ಶ್ರೀಲ ಪ್ರಭುಪಾದರು ಅತಿಥಿಯೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ : ಲಂಡನ್, ಆಗಸ್ಟ್ 1973
ಶ್ರೀಲ ಪ್ರಭುಪಾದ : ಈ ಸೃಷ್ಟಿಯ ಹಿಂದೆ ಯಾವುದೇ ಮೆದುಳು (ಎಂದರೆ ಬುದ್ಧಿವಂತಿಕೆ) ಕೆಲಸ ಮಾಡಿಲ್ಲವೆಂದು ಆಧುನಿಕ ವಿಜ್ಞಾನಿಗಳು ಹೇಳುತ್ತಾರೆ. ನಾವು ಒಂದು ವರ್ಣಚಿತ್ರವನ್ನು ನೋಡಿದಾಗ, “ಈ ಕಲಾಕೃತಿಯ ಹಿಂದೆ ಯಾವುದೇ ಬುದ್ಧಿ ಕೆಲಸ ಮಾಡಿಲ್ಲ. ಈ ಚಿತ್ರಕ್ಕೆ ಎಷ್ಟು ಸುಂದರವಾಗಿ ಬಣ್ಣ ಹಾಕಲಾಗಿದೆ. ಆದರೂ ಇದು ತನ್ನಂತೆಯೇ ನಿರ್ಮಾಣವಾಗಿದೆ. ಕಲಾವಿದ ಇದನ್ನು ಚಿತ್ರಿಸಿಲ್ಲ” ಎಂದು ನಾವು ಹೇಳುವುದಿಲ್ಲ. ಇವರ ತರ್ಕ ಬರಿ ಪೊಳ್ಳು. ಇದು ಮೌಢ್ಯವಷ್ಟೆ.

ಆದರೆ ಒಂದು ಸುಂದರವಾದ ಹೂವಿನ ಸೃಷ್ಟಿಯಲ್ಲಿ ಯಾವ ಕಲಾವಿದನೂ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಂದು ಬುದ್ಧಿ ಅದರ ಹಿಂದಿಲ್ಲದೆ ಇಂಥದೊಂದು ಹೂವು ಹೇಗೆ ಅಸ್ತಿತ್ವಕ್ಕೆ ಬಂತು? ಆದರೆ ಈ ಮೂಢ ವಿಜ್ಞಾನಿಗಳು (ಇದನ್ನು) ಅರ್ಥಮಾಡಿಕೊಳ್ಳುವುದಿಲ್ಲ. ಪ್ರಕೃತಿಯು ಹೂವನ್ನು ಉತ್ಪಾದಿಸುತ್ತಿದೆ ಎಂದು ಅವರು ಹೇಳುತ್ತಾರೆ. ಪ್ರಕೃತಿ ಎಂದರೇನು? ಪ್ರಕೃತಿ ಒಂದು ಉಪಕರಣ, ಆದರೆ ಆ ಪ್ರಕೃತಿಯ ಹಿಂದಿನ ಮೆದುಳು ದೇವರು.
ನೀವು ಕುಂಚದ ಸಹಾಯದಿಂದ ಒಂದು ಹೂವನ್ನು ಚಿತ್ರಿಸಿದಾಗ ಕುಂಚವು ಆ ಹೂವನ್ನು ಸೃಷ್ಟಿಸಿದಾತನಾಗುವುದಿಲ್ಲ. ನಿಜದ ಸೃಷ್ಟಿಕರ್ತ ನೀವು. ಇದೇ ರೀತಿ ನಿಜವಾದ ಒಂದು ಹೂವಿನ ವಿಷಯದಲ್ಲಿ ಕೂಡ ಪ್ರಕೃತಿಯು ಕುಂಚ ಮಾತ್ರ, ದೇವರು ಸೃಷ್ಟಿಕರ್ತ.
ಅತಿಥಿ : ಎರಡು ಬೇರೆ ಬೇರೆ ವಸ್ತುಗಳು ಒಂದೇ ತರವಾಗಿರುವುದಿಲ್ಲ ಅಲ್ಲವೆ?
ಶ್ರೀಲ ಪ್ರಭುಪಾದ : ಹೌದು. ಪ್ರತಿಯೊಂದೂ ವೈವಿಧ್ಯವುಳ್ಳದ್ದಾಗಿರುತ್ತದೆ. ಗುಲಾಬಿಯ ಒಂದು ವಂಶದಲ್ಲೇ ನೀವು ಅನೇಕ ಬಗೆಯ ಹೂಗಳನ್ನು ಕಾಣಬಹುದು. ಮನುಷ್ಯ ಜಾತಿಯಲ್ಲಾದರೋ ಅವಳಿ ಜವಳಿ ಮಕ್ಕಳಲ್ಲೂ ವೈವಿಧ್ಯವನ್ನು ಕಾಣುತ್ತೀರಿ.
ಅತಿಥಿ : ಆಧ್ಯಾತ್ಮಿಕ ಜಗತ್ತಿನಲ್ಲಿ ವೈವಿಧ್ಯ ಉಂಟೆ?
ಶ್ರೀಲ ಪ್ರಭುಪಾದ : ಹೌದು. ಉಂಟು. ಅಲ್ಲಿ ಅಪರಿಮಿತ ಆನಂದವಿದೆ (ಸಂತೋಷ). ಆನಂದ ಎಂದರೆ ವೈವಿಧ್ಯ. ‘ವೈವಿಧ್ಯವೇ ಸುಖದ ತಾಯಿ.” ಉದಾಹರಣೆಗೆ, ಧಾನ್ಯ, ಸಕ್ಕರೆ ಹಾಗೂ ತುಪ್ಪಗಳನ್ನು ನೀವು ಬಿಡಿಬಿಡಿಯಾಗಿ ತಿನ್ನಲು ಪ್ರಯತ್ನಿಸಿದರೆ ಅಷ್ಟು ರುಚಿಕರವಾಗಿರುವುದಿಲ್ಲ.
ಆದರೆ ಯಾರೋ ಒಬ್ಬರು ಇವನ್ನೆಲ್ಲ ಸಂಗ್ರಹಿಸಿ ಬಗೆ ಬಗೆಯ ಸಿಹಿ ಭಕ್ಷ್ಯಗಳನ್ನು ತಯಾರಿಸಿ, ಆ ತಿಂಡಿಯನ್ನು ನಿಮಗೆ ಒಂದು ತಟ್ಟೆಯಲ್ಲಿಟ್ಟು ಕೊಟ್ಟರೆ, ನೀವು, ”ಆಹಾ, ಎಷ್ಟು ಸೊಗಸಾಗಿದೆಯಲ್ಲ” ಎನ್ನುತ್ತೀರಿ. ಈ ಮೂರು ಘಟಕ ಪದಾರ್ಥಗಳನ್ನು ಬಳಸಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಬಹುದಾಗಿದೆ.
ಇದೇ ರೀತಿ ಈ ಐಹಿಕ ಜಗತ್ತಿನ ಬಹು ಬಗೆಯ ವಸ್ತು ವಿಶೇಷಗಳನ್ನು ಎಂಟು ಮೂಲ ಘಟಕ ವಸ್ತುಗಳಿಂದ ಮಾಡಲಾಗಿದೆ. ಈ ಎಂಟರಲ್ಲಿ ಐದು ಮೂಲ ಘಟಕ ವಸ್ತುಗಳು ಸ್ಥೂಲ ಎನಿಸಿಕೊಳ್ಳುತ್ತವೆ. ಮೂರನ್ನು ಸೂಕ್ಷ್ಮ ಪದಾರ್ಥಗಳು ಎನ್ನುತ್ತಾರೆ. ಭೂಮಿ, ನೀರು, ಅಗ್ನಿ, ಗಾಳಿ ಹಾಗೂ ಆಕಾಶ – ಈ ಐದು ಸ್ಥೂಲ ಮೂಲ ಘಟಕ ದ್ರವ್ಯಗಳು, ಹಾಗೂ ಮನಸ್ಸು ಬುದ್ಧಿ ಮತ್ತು ಅಹಂಕಾರಗಳು ಸೂಕ್ಷ್ಮದ್ರವ್ಯಗಳು. ಭೌತಿಕ ಜಗತ್ತು ಕೇವಲ ಈ ಎಂಟು ಮೂಲ ವಸ್ತುಗಳ ಸಂಯೋಜನೆ ಅಷ್ಟೆ.
ಈ ಘಟಕ ವಸ್ತುಗಳನ್ನು ಸಂಯೋಜಿಸಲು ಹೇಗೆ ಬುದ್ಧಿಯುಳ್ಳ ವ್ಯಕ್ತಿಯೊಬ್ಬ ಬೇಕಾಗುತ್ತಾನೋ ಹಾಗೆ ಇಡೀ ಸೃಷ್ಟಿಯ ಹಿಂದೆ ಒಬ್ಬ ಬುದ್ಧಿವಂತನು ಕೆಲಸ ಮಾಡಿರಲೇಬೇಕು. ಉದಾಹರಣೆಗೆ ಒಂದು ಕಟ್ಟಡವನ್ನು ನಿರ್ಮಿಸಲು ನಾವು ಮಣ್ಣು, ನೀರು ಮುಂತಾದ್ದನ್ನು ಬಳಸುತ್ತೇವೆ. ಮೇಜು, ಕುರ್ಚಿ, ಹೂದಾನಿ, ಹಾರ್ಮೋನಿಯಮ್, ಪುಸ್ತಕ ಇವೆಲ್ಲವುಗಳ ತಯಾರಿಕೆಗೂ ಅಷ್ಟೇ. ಇವುಗಳ ಘಟಕ ವಸ್ತುಗಳು ಒಂದೇ.

ಆದರೆ ಬೇರೆ ಬೇರೆ ವಸ್ತುಗಳನ್ನೂ ಹೊಂದಿಸಲು ಅವುಗಳನ್ನು ಹೇಗೆ ಒಂದುಗೂಡಿಸಬೇಕು ಎಂಬುದನ್ನು ನಮ್ಮ ಬುದ್ಧಿ ನಿರ್ಣಯಿಸುತ್ತದೆ. ಇದೇ ರೀತಿ ಈ ಐಹಿಕ ಜಗದಭಿವ್ಯಕ್ತಿಯು ವೈವಿಧ್ಯಪೂರ್ಣವಾಗಿದೆ ಹಾಗೂ ಇದರ ನಿರ್ಮಾಣದ ಹಿಂದಿನ ಬುದ್ಧಿ ಭಗವಾನ್ ಕೃಷ್ಣ ಈ ಮಾತನ್ನು ಭಗವದ್ಗೀತೆಯಲ್ಲಿ (9.10) ಹೇಳಲಾಗಿದೆ.
ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸ ಚರಾಚರಮ್ |
ಹೇತುನಾನೇನ ಕೌಂತೇಯ ಜಗದ್ ವಿಪರಿವರ್ತತೇ ||
(ಪ್ರಭುಪಾದರು ಒಬ್ಬ ಭಕ್ತನಿಗೆ ಹೇಳುತ್ತಾರೆ) ಈ ಶ್ಲೋಕದ ಅನುವಾದವನ್ನು ಓದಿ.
ಭಕ್ತ: (ಭಗವದ್ಗೀತೆಯಿಂದ ಓದುತ್ತಾರೆ) : ಈ ಕುಂತೀಪುತ್ರನೆ, ಈ ಐಹಿಕ ಪ್ರಕೃತಿಯು ನನ್ನ ನಿರ್ದೇಶನದಡಿ ಕಾರ್ಯ ಮಾಡುತ್ತಿದೆ ಹಾಗೂ ಚರಾಚರ ವಸ್ತುಗಳನ್ನು ನಿರ್ಮಾಣ ಮಾಡುತ್ತಿದೆ. ಅದರ (ಪ್ರಕೃತಿಯ) ನಿಯಮದಿಂದ ಈ ಜಗತ್ತಿನ ಸೃಷ್ಟಿ ಹಾಗೂ ನಾಶ ಆಗುತ್ತದೆ.”
ಅತಿಥಿ : ಆಧುನಿಕ ವಿಜ್ಞಾನವು ಬರೀ ಭೋಗವಾದವಾಗಿದೆ ಎಂದು ನೀವು ಹೇಳುವಿರೋ, ಶ್ರೀಲ ಪ್ರಭುಪಾದ ?
ಶ್ರೀಲ ಪ್ರಭುಪಾದ : ಹೌದು. ವಿಜ್ಞಾನಿಗಳು ಬರೀ ಭೂಮಿ, ಗಾಳಿ ಹಾಗೂ ಆಕಾಶಗಳ ಕುರಿತು ವ್ಯವಹರಿಸುತ್ತಿದ್ದಾರೆ ಅಷ್ಟೆ. ಇದೆಲ್ಲ ಭೋಗವಾದ. ಆಧ್ಯಾತ್ಮಿಕತೆ ಎಂದರೇನೆಂಬುದು ಅವರಿಗೆ ಗೊತ್ತಿಲ್ಲ.
ಅತಿಥಿ : ವಿಜ್ಞಾನಿಗಳು ಈಗ ಮಾಡುತ್ತಿರುವುದನ್ನು ಏಕಾಗಿ ಮಾಡುತ್ತಿದ್ದಾರೆ? ಅವರನ್ನು ಪ್ರೇರಿಸುತ್ತಿರುವುದು ಯಾವುದು?
ಶ್ರೀಲ ಪ್ರಭುಪಾದ : ಆತ್ಮ ಅವರನ್ನು ಪ್ರೇರಿಸುತ್ತಿದೆ. ಆತ್ಮವು ಪರಿಮಿತ ಸ್ವಾತಂತ್ರ್ಯವುಳ್ಳ ಒಂದು ಜೀವ. ಒಂದು ಗೊತ್ತಾದ ಕ್ರಮದಲ್ಲಿ ಕಾರ್ಯ ನಿರ್ವಹಿಸಲು ಅವನು ಬಯಸುತ್ತಾನೆ. ಅವನಿಗೆ ಬೇಕಾದ ಸೌಕರ್ಯಗಳನ್ನು ಪ್ರಕೃತಿ ಒದಗಿಸುತ್ತದೆ. ಉದಾಹರಣೆಗೆ ಭೂಮಿಯು ಮನುಷ್ಯನ ಸೃಷ್ಟಿಯಲ್ಲ.
ಭೂಮಿಯು ಭಗವಂತನ ಸೃಷ್ಟಿ ದೈವದ ಶಕ್ತಿಯ ಫಲ, ಆದರೆ ನಾವು ಭೂಮಿಯನ್ನು ವಿವಿಧ ರೂಪಗಳಲ್ಲಿ – ಗಡಿಗೆಗಳು, ಬೊಂಬೆಗಳು ಇತ್ಯಾದಿ – ಅಚ್ಚಿಸುತ್ತೇವೆ. ಘಟಕ ವಸ್ತುಗಳು ಭಗವಂತನ ಶಕ್ತಿಯಿಂದ ಸರಬರಾಜಾಗಿವೆ ಹಾಗೂ ನಾವು ಸುಮ್ಮನೆ ಅವುಗಳ ರೂಪವನ್ನು ಬದಲಾಯಿಸುತ್ತೇವೆ.

ವಾಸ್ತವವಾಗಿ ನಾವು ಏನನ್ನೂ ನಿರ್ಮಿಸಲಾರೆವು. ಹೀಗೆ, ದೇವರಂತೆ ನಮಗೆ ಸೃಷ್ಟಿಸುವ ಶಕ್ತಿ ಉಂಟು. ಆದರೂ ಆ ಶಕ್ತಿ ತುಂಬ ಪರಿಮಿತವಾದದ್ದು. ದೇವರು ತನ್ನ ಬುದ್ಧಿಯಿಂದ ಇಡೀ ಬ್ರಹ್ಮಾಂಡವನ್ನು ಹೇಗೆ ಸೃಷ್ಟಿಸುತ್ತಾನೋ ಹಾಗೆ ನಾವು ನಮ್ಮ ಬುದ್ಧಿಶಕ್ತಿಯನ್ನು ಈ ಮೇಜು, ತಲೆದಿಂಬು, ಹಾರ್ಮೋನಿಯಮ್ ಮುಂತಾದ್ದನ್ನು ದೇವರ ಶಕ್ತಿಯಿಂದ ಸೃಷ್ಟಿಸುತ್ತೇವೆ ಅಷ್ಟೆ.
ಈ ಎಲ್ಲವನ್ನೂ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸುತ್ತಾನೆ. ಗೀತೆ ಪ್ರತಿಯೊಂದರ ಬಗೆಗೂ ಪರಿಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ನಾವು ಅದನ್ನು ಲಕ್ಷ್ಯವಿಟ್ಟು ಓದಬೇಕು ಅಷ್ಟೆ ಅಲ್ಲದೆ ನೀವು ಭಗವದ್ಗೀತೆಯನ್ನು ನಿಮ್ಮ ತರ್ಕದ ಸಹಾಯದಿಂದಲೂ ಪರಿಗಣಿಸಬಹುದು.
ಉದಾಹರಣೆಗೆ ಕೃಷ್ಣನು, “ಈ ಭೌತ ದ್ರವ್ಯಗಳು ನನ್ನ ಶಕ್ತಿ’ ಎನ್ನುತ್ತಾನೆ. ಈಗ ಬೃಹತ್ ಪ್ರಮಾಣದ ನೀರಿನಿಂದ ತುಂಬಿಹೋಗಿರುವ ಅಟ್ಲಾಂಟಿಕ್ ಮಹಾಸಾಗರವನ್ನು ಪರಿಗಣಿಸಿ. ಅದು ಭಗವಂತನ ಶಕ್ತಿಯಿಂದಾಗಿ ನಿರ್ಮಾಣವಾಗಿದೆ. ಈ ಮಾತನ್ನು ನೀವು ಒಪ್ಪುತ್ತೀರಷ್ಟೆ? ಒಪ್ಪುವುದಿಲ್ಲ ಎಂದರೆ, ಅದಕ್ಕೆ ನೀವು ಕೊಡುವ ಕಾರಣ ಏನು?
ಅತಿಥಿ : ಒಬ್ಬ ಒಂದನ್ನು ಹೇಳುತ್ತಾರೆ ಇನ್ನೊಬ್ಬ ಇನ್ನೊಂದನ್ನು ಹೇಳುತ್ತಾನೆ. ಏಷ್ಟೋ ಜನ ಎಷ್ಟೋ ಹೇಳುವುದಿದೆ.
ಶ್ರೀಲ ಪ್ರಭುಪಾದ : ಇದು ತರ್ಕದ ಪ್ರಶ್ನೆ. ನಿಮ್ಮ ದೇಹದಿಂದ ನೀರು ಹೊರಬರುತ್ತದೆ, ಹೌದಷ್ಟೆ?
ಅತಿಥಿ : ಹೌದು.
ಶ್ರೀಲ ಪ್ರಭುಪಾದ : ಬೆವರು ಬರುತ್ತದೆ, ಮೂತ್ರ ಬರುತ್ತದೆ. ಈ ಎರಡು ಬಗೆಯ ನೀರನ್ನೂ ನಿಮ್ಮ ದೇಹದಲ್ಲಿನ ಶಕ್ತಿಯು ಉತ್ಪಾದಿಸುತ್ತದೆ. ಹೀಗಿರುವಾಗ ಅಟ್ಲಾಂಟಿಕ್ ಸಾಗರದ ಅಗಾಧ ನೀರನ್ನು ದೇವರ ಶಕ್ತಿ ಏಕೆ ಉಂಟು ಮಾಡಿರಬಾರದು?
ಅತಿಥಿ : ಹೌದು. ನಿಜವಾಗಿಯೂ ದೇವರ ಶಕ್ತಿ ಇದನ್ನು ಮಾಡಬಹುದು.
ಶ್ರೀಲ ಪ್ರಭುಪಾದ : ಭಗವಂತನು ಅಪರಿಮಿತನಾದ್ದರಿಂದ ಅವನಿಗೆ ಅಪರಿಮಿತ ಶಕ್ತಿಯಿದೆ. ನನಗೆ ಮಿತವಾದ ಶಕ್ತಿ ಇದೆ. ಆದ್ದರಿಂದ ನಾನು ಒಂದು ಪೌಂಡು ಮೂತ್ರ ಅಥವಾ ಒಂದು ಔನ್ಸು ಬೆವರನ್ನು ಉತ್ಪಾದಿಸಬಲ್ಲೆ.
ಆದರೆ ದೇವರು ಇಷ್ಟಪಟ್ಟರೆ ಅಪರಿಮಿತ ಪ್ರಮಾಣದ ನೀರನ್ನು ಆತ ಉತ್ಪಾದಿಸಬಲ್ಲ. ಒಂದು ಅಟ್ಲಾಂಟಿಕ್ ಮಹಾಸಾಗರ ಏನು ಮಹಾ ಆಯಿತು? ಆತ ಕೋಟಿ ಕೋಟಿ ಅಟ್ಲಾಂಟಿಕ್ ಮಹಾಸಾಗರಗಳನ್ನು ನಿರ್ಮಾಣ ಮಾಡಬಲ್ಲ ಇದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕಷ್ಟವೇನಿದೆ?






Leave a Reply