ನೈಜ ಜ್ಞಾನ

ಶ್ರೀಲ ಪ್ರಭುಪಾದರು ಭಕ್ತರೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ : ಮೆಲ್‌ಬೋರ್ನ್, ಆಸ್ಟ್ರೇಲಿಯಾ, ಮೇ 1975

ಭಕ್ತ: ಶ್ರೀಲ ಪ್ರಭುಪಾದರೆ, ಅನುಮಾನ ಎನ್ನಲಾಗುವ ಒಂದು ಪ್ರಕ್ರಿಯೆಯ ಮೂಲಕ ನಾವು ದೇವರ ಬಗೆಗೆ ತಿಳಿದುಕೊಳ್ಳಬಹುದೆಂದು ನಿಮ್ಮ ಒಂದು ಪುಸ್ತಕದಲ್ಲಿ ನಾನು ಓದಿದೆ. ಅನುಮಾನ ಎಂದರೇನು ?

ಶ್ರೀಲ ಪ್ರಭುಪಾದ: ಅನುಮಾನ ಎಂದರೆ ತರ್ಕ. ಉದಾಹರಣೆಗೆ ಒಂದು ಯಂತ್ರ ನಮ್ಮ ಕಣ್ಣಿಗೆ ಬಿದ್ದ ಕೂಡಲೆ ಅದಕ್ಕೊಬ್ಬ ಚಾಲಕನೂ ಇರಬೇಕು ಎಂಬುದು ನಮಗೆ ಗೊತ್ತು. ಇದು ತರ್ಕ. ಒಬ್ಬ ಚಾಲಕನ ಸಹಾಯವಿಲ್ಲದೆ ಯಂತ್ರ ಕೆಲಸ ಮಾಡಬೇಕೆಂದು ನೀವು ನಿರೀಕ್ಷಿಸಲಾಗದು. ಅದೇ ರೀತಿ ಈ ಭೌತ ಪ್ರಕೃತಿ ಎನ್ನುವುದು ಒಂದು ಯಂತ್ರ ಮತ್ತು ದೇವರು ಅದರ ಚಾಲಕ. ನೀವು ದೇವರನ್ನು ಕಾಣಲಾರಿರಾದರೂ, ತರ್ಕದ ಸಹಾಯದಿಂದ ಅವನಿದ್ದಾನೆಂದು ನೀವು ತಿಳಿದುಕೊಳ್ಳಬಹುದು. ಇದು ಮನುಷ್ಯರ ತರ್ಕ.

ಆದರೆ ನಾಸ್ತಿಕ ಮನೋಭಾವದ ವಿಜ್ಞಾನಿಗಳು ಈ ಸರಳವಾದ ಮಾತನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ಸಾಮಾನ್ಯ ಬೆರಳಚ್ಚು ಯಂತ್ರ ಕೂಡ ತನ್ನಂತೆ ತಾನೆ ಕೆಲಸ ಮಾಡಲಾರದು. ಅದರ ಕೀಲಿಗಳನ್ನು ಒತ್ತಲು ಒಬ್ಬ ಕೆಲಸಗಾರ ಬೇಕು. ಹೀಗಿರುವಾಗ ಭೌತ ಪ್ರಕೃತಿ ಎಂಬ ಈ ಬೃಹತ್‌ ಯಂತ್ರ ಒಬ್ಬ ಕೆಲಸಗಾರನ ಸಹಾಯವಿಲ್ಲದೆ ಹೇಗೆ ತಾನೆ ಕಾರ್ಯ ನಿರ್ವಹಿಸುತ್ತದೆ? ಎಂಥ ಹುಚ್ಚು ಮಾತು ಇದೆಲ್ಲ?

“”ದೇವರು ಇಲ್ಲ. ಪ್ರಾಕೃತಿಕ ಶಕ್ತಿ ವಿಶೇಷಗಳಿಂದ ಪ್ರತಿಯೊಂದೂ ಕಾರ್ಯ ನಿರ್ವಹಿಸುತ್ತಿದೆ” ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಪ್ರಕೃತಿ ಎಂದರೇನು? ಪ್ರಕೃತಿ ಎಂಬುದು ಬರಿಯ ಒಂದು ಯಂತ್ರ ಅಷ್ಟೆ. ನಿಮ್ಮ ದೇಹ ಹೇಗೋ ಹಾಗೆ ಅದೂ ಒಂದು ಯಂತ್ರ. ದೇಹವೆಂಬ ಯಂತ್ರವನ್ನು ನಡೆಸುವವನು ಆತ್ಮ ಹಾಗೂ ಈ ಆತ್ಮನ ಮಾರ್ಗದರ್ಶಕನು ಪರಮಾತ್ಮ ಭಗವಾನ್ ಕೃಷ್ಣನೇ ಹೃದಯ.

ಆತ್ಮವು ದೇಹವನ್ನು ಬಿಟ್ಟು ಹೊರಟುಹೋದೊಡನೆ ದೇಹ ಯಂತ್ರ ಕಾರ್ಯ ಮಾಡುವುದನ್ನು ನಿಲ್ಲಿಸುತ್ತದೆ. ಇದೇ ಮಾತು ಭೌತಿಕ ಪ್ರಕೃತಿ ಎಂಬ ಯಂತ್ರಕ್ಕೂ ಸಲ್ಲುತ್ತದೆ. ನಡೆಸುವವ ಒಬ್ಬನಿಲ್ಲದೆ ಅದು ಕೆಲಸ ಮಾಡುವುದಿಲ್ಲ. ಆದರೆ ವಿಜ್ಞಾನಿಗಳು ಎಂದು ಕರೆಸಿಕೊಳ್ಳುವ ಜನಕ್ಕೆ ಈ ಸರಳ ತರ್ಕವನ್ನು ಅರ್ಥಮಾಡಿಕೊಳ್ಳುವಷ್ಟೂ ಸಾಮಾನ್ಯ ಜ್ಞಾನ ಇಲ್ಲ. ಆದ್ದರಿಂದ ಅವರು ಅವಿವೇಕಿಗಳು.

ಭಕ್ತ: ಭೌತ ವಿಜ್ಞಾನಿ ಹಾಗೂ ಸಾಮಾನ್ಯ ನಾಸ್ತಿಕ – ಈ ಇಬ್ಬರಲ್ಲಿ ದೊಡ್ಡ ಅವಿವೇಕಿ ಯಾರು?

ಶ್ರೀಲ ಪ್ರಭುಪಾದ : ದೇವರನ್ನು ಒಪ್ಪಿಕೊಳ್ಳದ ಯಾರೇ ಆದರೂ ಅವಿವೇಕಿಗಳೇ. ಈ ಮಾತನ್ನು ಕೃಷ್ಣನೇ ಭಗವದ್ಗೀತೆಯಲ್ಲಿ (7-15) ಹೇಳಿದ್ದಾನೆ : ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ ದೇವರನ್ನು ಒಪ್ಪದವರು ಯಾರು? ಪಾಪಿಗಳಾದ ಮೂಢರು. ಈ ಜನ ಮನುಷ್ಯ ಕುಲದಲ್ಲೇ ಅತಿ ಕೀಳು ದರ್ಜೆಯವರು.

“ವಿಜ್ಞಾನಿಗಳು ಭಾರಿ ವಿದ್ಯಾವಂತರಲ್ಲವೆ” ಎನ್ನಬಹುದು ಕೆಲವರು. ಆದರೆ ಅವರ ವಿದ್ಯೆ ಮಿಥ್ಯಾ ವಿದ್ಯೆ. ನಿಜವಾದ ವಿದ್ಯೆಯೆಂದರೆ ಭಗವಂತನನ್ನು ಅರಿತುಕೊಳ್ಳುವುದು. ವೇದೈಸ್ ಚ ಸರ್ವೈರ್ ಅಹಮ್ ಏವ ವೇದ್ಯಃ ಒಬ್ಬ ವ್ಯಕ್ತಿ ಭಗವಂತನನ್ನು ಅರ್ಥಮಾಡಿಕೊಳ್ಳನಾದರೆ ಅವನ ವಿದ್ಯೆ ನಿಷ್ಪ್ರಯೋಜಕ.

ಯಾವುದೇ ವ್ಯಕ್ತಿ ತಾನು ವಿದ್ಯಾವಂತನೆಂದು ಹೇಳಿಕೊಂಡಾಗ, ”ಆ ನಿನ್ನ ವಿದ್ಯೆ ನಿನ್ನನ್ನು ಮರಣದಿಂದ ಪಾರುಮಾಡುತ್ತದೆಯೇ?” ಎಂದು ಒಡನೆಯೇ ನಾವು ಕೇಳಬೇಕು. ಹಾಗಲ್ಲದ ಮೇಲೆ ಅವನ ವಿದ್ಯೆಗೆ ಏನು ಬೆಲೆಯಿದೆ? ಹುಟ್ಟು ವೃದ್ಧಾಪ್ಯ, ರೋಗ ಹಾಗೂ ಮರಣ – ಈ ನಾಲ್ಕು ನಮ್ಮ ನಿಜವಾದ ಸಮಸ್ಯೆಗಳು.

ಐಹಿಕ ವಿದ್ಯೆಯು ಈ ಸಮಸ್ಯೆಗಳನ್ನು ಪರಿಹರಿಸಬಲ್ಲುದೆ? ಒಬ್ಬ ವ್ಯಕ್ತಿ ವೃದ್ಧನಾಗುವುದನ್ನು ವಿಜ್ಞಾನಿಗಳು ತಡೆಯಬಲ್ಲರೆ? ಮುದುಕರಾಗಲು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರೂ ತರುಣರಾಗಿಯೇ ಇರಲು ಯತ್ನ ಮಾಡುತ್ತಾರೆ. ಆದರೆ ಯಾವ ವಿಜ್ಞಾನಿಯೂ ವೃದ್ಧಾಪ್ಯವನ್ನು ತಡೆಯಲಾರ.

ಹಾಗಿರುವಾಗ ವಿಜ್ಞಾನಿ ಕಲಿತ ವಿದ್ಯೆಗೆ ಏನು ಬೆಲೆ? ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ವಿದ್ಯಾರ್ಜನೆ ಮಾಡುತ್ತೇವೆ. ವಿಜ್ಞಾನಿಗಳು ತತ್ಕಾಲದ ಸಮಸ್ಯೆಗಳನ್ನು ಮಾತ್ರ ಪರಿಹರಿಸುತ್ತಿದ್ದಾರೆ; ಆದರೆ ಅಂತಿಮ ಸಮಸ್ಯೆಗಳನ್ನು ಅವರು ಪರಿಹರಿಸಲಾರರು. ಆದ್ದರಿಂದ ಅವರ ವಿದ್ಯೆ ಪ್ರಯೋಜನಕ್ಕೆ ಬಾರದ್ದು. ಶ್ರಮ ಏವ ಹಿ ಕೇವಲಮ್. ಅದು ಪ್ರಯೋಜನಕ್ಕೆ ಬಾರದ ಶ್ರಮ, ಅಷ್ಟೆ.

ಭಕ್ತ: ಮುಖಂಡರು ಎನಿಸಿಕೊಳ್ಳುವ ಜನ ಹರಿದ ಕಡೆ ತೇಪೆ ಹಚ್ಚುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಣುತ್ತದೆ. ಇವರು ಜನರನ್ನು ಅಜ್ಞಾನದಲ್ಲಿಟ್ಟಿರುತ್ತಾರೆ ಮತ್ತು ಪ್ರಗತಿ ಆಗುತ್ತದೆ ಎಂದು ನಂಬುವಂತೆ ಜನರ ಮೇಲೆ ಮೋಡಿ ಮಾಡುತ್ತಾರೆ. ವಾಸ್ತವದಲ್ಲಿ ಯಾವ ಪ್ರಗತಿಯೂ ಆಗಿರುವುದಿಲ್ಲ. ಹೀಗೆ ಮಾಡುವುದರಿಂದ ಮುಖಂಡರು ಅವರ ಸ್ಥಾನಗಳನ್ನು ಉಳಿಸಿಕೊಳ್ಳಬಹುದು.

ಶ್ರೀಲ ಪ್ರಭುಪಾದ : ಹೌದು, ಕುರುಡ ಕುರುಡನಿಗೆ ದಾರಿ ತೋರಿಸಿದಂತೆ – ಅಂಧಾ ಯಥಾಂಥೈರ್‌‌ ಉಪನೀಯ ಮಾನಾಃ, ಭೌತಿಕ ಹೊಂದಾಣಿಕೆಗಳಿಂದ ಸುಖ ಸಾಧಿಸಬಹುದೆಂದು ನಾಯಕರು ಜನಕ್ಕೆ ಹೇಳುತ್ತಾರೆ. ಆದರೆ ಇದು ಸಾಧ್ಯವಿಲ್ಲ. ಆದರೂ ಜನ ಎಂಥ ಬುದ್ಧಿಗೇಡಿಗಳೆಂದರೆ, ಆಲೋಚನೆ ಮಾಡುವುದಿಲ್ಲ.

“ನನ್ನ ಸಮಸ್ಯೆಗಳಿಗೆ ಪರಿಹಾರ ಎಲ್ಲಿ ತೋರಿಸಿದಿರಿ? ಒಂದು ಗಗನಚುಂಬಿ ಸೌಧದಲ್ಲಿ ವಾಸಿಸುವ ಅವಕಾಶವನ್ನು ನೀವು ನನಗೆ ಕೊಟ್ಟಿರುವಿರಿ. ಆದರೆ ಅದು ಹುಟ್ಟು ವೃದ್ಧಾಪ್ಯ, ರೋಗ ಹಾಗೂ ಮರಣಗಳಿಗೆ ಕೊಡಲಾದ ಪರಿಹಾರವೆ? ಎಂದು ಜನ ಕೇಳರು. ಇಂಥ ಪ್ರಶ್ನೆಗಳನ್ನು ಕೇಳುವಷ್ಟು ಮೆದುಳು ಯಾರಿಗೂ ಇಲ್ಲ.

ರೋಗ, ಮುಪ್ಪು, ಮರಣ ಇವುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ. ತಮಗೆ ಏನಾದರೂ ಜಡ್ಡು ಕಾಣಿಸಿಕೊಂಡಾಗ ಜನ ವೈದ್ಯನ ಬಳಿ ಹೋಗುವುದೇಕೆ?

ಭಕ್ತ: ತಮಗೆ ಬಂದ ಕಾಯಿಲೆಯನ್ನು ನಿವಾರಿಸಿಕೊಳ್ಳಬಯಸಿ ವೈದ್ಯನ ಹತ್ತಿರ ಹೋಗುತ್ತಾರೆ.

ಶ್ರೀಲ ಪ್ರಭುಪಾದ : ಹೌದು ಮತ್ತು ಅಂತಿಮವಾಗಿ ಜನ ಸಾಯಬಯಸುವುದಿಲ್ಲ. ಆದರೆ ನಿಮಗೆ ಶ್ರೇಷ್ಠ ವೈದ್ಯ ದೊರೆತರೂ, ಉತ್ತರೋತ್ತರ ಮರಣ ಹೇಗೂ ಬಂದೇ ಬರುತ್ತದೆ ಎಂದ ಮೇಲೆ ಮರಣದ ಸಮಸ್ಯೆಗೆ ಪರಿಹಾರ ಎಲ್ಲಿ ದೊರೆಯಿತು?

ಇಷ್ಟೆಲ್ಲಾ ಇದ್ದು ವಿಜ್ಞಾನವೇ ತಮ್ಮೆಲ್ಲ ಸಮಸ್ಯೆಗಳಿಗೆ ಉತ್ತರವೆಂದು ಬಗೆಯುತ್ತಾರೆ. ಆದ್ದರಿಂದಲೇ ಶ್ರೀಮದ್ಭಾಗವತವು (2.3.19) – ಸ್ವವಿದ್ ವರಾಹೋಷ್ಟ್ರ ಖರೈಃ ಸಂಸ್ತುತಾಹಃ ಪುರುಷಂ ಪಶುಃ – ನಾಯಿಗಳು, ಹಂದಿಗಳು, ಒಂಟೆಗಳು ಹಾಗೂ ಕತ್ತೆಗಳಂಥ ಜನ ತಮ್ಮಂತೆ ಮೃಗೀಯವಾದ ಮಂದಿಯನ್ನು ಪ್ರಶಂಸಿಸುತ್ತಾರೆ” ಎಂದು ಹೇಳುತ್ತದೆ.

ಮುಖಂಡರು ಹಾಗೂ ಅವರ ಅನುಯಾಯಿಗಳು ಇಬ್ಬರೂ ಮೃಗಗಳೆ; ಅವರಲ್ಲಿ ಯಾವನೂ ಮನುಷ್ಯನಲ್ಲ. ದೊಡ್ಡ ಪ್ರಾಣಿಯು, “ಇಗೊಳ್ಳಿ ನಾನು ನಿಮಗಾಗಿ ಇಷ್ಟೆಲ್ಲಾ ಮಾಡಿದ್ದೇನೆ. ಇನ್ನೂ ಬಹಳಷ್ಟನ್ನು ಮಾಡುವ ಭರವಸೆ ಕೊಡುತ್ತೇನೆ. ನಿಮ್ಮ ಮತ ನನಗೆ ಕೊಡಿ” ಎನ್ನುತ್ತದೆ. ಸಣ್ಣ ಪ್ರಾಣಿಯು, ‘ಆಹಾ! ಈತ ನಮಗಾಗಿ ಇಷ್ಟೆಲ್ಲಾ ಮಾಡಿದ್ದಾನೆ. ನನ್ನ ಮತವನ್ನು ಅವನಿಗೆ ಕೊಡುತ್ತೇನೆ” ಎಂದು ಆಲೋಚಿಸುತ್ತದೆ.

ಹೀಗೆ ನಡೆದಿದೆ ಈ ವ್ಯವಹಾರ. ಅಂಧಾ ಯಥಾಂಧಯೈಃ – ಒಬ್ಬ ಕುರುಡ ಇತರ ಅನೇಕ ಕುರುಡರನ್ನು ಮುನ್ನಡೆಸುತ್ತಿದ್ದಾನೆ. ಪ್ರಯೋಜನವೇನು? ನಾನು ಕುರುಡನಾಗಿದ್ದು, “ನನ್ನನ್ನು ಹಿಂಬಾಲಿಸಿ. ನಾನು ನಿಮ್ಮನ್ನು ಮೆಲ್‌ಬೋ‌ರ್ನಗೆ ಕರೆದೊಯ್ಯುತ್ತೇನೆ” ಎ೦ದರೆ, ನಾವು ರಸ್ತೆಗಿಳಿದ ತತ್‌ಕ್ಷಣ ನಾನೂ ಸಾಯುತ್ತೇನೆ, ನೀವೂ ಸಾಯುತ್ತೀರಿ. ಅಷ್ಟೆ

ಭಕ್ತ: ಶ್ರೀಲ ಪ್ರಭುಪಾದರೆ, ಈ ಬದುಕು ಯಾತನಾಮಯವಾದದ್ದು ಎಂದು ನಾವು ಕೆಲವು ಸಲ ಜನಗಳಿಗೆ ಹೇಳಿದಾಗ ಅವರು, “ಏನು ಮಾತು ನೀವಾಡುತ್ತಿರುವುದು? ಬದುಕಿನಲ್ಲಿ ಏರಿಳಿತಗಳಿರುತ್ತವೆ. ಒಟ್ಟಿನಲ್ಲಿ ನಾನು ಸುಖಿ’ ಎಂದೇ ಆ ಜನ ಉತ್ತರ ಕೊಡುತ್ತಾರೆ.

ಶ್ರೀಲ ಪ್ರಭುಪಾದ : ಅದು ಅವರ ಮೂರ್ಖತನ. ಸುಖವನ್ನೂ ಯಾತನೆಯನ್ನೂ ಅಂಥ ಜನ ಬೇರ್ಪಡಿಸಲಾರರು. ಅವರನ್ನು ಕೃಷ್ಣನ ಪ್ರತಿನಿಧಿಯಾದ ಐಹಿಕ ಪ್ರಕೃತಿ ಒದೆಯುತ್ತಿದೆ.

ನಿಯಂತ್ರಕರೂ ಸುಖಾನುಭವಿಗಳೂ ಆಗಿರಲಿಕ್ಕೆ ಈ ಜನ ಅನೇಕ ವಿಧಗಳಲ್ಲಿ ಪ್ರಯತ್ನಿಸುತ್ತಾರಾದ್ದರಿಂದ ಅವರಿಗೆ ಬೇರೆ ಬೇರೆ ತೆರನ ದೇಹಗಳನ್ನು ನೀಡಲಾಗುತ್ತಿದೆ ಹಾಗೂ ಆ ದೇಹಗಳಲ್ಲಿ ಅವರು ಮೇಲಿಂದ ಮೇಲೆ ಹುಟ್ಟು ಸಾವುಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಜನಕ್ಕೆ ಬುದ್ಧಿ ಇಲ್ಲವಾದ್ದರಿಂದ ಈ ಐಹಿಕ ಬದುಕು ಸುಖಕರವಾಗಿದೆ ಎಂದವರು ಭಾವಿಸುತ್ತಾರೆ.

ಆಸ್ಟ್ರೇಲಿಯಾ ದೇಶದವರಾಗಿ ನೀವೀಗ ಅನೇಕ ಸೌಲಭ್ಯಗಳನ್ನು ಪಡೆದಿರಬಹುದು. ಆದರೆ ಅವುಗಳನ್ನು ನೀವು ಎಂದೆಂದಿಗೂ ಅನುಭವಿಸುತ್ತಿರಲಾರಿರಿ. ಪ್ರಕೃತಿ ಹೇರುವ ಒತ್ತಡದಿಂದಾಗಿ ನೀವು ನಿಮ್ಮ ಸ್ಥಾನವನ್ನು ಬದಲಿಸಿಕೊಳ್ಳುವಂತಾಗುತ್ತದೆ. ಈ ದಿನ ನೀವೊಂದು ಅಚ್ಚುಕಟ್ಟಾದ ಮನೆಯಲ್ಲಿ ವಾಸಿಸುತ್ತಿರಬಹುದು. ನಾಳೆ ನೀವು ಅದೇ ಮನೆಯಲ್ಲಿ ಒಂದು ಇಲಿಯಾಗಿ ಹುಟ್ಟಬಹುದು. ಪ್ರಕೃತಿಯ ಬಿಗಿ ನಿಯಮಗಳನ್ನು ಬದಲಿಸುವುದು ನಿಮ್ಮ ಕೈಯಲ್ಲಿಲ್ಲ. ನೀವು ನಿಮ್ಮ ಸ್ಥಾನವನ್ನು ಬದಲಿಸಿಕೊಳ್ಳಬೇಕು.

ವಾಸ್ತವವಾಗಿ ಪ್ರತಿಯೊಬ್ಬರೂ ಐಹಿಕ ಪ್ರಕೃತಿಯಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಪ್ರತಿ ಕ್ಷಣವೂ. ಆದ್ದರಿಂದ ಬುದ್ಧಿವಂತನಾದ ಮನುಷ್ಯ ಈ ಐಹಿಕ ಪ್ರಕೃತಿಯಿಂದ ಆಚೆ ಬರುವುದು ಹೇಗೆಂದು ಕೇಳುತ್ತಾನೆ. ಮೇಲಿಂದ ಮೇಲೆ ಹುಟ್ಟುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ, ಪದೇ ಪದೇ ರೋಗಗ್ರಸ್ತನಾಗದಿರುವುದು ಹೇಗೆ, ಮುದಿತನ ಹಾಗೂ ಮರಣಗಳಿಂದ ಪಾರಾಗುವುದು ಹೇಗೆಂದು ಕೇಳುತ್ತಾನೆ.

ಇದರಿಂದೆಲ್ಲ ಪಾರಾಗುವುದು ಹೇಗೆಂಬುದನ್ನು ಕೃಷ್ಣನು ಭಗವದ್ಗೀತೆಯಲ್ಲಿ (7.14) ಹೇಳುತ್ತಾನೆ : ಮಾಂ ಏವ ಯೇ ಪ್ರಪದ್ಯಂತೇ ಮಾಯಾ ಯೇತಾಂ ತರಂತಿ ತೇ : ‘ಮೂಢನು ನನಗೆ ಶರಣಾದ ಕೂಡಲೇ ಪ್ರಕೃತಿಯ ಹತೋಟಿಯಿಂದ ಅವನು ಹೊರಗುಳಿಯುತ್ತಾನೆ.” ಕೃಷ್ಣನಿಗೆ ಶರಣಾಗತನಾಗುವುದು ಇದೀಗ ನಿಜವಾದ ಜ್ಞಾನ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi