ಧೃತರಾಷ್ಟ್ರನ ಗೃಹತ್ಯಾಗ

ಪಾಂಡವರ ಸೋದರ ಮಾವನಾದ ಮಹಾತ್ಮ ವಿದುರನು ಕುರುಕ್ಷೇತ್ರದಲ್ಲಿ ನಡೆದ ಘೋರ ಯುದ್ಧದಲ್ಲಿ ಪಾಲುಗೊಂಡಿರಲಿಲ್ಲ. ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ವಿದುರನು ತೀರ್ಥಯಾತ್ರೆ ಕೈಗೊಂಡಿದ್ದ. ಆತ್ಮದ ಗಮ್ಯಸ್ಥಾನ ಯಾವುದೆಂಬುದನ್ನು ಮೈತ್ರೇಯ ಋಷಿಗಳಿಂದ ವಿದುರನು ಜ್ಞಾನ ಸಂಪಾದಿಸಿದ್ದು ಈ ಯಾತ್ರೆಯ ಕಾಲದಲ್ಲೇ. ಯಾತ್ರೆ ಮುಗಿಸಿಕೊಂಡು ವಿದುರನು ಹಸ್ತಿನಾಪುರಕ್ಕೆ ಹಿಂತಿರುಗಿದ.

ವಿದುರನು ಅರಮನೆಗೆ ಹಿಂತಿರುಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಹರ್ಷದಿಂದ ಅವನನ್ನು ಸುತ್ತುವರಿದರು. ವಿದುರನು ತಮ್ಮೊಡನೆ ಇರಲಿಲ್ಲವಾದ್ದರಿಂದಲೂ, ಬಹುಕಾಲ ಅವನನ್ನು ಬಿಟ್ಟಿದ್ದುದರಿಂದಲೂ ಅರಮನೆಯ ನಿವಾಸಿಗಳು ಪ್ರೀತಿ ಉಕ್ಕಿ ಬಂದು ರೋದಿಸಿದರು. ತರುವಾಯ ರಾಜಾ ಯುಧಿಷ್ಠರನು ವಿದುರನಿಗೆ ಉಚಿತಾಸನವನ್ನೂ ಭವ್ಯ ಸ್ವಾಗತವನ್ನೂ ಏರ್ಪಡಿಸಿದನು. ವಿದುರನು ಉಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಳಿಕ ನೆಮ್ಮದಿಯಿಂದ ಸುಖಾಸೀನನಾದನು.

ತರುವಾಯ ರಾಜನು ವಿದುರನೊಂದಿಗೆ ಮಾತಿಗಾರಂಭಿಸಿದನು. ಆಸ್ಥಾನದಲ್ಲಿದ್ದ ಸಭಾಸದರು ಅವರ ಮಾತನ್ನು ಕೇಳುತ್ತ ಕುಳಿತರು.

ಮಹಾರಾಜ ಯುಧಿಷ್ಠರನು ನುಡಿದನು: “ಮಾವ, ನೀನು ನಮ್ಮನ್ನೂ ನಮ್ಮ ತಾಯಿಯನ್ನೂ ಅನೇಕ ವಿಪತ್ತಿನ ಸಂದರ್ಭಗಳಲ್ಲಿ ಕಾಪಾಡಿದೆ. ಅದು ನಿನಗೆ ನೆನಪಿದೆಯೆ? ಭೂವಲಯದ ಸಂಚಾರದ ಕಾಲದಲ್ಲಿ ನೀನು ಅನ್ನಪಾನಾದಿಗಳಿಗೆ ಏನು ಮಾಡಿದೆ? ಮಾವ, ನೀನು ದ್ವಾರಕೆಗೂ ಹೋಗಿದ್ದಿರಬೇಕು. ಅಲ್ಲಿ ನೀನು ಯದುವಂಶಕ್ಕೆ ಸೇರಿದ ನಮ್ಮ ಮಿತ್ರರು ಹಾಗೂ ಹಿತೈಷಿಗಳನ್ನು ಕಂಡಿದ್ದಿರಬೇಕು. ಆ ಜನ ಸದಾ ಭಗವಾನ್ ಶ್ರೀಕೃಷ್ಣನ ಸೇವೆಗೆ ಬದ್ಧಕಂಕಣರು. ಅವರೆಲ್ಲ ಸೌಖ್ಯವಾಗಿದ್ದಾರೆಯೆ?

ಮಹಾರಾಜ ಯುಧಿಷ್ಟರನಿಂದ ಈ ಪರಿಯ ಪ್ರಶ್ನೆಗಳನ್ನು ಎದುರಿಸಿದ ಮಹಾತ್ಮ ವಿದುರನು ತಾನು ವೈಯಕ್ತಿಕವಾಗಿ ಅನುಭವಿಸಿದ್ದನ್ನೆಲ್ಲಾ ಒಂದೊಂದಾಗಿ ವರ್ಣಿಸಿದನು. ಆದರೆ ಯದು ಸಂತತಿಯು ನಾಶವಾಗಿಹೋಗಿದ್ದ ಸಂಗತಿಯನ್ನು ಮಾತ್ರ ಅವನು ಹೇಳದೆ ಮುಚ್ಚಿಟ್ಟನು.

ಪಾಂಡವರು ದುಃಖಿತರಾಗುವುದನ್ನು ಯಾವುದೇ ಸಂದರ್ಭದಲ್ಲಾಗಲಿ ಸಹಿಸುವುದು ಮೃದುಹೃದಯಿಯಾದ ವಿದುರನಿಗೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನುಂಗಲಾಗದ ಸಹಿಸಲಾಗದ್ದೂ ಆದ ಯದುಸಂತತಿ ನಾಶವಾದ ಸಂಗತಿಯನ್ನು ವಿದುರನು ಹೇಳಲಿಲ್ಲ. ಏಕೆಂದರೆ ವಿಪತ್ತುಗಳು ಕರೆಯದೆಯೇ ಬರುತ್ತವೆ.

ಹೀಗೆ ದೈವಾಂಶವುಳ್ಳವನೋ ಎಂಬಂತೆ ಅವನ ಬಂಧು ಬಳಗದವರಿಂದ ಸೇವಿತನಾದ ವಿದುರನು ತನ್ನ ಹಿರಿಯಣ್ಣನ ಮನಸ್ಸು ತಿಳಿಯಾಗಲೆಂದು, ಹೀಗಾದರೂ ಉಳಿದ ಎಲ್ಲರೂ ನೆಮ್ಮದಿ ಕಾಣಲೆಂದು ಸ್ವಲ್ಪ ಕಾಲ ಪಾಂಡವರ ಜೊತೆ ಇದ್ದನು.  ಕಾಲವು ಸಾಂಸಾರಿಕ ವ್ಯಾಪಾರಗಳಲ್ಲಿ ಅಗಾಧ ಅಕ್ಕರೆಯುಳ್ಳವರನ್ನು ಹಾಗೂ ತಮ್ಮ ಆಲೋಚನೆಗಳಲ್ಲೇ ಮಗ್ನರಾದವರನ್ನು ಅವರಿಗೆ ಗೊತ್ತಿಲ್ಲದಂತೆಯೇ ಜಯಿಸಿಬಿಡುತ್ತದೆ. ಮಹಾತ್ಮವಿದುರನಿಗೆ ಇವೆಲ್ಲವೂ ತಿಳಿದಿತ್ತು.

ಆದ್ದರಿಂದ ಅವನು ಧೃತರಾಷ್ಟ್ರನನ್ನುದ್ದೇಶಿಸಿ ಹೇಳಿದನು : “ಪ್ರಿಯ ರಾಜನೆ, ತತ್‌ಕ್ಷಣವೇ ಈ ಸ್ಥಳವನ್ನು ಬಿಟ್ಟು ಹೊರಡು. ತಡಮಾಡಬೇಡ. ನಿನ್ನನ್ನು ಭಯವು ಆವರಿಸಿರುವುದನ್ನು ಕಾಣು. ನಿನ್ನ ಈ ಭಯಾನಕ ಸ್ಥಿತಿಗೆ ಭೌತ ಜಗತ್ತಿನಲ್ಲಿನ ಯಾರೂ ಮದ್ದು ನೀಡಲಾರರು. ನಿನ್ನ ತಂದೆ, ತಮ್ಮ, ಹಿತೈಷಿಗಳು ಹಾಗೂ ಮಕ್ಕಳು ಎಲ್ಲರೂ ಮೃತರಾಗಿಹೋಗಿದ್ದಾರೆ.

ನಿನ್ನ ಮಾತನ್ನೇ ಹೇಳಬೇಕಾದರೆ ನಿನ್ನ ಬದುಕಿನ ಬಹುಪಾಲು ಕಳೆದುಹೋಗಿದೆ. ಸಾಲದ್ದಕ್ಕೆ ನಿನ್ನ ಅವಯವಗಳು ಈಗ ನಿನ್ನ ಸ್ವಾಧೀನದಲ್ಲಿಲ್ಲ. ಮತ್ತು ನೀನೀಗ ಬೇರೆ ಯಾರ ಮನೆಯಲ್ಲೋ ಕಾಲಹಾಕುತ್ತಿದ್ದೀಯೆ.

“ನೀನು ಹುಟ್ಟುಕುರುಡ. ಈಚೆಗೆ ನೀನು ಕಿವುಡನೂ ಆಗಿದ್ದೀಯೆ. ನಿನ್ನ ಜ್ಞಾಪಕಶಕ್ತಿ ಕುಂದಿದೆ ಮತ್ತು ನಿನ್ನ ಬುದ್ಧಿ ಮಸುಕಾಗಿದೆ. ಹಲ್ಲುಗಳು ಅಲ್ಲಾಡುತ್ತಿವೆ, ನಿನ್ನ ಯಕೃತ್ತು (ಲಿವರ್) ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿನ್ನ ಕೆಮ್ಮಿನಲ್ಲಿ ಶ್ರೇಷ್ಮ ಬರುತ್ತಿದೆ. ಆಹಾ! ದೀರ್ಘಕಾಲ ಬದುಕಬೇಕೆಂಬ ಮನುಷ್ಯನ ಬಯಕೆಗೆ ಎಷ್ಟೊಂದು ಶಕ್ತಿಯಿದೆ. ನಿಜ ಹೇಳುವುದಾದರೆ ನೀನು ಭೀಮನ ಮನೆ ನಾಯಿಯಾಗಿರುವೆ ಅವನು ಉಂಡುಬಿಟ್ಟ ಎಂಜಲು ನಿನಗೆ ಸಿಗುತ್ತಿದೆ.

ಯಾರನ್ನು ನೀನು ವಿಷವುಣಿಸಿ ಕೊಲ್ಲಬಯಸಿದೆಯೋ ಆ ಜನರು ಕೊಡುವ ದಾನದಿಂದ ಬದುಕುವಂತಹ ಹೀನದೆಸೆ ಬಂದು ನೀನು ಬದುಕಿರುವ ಅಗತ್ಯವಿಲ್ಲ.  ಅವರಲ್ಲೊಬ್ಬರ ಪತ್ನಿಯನ್ನು ನೀನು ಅವಮಾನಗೊಳಿಸಿದೆಯಲ್ಲದೆ ಅವರ ರಾಜ್ಯವನ್ನೂ ಸಂಪತ್ತನ್ನೂ ಕಸಿದುಕೊಂಡೆ. ನಿನಗೆ ಸಾಯುವ ಇಚ್ಛೆ ಇಲ್ಲ.

ಗೌರವ ಘನತೆಗಳಿಗೆ ಕುಂದು ಬಂದರೂ ಚಿಂತೆಯಿಲ್ಲ ಬದುಕಿ ಉಳಿದಿದ್ದರೆ ಸರಿ ಎನ್ನುವುದು ನಿನ್ನ ಆಲೋಚನೆ. ಆದರೂ ನಿನ್ನ ದೇಹವು ಇನ್ನಷ್ಟು ಕುಂದುತ್ತದೆ ಹಾಗೂ ಹಳೆಯ ವಸ್ತ್ರದಂತೆ ಬಲಹೀನವಾಗುತ್ತಾ ಬರುತ್ತದೆ. ಆದ್ದರಿಂದ ದಯೆಯಿಟ್ಟು ತತ್‌ಕ್ಷಣವೇ ಉತ್ತರಾಭಿಮುಖನಾಗಿ ಹೊರಡು. ನೀನು ಹೊರಡುವುದು ನಿನ್ನ ಬಂಧುಗಳಿಗೆ ತಿಳಿಯುವುದು ಬೇಡ. ಏಕೆಂದರೆ ಮನುಷ್ಯರ ಸದ್ಗುಣಗಳನ್ನು ಕುಗ್ಗಿಸುವ ದಿನಗಳು ಅತಿ ಶೀಘ್ರದಲ್ಲೇ ಬರಲಿವೆ. ಆದ್ದರಿಂದ ಕೂಡಲೇ ನಡೆ.”

ಹೀಗೆ ವಿಧುರನ ಮಾತು ಕೇಳಿ ಮಹಾರಾಜ ಧೃತರಾಷ್ಟ್ರನು ಸಾಂಸಾರಿಕ ಮೋಹವೆಂಬ ಬಲೆಯನ್ನು ತನ್ನ ದೃಢನಿಶ್ಚಯದಿಂದ ಒಮ್ಮೆಗೇ ಹರಿದುಕೊಂಡನು. ತರುವಾಯ ತನ್ನ ತಮ್ಮ ವಿದುರನು ಆದೇಶಿಸಿದಂತೆ ಮನೆಬಿಟ್ಟು ಹೊರಟು ಮೋಕ್ಷದ ಹಾದಿ ಹಿಡಿದನು. ವಿನೀತಳೂ, ಸುಶೀಲೆಯೂ ಆದ ಗಾಂಧಾರಿಯಾದರೋ, ತನ್ನ ಪತಿ ಹಿಮಾಲಯ ಪರ್ವತಗಳೆಡೆ ಹೊರಟಿದ್ದಾನೆಂಬುದನ್ನು ಕಂಡು ತಾನೂ ಅವನನ್ನು ಹಿಂಬಾಲಿಸಿದಳು.

ಸಪ್ತಸ್ರೋತದ ದಡದಲ್ಲಿ ಇದ್ದುಕೊಂಡು ಧೃತರಾಷ್ಟ್ರನು ದಿನಂಪ್ರತಿ ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ ಈ ತ್ರಿಕಾಲಗಳಲ್ಲಿ ಸ್ನಾನಮಾಡಿ, ಅಗ್ನಿಹೋತ್ರ ಯಜ್ಞವನ್ನು ಮಾಡಿ ನೀರನ್ನು ಮಾತ್ರ ಸೇವಿಸುತ್ತ ಅಷ್ಟಾಂಗಯೋಗವನ್ನು ಅಭ್ಯಸಿಸುವುದರಲ್ಲಿ ನಿರತನಾದನು. ಧೃತರಾಷ್ಟ್ರನು ತನ್ನೆಲ್ಲಾ ಪ್ರಾಪಂಚಿಕ ಕಾರ್ಯಗಳನ್ನು ತ್ಯಜಿಸಿದ ಬಳಿಕ ಎಲ್ಲ ಪಡೆಗಳನ್ನೂ ಮೀರಿ ನಿಂತು ಮೋಕ್ಷದ ಮಾರ್ಗದಲ್ಲಿ ಅಚಲವಾಗಿ ಸ್ಥಾಪಿತನಾದನು.

ಅವನು ತನ್ನ ದೇಹವನ್ನು ಸುಟ್ಟು ಬೂದಿಮಾಡಿದನು. ಯೋಗಶಕ್ತಿಯ ಅಗ್ನಿಯಲ್ಲಿ ತನ್ನ ಗುಡಿಸಲಿನೊಂದಿಗೆ ದಹಿಸಿಹೋಗುತ್ತಿದ್ದ ತನ್ನ ಗಂಡನನ್ನು ಗಮನಿಸುತ್ತಿದ್ದ ಅವನ ಸುಶೀಲೆಯಾದ ಪತ್ನಿಯು ಏಕಚಿತ್ತದಿಂದ ತಾನೂ ಚಿತೆಗೆ ಹಾರಿದಳು. ಏಕಕಾಲಕ್ಕೆ ಸಂಭ್ರಮ ಹಾಗೂ ದುಃಖ ಎರಡನ್ನೂ ಅನುಭವಿಸಿದ ವಿದುರನು ಆ ಪವಿತ್ರ ಯಾತ್ರಾಸ್ಥಳದಿಂದ ಕಾಲ್ತೆಗೆದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi