ಇಂದ್ರಿಯಗಳು : ತೃಪ್ತಿಯೋ, ಶುದ್ಧಿಯೋ

ಶ್ರೀಲ ಪ್ರಭುಪಾದರು ಭಕ್ತರೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ : ಮಾಯಾಪುರ (ಮುಂಜಾನೆ ವಾಯುವಿಹಾರ), ಏಪ್ರಿಲ್ 1975

ಭಕ್ತ : ಶ್ರೀಲ ಪ್ರಭುಪಾದರೆ, ಕೆಲವು ಸಲ ಜನ ಹೀಗೆಂದು ವಾದಕ್ಕಿಳಿಯುತ್ತಾರೆ – ‘ದೇವರಿಲ್ಲ ಎನ್ನುವುದಾದರೆ ನಾನೇನು ಮಾಡುತ್ತೇನೋ ಅದು ಲೆಕ್ಕಕ್ಕೇ ಬರುವುದಿಲ್ಲ. ದೇವರಿದ್ದು ಅವನೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾನೆ ಎಂದಾದರೆ ಆಗ ಕೂಡ ನಾನೇನು ಮಾಡುತ್ತೇನೋ ಅದು ಮುಖ್ಯವಾಗುವುದಿಲ್ಲ. ಏಕೆಂದರೆ ಎಲ್ಲವೂ ಹೇಗೂ ಪೂರ್ವನಿಶ್ಚಿತವೇ ಆಗಿದೆ. ಆದ್ದರಿಂದ ದೇವರಿರಲಿ, ಇಲ್ಲದಿರಲಿ ನನ್ನ ಮನಸ್ಸಿಗೆ ಬಂದದ್ದನ್ನು ಮಾಡಲು ನಾನು ಸ್ವತಂತ್ರ.”

ಶ್ರೀಲ ಪ್ರಭುಪಾದ : ಆಯಿತು. ಆದರೆ ನೀವು ನೋವಿಗೆ ಸಿಕ್ಕುತ್ತೀರೇಕೆ?

ಭಕ್ತ : ಇದೆಲ್ಲ ದೇವರ ಹಂಚಿಕೆ, ದೇವರ ಹಂಚಿಕೆಯಂತೆ ನಾನು ನೋವನ್ನನುಭವಿಸುತ್ತೇನೆ.

ಶ್ರೀಲ ಪ್ರಭುಪಾದ : ಅಲ್ಲ, ನೀವು ಯಾತನೆ ಅನುಭವಿಸಬೇಕೆಂಬುದು ದೇವರ ಹಂಚಿಕೆ ಅಲ್ಲ. ನೀವು ಭಗವಂತನ ನಿಯಮಗಳನ್ನು ಉಲ್ಲಂಘಿಸುತ್ತೀರಿ. ಆದ್ದರಿಂದ ನೀವು ನೋವಿಗೆ ಈಡಾಗುವಿರಿ. ದೈವವು ಎಲ್ಲವನ್ನೂ ನಿಯಂತ್ರಿಸುತ್ತಿದೆ. ಆದರೆ ದೇವರು ನಿಮಗೆ ಅಲ್ಪ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾನೆ.

ನೀವು ಅವನ ನಿಯಮಗಳನ್ನು ಪಾಲಿಸಬಹುದು ಇಲ್ಲವೆ ಉಲ್ಲಂಘಿಸಬಹುದು. ಆದರೆ ನೀವು ಎಂಥ ಮೂರ್ಖರೆಂದರೆ ನೀವು ಯಾತನೆ ಅನುಭಸುತ್ತಿದ್ದೀರಿ ಎಂಬುದೂ ನಿಮಗೆ ಅರ್ಥವಾಗುವುದಿಲ್ಲ ನಿಮ್ಮ ಸ್ಥಿತಿ ಬೆಕ್ಕುಗಳು ಹಾಗೂ ನಾಯಿಗಳದರಂತಿವೆ. ಯಾತನಾ ಪೀಡಿತವಾಗಿರುವುದನ್ನು ಅರ್ಥಮಾಡಿಕೊಳ್ಳುವುದು ಅವಕ್ಕೂ ಬಾರದು.

ನಾವು ಹೇಳುವುದೇನ೦ದರೆ, ನೀವು ನೋವನುಭವಿಸುತ್ತಿರುವುದು ಹೌದು. ಏಕೆಂದರೆ ನೀವು ದೇವರ ನಿಯಮಗಳನ್ನು ಉಲ್ಲಂಘಿಸಿದ್ದೀರಿ. ಮತ್ತು ದೇವರಿಗೆ ಅಧೀನವಾಗಿ ನಡೆದರೆ ನಿಮಗೆ ಯಾತನೆ ಇರುವುದಿಲ್ಲ. ಆದರೆ ನೀವು ಎಂಥ ಮೂರ್ಖರೆಂದರೆ ಎಲ್ಲವನ್ನೂ ಮೂಕವಾಗಿ ಸಹಿಸಿಕೊಂಡಿದ್ದೀರಿ. ನೀವು ಯಾತನಾಪೀಡಿತರಾಗಿದ್ದೀರಿ ಎಂಬುದು ಕೂಡ ನಿಮಗೆ ತಿಳಿಯದು.

ಭಕ್ತ : ದೈವಭಕ್ತರು ಕೂಡ ಯಾತನಾಪೀಡಿತರಾಗಿರುವಂತೆ ತೋರುತ್ತದಲ್ಲ.

ಶ್ರೀಲ ಪ್ರಭುಪಾದ : ಹೌದು, ಆದರೆ ಭಕ್ತರು ಅಭಕ್ತರಂತೆ ನೋವನುಭವಿಸುತ್ತಿಲ್ಲ. ಎಲ್ಲರ ಯಾತನೆಗಳಿಗೆ ಕಾರಣವಾಗಿರುವುದು ಐಹಿಕ ಬದುಕು. ಅದು ಒಂದು ರೋಗದಂತೆ, ಮತ್ತು ಭಕ್ತರು ಈ ರೋಗ ಪೀಡಿತ ಬದುಕನ್ನು ಕೃಷ್ಣಪ್ರಜ್ಞೆಗಾಗಿ ತೊರೆಯುತ್ತಿದ್ದಾರೆ. ನೀವು ಯಾವುದೋ ಜಡ್ಡಿನಿಂದ ನರಳುತ್ತಿದ್ದೀರೆನ್ನಿ, ತತ್‌ಕ್ಷಣವೇ ನಿಮಗೆ ಗುಣವಾಗಬೇಕೆಂದು ನೀವು ನಿರೀಕ್ಷಿಸುವಂತಿಲ್ಲ. ಆದರೆ ಔಷಧ ತೆಗೆದುಕೊಳ್ಳುತ್ತಾನಲ್ಲ ಆ ವ್ಯಕ್ತಿ ತುಂಬ ಬುದ್ಧಿವಂತ.

ಅವನ ಕಾಯಿಲೆ ಶೀಘ್ರದಲ್ಲಿ ಗುಣವಾಗುತ್ತದೆ. ಆದರೆ ಈ ಅಭಕ್ತ ಜನ ಕೃಷ್ಣಪ್ರಜ್ಞೆ ಎಂಬ ಔಷಧವನ್ನು ತೆಗೆದುಕೊಳ್ಳುವುದು ಕೂಡ ಇಲ್ಲ. ಆದ್ದರಿಂದ ಅವರು ಕಾಯಿಲೆ ಪೀಡಿತರಾಗಿಯೇ ಮುಂದುವರಿಯುತ್ತಾರೆ. ಮತ್ತು ಬಹುಮಟ್ಟಿಗೆ ದೈವಭಕ್ತರು ಸುಖವಾಗಿರುತ್ತಾರೆ. ನೀವು ಸಂತೋಷದಿಂದಿಲ್ಲದಿದ್ದ ಪಕ್ಷದಲ್ಲಿ ನೀವು ಹರೇಕೃಷ್ಣ ಮಂತ್ರ ಏಕೆ ಸದಾ ಜಪಿಸುತ್ತಾ ಇರುತ್ತೀರಿ? ನರ್ತಿಸುತ್ತೀರಿ ಏಕೆ?

ಭಕ್ತ : ನನಗೂ ಕೆಲವು ಸಲ ಉದರ ಬಾಧೆ ಬರುತ್ತದೆ.

ಶ್ರೀಲ ಪ್ರಭುಪಾದ : ನಿಮಗೆ ಐಹಿಕ ದೇಹವಿದೆಯಾದ್ದರಿಂದ ಹಾಗಾಗುತ್ತದೆ. ನಿಮ್ಮ ಯಾತನೆ ಆಗ ತಾನೆ ಗುಂಡಿ ಒತ್ತಿ ನಿಲ್ಲಿಸಿದ ವಿದ್ಯುತ್ ಪಂಕದಂತೆ (ಫ್ಯಾನ್). ಪಂಕ ತಿರುಗುತ್ತಿರುತ್ತದೆ. ನೀವು ಗುಂಡಿ ಒತ್ತಿ ಅದು ತಿರುಗುವುದನ್ನು ನಿಲ್ಲಿಸಿದ್ದೀರಿ. ಆದರೂ ಅದು ತಿರುಗುತ್ತಿದೆ. ಆದರೆ ಅದು ಸದ್ಯದಲ್ಲೇ ನಿಲ್ಲುತ್ತದೆ.

ಅದೇ ರೀತಿ ನಿಮ್ಮ ನೋವು ಕೂಡ ದೇಹವನ್ನು ತೊರೆದನಂತರ ಭರ್ತಿ ಆನಂದಪೂರ್ಣ ಬದುಕು ನಿಮ್ಮದಾಗುತ್ತದೆ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ, ತ್ಯಕ್ತ್ವಾ ದೇಹಮ್‌ ಪುನರ್‌ಜನ್ಮ ನೈತಿ : “ಈಗಿರುವ ದೇಹವನ್ನು ತೊರೆದ ಬಳಿಕ ಭಕ್ತನು ಪುನಃ ಈ ಐಹಿಕ ಜಗತ್ತಿನಲ್ಲಿ ಜನ್ಮ ತಾಳುವುದಿಲ್ಲ” ನೀವು ಮತ್ತೊಮ್ಮೆ ಯಾತನಾಪೂರ್ಣವಾದ ಐಹಿಕ ದೇಹವನ್ನು ಪಡೆಯುವುದಿಲ್ಲ. ನಿಮಗಿರುವ ಅನುಕೂಲ ಇದು.

ಆದರೆ ಈ ಅಭಕ್ತ ಅವಿವೇಕಿಗಳು ಯಾತನಾಪೂರ್ಣವಾದ ದೇಹಗಳನ್ನು ಒಂದಾದ ಮೇಲೊಂದರಂತೆ ಪಡೆಯುತ್ತಲೇ ಇರುತ್ತಾರೆ. ಅವರು ಮೊದಲು ಒಂದು ದೇಹವನ್ನು ಧರಿಸಿ ಅದರಲ್ಲಿ ನೋವನುಭವಿಸಬೇಕು. ಆಮೇಲೆ ಅವರು ಆ ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯಬೇಕು; ಅದರಲ್ಲಿ ಯಾತನೆಪಡಬೇಕು.

ಏಕೆಂದರೆ ಐಹಿಕ ದೇಹವನ್ನು ಹೊಂದಿರುವುದೆಂದರೆ ನೋವನುಭವಿಸುವುದು ಎಂದೇ ಅರ್ಥ. ಆದ್ದರಿಂದ ಕೃಷ್ಣಪ್ರಜ್ಞಾವಂತರಲ್ಲದವರು ಒಂದಾದ ಮೇಲೊಂದರಂತೆ ದೇಹಗಳನ್ನು ಧರಿಸುತ್ತಾ ಮುಂದುವರಿದು ತಾಪತ್ರಯಗಳನ್ನು ಅನುಭವಿಸುವುದನ್ನೂ ಮುಂದುವರಿಸುತ್ತಾರೆ. (ತಾಪತ್ರಯಗಳು ಯಾವುವೆಂದರೆ; ದೇಹ ಹಾಗೂ ಮನಸ್ಸಿನಿಂದಾದದ್ದು, ಇತರ ಜೀವಿಗಳಿಂದ ಉಂಟಾಗುವಂಥವು ಹಾಗೂ ಪ್ರಾಕೃತಿಕ ವಿಪತ್ತುಗಳು).

ಆದರೆ ಭಕ್ತರು ಸ್ವಲ್ಪ ಮಟ್ಟಿನ ಯಾತನೆ ಅನುಭವಿಸುತ್ತಿರುವಂತೆ ತೋರಿದರೂ – ಉತ್ತರೋತ್ತರ ಈ ಐಹಿಕ ದೇಹ ತೊರೆದು ಆಧ್ಯಾತ್ಮಿಕ ದೇಹಧರಿಸಿ ಅದರಲ್ಲಿ ಉಳಿಯುತ್ತಾರೆ. ಅವರನ್ನು ಯಾವುದೇ ಯಾತನೆ ಬಾಧಿಸುವುದಿಲ್ಲ.

ಭಕ್ತ : (ಭೋಗವಾದಿಯ ಸ್ಥಾನದಲ್ಲಿ ನಿಂತು ಹೇಳುತ್ತಾನೆ). ಅದು ಕೇವಲ ನಿಮ್ಮ ನಂಬಿಕೆ ಅಷ್ಟೆ.

ಶ್ರೀಲ ಪ್ರಭುಪಾದ : ಇದನ್ನು ನೀವು ನಂಬುವುದಿಲ್ಲ ಎನ್ನುವುದು ನಿಮ್ಮ ನಂಬಿಕೆ. ನಂಬಿಕೆಯ ವಿಷಯದಲ್ಲಿ ಭಗವದ್ಗೀತೆಯು ಹೇಳುವ ಮಾತನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ಆಧ್ಯಾತ್ಮಿಕ ಜಗತ್ತಿಗೆ ಉನ್ನತಿ ಪಡೆಯುವ ಅವಕಾಶ ನಮಗಿದೆ. ಆದರೆ ನಿಮಗೆ ನಂಬಿಕೆಯಿಲ್ಲ. ಅಲ್ಲದೆ ಅವಕಾಶ ಉಪಯೋಗಿಸಿಕೊಳ್ಳುವ ಮನಸ್ಸು ನಿಮಗೆಲ್ಲವೂ ಇದ್ದಂತಿಲ್ಲ ಆದ್ದರಿಂದ ಈ ನಿಮ್ಮ ದುಃಖಾನುಭವ ಮುಂದುವರಿಯುವುದು ನಿಶ್ಚಯ.

ಭಕ್ತ : “ಕೃಷ್ಣನಿಗೆ ಮನಸ್ಸು ಬಂದು ಅವನು ನನಗೆ ಬುದ್ಧಿ ಕೊಟ್ಟ ದಿನ ನಾನು ಅಂಥ ಅವಕಾಶ ಉಪಯೋಗಿಸಿಕೊಳ್ಳಲು ಕೈಹಾಕುತ್ತೇನೆ. ಅವನ ಸಂಕಲ್ಪವು ಪರಮೋಚ್ಚವಾದದ್ದು. ಆದ್ದರಿಂದ ಯಾವಾಗ ಅವನು ಬಯಸುತ್ತಾನೋ ಆಗ ಅವನು ನನ್ನನ್ನು ಕೃಷ್ಣಪ್ರಜ್ಞಾವಂತನನ್ನಾಗಿ ಮಾಡುತ್ತಾನೆ” ಎಂದು ಭಾರತೀಯರು ಆಗಾಗ ಹೇಳುತ್ತಾರೆ.

ಶ್ರೀಲ ಪ್ರಭುವಾದ : ಭಗವದ್ಗೀತೆಯಲ್ಲಿ ಕೃಷ್ಣನು, ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಮ್ ವ್ರಜ – “ಎಲ್ಲ ಧರ್ಮಗಳನ್ನೂ ತೊರೆದುಬಿಡು. ಕೃಷ್ಣಪ್ರಜ್ಞಾವಂತನಾಗು” ಎಂದು ಹೇಳುತ್ತಾನೆ. ನೀವು ಅವನಿಗೆ ಶರಣಾಗತನಾಗಬೇಕೆಂದು ಕೃಷ್ಣನು ಇಚ್ಛಿಸುತ್ತಾನೆ. ಅವನ ಇಚ್ಛೆಗೆ ನೀವು ತಲೆಬಾಗಬಾರದೇಕೆ?

ಭಕ್ತ : ಇಂದ್ರಿಯತೃಪ್ತಿಯ ಸಂತೋಷವನ್ನು ಏರ್ಪಡಿಸಿರುವವನೂ ಕೃಷ್ಣನೆ. ಇಂದ್ರಿಯ ಸುಖ ಆಸಂತೋಷ ಉಂಟು ಮಾಡುತ್ತದಾದರೆ, ಕೃಷ್ಣನೇಕೆ ಅದನ್ನು ನಿರ್ಮಾಣ ಮಾಡಿದ್ದಾನೆ?

ಶ್ರೀಲ ಪ್ರಭುಪಾದ : ಪುನಃ ಅದೇ ಉತ್ತರವನ್ನು ಕೊಡಬೇಕಾಗಿದೆ. ಕೃಷ್ಣನು ನಮಗೆ ಸ್ವಲ್ಪ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಅದೆಂದರೆ ನಾವು ನಮ್ಮ ಇಂದ್ರಿಯಗಳನ್ನು ನಮ್ಮ ಸ್ವಂತ ಸುಖಕ್ಕಾಗಿಯಾದರೂ ಬಳಸಬಹುದು ಇಲ್ಲವೆ ಅದನ್ನು ಕೃಷ್ಣನ ಸೇವೆಗಾದರೂ ಬಳಸಬಹುದು. ಇಂದ್ರಿಯಗಳಿಗೆ ನಿಜವಾದ ಸಂತೋಷವನ್ನು ನೀಡುವುದು ಕೃಷ್ಣನಿಗೆ ಸಲ್ಲಿಸುವ ಸೇವೆಯೇ.

ಇಂದ್ರಿಯಗಳು ಉದ್ದಿಷ್ಟವಾಗಿರುವುದು ಅನುಭವಗ್ರಹಿಕೆಗೆ. ಆದರೆ ನೀವು ನಿಮ್ಮ ಇಂದ್ರಿಯಗಳನ್ನು ರೋಗಗ್ರಸ್ತ ರೀತಿಯಲ್ಲಿ ಎಂದರೆ ಇಂದ್ರಿಯ ಸುಖಕ್ಕೆ, ಅವುಗಳನ್ನು ತೃಪ್ತಿಪಡಿಸಲಿಕ್ಕೆ – ಬಳಸಿದರೆ ಅದು ನಿಮ್ಮ ದುರದೃಷ್ಟ ಮತ್ತು ಅದರಿಂದ ನೀವು ಯಾತನೆ ಅನುಭವಿಸಲೇಬೇಕು. ಕೃಷ್ಣಪ್ರಜ್ಞಾವಂತರಾಗುವ ಮೂಲಕ ನೀವು ನಿಮ್ಮ ರೋಗವನ್ನು ಗುಣಪಡಿಸಿಕೊಳ್ಳಬೇಕು. ಆಗ ನೀವು ಮಿತಿಯಿಲ್ಲದ ಸಂತೋಷಾನುಭವ ಪಡೆಯುತ್ತೀರಿ.

ಇಂದ್ರಿಯಗಳನ್ನು ನಾಶಪಡಿಸಿ ಮತಿಗೆಡುವ ಮಾಯಾವಾದಿಗಳಂತೆ ನಾವಲ್ಲ. ನಮ್ಮ ಕಾರ್ಯಕ್ರಮ ಅದಲ್ಲ. ನಾವು ಇಂದ್ರಿಯಗಳನ್ನು ಶುದ್ಧಿಗೊಳಿಸಲು ಬಯಸುತ್ತೇವೆ. (ಸರ್ವೋಪಾಧಿ ವಿನಿರ್ಮುಕ್ತಮ್ ತತ್ಪರತ್ವೇನ ನಿರ್ಮಲಮ್)  ಒಬ್ಬ ವ್ಯಕ್ತಿಗೆ ಗ್ಲಾಕೋಮ (ಕಣ್ಣಿನ ಕಾಯಿಲೆ) ಇದ್ದು ಆತ ನೋಡಲಾರನೆನ್ನೋಣ.

ಮಾಯಾವಾದಿಗಳ ಕಾರ್ಯಕ್ರಮದಂತೆ ನಿಮ್ಮ ಕಣ್ಣು ತೊಂದರೆ ಕೊಡುತ್ತಿದ್ದು ನೀವು ದೃಷ್ಟಿಹೀನರಾಗಿದ್ದರೆ ನಿಮ್ಮ ಕಣ್ಣನ್ನು ಕೇಳುವುದೊಂದೇ ಇರುವ ದಾರಿ. ನಮ್ಮ ಕಾರ್ಯಕ್ರಮ ಅದಲ್ಲ, ನೀವು ಚೆನ್ನಾಗಿ ನೋಡಲಾಗುವಂತೆ ನಿಮ್ಮ ಕಣ್ಣಿನ ರೋಗ ವಾಸಿ ಮಾಡುವುದು ನಮ್ಮ ಕಾರ್ಯಕ್ರಮ.

ಆದ್ದರಿಂದ ಕೃಷ್ಣಪ್ರಜ್ಞೆಯನ್ನು ಅನುಷ್ಠಾನ ಮಾಡುವುದರ ಮೂಲಕ ನಮ್ಮ ಇಂದ್ರಿಯಗಳನ್ನು ಐಹಿಕ ರೋಗದಿಂದ ಮುಕ್ತಗೊಳಿಸಬೇಕು. ಆಗ ನಾವು ನಮ್ಮ ಇಂದ್ರಿಯಗಳನ್ನು ಹೃಷಿಕೇಶನ (ಕೃಷ್ಣನ) ಸೇವೆಯಲ್ಲಿ ಬಳಸಿ (ಹೃಷಿಕೇಶ ಎಂದರೆ ಇಂದ್ರಿಯಗಳ ಸ್ವಾಮಿ) ನಿಜವಾದ ಇಂದ್ರಿಯ ಸುಖಾನುಭವ ಮಾಡಲು ಸಮರ್ಥರಾಗುತ್ತೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi