ಕುರುಕ್ಷೇತ್ರದ ಯುದ್ಧವು ಮುಗಿದ ತರುವಾಯ ಪ್ರಭುವು ನುಡಿದನು : “ದ್ರೋಣ, ಭೀಷ್ಮ ಅರ್ಜುನ ಹಾಗೂ ಭೀಮನ ಸಹಾಯದಿಂದ ಹದಿನೆಂಟು ಅಕ್ಷೌಹಿಣಿಗಳಷ್ಟು ಭೂಭಾರವನ್ನು ಇಳಿಸುವ ಕಾರ್ಯವನ್ನು ಪೂರೈಸಿದ್ದಾಯಿತು. ಆದರೆ ಇದೇನಾಶ್ಚರ್ಯ? ನನ್ನಿಂದ ಹುಟ್ಟಿದ ಯದುವಂಶದ ಭಾರ ಇನ್ನೂ ಹಾಗೇ ಇದೆಯಲ್ಲ! ಇದು ಖಂಡಿತ ಜನರು ಸಹಿಸಲಾಗದ ಭಾರವೇ ಆಗುತ್ತದೆ.

ಈ ಯದುವಂಶದವರು ಪಾನಮತ್ತರಾಗಿ ತಮ್ಮ ತಮ್ಮಲ್ಲೇ ಜಗಳದಲ್ಲಿ ತೊಡಗಿದಾಗ ಮಾತ್ರ ಇವರು ಇಲ್ಲವಾಗುತ್ತಾರೆ. ಘರ್ಷಣೆಗೆ ನಿಂತಾಗ ಮಧುಪಾನಮತ್ತರಾದ ಇವರ ಕಣ್ಣುಗಳು ತಾಮ್ರದಂತೆ ಕೆಂಪಗಿರುತ್ತದೆ. ಆಗ ಇವರು ಹೊಡೆದಾಡುತ್ತಾರೆ. ಹೀಗಾದಲ್ಲದೆ ಇವರ ಅಳಿವು ಸಾಧ್ಯವಿಲ್ಲ. ನಾನು ಈ ಜಗತ್ತನ್ನು ಬಿಟ್ಟುಹೋದಾಗ ಈ ಪ್ರಸಂಗವು ನಡೆಯುತ್ತದೆ.”
ಭಗವಾನ್ ಶ್ರೀಕೃಷ್ಣನು ತನ್ನೊಳಗೇ ಹೀಗೆ ಆಲೋಚಿಸುತ್ತಾ ಧರ್ಮ ಮಾರ್ಗದಲ್ಲಿ ರಾಜ್ಯ ಆಳುವ ಆದರ್ಶವನ್ನು ಜನರಿಗೆ ತೋರಲೆಂಬ ಉದ್ದೇಶದಿಂದ ಮಹಾರಾಜ ಯುಧಿಷ್ಠರನನ್ನು ಜಗತ್ತಿನ ಪರಮಾಧಿಕಾರಿಯ ಸ್ಥಾನದಲ್ಲಿ ಕುಳ್ಳಿರಿಸಿದನು. ವೀರಾಗ್ರಣಿ ಅಭಿಮನ್ಯುವಿನ ಪತ್ನಿ ಉತ್ತರೆ. ಆಕೆಯ ಗರ್ಭದಲ್ಲಿದ್ದ ಪುರುಸಂತತಿಯ ಕುಡಿಯನ್ನು ದ್ರೋಣನ ಮಗನು ಸುಟ್ಟು ನಾಶಪಡಿಸಿದನು.
ಆದರೆ ಮುಂದೆ ಅವನನ್ನು ಪ್ರಭುವೇ ರಕ್ಷಿಸಿದನು. ಮೂರು ಅಶ್ವಮೇಧ ಯಾಗಗಳನ್ನು ಮಾಡುವಂತೆ ಧರ್ಮಪುತ್ರನ ಮನಸ್ಸನ್ನು ಪರಮ ಪ್ರಭುವು ಪ್ರೇರೇಪಿಸಿದನು. ಸತತವಾಗಿ ದೇವೋತ್ತಮ ಪುರುಷನು ಹೇಳಿದಂತೆ ಕೇಳಿಯೇ ನಡೆಯುತ್ತಿದ್ದ ಮಹಾರಾಜ ಯುಧಿಷ್ಠರನು ತನ್ನ ತಮ್ಮ೦ದಿರ ಸಹಾಯದಿಂದ ಜಗತ್ತನ್ನು ಸಂರಕ್ಷಿಸಿದನು; ರಾಜ್ಯಭಾರ ನಡೆಸುತ್ತ ಸುಖಪಟ್ಟನು.
ಅದೇ ಹೊತ್ತಿನಲ್ಲಿ ಸಮಾಜದ ರೂಢಿಯಂತೆ ವೈದಿಕ ಸಂಪ್ರದಾಯಗಳನ್ನು ಪಾಲಿಸುತ್ತಾ ದೇವೋತ್ತಮ ಪುರುಷನು ದ್ವಾರಕೆಯಲ್ಲಿ ಸುಖದಿಂದಿದ್ದನು. ಸಾಂಖ್ಯ ದರ್ಶನವೆಂಬ ಸಮಾಜ ಹಿತಚಿಂತಕ ತತ್ತ್ವದಲ್ಲಿ ಹೇಳಿರುವ ಹಾಗೆ ಭಗವಂತನು ವಿರಕ್ತಿ ಹಾಗೂ ಜ್ಞಾನಗಳ ನೆಲೆಯಲ್ಲಿ ಸ್ಥಾಪಿತನಾಗಿದ್ದನು.
ಭಗವಂತನು ದ್ವಾರಕೆಯಲ್ಲಿ ಐಶ್ವರ್ಯದೇವತೆಯ ಗೃಹದಲ್ಲಿ ಲೋಕವನ್ನು ಮೀರಿದ ತನ್ನ ದೇಹರೂಪ ಧರಿಸಿ ವಾಸಿಸುತ್ತಿದ್ದ. ತನ್ನ ಎಂದಿನ ನಗುಮುಖದಿಂದಲೂ, ಮಧು ಸದೃಶ ಮಾತುಗಳಿಂದಲೂ ಹಾಗೂ ಕಳಂಕರಹಿತ ನಡವಳಿಕೆಯಿಂದಲೂ ಪ್ರಭುವು ಶೋಭಿಸುತ್ತಿದ್ದನು. ಹೀಗೆ ಈ ಲೋಕದಲ್ಲೂ ಇತರ ಲೋಕಗಳಲ್ಲೂ (ಮೇಲಿನ ಗ್ರಹಲೋಕಗಳು) ಪ್ರಭುವು, ವಿಶೇಷವಾಗಿ ಯದುವಂಶಜರ ಜೊತೆ ಇದ್ದು ಲೀಲೆಗಳನ್ನು ಅನುಭವಿಸಿಕೊಂಡಿದ್ದನು.
ಈ ರೀತಿ ಪ್ರಭುವು ಗೃಹಸ್ಥನಂತೆ ಅನೇಕಾನೇಕ ವರ್ಷಗಳ ಕಾಲ ಬಾಳಿದನು. ಆದರೆ ಕೊನೆಯಲ್ಲಿ ಕ್ಷಣಿಕವಾದ ಲೈಂಗಿಕ ಬದುಕಿನಲ್ಲಿ ಅವನ ವಿರಕ್ತಿಯು ಪೂರ್ಣವಾಗಿ ಪ್ರಕಟಗೊಂಡಿತು. ಪ್ರತಿಯೊಬ್ಬ ಜೀವಿಯನ್ನೂ ಒಂದು ಅಲೌಕಿಕ ಶಕ್ತಿಯು ನಿಯಂತ್ರಿಸುತ್ತದೆ. ಹಾಗೆಯೇ ಅವನ ಇಂದ್ರಿಯ ಭೋಗವು ಕೂಡ ಪ್ರಕೃತಿಯನ್ನು ಮೀರಿದ ಆ ಅಗೋಚರ ಶಕ್ತಿಯ ಕೈಯಲ್ಲಿಯೇ ಇದೆ.

ಆದ್ದರಿಂದ ಭಕ್ತಿಸೇವೆ ಮಾಡುವುದರ ಮೂಲಕ ಪ್ರಭುವಿನ ಭಕ್ತನಾಗಿರುವವನನ್ನು ವಿನಾಯಿಸಿ ಬೇರೆ ಯಾರೂ ಭಗವಾನ್ ಕೃಷ್ಣನ ಲೋಕಾತೀತ ಇಂದ್ರಿಯಭೋಗದಲ್ಲಿ ಶ್ರದ್ಧೆ ತೋರಲಾರನು.
ಒಂದಾನೊಂದು ಕಾಲದಲ್ಲಿ ಯದು ಹಾಗೂ ಭೋಜ ವಂಶಗಳಿಗೆ ಸೇರಿದ ರಾಜಪುತ್ರರು ತಮ್ಮ ವಿಹಾರ ಕ್ರೀಡೆಗಳಿಂದ ಮಹಾನ್ ಮುನಿವರ್ಯರಿಗೆ ಕೋಪ ಬರುವಂತೆ ಮಾಡಿದರು. ಇದರಿಂದಾಗಿ, ಪ್ರಭುವಿನ ಅಪೇಕ್ಷೆಯಂತೆ ಮುನಿಗಳು ರಾಜಪುತ್ರರನ್ನು ಶಪಿಸಿದರು. ಕೆಲವು ತಿಂಗಳುಗಳು ಕಳೆದವು.
ಬಳಿಕ ಕೃಷ್ಣನಿಂದ ದಿಗ್ಭ್ರಮಿತರಾಗಿ ವೃಷ್ಣ ಭೋಜ ಹಾಗೂ ಅಂಧಕರ ವಂಶಸ್ಥರು – ಇವರೆಲ್ಲಾ ದೇವತೆಗಳ ಅವತಾರಗಳು – ಪ್ರಭಾಸಕ್ಕೆ ಹೋದರು. ಇರುತ್ತ, ಪ್ರಭುವಿನ ನಿರಂತರ ಭಕ್ತರು ಎಲ್ಲಿಗೂ ಹೋಗದೆ ದ್ವಾರಕೆಯಲ್ಲುಳಿದರು. ಪ್ರಭಾಸಕ್ಕೆ ಬಂದ ಭೋಜ ಮತ್ತಿತರ ವಂಶಗಳವರು ಅಲ್ಲಿ ಸ್ನಾನಮಾಡಿ ಆ ಪವಿತ್ರಕ್ಷೇತ್ರದ ನೀರಿನಿಂದ ತಮ್ಮ ಪಿತೃಗಳಿಗೆ, ದೇವತೆಗಳಿಗೆ ಹಾಗೂ ಮಹಾನ್ ಮುನಿವರ್ಯರಿಗೆ ಜಲತರ್ಪಣ ನೀಡಿ ಅವರನ್ನೆಲ್ಲಾ ತೃಪ್ತಿಪಡಿಸಿದರು.
ಬ್ರಾಹ್ಮಣರಿಗೆ ರಾಜೋಚಿತವಾದ ಗೋವುಗಳನ್ನು ದಾನಮಾಡಿದರು. ಅಷ್ಟೇ ಅಲ್ಲದೆ ಬಂಗಾರ, ಬಂಗಾರದ ನಾಣ್ಯಗಳು, ಹಾಸಿಗೆ, ವಸ್ತ್ರಗಳು, ಕೃಷ್ಣಾಜಿನ, ಹೊದಿಕೆಗಳು, ಅಶ್ವಗಳು, ಆನೆಗಳು, ದಾಸಿಯರು ಹಾಗೂ ಜೀವನಕ್ಕೆ ಮಾರ್ಗವಾಗಲು ಹೇರಳ ಜಮೀನು ಇವನ್ನೆಲ್ಲಾ ದಾನರೂಪದಲ್ಲಿ ಬ್ರಾಹ್ಮಣರಿಗೆ ಕೊಟ್ಟರು. ತರುವಾಯ ಆ ರಾಜವಂಶದವರು ದೇವೋತ್ತಮ ಪುರುಷನಿಗೆ ಮೊದಲು ಅರ್ಪಿಸಿದ ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ಬ್ರಾಹ್ಮಣರಿಗರ್ಪಿಸಿ ಗೌರವದಿಂದ ಶ್ರೇಷ್ಠಪುರುಷರಾಗಿ ಬಾಳಿದರು.
ತರುವಾಯ ವೃಷ್ಣಿ ಹಾಗೂ ಭೋಜ ಸಂತತಿಯವರು ಬ್ರಾಹ್ಮಣರಿಂದ ಅಪ್ಪಣೆ ಪಡೆದು ಪ್ರಸಾದವನ್ನು ಸ್ವೀಕರಿಸಿದರಲ್ಲದೆ ಅಕ್ಕಿಯಿಂದ ಮಾಡಿದ ಮದ್ಯವನ್ನು ಸ್ವೀಕರಿಸಿದರು. ಮದ್ಯಪಾನ ಮಾಡಿದ್ದರಿಂದಾಗಿ ಅವರೆಲ್ಲ ಹುಚ್ಚುಹುಚ್ಚಾಗಿ ಮಾತನಾಡಲು ಪ್ರಾರಂಭಿಸಿದರು. ಮೈಮೇಲಿನ ಎಚ್ಚರವನ್ನು ಕಳೆದುಕೊಂಡಿದ್ದ ವೃಷ್ಣಿ ಹಾಗೂ ಭೋಜ ವಂಶಗಳವರು ಹೃದಯವನ್ನು ಇರಿಯುವಂತಹ ಕೆಟ್ಟ ಮಾತುಗಳಿಂದ ಪರಸ್ಪರರನ್ನು ಬೈದಾಡಿದರು.
ಬಿದುರಿನ ಗಳಗಳು ಒಂದನ್ನೊಂದು ಉಜ್ಜಿ ಆ ಘರ್ಷಣೆಯಿಂದ ದೊಡ್ಡ ಬೆಂಕಿಯೇ ಆಗುವಂತೆ ಸೂರ್ಯಾಸ್ತದ ಹೊತ್ತಿಗೆ ಮದ್ಯಪಾನದ ಅಮಲಿನಿಂದಾಗಿ ಆ ರಾಜವಂಶಗಳವರ ಮನಸ್ಸುಗಳು ಸ್ಥಿಮಿತ ಕಳೆದುಕೊಂಡಿದ್ದವು. ಬಳಿಕ ಎಲ್ಲರ ನಾಶವೂ ಆಯಿತು. ದೇವೋತ್ತಮ ಪುರುಷನಾದ ಶ್ರೀಕೃಷ್ಣನು ತನ್ನ ಕುಟುಂಬದ ನಾಶವನ್ನು ಅಂತರಂಗ ಶಕ್ತಿಯಿಂದ ಕಂಡುಕೊಂಡು ಸರಸ್ವತೀ ನದಿಯ ತೀರಕ್ಕೆ ಹೋಗಿ ಸ್ವಲ್ಪ ನೀರು ಕುಡಿದು ಒಂದು ಮರದಡಿ ಕುಳಿತನು.






Leave a Reply