ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

-ಕೆ.ವಿ.ಪದ್ಮಾವತಿ

ಪರತತ್ತ್ವದಲ್ಲಿ ನಂಬಿಕೆ, ಸಚ್ಛಾಸ್ತ್ರದಲ್ಲಿ ಅರಿವು, ಸಾಧನೆಯಲ್ಲಿ ಪ್ರಗತಿ, ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಪಾಪ-ತಾಪಗಳನ್ನು ಎಳೆದು ಹಾಕುವ ಭಕ್ತರ ತನುಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸಂತಸದ ನೆಲೆಯಾದ ಕಾಕೋಳು ಕೃಷ್ಣನ ಸಾನ್ನಿಧ್ಯಕ್ಕೆ ಬನ್ನಿ… ಮಂಗಳಮೂರ್ತಿಯ ದರುಶನ, ನಮಿಸಿದ ಶಿರಕರಗಳು ಪರಮ ಪಾವನ, ಇದುವೇ ಜೀವನದ ಧನ್ಯತೆಗೊಂದು ಅಪೂರ್ವ ಆಹ್ವಾನ, ಬೇಡವೇ ನಿಮಗೆ ಈ ರಸದೌತಣ, ಇನ್ನೇಕೆ ಆಗಮನಕ್ಕೆ ನಿಧಾನ?

ಇಲ್ಲಿ ಆದರವಿದೆ, ಸಂತಸವಿದೆ, ಭಕ್ತಿಯಹೊನಲಿದೆ, ನಿತ್ಯನೋಟದ ಶಾಂತಿ ಇದೆ. ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ ಭಕ್ತಿಯ ಅಮೃತವರ್ಷಧಾರೆ ಸ್ಫುರಿಸುತ್ತಿದೆ. ಕಾಕೋಳು ಕೃಷ್ಣಾಲಯ ಕೈಬೀಸಿ ಕರೆಯುತ್ತಿದೆ. ದೈನಂದಿನ ಜಂಜಡ, ಮಾನಸಿಕ ತುಮುಳಗಳಿಂದ ಮುಕ್ತಿ ಪಡೆದು ನೆಮ್ಮದಿಯನ್ನು ಅರಸುವ ಇಚ್ಛೆ ನಿಮಗಿದ್ದರೆ ನಗರದ ಸಮೀಪವಿರುವ ಕಾಕೋಳು ನಿಮ್ಮಚ್ಛೆಯನ್ನು ಪೂರೈಸುತ್ತದೆ.

ಶ್ರೀಪತಿಯ ದಿವ್ಯಮೂರ್ತಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಶಾಂತಿಯ ಸೆಲೆಯ ಅನುಭವ ನಿಮ್ಮದಾಗುತ್ತದೆ. ಇಷ್ಟೆಲ್ಲ ಮಹತ್ತ್ವದಿಂದ ಜಾಗೃತ ಸ್ಥಾನವಾಗಿರುವ ಶ್ರೀಕ್ಷೇತ್ರ ಕಾಕೋಳು ಬೆಂಗಳೂರಿನಿಂದ 30 ಕಿ.ಮೀ ದೂರದಲ್ಲಿದೆ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ.

ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ. ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.

ಕೈಮುಗಿದು ಒಳಗೆ ಬಾ ಇದು ದ್ವಾರಕಧಾಮ

ಕಾಕೋಳು ಗ್ರಾಮದ ಮಧ್ಯಭಾಗದಲ್ಲಿರುವ ಆಳೆತ್ತರದ ಅನನ್ಯವಾದ ಬೃಂದಾವನಾಂತರ್ಗತ, ಚತುರ್ಭುಜ ವೇಣುಗೋಪಾಲ ಕೃಷ್ಣನ ಗುಡಿಯೇ ಇಲ್ಲಿನ ಪ್ರಮುಖ ಆಕರ್ಷಣೆ. ಕಾಕೋಳಿನ ಪುರಾಣೇತಿಹಾಸ ಭವ್ಯ. ಕಾಕೋಳು ಸ್ಥಳೀಯ ಚೇಳೂರು ಚಾವಡಿಗೆ ಸೇರಿದ್ದು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು.

ಕಾಕೋಳಿಗೆ ಹಿಂದೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು. ಕಾಕೋಡು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂದರ್ಥ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನಮಾಡಿದ ಕೊಳ ಅದುವೇ ಕಾಕೋಳು ಆಯಿತೆನ್ನುತ್ತದೆ ಸ್ಥಳ ಪುರಾಣ.

ಶ್ರೀಪಾದರಾಜರ ಹಿರಿಮೆ ವೇಣುಗೋಪಾಲನ ಮಹಿಮೆ

ದಾಸ ಸಾಹಿತ್ಯದ ಆದ್ಯಪ್ರವರ್ತಕ ಶ್ರೀ ಶ್ರಿಪಾದರಾಜರು ಅರ್ಕಾವತಿ ನದಿ ತೀರದ ಪಶ್ಚಿಮ ದಂಡೆಯಲ್ಲಿನ ಚಿಕ್ಕದಾಪುರದಲ್ಲಿ ಶ್ರೀಮದ್ಭಾಗವತದಲ್ಲಿ ಭಗವಂತನು ಇಂದ್ರಾದಿ ದೇವತೆಗಳಿಗೆ ತೋರಿದ ಮೂಲರೂಪದಂತೆ ಈ ಮನಮೋಹಕ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರು.

ಕಾಕೋಳು ಈ ಮೊದಲು ಹೆಸರುಘಟ್ಟದ ಮದರ್‌ಡೈರಿ (ಕೆಎಂಎಫ್‌) ನ ಆವರಣದಲ್ಲಿ ನಿರ್ಮಿತವಾಗಿತ್ತು. (ಶ್ರೀವ್ಯಾಸರಾಜರು ಸ್ನಾನ ಆಹ್ನಿಕಾದಿಗಳನ್ನು ಮಾಡುತ್ತಿದ್ದ ಅರ್ಕಾವತಿ ನದಿ ಘಟಕ್ಕೆ “ವ್ಯಾಸರಘಟ್ಟ” ಎಂಬ ಹೆಸರು ಬಂದಿತ್ತು. ಕಾಲ ಕ್ರಮೇಣ ಜನರ ಬಾಯಲ್ಲಿ “ವ್ಯಾ” ಅಕ್ಷರ “ಹೆ: ಆಗಿ ಹೆಸರುಘಟ್ಟವಾಯಿತು).

1900 ಸುಮಾರಿನಲ್ಲಿ ನಗರಕ್ಕೆ ನೀರು ಪೂರೈಸಲು ಹೆಸರುಘಟ್ಟ ಕೆರೆಗೆ ಅಣೆಕಟ್ಟು ನಿರ್ಮಿಸಿದ ಸಂದರ್ಭದಲ್ಲಿ ಈ ಊರಿನ ಶ್ಯಾನುಭೋಗರು, ಬ್ರಿಟೀಷರ ಕಾಲದಲ್ಲಿ ಕಾಕೋಳು ಹೋಬಳಿಯ ಪ್ರಜಾಪ್ರತಿನಿಧಿ ಸದಸ್ಯರೂ ಆಗಿದ್ದ ನರಸಣ್ಣ ಮತ್ತು ಶೇಷಗಿರಿರಾಯರು, ಸ್ವಪ್ನಲಬ್ಧ  ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿದರು.

ಧಾರ್ಮಿಕ ಸಮನ್ವಯದ ನೆಲೆವೀಡು

ದೇವನಿರುವಲ್ಲಿ ಇರಲೇಬೇಕು ಪ್ರಶಾಂತತೆ, ಒಂದು ಅನಿರ್ವಚನೀಯ ದೈವಿಕತೆಯು ಪರಿಸರವನ್ನು ಆವರಿಸಿದರೆ ಅದಕ್ಕೊಂದು ಕಳೆ. ಅಂತೆಯೆ ದೇವಾಲಯವನ್ನು ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ. ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯಸ್ವಾಮಿ ದರ್ಶನ ನಿಮಗಾಗುತ್ತದೆ.

1993ರಲ್ಲಿ ಸೋಸಲೆ ವ್ಯಾಸರಾಜ ಮಠಾಧೀಶರಿಂದ ಬೃಂದಾವನದ ಮುಂದೆ ಮೂಲ ರೂಪದ ಪ್ರತಿಕೃತಿಯ ಪ್ರತಿಷ್ಠಾಪನೆಗೊಂಡಿದೆ. ಮಂದಹಾಸದಿಂದ ಮೂರು ಲೋಕಗಳನ್ನೇ ಮೀರಿಸುವ ಚಿನ್ಮಯಿ ಕೃಷ್ಣನ ಅಭಿಮುಖವಾಗಿ ವೇದವ್ಯಾಸರ, ಆರ್ಚಾಯ ಮಧ್ವರ ಹಾಗೂ ಧ್ರುವಾಂಶ ಸಂಭೂತ ಶ್ರೀಪಾದರಾಜರ ಪ್ರತಿಮೆಗಳಿವೆ.

ಪ್ರದಕ್ಷಿಣಾಕಾರಾವಾಗಿ ಬಂದರೆ ಪ್ರಧಾನ ದ್ವಾರದ ಬಳಿ ದಾಸಶ್ರೇಷ್ಠ ಕನಕ-ಪುರಂದರ ಪ್ರತಿಮೆಗಳಿವೆ. ಗರುಡಗಂಬ, ಬಲಿಪಾದ, ಸುಸಜ್ಜಿತ ಪಾಂಚಜನ್ಯ ಸಭಾಂಗಣ, ನಾಗರ ಮಂಟಪ, ಅರ್ಜುನಪೂಜಿತ ದಕ್ಷಿಣೇ‍ಶ್ವರನಿಗೆ ನಮಸ್ಕರಿಸಿ ಮುನ್ನಡೆದರೆ ಮುಳಬಾಗಿಲು ಶ್ರೀಪಾದರಾಜಮಠದ ಶ್ರೀವಿಜ್ಞಾನನಿಧಿತೀರ್ಥರಿಂದ ಮಂಡಲ ಪೂಜಿತ ಆದಿತ್ಯಾದಿ ನವಗ್ರಹಗಳು ನಮ್ಮನ್ನು ಅನುಗ್ರಹಿಸುತ್ತವೆ.

ಕಾಕೋಳು ತೇರು ವೈಭವದ ಮೇರು

ಮೂಲವಿಗ್ರಹಗಳ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಆ ಸಂದರ್ಭದಲ್ಲಿ ಇಡೀ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಪ್ರತಿವರ್ಷ ಚೈತ್ರಮಾಸದ ಶುದ್ಧತೃತೀಯದಿಂದ ಆರಂಭವಾಗಿ ರಾಮನವಮಿ ಪರ್ಯಂತ ನಡೆಯುವ ಉತ್ಸವದ ಭವ್ಯ ಪರಂಪರೆಗೀಗ 82ನೇ ವಸಂತದ ಸಂಭ್ರಮ.

ಬ್ರಹ್ಮರಥೋತ್ಸವದ ಕೈಂಕರ್ಯಗಳನ್ನು ಪಾಂಚಾರಾತ್ರಾಗಮ ರೀತ್ಯ ನೆರವೇರಿಸಲಾಗುತ್ತದೆ. ಮಂಗಳಸುತ್ತಿಯಿಂದ ಅಂಕುರಾರ್ಪಣೆಗೊಳ್ಳುವ ಬ್ರಹ್ಮರಥೋತ್ಸವ ಲೋಕಕಲ್ಯಾಣದ ಸಂಕೇತವಾಗಿದೆ. ಕಾಕೋಳು ಬ್ರಹ್ಮರಥೋತ್ಸವದ ಆಚರಣೆಯೇ ವಿಶೇಷ. ಮೊದಲಿಗೆ ಅಷ್ಟಮಂಗಳ ದೇವತೆಗಳನ್ನು ಮಂಗಳವಾದ್ಯ, ವೇದ ಘೋಷಣಗಳಿಂದ ಆಹ್ವಾನಿಸಲಾಗುತ್ತದೆ. ಆನಂತರ ಗರುಡಧ್ವಜ ಆರೋಹಣದಿಂದ ಉತ್ಸವಕ್ಕೆ ಚಾಲನೆಕೊಡುತ್ತಾರೆ.

ಧ್ವಜಸ್ತಂಭದ ತುದಿಗೇರಿದ ಗರುಡ, ಕಲಾಪಗಳು ಸಾಂಗವಾಗಿ ಸಾಗಲು ಭಗವಂತನಿಂದ ನಿಯಮಿತನು. ಬ್ರಹ್ಮರಥೋತ್ಸವದ ಪ್ರಮುಖ ಅಂಗವೇ ಗರುಡಬುತ್ತಿ. ಗರುಡದೇವರ ಪ್ರಸಾದವನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆ ಮಾಡಿದರೆ ಸಂತಾನಭಾಗ್ಯ ನಿಶ್ಚಿತ ಎನ್ನುವ ಪರಂಪರಾಗತ ನಂಬಿಕೆಯಿದೆ. ಹಾಗಾಗಿ ಈ ದೇವರು ಸಂತಾನ ವೇಣುಗೋಪಾಲ ಎಂಬ ಹೆಸರಿನಿಂದ ಜನಪ್ರಿಯನಾಗಿದ್ದಾನೆ.

ಕಂಗಳಿದ್ಯಾತಕೋ ಕಾಕೋಳು ಕೃಷ್ಣನ ನೋಡದ

ಮರುದಿನ ಬೆಳಗ್ಗೆ ಗಜೇಂದ್ರ ಮೋಕ್ಷ ಉತ್ಸವ. ಕರಿರಾಜವರದನಾಗಿ ಕಂಗೊಳಿಸುವ ಸ್ವಾಮಿಗೆ ಸಂಜೆ ಮಹಾಕಲ್ಯಾಣೋತ್ಸವ; ನಿತ್ಯ ಕಲ್ಯಾಣಮೂರ್ತಿ ಪ್ರಸನ್ನಗೊಂಡು ಹರಸುವ ದರುಶನ ಪಾಪಪರಿಹಾರಕ-ಪುಣ್ಯವರ್ಧಕ. ಈ ವಿಶೇಷ ಸಂದರ್ಭದಲ್ಲಿ ವಿವಾಹಾಕಾಂಕ್ಷಿಗಳು ಕಂಕಣಭಾಗ್ಯ ಕೂಡಿಬಂದ ಹಲವು ನಿದರ್ಶನಗಳಿವೆ.

ಈ ಪರಿಯ ಸೊಬಗ ಇನ್ಯಾವ ದೇವರಲೂ ಕಾಣೆ

ಪಂಚಮಿಯಂದು ಶೇಷವಾಹನದಲ್ಲಿ ರುಕ್ಮಿಣಿ-ಸತ್ಯಭಾಮ ಸಮೇತ ಶ್ರೀಕೃಷ್ಣನ ಉತ್ಸವಮೂರ್ತಿಯು ಗ್ರಾಮ ಪ್ರದಕ್ಷಿಣೆ ಹೊರಟು ಅಭಿಜಿನ್‌ ಮುಹೂರ್ತದಲ್ಲಿ ಪೂರ್ಣಾಹುತಿಯಾದ ಅನಂತರ ಗರುಡಾರೂಢ ಸ್ವಾಮಿಯ ಪುಷ್ಪಾಲಂಕೃತ ಮಹಾರಥಾರೋಹಣ ನೆರವೇರುತ್ತದೆ. ವ್ಯಾಸ-ದಾಸ ಸಾಹಿತ್ಯ ಪಂಥದವರ ಸಮಾಗಮದ ನಾಮಸಂಕೀರ್ತನೆ ವಿಶೇಷ ಮೆರಗನ್ನುಂಟುಮಾಡುತ್ತದೆ.

ವಸಂತೋತ್ಸವ ಪದವೇ ಭಕ್ತರಲ್ಲಿ ಸಂಭ್ರಮದ ಮನೋಲ್ಲಾಸದ ಭಾವವನ್ನು ಸ್ಫುರಿಸುತ್ತದೆ. ಆವಭೃತಸ್ನಾನ, ಓಕುಳಿ ಆಟದಲ್ಲಿ ಹೆಚ್ಚಾಗಿ ದೇಸಿ ಸಂಸ್ಕೃತಿಯನ್ನು ಕಾಣಬಹುದು. ಗೀತಾಚಾರ್ಯನಿಗೆ ಗಾನಾಭಿಷೇಕದೊಂದಿಗೆ ರಾತ್ರಿ ತೂಗುವೆ ಕೃಷ್ಣನ ತೂಗುವೆ ರಂಗನ ಎನ್ನುತ್ತಾ ಹೂಮಂಚದಲ್ಲಿನ ಶಯನೋತ್ಸವದೊಡನೆ ಸಂಪನ್ನವಾಗುವ ಉತ್ಸವಗಳ ಮಹಾಸರಣಿ ಭಾವುಕರ ಭಕ್ತಿ ಬೆಳೆಸಿ ಪುಣ್ಯಯಾತ್ರೆಯ ಸಾಫಲ್ಯ ಹೆಚ್ಚಿಸುವುದು.

ಡೋಲಾಯಮಾನಂ ಗೋವಿಂದಂ ಮಂಚಸ್ಥ ಮಧುಸೂದನಂ|

ರಥಸ್ಥ ಕೇಶವಂ ದೃಷ್ಟ್ವಾ ಪುನರ್ಜನ್ಮ ನವಿದ್ಯತೇ||

ಕಾಕೋಳು ತೇರೆಂದರೆ ಅದು ನಮಗೆ ಮತ್ತೆ ಬಾಲ್ಯವನ್ನು ನೆನೆಪಿಸುವ ಕಾಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವಪಡೆದ ಪುಣ್ಯ ಕಾಲ, ತನುಮನಧನ ಸಹಾಯದ ಮೂಲಕ ಕೃತಕೃತ್ಯರಾಗುವ ಪರಮ ಪುಣ್ಯಕಾಲ. ರಥದಗಾಲಿಗಳು ಉರುಳುತ್ತ ಸಾಗುತ್ತಿದ್ದಂತೆ ನಿಂತ ನೀರಿನಂಥ ನಮ್ಮ ಬದುಕಿಗೆ ಹೊಸ ಚಾಲನೆ ತಂದುಕೊಡೋಣ, ರಥವನೇರಿ ಬರುವ ಆ ಮಹಾರಾಥಿಕನ ಪಾದಗಳಿಗೆ ಶರಣಾಗೋಣ ಬನ್ನಿ. ರಥೋತ್ಸವ ದೈವಭಕ್ತಿಯ ಅನನ್ಯತೆಯನ್ನು, ಅಸ್ಮಿತೆಯನ್ನು ಬಿಂಬಿಸುವ ಒಂದು ವಿಶಿಷ್ಟ ರೂಪಕ.

ಭಕ್ತಿಭಾವದ ಸೆಲೆಯಲ್ಲಿ ಆಧ್ಯಾತ್ಮಿಕ ಹೊನಲು

ಇಂದಿನ ಐಟಿ, ಬಿಟಿ ಉದ್ಯೋಗ ಸಂಸ್ಕೃತಿಯಲ್ಲಿ ಹತಾಶೆ, ಉದ್ವಿಗ್ನತೆ, ಮಾನಸಿಕ ತೊಳಲಾಟಗಳಿಗೂ ದೇವಸ್ಥಾನಗಳು ಶಾಂತಿ ಧಾಮಗಳಾಗಬೇಕಿರುವುದರಿಂದ ಈ ನಿಟ್ಟಿನಲ್ಲಿ ಕಾಕೋಳು ದೇವಸ್ಥಾನವು ಆಗಾಧ ಕೊಡುಗೆ ನೀಡಿದೆ. ಎಲೆಮರೆ ಕಾಯಂತಿರುವ ಈ ಆಲಯವು ಇತ್ತೀಚೆಗೆ ಪ್ರಾಮುಖ್ಯವನ್ನು ಪಡೆಯುತ್ತಿದ್ದು, ಒಮ್ಮೆ ಈ ತಾಣ ಸಂದರ್ಶಿಸಿದರೆ, ಮತ್ತೊಮ್ಮೆ ಮಗದೊಮ್ಮೆ ಸಂದರ್ಶಿಸಬೇಕೆಂಬ ಹಂಬಲವುಂಟಾಗುತ್ತದೆ. ಒಟ್ಟಾರೆ ಈ ದೇಗುಲ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ.

ಇದಲ್ಲದೆ ಪಾಳೆಗಾರರ ಕಾಲದ ವಾಸ್ತು ಶೈಲಿಯ ಕ್ಷೇತ್ರಪಾಲಕ ವೀರಭದ್ರಸ್ವಾಮಿ, ಗ್ರಾಮದೇವತೆ ಬೆಂಕಿಮಾರಮ್ಮ ಹಾಗೂ ಕನಕದಾಸರಿಂದಲೇ ಪೂಜೆಸಲ್ಪಟ್ಟ ಭಕ್ತಿ (ಬೀರ) ಲಿಂಗೇ‍ಶ್ವರ ಮುಂತಾದ ಆಲಯಗಳ ತಾಣವೇ ಇದಾಗಿದ್ದು “ಬಾ ಯಾತ್ರಿಕನೆ ನಿನಗೆ ಸ್ವಾಗತ” ಎಂದು ಕೈ ಬೀಸಿ ಕರೆಯುತ್ತದೆ.

ಸಂಭ್ರಮದ ಶ್ರೀಕೃಷ್ಣಜನ್ಮಾಷ್ಟಮಿ, ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹ, ವನಭೋಜನ, ಧಾತ್ರಿಹವನ, ದೀಪಾರಾಧನೆ, ಹನುಮ ಜಯಂತಿ, ಸಮೃದ್ಧ ವಿಜಯ ಪಾರಾಯಣ, ಇನ್ನುಳಿದಂತೆ ಮಧ್ವನವಮಿ, ಶ್ರೀಪಾದರಾಜರೇ ಮೊದಲಾದ ಗುರುವರೇಣ್ಯರ ಆರಾಧನೆ ವಿಶಿಷ್ಟವಾಗಿ ಆಚರಿಸಲಾಗುವುದು.

ಕಾಕೋಳು ತಲುಪುವುದು ಹೇಗೆ?

ಸ್ವಂತ ವಾಹನದಲ್ಲಿ ಬಂದರೆ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಜಕ್ಕೂರು ಬಳಿ ಎಡಕ್ಕೆ ತಿರುಗಿ ಯಲಹಂಕ- ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆಯಲ್ಲಿ ಎಡಕ್ಕೆ ಆರು ಕಿ.ಮೀ. ಸಾಗಿದರೆ, ಅಥವಾ ಹೆಸರುಘಟ್ಟದ ಕಡೆ ಬಂದರೆ ಕೆಎಂಎಫ್‌ ನಿಂದ ಬಲಕ್ಕೆ ಪ್ರಯಾಣಿಸಿದರೆ ಕಾಕೋಳು ತಲುಪಬಹುದು.

ಘಾಟಿಸುಬ್ರಹ್ಮಣ್ಯ, ಬ್ಯಾತದ ಮಹಾಲಕ್ಷ್ಮೀ, ಚಿಕ್ಕಮದುರೈನ ಶನೈಶ್ಚರ, ಹೊನ್ನೆನಹಳ್ಳಿ ವ್ಯಾಸರಾಜ ಪ್ರತಿಷ್ಠಿತ ಹನುಮ, ಐವರುಕಂಡಪುರದ ಈಶ್ವರ ದೇಗುಲ, ಹೆಸರುಘಟ್ಟದ ನೃತ್ಯ ಗ್ರಾಮ ಸಮೀಪದ ಪ್ರೇಕ್ಷಣಿಯ ಸ್ಥಳಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi