ಅಕ್ಷಯ ಪಾತ್ರೆ

ಯಥಾ ತರೋರ್‌‌ ಮೂಲ ನಿಶೇಚನೇನ ತೃಷ್ಯಂತಿ ಸ್ಕಂಧ ಭುಜೋಪಶಾಖಾ|

ಪ್ರಾಣೋಪಹಾರಾಜ್ ಯತೇಂದ್ರಿಯಾಣಾಂ ತತ್ವೆವ ಸರ್ವಾಹಣಮ್ ಆಚ್ಯುತೇಜ್ಯ ||

ಮರದ ಬುಡಕ್ಕೆ ನೀರೆರೆದಾಗ ಇಡೀ ಮರವನ್ನು ಪೋಷಿಸಿದಂತೆ, ಉದರಕ್ಕೆ ಆಹಾರ ಉಣಿಸುವುದರಿಂದ ಎಲ್ಲ ಇಂದ್ರಿಯಗಳಿಗೂ ತೃಪ್ತಿ ನೀಡುವಂತೆ ಎಲ್ಲಾ ಸೃಷ್ಟಿಯ ಮೂಲನಾದ ಪರಮ ಪುರುಷನನ್ನು ತೃಪ್ತಿಪಡಿಸಿದರೆ ಎಲ್ಲ ಜೀವಿಗಳನ್ನೂ ತೃಪ್ತಿಪಡಿಸಬಹುದು. ಭಾಗವತ 4.31.14

ಮೇಲಿನ ತತ್ವವನ್ನು ಹೊರತರುವ ಪ್ರಸಂಗವನ್ನು ಮಹಾಭಾರತದಿಂದ ಕ್ರೋಢೀಕರಿಸಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಪದ್ಮನಿ ಬಾಲು ಅವರು ಓದುಗರಿಗಾಗಿ ಇಲ್ಲಿ ನೀಡಿದ್ದಾರೆ.

ಪರಾಶರ ಮುನಿಗಳ ಪುತ್ರರಾದ ಭಗವಾನ್ ಶ್ರೀ ವೇದವ್ಯಾಸರು ಶ್ರೀಮದ್ಭಾಗವತ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ್ದಾರೆ. ಶ್ರೀಮದ್ಭಾಗವತವು ಮಹಾವಿಷ್ಣು ಹಾಗೂ ಅವನ ಭಕ್ತರ ಲೀಲೆಗಳನ್ನು ಹಾಡಿ ಹೊಗಳುವ ಅದ್ಭುತ ವರ್ಣನೆ. ಮಹಾಭಾರತ ಪುರಾಣವು ಶ್ರೀ ಕೃಷ್ಣಾವತಾರದಲ್ಲಿ ಭಗವಂತನು ಹೇಗೆ ಧರ್ಮ ಪಕ್ಷಪಾತಿಗಳಾದ ಪಾಂಡವರನ್ನು ಉದ್ಧರಿಸಿದನೆಂಬುದನ್ನೂ ಕುರುಕ್ಷೇತ್ರ ಯುದ್ಧವನ್ನೂ ಮತ್ತು ಪಾರ್ಥಸಾರಥಿಯು ಅರ್ಜುನನಿಗೆ ಗೀತೋಪದೇಶ ಮಾಡಿದುದನ್ನೂ ಸವಿಸ್ತಾರವಾಗಿ ತಿಳಿಸುತ್ತದೆ.

ವ್ಯಾಸರು ತಮ್ಮ ಪುತ್ರರಾದ ಶುಕ ಮಹರ್ಷಿಗೂ ಮತ್ತು ಇತರ ಶಿಷ್ಯರಿಗೂ ಉಪದೇಶಿಸಿದರು. ವ್ಯಾಸ ಮಹರ್ಷಿಗಳ ಮುಖ್ಯ ಶಿಷ್ಯರಲ್ಲೊಬ್ಬರಾದ ವೈಶಂಪಾಯನರು ಪರೀಕ್ಷಿತ ಮಹಾರಾಜನ ಪುತ್ರನಾದ ಜನಮೇಜಯನು ಮಹಾಯಾಗ ಮಾಡುವ ಸಂದರ್ಭದಲ್ಲಿ ಇದನ್ನು ಶೃತಪಡಿಸಿದರು.

ವೈಶಂಪಾಯನರಿಂದ ಶ್ರೀ ಮದ್ಭಾಗವತವನ್ನು ಕೇಳಿದ ಸೂತ ಮುನಿಗಳು ನೈಮಿಷಾರಣ್ಯದಲ್ಲಿ ಶೌನಕ ಮಹರ್ಷಿಗಳೇ ಮೊದಲಾದ ಋಷಿಗಳಿಗೆ ಈ ಮಹಾಕಾವ್ಯವನ್ನು ನೀಡಿದರು. ಹೀಗೆ ಶ್ರೀಮದ್ಭಾಗವತವು ಮತ್ತು ಅದರೊಡನೆ ಶ್ರೀಮನ್ಮಹಾಭಾರತವು ಪರಂಪರಾಗತವಾಗಿ ನಮಗೆ ತಲುಪಿದೆ.

ಶಂತನು ಮಹಾರಾಜನ ಕಾಲಾನಂತರ ಚಿತ್ರಾಂಗದ ಮತ್ತು ತದನಂತರ ವಿಚಿತ್ರವೀರ್ಯರು ಹಸ್ತಿನಾಪುರವನ್ನಾಳಿದರು. ವಿಚಿತ್ರ ವೀರ್ಯನಿಗೆ ಧೃತರಾಷ್ಟ್ರ ಮತ್ತು ಪಾಂಡು ಎಂಬ ಇಬ್ಬರು ಪುತ್ರರು. ಇಬ್ಬರಲ್ಲಿ ಹಿರಿಯನಾದ ಧೃತರಾಷ್ಟ್ರನು ಅಂಧನಾಗಿದ್ದ ಕಾರಣ ಕಿರಿಯನಾದ ಪಾ೦ಡು ಗದ್ದುಗೆಯನ್ನೇರಿದನು.

ತನ್ನ ರಾಜ್ಯಭಾರದ ಅವಧಿಯಲ್ಲಿ ಪಾಂಡುವು ರಾಜ್ಯವನ್ನು ತ್ಯಜಿಸಿ ತನ್ನಿಬ್ಬರು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಅರಣ್ಯಕ್ಕೆ ತೆರಳಿ ದೀರ್ಘ ತಪಸ್ಸನ್ನು ಕೈಗೊಂಡು ಅಲ್ಲಿಯೇ ಕಾಲವಶನಾದನು.

ಅರಣ್ಯದಲ್ಲಿದ್ದ ಸಮಯದಲ್ಲಿ ದೇವತಾನುಗ್ರಹದಿಂದ ಪಾಂಡುವು ಕುಂತಿ ಮತ್ತು ಮಾದ್ರಿಯರಲ್ಲಿ ಐವರು ಪುತ್ರರನ್ನು ಪಡೆದನು ಮತ್ತು ಇವರೇ ಪಂಚ ಪಾಂಡವ ಯುಧಿಷ್ಠಿರ (ಧರ್ಮರಾಜ), ಭೀಮ, ಅರ್ಜುನ, ನಕುಲ ಮತ್ತು ಸಹದೇವ ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿಯಿಂದ ದುರ್ಯೋಧನ, ದುಶ್ಯಾಸನರೇ ಮೊದಲಾದ ನೂರು ಜನ ಗಂಡು ಮಕ್ಕಳು ಮತ್ತು ದುಶ್ಯಲೆಯೆಂಬ ಮಗಳೂ ಹುಟ್ಟಿದರು.

ಇವರೇ ಕೌರವರು. ಪಾಂಡವರು ಪ್ರಾಪ್ತ ವಯಸ್ಕರಾದೊಡನೆ ಋಷಿಗಳು ಇವರನ್ನು ಮತ್ತು ತಾಯಿ ಕುಂತಿದೇವಿಯನ್ನು ಹಸ್ತಿನಾಪುರದಲ್ಲಿ ಪಿತಾಮಹ ಭೀಷ್ಮನ ವಶಕ್ಕೆ ತಂದು ಒಪ್ಪಿಸಿದರು. ಕೌರವ ಪಾಂಡವರು ಗುರು ದ್ರೋಣಾಚಾರರಿಂದ ಕ್ಷತ್ರಿಯೋಚಿತ ಸಕಲ ವಿದ್ಯೆಗಳಲ್ಲೂ ಪಾಂಡಿತ್ಯಗಳಿಸಿಕೊಂಡರು.

ಆದರೆ ಯಾವಾಗಲೂ, ಎಲ್ಲ ವಿಷಯದಲ್ಲೂ ಪಾಂಡವರ ಪ್ರಾವೀಣ್ಯತೆಯೇ ಎದ್ದು ಕಾಣುತ್ತಿದ್ದ ಕಾರಣ ಕೌರವರಿಗೆ ಈರ್ಷ್ಯೆ ಉಂಟಾಯಿತು. ಕುಟುಂಬದ ಹಿರಿಯರಾದ ಭೀಷ್ಮರು ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಇಂದ್ರಪ್ರಸ್ಥವನ್ನು ಪಾಂಡವರ ರಾಜಧಾನಿಯಾಗಿಯೂ ಮತ್ತು ಹಸ್ತಿನಾಪುರವನ್ನು ಕೌರವರ ರಾಜಧಾನಿಯಾಗಿಯೂ ಮಾಡಿ ರಾಜ್ಯವಾಳುವಂತೆ ಏರ್ಪಾಡು ಮಾಡಿದರು. ಆದರೆ ಕೆಲ ಕಾಲಾನಂತರ ಕೌರವ ರಾಜನಾದ ದುರ್ಯೋಧನನು ಪಾಂಡವರನ್ನು ದ್ಯೂತಕ್ಕೆ ಆಹ್ವಾನಿಸಲು, ಕ್ಷತ್ರಿಯ ಧರ್ಮನಿಯಮಾನು ಸಾರವಾಗಿ ಆಟ ನಡೆಯಿತು.

ಶಕುನಿಯ ಕುತಂತ್ರದಿಂದ ಪಾಂಡವರು ರಾಜ್ಯಕೋಶಗಳನ್ನು ಕಳೆದುಕೊಂಡು ಜೂಜಾಟದ ಪಂಥದಲ್ಲಿ ಒಪ್ಪಂದವಾಗಿದ್ದಂತೆ ಹನ್ನೆರಡು ವರ್ಷಗಳ ಕಾಲ ಅರಣ್ಯವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸಕ್ಕೆ ತೆರಳಿದರು. ಪತಿವ್ರತೆಯಾದ ಪತ್ನಿ ಬ್ರೌಪದಿ ಇವರನ್ನು ಹಿಂಬಾಲಿಸಿದಳು.

ಈ ಘಟನೆಗಳೆಲ್ಲವೂ ಶ್ರೀ ಕೃಷ್ಣನಿಂದ ಪೂರ್ವ ಯೋಜಿತವೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ‘ಧರ್ಮ ಸಂಸ್ಥಾಪನೆಗಾಗಿ ಪುನಃ ಪುನಃ ಆವತರಿಸುತ್ತೇನೆ’ ಎಂದು ಸಾರಿದ ಪರಮ ಪುರುಷನು ಸದಾ ಧರ್ಮಪರರಾದ ಪಾಂಡವರ ಪಕ್ಷಪಾತಿಯಾಗಿ ಅವರ ಅರಣ್ಯ ವಾಸದ ಸಂಕಷ್ಟಗಳನ್ನು ಪರಿಹರಿಸುತ್ತಿದ್ದನು.

ಅಷ್ಟೇ ಅಲ್ಲದೆ ಪಾಂಡವರ ತಾಯಿಯಾದ ಕುಂತಿದೇವಿ ಶ್ರೀ ಕೃಷ್ಣನ ಸೋದರತ್ತೆ. ದ್ರೌಪದಿಯನ್ನು ಅವನು ಕಿರಿಯ ಸೋದರಿಯಾಗಿ ಸ್ವೀಕರಿಸಿದ್ದನು. ಹೀಗಾಗಿ ಪಾಂಡವರಿಗೆ ವಾಸುದೇವನು ಸೋದರ ಸಂಬಂಧಿ, ಅದರಲ್ಲೂ ಅರ್ಜುನನು ಅವನ ಪರಮ ಸಖ. ದ್ರೌಪದಿಯಾದರೋ ನಿಷ್ಠಾವಂತ ಭಕ್ತಳು. ದೇವ ದೇವೋತ್ತಮನ ದಯೆಯಿಂದ ಕಷ್ಟಕೋಟಲೆಗಳೆಂಬ ಹಾವುಗಳು ಸುತ್ತಿಕೊಂಡರೂ ಹೂವಿನ ಸರಗಳಾಗುತ್ತಿದ್ದವು.

ಹಸ್ತಿನಾಪುರದಿಂದ ಹೊರಟ ಪಾಂಡವರು ದ್ರೌಪದಿಯೊಡನೆ ಕಾನನದ ಹಾದಿ ಹಿಡಿದರು. ಯುಧಿಷ್ಠಿರನದು ಶಾಂತ ಸ್ವಭಾವ. ಧರ್ಮದಲ್ಲಿ ಅಚಲ ಶ್ರದ್ಧೆ, ಧರ್ಮಕ್ಕಾಗಿ ಪ್ರಾಣ ಕೊಡಲೂ ಹಿ೦ಜರಿಯದವನಾದ್ದರಿಂದಲೇ ಇವನಿಗೆ ಧರ್ಮರಾಜನೆಂಬ ಅನ್ವರ್ಥನಾಮ. ಭೀಮನಾದರೋ ಬಹಳ ಮುಂಗೋಪಿ.

ಅನ್ಯಾಯವೆಂದರೆ ಉರಿದು ಬೀಳುವ ಮತ್ತು ಪ್ರತೀಕಾರಕ್ಕಾಗಿ ಸೆಟೆದು ನಿಲ್ಲುವ ಸ್ವಭಾವ. ಆದರೆ ಧರ್ಮರಾಯನು ತಿಳಿಸಿ ಹೇಳಿದರೆ ಮಗುವಿನಂತಾಗುತ್ತಿದ್ದ. ಪಾಂಡವರಲ್ಲೆಲ್ಲ ಭೀಮನೇ ಅತ್ಯಂತ ಬಲಿಷ್ಠ ಅವನಿಗೆ ಯಾವಾಗಲೂ ಬಹಳ ಹಸಿವು. ಆದ್ದರಿಂದಲೇ ಕುಂತೀದೇವಿ ಊಟದಲ್ಲಿ ಅರ್ಧ ಪಾಲನ್ನು ಭೀಮನಿಗೆ ನೀಡಿ ಮಿಕ್ಕರ್ಧವನ್ನು ಇತರ ಮಕ್ಕಳು ಮತ್ತು ಸೊಸೆಯೊಡನೆ ಹಂಚಿಕೊಳ್ಳುತ್ತಿದ್ದಳು.

ಏಕಛತ್ರ ನಗರದಲ್ಲಿ ಬಕಾಸುರನಿಗಾಗಿ ಕೊಂಡೊಯ್ದ ಭಕ್ಷ್ಯ ಭೋಜ್ಯಾದಿಗಳನ್ನೆಲ್ಲ ತಿಂದು ತೇಗಿ ಅಸುರನನು ಚೆಂಡಾಡಿಕೊಂದವ ಭೀಮ, ಅರ್ಜುನ ಪಾಂಡವರಲ್ಲೆಲ್ಲ ಅತ್ಯಂತ ಶೂರ, ಶಸ್ತ್ರಾಸ್ತ್ರಗಳಲ್ಲಿ ಪರಿಣತಿಯನ್ನು ಪಡೆದವ. ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದವ.

ನಂತರ ತಾಯಿಯ ಆಣತಿಯಂತೆ ಅವಳನ್ನು ತನ್ನ ಇತರ ನಾಲ್ಕು ಸಹೋದರೊಡನೆ ಪತ್ನಿಯೆಂದು ಸ್ವೀಕರಿಸಿದವನು. ನಕುಲ ಸಹದೇವರಾದರೋ ಭ್ರಾತೃ ಭಕ್ತಿ ಮತ್ತು ವಾತ್ಸಲ್ಯಗಳಲ್ಲಿ ಸದಾ ಮಿಂದವರು. ಕೋಮಲೆ ದ್ರೌಪದಿ ಇವರೆಲ್ಲರ ಸಾದ್ವಿ ಪತ್ನಿ. ಅವಳಿಗೂ ಸಹ ಸದ್ಗೃಹಿಣಿಯರಂತೆ ತನ್ನ ಕುಟುಂಬದ ಊಟ ಉಪಚಾರಗಳ ಚಿಂತೆ, ತನ್ನಣ್ಣ ಕೃಷ್ಣನಲ್ಲಿ ಅಪಾರವಾದ ಶ್ರದ್ಧೆ, ಭಕ್ತಿ, ಅಚಲವಾದ ನಂಬಿಕೆ. ಹೀಗೆ ಪಾಂಡವರದು ಕಾಡಿನಲ್ಲಿಯೂ ಸುಖೀ ಕುಟುಂಬ.

ಹಸ್ತಿನಾಪುರದಲ್ಲಿ ಇವೆಲ್ಲ ವಿದ್ಯಮಾನಗಳಾಗುತ್ತಿರುವಾಗ ಕೃಷ್ಣನು ದ್ವಾರಕೆಯನ್ನು ಸುಭದ್ರ ಮಾಡುತ್ತಿದ್ದ. ಕೃಷ್ಣನಿಗೆ ಪಾಂಡವರು ದ್ಯೂತದಲ್ಲಿ ಸೋತದ್ದು ಮತ್ತು ಅವರು ಅರಣ್ಯ ವಾಸಕ್ಕೆ ಹೋದ ವಿಷಯಗಳು ತಿಳಿಯಿತು. ಅವನು ಪಾಂಡವರನ್ನು ನೋಡಿ ಮಾತನಾಡಲು ಬಂದ ಕೃಷ್ಣನನ್ನು ಕಂಡೊಡನೆಯೇ ದ್ರೌಪದಿಯ ದುಃಖದ ಕಟ್ಟೆಯೊಡೆಯಿತು. ‘ವಾಸುದೇವ, ಭಕ್ತಪರಾಧೀನ, ನಾನು ಸಂಕಟ ಮತ್ತು ಅವಮಾನಗಳನ್ನು ಅನುಭವಿಸುತ್ತಿದ್ದಾಗ ನೀನೆಲ್ಲಿ ಕಣ್ಮರೆಯಾಗಿದ್ದೆ.

ಅಸಮಾನ ಶೂರರಾದ ಐವರು ಪತಿಗಳು ದ್ಯೂತದಲ್ಲಿ ಸೋತು ನನ್ನ ಕೈ ಬಿಟ್ಟು ಕುಳಿತರು. ಏಕ ವಸ್ತ್ರ ಧಾರಿಣಿಯಾದ ನನ್ನನ್ನು ದುಶ್ಯಾಸನನು ತುಂಬಿದ ಸಭೆಗೆ ಎಳೆತಂದು ಅತ್ಯಂತ ಹೀನವಾಗಿ ಹಿಯ್ಯಾಳಿಸುತ್ತಿರುವಾಗ ಧೃತರಾಷ್ಟ್ರನ ಮಕ್ಕಳು ಆನಂದಿಸಿದರು. ಭೀಷ್ಮ ದ್ರೋಣ, ಧೃತರಾಷ್ಟ್ರರೇ ಮೊದಲಾದ ಹಿರಿಯರು ನನ್ನ ಉತ್ಕೃಷ್ಟವಾದ ಮನೆತನವನ್ನೂ ಅವರೊಡನೆ ನನ್ನ ಸಂಬಂಧವನ್ನೂ ಮರೆತು ಅಸಾಹಾಯಕರಾಗಿ ಕುಳಿತರು.

ಭೀಮನ ಶಕ್ತಿಯೇ ಆಗಲಿ, ಅರ್ಜುನನ ಗಾಂಡೀವವೇ ಆಗಲಿ ನನ್ನನ್ನು ರಕ್ಷಿಸುವಲ್ಲಿ ಉಪಯೋಗವಾಗಲಿಲ್ಲ. ಹೇ, ಜನಾರ್ದನ, ನಾನು “ಗೋವಿಂದಾ’ ಎಂದು ನಿನ್ನಲ್ಲಿ ಮೊರೆಯಿಟ್ಟಾಗ ನನ್ನ ಆರ್ತನಾದವನ್ನು ಕೇಳಿ ಓಗೊಟ್ಟು ನನ್ನ ಮಾನವನ್ನು ರಕ್ಷಿಸಿದವನು ನೀನೊಬ್ಬನೇ. ಗೋಪಿಯರ ವಸ್ತ್ರವನ್ನು ಅಪಹರಿಸಿ ಅವರನ್ನು ಆಟವಾಡಿಸಿದ ನೀನು ನನ್ನ ವಸ್ತ್ರಾಪಹರಣವಾಗುವುದನ್ನು ತಪ್ಪಿಸಿದೆ. ದೀನರ ದುಃಖಗಳನ್ನು ಪರಿಹರಿಸುವ ಶೋಕಾಪಹಾರಿ, ರಕ್ಷ, ರಕ್ಷ’ ಎಂದು ಜಗದ್ರಕ್ಷಕನನ್ನು ಸ್ತುತಿಸಿ ಕ್ಷಣ ಮಾತ್ರ ಸಾಂತ್ವನಗೊಂಡಳು.

ಪ್ರಲಾಪಿಸುತ್ತಿದ್ದ ದ್ರೌಪದಿಯನ್ನು ಕಂಡು ಬಹಳ ವಿಚಲಿತನಾದ ಹರಿಯು ಅವಳನ್ನು ಅಮೃತ ಸೇಚನ ವಾಕ್ಯಗಳಿಂದ ಸಾಂತ್ವನಗೊಳಿಸಿದನು. “ಸೋದರಿ, ನಿಜವಾಗಿಯೂ ನಿನ್ನ ಗಂಡಂದಿರು ಅತುಲ್ಯ ಶೂರರೇ ಸರಿ. ಧರ್ಮ ಭೀರುಗಳಾದ ಅವರು ಅಧರ್ಮದ ಹಾದಿಯನ್ನು ತುಳಿಯುವುದಿಲ್ಲ.

ನಿನ್ನನ್ನು ಕಷ್ಟಕ್ಕೀಡು ಮಾಡಿದ ಪಾಪಿಗಳಿಗೆ ತಕ್ಕಶಾಸ್ತಿಯಾಗುತ್ತದೆ. ಇದು ನನ್ನ ಪ್ರತಿಜ್ಞೆ” ಎಂದು ತನ್ನ ಅವತಾರದ ರಹಸ್ಯವನ್ನು ಅರುಹಿದನು ಮತ್ತು ಯಾವ ಸಮಯದಲ್ಲಿಯೇ ಆಗಲಿ ದ್ರೌಪದಿಯು ತನ್ನನ್ನು ಸ್ಮರಿಸಿದಲ್ಲಿ ತಕ್ಷಣವೇ ಪ್ರತ್ಯಕ್ಷವಾಗುವೆನೆಂದು ಮಾತು ಕೊಟ್ಟು ಬೀಳ್ಕೊಂಡನು.

ಕೌರವರೊಡನೆ ಸೆಣಸಾಡಿ ತಮ್ಮ ರಾಜ್ಯವನ್ನು ಮರಳಿ ಪಡೆಯಲು ದಿವ್ಯಾಸ್ತ್ರಗಳ ಅವಶ್ಯಕತೆಯಿರುವುದನ್ನು ಮನಗಂಡು ಅರ್ಜುನನು ದೇವತೆಗಳನ್ನು ಕುರಿತು ತಪಸ್ಸು ಮಾಡಲು ಹಿಮಾಲಯಕ್ಕೆ ಹೊರಟು ನಿಂತನು. “ನನ್ನ ಅತ್ತೆಯೂ, ನಿಮ್ಮ ತಾಯಿಯೂ ಆದ ಕುಂತೀದೇವಿಯ ಹರಕೆಯು ನಿಮ್ಮ ಮೇಲಿರಲಿ.

ಕೃಷ್ಣನ ಕೃಪೆಯಿಂದ ಕಾರ್ಯಸಾಧಿಸಿಕೊಂಡು ಬನ್ನಿ’ ಎಂದು ಶುಭಾಶಯ ನುಡಿದು ದ್ರೌಪದಿ ಅವನನ್ನು ಕಳುಹಿಸಿಕೊಟ್ಟಳು. ಅರ್ಜುನನು ಹೊರಟ ನಂತರ ಸುಂದರವಾದ ಕಾಮ್ಯಕವನವೂ ಸಹ ದ್ರೌಪದಿಯ ಪಾಲಿಗೆ ತನ್ನ ರಮಣೀಯತೆಯನ್ನು ಕಳೆದುಕೊಂಡಿತು. ಪಾಂಚಾಲಿಯ ಖಿನ್ನವದನವನ್ನು ಕಂಡ ಭೀಮನೆಂದ, “ಶುಭಾಂಗಿ, ಅರ್ಜುನನನ್ನು ದೂರ ಕಳುಹಿಸಿದ ನಂತರ ನಮಗೇ ಜೀವನವು ದುರ್ಭರವೆನಿಸುತ್ತಿರುವಾಗ ನಿನ್ನ ಪಾಡನ್ನು ನಾನು ಊಹಿಸಬಲ್ಲೆ ಸೋದರನು ಹಿಂದಿರುವವರೆಗೂ ನಾವು ಇತರ ಕಾಡುಗಳಲ್ಲಿ ಸುತ್ತಾಡೋಣ.

ಅಣ್ಣನಾದ ಯುಧಿಷ್ಠಿರನು ಆಚಾರ್ಯ ಧೌಮ್ಯರನ್ನು ನಾವು ಹೋಗಬಹುದಾದ ಸ್ಥಳಗಳ ಬಗ್ಗೆ ಕೇಳಿ ತಿಳಿಯುತ್ತಾನೆ” ಎಂದು ಧೌಮ್ಯರು ನಿರ್ದೇಶಿಸಿದಂತೆ ಪಾಂಡವರು ಮುಂದೆ ನಡೆದರು. ಕಾಡು ಮೇಡುಗಳಲ್ಲಿ ಅಲೆಯುವಾಗ ಸುಕುಮಾರಿಯಾದ ದ್ರೌಪದಿಯು ಬಹಳ ಶ್ರಮ ಪಟ್ಟಳು. ಪಾಂಡವರು ಅನೇಕ ಋಷ್ಯಾಶ್ರಮಗಳನ್ನು ದಾಟಿ ನಾರಾಯಣಾಶ್ರಮಕ್ಕೆ ಬಂದರು.

ಒಂದು ದಿನ ಈಶಾನ್ಯದಿಂದ ಬೀಸಿದ ಮಂದ ಮಾರುತವು ತನ್ನೊಡನೆ ಸೌಗಂಧಿಕ ಪುಷ್ಪದ ಸುಗಂಧವನ್ನು ತಂದಿತು. ಭೀಮನು ಸೌಗಂಧಿಕ ಪುಷ್ಪವನ್ನು ತಂದುಕೊಟ್ಟು ಸತಿಯನ್ನು ತೃಪ್ತಿಗೊಳಿಸಿದನು. ಇದೇ ಸಮಯದಲ್ಲಿ ಭೀಮನಿಗೆ ವಾಯುಪುತ್ರನೂ, ರಾಮದಾಸನೂ ಮತ್ತು ಸೋದರನೂ ಆದ ಹನುಮಂತನು ದರ್ಶನವನ್ನಿತ್ತು, ಅರ್ಜುನನ ಧ್ವಜದಲ್ಲಿ ತಾನು ನೆಲೆಸುವುದಾಗಿ ವಚನ ಕೊಟ್ಟನು.

ಪಾಂಡವರು ಮುಂದೆ ಸಾಗುತ್ತ ದ್ವೈತವನದಲ್ಲಿ ಬೀಡು ಬಿಟ್ಟರು. ಆ ಸಮಯದಲ್ಲಿ ಅನೇಕ ಬ್ರಾಹ್ಮಣರು ಯುಧಿಷ್ಠಿರನನ್ನು ಭೇಟಿ ಮಾಡಲು ಬರುತ್ತಿದ್ದರು ಮತ್ತು ಹಾಗೆ ಬಂದವರಲ್ಲಿ ಒಬ್ಬ ಬ್ರಾಹ್ಮಣನು ಹಸ್ತಿನಾಪುರಕ್ಕೆ ಹೋಗಿ ದುರ್ಯೋಧನನ ಬಳಿಯಲ್ಲಿ ಪಾಂಡವರ ದುಃಸ್ಥಿತಿಯನ್ನು ಬಿತ್ತರಿಸಿದನು.

`ಶಿರದ ಮೇಲೆ ಮುಕುಟ ಧರಿಸಿ ರಾಜ ಠೀವಿಯಿಂದ ಧರಣಿಯನ್ನು ಆಳಬೇಕಾದ ಧರ್ಮ ಪುತ್ರನು ಕೃಷ್ಣಾಜಿನ ನಾರುಡೆಗಳನ್ನುಟ್ಟು ಬರಿತಲೆಯಲ್ಲಿ ನಡೆಯುತ್ತಿದ್ದ ದೃಶ್ಯವನ್ನು ಕಾಣುವ ಬದಲು ನನ್ನ ಕಣ್ಣುಗಳು ಇಂಗಿಹೋಗಬಾರದಿತ್ತೆ.

ಮಹಾಕಾಯನಾದ ಭೀಮನ ಭುಜಗಳು ಸೆಣಸುವ ಅವಕಾಶವಿಲ್ಲದೆ ಸೋತು ಹೋದಂತೆ ಭಾಸವಾಗುತ್ತಿತ್ತು. ಮಹಾಬಾಹುವಾದ ಅರ್ಜುನನು ತನ್ನ ಶಸ್ತ್ರಾಸ್ತ್ರಗಳಿಗೆ ಎಂದು ಕೆಲಸ ದೊರಕೀತೋ ಎಂದು ತವಕ ಪಡುತ್ತಿರುವಂತೆ ಕಂಡಿತು. ಅಶ್ವಿನಿ ದೇವತೆಗಳಂತೆ ಸದಾ ಕಾಂತಿಯುತವಾದ ನಕುಲ ಸಹದೇವರು ತಮ್ಮ ಅಣ್ಣಂದಿರ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಿದ್ದನ್ನು ಕ೦ಡ ಯಾರಿಗಾದರೂ ನೋವುಂಟಾದೀತು.

ಸುಕುಮಾರಿಯಾದ ದ್ರೌಪದಿಯು ಒರಟು ಬಟ್ಟೆಗಳನ್ನುಟ್ಟು ಕಲ್ಲು ಮುಳ್ಳಿನ ಹಾದಿಯಲ್ಲಿ ರಾಜಭೋಗಗಳನ್ನು ತೊರೆದು ಪತಿ ಛಾಯಾನುವರ್ತಿಯಾಗಿ ಹಿಂಬಾಲಿಸುವ ದೃಶ್ಯ ಎಂತಹವರ ಕರುಳನ್ನೂ ಕಿವಿಚುವಂತಿತ್ತು” ಎಂದು ಹೇಳಿದ ಬ್ರಾಹ್ಮಣನ ಮಾತನ್ನು ಕೇಳಿದ ಧೃತರಾಷ್ಟ್ರನಿಗೆ ಸಂಕಟದಿಂದ ಕಣ್ಣುಗಳಲ್ಲಿ ನೀರು ತುಂಬಿ ತನ್ನ ಪಾಪ ಭೀತಿ ಜಾಗೃತವಾಯಿತು.

ದುರ್ಯೋಧನನಿಗೆ ಹೊಟ್ಟೆಯಲ್ಲಿ ಹಾಲನ್ನು ಸುರಿದಂತಾಯಿತು, ಶಕುನಿ, ಕರ್ಣ ಮತ್ತು ದುರ್ಯೋಧನರು ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡು ಪಾಂಡವರ ಕಷ್ಟಗಳನ್ನು ನಾವು ಎಂದು ಕಣ್ಣಾರೆ ಕಂಡೇವೋ ಎಂದು ತವಕ ಪಡತೊಡಗಿದರು. ಧೃತರಾಷ್ಟ್ರನು ಒಂದೆಡೆ ತನ್ನಣ್ಣನ ಮಕ್ಕಳ ಕರುಣೆಯಿಂದ ಮತ್ತೊಂದೆಡೆ ತನ್ನ ಮಕ್ಕಳ ಕ್ಷೇಮದ ಚಿಂತೆಯಿಂದ ಖಿನ್ನನಾದ.

ತಮ್ಮನ್ನು ಪಾಂಡವರು ಸುತ್ತಮುತ್ತ ಅರಣ್ಯದಲ್ಲೆಲ್ಲೂ ಸುಳಿಯಲು ಬಿಡುವುದಿಲ್ಲವೆಂಬುದನ್ನು ಅರಿತಿದ್ದ ಶಕುನಿ ತನ್ನ ಸೋದರಳಿಯನೊಡನೆ ಸಮಾಲೋಚಿಸಿ ಒಂದು ಬೃಹತ್ ಯೋಜನೆಯನ್ನು ತಯಾರಿಸಿದನು. “ರಾಜಾ ಧೃತರಾಷ್ಟ್ರ, ದ್ವೈತವನದಲ್ಲಿ ಪ್ರತಿ ವರ್ಷವೂ ಗೋವುಗಳ ಪರಿವೀಕ್ಷಣೆ ಮಾಡುವಂತೆಯೇ ಈ ಬಾರಿಯೂ ಈಗ ಸೂಕ್ತ ಸಮಯವಾಗಿರುವುದರಿಂದ ಹೋಗಿ ಬರಲು ನಮಗೆ ಅಪ್ಪಣೆ ಕೊಡು.

ನಾವು ಪಾಂಡವರನ್ನು ವೃಥಾ ಕೆಣಕುತ್ತೇವೆಂದು ಯೋಚಿಸಬೇಡ. ನಾವು ಆ ದಿಕ್ಕಿಗೆ ಸುಳಿಯುವುದೇ ಇಲ್ಲವೆಂದು ನಿನಗೆ ಭಾಷೆ ಕೊಡುತ್ತೇವೆ.” ಎಂದು ದೊರೆಯನ್ನು ಒಪ್ಪಿಸಿ ಮೂವರ ಪರಿವಾರದೊ೦ದಿಗೆ ದುರಾಲೋಚನೆಗಳೊಂದಿಗೆ ಹೊರಟರು. ದ್ವೇಷ ತುಂಬಿದ ಮನಸ್ಸಿಗೆ ಎ೦ದೂ ತೃಪ್ತಿ ಎಂಬುದೇ ಇರುವುದಿಲ್ಲ. ಅಸೂಯೆಯೆಂಬುದು ಅಗ್ನಿ ಜ್ವಾಲೆಯಂತೆ ಬುದ್ಧಿಯನ್ನು ಕಬಳಿಸುತ್ತದೆ.

ದ್ವೈತ ವನದಲ್ಲಿ ಇಂದ್ರಿಯಗಳನ್ನು ತಣಿಸುವ ಸರ್ವ ಸುಖಗಳನ್ನು ಅನುಭವಿಸಿದ ದುರ್ಯೋಧನನೂ ಮತ್ತು ಅವನ ಸಹಚರರೂ ಅಲ್ಲಿಯೇ ಸರೋವರದ ತಟದಲ್ಲಿ ಬೀಡು ಬಿಟ್ಟಿದ್ದ ಚಿತ್ರಸೇನನೆಂಬ ಗಂಧರ್ವ ರಾಜನನ್ನು ಕೆಣಕಿ ಸೋಲಿಗೀಡಾದರು.

ಹೆಡೆಮುರಿ ಕಟ್ಟಿ ದುರ್ಯೋಧನನನ್ನು ರಥದಲ್ಲಿ ಒಯ್ಯುತ್ತಿದ್ದ ದೃಶ್ಯವನ್ನು ಕಂಡು ತಕ್ಕ ಶಾಸ್ತಿಯಾಯಿತೆ೦ದು ಭೀಮನು ಆನಂದಿಸಿದ, ಧರ್ಮ ಭೀರುವಾದ ಯುಧಿಷ್ಠಿರನು ನಮ್ಮ ಸಂಬಂಧಿತನನ್ನು ಸಂಕಟ ಸಮಯದಲ್ಲಿ ಕಾದಾಡುವುದು ಕರ್ತವ್ಯವೆಂದು ಬುದ್ಧಿಹೇಳಿ ಭೀಮಾರ್ಜುನರನ್ನು ದುರ್ಯೋಧನನ ರಕ್ಷಣೆಗೆ ಕಳಿಸಿದನು.

ಭ್ರಾತೃವಾಕ್ಯ ಪರಿಪಾಲಕರಾದ ಸೋದರರಿಬ್ಬರೂ ಚಿತ್ರಸೇನನನ್ನು ತಡೆಯಲು ಅವನು ಪಾಂಡವರೊಡನೆ ಕಾದಾಡುವುದು ತನಗಿಷ್ಟವಿಲ್ಲವೆಂದೂ ದುರ್ಯೋಧನನ ಅಹಂಕಾರವನ್ನು ಮುರಿಯುವುದೇ ತನ್ನ ಗುರಿಯಾಗಿತ್ತೆಂದೂ ತಿಳಿಸಿದನು. ದುರ್ಯೋಧನನು ಅಸಹನೀಯವಾದ ಅವಮಾನದಿಂದ ಹಿಂದಿರುಗಿದನು. ಅವನ ಕ್ರೋಧಾಗ್ನಿ ಪ್ರಜ್ವಲಿಸತೊಡಗಿತು ಮತ್ತು ಪಾಂಡವರನ್ನು ನಾಶಗೊಳಿಸುವ ಅವಕಾಶಕ್ಕಾಗಿ ಬಹಳ ಕಾತುರದಿಂದ ಕಾಯತೊಡಗಿದನು. ಅಂತಹ ಅವಕಾಶವು ಬೇಗನೇ ಒದಗಿ ಬಂತು.

ದುರ್ಯೋಧನನು ವೈಷ್ಣವ ಯಾಗವನ್ನು ಮಾಡಿ ಪುರಜನರಿಗೆ, ಬ್ರಾಹ್ಮಣರಿಗೆ ಅನೇಕ ದಾನಗಳನ್ನು ಕೊಟ್ಟು ತೃಪ್ತಿಪಡಿಸಿದನು. ಹೀಗಿರುವಾಗ ಒಂದು ದಿನ ಮಹರ್ಷಿ ದೂರ್ವಾಸರು ಹಸ್ತಿನಾಪುರಕ್ಕೆ ತನ್ನೊಡನೆ ಹತ್ತು ಸಾವಿರ ಶಿಷ್ಯರನ್ನು ಕರೆದುಕೊಂಡು ಬಂದರು. ದೂರ್ವಾಸರು ಬಹಳ ಮುಂಗೋಪಿಗಳೆಂಬುದು ಇಡೀ ಪ್ರಪಂಚಕ್ಕೆ ತಿಳಿದ  ವಿಷಯವಾಗಿತ್ತು.

ಒಮ್ಮೆ ಇವರ ಕೋಪಕ್ಕೆ ಸಿಕ್ಕಿದ ಇಂದ್ರ ಕೂಡ ತನ್ನ ಪದವಿಯನ್ನು ಕಳೆದುಕೊಳ್ಳಬೇಕಾಯಿತು. ಇಂತಹವರನ್ನು ಸಂತೃಪ್ತಿಗೊಳಿಸುವುದು ಬಹಳ ಕಷ್ಟಸಾಧ್ಯವಾದ ಸಂಗತಿ. ಆದರೆ ಅವರು ಸಂತುಷ್ಟರಾದರೆ ಕೇಳಿದ ವರವನ್ನು ಪ್ರದಾನ ಮಾಡುವಂತಹವರು. ಆದುದರಿಂದಲೇ ದೂರ್ವಾಸಾಗಮನವನ್ನು ತಿಳಿಯುತ್ತಲೇ ದುರ್ಯೋಧನನು ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡನು. ಧೃತರಾಷ್ಟ್ರ, ಭೀಷ್ಮ ಕೃಷ್ಣ, ದ್ರೋಣರೇ ಮೊದಲಾದ ಹಿರಿಯರು ಅವರನ್ನು ಪೂರ್ಣಕುಂಭದೊಡನೆ ಬರಮಾಡಿಕೊಂಡರು.

ದಿವ್ಯಾಸನಗಳನ್ನು ಕೊಟ್ಟು ಅರ್ಘ್ಯ ನೀಡಿದರು. ಚಾಮರ ಸೇವೆಯಿಂದ ಅವರ ಆಯಾಸವನ್ನು ಪರಿಹರಿಸಿದರು. ಬಾಯಾರಿಕೆಗೆ ತಂಪಾದ ಪಾನೀಯವನ್ನಿತ್ತರು. ಸ್ನಾನ, ಧೂಪ, ದೀಪಾದಿಗಳೊಡನೆ ಖುಷಿಯೋಗ್ಯವಾದ ಸಕಲ ಸಂಭಾರಗಳೊಡನೆ ಸತ್ಕರಿಸಿದರು. ಪಂಚ ಭಕ್ಷ್ಯ ಪರಮಾನ್ನಗಳಿಂದ ಕೂಡಿದ ಸವಿಯೂಟವನ್ನು ಬಡಿಸಿ ಸತ್ಕರಿಸಿದರು. ಭೋಜನ ಮಧ್ಯೆ ಹಿತವಚನಗಳನ್ನಾಡಿ ಸಂತೋಷ ಪಡಿಸಿದರು.

ದುರ್ವಾಸ ಮುಖ್ಯರಾದ ಮುನಿ ಸಮೂಹದ ಉಪಚಾರದಲ್ಲಿ ಕಿಂಚಿತ್ತೂ ಲೋಪ ಬರದಂತೆ ದುರ್ಯೋಧನನು ಬಹಳ ಎಚ್ಚರಿಕೆ ವಹಿಸಿದನು. ಇದರಿಂದ ಸುಪ್ರೀತರಾದ ಮುನಿಯು, ದುರ್ಯೋಧನ, ನಿನ್ನ ಬ್ರಾಹ್ಮಣ ನಿಷ್ಠೆಯನ್ನೂ, ಅತಿಥಿ ಸತ್ಕಾರವನ್ನೂ ಕಂಡು ಬಹಳ ಆನಂದವಾಯಿತು.

ಅತ್ಯಂತ ತೃಪ್ತರಾದ ನನ್ನಿಂದ ನಿನಗೆ ಬೇಕಾದ ವರವನ್ನು ಬೇಡು, ಕೊಡುತ್ತೇನೆ’ ಎಂದರು. ಕೂಡಲೇ ಈ ಅವಕಾಶವನ್ನು ಉಪಯೋಗಿಸಿಕೊಂಡು ಮುನಿಯು ಪಾಂಡವರ ಮೇಲೆ ಕೋಪಗೊಂಡು ಶಪಿಸಿ ಅವರು ನಾಶಗೊಳ್ಳುವಂತೆ ಒಂದು ತಂತ್ರವನ್ನು ರಚಿಸಲು ಅವನ ದುರ್ಬುದ್ಧಿಯು ಯೋಚಿಸತೊಡಗಿತು.

ಅವನು ದೂರ್ವಾಸರನ್ನು ಕುರಿತು, “ಋಷಿವರ್ಯಾ, ತಾವು ಹಸ್ತಿನಾಪುರಕ್ಕೆ ಬಂದು ನಮ್ಮೆಲ್ಲ ಕೌರವರನ್ನು ಹರಸಿದ್ದರಿಂದ ಕುಟುಂಬದ ಅರ್ಧವನ್ನು ಮಾತ್ರ ಆಶೀರ್ವದಿಸಿದಂತಾಯ್ತು. ನನ್ನ ಸಹೋದರರಾದ ಪಾಂಡವರು ಅರಣ್ಯದಲ್ಲಿರುವುದರಿಂದ ದಯಮಾಡಿ ಅವರಲ್ಲಿಗೆ ಹೋಗಿ ಆತಿಥ್ಯವನ್ನು ಸ್ವೀಕರಿಸಿ ಅವರನ್ನು ಧನ್ಯರನ್ನಾಗಿಸಿ.

ದ್ರೌಪದಿಯೊಬ್ಬಳೇ ಅಡುಗೆ ಮಾಡಬೇಕಾದ ಕಾರಣ ತಾವುಗಳೆಲ್ಲರೂ ಮಧ್ಯಾಹ್ನ ಕಳೆದ ನಂತರ ಆಶ್ರಮವನ್ನು ತಲುಪಿದರೆ ಒಳ್ಳೆಯದು’ ಎಂಬ ಸೂಚನೆಯೊಡನೆ ನಯವಾಗಿ ಮಾತನಾಡಿದನು.

ಋಷಿ ಸಮೂಹವು ಮಧ್ಯಾಹ್ನ ಹೊತ್ತು ಕಳೆದು ಪಾಂಡವರ ಬಳಿ ಹೋದರೆ ಅಷ್ಟರಲ್ಲಿ ದ್ರೌಪದಿಯೂ ಸಹ ಊಟ ಮಾಡಿ ಮುಗಿಸಿರುತ್ತಾಳಾದ ಕಾರಣ, ಊಟ ದೊರೆಯದೆ ಹಸಿದು ಬಳಲಿದ ದೂರ್ವಾಸರು ಪಾಂಡವರಿಗೆ ಶಾಪವಿತ್ತು, ಅವರನ್ನು ನಾಶ ಮಾಡಲು ಇದೊಂದು ಸದವಕಾಶವೆ೦ಬ ಯೋಜನೆ ದುರ್ಯೋಧನನದಾಗಿತ್ತು.

ಪಾಂಡವರ ವಿನಾಶಕ್ಕಿಂತ ಹೆಚ್ಚಿನದಾದ ಇನ್ಯಾವ ವರವೂ ಅವನಿಗೆ ಬೇಕಿರಲಿಲ್ಲ. ಕೃಷ್ಣ ಕೃಪೆಯನ್ನು ಸದಾ ಹೊಂದಿದ್ದ ಪಾಂಡವರು ಸರ್ವವಿಧದಲ್ಲಿಯೂ ರಕ್ಷಿತರೆಂಬುದನ್ನು ಅವನು ತಿಳಿಯಲಾರದೆ ಹೋದನು.

ಪಾಂಡವರು ದ್ಯೂತದಲ್ಲಿ ಸೋತು ರಾಜ್ಯ ಕೋಶಗಳನ್ನು ಕಳೆದುಕೊಂಡು ಅಡವಿಗೆ ಹೊರಟು ನಿಂತಾಗ ದುಃಖಿತರಾದ ಅನೇಕ ಪುರಜನರು ಅವರನ್ನು ಹಿಂಬಾಲಿಸಿದರು. ಯುಧಿಷ್ಠಿರನು ಅವರನ್ನು ಕುರಿತು, “ಪುರಜನರೇ, ನೀವೆಲ್ಲರೂ ನಮ್ಮನ್ನು ಎಷ್ಟು ಪ್ರೀತಿಸುತ್ತೀರಂಬ ಮತ್ತು ಗೌರವಿಸುತ್ತೀರೆಂಬ ಅರಿವು ನಮಗಿದೆ.

ನಾವೂ ಸಹ ನಿಮ್ಮನ್ನು ಇಷ್ಟು ದಿನವೂ ಸ್ವಂತ ಮಕ್ಕಳಂತೆ ಕಾಪಾಡಿದ್ದೇವೆ. ನಿಮ್ಮ ದುಃಖವನ್ನು ಸಾಂತ್ವನಗೊಳಿಸಿ, ನಿಮ್ಮ ಕಷ್ಟ ಯಾತನೆಗಳನ್ನು ಪರಿಹರಿಸಲು ಕಂಕಣಬದ್ಧರಾಗಿದ್ದೇವೆ. ಅಲ್ಲದೆ ನಿಮ್ಮ ಸುಖವನ್ನು ಕಂಡು ಆನಂದಿಸಿದ್ದೇವೆ. ಯಜ್ಞ ಯಾಗಾದಿಗಳನ್ನು ಮಾಡಿ ಬ್ರಾಹ್ಮಣರಿಗೆ ದಾನ ದಕ್ಷಿಣೆಗಳನ್ನು ನೀಡಿ ಸಂತುಷ್ಟಿಗೊಳಿಸಿದ್ದೇವೆ.

ಆದರೆ ಇಂದು ನಾವು ಬರಿಗೈಯಲ್ಲಿ ಅಡವಿಗೆ ಹೊರಟಿದ್ದೇವೆ. ಕಾಡಿನಲ್ಲಿ ನಮ್ಮ ಹಸಿವಿನ ಬಾಧೆಯನ್ನು ನಮಗೇ ಕಷ್ಟವಿರುವಾಗ ನಿಮ್ಮೆಲ್ಲರ ಹಸಿವು ಬಾಯಾರಿಕೆಗಳನ್ನು ತಣಿಸಲು ಹೇಗೆ ತಾನೆ ಸಾಧ್ಯವಾದೀತು. ಆದ್ದರಿಂದ ನೀವೆಲ್ಲರೂ ನಿಮ್ಮ ಮನೆಗಳಿಗೆ ಹಿಂದಿರುಗಿ’ ಎಂದು ಹೇಳಿದರೂ ಸಹ ಕೆಲವು ಬ್ರಾಹ್ಮಣರು ಧರ್ಮರಾಜನನ್ನು ಹಿಂಬಾಲಿಸಿದರು.

ಹೀಗಿರುವಾಗ ಸೂರ್ಯನು ಧರ್ಮರಾಜನಿಗೆ ಅಕ್ಷಯ ಪಾತ್ರೆಯನ್ನು ಪ್ರಸಾದಿಸಿ, ”ಧರ್ಮಜ, ಈ ಅಕ್ಷಯ ಪಾತ್ರೆಯು ನಿಮ್ಮೆಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಒದಗಿಸುತ್ತದೆ. ನೀವು ಅಡವಿಯಲ್ಲಿ ವಾಸಮಾಡಬೇಕಾಗಿರುವ ಹನ್ನೆರಡು ವರ್ಷಗಳಲ್ಲಿ ಪ್ರತಿ ದಿನವೂ ಎಲ್ಲರೂ ಭೋಜನ ಮುಗಿಸಿದ ನಂತರ ದ್ರೌಪದಿಯ ಊಟವಾಗುವವರೆಗೂ ಈ ಪಾತ್ರೆಯು ಆಹಾರವನ್ನು ಒದಗಿಸುತ್ತದೆ.

ಇದರಿಂದ ನಿಮ್ಮ ಹಸಿವಿನ ಬಾಧೆ ನೀಗುವುದು” ಎಂದು ಆಶೀರ್ವದಿಸಿ ಅದೃಶ್ಯನಾದನು. ಪ್ರತಿದಿನವೂ ದ್ರೌಪದಿಯು ಶುಚಿರ್ಭೂತಳಾಗಿ ಶ್ರೀ ಕೃಷ್ಣ ಪರಮಾತ್ಮನನ್ನು ಪ್ರಾರ್ಥಿಸಿ ಅಕ್ಷಯ ಪಾತ್ರೆಯನ್ನು ಪೂಜಿಸಿ ಮೊದಲು ಬ್ರಾಹ್ಮಣ ಅತಿಥಿಗಳೆಲ್ಲರಿಗೂ ಬಡಿಸಿ ತೃಪ್ತಿಗೊಳಿಸುತ್ತಿದ್ದಳು. ನಂತರ ತನ್ನ ಪತಿಗಳ ಊಟವಾದ ನಂತರ ತಾನೂ ಊಟ ಮಾಡಿ ಅಕ್ಷಯ ಪಾತ್ರೆಯನ್ನು ಶುದ್ಧಿ ಮಾಡಿಡುತ್ತಿದ್ದಳು. ದ್ರೌಪದಿಯ ಊಟವಾದ ನಂತರ ಅಕ್ಷಯ ಪಾತ್ರೆಯು ಇನ್ಯಾರಿಗೂ ಆಹಾರವನ್ನು ಒದಗಿಸುತ್ತಿರಲಿಲ್ಲ.

ಹಸ್ತಿನಾಪುರದಿಂದ ಹೊರಟ ದೂರ್ವಾಸರು ದುರ್ಯೋಧನನಿಗೆ ಕೊಟ್ಟ ವರವನ್ನು ನೆರವೇರಿಸಲು ಪಾಂಡವರ ಬಳಿಗೆ ಹೋಗಲು ನಿಶ್ಚಯಿಸಿದರು. ಎಲ್ಲರ ಅರ್ಹತೆಗಳನ್ನೂ ಒರೆಗೆ ಹಚ್ಚಿ ಅವರವರ ಯೋಗ್ಯತಾನುಸಾರ ಶಾಪವನ್ನೋ ಅಥವ ವರವನ್ನೋ ದಯಪಾಲಿಸುವುದೆಂದರೆ ಅವರಿಗೆ ಬಹಳ ಇಷ್ಟ.

ಒಂದು ದಿನ ಮಧ್ಯಾಹ್ನ ವೇಳೆ ಮೀರಿ ದೂರ್ವಾಸರು ತಮ್ಮ ಅರವತ್ತು ಸಾವಿರ ಪರಿವಾರದೊಂದಿಗೆ ಪಾಂಡವರ ಪರ್ಣಕುಟಿಗೆ ಬಂದರು. ಸಹೋದರರು ಪತ್ನಿ ದ್ರೌಪದಿಯೊಡನೆ ಅವರ ಕುಶಲವನ್ನು ಪ್ರಶ್ನಿಸಿ ಗೌರವ ಸೂಚಿಸಿದರು ಮತ್ತು ಅಡವಿಯಲ್ಲಿ ದೊರಕಬಹುದಾದಂತಹ ಆಸನಗಳನ್ನಿತ್ತು ಋಷಿಯ ಆಣತಿಗಾಗಿ ಕಾಯುತ್ತ ನಿಂತರು.

“ಪಾಂಡವರೇ, ನಾನೂ ಮತ್ತು ನನ್ನ ಪರಿವಾರವೂ ಬಹಳ ದೂರ ನಡೆದು ಬಳಲಿ ಬಂದಿದ್ದೇವೆ. ನಮ್ಮೆಲ್ಲರಿಗೂ ಬಹಳ ಹಸಿವೆಯಾಗಿದೆ. ನಾವು ನದಿಗೆ ತೆರಳಿ ಮಿಂದು ಬರುವಷ್ಟರಲ್ಲಿ ನಮ್ಮೆಲ್ಲರಿಗೂ ಭೋಜನದ ಸಿದ್ಧತೆಯನ್ನು ಮಾಡುವುದು” ಎಂದು ಆಜ್ಞಾಪಿಸಿ ಸ್ನಾನ ಮಾಡಲು ನದಿಗೆ ಹೊರಟರು. ಈ ಮಾತನ್ನು ಕೇಳಿ ಪಂಚ ಪಾಂಡವರಿಗೆ ಮತ್ತು ದ್ರೌಪದಿಗೆ ಜಂಘಾಬಲವೇ ಉಡುಗಿ ಹೋಯಿತು.

ದೂರ್ವಾಸರು ಮತ್ತು ಅವರ ಶಿಷ್ಯರು ಬರುವಷ್ಟರಲ್ಲಿ ಬ್ರಾಹ್ಮಣರ ಭೋಜನವು ಮುಗಿದು, ಪಾಂಡವರೆಲ್ಲರೂ ಭುಜಿಸಿ, ದ್ರೌಪದಿ ಊಟವೂ ಸಹ ಮುಗಿದಿತ್ತು. ಅವಳು ಅಕ್ಷಯ ಪಾತ್ರೆಯನ್ನು ಶುದ್ಧಿಮಾಡಿ ಬೋರಲು ಹಾಕಿಟ್ಟು ವಿಶ್ರಾಂತಿ ಪಡೆಯುತ್ತಿದ್ದಳು.

‘ಇದೆಂತಹ ಕಷ್ಟ ಪರಿಸ್ಥಿತಿ ನಮಗೆದುರಾಗಿದೆ. ದೂರ್ವಾಸರಾದರೋ ಶೀಘ್ರ ಕೋಪಿಗಳು. ಮೇಲೆ ಹಸಿದವರು ಬೇರೆ ಹಸಿದ ಬ್ರಾಹ್ಮಣನನ್ನು ಕೆಣಕಬೇಡ ಎಂಬ ಎಚ್ಚರಿಕೆ ಮಾತೇ ಇದೆ. ಯೋಗ ಪುರುಷರಾದ ಮುನಿಯು ಕೋಪಗೊಂಡು ಶಪಿಸಿದರೆ ನಾವು ನಾಶ ಹೊಂದುವುದು ಖಂಡಿತ. ಅಯ್ಯೋ, ದುರಾದೃಷ್ಟವೆಂಬುದು ಇಲ್ಲಿಯೂ ನಮ್ಮ ಬೆನ್ನಟ್ಟಿ ಬರಬೇಕೆ” ಎಂದು ಅಣ್ಣ ತಮ್ಮಂದಿರು ಹಲುಬತೊಡಗಿದರು.

ಭೀಮನಾದರೋ, ‘ಅಣ್ಣಾ ಇವರೆಲ್ಲ ಬರುವರೆಂಬ ಸೂಚನೆಯಿದ್ದರೆ ನನ್ನ ಊಟವನ್ನಾದರೂ ಇಟ್ಟಿರುತ್ತಿದ್ದೆನಲ್ಲ. ಅದರಿಂದ ಇವರೆಲ್ಲರ ಹಸಿವೆಯನ್ನೂ ಹಿಂಗಿಸಬಹುದಾಗಿತ್ತು. ಕೆಲವು ದಿನಗಳ ಹಿಂದೆ ದೂರ್ವಾಸರು ಹಸ್ತಿನಾಪುರಕ್ಕೆ ಹೋಗಿ ದುರ್ಯೋಧನನ ಆತಿಥ್ಯವನ್ನು ಪಡೆದು ಬಂದ ವಿಷಯ ತಿಳಿಯಿತು. ಇದೆಲ್ಲ ಅವನದೇ ಒಳಸಂಚು ಇರಬಹುದು.

ಚಿತ್ರಸೇನನು ಅವನನ್ನು ಹೆಡೆಮುರಿಕಟ್ಟಿ ಕರೆದೊಯ್ಯುತ್ತಿದ್ದಾಗ ನಾವು ಅವನನ್ನು ಬಿಡಿಸದಿದ್ದರೆ ಸರಿಯಿತ್ತು. ಬಂಧುಗಳನ್ನು ಕಾಪಾಡುವುದು ಧರ್ಮವೆಂದು ನೀನು ಹೇಳಿದೆಯಲ್ಲ, ಪ್ರತಿಯೊಂದಕ್ಕೂ ಅಧರ್ಮವನ್ನೆ ಆಶ್ರಯಿಸುವ ಕೌರವರಲ್ಲಿ ಧರ್ಮದ ಮಾತನಾಡುವುದು ಸರಿಯೇ’ ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ.

ಹಠಾತ್ತಾಗಿ ಒದಗಿಬಂದ ಸನ್ನಿವೇಶದಿಂದ ದ್ರೌಪದಿಗೆ ದಿಕ್ಕೇ ತೋಚದಂತಾಯಿತು. ಅವಳು ಬೆಳಗಿನಿಂದಲೂ ಬಂದ ಅತಿಥಿಗಳಿಗೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆ ನಡೆಸಿ ತೃಪ್ತಿಗೊಳಿಸಿದ ನಂತರ ಪಾಂಡವರಿಗೆ ಬಡಿಸಿ ಮತ್ತಾವ ಅತಿಥಿಯೂ ಆ ದಿನ ಬರುವ ಸಾಧ್ಯತೆ ಇಲ್ಲವೆಂದು ಖಚಿತಪಡಿಸಿಕೊಂಡು ತಾನೂ ಊಟ ಮಾಡಿ ಅಕ್ಷಯ ಪಾತ್ರೆಯನ್ನು ತೊಳೆದಿಟ್ಟಿದ್ದಳು.

ದಿನವೂ ಬೆಳಗಿನ ಜಾವ ಎದ್ದು ಮಡಿಯುಟ್ಟು ಆಶ್ರಮದ ಬಾಗಿಲನ್ನು ಸಾರಿಸಿ ರಂಗವಲ್ಲಿಯಿಟ್ಟು ಗೋಪೂಜೆ ನಡೆಸಿದ ನಂತರ ದ್ರೌಪದಿ ಪಾಂಡವರ ಹೋಮ ಹವನಾದಿಗಳಿಗೆ ಸಿದ್ಧಗೊಳಿಸುತ್ತಿದ್ದಳು.

ನಂತರ ಆಗಮಿಸಿದ ಬ್ರಾಹ್ಮಣರನ್ನು ಮತ್ತು ಇತರ ಅತಿಥಿಗಳನ್ನು ಸ್ವಾಗತಿಸಿ ಆಸನ ಕೊಟ್ಟು ಹಿತವಚನಗಳಿಂದ ಅವರ ಕ್ಷೇಮವನ್ನು ವಿಚಾರಿಸಿದ ನಂತರ ಶ್ರೇಷ್ಠವಾದ ಅಕ್ಷಯ ಪಾತ್ರೆಗೆ ಧೂಪ ದೀಪಾರತಿಗಳಿಂದ ಪೂಜಿಸಿ ಎಲ್ಲರ ಹಸಿವನ್ನೂ ತಣಿಸಲು ಆಹಾರ ನೀಡುವಂತೆ ಅಕ್ಷಯ ಪಾತ್ರೆಯನ್ನು ಪ್ರಾರ್ಥಿಸಿ ನಂತರ ಪಾತ್ರೆಯು ನೀಡುತ್ತಿದ್ದ ಸಮೀಚೀನ ಭೋಜನವನ್ನು ಎಲ್ಲರಿಗೂ ಬಡಿಸುತ್ತಿದ್ದಳು.

ಎಂದೂ ಸಹ ಎಲ್ಲರೂ ತಿಂದ ನಂತರ ಮಿಗುವಷ್ಟು ಆಹಾರವನ್ನು ಬೇಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಧುತ್ತೆಂದು ಮುಂದೆ ನಿಂತ ಸಮಸ್ಯೆ ದ್ರೌಪದಿಯನ್ನು ಕಂಗೆಡಿಸಿತು.

“ಅನಾಥೋ ಕೃಷ್ಣ ರಕ್ಷಕಃ” ಎಂಬುದರಲ್ಲಿ ಅಪರಿವಿತ ನಂಬಿಕೆಯನ್ನು ಹೊಂದಿದ್ದ ದ್ರೌಪದಿಯು ತನ್ನ ಆರಾ‍ಧ್ಯ ದೈವ ಕೃಷ್ಣನನ್ನು ಸುತ್ತಿಸತೊಡಗಿದಳು.” ದೀನ ಜನ ದುಃಖಾಪರಹಾರಿ, ನಾನು ನೆನೆಸಿಕೊಂಡಾಗ ಬಂದು ಕಷ್ಟವನ್ನು ಪರಿಹರಿಸುತ್ತೇನೆಂದು ನೀನು ಕೊಟ್ಟ ಭಾಷೆಯು ಜ್ಞಾಪಕವಿರುವುದೇ ಯಶೋದಾನಂದನ.

ದೂರ್ವಾಸರ ಕೋಪದಿಂದ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೇವ ನೀನೋಬ್ಬನೇ, ಪಾಹಿಮಾಂ” ಎಂದು ಒಂದೇ ಮನಸ್ಸಿನಿಂದ ಧ್ಯಾನ ಮಾಡಿದಳು. ಭಕ್ತ ಪರಿಪಾಲಕನಾದ ಶ್ರೀಕೃಷ್ಣ ಒಡನೆಯೇ ಪ್ರತ್ಯಕ್ಷನಾದ. ಆದರೆ ಅವನು ದ್ರೌಪದಿಯನ್ನು ನಿನ್ನ ಸಂಕಟವೇನು, ನನ್ನನ್ನು ನೀನು ಕರೆಯಲು ಕಾರಣವೇನು ಎಂದು ಕೇಳಲಿಲ್ಲ. “ತಂಗೀ, ನನಗೆ ಬಹಳ ಹಸಿವಾಗಿದೆ. ತಿನ್ನಲು ಏನನ್ನಾದರೂ ಕೂಡಲೇ ತೆಗೆದುಕೊಂಡು ಬಾ. ಅನಂತರ ಏನಿದ್ದರೂ ಮಾತನಾಡೋಣ” ಎಂದ.

ದ್ರೌಪದಿಯು ಗರಬಡಿದವಳಂತೆ ನಿಂತಳು. ಹಗ್ಗವೆಂದು ಕೈಯ್ಯಲ್ಲಿ ಹಿಡಿದಿದ್ದು ಹಾವಾಗಿ ಸುತ್ತಿಕೊಂಡಂತಾಯಿತು ಅವಳ ಪರಿಸ್ಥಿತಿ. ಅವಳು ಅಳುತ್ತಾ ಕೃಷ್ಣನನ್ನು ಕುರಿತು “ಮಧುಸೂದನ ನಿನ್ನದು ಇದೆಂತಹ ಪರೀಕ್ಷೆ. ಈ ಕಾಡಿನಲ್ಲಿ ವಾಸಿಸುತ್ತಿರುವ ನಾವು ನಿನ್ನ ಹಸಿವನ್ನು ಹೋಗಲಾಡಿಸಲು ಏನನ್ನು ತಾನೆ ಕೊಡಬಲ್ಲೆವು.

ಇನ್ನು ಅಕ್ಷಯ ಪಾತ್ರೆಯಿಂದ ನಿನಗೆ ಮೃಷ್ಟಾನ್ನವನ್ನು ಉಣಬಡಿಸೋಣವೆಂದರೆ ಅದನ್ನಾಗಲೇ ತೊಳೆದಿಟ್ಟಾಯಿತು. ಅದು ಬರಿದಾಗಿದೆ. ಹಾಸ್ಯಕ್ಕಾಗಿಯಾದರೂ ಅಬಲೆಯಾದ ನನ್ನನ್ನು ಕಾಡುವುದು ಕ್ಷೀರ ಚೋರನಾದ ನಿನಗೆ ಶೋಭೆ ತರುವುದೇ? ವಿನಾ ಕಾರಣವಾಗಿಯೇ ಸಿಡಿದೇಳುವ ದೂರ್ವಾಸರು ತಮ್ಮ ಪರಿವಾರದೊಂದಿಗೆ ಬಂದು ಸ್ನಾನಕ್ಕಾಗಿ ತೆರಳಿದ್ದಾರೆ ಮತ್ತು ಇನ್ನು ಕೆಲವು ಕ್ಷಣಗಳಲ್ಲಿ ಹಿಂದಿರುಗಿ ಬಂದು ಊಟ ಮಾಡುತ್ತೇವೆಂದು ಹೇಳಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ನೀನೂ ಸಹ ಬಂದು ಹಸಿವೆಯೆಂದು ಉಣ್ಣಲು ಬೇಡುವುದು ತರವೇ?” ಎಂದಳು.

ಕೃಷ್ಣನು ದ್ರೌಪದಿಯ ಯಾವ ಮಾತುಗಳನ್ನೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. “ಪಾಂಚಾಲಿ ಮೊದಲು ನನ್ನ ಹಸಿವನ್ನು ತಣಿಸು, ನೆಪಗಳನ್ನು ಹೇಳಬೇಡ. ಅಕ್ಷಯಪಾತ್ರೆಯನ್ನು ತೆಗೆದುಕೊಂಡು ಬಾ. ನಿನ್ನ ಮಾತಿನ ಯಥಾರ್ಥವನ್ನು ನಾನೇ ಪರೀಕ್ಷಿಸುತ್ತೇನೆ.” ಎಂದು ಆತುರಪಡಿಸತೊಡಗಿದನು.

ಬೇರೆ ದಾರಿ ಕಾಣದೆ ದ್ರೌಪದಿಯು ಅಕ್ಷಯ ಪಾತ್ರೆಯನ್ನು ತಂದು ಕೃಷ್ಣನ ಕೈಲಿಟ್ಟಳು. ಕೃಷ್ಣನು ಅಕ್ಷಯಪಾತ್ರೆಯೊಳಗೆ ಕಣ್ಣಾಡಿಸಿ, ಅಲ್ಲಿ ಒಂದು ಅಗಳು ಅಂಟಿಕೊಂಡಿದ್ದನ್ನು ಕಂಡು ತೃಪ್ತಿಯಿಂದ ತಿಂದು ತೇಗಿದನು. ದ್ರೌಪದಿಯಾದರೋ ಅಕ್ಷಯ ಪಾತ್ರೆಯನ್ನು ಸರಿಯಾಗಿ ತೊಳೆದು ಶುದ್ಧಿ ಮಾಡದಿದ್ದ ಬಗ್ಗೆ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಿದ್ದಳು. ಅವಳಿಗಾದರೋ ಪರಮಾತ್ಮನಾಗಿ ಎಲ್ಲರಲ್ಲಿಯೂ ನೆಲೆಸಿ ಒಂದು ಅನ್ನದ ಅಗುಳನ್ನು ಸ್ವೀಕರಿಸಿ ಸಂತೃಪ್ತನಾಗಿ ವಿಶ್ವವನ್ನೇ ತೃಪ್ತಿಪಡಿಸಿದ ಪರಮ ಲೀಲೆ ಅರ್ಥವಾಗಲಿಲ್ಲ.

ಏಕೋ ವಿಷ್ಣುರ್ಮಹದ್ಭೂತೋ

ಪೃಥಗ್ಭೂತಾನ್ಯನೇಕಶಃ |

ಕ್ರೀನ್‌ ಲೋಕಾನ್‌ ವ್ಯಾಪ್ಯ ಭೂತಾತ್ಮ

ಭುಂಕ್ತೇ ವಿಶ್ವಭಗವ್ಯಯಃ ||

ಎಂಬಂತೆ ಸರ್ವವ್ಯಾಪಿಯಾದ ಸರ್ವಲೋಕ ರಕ್ಷಕನಾದಭಗವಂತನು ಸುಪ್ರೀತನಾದರೆ ಹುಲು ಮಾನವರ ಬಗ್ಗೆಹೇಳಬೇಕಾದುದೇನಿದೆ.

ನಂತರದಲ್ಲಿ ಲೀಲಾ ವಿನೋದ ಪ್ರಿಯನಾದ ಶ್ರೀಕೃಷ್ಣನು ಭೀಮಸೇನನನ್ನು ಕುರಿತು ಭೋಜನವು ಸಿದ್ಧವಾಗಿರುವುದನ್ನು ದೂರ್ವಾಸರಿಗೂ ಮತ್ತು ಅವರ ಶಿಷ್ಯರಿಗೂ ತಿಳಿಸಿ ಕರೆದು ತರಬೇಕೆಂದು ಹೇಳಿ ಕಳುಹಿಸಿದನು. ಭೀಮನಿಗೆ ಬಹಳ ಆಶ್ಚರ್ಯವಾದರೂ ಸಹ ವಾಸುದೇವನಲ್ಲಿ ಅಚಲವಾದ ನಂಬಿಕೆಯಿಂದ ಮರು ಪ್ರಶ್ನಿಸದೆ ಮುನಿಯೂ, ಶಿಷ್ಯರೂ ಸ್ನಾನ ಮಾಡುತ್ತಿದ್ದ ಸರೋವರದ ಕಡೆ ತ್ವರಿತ ಗತಿಯಿಂದ ತೆರಳಿದನು ಮತ್ತು ಅವರನ್ನು ಕುರಿತು, “ಋಷಿವರ್ಯರೇ, ಈಗಾಗಲೇ ಭೋಜನದ ವೇಳೆ ಮೀರುತ್ತಿದೆ.

ತಾವೆಲ್ಲರೂ ಸ್ನಾನ ಮುಗಿಸಿ ಕೂಡಲೆ ಹೊರಟು ಬಂದು ನಮ್ಮ ಆತಿಥ್ಯವನ್ನು ಮನದಣಿಯೆ ಸ್ವೀಕರಿಸಬೇಕೆಂಬ ಸಂದೇಶವನ್ನು ತಂದಿದ್ದೇನೆ. ತ್ವರೆ ಮಾಡಿ” ಎಂದು ಭಿನ್ನವಿಸಿಕೊಂಡನು. ಇತ್ತ ನದಿಯಲ್ಲಿ ಸ್ನಾನ ಮಾಡುತ್ತಿದ್ದವರಿಗೆಲ್ಲ ಕೃಷ್ಣನು ದ್ರೌಪದಿಯ ಅಕ್ಷಯ ಪಾತ್ರೆಯಿಂದ ಅನ್ನದ ಅಗುಳನ್ನು ಸ್ವೀಕರಿಸುತ್ತಲೇ ಭೂರಿ ಭಕ್ಷ್ಯಗಳನ್ನು ತಿಂದಷ್ಟು ತೃಪ್ತಿಯಾಗಿ ಅವರ ಹಸಿವು ಹೇಳ ಹೆಸರಿಲ್ಲದೆ ಓಡಿ ಹೋಯಿತು.

ಎಲ್ಲರ ಮುಖದಲ್ಲಿಯೂ ದಣಿವು ಮಾಯವಾಗಿ ಸಂತೃಪ್ತಿಯ ಭಾವವಿತ್ತು. ಅವರು ತಮಗೆ ಸ್ವಲ್ಪವೂ ಹಸಿವಿಲ್ಲವೆಂದೂ ಒಂದು ತುತ್ತು ಊಟಮಾಡಲೂ ಸಹ ತಮ್ಮಿಂದ ಸಾಧ್ಯವಿಲ್ಲವೆಂದೂ ಭೀಮನಿಗೆ ಹೇಳಿದರು. ದೂರ್ವಾಸರು ನಡೆದ ವಿಷಯವನ್ನು ದಿವ್ಯದೃಷ್ಟಿಯಿಂದ ತಿಳಿದುಕೊಂಡರು ಮತ್ತು ಗೋವಿಂದನಿಂದ ರಕ್ಷಿತರಾದ ಮತ್ತು ಭಕ್ತರಾದ ಪಾಂಡವರನ್ನು ಪರೀಕ್ಷಿಸಲು ಬಂದ ಅವರಿಗೆ ತಮ್ಮ ಬಗ್ಗೆಯೇ ಬೇಸರವಾಯಿತು.

ಅವರು ಭೀಮನನ್ನು ಕುರಿತು ಪಾಂಡವ ಮಧ್ಯಮ, ನಮ್ಮದೆಲ್ಲ ಊಟವಾಯಿತು. ನಮ್ಮನ್ನು ಕ್ಷಮಿಸುವಂತೆ ಯುಧಿಷ್ಠಿರನಿಗೆ ಹೇಳು” ಎಂದು ಶ್ರೀ ಕೃಷ್ಣ ಪರಮಾತ್ಮನಿಗೆ ಮನಸ್ಸಿನಲ್ಲಿಯೇ ನಮಸ್ಕಾರಗಳನ್ನರ್ಪಿಸುತ್ತ ಹಿಂದಿರುಗಿದರು.

ಯಥಾ ತರೋರ್‌ ಮೂಲ ನಿಶೇಚನೇನ

ತೃಪ್ಯಂತಿ ತತ್-ಸ್ಕಂಧ ಭುಜೋಪ ತಾಖಾಃ

ಪ್ರಾಣೋಪಹಾರಾಚ್ಚ ಯಥೇಂದ್ರಿಯಾಣಾಂ

ತಥೈವ ಸರ್ವಾರ್ಹಣಂ ಅತ್ಯುತೇಜ್ಯ

ಮರದ ಬೇರಿಗೆ ನೀರು ಎರೆದು ಇಡೀ ವೃಕ್ಷವನ್ನೇ ಪೋಷಿಸುವಂತೆ, ಉದರಕ್ಕೆ ಆಹಾರ ಉಣಿಸಿ ಇಡೀ ದೇಹವನ್ನೇ ಪುಷ್ಟಿಗೊಳಿಸುವಂತೆ, ಪರಮ ದೇವೋತ್ತಮ ಶ್ರೀಕೃಷ್ಣನಿಗೆ ಸೇವೆ ಸಲ್ಲಿಸುವುದರಿಂದ ಎಲ್ಲಾ ದೇವತೆಗಳನ್ನೂ ಜೀವಿಗಳನ್ನೂ ತೃಪ್ತಿಗೊಳಿಸಬಹುದು. ಈ ಸಿದ್ಧಾಂತವನ್ನು ಮೇಲಿನ ಲೀಲೆಯಿಂದ ಅರಿಯಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi