ಧರ್ಮವೇ ದಿವ್ಯ ಜೀವನ

ಜಗತ್ತಿನ ಯಾವುದೇ ಧರ್ಮವನ್ನು ನೋಡಿದರೂ ಅದು ದೇವರೊಂದಿಗೆ ಸಂಬಂಧವನ್ನು ಪಡೆದಿರುತ್ತದೆ. ಜಗತ್ತಿನ ಪ್ರಾಥಮಿಕ ಧರ್ಮಗಳಾದ ಹಿಂದೂ, ಕ್ರೈಸ್ತ, ಮುಸಲ್ಮಾನ್‌, ಬೌದ್ಧ ಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಭಗವಂತನೊಂದಿಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಂಬಂಧವನ್ನು ಪಡೆದಿವೆ. ಈ ಎಲ್ಲ ಧರ್ಮಗಳು ನೇರವಾಗಿ ಭಗವಂತನಿಂದ ಹೇಳಲ್ಪಟ್ಟ ಅಥವಾ ಪ್ರವಾದಿಗಳಿಂದ ಹೇಳಲ್ಪಟ್ಟು ಪ್ರಮಾಣೀಕರಿಸಿಕೊಂಡಿವೆ.

ಹಿಂದೂ ಧರ್ಮದ ಜಾತಿ, ಉಪಜಾತಿ ಯಾವುದೇ ಒಂದು ಪಂಗಡವನ್ನು ತೆಗೆದುಕೊಂಡರೂ ಮೂಲತಃ ಸ್ವತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಬೋಧಿಸಿರುವ “ಭಗವದ್ಗೀತೆ”ಯನ್ನು ಎಲ್ಲರೂ ಪ್ರಮಾಣವಾಗಿ ಒಪ್ಪಿಕೊಂಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಎಲ್ಲ ಮುಸಲ್ಮಾನರು ಪವಿತ್ರವಾದ “ಕುರಾನ್‌” ಗ್ರಂಥವನ್ನು ಒಪ್ಪಿಕೊಂಡಿದ್ದಾರೆ.

ಅದು ಭಗವಂತನಿಂದಲೇ ನಿಯೋಜಿತಗೊಂಡಿರುವ ಪ್ರವಾದಿ ಹಜರತ್‌ ಮಹಮ್ಮದ್‌ ಅವರು ಬೋಧಿಸಿರುವುದರಿಂದ ಎಲ್ಲ ಮುಸಲ್ಮಾನರು ಆ ಧರ್ಮವನ್ನು ಪ್ರಮಾಣೀಕೃತವಾಗಿ ಅಂಗೀಕರಿಸಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ಬೌದ್ಧ ಧರ್ಮದ ಅನುಯಾಯಿಗಳು ಬುದ್ಧರನ್ನೇ ಭಗವಂತನೆಂದೂ ಅತ್ಯಂತ ಶ್ರೇಷ್ಠ ಪ್ರಮಾಣೀಕೃತನೆಂದೂ ಅಂಗೀಕರಿಸಿದ್ದಾರೆ.

ಭಗವಾನ್‌ ಬುದ್ಧರು ಈ ಭಾರತ ಭೂಮಿಯಲ್ಲಿ ಜನ್ಮ ತಳೆದು ಪ್ರಾಣಿಬಲಿಯನ್ನು ನಿಷೇಧಿಸಿ ಅಹಿಂಸಾ ತತ್ತ್ವವನ್ನು ಪ್ರತಿಪಾದಿಸಿದರು. ಪ್ರಾಣಿ ಬಲಿಯು ವೈದಿಕ ಧರ್ಮದ ಅಭಿಚಾರಕ ಅಂಶವಾದ್ದರಿಂದ, ಭಗವಾನ್‌ ಬುದ್ಧರು ವೇದಗಳ ಅಧಿಕೃತತೆಯನ್ನೇ ಅನಿವಾರ್ಯವಾಗಿ ತಿರಸ್ಕರಿಸಿದರು. ಅನಿವಾರ್ಯವಾಗಿ ವೇದಗಳ ತತ್ತ್ವಗಳನ್ನು ನಿರಾಕರಿಸಿದರು.

ಹಿಂದೂ ಧರ್ಮದಲ್ಲಿ ವೈಷ್ಣವ ಧರ್ಮಗಳು ಭಗವಾನ್‌ ಬುದ್ಧರನ್ನು ಭಗವಂತನ ಅವತಾರವೆಂದೇ ಒಪ್ಪಿಕೊಳ್ಳುತ್ತವೆ. ಇವರು ಬೋಧಿಸಿದ್ದು ನಾಸ್ತಿಕರ ವರ್ಗಕ್ಕೆ. ಇದರಿಂದ ಈ ನಾಸ್ತಿಕರೂ ಕೂಡ ಬುದ್ಧರನ್ನು ದೇವರೆಂದೇ ಪರೋಕ್ಷವಾಗಿ ಒಪ್ಪಿಕೊಳ್ಳುವಂತೆ ಆಯಿತು. ಕ್ರೈಸ್ತರು ದೇವರ ಅಸ್ತಿತ್ವವನ್ನು ನೇರವಾಗಿ ಸ್ವೀಕಾರ ಮಾಡುತ್ತಾರೆ.

ಏಕೆಂದರೆ ಪ್ರವಾದಿ ಏಸುಕ್ರಿಸ್ತರು ತಾವು ದೇವರ ಮಗನೆಂದೇ ಹೇಳಿಕೊಂಡಿದ್ದಾರೆ. ಆದ್ದರಿಂದ ಜಗತ್ತಿನ ಎಲ್ಲ ಧರ್ಮಗಳು ಒಂದಲ್ಲ ಒಂದು ರೀತಿಯಲ್ಲಿ ಭಗವಂತನೊಂದಿಗೆ ನೇರವಾಗಿಯೋ, ಪರೋಕ್ಷವಾಗಿಯೋ ಸಂಬಂಧವನ್ನು ಪಡೆದಿದೆ. ಇಲ್ಲಿ ಧರ್ಮವೆಂದರೆ ಭಗವಂತನ ನಿಯಮಗಳಿಗೆ ತಲೆ ಬಾಗುವುದೆಂದು ಅರ್ಥ. ಹೇಗೆ ರಾಷ್ಟ್ರೀಯತೆ ಎಂದರೆ ರಾಷ್ಟ್ರದ ನಿಯಮಗಳಿಗೆ ನಾವು ವಿಧೇಯಕರಾಗಿರುತ್ತೇವೆಯೋ ಹಾಗೆಯೇ ಇದು.

ಶಿಸ್ತಿನ ಮೊದಲನೆಯ ನಿಯಮವೇ ವಿಧೇಯತೆ. ಒಂದು ಬೃಹತ್‌ ಸ್ವತಂತ್ರ ದೇಶದ ನಾಯಕರಾಗಿದ್ದರೂ ನಾವು ಏನು ಬೇಕಾದರೂ ಮಾಡಲು ಸ್ವತಂತ್ರರಲ್ಲ. ರಾಷ್ಟ್ರದ ನಿಯಮಗಳಿಗೆ ಅನುಸಾರವಾಗಿ ನಾವು ನಮ್ಮ ಇತಿಮಿತಿಯಲ್ಲಿಯೇ ಬಾಳಬೇಕಾಗುತ್ತದೆ. ಈ ಅರ್ಥದಲ್ಲಿಯೇ ಹೇಳುವುದಾರೆ ಇಡೀ ಬ್ರಹ್ಮಾಂಡದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರವಾದ ಜೀವಿಗಳೇನೋ ಸರಿ.

ಆದರೆ ಭಗವಂತನಿಗೆ ನಾವು ಸಂಪೂರ್ಣವಾಗಿ ಅಧೀನರಾಗಿದ್ದೇವೆ. ಅವನ ಒಪ್ಪಿಗೆ, ಇಚ್ಛೆಯಿಲ್ಲದೆ ನಾವು ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದೂ ಕಾರ್ಯಕ್ಕೆ ಅದು ಶುಭವೇ ಅಥವಾ ಅಶುಭವೇ ಎಂಬುದಕ್ಕೆ ಐದು ಕಾರಣಗಳಿವೆ.

ಮೊದಲನೆಯ ಕಾರಣ, ಆ ಕಾರ್ಯ ಅಥವಾ ಘಟನೆ ಯಾವ ಸ್ಥಳದಲ್ಲಿ ಸಂಭವಿಸಬೇಕು ಎಂಬುದು. ಎರಡನೆಯ ಕಾರಣ ಅದು ಯಾರು, ಯಾರಿಂದ ಮಾಡಲ್ಪಡಬೇಕು ಅಥವಾ ನಟಿಸಲ್ಪಡಬೇಕು ಎಂಬುದು. ಮೂರನೆಯ ಕಾರಣ ಯಾವ ಉಪಕರಣದ ಸಹಾಯದಿಂದ ಅದು ಘಟಿಸುವುದೆಂದು, ನಾಲ್ಕನೆಯ ಕಾರಣ ಮಾಡುವ ಪ್ರಯತ್ನಗಳು.

ಐದನೆಯ ಅಥವಾ ಕೊನೆಯ ಕಾರಣ ಭಗವಂತನ ಒಪ್ಪಿಗೆ. ಮೊದಲಿನ ನಾಲ್ಕು ಕಾರಣಗಳು ಎಷ್ಟೇ ಅನುಕೂಲಕರವಾಗಿದ್ದರೂ ಐದನೆಯ ಕಾರಣವಾದ ಭಗವಂತನ ಒಪ್ಪಿಗೆ ಇಲ್ಲದಿದ್ದರೆ ಆ ಕಾರ್ಯವು ನಡೆಯುವುದಿಲ್ಲ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನಾವು ಒಪ್ಪಿಕೊಳ್ಳಲಿ ಇಲ್ಲದಿರಲಿ ಅದರಲ್ಲಿ ಭಗವಂತನ ಕೈವಾಡವಿದೆ.

ಪ್ರತಿಯೊಂದು ಧರ್ಮದಲ್ಲಿ ಭಗವಂತನ ಕಲ್ಪನೆ ಸಾಕಾರವಾಗಿಯೋ, ನಿರಾಕಾರವಾಗಿಯೋ ಇದೆ. ಯಾರು ಭಗವಂತನ ವಿಜ್ಞಾನದಲ್ಲಿ ಪರಿಣತರಾಗಿರುವರೋ ಅವರು ಹೇಳವುದೇನೆಂದರೆ ಭಗವಂತ ಸಾಕಾರನೂ ಹೌದು, ನಿರಾಕಾರನೂ ಹೌದು. ಅದರೊಂದಿಗೆ ಪ್ರತಿಯೊಂದು ಸ್ಥಳದಲ್ಲಿಯೂ ಇದ್ದಾನೆ.

ಅಂತಿಮವಾಗಿ ಹೇಳುವುದಾದರೆ ಭಗವಂತ ಒಬ್ಬ ವ್ಯಕ್ತಿ. ಅವನು ಸೃಷ್ಟಿಯಲ್ಲೆಲ್ಲ ತನ್ನ ನಿರಾಕಾರ ಬ್ರಹ್ಮಜ್ಯೋತಿಯ ರೂಪದಲ್ಲಿ ವ್ಯಾಪಿಸಿದ್ದಾನೆ. ಇದೇ ಅವನ ನಿರಾಕಾರ ರೂಪ. ಉದಾಹರಣೆಗೆ ರಾಜ ಅಥವಾ ರಾಷ್ಟ್ರಪತಿ ಯಾವುದೇ ಕಾರಣಕ್ಕೂ ನಿರಾಕಾರನಾಗಿರಲು ಸಾಧ್ಯವಿಲ್ಲ.

ಅಂತಹ ಉದಾಹರಣೆ ನಾವು ಎಲ್ಲೂ ಕೇಳಲು ಸಾಧ್ಯವಿಲ್ಲ. ಆದರೆ ಇದೇ ರಾಜ ಅಥವಾ ರಾಷ್ಟ್ರಪತಿಯ ಸಂಪೂರ್ಣ ಅಧಿಕಾರವು ಸರ್ಕಾರದ ರೂಪದಲ್ಲಿರುತ್ತದೆ. ಇದೇ ಇವನ ನಿರಾಕಾರ ರೂಪ. ಇವನ ಪ್ರತಿನಿಧಿಯಾಗಿ ಕೆಲಸ ಮಾಡುವ ಆಡಳಿತಾಧಿಕಾರಿಗಳು ತಮ್ಮ ರಾಷ್ಟ್ರದ ಉನ್ನತ ಅಧಿಕಾರಿಗಳ ಆಜ್ಞೆಯನ್ನು ಜಾರಿಗೊಳಿಸಿ ರಾಜ್ಯದ ನೀತಿ ಮತ್ತು ಸುವ್ಯವಸ್ಥೆಗಳನ್ನು ಪಾಲಿಸುತ್ತಾರೆ.

ಅದೇ ರೀತಿ, ಅಂತಿಮವಾಗಿ ಹೇಳುವುದಾದರೆ ಭಗವಂತನು ಒಬ್ಬ ವ್ಯಕ್ತಿ. ಈ ಐಹಿಕ ಸೃಷ್ಟಿಯ ಆಗುಹೋಗುಗಳನ್ನು ನಿಯಂತ್ರಿಸುವ ನಿಯಮಗಳೇ ಭಗವಂತನ ನಿರಾಕಾರ ರೂಪ. ಈ ಸೃಷ್ಟಿಯ ಚಟುವಟಿಕೆಗಳ ಮೇಲ್ವಿಚಾರಕರಾದ ದೇವತೆಗಳು ಭಗವಂತನ ಸಾಕಾರ ಪ್ರತಿನಿಧಿಗಳು. ವೈದಿಕವಾಗಿ ರಾಜ ಅಥವಾ ರಾಷ್ಟ್ರಪತಿಯೂ ಕೂಡ ಭಗವಂತನ ಪ್ರತಿನಿಧಿಯೆಂದೇ ಒಪ್ಪಿಕೊಳ್ಳಲಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi