ಕಾಶೀಶ್ವರ ಪಂಡಿತ ಗೋಸ್ವಾಮಿ

ಶ್ರೀ ಕಾಶೀಶ್ವರ ಪಂಡಿತರು ಶ್ರೀ ಈಶ್ವರ ಪುರಿಗಳ ಶಿಷ್ಯರು. ಅವರ ತಂದೆಯ ಹೆಸರು ಶ್ರೀ ವಾಸುದೇವ ಭಟ್ಟಾಚಾರ್ಯ. ಕಂಜೀಲಾಲಾ ಕಾನು ರಾಜವಂಶದಿಂದ ಬಂದ ಬ್ರಾಹ್ಮಣ ಕುಟುಂಬದಿಂದ ಅವರು ಬಂದಿದ್ದರು.

ಅವರ ಕೊನೆ ಹೆಸರು ಚೌಧುರಿಯಾಗಿತ್ತು. ಶ್ರೀಲ ಭಕ್ತಿವೇದಾಂತ ಸ್ವಾಮಿಯವರು ಹೀಗೆಂದು ಬರೆಯುತ್ತಾರೆ: “ಅವರ ಸಹೋದರಿಯ ಮಗ ರುದ್ರ ಪಂಡಿತನು ಸತಾರಹಳ್ಳಿಯ ಶ್ರೀರಾಮಪುರ ರೇಲ್ವೆ ನಿಲ್ದಾಣದಿಂದ ಒಂದು ಮೈಲಿ ದೂರದ ವಲ್ಲಭಪುರದ ಮೂಲ ಪುರೋಹಿತನಾಗಿದ್ದನು.

ಅಲ್ಲಿ ರಾಧಾ-ಗೋವಿಂದ ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳ ವಿಗ್ರಹಗಳು ಸ್ಥಾಪಿತಗೊಂಡಿವೆ. ಕಾಶೀಶ್ವರ ಗೋಸ್ವಾಮಿ ಓರ್ವ ಬಲಿಷ್ಠ ವ್ಯಕ್ತಿ. ಹೀಗಾಗಿ ಆತ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಜನರ ಗುಂಪಿನಿಂದ ರಕ್ಷಿಸುತ್ತಿದ್ದರು. ಆತನ ಇನ್ನೊಂದು ಕೆಲಸವೆಂದರೆ ಕೀರ್ತನೆಯನಂತರ ಭಕ್ತರಿಗೆ ಪ್ರಸಾದವನ್ನು ಹಂಚುವುದು.

ಆತ’ ಜಗನ್ನಾಥ ಪುರಿಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳೊಂದಿಗೆ ಇದ್ದ ಸಮಕಾಲೀನರಲ್ಲಿ ಒಬ್ಬ. ಆ ಸಮಯದಲ್ಲಿ ಕಾಶೀಶ್ವರ ಗೋಸ್ವಾಮಿಯ ಸಹೋದರನ ವಂಶಜ ಶ್ರೀ ಶೀವಾಚಾರ್ಯ ಚೌಧುರಿಯು ಮುಖ್ಯಸ್ಥನಾಗಿದ್ದನು. ಈತ ಶೈವ. ವಲ್ಲಭಪುರದಲ್ಲಿ ಒಂಬತ್ತು ಕೆಜಿ ಅಕ್ಕಿ, ತರಕಾರಿ ಮತ್ತಿತರ ತಿಂಡಿಗಳನ್ನು ತಯಾರಿಸುವ ಶಾಶ್ವತ ವ್ಯವಸ್ಥೆಯಿದ್ದು, ಹಳ್ಳಿಯ ಹತ್ತಿರದಲ್ಲಿ ದೇವಾಲಯಕ್ಕೆ ಸೇರಿದ ಭೂಮಿ ಸಾಕಷ್ಟಿತ್ತು. ಅಲ್ಲಿ ಭತ್ತವನ್ನು ಬೆಳೆಯಲಾಗುತ್ತಿತ್ತು…

ಬೃಂದಾವನದಲ್ಲಿ ಕೃಷ್ಣನ ಸೇವಕನಾದ ಭೃಂಗರನು ಚೈತನ್ಯ ಮಹಾಪ್ರಭುಗಳ ಲೀಲೆಗಳ ಕಾಲದಲ್ಲಿ ಕಾಶೀಶ್ವರ ಗೋಸ್ವಾಮಿಯಾಗಿ ಇಳಿದು ಬಂದರೆಂದು ಗೌರ-ಗಣೋದ್ದೇಶ ದೀಪಿಕಾದಲ್ಲಿ ಹೇಳಲಾಗಿದೆ. ನಮ್ಮ ಗೃಹಸ್ಥ ಜೀವನದಲ್ಲಿ ನಾವೂ ವಲ್ಲಭಪುರದ ದೇವಾಲಯಕ್ಕೆ ಕೆಲವೊಮ್ಮೆ ಭೇಟಿ ನೀಡಿ ಪ್ರಸಾದವನ್ನು ಸ್ವೀಕರಿಸುತ್ತಿದ್ದೆವು.

ಈ ದೇವಾಲಯದ ಶ್ರೀ ಶ್ರೀ ರಾಧಾಗೋವಿಂದ ಮತ್ತು ಗೌರಾಂಗ ವಿಗ್ರಹ ಮೂರ್ತಿಗಳು ಅತ್ಯಂತ ಸುಂದರವಾಗಿವೆ. ವಲ್ಲಭಪುರದ ಹತ್ತಿರ ಇನ್ನೊಂದು ಸುಂದರ ಜಗನ್ನಾಥ ದೇವಾಲಯವಿದೆ. ನಾವು ಕೆಲವೊಮ್ಮೆ ಈ ದೇವಾಲಯದಿಂದಲೂ ಪ್ರಸಾದ ಸ್ವೀಕರಿಸುತ್ತಿದ್ದೆವು. ಈ ಎರಡೂ ದೇವಸ್ಥಾನಗಳು ಕಲ್ಕತ್ತೆಯ ಹತ್ತಿರದ ಶ್ರೀರಾಮಪುರ ರೇಲ್ವೆ ನಿಲ್ದಾಣದಿಂದ ಒಂದು ಮೈಲಿ ದೂರದಲ್ಲಿವೆ.

ಚೈತನ್ಯ ಚರಿತಾಮೃತದ ಉಲ್ಲೇಖ ಹೀಗಿದೆ: ಬ್ರಹ್ಮಚಾರಿ ಕಾಶೀಶ್ವರ ಮತ್ತು ಶ್ರೀ ಗೋವಿಂದರು ಶ್ರೀ ಈಶ್ವರ ಪುರಿಯವರ ಪ್ರೀತಿಪಾತ್ರ ಶಿಷ್ಯರಾಗಿದ್ದರು. ಈಶ್ವರಪುರಿಯವರು ಪ್ರಭುವಿನ ಅನಂತ ಲೀಲೆಗಳನ್ನು ಪ್ರವೇಶಿಸಿದ ಮೇಲೆ ಇಬ್ಬರೂ ಜಗನ್ನಾಥಪುರಿಗೆ ಹೋಗಿ ಚೈತನ್ಯ ಮಹಾಪ್ರಭುಗಳ ಆದೇಶದ ಪ್ರಕಾರ ಸೇವೆಯಲ್ಲಿ ತೊಡಗಿದರು.

ಕಾಶೀಶ್ವರ ಮತ್ತು ಗೋವಿಂದರು ದೈವ ಸೋದರರಾಗಿದ್ದ ಕಾರಣ ಶ್ರೀ ಚೈತನ್ಯ ಮಹಾಪ್ರಭುಗಳು ಗೌರವಾದರಗಳಿಂದ ಅವರನ್ನು ಕಾಣುತ್ತಿದ್ದರು. ಅನಂತರ ಈಶ್ವರಪುರಿಯವರು ಕಾಶೀಶ್ವರ ಮತ್ತು ಗೋವಿಂದರಿಗೆ ನೀಡಿದ ಆದೇಶವನ್ನು ಪರಿಗಣಿಸಿದ ಮೇಲೆ ಶ್ರೀ ಚೈತನ್ಯ ಮಹಾಪ್ರಭುಗಳು ಅವರನ್ನು ತಮ್ಮ ಸೇವಕರನ್ನಾಗಿ ಸ್ವೀಕರಿಸಿದರು.

ಶ್ರೀ ಗೋವಿಂದ ಪ್ರಭುಗಳ ಆತ್ಮೀಯ ಸೇವಕನಾಗಿ ಸೇವೆ ಸಲ್ಲಿಸಿದರೆ ಕಾಶೀಶ್ವರ ಮಹಾಪ್ರಭುಗಳು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಅವರನ್ನು ಗುಂಪಿನಿಂದ ರಕ್ಷಿಸುವ ಕಾರ್ಯವಹಿಸಿದರು. ಹೀಗಾಗಿ ಅವರು ಮಹಾಪ್ರಭುಗಳ ಮುಂದೆ ಸಾಗುತ್ತಿದ್ದರು. ಚೈತನ್ಯ ಮಹಾಪ್ರಭುಗಳು ಜಗನ್ನಾಥ ದೇವಾಲಯಕ್ಕೆ ಹೋದಾಗಲೆಲ್ಲಾ ಅತ್ಯಂತ ಬಲಿಷ್ಠರಾದ ಕಾಶೀಶ್ವರರು ತಮ್ಮ ಕೈಗಳಿಂದ ಗುಂಪನ್ನು ಚದುರಿಸಿ ಚೈತನ್ಯ ಮಹಾಪ್ರಭುಗಳನ್ನು ಯಾರೂ ಸ್ಪರ್ಶಿಸದಂತೆ ಎಚ್ಚರ ವಹಿಸುತ್ತಿದ್ದರು.

ಶ್ರೀ ಕಾಶೀಶ್ವರ ಪಂಡಿತರು ಅತ್ಯಂತ ಬಲಿಷ್ಠರಾಗಿದ್ದರು. ಶ್ರೀ ಕವಿಕರ್ಣಾಪುರ ಗೋಸ್ವಾಮಿಯವರು ಹೀಗೆಂದು ಬರೆಯುತ್ತಾರೆ : “ಕಾಶೀಶ್ವರ ಪಂಡಿತ ಮತ್ತು ಶ್ರೀ ಗೋವಿಂದರು ಈ ಹಿಂದೆ ಕೃಷ್ಣನಿಗಾಗಿ ಯಮುನೆಯಿಂದ ನೀರು ತರುತ್ತಿದ್ದ ಸೇವಕರಾದ ಭೃಂಗರ ಮತ್ತು ಭೃಂಗುರರು.” ಕಾಶೀಶ್ವರ ಪಂಡಿತರು ಶ್ರೀ ಚೈತನ್ಯರ ಸೇವೆಯಲ್ಲಿ ಪುರಿಧಾಮದಲ್ಲಿ ಬಹಳ ಕಾಲ ಕಳೆದರು. ಕೀರ್ತನೆಗಳನಂತರ ಅವರು ಭಕ್ತರಿಗೆ ಪ್ರಸಾದವನ್ನು ಹಂಚುತ್ತಿದ್ದರು.

ಕಾಶೀಶ್ವರ ಪಂಡಿತರು, ಶ್ರೀ ಗೋವಿಂದ ಮೂರ್ತಿಯ ಮಹಾಭಕ್ತನಾದ ಶ್ರೀ ಗೋವಿಂದ ಗೋಸ್ವಾಮಿಯೆಂಬ ಶಿಷ್ಯನನ್ನು ಹೊಂದಿದ್ದರು. ಶ್ರೀ ರೂಪ ಗೋಸ್ವಾಮಿಗಳು ವೃಂದಾವನದಲ್ಲಿ ಇದ್ದಾಗ ಅವರು ಗೋವಿಂದ ವಿಗ್ರಹದ ಸೇವೆಯನ್ನಾರಂಭಿಸಿದರು. ಇದನ್ನು ಕೇಳಿ ಚೈತನ್ಯ ಪ್ರಭುಗಳು ಅತಿ ಪ್ರಸನ್ನರಾದರು.

ರೂಪ ಗೋಸ್ವಾಮಿಗಳ ಸಹಾಯಕ್ಕಾಗಿ ಶೀಘ್ರವಾಗಿ ಕಾಶೀಶ್ವರ ಪಂಡಿತರನ್ನು ಕಳುಹಿಸಿದರು. ಆದರೆ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆಯನ್ನು ಬಿಡಲು ಕಾಶೀಶ್ವರರಿಗೆ ಇಷ್ಟವಿರಲಿಲ್ಲ. ಪ್ರತಿಯೊಂದು ಹೃದಯದಲ್ಲಿ ಪರಮಾತ್ಮನ ರೂಪದಲ್ಲಿ ನೆಲೆಸಿದ್ದ ಶ್ರೀ ಚೈತನ್ಯ ಮಹಾಪ್ರಭುಗಳಿಗೆ ತಮ್ಮ ಭಕ್ತನ ಮನಸ್ಸು ಅರಿವಾಯಿತು.

ಪ್ರಭುಗಳು ತಮ್ಮ ರೂಪವನ್ನೇ ನಿಖರವಾಗಿ ಹೋಲುವ ವಿಗ್ರಹವನ್ನು ಅವರಿಗೆ ನೀಡಿದರು. ಕಾಶೀಶ್ವರರು ಪ್ರಭುಗಳ ಆ ವಿಗ್ರಹವನ್ನು ತಮ್ಮೊಂದಿಗೆ ಕೊಂಡೊಯ್ದು ಅವರಿಗೆ ನೈವೇದ್ಯಾದಿ ಸೇವೆಗಳನ್ನು ನೀಡಿ, ಮಹಾಪ್ರಭುಗಳಿಂದ ತಮ್ಮ ಅಗಲಿಕೆಯ ನೋವಿನಿಂದ ಹೊರತಾಗಿ ಸಮಾಧಾನ ಹೊಂದಿದರು. ಈ ಸಂದರ್ಭದಲ್ಲಿ ಶ್ರೀ ನರಹರಿ ಚಕ್ರವರ್ತಿಯವರು ತಮ್ಮ ಭಕ್ತಿರತ್ನಾಕರದಲ್ಲಿ ಹೀಗೆ ಹೇಳುತ್ತಾರೆ! ಕಾಶೀಶ್ವರ ಪಂಡಿತರು, “ನಿಮ್ಮನ್ನು ಬಿಟ್ಟು ಹೋಗುವುದನ್ನು ನನ್ನಿಂದ ತಾಳಲಾಗದು” ಎಂದು ಚೈತನ್ಯ ಮಹಾಪ್ರಭುಗಳಿಗೆ ಹೇಳಿದರು.

ಪ್ರಭುಗಳು ಕಾಶೀಶ್ವರರ ಹೃದಯವನ್ನರಿತು ಅವರಿಗೆ ತಮ್ಮಂತೆಯೇ ನಿಖರವಾಗಿ ಹೋಲುವ ಒಂದು ವಿಗ್ರಹವನ್ನು ನೀಡಿದರು. ನೈವೇದ್ಯಕ್ಕೆ ಇಟ್ಟಿದ್ದ ಎಲ್ಲ ಪದಾರ್ಥಗಳನ್ನು ಶ್ರೀ ವಿಗ್ರಹವೇ ಸಂಪೂರ್ಣವಾಗಿ ತಿನ್ನುವುದನ್ನು ನೋಡಿ ಕಾಶೀಶ್ವರ ಪಂಡಿತರಿಗೆ ಮಹದಾನಂದ ಉಂಟಾಯಿತು!

ಚೈತನ್ಯ ಮಹಾಪ್ರಭುಗಳು ಆ ವಿಗ್ರಹವನ್ನು ‘ಗೌರ-ಗೋವಿಂದ’ ಎಂದು ಕರೆಯಬೇಕೆಂದು ಹೇಳಿದರು.

ಆ ವಿಗ್ರಹವನ್ನು ತಮ್ಮೊಂದಿಗೆ ವೃಂದಾವನಕ್ಕೆ ಕಾಶೀಶ್ವರರು ಕೊಂಡೊಯ್ದರು. ಆ ವಿಗ್ರಹವನ್ನು ಗೋವಿಂದ ವಿಗ್ರಹದ ಎಡ ಭಾಗದಲ್ಲಿ ಸ್ಥಾಪಿಸಲಾಯಿತು. ಶ್ರೀ ಗೋವಿಂದ ವಿಗ್ರಹದ ಅನುಗ್ರಹಕ್ಕಾಗಿ ಈ ರೀತಿ ಅದ್ಭುತ ಸೇವೆಯನ್ನು ನೆರವೇರಿಸಲಾಯಿತು.

ಕಾಶೀಶ್ವರ ಪಂಡಿತರ ಮಹಿಮೆಗಳು ಅಸಂಖ್ಯಾತ ಮತ್ತು ಶ್ರೇಷ್ಠವಾದವು. ಅವರು ಅಶ್ವಿನಿ ತಿಂಗಳ ಪೂರ್ಣಿಮೆಯ ಉತ್ಸವದ ದಿನದಂದು ತಿರೋಭಾವ ಹೊಂದಿದರು. ಆ ದಿನವನ್ನು ರಾಧಾಗೋವಿಂದರ ಮಹಾರಸ ನೃತ್ಯದ ದಿನವೆಂದೂ ಆಚರಿಸಲಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi