ಕೆರೆಯ ನೀರನು ಕೆರೆಗೆ ಚೆಲ್ಲಿ

ಪುರಂದರೋಪನಿಷತ್ತು – 2

ಪುರಂದರದಾಸರು ಉಪನಿಷತ್ತುಗಳ ಸಾರವನ್ನು ಸರಳ ಕೀರ್ತನೆಗಳಲ್ಲಿ ಹೇಳಹೊರಟ ಮಹಾನುಭಾವಿಗಳು. ಸ೦ಸಾರದ ಕ್ಷಣಭಂಗುರತೆಯನ್ನು ಅವರು ಸಾಮಾನ್ಯ ಜನರ ಪರಿಭಾಷೆಯಲ್ಲಿ ಹೇಳಿದರು.

‘ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ’ ಎಂಬ ನಿರೂಪಣೆ ಎಷ್ಟೊಂದು ಸರಳ ಹೆಣ್ಣು-ಮಣ್ಣು-ಹೊನ್ನುಗಳೆಂಬ ಮೂರೂ ಪ್ರಲೋಭನೆಗಳು ನಿರರ್ಥಕವೆಂಬುದನ್ನು ಅವರು ʼಆರು ಹಿತವರು ನಿನಗೆ ಈ ಮೂವರೊಳಗೆ’ ಎಂಬ ಕೀರ್ತನೆಯಲ್ಲಿ ವಿವರಿಸುವ ಪರಿ ಅನನ್ಯ.

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು

ತನ್ನ ಮನೆಗವಳ ಯಜಮಾನಿ ಎನಿಸಿ

ಭಿನ್ನವಲ್ಲದ ಅರ್ಧ ದೇಹವೆನಿಸುವ ಸತಿಯು

ಕಣ್ಣಿನಲಿನೋಡಲಮ್ಮಳು ಕಾಲವರದಿ ||

ಮುನ್ನ ಶತಕೋಟಿ ರಾಜರುಗಳಾಳಿದ ನೆಲವ

ತನ್ನದೆಂದೆನುತ ಶಾಸನವ ಬರೆಸಿ

ಬಿನ್ನಣದ ಮನೆಕಟ್ಟಿ ಕೋಟೆಕೊತ್ತಳವಿಕ್ಕಿ

ಚೆನ್ನಿಗನ ಅಸುವಳಿಯ ಹೊರಗೆ ಹಾಕುವರು ||

ಸಾಂಸಾರಿಕ ವ್ಯಾಮೋಹ ಅರ್ಥಹೀನ ಎಂಬುದನ್ನು ಇಲ್ಲಿ ದಾಸರು ಸಮರ್ಥವಾಗಿ ಪ್ರತಿಪಾದಿಸುತ್ತಾರೆ. ‘ಶೋಕವನು ಗೈಯ್ಯುವರು ಸತಿಸುತರು ಬಾಂಧವರು, ಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥ’ ಎಷ್ಟು ಅರ್ಥವತ್ತಾದ ಸಾಲು! ಅಸ್ಥಿರದ ದೇಹ ಉರುಳುವುದರೊಳಗೆ ಸ್ವಸ್ಥದಲಿ ಹರಿಯನ್ನು ನೆನೆಯಬೇಕೆಂಬುದು ಇಡೀ ಕೀರ್ತನೆಯ ಉಪದೇಶಸಾರ.

‘ಮಂಚಬಾರದು ಮಡದಿಬಾರಳು, ಕಂಚು ಕನ್ನಡಿ ಬಾರದು; ಸಂಚಿತಾರ್ಥದ ದ್ರವ್ಯಬಾರದು ಮುಂಚೆ ಮಾಡಿರೊ ಕರ್ಮವ!’ ಎಂದು ಅವರೇ ಇನ್ನೊಂದೆಡೆ ಹೇಳಿದ್ದಾರೆ. ಈ ಎಲ್ಲ ಕೀರ್ತನೆಗಳಲ್ಲಿ “ಅಲ್ಲಿರುವುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ” ಎಂಬ ವೈರಾಗ್ಯ ಚಿಂತನೆಯೇ ಇದೆ.

ನಮ್ಮ ಉಪನಿಷತ್ತುಗಳು ಹೇಳುವ ‘ಮೃತ್ಯೋರ್ಮಾ ಅಮೃತಂಗಮಯ’ ಭಾರತೀಯ ಆಧ್ಯಾತ್ಮದ ಶಕ್ತಿ. ಆತ್ಮ ಅವಿನಾಶಿಯಾದುದರಿಂದ ಮರಣಕ್ಕೆ ಯಾರೂ ಹೆದರಬೇಕಾಗಿಲ್ಲ. ‘ಗಟ್ಟಿಮಣ್ಣ ಶಿಶುವಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ, ಕೊಟ್ಟ ದೈವ ಕೊಂಡು ಹೋದರೆ ಕುಟ್ಟಿಕೊಂಡು ಅಳುವೆ ಏಕೆ’ ಎಂದು ಪ್ರಶ್ನಿಸುವ ದಾಸವಾಣಿ ಈ ಬಯಲ ಭ್ರಾಂತಿಗೆ ಚಿಂತೆ ಸಲ್ಲದೆಂದು ಸಂತೈಸುತ್ತದೆ.

ಪದ್ಮಪತ್ರ ಮಿವಾ೦ಭಸಾ’ ಎ೦ಬುದು ಭಗವದ್ಗೀತೆಯ ಸುಂದರ ವಚಃಸುಧಾ ಸೇಚನಗಳಲ್ಲಿ ಒಂದು. ಕೆಸರಿನಲ್ಲಿರುವ ಕಮಲದೆಲೆಯಂತೆ ಭವಬಂಧನಕ್ಕೆ ಅಂಟಿಕೊಳ್ಳಬಾರದೆಂಬ ರೂಪಕವದು. ಅದನ್ನೇ ಪುರಂದರದಾಸರು ಈಸಬೇಕು ಇದ್ದು ಜೈಸಬೇಕು’ ಎನ್ನುವ ಕೀರ್ತನೆಯಲ್ಲಿ ಕನ್ನಡಿಸಿದ್ದಾರೆ –

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕೈಗೊಂಬರೆಲ್ಲ||

ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ಮೀರಿ ಆಸೆ ಮಾಡದಂತೆ ಧೀರಕೃಷ್ಣನ ಭಕುತರೆಲ್ಲ ||

ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದಂತೆ’ ಈಸಬೇಕು ಅಷ್ಟೇ ಅಲ್ಲ, ನಾವು ಇದರಲ್ಲಿದ್ದು ಜಯಿಸಲೂ ಬೇಕೆಂಬುದು ಎಷ್ಟು ಸಾರವತ್ತಾದ ಮಾತು! ಇದು ನಮ್ಮ ಸನಾತನ ಕರ್ಮಮೀಮಾಂಸೆ’ ಕನ್ನಡ ಕವಿತೆಯಾಗಿ ಕಂಗೊಳಿಸಿದ ಪರಿ!

ಇಷ್ಟು ದೊರಕಿದರೆ ಇನ್ನಷ್ಟು ಬೇಕೆಂಬಾಸೆ

ಅಷ್ಟು ದೊರಕಿದರೆ ಮತ್ತಷ್ಟರಾಸೆ

ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ

ನಷ್ಟ ಜೀವನದಾಸೆ ಪುರಂದರವಿಠಲ

ಆಶಾಪಾಶಕ್ಕೆ ಸಿಲುಕಿಕೊ೦ಡು ಪರಿತಪಿಸುವ ಮಾನವ ಕೊನೆಗೆ ಪಥಭ್ರಷ್ಟನಾಗುತ್ತಾನೆಂಬ ಸೂಚನೆ ಇಲ್ಲಿದೆ. ಸಿರಿಸಂಪತ್ತಿನ ದಾಸನಾಗಬಾರದೆಂಬುದನ್ನು “ರೊಕ್ಕೆ ಎರಡಕ್ಕೂ ದುಃಖಕಾಣಕ್ಕ” ಎಂದು ದಾಸರು ಹೇಳಿದರೆ, ವೈರಾಗ್ಯ ಜೀವನದ ಸಂತೃಪ್ತಿಯನ್ನು “ಲಂಗೋಟಿ ಬಲು ಒಳ್ಳೆದಣ್ಣ” ಎಂದು ಹೇಳಿದ್ದಾರೆ.

ವಿಜಯನಗರದಂತಹ ವೈಭವದ ಸಾಮ್ರಾಜ್ಯವಿದ್ದ ಸಮೃದ್ಧಿಯ ಕಾಲದಲ್ಲೇ ಪುರಂದರದಾಸರು ಉತ್ತಮ ಪ್ರಭುತ್ವವೂ ಸೇರಿ ಎಲ್ಲವೂ “ಲೊಳಲೊಟ್ಟೆ” ಎಂದು ವಿಡಂಬಿಸಿದವರು. ಇದು ಅವರ ನಿರ್ಮಲಭಾವದ ದಾರ್ಶನಿಕ ದೃಷ್ಟಿಗೆ ನಿದರ್ಶನ.

ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ಜೀವನದ ಒಂದು ಘಟನೆಯಿಂದ ವೈರಾಗ್ಯಮುಖಿಯಾದರು. ಗೋಪಾಳಬುಟ್ಟಿ ಹಾಕಿ, ತಾಳತ೦ಬೂರಿ ಹಿಡಿದು, ತುಳಸೀಮಾಲೆ- ದ್ವಾದಶನಾಮ ಧಾರಿಗಳಾಗಿ “ಆದದ್ದೆಲ್ಲಾ ಒಳಿತೇ ಆಯ್ತು” ಎಂದು ಹರಿದಾಸರಾದರು. “ಹೆಣ್ಣು ಹೊನ್ನು ಮಣ್ಣುಗಳಿಗೆ ಹೇರಳ ಭಯಗಳುಂಟು ರಾಮನಾಮ ದ್ರವಕ್ಕೆ ಯಾರ ಭಯವೂ ಇಲ್ಲ” ಎಂದು ಪರಿಭಾವಿಸಿಕೊಂಡವರು.

ನಿಮ್ಮ ಭಾಗ್ಯ ದೊಡ್ಡದೋ? ನಮ್ಮ ಭಾಗ್ಯ ದೊಡ್ಡದೋ? ಎಂದು ಪ್ರಶ್ನಿಸಿ ಕೊನೆಗೆ “ನಿಮ್ಮ ಭಾಗ್ಯಲಕ್ಷ್ಮಿದೇವಿ, ನಮ್ಮ ಭಾಗ್ಯ ನಾರಾಯಣನು” ಎಂದು ಹಾಡಿದವರು. ಅರ್ಥಾತ್ ಪರಮ ಪುರುಷೋತ್ತಮನ ಕರುಣಾಕಟಾಕ್ಷ ದೊರೆತಮೇಲೆ ನಮ್ಮ ಉಳಿದೆಲ್ಲಾ ಸುಖಭೋಗಗಳೂ ನಶ್ವರವೆಂಬುದು ಅವರ ಅಂತರಂಗದರ್ಶನ!

ಆದುದರಿಂದಲೇ ಭಗವಂತನ ಅನುಗ್ರಹದಿಂದ ದೊರೆತ ಸ೦ಪದಗಳೆಲ್ಲವನ್ನೂ ಭಗವಂತನಿಗೇ ಹಿಂದಿರುಗಿಸಬೇಕೆಂಬ ನಿಷ್ಕಾಮ ಯೋಗ” ಮಾನವ ಜೀವನದ ಸಾರ್ಥಕ್ಯಕ್ಕೆ ಸಾಧನವೆಂಬುದು ಅವರ ನಿಲುವು. ಒಪ್ಪತ್ತು ಭಿಕ್ಷವ ಬೇಡು, ಒಬ್ಬರಿಗೊಂದಿಷ್ಟು ನೀಡು, ಅಪ್ಪನಾದ ಅಚ್ಯುತನ ಪಾಡು, ಆನಂದದಲ್ಲಿ ಓಲಾಡು” ಎಂಬುದು ಅವರ ಕಳಕಳಿ. ಈ ಕೃಷ್ಣಾರ್ಪಣ ಭಾವವೇ ಸರ್ವೋಪನಿಷತ್ತುಗಳ ಸಾರ.

ಸಂಗೀತಪಾಠದ ಬಾಲಬೋಧೆಯಲ್ಲಿ ನಾವು ಈಗಲೂ ಹಾಡುವ ಪುರಂದರದಾಸರ ಈ ಕೆಳಗಿನ ರಚನೆ ಸರಳ ಸಾಹಿತ್ಯದ ಸೊಲ್ಲೆನಿಸಿದರೂ, ಆಧ್ಯಾತ್ಮ ದರ್ಶನದ ಅತ್ಯುನ್ನತ ಸಿದ್ಧಿಯೆ೦ಬುದರಲ್ಲಿ ಅನುಮಾನವಿಲ್ಲ. ಅದರ ಒಂದು ಬಿಂದುವೂ ಸಿಂಧುವಾಗಬಲ್ಲುದು –

ಕೆರೆಯ ನೀರನು ಕೆರೆಗೆ ಚೆಲ್ಲಿ

ವರವ ಪಡೆದವರಂತೆ ಕಾಣಿರೂ

ಹರಿಯ ಕರುಣದೊಳಾದ ಭಾಗ್ಯವ

ಹರಿ ಸಮರ್ಪಣೆ ಮಾಡಿ ಬದುಕಿರೊ||

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi