ಸ್ವಪ್ರೇರಿತ ಭಗವತ್ಪ್ರೇಮ

ಭಕ್ತಿಯೆಂದರೆ ಸ್ವಪ್ರೇರಿತ ಪ್ರೀತಿಸೇವೆ. ಸೇವಕ ತನ್ನ ಯಜಮಾನನ ಬಳಿ ಕೂಲಿಗಾಗಿ ಸೇವೆಯನ್ನು ಮಾಡುತ್ತಾನೆ, ಸ್ನೇಹಿತ ಮತ್ತೊಬ್ಬ ಸ್ನೇಹಿತನಿಗೆ ಉಪಕಾರ ಮಾಡಿದರೂ ಮುಂದೆ ಅವನಿಂದ ತನಗೆ ಸಹಾಯವಾಗುತ್ತದೆ ಎಂಬ ಉದ್ದೇಶಪೂರ್ಣವಾದ ನಿರೀಕ್ಷೆ ಇರುತ್ತದೆ.

ತಂದೆಯಾದವನು ತನ್ನ ಮಗನು ಮುಂದೆ ತನಗೆ ಆಸರೆಯಾಗುತ್ತಾನೆ ಎಂಬ ಇಚ್ಛೆಯಿಂದಲೋ ಅಥವಾ ತನ್ನ ಆತ್ಮತೃಪ್ತಿಗಾಗಿ ಪ್ರೀತಿಸುತ್ತಾನೆ. ಮಗನೂ ಕೂಡ ತಂದೆಯಿಂದ ಪಡೆದುಕೊಳ್ಳುವ ಸೌಕರ್ಯ, ಅನುಕೂಲತೆಗಳಿಗೋ ಅಥವಾ ತಂದೆಯೆಂಬ ಗೌರವಕ್ಕಾಗಿಯೋ ತಂದೆಯನ್ನು ಪ್ರೀತಿಸುತ್ತಾನೆ.

ಹೆಂಡತಿಯಾದವಳು ಗಂಡನ ನೋಟುಗಳಿಂದ ತುಂಬಿರುವ ಜೇಬುಗಳನ್ನು ನೋಡಿ ಪ್ರೀತಿಸುತ್ತಿರುತ್ತಾಳೆ ಹಾಗೆಯೇ ಗಂಡನೂ ಕೂಡ ಹೆಂಡತಿಯ ಅಂದ, ಚಂದ ಯೌವನಗಳನ್ನು ನೋಡಿ ಪ್ರೀತಿಸುತ್ತಾನೆ ಅಥವಾ ಪ್ರೀತಿಸುವುದು ತಮ್ಮ ಕರ್ತವ್ಯವೆಂದು ತಿಳಿದು ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿರಬಹುದು, ಆದರೆ ಇದು ಸ್ವಪ್ರೇರಿತ ಪ್ರೀತಿಸೇವೆ ಎಂದು ಎನಿಸುವುದಿಲ್ಲ. ಇಂತಹ ಉದ್ದೇಶಪೂರ್ವಕವಾದ ಪ್ರೀತಿಗಳೆಲ್ಲವೂ “ಭಕ್ತಿ”ಯೆಂಬ ವರ್ಗದಲ್ಲಿ ಬರಲು ಸಾಧ್ಯವೇ ಇಲ್ಲ.

ಹೀಗೆ ನಾವು ಈ ಭೌತಿಕ ಜಗತ್ತಿನಲ್ಲಿ ಇರುವವರೆಗೂ ಐಹಿಕ ವಸ್ತುವಿನ ಮತ್ತು ಅದರ ಒಡೆಯನೊಂದಿಗೆ ಇರುವ ಸಂಬಂಧವನ್ನು ಆಧಾರವಾಗಿ ಇಟ್ಟುಕೊಳ್ಳುತ್ತೇವೆ.

ಈ ಸಂಬಂಧಗಳು ಯಜಮಾನ-ಸೇವಕ, ಸ್ನೇಹಿತರು, ತಂದೆ-ಮಗ, ಗಂಡ-ಹೆಂಡತಿ ಮುಂತಾದ ಮನಷ್ಯ-ಮನುಷ್ಯ, ಮನುಷ್ಯ-ಪ್ರಾಣಿ ಅಥವಾ ಮನುಷ್ಯ-ಪ್ರಕೃತಿಯೊಂದಿಗೆ ಇರುವ ಸಂಬಂಧಗಳನ್ನು ಆಧಾರವಾಗಿ ಇಟ್ಟು ಸೇವೆ ಸಲ್ಲಿಸುತ್ತೇವೆ. ಆದರೆ ಇವುಗಳಲ್ಲಿ ಯಾವ ಸಂಬಂಧಗಳೂ “ಭಕ್ತಿ” ಎನಿಸಿಕೊಳ್ಳುವುದಿಲ್ಲ.

ಈ ಐಹಿಕ ಜಗತ್ತಿನಲ್ಲಿ ನಮ್ಮ ಲೌಕಿಕ ಸಂಬಂಧಗಳು ಉದ್ದೇಶವಿಲ್ಲದೆ ಏರ್ಪಡುವುದಿಲ್ಲ. ಯಾವ ಉದ್ದೇಶವಿಲ್ಲವೆಂದು ಬಂಧು ಬಳಗ ಸಂಬಂಧಗಳಲ್ಲಿ ಕಂಡುಬಂದರೂ ಆಳವಾಗಿ ವಿಮರ್ಶಿಸಿದಾಗ, ಎತ್ತರದ ಅಥವಾ ಕೀಳು ಮಟ್ಟದಲ್ಲಿರುವ ಯಾವುದೋ ಉದ್ದೇಶವು ಅಲ್ಲಿ ಕಂಡು ಬರುತ್ತದೆ.

ಭಕ್ತಿಯೆಂಬುದು ಅಥವಾ ಸ್ವಪ್ರೇರಿತ ಪ್ರೀತಿಸೇವೆ ಈ ಜಗತ್ತಿನ ಯಾವುದೇ ವಸ್ತುವಿಗೂ ಅನ್ವಯಿಸಿ ಹೇಳಲು ಸಾ‍ಧ್ಯವಿಲ್ಲ. ಅದರ ಅಧಿಕಾರ ಕೇವಲ ಭಗವಂತನಿಗಿದೆ. ಸೇವೆಯ ವಿಷಯದಲ್ಲಿ ಸೇವೆ ಮಾಡಿಸಿಕೊಳ್ಳುವವನು ಮತ್ತು ಸೇವೆ ಮಾಡುವವನು ಇದ್ದಾರೆ ಎಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಯಜಮಾನನಾದ ಸರ್ವಶಕ್ತ ಭಗವಂತನು ಸರ್ವವ್ಯಾಪಿಯಾದಂತೆ ಅವನ ಸೇವೆ ಮತ್ತು ಸೇವಕರೂ ಸರ್ವವ್ಯಾಪಿ. ಆದ್ದರಿಂದ ಭಕ್ತಿಯು ಕೂಡ ಸರ್ವ ವ್ಯಾಪಿ. ಭಗವಂತನು ಸರ್ವವ್ಯಾಪಿಯಾದಂತೆ ಭಕ್ತಿಯೆಂಬುವ ಪದವು, ಪರಿಣಾಮಕಾರಿಯಲ್ಲದ ಅಥವಾ ದೋಷಭರಿತ ಲೌಕಿಕ ಕಲ್ಪನೆಗಳನ್ನು ಹೊಂದಿರುವ ಸೇವೆಗಳನ್ನೆಲ್ಲಾ ಮೀರಿದೆ.

ಲೌಕಿಕ ಸೇವೆಯು ಸ್ವಾರ್ಥ, ಅಪರಿಪೂರ್ಣತೆ ಮತ್ತು ಅಸಮರ್ಥತೆಯಿಂದ ಕೂಡಿದೆ. ಆದರೆ ಭಕ್ತಿಯು ಇವೆಲ್ಲಾ ಲೌಕಿಕ ಕಲ್ಪನೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಕ್ತಿಯು ಸಂಪೂರ್ಣ, ಶಾಶ್ವತ ಮತ್ತು ಸ್ವತಂತ್ರವಾಗಿದೆ. ಅಂತಹ ಕಲ್ಪನೆಗಳಿಂದ ಭಕ್ತಿಸೇವೆಯನ್ನು ಪ್ರಚೋದಿಸಲು ಸಾಧ್ಯವಿಲ್ಲ. ಭಕ್ತಿಯೆಂಬುದು ತನ್ನ ಪರಿಶುದ್ಧ ರೂಪದಲ್ಲಿ ಅದೇ ಸಾಧನವಾಗಿದೆ, ಅದೇ ಪೂರ್ಣವಾಗಿದೆ.

ಈ ಭಕ್ತಿಯೆಂಬುವ ಪದ ಕೇವಲ ದೇವೋತ್ತಮ ಪರಮ ಪುರುಷನಿಗೆ ಸಂಬಂಧಪಟ್ಟಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪರಿಶುದ್ಧರೂಪದಲ್ಲಿ ನಿಸ್ವಾರ್ಥವಾಗಿ ಆಚರಿಸುವಂಥದ್ದು ಈ ಭಕ್ತಿಸೇವೆಯಾಗಿದೆ. ನಾವು ಭಗವಂತನಿಗೆ ಮಾಡುವ ಭಕ್ತಿಯಲ್ಲಿ ನಿರೀಕ್ಷಿತ ಉದ್ದೇಶಗಳನ್ನು ಇಟ್ಟುಕೊಂಡಾಗ ಅದು ಬೆರಕೆಯ ಅಥವಾ ಕಲುಷಿತ ಭಕ್ತಿಯೆನಿಸುತ್ತದೆ. ಅದು ನಿಜವಾದ ಸೇವೆಯಾಗುವುದಿಲ್ಲ.

ಪ್ರಕೃತಿಯ ತ್ರಿಗುಣಗಳಿಗೆ ಒಳಗಾದಾಗ ಭಗವಂತನ್ನು ಫಲಾಪೇಕ್ಷಿಸುತ್ತಾ ಸೇವೆ ಮಾಡುತ್ತಾನೆ. ಇದು ಸಹಜ. ಈ ಆಸೆ, ಉದ್ದೇಶಗಳನ್ನು ಸಾತ್ವಿಕ, ರಾಜಸಿಕ, ತಾಮಸಿಕ ಎಂಬ ಮೂರು ವರ್ಗಗಳಾಗಿ ನಾವು ವಿಂಗಡಿಸಬಹುದು – ನಾವು ಅಹಂಕಾರದಿಂದ, ಕಾಮದಿಂದ, ಕ್ರೋಧದಿಂದ, ಸ್ವಾರ್ಥ ಸಾಧನೆಗಾಗಿ ಭಗವಂತನಿಗೆ ಮಾಡುವ ಭಕ್ತಿಯು ಕೇವಲ ಅಂಧಕಾರದ ಗುಣವುಳ್ಳ ಬೆರೆಕೆಯ ತಾಮಸಿಕ ಭಕ್ತಿಯೆನಿಸುತ್ತದೆ.

ಇದಕ್ಕೊಂದು ಉದಾಹರಣೆಯನ್ನು ಕೊಡುವುದಾದರೆ ತಮ್ಮ ಶತ್ರುಗಳು ಹಾಳಾಗಲಿ, ನಾಶವಾಗಲಿ ಎಂಬ ಉದ್ದೇಶದಿಂದ ಕೆಲವರು ಭಗವಂತನನ್ನು ಪೂಜಿಸುತ್ತಾರೆ. ಇದು ಅತ್ಯಂತ ಕೀಳುತರಹದ ಕಲುಷಿತವುಳ್ಳ ತಾಮಸಿಕ ಭಕ್ತಿಯೆನಿಸುತ್ತದೆ. ಭಗವಂತನಿಗೆ ಈ ರೀತಿ ಪ್ರಾರ್ಥನೆ ಸಲ್ಲಿಸುವುದು ಖಂಡಿತವಾಗಿಯೂ ತಪ್ಪು.

ಈ ತರಹದ ಭಕ್ತಿಯ ಉಲ್ಲೇಖ ಎಲ್ಲಿಯೂ ಇಲ್ಲ, ಏಕೆಂದರೆ ನಿಜವಾದ ಭಕ್ತಿಯಲ್ಲಿ ಭಗವಂತನು ತನ್ನ ಭಕ್ತರ ಜೊತೆ ಸದಾ ಇದ್ದುಕೊಂಡು ಅವರನ್ನು ಕಷ್ಟಗಳಿಂದ, ಶತ್ರುಗಳಿಂದ ಸಂರಕ್ಷಿಸುತ್ತಾನೆ. ಅದನ್ನು ಬೇಡಿಕೊಳ್ಳುವ ಅಗತ್ಯ, ಉದ್ದೇಶ ಭಕ್ತರಿಗೆ ಇರುವುದಿಲ್ಲ, ದೇವೋತ್ತಮ ಪರಮ ಪುರುಷ ಕೃಷ್ಣ ಇದನ್ನು ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿದ್ದಾನೆ – “ಯಾವುದೇ ಸಂದರ್ಭದಲ್ಲೂ ನನ್ನ ಭಕ್ತ ನಾಶವಾಗುವುದಿಲ್ಲ.”

ಯಾರು ಸಂಪತ್ತು, ಪ್ರಸಿದ್ಧಿ, ಹೆಸರಿಗಾಗಿ ಪೂಜೆಯನ್ನು ಸಲ್ಲಿಸುತ್ತಾರೋ ಅವರು ರಾಜಸಿಕ ಭಕ್ತಿಯ ಹಂತದಲ್ಲಿ ಇದ್ದಾರೆ. ಯಾರು ಭಗವಂತನಿಗೆ ಮಾಡುವ ಸೇವೆ ತನ್ನ ಕರ್ತವ್ಯವೆಂದು ತಿಳಿದು ಮಾಡುತ್ತಾರೋ ಅವರು ಸಾತ್ವಿಕ ಭಕ್ತಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಪರಿಶುದ್ಧ ಭಕ್ತಿಯು ಪ್ರಕೃತಿಯ ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಗುಣಗಳಿಂದ ಭಿನ್ನವಾಗಿದೆ.

ಪಾರಮಾರ್ಥಿಕ ಸೇವೆಯ ಕರೆಗೆ ಈ ಭಕ್ತಿಯು ಸ್ವಪ್ರೇರಿತ ಪ್ರತಿಕ್ರಿಯೆಯಾಗಿದೆ: ಶುದ್ಧಭಕ್ತಿಯ ಈ ಲಕ್ಷಣವನ್ನು ನಾವು ನವ ಯುವಕ ಯುವತಿಯರ ಸಮೂಹದಲ್ಲಿ ಬಹು ಕಡಮೆ ಪ್ರಮಾಣದಲ್ಲಿ ಕಾಣಬಹುದು. ತರುಣ ತರುಣಿಯನ್ನು ಭೇಟಿ ಮಾಡಿದ ಕ್ಷಣ ಆಕೆಯ ಸಂಗವನ್ನು ಸಹಜವಾಗಿಯೇ ಬಯಸುತ್ತಾನೆ.

ಇದೇ ರೀತಿ ಆ ತರುಣಿಯೂ ಕೂಡ ಅವನ ಸಂಗವನ್ನು ಬಯಸುತ್ತಾಳೆ. ಈ ಸಂಬಂಧದಲ್ಲಿ ಕಂಡುಬರುವ ಸಹಜತೆ, ಪ್ರಾಮಾಣಿಕತೆ ಮತ್ತು ಒಲವು ಭಗವಂತನ ಸೇವೆಗೆ ಯಾವುದೇ ಸ್ವಾರ್ಥವಿಲ್ಲದೆ ಬೆರಗಾದಾಗ ಭಗವತ್ಪ್ರೇಮದ ಕಪಟವಿಲ್ಲದ ಇಂತಹ ಕಾಮನೆಗಳು ಸಂಕೇತಗಳು.

ಈ ಪ್ರಕೃತಿಯ ಸತ್ಯ, ರಾಜಸಿಕ, ತಾಮಸಿಕ ಈ ಮೂರೂ ಗುಣಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಹಂತದಲ್ಲಿ ಬಂದೇ ಬರುವುದರಿಂದ ಅದು ಪರಿಶುದ್ಧ ಭಕ್ತಿಯಾಗದೆ ಕೇವಲ ಬೆರಕೆಯ ಭಕ್ತಿ ಅಥವಾ ಕಲುಷಿತ ಭಕ್ತಿಯೆನಿಸುತ್ತದೆ. ‘ಚೈತನ್ಯ ಚರಿತಾಮೃತ’ ಲೇಖಕರಾದ ಕವಿರಾಜ ಗೋಸ್ವಾಮಿಯವರು ಭಕ್ತಿಯ ಲಕ್ಷಣಗಳ ಬಗ್ಗೆ ಈ ರೀತಿ ಹೇಳಿದ್ದಾರೆ –

‘ದೇವೋತ್ತಮ ಪರಮ ಪುರುಷನಿಗೆ ಮಾಡುವ ಭಕ್ತಿಯ ಬೆಳವಣಿಗೆಯಲ್ಲಿ ಕೇವಲ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದರಲ್ಲಿ ಮುಂದುವರಿಯಬೇಕೆಂಬ ಆಸೆ ಅಥವಾ ದೃಢ ನಿರ್ಧಾರವಿರುತ್ತದೆಯೇ ಹೊರತು ಅಲ್ಲಿ ಯಾವುದೇ ಕಾಮನೆಗಳು ಇರುವುದಿಲ್ಲ. ಈ ದೇವೋತ್ತಮನನ್ನು ಬಿಟ್ಟು ಬೇರೆ ಯಾರಿಗೂ, ಯಾವುದಕ್ಕೂ ಪೂಜೆಯಿಲ್ಲ, ಹಾಗೆಯೇ ನಿರಾಕಾರ ಬ್ರಹ್ಮನ್ ಎಂಬುವುದಕ್ಕೂ ಇಲ್ಲಿ ಪೂಜೆಗೆ ಸ್ಥಾನವಿಲ್ಲ.

ಈ ಭಕ್ತಿಯಲ್ಲಿ ಜ್ಞಾನವಾಗಲಿ ಅಥವಾ ಕಾಮ್ಯಕರ್ಮದ ಫಲವನ್ನು ಪಡೆಯಬೇಕೆಂಬ ಒಲವು ಇರುವುದಿಲ್ಲ. ಈ ಎಲ್ಲ ವಿಚಾರಗಳಿಂದ ಮುಕ್ತನಾದ ಭಕ್ತನು ಕೇವಲ ತನ್ನ ಜೀವನೋಪಾಯಕ್ಕಾಗಿಯಷ್ಟೇ ಜೀವನ ಮಾಡುತ್ತಾ ಪರಮ ದೇವೋತ್ತಮನ ಸೇವೆಯನ್ನು ಹೃದಯದಿಂದ ಆತ್ಮಪೂರ್ವಕವಾಗಿ ಮಾಡುತ್ತಿರುತ್ತಾನೆ.

ಇಂತಹ ಪವಿತ್ರವಾದ, ಕಲ್ಮಷವಿಲ್ಲದ ಸೇವೆಯು ನಿಜವಾದ ಭಕ್ತಿಯೆನಿಸಿಕೊಳ್ಳುತ್ತದೆ. ಐಹಿಕ ಕಾಮನೆಯ ರೂಪದ ಭಕ್ತಿಯನ್ನು ಹೊರತುಪಡಿಸಿ ಶುದ್ಧರೂಪದ ಭಕ್ತಿಯನ್ನು ನೋಡಿದಾಗ ಇದು ಶಾಶ್ವತವಾದುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ವೃದ್ಧಿಯಾಗುವುದು. ಐಹಿಕ ಕಾಮನೆಗಳನ್ನು ನಾವು ಪ್ರೀತಿ ಎಂದು ಹೇಳಿದರೂ ಅದು ಶಾಶ್ವತವಲ್ಲ, ನಾಶವಾಗುವಂತದ್ದು.”

ಸಾಮಾನ್ಯವಾಗಿ ಕಾಮ ಇಂಗಿದ ಮೇಲೆ ಪ್ರೀತಿಯೆಂಬ ಹೆಸರಿನ ಭಕ್ತಿ ವಿಚ್ಛೇದನ ಪಡೆದುಕೊಳ್ಳುತ್ತದೆ. ಇಂತಹ ಸಾವಿರದ ಒಂದು ಉದಾಹರಣೆಗಳನ್ನು ನಾವು ಕೊಡಬಹುದು. ಆದರೆ ದೇವೋತ್ತಮ ಪರಮ ಪುರುಷ ಕೃಷ್ಣನ ಮೇಲೆ ಇಡುವ ಪರಿಶುದ್ಧ ಪ್ರೀತಿ ತೃಪ್ತಿಯಾಗದಿರುವಂಥದ್ದು. ಅದು ಇನ್ನೂ ಬೇಕು ಬೇಕೆನ್ನಿಸುವಂಥದ್ದು ಮತ್ತು ಶಾಶ್ವತವಾದದ್ದು.

ದೇವೋತ್ತಮ ಪುರುಷನ ಮೇಲೆ ಇಡುವ ಕಲ್ಮಷವಿಲ್ಲದ ಪರಮ ಪ್ರೀತಿ ಕ್ಷಣಕಾಲವೂ ನಿಲ್ಲದೆ ವೃದ್ಧಿಯಾಗುತ್ತಲೇ ಇರುತ್ತದೆ. ಭಕ್ತನಾದವನು ಆಧ್ಯಾತ್ಮಿಕ ಭಕ್ತಿ ಮತ್ತು ದೈಹಿಕ ಕಾಮನೆಗಳ ವ್ಯತ್ಯಾಸವನ್ನು ತಿಳಿದುಕೊಂಡಿರಬೇಕಾಗುತ್ತದೆ. ಆಮ್ಲದ (acid) ಪರೀಕ್ಷೆಮಾಡಿ ತಿಳಿದುಕೊಳ್ಳುವಂತೆ ಪರಿಶುದ್ಧ ಭಕ್ತಿ ಯಾವುದು ಎಂಬುದನ್ನು ಅನೇಕ ಪರೀಕ್ಷೆಗಳಿಂದ ಭಕ್ತನಾದವನು ತಿಳಿದುಕೊಳ್ಳಬಹುದು. ಈ ಎರಡೂ ರೀತಿಯ ಭಕ್ತಿಗಳ ನಡುವೆ ಬಹಳ ದೊಡ್ಡ ಅಂತರವಿದೆ.

ಈ ಪರಮ ಸತ್ಯದ ಸತ್ಯತೆಗೆ ಯಾವ ಪರೀಕ್ಷಾ ವಿಧಾನವೂ ಸಾಧ್ಯವಿಲ್ಲ. ಪರಮ ಸತ್ಯವನ್ನು ಪರಮ ವಿಧಾನದಿಂದಲೇ ಪಡೆಯಬೇಕು. ಆಗ ಮಾತ್ರ ನಮಗೆ ಸಂಪೂರ್ಣ ಪರಿಪೂರ್ಣತೆ, ತೃಪ್ತಿ, ಅಮರತ್ವ ಸಿಗುತ್ತದೆ. ಇಲ್ಲಿ ಕೊಡಬಹುದಾದ ಶ್ರೇಷ್ಠ ಉದಾಹರಣೆಯೆಂದರೆ – ಧ್ರುವ ಮಹಾರಾಜನದು.

ಧ್ರುವ ಮಹಾರಾಜನು ಬದುಕಿನ ಭೌತಿಕ ಆಸೆಗಳ ಪೂರ್ಣತೆಗಾಗಿ ಅತ್ಯಂತ ಕಠಿಣವಾದ ತಪಸ್ಸನ್ನು ಆಚರಿಸುತ್ತಾನೆ. ಯಾವಾಗ ಶ್ರೀಮನ್ ನಾರಾಯಣನು ಪ್ರತ್ಯಕ್ಷನಾಗುತ್ತಾನೋ ಅವನನ್ನು ಕಾಣುತ್ತಲೇ ಧ್ರುವ ಮಹಾರಾಜನ ಐಹಿಕ ಬಯಕೆಗಳೆಲ್ಲವೂ ಸಂತೃಪ್ತಿ ಪಡೆದುಕೊಂಡಿದ್ದವು.

ಧ್ರುವನ ಬಯಕೆಗಳನ್ನು ಪೂರ್ಣ ಮಾಡಲು ದೇವೋತ್ತಮ ಪರಮ ಪುರುಷ ಸಿದ್ಧನಿದ್ದನು. ಯುಗ ಯುಗಗಳಿಂದಲೂ ತಪಸ್ಸು ಮಾಡಿದರೂ ಸಿಗಲಾರದ ಅತ್ಯಮೂಲ್ಯ ವಸ್ತುವೇ ತನಗೆ ಕಾಣಿಸಿಕೊಂಡಾಗ ಧ್ರುವನಿಗೆ ಬೇರೇನೂ ಬೇಕೆನಿಸಲಿಲ್ಲ. ನಾನು ಸಾಮಾನ್ಯ ಕಲ್ಲಿನ ಹರಳನ್ನು ಬಯಸಿದೆ, ಆದರೆ ತನಗೆ ಅಮೂಲ್ಯವಾದ ವಜ್ರವೇ ದೊರಕಿತು ಎಂದು ಧ್ರುವನು ಅರಿತುಕೊಂಡನು.

ಯಾವಾಗ ಒಬ್ಬನು ಪರಮ ಸತ್ಯದ ಸಾಕ್ಷಾತ್ಕಾರವನ್ನು ಪಡೆಯುತ್ತಾನೋ ಅವನಿಗೆ ಬೇರೆ ಯಾವುದೇ ಐಹಿಕ, ಭೌತಿಕ ಕಾಮನೆಗಳೇ ಬೇಕೆನಿಸುವುದಿಲ್ಲ. ಈ ಸ್ಥಿತಿಯನ್ನು ಪಡೆಯಬೇಕಾದರೆ ಒಂದು ಪರಮಹಂತವಿದೆ. ಆ ವಿಧಾನವೇನೆಂದರೆ ನಮ್ಮ ಹೃದಯಂತರಾಳದಲ್ಲಿ ಸುಪ್ತವಾಗಿರುವಂತಹ ಭಕ್ತಿಯನ್ನು ಜಾಗೃತಗೊಳಿಸಿ ಅವನ್ನು ವ್ಯಕ್ತಪಡಿಸುವಂತದ್ದಾಗಿದೆ.

ಪರಮ ಭಕ್ತಿಯಿಂದ ಭಗವಂತನನ್ನು ಪಡೆದನಂತರ ಭಕ್ತನು-

1. ಅವನು ಯಾವುದೇ ರೀತಿಯ ಐಹಿಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ.

2. ಅವನು ಯಾವುದರಿಂದಲೂ ಭೀತನಾಗುವುದಿಲ್ಲ.

3. ಅವನು ಯಾವುದೇ ವಸ್ತುವನ್ನು ಕಂಡು ಅಸೂಯೆ ಪಡುವುದಿಲ್ಲ.

4. ಯಾವುದೇ ಇಂದ್ರಿಯಭೋಗಗಳಿಗಾಗಿ ಅವನು ಸುಖ ಪಡುವುದಿಲ್ಲ.

5. ಯಾವುದೇ ಲೌಕಿಕ ವಸ್ತುಗಳಿಗೂ ಅವನು ಹಂಬಲಿಸುವುದಿಲ್ಲ.

ಪರಿಶುದ್ಧ ಭಕ್ತ ಅಥವಾ ಭಗವಂತನ ದಿವ್ಯ ಸೇವಕ ಅವನು ಯಾವುದೇ ರೀತಿಯ ಐಹಿಕ ಸಂಬಂಧಗಳಲ್ಲಿ ತೊಡಗುವುದಿಲ್ಲ. ಆದ್ದರಿಂದ ಯಾವುದೇ ಸುಖ-ದುಃಖ, ಜಯ-ಅಪಜಯ, ಲಾಭ-ನಷ್ಟತನ್ನ ಕೆಲಸದ ಪರಿಣಾಮ ಎನ್ನುವುದಕ್ಕಿಂತ ಅದು ಸ್ವತಃ ಭಗವಂತನೇ ನನಗೆ ಕೊಟ್ಟಿರುವ ಕೊಡುಗೆ ಎಂದು ತಿಳಿದುಕೊಳ್ಳುತ್ತಾನೆ.

ಆದರೆ ಸಾಮಾನ್ಯನು ಅತಿಯಾಗಿ ಶ್ರಮ, ಕಷ್ಟಪಟ್ಟು ಅದರ ಫಲದಿಂದ ಸಂತೋಷ ತೃಪ್ತಿಯನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ. ಭಗವಂತನ ಸೇವೆಯಲ್ಲಿ ಪೂಜೆಯಲ್ಲಿ ತೊಡಗಿರುವವನು ಯಾವುದೇ ಶ್ರಮಜೀವಿಯಲ್ಲ, ಅವನು ಸೋಮಾರಿ, ಯಾವ ಫಲಗಳನ್ನು ಆತ ಪಡೆಯುವುದಿಲ್ಲವೆಂದು ಭಾವಿಸಬಾರದು.

ಒಬ್ಬ ಭಕ್ತನಾದವನು ತನ್ನನ್ನು ಯಾವಾಗಲೂ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರೂ ಅದು ಭಗವಂತನ ದಿವ್ಯ ಸೇವೆಯಾಗಿರುತ್ತದೆ. ದೇವೋತ್ತಮ ಪರಮ ಪುರುಷ ಅಂತಹ ಭಕ್ತರ ಸೇವೆಯಿಂದ ಸಂತೋಷಗೊಂಡು ತನ್ನ ಭಕ್ತರ ಎಲ್ಲ ಕಾಮನೆಗಳನ್ನು, ಆಶೋತ್ತರಗಳನ್ನು ಸಂತೃಪ್ತಗೊಳಿಸುತ್ತಾನೆ. ಬದುಕಿನ ಹೋರಾಟದಲ್ಲಿ ಬರುವ ಅಡ್ಡಿ ಆತಂಕ ತೊಂದರೆಗಳಿಂದಲೂ ಅವರನ್ನು ಕಾಪಾಡಿ ಅನುಗ್ರಹಿಸಿರುತ್ತಾನೆ. ಭಗವದ್ಗೀತೆಯಲ್ಲಿ ಭಗವಂತನ ಧ್ಯೇಯವಾದ ಹೇಳಿಕೆಯೊಂದಿದೆ –

ಅನನ್ಯಾಶ್ಚಿನಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ ।

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್‌ || (9.22)

“ಅನ್ಯ ಚಿಂತೆಯಿಲ್ಲದೆ ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನ ದಿವ್ಯರೂಪವನ್ನು ಯಾರು ಧ್ಯಾನಿಸುವರೋ ಅವರಿಗೆ ನಾನು ಇಲ್ಲದ್ದನ್ನು ಕೊಡುತ್ತೇನೆ ಮತ್ತು ಇರುವುದನ್ನು ಕಾಪಾಡುತ್ತೇನೆ.

ಹೇಗೆ ಸಾಮಾನ್ಯ ಮನುಷ್ಯನು ತನ್ನ ಕುಟುಂಬವನ್ನು ಸಂತೃಪ್ತಿಪಡಿಸಲು ತನ್ನೆಲ್ಲ ಸುಖಗಳನ್ನು ತ್ಯಾಗಮಾಡಿ ಆ ತ್ಯಾಗದಲ್ಲಿ ಸಂತೋಷಪಡುತ್ತಾನೋ ಹಾಗೆಯೇ ದೇವೋತ್ತಮ ಪರಮ ಪುರುಷನು ಕೂಡ ತನ್ನ ಭಕ್ತರುಗಳನ್ನು ಅನುಗ್ರಹಿಸಿ ತಾನು ಸಂತೋಷಪಡುತ್ತಾನೆ.

ಪರಿಶುದ್ಧ ಭಕ್ತನಾದವನು ಪರಮಾತ್ಮನಿಂದ ಏನನ್ನೂ ಬಯಸುವುದಿಲ್ಲ. ಆದರೆ ಭಗವಂತನೇ ತನ್ನ ಭಕ್ತರ ಅವಶ್ಯಕತೆಗಳು, ಕುಂದು ಕೊರತೆಗಳನ್ನು ನಿವಾರಿಸಿ, ಅವರನ್ನು ಎಲ್ಲದರಿಂದಲೂ ಮುಕ್ತಗೊಳಿಸುತ್ತಿರುತ್ತಾರೆ.

ಮೇಲುನೋಟಕ್ಕೆ ಒಬ್ಬ ಪರಿಶುದ್ಧ ಭಕ್ತನ ಕಾರ್ಯಚಟುವಟಿಕೆಗಳಿಗೂ ಒಬ್ಬ ಸಾಮಾನ್ಯನ ಕಾರ್ಯಚಟುವಟಿಕೆಗಳಿಗೂ ಯಾವ ವ್ಯತ್ಯಾಸ ಕಾಣದಿದ್ದರೂ ಇವೆರೆಡರ ನಡುವೆ ಬಹಳ ದೊಡ್ಡ ಅಂತರವಿದೆ. ಭಕ್ತ ಭಗವಂತನಿಂದ ಪ್ರಭಾವಿತನಾಗಿ ತನ್ನ ಕಾರ್ಯಗಳನ್ನು ತನಗರಿವಿಲ್ಲದಂತೆಯೇ ಮಾಡಿ ಮುಗಿಸುತ್ತಾನೆ.

ಆದರೆ ಸಾಮಾನ್ಯನು ತನ್ನ ಲೌಕಿಕ ಬಯಕೆಗಳಿಗಾಗಿ ತಾನೇ ಸ್ವತಃ ಕಾರ್ಯೋನ್ಮುಖನಾಗುತ್ತಾನೆ. ಭಕ್ತನು ಮಾಡುವ ಕೆಲಸಗಳು ಅಲ್ಲಿ ಪಡೆಯುವ ಪರಿಣಾಮಗಳು ದೇವೋತ್ತಮನ ಅನುಗ್ರಹದಿಂದ ಪಡೆದಿರುತ್ತಾನೆ. ಅವು ದೈವಿಕತೆ, ಪರಿಶುದ್ಧತೆ ಮತ್ತು ಶಾಶ್ವತವಾದ ಆನಂದವನ್ನು ಪಡೆದಿರುತ್ತವೆ.

ಆದರೆ ಸಾಮಾನ್ಯ ಮನುಷ್ಯನು ಪಡೆಯುವ ಫಲಗಳು ಸ್ವಂತ ಪ್ರಯತ್ನದಿಂದ ಅಂದರೆ ಅವನ ಕರ್ಮಫಲಗಳಿಂದ ದೊರಕಿರುತ್ತದೆ. ದೈವಾನುಗ್ರಹ ಮತ್ತು ಕರ್ಮಫಲಗಳಿಂದ ದೊರಕುವ ಆನಂದದಲ್ಲೂ ವ್ಯತ್ಯಾಸವಿದೆ. ದೈವಾನುಗ್ರಹ ಶಾಶ್ವತವಾದುದು ಮತ್ತು ದಿವ್ಯವಾದ ಸುಖದಿಂದ ಕೂಡಿರುತ್ತದೆ. ಕರ್ಮಫಲಗಳು ಅಶಾಶ್ವತವಾದುದು ಮತ್ತು ತಾತ್ಕಾಲಿಕವಾಗಿ ಅವು ಪ್ರಕೃತಿಯ ಮೂರು ಗುಣಗಳಿಂದ ಪ್ರಭಾವಿತವಾಗಿರುತ್ತವೆ.

ಆ ಗುಣಗಳಿಗೆ ಅನುಗುಣವಾಗಿ ಸಾಮಾನ್ಯ ಮನುಷ್ಯ ಕಾರ್ಯೋನ್ಮುಖನಾಗಿರುತ್ತಾನೆ. ಭಕ್ತನು ಪಡೆಯುವುದು ಮುಕ್ತಿಯಾದರೆ, ಸಾಮಾನ್ಯ ಮನುಷ್ಯನು ಪಡೆಯುವುದು ಸಂಸಾರ ಬಂಧನ. ಭಗವಂತನ ಅನುಗ್ರಹದಿಂದ ಭಕ್ತ ಮುಕ್ತನಾಗಿ ಅವನ ಶಾಶ್ವತ ಧಾಮಕ್ಕೆ ತೆರಳಿದರೆ, ಸಾಮಾನ್ಯ ಮನುಷ್ಯನು ತನ್ನ ಕರ್ಮಗಳಿ೦ದಲೇ ಪುನಃ ಪುನಃ ಸಂಸಾರದ ಸುಳಿಗೆ ಸಿಲುಕುತ್ತಿರುತ್ತಾನೆ.

ಬದ್ಧಾತ್ಮರ ಚಟುವಟಿಕೆಯಲ್ಲಿ ಭಗವಂತನು ನಿರ್ಲಿಪ್ತನು. ಆದರೆ ಭಕ್ತರ ಭಕ್ತಿಯ ಚಟುವಟಿಕೆಯಲ್ಲಿ ಭಗವಂತನು ಸದಾ ಸಂತೋಷನಾಗಿ ತಾನು ಅದರಲ್ಲಿ ಭಾಗಿಯಾಗಿರುತ್ತಾನೆ. ಭಕ್ತರಿಗೆ ಬೇಡದಿದ್ದರೂ ಅವರಿಗೆ ನಿಕಟ ಐಶ್ವರ್ಯಗಳನ್ನು ಕೊಟ್ಟು ಅವರನ್ನು ಕಾಪಾಡುತ್ತಾನೆ. ಇಂತಹ ಭಕ್ತರು ಸದಾ ಸಂತೋಷದಿಂದ, ಐಷರಾಮತೆ ಅನುಭವಿಸುತ್ತಿದ್ದಾರೆ ಎಂದರೆ ಇದರಲ್ಲಿ ಅವರ ಅಪರಾಧವೇನೂ ಇಲ್ಲ.

ಪವಿತ್ರನಾದ ಭಕ್ತನು ಯಾವುದಕ್ಕೂ ಯಾವ ಸಂದರ್ಭಕ್ಕೂ ಭಯಪಡದೆ ಸದಾ ನಿರ್ಭೀತನಾಗಿರುತ್ತಾನೆ. ಬದ್ಧಾತ್ಮರು ಬಾಹ್ಯಶಕ್ತಿಯಾದ ಪ್ರಕೃತಿಯ ಗುಣಗಳಿಂದ ಪ್ರಭಾವಿತರಾಗಿರುತ್ತಾರೆ. ಅದು ಕೇವಲ ಭಗವಂತನಿಂದ ಬೇರ್ಪಟ್ಟ ಬಾಹ್ಯಶಕ್ತಿ. ಬದ್ಧಾತ್ಮನು ಈ ಪ್ರಕೃತಿಯ ಶಕ್ತಿಗೆ ಸಿಲುಕಿ ಭಗವಂತನನ್ನೇ ಮರೆತು ಅವನಿಗೆ ವ್ಯತಿರಿಕ್ತವಾಗಿ ಆಲೋಚಿಸುತ್ತಾನೆ.

ಹೀಗಾಗಿಯೇ ಅವನಿಗೆ ಈ ಕ್ಷಣ, ಮುಂದೊಂದು ಕ್ಷಣದಲ್ಲಿ ಏನಾಗುತ್ತದೋ ಎಂಬ ಸದಾ ಆತಂಕದ ಸ್ಥಿತಿಯಲ್ಲಿರುತ್ತಾನೆ. ಭಕ್ತನಾದವನು ಸದಾಕಾಲ ನಿರ್ಭೀತಿಯಾಗಿರುತ್ತಾನೆ. ಕಾರಣವೇನೆಂದರೆ – ಈ ಜಗತ್ತಿನಲ್ಲಿ ಏನೇ ಆಗಲಿ, ಸಂಭವಿಸಲಿ ಅದು ಭಗವಂತನ ನೇರ ಅಥವಾ ಪರೋಕ್ಷ ಇಚ್ಛೆಯಿಂದಲೇ ಸಂಭವಿಸುತ್ತಿರುತ್ತದೆ.

ಅಂತಹ ಕ್ಷಣದಲ್ಲೂ ಭಕ್ತನು ಎಲ್ಲವನ್ನು ಸಮತ್ವ ದೃಷ್ಟಿಯಿಂದ ಕಾಣುತ್ತಿರುತ್ತಾನೆ. ಆದ್ದರಿಂದ ಅವನಿಗೆ ಭಯದ ಮಾತೇ ಇಲ್ಲ. ಎಂತಹ ಕಠಿಣ ಸಂದರ್ಭ ಬಂದರೂ ಅದು ಭಗವಂತನ ಇಚ್ಛೆ ಅವನ ಅನುಗ್ರಹವೆಂದೇ ಭಕ್ತನು ತಿಳಿದುಕೊಂಡಿರುತ್ತಾನೆ.

ಪ್ರಹ್ಲಾದ ಮಹಾರಾಜನಿಗೆ ಅವನ ತಂದೆ ಹಿರಣ್ಯಕಶಿಪು ಅನೇಕ ರೀತಿಯ ತೊಂದರೆಗಳನ್ನು ಶಿಕ್ಷೆಗಳನ್ನು ಕೊಟ್ಟರೂ ಭಗವಂತನ ಒಂದು ಸ್ಮರಣೆಯಿಂದ ಈ ಎಲ್ಲ ಕಷ್ಟಗಳನ್ನು ಎದುರಿಸಿ ನಿರ್ಭೀತದಿಂದ ಇದ್ದನು. ಯಾವಾಗ ಭಕ್ತ ಭಗವಂತನ ಸೇವೆಯಲ್ಲಿ ತೊಡಗಿರುತ್ತಾನೋ ಅವನಿಗೆ ಯಾವುದೇ ಭಯವಿರುವುದಿಲ್ಲ. ಅವನು ಸ್ವರ್ಗ ಮತ್ತು ನರಕ ಎರಡನ್ನೂ ಸಮಾನವಾಗಿ ಕಾಣುತ್ತಾನೆ.

ಶುದ್ಧಭಕ್ತನಿಗೆ ಅಸೂಯೆಪಡಲು ಕಾರಣವೇ ಇಲ್ಲ. ಏಕೆಂದರೆ ಎಲ್ಲವೂ ಭಗವಂತನೇ ಎಂದು ಅವನು ತಿಳಿದುಕೊಂಡಿರುತ್ತಾನೆ. ಭಗವದ್ಗೀತೆಯಲ್ಲಿ ಹೇಳುವಂತೆ ಭಕ್ತಿಸೇವೆಗೆ ಮುಂಚಿತವಾಗಿಯೇ ಒಬ್ಬ ಭಕ್ತನಾದವನು ಪರಮ ಆಧ್ಯಾತ್ಮ ಅಥವಾ ಬ್ರಹ್ಮನ ಗುಣಗಳಿಂದ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೋ ಅಂತಹ ಭಕ್ತನು ಸದಾ ಮುಕ್ತಾತ್ಮನಾಗಿರುತ್ತಾನೆ. ಅಂತಹ ಒಂದು ಸ್ಥಿತಿಯಲ್ಲಿ ಅವನು ಶೋಕಿಸುವುದಿಲ್ಲ ಮತ್ತು ಯಾವುದಕ್ಕೂ ಅಸೂಯೆಪಡುವುದಿಲ್ಲ.

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ |

ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ (18.54)

ನ ಪ್ರಹೃಷ್ಯೇತ್‌ ಪ್ರಿಯಂ ಪ್ರಾಪ್ಯನೋ ದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ |

ಸ್ಥಿರಬುದ್ಧಿ ರಸಮ್ಮೂಢೋ ಬ್ರಹ್ಮವಿದ್‌ ಬ್ರಹ್ಮಣಿ ಸ್ಥಿತಃ ||  (5.20)

ಯಂ ಹಿ ನ ವ್ಯಥಯನ್ತೈತೇ ಪುರುಷಂ ಪುರುಷರ್ಷಭ |

ಸಮದುಃಖ ಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ || (2.15)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi