ನಮ್ಮಾಳ್ವರರು (ಶಠಗೋಪರು) ಮತ್ತು ಮಧುರ ಕವಿ ಆಳ್ವಾರರು

ಶ್ರೀ ವೈಷ್ಣವ ಸಂಪ್ರದಾಯದಲ್ಲಿ ನಮ್ಮಾಳ್ವಾರರು ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದು ಕುಲಪತಿ ಎಂದು ಪ್ರಮುಖರಾಗಿದ್ದಾರೆ. ಶ್ರೀ ವೈಷ್ಣವ ಸಿದ್ಧಾಂತಗಳನ್ನು ಪ್ರತಿಪಾದಿಸಿದವರೆಂದೂ, ಆಳ್ವಾರರುಗಳಲ್ಲಿ ಪೂರ್ಣಾವತಾರಿ ಇವರಾದರೆ, ಇತರ ಆಳ್ವಾರರುಗಳು ಅಂಶಾವತಾರಿಗಳೆಂದೂ ಪರಿಗಣಿಸಲಾಗುತ್ತದೆ.

ಈ ವಿಧವಾದ ಪ್ರಾಧಾನ್ಯಕ್ಕೆ ಕಾರಣವೇನೆಂದರೆ ನಮ್ಮಾಳ್ವಾರರು ನಾಲ್ಕು ವೇದಗಳ ಸಾರವನ್ನು ನಾಲ್ಕು ಪ್ರಬಂಧಗಳಿಂದ ದ್ರಾವಿಡ ಭಾಷೆಯಾದ ತಮಿಳಿನಲ್ಲಿ ಸರಳವಾಗಿ ಸಾಮಾನ್ಯರ ಕೈಗೂ ಎಟಕುವಂತೆ ಪ್ರಕಾಶಪಡಿಸಿದರು. ಶ್ರುತಿ, ಸ್ಮೃತಿ, ಪುರಾಣಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತ ಭಾಷೆಯ ಪರಿಚಯವು ಅವಶ್ಯಕ. ಆದರೆ ಈಗಿನ ಕಾಲದಲ್ಲಿ ಸಂಸ್ಕೃತ ಭಾಷೆಯು ಅತ್ಯಂತ ಕಡಮೆ ಜನರಿಗೆ ಮಾತ್ರ ತಿಳಿದಿದೆ.

ಅಲ್ಲದೆ ಸಂಸ್ಕೃತ ವೇದಕ್ಕೆ ಸ್ತ್ರೀ, ಶೂದ್ರೌ ನಾಧೀಯೀತಾಂ ಎಂಬ ಅಭೇದ್ಯವಾದ ಗೋಡೆಯನ್ನು ಹಾಕಿದ್ದಾರೆ. ದ್ರಾವಿಡ ವೇದಕ್ಕೆ ಈ ನಿಷೇಧಗಳಾವುವೂ ಇಲ್ಲ. ಯಾರು ಬೇಕಾದರೂ ಕಲಿತು ಹಾಡಬಹುದು. ಅಷ್ಟೇ ಅಲ್ಲದೆ ಪ್ರಪತ್ತಿ (ಶರಣಾಗತಿ) ಯೇ ಮೋಕ್ಷಕ್ಕೆ ನೇರವಾದ ಉಪಾಯವೆಂದೂ ಸಹ ನಮ್ಮಾಳ್ವಾರರು ಜಗತ್ತಿಗೆ ಸಾರಿ ಹೇಳಿರುತ್ತಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕರುಹೂರು (ತಿರುನಗರಿ) ಎಂಬ ದಿವ್ಯ ಕ್ಷೇತ್ರವಿದೆ. ಇಲ್ಲಿ ಪರಮ ಭಕ್ತರಾದ ವೇಳಾಳ ವರ್ಣಕ್ಕೆ ಸೇರಿದ (ಬೇಡರ ಜಾತಿಯಲ್ಲಿ)ಕಾರಿಯಾರ್‌‌ ಎಂಬ ಭಾಗವತರಿದ್ದರು. ಕೇರಳ ದೇಶದ ತಿರುವಣ್ ಪರಿಶಾರಂ ಎಂಬ ಭಾಗವತರ ಮಗಳು ರೂಪವಂತೆಯೂ ಗುಣವಂತೆಯೂ ಆದ ಉಡೆ ನಂಗೆಯಾರ್ (ನಾಥನಾಯಕಿ) ಎಂಬ ಕನೈಯೊಡನೆ ಇವರ ವಿವಾಹವಾಯಿತು.

ವಿಷ್ಣು ಭಕ್ತರಾಗಿ ಭಾಗವತ ಕೈಂಕರ್ಯದಲ್ಲಿ ಸದಾ ನಿರತರಾಗಿದ್ದರೂ ಸಹ ಈ ದಂಪತಿಗೆ ಬಹುಕಾಲ ಸಂತಾನಪ್ರಾಪ್ತಿಯಾಗದಿದ್ದ ಕಾರಣ ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಕೈಗೊಂಡು ಕುರುಂಗ ನಗರ ಎಂಬ ದಿವ್ಯ ಕ್ಷೇತ್ರಕ್ಕೆ ಬಂದು, ಇಲ್ಲಿ ವೈಷ್ಣವ ನಂಬಿ ಎಂದು ಪೂಜಿಸಲ್ಪಡುತ್ತಿದ್ದ ವಿಶ್ವಕ್ಸೇನರನ್ನು ಸೇವಿಸಿ ಪುತ್ರ ಭಿಕ್ಷೆಯನ್ನು ಬೇಡಿದರು.

ಅವರಿಂದ ತಾನೇ ಅವರಿಗೆ ಮಗನಾಗಿ ಹುಟ್ಟುವೆನೆಂದು ಅಭಯವನ್ನು ಪಡೆದು ತಿರುನಗರಿಗೆ ಹಿಂದಿರುಗಿ ತಮ್ಮ ನಿತ್ಯ ಕೈಂಕರ್ಯ ಪರರಾಗಿ ಭಗವದನುಗ್ರಹದ ನಿರೀಕ್ಷೆಯಲ್ಲಿದ್ದರು. ಹೀಗೆ ಕಲಿಯುಗವು ಹುಟ್ಟಿ 43ನೇ ದಿನವಾದ ಪ್ರಮಾದಿನಾಮ ಸಂವತ್ಸರದ ವೈಶಾಖ ಮಾಸ, ಶುಕ್ಲಪಕ್ಷ ಚತುರ್ದಶಿ ಶುಕ್ರವಾರದಂದು ವಿಶಾಖ ನಕ್ಷತ್ರದಲ್ಲಿ ವಿಶ್ವಕ್ಸೇನಾಂಶದಿಂದ ಕಾರಿಯಾರ್‌‌ ದಂಪತಿಗೆ ಪುತ್ರನಾಗಿ ನಮ್ಮಾಳ್ವಾರರು ಜನಿಸಿದರು.

ಇವರಿಗೆ ಮಾರನ್ ಎಂದು ನಾಮಕರಣವಾಯಿತು. ಆದರೆ ಹುಟ್ಟಿದ ಕ್ಷಣದಿಂದಲೇ ಭಗವಂತನಲ್ಲಿ ಲೀನವಾದ ಮನಸ್ಸುಳ್ಳ ದಿವ್ಯ ಶಿಶು ಕಣ್ಣನ್ನು ತೆರೆಯಲಿಲ್ಲ. ಅಳಲಿಲ್ಲವಷ್ಟೇ ಅಲ್ಲದೆ ಸ್ತನ್ಯಪಾನವನ್ನೂ ಸಹ ಮಾಡಲಿಲ್ಲ.

ಆದರೆ ಪದ್ಧತಿಯಂತೆ ಹನ್ನೆರಡನೆಯ ದಿನ ಆ ಊರಿನ ಆದಿಪಿರಾನ್ ದೇವಾಲಯಕ್ಕೆ ಕರೆದುಕೊಂಡು ಹೋದಾಗ ಮಗುವು ಕಣ್ಣು ತೆರೆದು ಭಗವಂತನ ದಿವ್ಯಮಂಗಳ ವಿಗ್ರಹವನ್ನು ನೋಡಿ ಪುನಃ ಕಣ್ಣು ಮುಚ್ಚಿತು. ಕಾರಿಯಾರ್ ದಂಪತಿಗಳು ದೇವಾಲಯದ ಪಕ್ಕದಲ್ಲಿದ್ದ ಹುಣಸೆ ಮರಕ್ಕೆ ತೊಟ್ಟಿಲನ್ನು ಕಟ್ಟಿ ಆ ದಿವ್ಯ ಶಿಶುವನ್ನು ಅಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗಿದರು.

ಭಗವಂತನನ್ನೇ ಧಾರಕ ಪೋಷಕ ವಸ್ತುವನ್ನಾಗಿ ಹೊಂದಿದ ಮಗುವಿನ ತೇಜಸ್ಸು ದಿನೇ ದಿನೇ ವೃದ್ಧಿ ಹೊಂದತೊಡಗಿತು. ಕ್ರಮವಾಗಿ ಆಳ್ವಾರರು ಪರತತ್ತ್ವವನ್ನು ಬೋಧಿಸುವ ಹಸ್ತಮುದ್ರೆಯಿಂದ, ಪದ್ಮಾಸನದಲ್ಲಿ ಕುಳಿತು, ನಿಮೀಲಿತ ಲೋಚನರಾಗಿ ಹುಣಸೆ ಮರದ ಕೆಳಗೆ ತಮ್ಮ ಹದಿನಾರನೇ ವಯಸ್ಸಿನವರೆಗೆ ತಪೋನಿರತರಾಗಿದ್ದರು. ಇವರ ಕೀರ್ತಿಯು ಬಹಳ ದೂರದವರೆಗೂ ಹಬ್ಬಿತು.

ಹದಿನಾರು ವರ್ಷಗಳ ಕಾಲ ಮೌನ ತಳೆದಿದ್ದ ನಮ್ಮಾಳ್ವಾರರನ್ನು ಬಹಿರ್ಭೂತಗೊಳಿಸಿದವರು ಅವರ ಶಿಷ್ಯರಾದ ಮಧುರ ಕವಿ ಆಳ್ವಾರರು. ಇವರು ನಮ್ಮಾಳ್ವಾರರನ್ನು ಆಚಾರ್ಯರೆಂದು ಆಶ್ರಯಿಸಿ, ಆಚಾರ್ಯರನ್ನುಳಿದು ತಮಗೆ ಮತ್ತೇನೂ ತಿಳಿದಿಲ್ಲವೆಂದು, ಅವರನ್ನೇ ಪರದೈವವೆಂದು ನಂಬಿದವರು. ಗೀತಾಚಾರ್ಯನ ವಾಣಿಯಂತೆ

ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ

ಉಪದೇಕ್ಷ್ಯಂತಿ ತೇಜ್ಞಾನಂ ಜ್ಞಾನಿನಸತ್ತ್ವದರ್ಶಿನಃ ||

ಎಂದು ಜ್ಞಾನಿಯಾದ ನಮ್ಮಾಳ್ವಾರರ ಸಮೀಪಕ್ಕೆ ಬಂದು, ಅವರಿಗೆ ಪದೇ ಪದೇ ನಮಸ್ಕರಿಸಿ, ಅವರ ಸೇವೆಯನ್ನು ಮಾಡಿ, ವಿನಯದಿಂದ ಪ್ರಶ್ನೆ ಮಾಡಿ ತತ್ತ್ವಜ್ಞಾನದ ಉಪದೇಶ ಪಡೆದವರು. ಆಚಾರ್ಯರನ್ನು ಕುರಿತು ಕೃತಜ್ಞತೆಯಿಂದ ದೈವ ವತ್ಸಾದುಪಾಸ್ಯಃ (ಕಣ್ಣಿಗೆ ಕಾಣುವ ದೈವವೆಂದು ಉಪಚರಿಸಬೇಕು) ಎಂದು, ನಮ್ಮಾಳ್ವಾರರನ್ನು ಕುರಿತಕಣ್ಣಿನುಣ್‌ತಿರುತ್ತಾಂಬು ಎಂಬ ಹನ್ನೊಂದು ಪದ್ಯಗಳುಳ್ಳ ಏಕೈಕ ಕೃತಿಯನ್ನು ರಚಿಸಿದರು.

ಮಧುರ ಕವಿಗಳು ತಮ್ಮನ್ನು ಆಚಾರ್ಯರೊಡನೆ ಪರಿಗಣಿಸಬೇಕೇ ಹೊರತು ತಮಗೆ ಪ್ರತ್ಯೇಕ ಸ್ಥಾನ ಸಲ್ಲದೆಂದು ಹೇಳಿಕೊಂಡಿರುವ ಕಾರಣ ಇವರನ್ನು ನಮ್ಮಾಳ್ವಾರರಲ್ಲೇ ಅಂತರ್ಭೂತರೆಂದು ಪರಿಗಣಿಸಲಾಗುತ್ತದೆ. ಮಧುರ ಕವಿಗಳು ತಮಿಳುನಾಡಿನ ಆಳ್ವಾರ್ ತಿರುನಗರಿಯ ಬಳಿಯಲ್ಲಿರುವ “ತಿರುಕ್ಕೋಳೂರಿ”ನಲ್ಲಿ ಈಶ್ವರ ಸಂವತ್ಸರದ ಚೈತ್ರಮಾಸದ ಚಿತ್ತಾ ನಕ್ಷತ್ರದಲ್ಲಿ ಪುರಶ್ಚೂಡ ಬ್ರಾಹ್ಮಣ ಕುಲದಲ್ಲಿ ಹುಟ್ಟಿದರು. (ಮುಂದುಗಡೆ ಶಿಖೆಯನ್ನು ಧರಿಸುವವರು)

ಚೈತ್ರೇ ಚಿತ್ರಾ ಸಮೂದ್ಭುತಂ ಪಾಂಡ್ಯದೇಶೇ ಗಣಾಂಶಕಂ |

ಶ್ರೀ ಪರಾಂಕುಶ ಸದ್ಭಕ್ತಂ ಮಧುರಂ ಕವಿಮಾಶ್ರಯೇ ||

ತಂದೆಯವರೇ ಇವರಿಗೆ ಸಕಲ ವೇದಶಾಸ್ತ್ರಗಳನ್ನೂ ಅಭ್ಯಾಸ ಮಾಡಿಸಿದರು. ಸಕಲ ವಿದ್ಯಾಪಾರಂಗತರಾದ ಇವರು ಮಧುರಾತಿ ಮಧುರ ಕಂಠದಿಂದ ಶ್ರೀಮನ್ನಾರಾಯಣನನ್ನು ಕುರಿತು ಸ್ತೋತ್ರ ಮಾಡುತ್ತಿದ್ದ ಕಾರಣ ಇವರಿಗೆ ಮಧುರಕವಿ ಎಂದು ಹೆಸರಾಯಿತು. ಮಹಾವಿಷ್ಣು ಭಕ್ತರಾದ ಇವರು ದಿವ್ಯ ದೇಶಗಳ ಯಾತ್ರೆಯನ್ನು ಕೈಗೊಂಡು ಆಯಾ ಕ್ಷೇತ್ರಗಳಲ್ಲಿ ನೆಲೆಸಿರುವ ಭಗವಂತನ ಆರ್ಚಾಮೂರ್ತಿಗಳ ದರ್ಶನ ಮಾಡುತ್ತ ಅಯೋಧ್ಯೆಯನ್ನು ತಲಪಿ ಅಲ್ಲಿಯೇ ಕೆಲಕಾಲ ನೆಲೆಸಿದರು.

ಆನಂತರ ತಮ್ಮ ಜನ್ಮಸ್ಥಳವಾದ ತಿರುಕ್ಕೋಳೂರಿನ ಆರ್ಚಾಮೂರ್ತಿ ನಿಕ್ಷೇಪವಿತ್ತ ರನ್ನು ಪುನಃ ದರ್ಶಿಸುವ ಆಸೆ ಪ್ರಬಲವಾಗಲು ದಕ್ಷಿಣಾಭಿಮುಖವಾಗಿ ಪ್ರಯಾಣ ಕೈಗೊಂಡರು. ಇವರಿಗೆ ಆ ದಿಕ್ಕಿನಲ್ಲಿ ಕಣ್ಣು ಕೋರೈಸುವ ತೇಜಃ ಪುಂಜವೊಂದು ಗೋಚರಿಸಿತು. ಅದನ್ನೇ ಲಕ್ಷ್ಯವಾಗಿಟ್ಟುಕೊಂಡು ಮುಂದೆ ಸಾಗಿ ಆಳ್ವಾರ್ ನಗರಿಯನ್ನು ತಲಪಿದರು.

ಇಲ್ಲಿ ಆದಿಪಿರಾನ್ ದೇವಾಲಯದ ಬಳಿ ಹುಣಸೆ ಮರದಡಿಯಲ್ಲಿ ತಪೋರೂಢನಾಗಿದ್ದ ಓರ್ವ ಮಹಾಪುರುಷನಿಂದ ತೇಜಸ್ಸು ಹೊರಹೊಮ್ಮುತ್ತಿರುವುದು ಗೋಚರವಾಯಿತು. ದಿವ್ಯ ತೇಜಸ್ಸಿಗೆ ಪರವಶರಾದ ಮಧುರ ಕವಿಗಳು ಬಾಹ್ಯ ಜಗತ್ತಿನ ಅರಿವೇ ಇಲ್ಲದಂತೆ ಕುಳಿತಿದ್ದ ತೇಜೋರಾಶಿಯ ಇಂದ್ರಿಯಗಳ ಸ್ಥಿತಿಯನ್ನರಿಯಲು ಅವರಿಗೆ ನಮಸ್ಕರಿಸಿ ವಿನೀತರಾಗಿ ಒಂದು ಪ್ರಶ್ನೆಯನ್ನು ಕೇಳಿದರು.

ಶೆತ್ತತ್ತಿನ್ ವಯತ್ತಿಲೆ ಪೆರಿಯದು ಪಿರಂದಾಲ್ ವಿತ್ತೈತಿನ್ರುಂ ಎಂಗೇ ಕಿಡಿಕ್ಕುಂ? ಎಂದರೆ “ಅಣು ಸ್ವರೂಪನಾದ ಜೀವಾತ್ಮನಲ್ಲಿ ವಿಭು ಸ್ವರೂಪ ಧರ್ಮಭೂತ ಜ್ಞಾನ ವಿಕಾಸವಾದದ್ದೇ ಆದರೆ ಯಾವುದನ್ನು ಧಾರಕವಾಗಿ ಅನುಭವಿಸಿ ಯಾರಲ್ಲಿ ಸಾಯುಜ್ಯವನ್ನು ಪಡೆಯುತ್ತದೆ?’ ತಪೋನಿರತರಾಗಿದ್ದ ನಮ್ಮಾಳ್ವಾರರು ಒಡನೆಯೇ ಕಣ್ಣು ತೆರೆದು ಅತ್ತೈತಿನ್ನು  ಅಂಗೇ ಕಿಡಕ್ಕುಂ ಎಂದರೆ “ಅಕಾರ ವಾಚ್ಯನಾದ ಪರಬ್ರಹ್ಮನನ್ನು ಅನುಭವಿಸಿ ಅಕಾರ ವಾಚ್ಯನಾದ ಪರಬ್ರಹ್ಮನಲ್ಲಿಯೇ ಸಾಯುಜ್ಯವನ್ನು ಪಡೆಯುತ್ತದೆ”, ಎಂದು ಉತ್ತರಿಸಿದರು.

ಈ ಉತ್ತರದಿಂದ ನಮ್ಮಾಳ್ವಾರರ ಜ್ಞಾನ ಸಮುದ್ರದ ಆಳವನ್ನು ಅರಿತ ಮಧುರ ಕವಿಗಳು ಅವರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಅಂದು ಮೊದಲು ಅವರ ಪರಮ ಶಿಷ್ಯರಾದರು.

ಹದಿನಾರು ವರ್ಷಗಳ ಕಾಲ ಸತತವಾಗಿ ಮಹಾವಿಷ್ಣುವಿನ ಧ್ಯಾನತತ್ಪರರಾಗಿದ್ದ ನಮ್ಮಾಳ್ವಾರರಿಗೆ ಅವರು ಕುಳಿತ ಸ್ಥಳದಲ್ಲಿಯೇ ಗರುಡಾರೂಢನಾದ ಲಕ್ಷ್ಮೀ ಸಮೇತ ಶ್ರೀಮನ್ನಾರಾಯಣನು ದರ್ಶನವನ್ನಿತ್ತನು. 108 ದಿವ್ಯ ದೇಶಗಳ ಆರ್ಚಾಮೂರ್ತಿಗಳೂ ಸಹ ಪ್ರತ್ಯಕ್ಷರಾಗಿ ಕರುಣಿಸಿದರು.

ನಮ್ಮಾಳ್ವಾರರಿಗೆ ಶಠಗೋಪ (ಶಠಕೋಪ) ರೆಂಬ ಮತ್ತೊಂದು ಹೆಸರಿದೆ. ಭೂಮಿಯ ಮೇಲೆ ಜನಿಸುವ ಪ್ರತಿಯೊಂದು ಶಿಶುವನ್ನೂ ಅದು ತಾಯಿಯ ಗರ್ಭದಲ್ಲಿರುವಾಗಲೇ ಶಠ ಎಂಬ ವೈಷ್ಣವ ವಾಯುವು ಸಮೀಪಿಸಿ ಪರಮಾತ್ಮನ ದಯೆಯಿಂದ ಪೂರ್ವಜನ್ಮ ಸ್ಮರಣೆಯನ್ನು ನಾಶಗೊಳಿಸುತ್ತದೆ.

ಆದರೆ ನಮ್ಮಾಳ್ವಾರರು ಕೋಪದಿಂದ ಹೂಂಕಾರ ಮಾಡಿ ಶಠ ವಾಯುವನ್ನು ತಮ್ಮ ಬಳಿ ಸುಳಿಯದಂತೆ ನಿರ್ಬಂಧಿಸಿ ಜಯಿಸಿದ ಕಾರಣ ಅವರಿಗೆ ಶಠಗೋಪ ರೆಂದು ಶಠಾರಿ (ಶಠವಾಯುವಿನ ಶತ್ರು) ಎಂದೂ ಹೆಸರಾಯಿತು. (ವೈಷ್ಣವ ದೇವಾಲಯಗಳಲ್ಲಿ ಕಿರೀಟ ರೂಪದಲ್ಲಿರುವ ಮತ್ತು ಊರ್ಧ್ವ ಭಾಗದಲ್ಲಿ ಮಹಾವಿಷ್ಣುವಿನ ಪಾದಗಳಿಂದಲಂಕೃತವಾದ ಶಠಾರಿಯನ್ನು ಭಕ್ತರ ತಲೆಯನ್ನ ಮೇಲಿಡುವುದನ್ನು ಗಮನಿಸಿರಬಹುದು. ಇದು ಆಚಾರ್ಯ ಸಂಬಂಧವನ್ನು ಕಲ್ಪಿಸಿ ಆ ಮೂಲಕ ಜೀವಿಯನ್ನು ಮೋಕ್ಷಕ್ಕೆ ಅರ್ಹನನ್ನಾಗಿ ಮಾಡುವ ವಿಧಿ).

ನಮ್ಮಾಳ್ವಾರರಿಗೆ ಸಾಕ್ಷಾತ್ ವಿಶ್ವಕ್ಸೇನರೇ ಪಂಚಸಂಸ್ಕಾರಗಳನ್ನು ನಡೆಸಿ ಆಚಾರ್ಯರಾದರು. [ಪಂಚ ಸಂಸ್ಕಾರಗಳೆಂದರೆ (1)ತಾಪ – 1 – ಚಕ್ರಾಂಕನ (2) ಪುಂಡ್ರ – 12 ನಾಮಗಳ ಧಾರಣೆ (3) ನಾಮ – ಆಚಾರ್ಯರಿಟ್ಟ ಹೆಸರು (4) ಮಂತ್ರ – ದ್ವಯ, ಚರಮ, ಮೂಲ ಮಂತ್ರಗಳ ಉಪದೇಶ (5)ಯಾಗ – ಭಗವದಾರಾಧನೆ. ಇದನ್ನು ಆಚಾರ್ಯರ ಮೂಲಕ ಹೊಂದುವವರು ವೈಷ್ಣವರೆಂದು  ಕರೆಸಿಕೊಳ್ಳುತ್ತಾರೆ.]

ನಮ್ಮಾಳ್ವಾರರು ರಚಿಸಿರುವ ನಾಲ್ಕು ಪ್ರಮುಖ ಕೃತಿಗಳು

1. ತಿರುವಿತ್ತಂ : ಇದು ಆಳ್ವಾರರ ಮೊದಲನೆಯ ಕೃತಿ. ಇದರಲ್ಲಿ ನೂರು ಹಾಡುಗಳಿವೆ. ಇದು ಋಗ್ವದದ ಸಾರ. “ನಾವು ಜೀವಿಸುತ್ತಿರುವ ಈ ಸಂಸಾರವು ಭಗವಂತನನ್ನು ಅನುಭವಿಸುವ ಹಾದಿಯಲ್ಲಿ ವಿರೋಧಗಳನ್ನು ತಂದೊಡ್ಡುತ್ತದೆ. ಆದುದರಿಂದ ದೇಹದ ಸಂಬಂಧವನ್ನು ಬಿಡಿಸಿ ರಕ್ಷಿಸು” ಎಂದು ಆಳ್ವಾರರು ಈ ಪ್ರಬಂಧದಲ್ಲಿ ಶ್ರೀಕಾಂತನನ್ನು ಬೇಡಿದ್ದಾರೆ.

2. ತಿರುವಾಶಿರಿಯಂ : ಇದು ಆಳ್ವಾರರ ಎರಡನೆಯ ಕೃತಿ. ಯಜುರ್ವೇದದ ಸಾರ. ಯಜುರ್ವೇದದಲ್ಲಿ ಸಪ್ತಕಾಂಡಗಳಿರುವಂತೆ ಈ ಪ್ರಬಂಧದಲ್ಲಿ ಏಳು ಹಾಡುಗಳಿವೆ. “ಮೋಕ್ಷದಾಯಕನಾದ ಜಗತ್ಕಾರಣ ಪ್ರಭುವನ್ನು ಉಪಾಸನೆ ಮಾಡಬೇಕೇ ಹೊರತು ಇತರ ದೇವತೆಗಳನ್ನು ಕೂಡದು. ಲಕ್ಷ್ಮೀಪತಿಯೇ ಪರತತ್ತ್ವ” ಎಂದು ನಮ್ಮಾಳ್ವಾರರು ಈ ಪ್ರಬಂಧದಲ್ಲಿ ಸಿದ್ಧಾಂತ ಪಡಿಸಿದ್ದಾರೆ.

3. ಪೆರಿಯ ತಿರುವಂದಾದಿ : ಇದು ಆಳ್ವಾರರ ಮೂರನೆಯ ಕೃತಿ. ಅಥರ್ವಣ ವೇದದ ಸಾರ. 87 ಹಾಡುಗಳನ್ನೊಳಗೊಂಡಿದೆ. “ಜೀವನು ಭೂಮಿಯ ಮೇಲಿರುವಾಗಲೂ ಪರಮ ದೇವೋತ್ತಮ ಪುರುಷನ ವೈಭವವನ್ನು ಅನುಭವಿಸಿ ಸಂತೋಷಪಡಬಹುದು.

ಮನಸ್ಸನ್ನು ಅತ್ತಿತ್ತ ಎಳೆದಾಡುವ ಇಂದ್ರಿಯಗಳನ್ನು ನಿಶ್ಚಲಗೊಳಿಸಲು ಧ್ಯಾನವೊಂದೇ ದಾರಿ. ದೇವ ದೇವನ ಕಲ್ಯಾಣ ಗುಣಗಳನ್ನು ಸವಿದಾಗಲೇ ಆತ್ಮನು ಅವನ ಸಮರ್ಪಣೆಗೆ ತಕ್ಕುದಾದ ಪುಷ್ಪವಾಗುತ್ತದೆ. ಪರಮಾತ್ಮನ ಪಾದಕಮಲಗಳಲ್ಲಿ ಹೀಗೆ ಸಂದ ಆತ್ಮಪುಷ್ಪವು ಸಫಲತೆಯನ್ನು ಪಡೆದು ಆನಂದಭರಿತವಾಗುತ್ತದೆ’ ಎಂಬುದು ಆಳ್ವಾರರು ನೀಡಿರುವ ಈ ಪ್ರಬಂಧದ ತಾತ್ಪರ್ಯ.

4. ತಿರುವಾಯ್ಮೊಳಿ : ಇದು ಆಳ್ವಾರರ ನಾಲ್ಕನೆಯ ಕೃತಿ. ಸಾಮವೇದದ ಸಾರ. ಇದರಲ್ಲಿ ಒಟ್ಟು 1102 ಹಾಡುಗಳಿವೆ. ವೇದಾನಾಂ ಸಾಮ ವೇದೋಸ್ಮಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿರುವಂತೆ ತಿರುವಾಯ್ಮಾಳಿ ದಿವ್ಯಪ್ರಬಂಧವು ಉತ್ಕೃಷ್ಟವಾದುದು. ಈ ಪ್ರಬಂಧದಲ್ಲಿ “ಮೇಲೆ ಹೇಳಿದಂತೆ ಆತ್ಮವು ಪರಮಾನಂದಭರಿತವಾಗಿ, ಪರಜ್ಞಾನ, ಪರಭಕ್ತಿಗಳಲ್ಲಿ ವಿಕಾಸಗೊಂಡು ಪ್ರಕೃತಿ ಸಂಬಂಧದಿಂದ ಮುಕ್ತವಾಗಿ ಪರಮ ಪುರುಷಾರ್ಥ ಪ್ರಾಪ್ತಿಯನ್ನು ಪಡೆದ ವಿಧವನ್ನು” ಅಳ್ವಾರರು ಕರುಣಿಸಿರುತ್ತಾರೆ.

“ಚೇತನನು ಸ್ತ್ರೀಯಾಗಬೇಕು ಅಥವಾ ದಾಸನಾಗಬೇಕು. ಆಗ ಪರಮ ದಯಾಳುವಾದ ಪರಮ ಪುರುಷನು ಜೀವನಿರುವಲ್ಲಿಗೆ ತಾನೇ ಧಾವಿಸಿ ಬಂದು ಅವನನ್ನುದ್ಧರಿಸುತ್ತಾನೆ. ಆತ್ಮನನ್ನು ಹರಸಿ ಮೋಕ್ಷ ಪ್ರದಾನ ಮಾಡುತ್ತಾನೆ” ಎಂದು ಉಪದೇಶಿಸಿದ ನಮ್ಮಾಳ್ವಾರರು ತಾವೇ ಶಠಗೋಪ ನಾಯಕಿಯಾಗಿ ಪರಮಾತ್ಮನನ್ನು ಸೇವಿಸಿದರು.

ತಮ್ಮ ಪ್ರಿಯ ಶಿಷ್ಯರಾದ ಮಧುರ ಕವಿಗಳಿಗೆ ನಾಲ್ಕು ವೇದಗಳ ಸಾರವಾದ ಪ್ರಬಂಧಗಳನ್ನು ಉಪದೇಶಿಸಿದರು ಮತ್ತು ಅವರು ಅದನ್ನು ತಮ್ಮ ಸುಶ್ರಾವ್ಯ ಕಂಠದಿಂದ ಮಧುರವಾಗಿ ಹಾಡಿ ತಮ್ಮ ಶಿಷ್ಯರಿಗೆ ಪ್ರಸಾದಿಸಿದರು. (ದಿವ್ಯ ಪ್ರಬಂಧವನ್ನು ಆತ್ಮನು ಜೀವನನ್ನು ತೊರೆದ ಆನಂತರ ಮಾತ್ರ ಪಾರಾಯಣ ಮಾಡಬೇಕೆಂಬ ತಪ್ಪು ಅಭಿಪ್ರಾಯವು ಅನೇಕರಲ್ಲಿದೆ. ಇದನ್ನು ಮನೆಗಳಲ್ಲಿ ದೇವಾಲಯಗಳಲ್ಲಿ, ಶುಭ ಸಮಾರಂಭಗಳಲ್ಲಿ, ಕಾಲ, ದೇಶ, ಮತಗಳ ಮಿತಿಯಿಲ್ಲದೆ ಅಂತರ್ಬಹಿ ಶುಚೀರ್ಭೂತರಾಗಿ ಸದಾಚಾರ್ಯರಿಂದ ಕಲಿತು ಹಾಡಬಹುದು).

ಮೇಲೆ ಹೇಳಿದಂತೆ ನಮ್ಮಾಳ್ವಾರರು (ಶಠಗೋಪರು) ತತ್ತ್ವಹಿತ ಪುರುಷಾರ್ಥಗಳನ್ನು, ವಿಶಿಷ್ಟಾದ್ವೈತ ಸಿದ್ಧಾಂತದ ರೂಪುರೇಷೆಗಳನ್ನೂ, ಶರಣಾಗತಿ ಸಿದ್ಧಾಂತವನ್ನೂ ಚೇತನರ ಉದ್ಧಾರಕ್ಕಾಗಿ ಪರಮ ಕಾರುಣ್ಯದಿಂದ ಬೋಧಿಸಿ ತಮ್ಮ 35ನೆಯ ವಯಸ್ಸಿನಲ್ಲಿ ವೈಕುಂಠವಾಸನ ಸನ್ನಿಧಿಗೆ ಮರಳಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi