ಶ್ರೀಕೃಷ್ಣನ ಪರಮ ಸ್ನೇಹಿತನಾಗಿದ್ದ ಬ್ರಾಹ್ಮಣ ಸುದಾಮಾ ಸಂಪೂರ್ಣವಾಗಿ ಐಹಿಕ ಆಕಾಂಕ್ಷೆಗಳಿಂದ ಸ್ವತಂತ್ರನಾಗಿದ್ದ. ತಾನೇ ಏನು ಬರುತ್ತದೆಯೋ ಅದರಿಂದ ತನ್ನ ಹೆಂಡತಿ, ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ.

ಅತಿ ಬಡತನದಲ್ಲಿದ್ದ ಒಂದು ದಿವಸ ಸುದಾಮಾನ ಹೆಂಡತಿ, ತನ್ನ ಗಂಡ-ಮಕ್ಕಳಿಗೆ ಆಹಾರ ಸಿದ್ಧಪಡಿಸಲು ಮನೆಯಲ್ಲಿ ಏನೂ ಇಲ್ಲ ಎಂದು ತಿಳಿದಾಗ, ದ್ವಾರಕೆಗೆ ಹೋಗಿ ತನ್ನ ಪ್ರಿಯ ಮಿತ್ರನಾದ ಶ್ರೀಕೃಷ್ಣನಿಂದ ಏನಾದರೂ ದಾನ ಪಡೆದುಕೊಂಡು ಬರಲು ಗಂಡನಿಗೆ ಹೇಳಿದಳು.
ಇಷ್ಟವಿಲ್ಲದಿದ್ದರೂ, ಹೆಂಡತಿ ತುಂಬ ಬಲವಂತ ಮಾಡಿದಾಗ, ಹೋಗಲು ಅವನು ಒಪ್ಪಿಕೊಂಡ. ಏಕೆಂದರೆ ಶ್ರೀಕೃಷ್ಣನನ್ನು ನೋಡುವುದೇ ಒಂದು ಪರಮ ಪುಣ್ಯ ಸಂದರ್ಭ ಎಂದವನಿಗೆ ಅನ್ನಿಸಿತ್ತು. ಅವನ ಹೆಂಡತಿ ಅಕ್ಕಪಕ್ಕದ ಮನೆಗಳಲ್ಲಿ ಕೇಳಿ ಕೆಲವು ಹಿಡಿ ಅವಲಕ್ಕಿಯನ್ನು ತಂದು, ಶ್ರೀಕೃಷ್ಣನಿಗೆ ಬಳುವಳಿ ಎಂದು ಕಟ್ಟಿಕೊಟ್ಟದನ್ನು ತೆಗೆದುಕೊಂಡು ಸುಧಾಮ ದ್ವಾರಕೆಯತ್ತ ಪ್ರಯಾಣ ಬೆಳೆಸಿದ.
ರುಕ್ಮಿಣಿದೇವಿಯ ಅರಮನೆಯ ಮುಖ್ಯದ್ವಾರದಲ್ಲಿ ಸುಧಾಮ ಕಾಣಿಸಿಕೊಳ್ಳುತ್ತಿದ್ದ ಹಾಗೆಯೇ, ರುಕ್ಮಿಣಿಯೊಂದಿಗೆ ಮಂಚದಮೇಲಿದ್ದ ಶ್ರೀಕೃಷ್ಣ ಕೂಡಲೇ ಎದ್ದು ಸ್ನೇಹಿತನ ಹತ್ತಿರಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡ. ಅವನನ್ನು ಮಂಚದ ಮೇಲೆ ಕುಳ್ಳಿರಿಸಿ ಅವನ ಪಾದಗಳನ್ನು ತೊಳೆದು, ಆ ನೀರನ್ನು ತನ್ನ ತಲೆಯಮೇಲೆ ಪ್ರೋಕ್ಷಿಸಿಕೊಂಡ.
ಅನಂತರ ಅವನಿಗೆ ದೀಪಧೂಪಗಳಿಂದ ಪೂಜಿಸಿ ಬೇಕಾದಷ್ಟು ಬಳುವಳಿಗಳನ್ನು ನೀಡಿದ. ಆಗ, ಅಸ್ತವ್ಯಸ್ತವಾಗಿ ಉಡುಪು ಧರಿಸಿದ್ದ ಈ ಬ್ರಾಹ್ಮಣನಿಗೆ ರುಕ್ಮಿಣಿಯ ಗಾಳಿ ಹಾಕಿದಳು. ಇವುಗಳನ್ನೆಲ್ಲ ನೋಡಿದ ಆ ಅರಮನೆಯ ಜನರಿಗೆಲ್ಲ ಆಶ್ಚರ್ಯವಾಯಿತು.
ಶ್ರೀಕೃಷ್ಣ ಆಮೇಲೆ ತನ್ನ ಸ್ನೇಹಿತನ ಕೈಗಳನ್ನು ಹಿಡಿದುಕೊಂಡ. ಅನಂತರ ಅವರಿಬ್ಬರೂ ಒಟ್ಟಿಗೆ ಗುರುಕುಲವಾಸದಲ್ಲಿದ್ದ ಸಂದರ್ಭಗಳನ್ನು ಸ್ಮರಿಸಿಕೊಂಡರು. ಆಗ ಸುದಾಮಾ, ಭೂಲೋಕದ ಪಾಮರರಿಗೆಲ್ಲ ಒಂದು ಮಾದರಿ ಯಾಗುವುದಕ್ಕಾಗಿಯೇ ಶ್ರೀಕೃಷ್ಣ ಹೀಗೆಲ್ಲ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುವ ಲೀಲೆಗಳನ್ನಾಡಿದ ಎಂದು ಹೇಳಿದ.
ತನ್ನ ಪ್ರಿಯಮಿತ್ರನೊಂದಿಗೆ ಹೀಗೆ ಸಂತೋಷದ ಸರಸಲ್ಲಾಪಗಳನ್ನಾಡುವಾಗ ಶ್ರೀಕೃಷ್ಣ ಹೇಳಿದ, “ನನ್ನ ಪ್ರೀತಿಯ ಬ್ರಾಹ್ಮಣ ಮಿತ್ರ, ನಿನ್ನ ಮನೆಯಿಂದ ನನಗೇನಾದರೂ ಬಳುವಳಿ ತಂದಿದ್ದೀಯಾ? ನನ್ನ ಪ್ರೀತಿಯ ಭಕ್ತರಿಂದ ಅತಿ ಚಿಕ್ಕ ಸಮರ್ಪಣೆಯನ್ನೂ ಅತಿಮುಖ್ಯ ಎಂದು ನಾನು ಪರಿಗ್ರಹಿಸುತ್ತೇನೆ.”

ಆದರೆ ಆ ಬಡ ಬ್ರಾಹ್ಮಣನಿಗೆ, ಆ ಹಿಡಿ ಅವಲಕ್ಕಿಯನ್ನು ಕೃಷ್ಣನಿಗೆ ಸಮರ್ಪಿಸಲು ತುಂಬಾ ಸಂಕೋಚವಾಗಿತ್ತು. ಆದರೆ, ಎಲ್ಲ ಹೃದಯಗಳನ್ನು ಒಳಹೊಕ್ಕು ನೋಡಬಲ್ಲವನಾಗಿದ್ದ ಆ ಭಗವಂತನಿಗೆ, ಪ್ರಿಯಮಿತ್ರ ಸುದಾಮಾ ತನ್ನನ್ನು ಏಕೆ ಭೇಟಿಮಾಡಲು ಬಂದಿದ್ದಾನೆಂದು ತಿಳಿದುಹೋಗಿತ್ತು. ಕೂಡಲೇ ಅವನು ಸುದಾಮಾ ಮುಚ್ಚಿಟ್ಟುಕೊಂಡಿದ್ದ ಅವಲಕ್ಕಿ ಹಿಡಿಗಳನ್ನು ಸೆಳೆದು, ಒಂದು ಮುಷ್ಟಿಯನ್ನು ತುಂಬ ಸಂತೋಷದಿಂದ ಬಾಯಿಗೆ ಹಾಕಿಕೊಂಡ.
ಪರಮ ಪುರುಷನೊಂದಿಗೆ ತಾನು ಮತ್ತೆ ಹಿಂತಿರುಗಿದ್ದೇನೆ ಎನ್ನುವ ಸಂತೋಷದಲ್ಲಿ ಸುದಾಮಾ ಆ ರಾತ್ರಿಯನ್ನು ತುಂಬ ಹಾಯಾಗಿ ಶ್ರೀ ಕೃಷ್ಣನ ಅರಮನೆಯಲ್ಲಿ ಕಳೆದು, ಬೆಳಗಾಗುತ್ತಲೇ ತನ್ನ ಮನೆಗೆ ಹೊರಟುನಿಂತ. ಹೊರಟು ಮಹಾಬೀದಿಗೆ ಬರುತ್ತಿದ್ದಂತೆಯೆ, ಶ್ರೀಕೃಷ್ಣನಿಂದ ಆದರಿಕೊಂಡ ತನ್ನ ಅದೃಷ್ಟವಾದರೂ ಎಷ್ಟು ದೊಡ್ಡದು ಎಂದು ಸಂತೋಷದಿಂದ ಯೋಚಿಸಿಕೊಂಡ.
ಈ ಧ್ಯಾನದಲ್ಲಿ ಮುಳುಗಿದ್ದಂತೆಯೇ ಸುದಾಮಾ ತನ್ನ ಪುಟ್ಟಗುಡಿಸಲು ಇದ್ದ ಜಾಗಕ್ಕೆ ಬಂದಾಗ ಅವನಿಗೆ ಬೆರಗಾಗುವಷ್ಟು ಆಶ್ಚರ್ಯವೊಂದು ಕಂಡಿತು. ಅವನ ಮುರುಕಲು ಗುಡಿಸಲು ಬದಲು ಅವನಿಗೆ ಅಲ್ಲೊಂದು ಸಾಲು ಅರಮನೆಗಳು ಕಾಣಿಸಿದವು. ಆಶ್ಚರ್ಯಗೊಂಡು ಅಲ್ಲಿ ನಿಂತಿದ್ದಾಗ, ಅತಿಸುಂದರ ಯುವಕ-ಯುವತಿಯರ ಗುಂಪೊಂದು ಹಾಡುತ್ತ ಅವನ ಹತ್ತಿರ ಬಂದಿತು.
ಆಗಲೇ ಅದ್ಭುತವಾಗಿ ವಜ್ರ ವೈಡೂರ್ಯಗಳಿಂದ ಅಲಂಕರಿಸಿಕೊಂಡಿದ್ದ ಬ್ರಾಹ್ಮಣನ ಹೆಂಡತಿ ಅರಮನೆಯಿಂದ ಹೊರಗೆ ಬಂದಳು ಮತ್ತು ಅತಿ ಗೌರವದಿಂದ, ಅತಿ ಪ್ರೀತಿ ವಿಶ್ವಾಸಗಳಿಂದ ಗಂಡನನ್ನು ಸ್ವಾಗತಿಸಿದಳು. ಸುದಾಮಾ ಅವಳೊಂದಿಗೆ ಆ ಅರಮನೆಯನ್ನು ಪ್ರವೇಶಿಸಿದ. ಪರಮ ಪುರುಷ ತನ್ನಮೇಲೆ ತೋರಿದ ಕೃಪೆಯಿಂದ ಏನೊ ಒಂದು ಮಹತ್ತರ ಬದಲಾವಣೆ ಆಗಿದೆ ಎಂದವನಿಗೆ ಅರ್ಥವಾಗಿತ್ತು.
ಅಲ್ಲಿಂದ ಮುಂದೆ ಸುದಾಮಾ ಅಪಾರ ಐಶ್ವರ್ಯದ ಸುಖಬದುಕು ಬಾಳಿದ, ಆದರೂ ಎಲ್ಲದರೊಂದಿಗೆ ಅಂಟಿದರೂ ಅಂಟದಂತೆ ಉಳಿದುಕೊಂಡು, ಯಾವಾಗಲೂ ಶ್ರೀಕೃಷ್ಣನ ನಾಮಸ್ಮರಣೆಯನ್ನು ಮಾಡುತ್ತಿದ್ದ. ಬಹುಬೇಗ ಇವೆಲ್ಲ ಐಹಿಕ ಬಂಧನಗಳಿಂದ ಬಿಡಿಸಿಕೊಂಡು, ದೈಹಿಕ ಸಂಬಂಧಗಳೆಲ್ಲ ದೂರಸರಿಸಿ, ದೇವರ ರಾಜ್ಯವನ್ನು ಕೊನೆಗೆ ಸೇರಿದ.






Leave a Reply