ಎಲ್ಲ ಸಂಕಷ್ಟಕ್ಕೆ ಪರಿಹಾರ

-ಶ್ರೀ ಚಂಚಲಾಪತಿ ದಾಸ

ಮುಖವು ಮನಸ್ಸಿನ ಕನ್ನಡಿ ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು. ಕಲಿಯುಗದಲ್ಲಿ ಜನರು ಅನೇಕ ರೀತಿಯ ಸಂಕಷ್ಟದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ.

ಜನರನ್ನು ಸಂತೋಷಪಡಿಸಲು ಜಗತ್ತಿನಲ್ಲಿ ಈಗ ನಡೆಯುತ್ತಿರುವ ಪ್ರಯತ್ನಗಳು ಚರಿತ್ರೆಯಲ್ಲಿ ಹಿಂದೆಂದೂ ಕಾಣದಂತಹುದು. ಆದರೂ ಜನರು ಸಂತೋಷದಿಂದ ಇಲ್ಲದಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳು. ಈ ವಿಶ್ವದ ಎಲ್ಲ ಸಂಕಷ್ಟಗಳಿಗೆ ಮೂಲ ಕಾರಣ ಕೃಷ್ಣನನ್ನು ಮರೆತಿರುವುದೇ ಆಗಿದೆ. ಇದು ಭಾಗವತ ಮತ್ತು ಆಚಾರ್ಯರ ವಿಶ್ಲೇಷಣೆ. ನಾವು ಕೃಷ್ಣನೊಂದಿಗಿನ ನಮ್ಮ ಬಾಂಧವ್ಯವನ್ನು ಮರೆತಿದ್ದೇವೆ. ನಾವು ದೇಹದ ಜೊತೆಗೆ ಗುರುತಿಸಿಕೊಳ್ಳುತ್ತಿದ್ದೇವೆ.

ನಾವು ಆಧ್ಯಾತ್ಮಿಕ ಆತ್ಮ – ಕೃಷ್ಣನ ಅವಿಭಾಜ್ಯ ಅಂಗ. ನಾವು ಯಾರೆಂದು ನೆನಪು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಇಲ್ಲ. ಆದುದರಿಂದಲೇ ಆಧ್ಯಾತ್ಮಿಕ ಬದುಕು ಅಗತ್ಯ. ಆ ಬದುಕಿನಲ್ಲಿ ನಾವು ಯಾರು ಮತ್ತು ನಮ್ಮ ಪರಿಸ್ಥಿತಿ ಏನು ಎಂಬ ಪ್ರಜ್ಞೆಗೆ ನಮ್ಮ ಈಗಿನ ಪ್ರಜ್ಞೆಯನ್ನು ಕ್ರಮೇಣ ಪರಿವರ್ತಿಸಲಾಗುತ್ತದೆ.

ನನಗೊಂದು ಕುಟುಂಬ ಗೊತ್ತು. ಅವರ ಒಬ್ಬಳೇ ಮಗಳು ಐಟಿ ವೃತ್ತಿಯಲ್ಲಿದ್ದಳು. ಅಮೆರಿಕದಲ್ಲಿ ಇದ್ದವನ ಜೊತೆ ಅವಳಿಗೆ ಮದುವೆಯಾಯಿತು. ಇದು ಅದ್ಭುತ ಯಶಸ್ಸು ಎಂದು ಭಾವಿಸಿದ ಅವಳ ತಂದೆತಾಯಿಗೆ ಸಂತೋಷ ಇಮ್ಮಡಿಸಿತು. ಆನಂತರ ಅವಳು ಅಮೆರಿಕಕ್ಕೆ ಹೋದಳು – ಅಲ್ಲಿ ಕೆಲಸ ಮಾಡಲಾಗದ್ದರಿಂದ ಮನೆಯಲ್ಲೇ ಸೋಮಾರಿಯಾಗಿ ಕೂರುವಂತಾಯಿತು.

ಅವಳ ಗಂಡ ಕೆಲಸಕ್ಕೆ ಹೋಗುತ್ತಾನೆ, ಅವಳಿಗೆ ತನ್ನ ಎಲ್ಲ ಬಂಧು ಬಳಗವನ್ನು ಕಳೆದುಕೊಂಡೆ ಎಂಬ ಬೇಸರ. ಆರು ತಿಂಗಳಲ್ಲಿಯೇ ಅವಳು ಹತಾಶಳಾಗಿ ಬಿಟ್ಟಳು. ಯಶಸ್ವಿಯಾದ ವ್ಯಕ್ತಿ ಹಾಲು ಜೇನಿನ ನಾಡಿಗೆ ಹೋದವರ ಕತೆ ಇದು. ಅವಳು ಚಿನ್ನದ ಪಂಜರದಲ್ಲಿನ ಗಿಳಿಯಂತೆ. ಏನು ಪ್ರಯೋಜನ?

ಲೌಕಿಕ ಜಗತ್ತಿನಲ್ಲಿ ಸಂತೋಷದ ಆಶ್ವಾಸನೆ ಇದೆ, ಆದರೆ ಸುಖದ ಸಾಕಾರ ಇಲ್ಲ. ಸಂಕಷ್ಟಗಳಿಗೆ ತಾತ್ಕಾಲಿಕ ಪರಿಹಾರ ಮಾತ್ರ ಸಿಗುತ್ತದೆ, ನಾವು ಅದನ್ನೇ ಸುಖ, ನೆಮ್ಮದಿ ಎಂದು ತಪ್ಪಾಗಿ ಭಾವಿಸುತ್ತೇವೆ. ಒಂದು ಉದಾಹರಣೆ – ನಿಮಗೆ ಜ್ವರ ಬಂದಿದೆ, ಕೈಕಾಲು ನೋವು, ಏನೂ ಆಹಾರ ತೆಗೆದುಕೊಳ್ಳಲಾಗುತ್ತಿಲ್ಲ. ವೈದ್ಯರು ಔಷಧಿ ಕೊಡುತ್ತಾರೆ,  ನಿಮಗೆ ಉಪಶಮನವಾಗುತ್ತದೆ, ನೀವು ಆನಂದಪಡುವಿರಿ.

ಆದರೆ ಮತ್ತೆ ಬೇರೆ ರೀತಿಯ ಕಷ್ಟ ತಲೆದೋರುತ್ತದೆ – ಇದು ಸಾಗುತ್ತಲೇ ಇರುತ್ತದೆ. ವಾಸ್ತವಾಂಶ ಏನೆಂದರೆ, ನಮಗೆ ಜ್ವರ ಇಲ್ಲದಿರುವುದು ನಮಗೆ ಖುಷಿಯನ್ನು ಕೊಡುವುದಿಲ್ಲ. ನಿಮಗೆ ಜ್ವರ ಬಂದು ಅದು ವಾಸಿಯಾದಾಗ ನಿಮಗೆ ಆ ಸಂತಸ, ಆನಂದದ ಅನುಭವವಾಗುತ್ತದೆ. ಅದೊಂದು ರೀತಿ ಅನುಭವವನ್ನು ಸೃಷ್ಟಿಸಲಾಗಿದ್ದು ನಾವು ಅದನ್ನು ಜಗತ್ತಿನ ಸುಖ ಸಂತೋಷವೆಂದು ತಪ್ಪಾಗಿ ಭಾವಿಸುತ್ತೇವೆ. ಇದು ಆಚಾರ್ಯರ ವಿಶ್ಲೇಷಣೆ.

ಕೃಷ್ಣನ ಭಕ್ತರ ಗುಣಗಳಲ್ಲಿ ದಯೆಯೂ ಒಂದು ಎಂದು ವಿವರಿಸಲಾಗಿದೆ. ದಯೆ ಎಂದರೆ ಕರುಣೆ, ಅನ್ಯರ ಸಂಕಷ್ಟಗಳಿಗೆ ಸ್ಪಂದಿಸುವುದು. ಲೌಕಿಕ ಜಗತ್ತಿನ ಜನರ ಎಲ್ಲ ಸಂಕಷ್ಟಗಳಿಗೆ ಪರಿಹಾರವಾದ ಕೃಷ್ಣ ಪ್ರಜ್ಞೆ ಸಂದೇಶವನ್ನು ನೀಡಲು ಕೆಲವು ಬಾರಿ ಕೃಷ್ಣನೇ ಬರುತ್ತಾನೆ. ಕೃಷ್ಣನ ಜೊತೆಗಿನ ನಮ್ಮ ಬಾಂಧವ್ಯವನ್ನು ನೆನಪು ಮಾಡಿಕೊಳ್ಳುವುದರಲ್ಲಿಯೇ ಅಂತಿಮ ಸಂತೋಷವಿದೆ ಎಂಬುದು ಭಕ್ತರಾಗಿ ನಮಗೆ ಮನವರಿಕೆಯಾಗಬೇಕು.

ಕೃಷ್ಣನ ಪರಿಶುದ್ಧ ಭಕ್ತರಲ್ಲಿ ಈ ಗುಣವಿದೆ ಮತ್ತು ಎಲ್ಲ ಜನರ ಸಂತೋಷಕ್ಕಾಗಿ ನಾನೂ ಕೂಡ ಕೃಷ್ಣ ಪ್ರಜ್ಞೆಯನ್ನು ಹರಡಬೇಕೆಂಬ ಅಪೇಕ್ಷೆ ನಮಗಿರಬೇಕು. ಅದು ಚೈತನ್ಯ ಮಹಾಪ್ರಭುಗಳ ಅಪೇಕ್ಷೆಯಾಗಿತ್ತು. ಅದು ಶ್ರೀಲ ಪ್ರಭುಪಾದರ ಅಪೇಕ್ಷೆಯಾಗಿತ್ತು. ಆದುದರಿಂದ ಇದನ್ನು ಧರ್ಮ ಪ್ರಚಾರದ ಸ್ಫೂರ್ತಿಯಂತೆ ಕೈಗೆತ್ತಿಕೊಳ್ಳಲಾಗಿದೆ – ಕೃಷ್ಣನ ಬಗೆಗೆ ಜನರಿಗೆ ತಿಳಿಸಿ ಅವರನ್ನು ಸಂತೋಷಪಡಿಸುವುದು.

ಆದರೆ ಕಲಿಯುಗದಲ್ಲಿ ಬ್ರಾಹ್ಮಣರು ಯಾರೊಂದಿಗೂ ವೈದಿಕ ಜ್ಞಾನವನ್ನು ಹಂಚಿಕೊಳ್ಳುವುದಿಲ್ಲ ಎಂದು ಸಾರಿದರು. ವೈದಿಕ ಜ್ಞಾನದ ಮೇಲಿನ ತಮ್ಮ ಏಕಸ್ವಾಮ್ಯಕ್ಕೆ ಬೆದರಿಕೆ ಬರುವುದು ಎಂಬುದು ಅವರ ಭಾವನೆಯಾಗಿತ್ತು. ಅದು ನಿಜವಾಗಿಯೂ ಅತ್ಯಂತ ಭ್ರಷ್ಟ ಪದ್ಧತಿ.

ಆದರೆ, ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, – ನಾನು ಈಗ ಅತ್ಯಂತ ರಹಸ್ಯ ಜ್ಞಾನವನ್ನು ಹೇಳುತ್ತೇನೆ – ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ – ನನಗೆ ಶರಣಾಗಿ, ಈ ಜ್ಞಾನವನ್ನು ನೀವು ಪಸರಿಸಿದರೆ ನೀವು ನನಗೆ ತುಂಬಾ ಪ್ರಿಯರಾಗುತ್ತೀರಿ. ಚೈತನ್ಯ ಮಹಾಪ್ರಭು ಹೇಳುತ್ತಾರೆ – ಯಾರೇ ದೇಖೋ ತಾರೇ ಕಹೋ ಕೃಷ್ಣ ಉಪದೇಶ ಅಮಾರ ಆಜ್ಞಯ ಗುರು ಹಯ ತಾರ ಏ ದೇಶ – ನೀವು ಯಾರನ್ನು ಭೇಟಿ ಮಾಡಿದರೂ ಅವರಿಗೆ ಕೃಷ್ಣನ ಬಗೆಗೆ ತಿಳಿಸಿ.

ಒಮ್ಮೆ ಆಧ್ಯಾತ್ಮಿಕ ಗುರು ಎಂದು ಕರೆಯುವ ಒಬ್ಬರ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಕೆಲವು ಶಿಷ್ಯರು ಇದ್ದರು. ಅಲ್ಲಿ ಕಾಯುತ್ತಿದ್ದಾಗ, ಅವರ ಮನಸ್ಥಿತಿ ಅರಿಯಲು ಆ ಶಿಷ್ಯರ ಬಳಿ ಮಾತನಾಡ ತೊಡಗಿದೆ. ಅಲ್ಲೊಬ್ಬ ಮಹಿಳೆ ಇದ್ದರು. ಅವರ ಉಡುಗೆಯಿಂದ ಅವರು ನಿಕಟ ಅನುಯಾಯಿ ಎಂದು ಅರ್ಥವಾಯಿತು.

ಅವರನ್ನು ಕೇಳಿದೆ, “ನೀವೇನು ಮಾಡುವಿರಿ?’ ಆಕೆ ಉತ್ತರಿಸಿದರು, ‘ನಾನು ಜಾರ್ಖಂಡ್‌ನಲ್ಲಿ ಇದ್ದೇನೆ. ನಮ್ಮ ಗುರು ನಮಗೆ ಬೋಧಿಸಿದ್ದನ್ನು ಜನರಿಗೆ ಬೋಧಿಸುತ್ತಿರುವೆ’, ನಾನೆಂದೆ, ಎಲ್ಲಿ ಬೋಧಿಸುತ್ತಿರುವಿರಿ?’ ‘ಅರಣ್ಯದಲ್ಲಿ, ಗಿರಿಜನರಿಗೆ ಬೋಧಿಸುತ್ತಿರುವೆ ಅವರಿಗೆ ಮತ್ತೊಂದು ಪ್ರಶ್ನೆ ಹಾಕಿದೆ. “ನೀವು ಯಾವ ಭಾಷೆಯಲ್ಲಿ ಮಾತನಾಡುವಿರಿ?’ ಅವರೆಂದರು. ‘ನಾನು ತಮಿಳುನಾಡಿನವಳು.

ನನಗೆ ಹಿಂದಿ ಬರುವುದಿಲ್ಲ.!’ ನನಗೆ ಆಶ್ಚರ್ಯವಾಯಿತು. ‘ಹಾಗಾದರೆ ಜಾರ್ಖಂಡ್‌ನಲ್ಲಿ ಹೇಗೆ ಬೋಧಿಸುವಿರಿ?’ ‘ಹೇಗೋ ಮಾಡುವೆ. ಗುರುಗಳ ಆಶೀರ್ವಾದದಿಂದ ನನಗೆ ಬರುವ ಸ್ವಲ್ಪ ಹಿಂದಿಯಲ್ಲಿ ಬೋಧಿಸುವೆ.’ ನನಗೆ ಅಚ್ಚರಿಯಾಯಿತು. ಇನ್ನೊಬ್ಬ ಮಹಿಳೆ ತಮಿಳುನಾಡಿನವಳು, ಎಲ್ಲೆಡೆ ಹೋಗಿ ಜನರನ್ನು ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾಳೆ. ಅದೂ ಶೇಖಡ ನೂರರಷ್ಟು ನಿಜವಾದ ಆಧ್ಯಾತ್ಮಿಕವಲ್ಲದ್ದನ್ನು. ಅದು ಪರಂಪರೆ ಸಂದೇಶವಲ್ಲ. ಅದು ವೈದಿಕ ಸಾಹಿತ್ಯದ ಸರಿಯಾದ ಸಂದೇಶವೂ ಅಲ್ಲ. ಏನೋ ಕಲ್ಪಿತ. ಆದರೆ ನಮ್ಮ ಬಳಿ ನಿಖರವಾದ ಮಾಹಿತಿ ಇದೆ.

ಕೃಷ್ಣ ಹೇಳುತ್ತಾನೆ, ಸಾವಿನ ಸಂದರ್ಭದಲ್ಲಿ ಯಾರು ಗುರು ಮಂತ್ರ ನೆನಪು ಮಾಡಿಕೊಳ್ಳುತ್ತ ದೇಹವನ್ನು ತ್ಯಜಿಸುವರೋ ಅವರು ಆ ಕ್ಷಣ ನನ್ನ ಸ್ವಭಾವ ಹೊಂದುವರು. ಈ ಬಗ್ಗೆ ಸಂದೇಹವೇ ಬೇಡ. ಇದರ ತತ್ತ್ವ ಏನೆಂದರೆ, ಸಾವಿನ ಸಮಯದಲ್ಲಿ, ನೀವು ಯಾವ ಪ್ರಜ್ಞಾಸ್ಥಿತಿಯಲ್ಲಿ ಇರುತ್ತೀರೋ ಅದು ಮುಂದೆ ನಿಮಗೆ ದೊರೆಯುವ ದೇಹವನ್ನು ನಿರ್ಧರಿಸುತ್ತದೆ.

ಆದುದರಿಂದ ನೀವು ಅಭ್ಯಾಸ ಮಾಡಬೇಕು. ನೀವು ಕೇಳಬಹುದು, ಕೃಷ್ಣನನ್ನು ನೆನೆಯಲು ನಾನು ಅಭ್ಯಾಸ ಮಾಡತೊಡಗಿದರೆ, ಈ ಜಗತ್ತಿನಲ್ಲಿ ನನ್ನ ಕರ್ತವ್ಯವೇನು? ನಾನು ಎಷ್ಟೆಲ್ಲಾ ಮಾಡಬೇಕಾಗಿದೆ. ಕೃಷ್ಣ ಇದಕ್ಕೆ, ಅತ್ಯುತ್ತಮ ಕಾರ್ಯರೂಪವಾದ ಪರಿಹಾರ ಸೂಚಿಸಿದ್ದಾನೆ – ನನ್ನನ್ನು ಚಿಂತಿಸುತ್ತ ಜೀವನ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

ನಾವು ಸೂಕ್ತ, ಸರಿಯಾದ ಪ್ರಜ್ಞೆಯನ್ನು ಕಾಪಾಡಿಕೊಂಡರೆ, ಕಲಿಯುಗದಲ್ಲಿ ಜನರು ದುಃಖಿಗಳು, ಅವರಿಗೆ ನಾನು ಕೃಷ್ಣ ಪ್ರಜ್ಞೆಯನ್ನು ಬೋಧಿಸಬೇಕೆಂಬ ಸ್ಫೂರ್ತಿ ಸದಾ ನಮ್ಮಲ್ಲಿ ತುಂಬಿರುತ್ತದೆ. ಅವರ ತಂತ್ರಜ್ಞಾನ, ಹಣ, ಸ್ಥಾನ ಮುಂತಾದವು ಅವರಿಗೆ ಸಂತೋಷ ಉಂಟುಮಾಡುತ್ತವೆ ಎಂದು ಅವರು ಯೋಚಿಸುತ್ತಾರೆ, ಇವೆಲ್ಲ ಅಂತಿಮವಾಗಿ ಸುಖ, ಸಂತೋಷ ನೀಡಲಾರವು ಎಂಬುದನ್ನು ಅವರು ಅರಿತುಕೊಳ್ಳುವುದಿಲ್ಲ.

ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಹೇಳುತ್ತಾರೆ – ಜೀವಂತ ಮನುಷ್ಯ ಮಾತ್ರ ಬೋಧಿಸಬಲ್ಲ, ಮೃತ ದೇಹದಿಂದ ಬೋಧನೆ ಸಾಧ್ಯವಾಗದು. ನಮಗೆ ಬೋಧಿಸಲು ಸಾಧ್ಯವಾಗದಿದ್ದರೆ, ನಾವು ಮೃತ ದೇಹಕ್ಕೆ ಸಮ.

ಕೃಷ್ಟ ಪ್ರಜ್ಞೆಯ ಸಂದೇಶವನ್ನು ಪ್ರತಿಯೊಬ್ಬರಲ್ಲಿಗೂ ಒಯ್ಯಬೇಕೆಂಬ ಧರ್ಮಪ್ರಸಾರದ ಸ್ಫೂರ್ತಿ ನಮ್ಮ ಆಚಾರ್ಯರಲ್ಲಿ ಇತ್ತು. ನಾವೇ ಕೃಷ್ಣಪ್ರಜ್ಞೆ ಹೊಂದಿಲ್ಲದಿದ್ದರೆ, ನಾವು ಬೇರೆಯವರಲ್ಲಿ ಅದರ ಅರಿವು ಮೂಡಿಸುವುದು ಸಾಧ್ಯವಿಲ್ಲ. ಆದುದರಿಂದ, ಕಲಿಯುಗದಲ್ಲಿ ಜನರು ಹೇಗೆ ಆತಂಕದಿಂದ ಕೂಡಿದ್ದಾರೆ ಮತ್ತು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದರ ಅರಿವನ್ನು ನಮಗೆ ಪ್ರಭುಪಾದರು ಮೂಡಿಸುತ್ತಿದ್ದಾರೆ. ಈ ಜ್ಞಾನವನ್ನು ಎಲ್ಲರಿಗೂ ಹಂಚುವುದು ಪ್ರತಿಯೊಬ್ಬ ಭಕ್ತರ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi