿಸಿತು. ಧ್ರುವ ಮಹಾರಾಜನು ರಾಜ್ಯದ ಆಡಳಿತವನ್ನು ವಹಿಸಿಕೊಳ್ಳುವಷ್ಟು ಪ್ರಬುದ್ಧನಾಗಿದ್ದುದನ್ನು ಕಂಡು ಉತ್ತಾನಪಾದನು ಅವನು ಈ ಗ್ರಹಲೋಕದ ರಾಜನೆಂದು ಘೋಷಿಸಿ ಪಟ್ಟಕಟ್ಟಿದನು. ತನಗೆ ವಯಸ್ಸಾಗಿದ್ದುದನ್ನೂ, ತನ್ನ ಆಧ್ಯಾತ್ಮಿಕ ಉನ್ನತಿಯನ್ನೂ ಕುರಿತು ಆಲೋಚಿಸಿ ರಾಜಾ ಉತ್ತಾನಪಾದನು ಪ್ರಾಪಂಚಿಕ ವ್ಯವಹಾರಗಳಲ್ಲಿ ವಿರಕ್ತಿ ತಾಳಿ ಅರಣ್ಯಕ್ಕೆ ಹೊರಟುಹೋದನು.
ಮರಣ ಸಮಯದಲ್ಲಿ ಧ್ರುವ ಮಹಾರಾಜನು ಪರಮ ಪ್ರಭುವನ್ನು ಸ್ಮರಿಸಿದನು. ಹಾಗಾಗಿ ಪ್ರಭುವಿನ ಲೋಕವನ್ನು ಸೇರಿದನು. ಪ್ರಭುವಿನ ಧಾಮವನ್ನು ಹೊಂದುವುದು ತುಂಬ ಕಷ್ಟ. ಪರಿಶುದ್ಧ ಭಕ್ತಿಸೇವೆಯಿಂದ ಮಾತ್ರ ಆ ಧಾಮವನ್ನು ಪಡೆಯಬಹುದು. ಪರಮ ದಯಾಮಯನೂ, ಆದ ಪ್ರಭುವನ್ನು ಸಂತೋಷಪಡಿಸುವುದು ಭಕ್ತಿಸೇವೆಯೊಂದೇ. ಪ್ರಹ್ಲಾದ ಮಹಾರಾಜನು ಆ ಸ್ಥಾನವನ್ನು ಒಂದೇ ಜನ್ಮದಲ್ಲಿ ಪಡೆದನು.
ಧ್ರುವ ಮಹಾರಾಜನ ಕಥೆಯನ್ನು ಕೇಳುವವನು, ಅವನ ಪರಿಶುದ್ಧ ಚಾರಿತ್ರ್ಯವನ್ನು ಅರ್ಥಮಾಡಿಕೊಳ್ಳಲು ಶ್ರದ್ಧಾಭಕ್ತಿಗಳಿಂದ ಮೇಲಿಂದ ಮೇಲೆ ಪ್ರಯತ್ನಿಸುವವನು, ಪರಿಶುದ್ಧ ಭಕ್ತಿಸೇವೆಯ ನೆಲೆಯನ್ನು ಮುಟ್ಟುತ್ತಾನೆ; ಪರಿಶುದ್ಧ ಭಕ್ತಿಸೇವೆಯನ್ನು ಮಾಡುತ್ತಾನೆ. ಇಂತಹ ಭಕ್ತಿಪೂರ್ವಕ ಚಟುವಟಿಕೆಗಳಿಂದ ವ್ಯಕ್ತಿಯು ಇಹಲೋಕದ ಬದುಕಿನ ಯಾತನಾಮಯವಾದ ಮೂರು ಬಗೆಯ ತಾಪಗಳನ್ನು ಕಡಿಮೆ ಮಾಡಿಕೊಳ್ಳಬಹುದು.
Leave a Reply