ಧರ್ಮ – ಜೀವನದ ನಿಜ ಧ್ಯೇಯ

ಶ್ರೀಲ ಪ್ರಭುಪಾದರ ಉಪನ್ಯಾಸ, ಸ್ಥಳ: ಲಂಡನ್, ದಿನಾಂಕ 15ನೇ ಆಗಸ್ಟ್ 1971

ಪ್ರದ್ಯುಮ್ನ: ಧರ್ಮದಲ್ಲಿ ನಾಲ್ಕು ಪ್ರಮುಖ ವಿಷಯಗಳು ಈಗಾಗಲೇ ಸೇರಿವೆ. ಅವುಗಳೆಂದರೆ ಪುಣ್ಯಕಾರ್ಯಗಳು, ಆರ್ಥಿಕ ಚಟುವಟಿಕೆ, ಇಂದ್ರಿಯ ತೃಪ್ತಿ ಮತ್ತು ಕೊನೆಯದಾಗಿ ಈ ಲೌಕಿಕ ಬಂಧನದಿಂದ ಮುಕ್ತಿ (ಭಾಗವತ ತಾತ್ಪರ್ಯ 1.1.2).

ಪ್ರಭುಪಾದ: ಲೌಕಿಕ ಕಟ್ಟುಪಾಡುಗಳಿಂದ ಬಂಧಿತವಾಗಿರುವ ಜೀವನದಿಂದ ಮುಕ್ತಿ ಪಡೆಯುವುದೇ ಜೀವನದ ಪರಮ ಗುರಿ. ಇಲ್ಲಿ ನಾವು ಪ್ರತಿಯೊಂದು ಹೆಜ್ಜೆಯಲ್ಲೂ ಕಟ್ಟುಪಾಡುಗಳಿಂದ ಬಂಧಿತರಾಗಿದ್ದೇವೆ. ಈ ಭೌತಿಕ ಶರೀರದೊಳಗೆ ಸೇರ್ಪಡೆಯಾದ ತತ್‌ಕ್ಷಣ ನಾವು ಕಟ್ಟುಪಾಡುಗಳಿಂದ ಬಂಧಿತರಾಗುತ್ತೇವೆ.

ಇದೊಂದು ರೀತಿ ನಾವು ಇನ್ನೊಂದು ರಾಜ್ಯವನ್ನು ಪ್ರವೇಶಿಸಿದಂತೆ. ಇಲ್ಲಿ ನೋಡಿ, ನಾನು ಭಾರತದಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಕಾಲಿಟ್ಟ ಕ್ಷಣದಿಂದ ನಾನು ಈ ದೇಶದ ವಲಸೆ ನಿಯಮಾವಳಿಗಳಿಂದ ಬಂಧಿತನಾಗಿದ್ದೇನೆ.

ಈ ಭೌತಿಕ ಜಗತ್ತಿನ ವ್ಯವಸ್ಥೆಯೇ ಹೀಗೆ ನೀವೊಂದು ನಿರ್ದಿಷ್ಟ ಶರೀರದೊಳಗೆ ಪ್ರವೇಶಿಸಿದ ತತ್‌ಕ್ಷಣ ಅದರ ಕಟ್ಟುಪಾಡುಗಳಿಗೆ ಒಳಗಾಗುತ್ತೀರಿ. ಈಗ ನೋಡಿ, ನೀವು ಸೇಂಟ್ ಜೇಮ್ಸ್ ಪಾರ್ಕ್‌ನಲ್ಲಿ ನಡೆದುಕೊಂಡು ಬರುತ್ತಿದ್ದೀರಿ. ನಿಮ್ಮನ್ನು ನೋಡುತ್ತಲೇ ಇಲ್ಲಿ ನಡೆದಾಡುತ್ತಿರುವ ಹಂಸಗಳು, ಬಾತುಕೋಳಿಗಳು ಪಕ್ಕದ ಕೊಳಕ್ಕೆ ಜಿಗಿಯುತ್ತವೆ.

ಏಕೆಂದರೆ ನಾವು ನೀರಿನಲ್ಲಿರುವುದೇ ಕ್ಷೇಮ ಎಂಬುದು ಅವುಗಳ ಭಾವನೆ. ಅದೇ ನನ್ನನ್ನು ಎಳೆದು ನೀರಿಗೆಸೆಯಲು ಯಾರಾದರೂ ಯತ್ನಿಸಿದರೆ ನಾನು ಪ್ರತಿಭಟಿಸುತ್ತೇನೆ. ನಾನೂ ಒಂದು ಜೀವಿ; ಆ ಬಾತುಕೋಳಿಯೂ ಒಂದು ಜೀವಿ. ನನಗೆ ನೀರಿಗೆ ಇಳಿಯುವುದಕ್ಕೆ ಭಯ. ಆದರೆ ಅದಕ್ಕೆ ನೀರೇ ಆಸರೆ. ಇಲ್ಲಿ ನೀರು ಒಂದೇ.

ಒಂದು ಜೀವಿಗೆ ನೀರೆಂದರೆ ಭಯ. ಇನ್ನೊಂದಕ್ಕೆ ನೀರೇ ಅಭಯ ಏಕೆ ಹೀಗೆ? ಈ ಕಾರಣಕ್ಕಾಗಿಯೇ ಇದನ್ನು ಲೌಕಿಕ ಜಗತ್ತು ಎನ್ನುವುದು. ಇಲ್ಲಿ ನಾನು ಒಂದು ದೇಹದಲ್ಲಿ ಬಂದಿಯಾಗಿದ್ದೇನೆ. ಬಾತುಕೋಳಿ ಇನ್ನೊಂದು ದೇಹದಲ್ಲಿ ಬಂದಿಯಾಗಿದೆ. ನೋಡಿ, ಇಲ್ಲಿ ಕೆಲವು ಮರಗಳು ಎತ್ತರಕ್ಕೆ ಬೆಳೆದಿವೆ. ಇನ್ನು ಕೆಲವು ಕುಳ್ಳಗಿವೆ.

ಅವುಗಳಿಗೆ ಅಂಥ ಕಟ್ಟುಪಾಡು ಇದೆ. ದೇಹ ಯೋಗೇನ ದೇಹಿನಮ್ – ಹೀಗೆ ನಾವೆಲ್ಲ ವಿಭಿನ್ನ ಸನ್ನಿವೇಶದಲ್ಲಿ, ವಿಭಿನ್ನ ದೇಹದೊಳಗೆ ಬಂದಿಯಾಗಿದ್ದೇವೆ. ಮೋಕ್ಷ ಎಂದರೆ ಇಂಥ ಎಲ್ಲ ಕಟ್ಟುಪಾಡು, ನಿಬಂಧನೆಗಳಿಂದ ಮುಕ್ತರಾಗುವುದು, ಕೃಷ್ಣನಂತೆ. ಅವನಿಗೆ ಯಾವುದೇ ಬಂಧನಗಳಿಲ್ಲ, ಅದೇ ಮೋಕ್ಷ ನಾವೂ ಕೂಡ ಕೃಷ್ಣನ ಅಂಶಗಳೇ.

ಆದ್ದರಿಂದ ನಾರದರಂತೆ ನಾವೂ ಈ ಎಲ್ಲ ಬಂಧನಗಳಿಂದ ಮುಕ್ತರಾಗಬಹುದು. ನಾರದರು ಎಲ್ಲ ಬಂಧನಗಳಿಂದ ಮುಕ್ತರಾಗಿದ್ದಾರೆ. ಹೀಗಾಗಿ ಅವರು ತಮಗಿಷ್ಟ ಬಂದಂತೆ ಆಕಾಶದಲ್ಲಿ ತೇಲುತ್ತಾರೆ. ಆದರೆ ನಾವು ಅವರಂತೆ ಮುಕ್ತರಲ್ಲವಾದ್ದರಿಂದ ನಮಗೆ ವಿಮಾನ ಅಥವಾ ಅಂಥದ್ದೇ ಯಂತ್ರದ ಸಹಾಯವಿಲ್ಲದೇ ಹಾಗೆ ತೇಲುವುದು ಸಾಧ್ಯವಿಲ್ಲ ಈ ಐಹಿಕ ಜಗತ್ತಿನಲ್ಲಿ ಎಲ್ಲಿಗೇ ಹೋದರೂ ನೀವು ಇಂಥ ಕಟ್ಟುಪಾಡುಗಳಿಂದ ಬಂಧಿತರಾಗಿರುತ್ತೀರಿ.

ಇದೇ ರೀತಿಯ ಇನ್ನೂ ಅಸಂಖ್ಯಾತ ಬ್ರಹ್ಮಾಂಡಗಳಿವೆ. ಪ್ರತಿಯೊಂದೂ ಜಗತ್ತಿನಲ್ಲೂ ಪ್ರತ್ಯೇಕ ಗ್ರಹಗಳು, ವಾತಾವರಣ ಇದೆ. ಉದಾಹರಣೆಗೆ, ಚಂದ್ರನ ವಾತಾವರಣ ಭೂಮಿಗಿಂತ ಭಿನ್ನವಾಗಿದೆ. ಹಾಗೆಯೇ ಸೂರ್ಯನ ವಾತಾವರಣ ಭೂಮಿ ಮತ್ತು ಚಂದ್ರರಿಗಿಂತ ಬೇರೆ ತೆರನಾಗಿದೆ. ಹೀಗೆ ಪ್ರತಿಯೊಂದು ಗ್ರಹ, ಬ್ರಹ್ಮಾಂಡ ತನ್ನದೇ ಆದ ಭಿನ್ನ ವಾತಾವರಣ ಹೊಂದಿದೆ.

ಶ್ರೀ ಕೃಷ್ಣನ ಸೃಷ್ಟಿಯ ಸೌಂದರ್ಯವದು. ಕೇಶವಾ ತುವಾ ಜಗತ್ ವಿಚಿತ್ರ – ಭಕ್ತಿ ವಿನೋದ ಠಾಕುರರು ಹಾಡುತ್ತಾರೆ; ಕೇಶವಾ… ನನ್ನ ಪ್ರೀತಿಯ ಕೃಷ್ಣ ನಿನ್ನ ಸೃಷ್ಟಿ ಎಷ್ಟೊಂದು ಚಿತ್ರವಿಚಿತ್ರವಾಗಿದೆಯಪ್ಪಾ…! ಅದು ನಿಜ. ಆದರೆ ಈ ಎಲ್ಲ ಬಂಧನಗಳೂ ನಮಗೆ ಅಗತ್ಯವಲ್ಲ. ಆದ್ದರಿಂದಲೇ ಈ ಎಲ್ಲ ಬಂಧನಗಳಿಂದಲೂ ಮುಕ್ತರಾಗಲು ನಾವು ಹೋರಾಡುತ್ತೇವೆ.

ಹೀಗೆ ಮೋಕ್ಷ ಪಡೆಯುವುದೇ ಈ ಜೀವನದ ಪರಮೋಚ್ಚಗುರಿ. ಅದನ್ನೇ ಇಲ್ಲಿ ಹೇಳಿರುವುದು, ಪುಣ್ಯ ಕಾರ್ಯಗಳು, ಆರ್ಥಿಕ ಪ್ರಗತಿ, ಇಂದ್ರಿಯ ತೃಪ್ತಿ ಮತ್ತು ಐಹಿಕ ಬಂಧನದಿಂದ ಮುಕ್ತಿ, ಈ ಪ್ರಮುಖ ಅಂಶಗಳನ್ನು ಧರ್ಮ ಒಳಗೊಂಡಿದೆ.

ಹೀಗೆ ಮೋಕ್ಷವೇ ಜೀವನದ ಮರಮೋಚ್ಚಗುರಿಯಾಗಿರುವಾಗ ನಾವು ಅದರತ್ತಲೇ ಗಮನ ಹರಿಸಬೇಕು. ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕು. ವೈದಿಕ ನಾಗರಿಕತೆ ನಿಂತಿದ್ದೇ ಈ ತತ್ತ್ವದ ಮೇಲೆ. ಇಲ್ಲಿ ಎಲ್ಲರೂ ಬದ್ಧಾತ್ಮಗಳು. ಕಟ್ಟುಪಾಡುಗಳಿಂದ ಬಂಧಿತರಾದವರು ಅಲ್ಲವೇ? ಎಲ್ಲರೂ ಏಕೆ ಹೀಗಾದರು? ಕೃಷ್ಣನ ವಿರುದ್ಧ ಬಂಡಾಯ ಎದ್ದಿದ್ದೇ ಇದಕ್ಕೆ ಕಾರಣ.

ಅವರೆಲ್ಲ ಕೃಷ್ಣನನ್ನು ಅನುಕರಿಸಲು ಪ್ರಯತ್ನಿಸಿದರು. ಎಲ್ಲರ ಮನಃಸ್ಥಿತಿಯೂ ಅದೇ ರೀತಿ ನಿಮಗೂ ಗೊತ್ತಿದೆ, ಬಹಳಷ್ಟು ಜನ ಹೇಳುತ್ತಾರೆ, ‘ನಾನು ದೇವರಿಗೆ ಕೇರ್ ಮಾಡುವುದಿಲ್ಲ, ನಾನು ಯಾವುದಕ್ಕೂ ಹೆದರುವುದಿಲ್ಲ. ಇಷ್ಟಬಂದಿದ್ದನ್ನು ಮಾಡುವ ಸ್ವಾತಂತ್ರ್ಯ ನನಗಿದೆ. ಹಿಪ್ಪಿಗಳೂ ಹಾಗೇ ಹೇಳುತ್ತಾರೆ, ‘ನಾವು ಯಾವುದಕ್ಕೂ ಕೇರ್ ಮಾಡುವುದಿಲ್ಲ.

ರಾಜ್ಯ, ಸರಕಾರ, ಕಾನೂನು, ಕಟ್ಟಳೆ, ಸಂಪ್ರದಾಯ, ಮುಕ್ತಿ ಬೇಕು. ಉತ್ತುಂಗದಲ್ಲಿರಬೇಕು. ಏಕೆಂದರೆ ನಮ್ಮ ಸ್ವರೂಪ ಸ್ಥಿತಿಯೇ ಅಂಥದ್ದು ನಮಗೆ ಪೊಲೀಸ್‌ ಯಾವುದೂ ನಮಗೆ ಲೆಕ್ಕಕ್ಕಿಲ್ಲ…’ ಇದರರ್ಥ ಇಷ್ಟೇ ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಬೇಕು. ಮುಕ್ತಿ ಅಗತ್ಯವಾಗಿ ಬೇಕು.

ಹೀಗಾಗಿ ಎಲ್ಲರೂ ಮುಕ್ತಿಗಾಗಿ ಹೋರಾಡುತ್ತಾರೆ. ಆದರೆ ಮನುಷ್ಯರಿಗಿಂತ ಕೆಳ ಸ್ತರದ ಪ್ರಾಣಿಗಳಲ್ಲಿ ಮೋಕ್ಷದ ಪ್ರಶ್ನೆ ಬರುವುದಿಲ್ಲ 84 ಲಕ್ಷ ಪ್ರಭೇದದ ಜೀವಿಗಳಲ್ಲಿ 80 ಲಕ್ಷಕ್ಕೂ ಹೆಚ್ಚಿನ ಪ್ರಭೇದಗಳಿಗೆ ಮುಕ್ತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಐಹಿಕ ಬಂಧನದಲ್ಲೇ ಜೀವಿಸುವುದು ಅವುಗಳಿಗೆ ಅನಿವಾರ್ಯ. ಪ್ರಕೃತೈ ಕ್ರಿಯಾಮಾಣಾನಿ ಗುಣೈ ಕರ್ಮಾಣಿ ಸರ್ವಶಃ (ಗೀತಾ 3.27). ಈ ಐಹಿಕ ಸುಖಭೋಗಗಳನ್ನು ಅನುಭವಿಸಲು ನೀವಾಗಿಯೇ ಈ ಐಹಿಕ ಶರೀರವನ್ನು ಪಡೆದುಕೊಂಡಿದ್ದೀರಿ.

ಕಠಿಣ ಕಾನೂನು, ಕಟ್ಟುಪಾಡುಗಳ ಮಧ್ಯೆ ಈ ಶರೀರದಿಂದ ಗರಿಷ್ಠ ಸುಖವನ್ನು ನೀವು ಪಡೆಯುತ್ತೀರಿ. ಈ ನಾಗರಿಕ ಮಾನವ ಜೀವನದಲ್ಲಿ ಈಗ ನೀವೆಲ್ಲ ಸಾಕಷ್ಟು ಪ್ರಜ್ಞಾವಂತರಾಗಿದ್ದೀರಿ. ಏಕೆ ಈ ಬಂಧನಗಳು ನಮ್ಮನ್ನು ಸುತ್ತುವರಿದಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗಿದು ಸುವರ್ಣಾವಕಾಶ.

ಏತಕ್ಕಾಗಿ ಈ ನಿರ್ಬಂಧಿತ ಜೀವನ? ನಮಗೇಕೆ ಮುಕ್ತಿ ದೊರೆಯುವುದಿಲ್ಲ? ಎಂಬ ಪ್ರಶ್ನೆಗಳು ಮನುಷ್ಯರಲ್ಲಿ ಮಾತ್ರ ಹುಟ್ಟಬಹುದೇ ಹೊರತು ಪ್ರಾಣಿಗಳಿಗಲ್ಲ. ಆದ್ದರಿಂದ ಇತರೆ ಪ್ರಾಣಿಗಳಿಗೂ ಮಾನವ ಜನ್ಮಕ್ಕೂ ಇರುವ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು. ‘ನಾವೇಕೆ ಈ ಬಂಧನಗಳಿಂದ ಕಟ್ಟಿಹಾಕಲ್ಪಟ್ಟಿದ್ದೇವೆ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಸನಾತನ ಗೋಸ್ವಾಮಿಗಳು ಅದನ್ನೇ ಮಾಡಿದ್ದು. ಶ್ರೀ ಚೈತನ್ಯ ಮಹಾಪ್ರಭುಗಳನ್ನು ಭೇಟಿ ಮಾಡಿದಾಗ ಅವರನ್ನು ಕಾಡಿದ್ದು ಇದೇ ಪ್ರಶ್ನೆ. ಆಗ ಸನಾತನರು ಪ್ರಭಾವಶಾಲಿ ಮಂತ್ರಿಯಾಗಿದ್ದರು. ಶ್ರೀಮಂತಿಕೆ ತುಂಬಿ ತುಳುಕುತ್ತಿತ್ತು. ಅಂಥ ಸನಾತನರು ಚೈತನ್ಯರ ಮುಂದೆ ಇಟ್ಟ ಮೊದಲ ಪ್ರಶ್ನೆ ಇದು; ಓ ನನ್ನ ಗುರು ಚೈತನ್ಯರೇ, ಕೇ ಆಮಿ. ಕೇನೇ ಆಮಾಯ ಜಾರೇ ತಾಪತ್ರಯ? ಅಂದರೆ, ನಾನು ಯಾರು? ನಾನೇಕೆ ಸದಾ ಕಾಲ ಈ ತಾಪತ್ರಯಗಳಿಂದ ಬಳಲುತ್ತಿದ್ದೇನೆ ಎಂಬುದು ಅವರ ಪ್ರಶ್ನೆಯಾಗಿತ್ತು.

ಈಗ ನೋಡಿ. ನಾವೇಕೆ ಫ್ಯಾನ್ ಬಳಸುತ್ತಿದ್ದೇವೆ? ಏಕೆಂದರೆ ನಮಗೆ ಸೆಖೆಯನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ನಾವು ಅಂಥ ಬಂಧನಕ್ಕೊಳಪಟ್ಟಿದ್ದೇವೆ. ಅದೇ ರೀತಿ ಅತಿಯಾದ ಛಳಿಯನ್ನು ತಡೆದುಕೊಳ್ಳುವುದೂ ನಮ್ಮಿಂದಾಗದು. ಆದ್ದರಿಂದಲೇ ಹೊರಗೆ ಪಾರ್ಕ್‌ಗೆ ಹೋಗುವಾಗ ನಾನು ನನ್ನ ದೇಹವನ್ನು ಸಂಪೂರ್ಣವಾಗಿ, ಬೆಚ್ಚಗೆ ಮುಚ್ಚಿಕೊಳ್ಳುತ್ತೇನೆ. ನಮ್ಮ ಮನದಲ್ಲಿ ಈ ಎಲ್ಲ ಪ್ರಶ್ನೆಗಳು ಏಳಬೇಕು.

ನಾನೇಕೆ ಈ ರೀತಿ ಬಂಧಿತನಾಗಿದ್ದೇನೆ? ಕೆಲವೊಮ್ಮೆ ಬೆಚ್ಚಗೆ ಮೈಮುಚ್ಚಿಕೊಳ್ಳುತ್ತೇವೆ. ಮತ್ತೆ ಕೆಲವೊಮ್ಮೆ ಸೆಖೆ ತಾಳಲಾರದೇ ಫ್ಯಾನ್ ಗಾಳಿಯ ಮೊರೆ ಹೋಗುತ್ತೇವೆ. ಹೀಗೇಕೆ ಎಂದು ನಮ್ಮನ್ನೇ ನಾವು ಕೇಳಿಕೊಳ್ಳಬೇಕು.

ಮಾನವ ಜೀವನ ಹೀಗೇ ಸಾಗಬೇಕು. ಅದು ಬಿಟ್ಟು ಪ್ರಾಣಿಗಳಂತೆ ತಿನ್ನುವುದು ಹೇಗೆ, ಮಲಗುವುದು ಹೇಗೆ, ನಿದ್ರಿಸುವುದು ಹೇಗೆ, ಲೈಂಗಿಕ ಸುಖ ಅನುಭವಿಸುವುದು ಹೇಗೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಲ್ಲ ಶಾಸ್ತ್ರಗಳ ಪ್ರಕಾರ ಈ ಎಲ್ಲ ಸುಖಗಳು ನಮಗೆ ಹಾಗೆ ದೊರಕುತ್ತವೆ. ಅದರ ಬಗ್ಗೆ ಚಿಂತೆ ಬೇಡ.

ಸೇಂಟ್ ಜೇಮ್ಸ್ ಪಾರ್ಕ್‌ನಲ್ಲಿರುವ ಬಾತುಕೋಳಿಗಳನ್ನು ನೋಡಿ. ಅವುಗಳಿಗೆ ಚಿಂತೆಯೇ ಇಲ್ಲ. ಅವುಗಳ ಆಹಾರ ತಾನಾಗಿಯೇ ಸಿದ್ಧವಾಗಿರುತ್ತದೆ. ಲೈಂಗಿಕ ಸುಖವೂ ಅಷ್ಟೇ ಹೆಚ್ಚು ಕಷ್ಟವಿಲ್ಲದೇ ದೊರೆಯುತ್ತದೆ. ಅವು ಕಚೇರಿಗೆ, ಕಾರ್ಖಾನೆಗೆ ಕೆಲಸಕ್ಕೆ ಹೋಗುವುದಿಲ್ಲ. ಹಾಗಿದ್ದೂ ಅವು ಬದುಕುತ್ತಿವೆ.

ಚಿಕ್ಕ ಮರಿಯಿಂದ ಹಿಡಿದು ಪ್ರತಿಯೊಂದು ಬಾತುಕೋಳಿಗೂ ಅದಕ್ಕೆ ಬೇಕಾದ ಸೌಲಭ್ಯಗಳೆಲ್ಲವೂ ಅಲ್ಲಿ ಸಿದ್ಧವಾಗಿವೆ. ಅವು ತಮಗೆ ಬೇಕಾದ್ದನ್ನು ಖರೀದಿಸಲು ಡೌನಿಂಗ್‌ ಸ್ಟ್ರೀಟ್‌ಗೆ ಹೋಗಬೇಕಾಗಿಲ್ಲ! ಇದು ಪ್ರಕೃತಿಯ ನಿಯಮ. ಆ ಜೀವಿಗಳಿಗೆ ಅವುಗಳ ಜೀವನ ಮಟ್ಟಕ್ಕನುಗುಣವಾಗಿ, ಅವುಗಳ ಸ್ಥಾನಮಾನಗಳಿಗನುಗುಣವಾಗಿ ಬೇಕಾದ್ದೆಲ್ಲವನ್ನೂ ಪ್ರಕೃತಿಯೇ ಸಿದ್ಧಪಡಿಸಿಟ್ಟಿದೆ.

ಹೀಗೆ ಬಾತುಕೋಳಿ ಅಥವಾ ಹಂಸಗಳಿಗೆ ಜೀವನದ ಅಗತ್ಯಗಳೆಲ್ಲ ತಾನಾಗಿಯೇ ಸಿಗುತ್ತವೆ. ಹಾಗಾದರೆ ನಮಗೇಕೆ ಹಾಗೆ ಬೇಕಾದ್ದೆಲ್ಲಾ ತಾನಾಗಿಯೇ ಸಿಗುವುದಿಲ್ಲ? ನಾವು ಅತ್ಯಂತ ಅಭಿವೃದ್ಧಿ ಹೊಂದಿದ, ಬುದ್ಧಿವಂತರಾದ ಮಾನವ ಜೀವಿಗಳು. ಹೀಗಿದ್ದೂ ನಾವೇಕೆ ಇಷ್ಟೊಂದು ಕಷ್ಟಪಡಬೇಕು? ಬೇಕಾದ್ದನ್ನು ಗಳಿಸುವುದಕ್ಕಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು? ಇದನ್ನೆ ಮಾಯೆ ಎನ್ನುವುದು.

ಬಾತು ಕೋಳಿಗಳಿಗೆ ಅಗತ್ಯವಾದುದೆಲ್ಲವೂ ಸಿದ್ಧವಾಗಿರುವಂತೆ ನಮಗೆ ಬೇಕಾದ್ದೆಲ್ಲವೂ ಅಲ್ಲಿದೆ. ನಾವು ಅನಗತ್ಯವಾಗಿ ಇಷ್ಟೆಲ್ಲ ಕಷ್ಟಪಡಬೇಕಿಲ್ಲ ಎ೦ಬುದನ್ನು ನಿಜವಾಗಿಯೂ ಪ್ರಜ್ಞಾವಂತನಾದವನು ಅರ್ಥಮಾಡಿಕೊಳ್ಳತ್ತಾನೆ. ಇದು ವಾಸ್ತವ.

ತಸ್ಯೈವ ಹೇತೌ ಪ್ರವತೇತ ಕೋವಿದೋ

ಲಭ್ಯತೇ ಯದ್‌ ಭ್ರಮತಾಮ್ ಉಪನ್ ಅಧೌ|

ತಲ್ ಲಭ್ಯತೇ ದುಃಖವದ್ ಅನ್ಯತೌ ಸುಖಾ

ಕಾಲೇನ ಸರ್ವತ್ರ ಗಭೇರ-ರಹಸಾ (ಭಾಗವತ 1.5.18)

ಕಾಲದ ಪ್ರವಾಹದಲ್ಲಿ ಇನ್ನು ಕೆಲವೇ ಸಮಯದಲ್ಲಿ ನಿಮಗೆ ಬೇಕಾದ್ದೆಲ್ಲವೂ ತಾನಾಗಿಯೇ ಒಲಿದು ಬರುತ್ತದೆ. ನೋಡಿ, ನಾನು ಚಿಕ್ಕವನಿದ್ದಾಗ ಲಂಡನ್ ನಗರದ ಬಗ್ಗೆ ಬಹಳಷ್ಟು ಕೇಳಿದ್ದೆ. ನನಗೂ ಆ ಮಹಾ ನಗರವನ್ನು ನೋಡಬೇಕೆಂಬ ಆಸೆಯಾಗಿತ್ತು. ‘ನಾನು ಲಂಡನ್‌ ಗೆ ಹೋಗುವುದು ಯಾವಾಗ?” ಎಂದು ಮನದಲ್ಲೇ ಕರುಬಿದ್ದೆ. ಕಾಲ ಚಕ್ರ ಉರುಳಿತು.

ಈಗ ನೋಡಿ, ಅಂದು ನಾನು ಯಾವ ಲಂಡನ್ ನಗರವನ್ನು ನೋಡಬೇಕೆಂದು ಆಸೆಪಟ್ಟಿದ್ದೆನೋ ಅದೇ ನಗರದಲ್ಲಿ ನಡೆದಾಡುತ್ತಿದ್ದೇನೆ. ಹೀಗೆ ನಿಮಗೆ ಅಗತ್ಯವಾದುದೆಲ್ಲವನ್ನೂ ಕೃಷ್ಣನೇ ಪೂರೈಸುತ್ತಾನೆ. ಅದಕ್ಕಾಗಿ ಚಿಂತೆ ಬೇಡ. ಆದ್ದರಿಂದ ಕೃಷ್ಣ ಪ್ರಜ್ಞೆ ಬೆಳೆಸಿಕೊಳ್ಳುವುದು ಹೇಗೆ ಎಂಬುದೇ ನಮ್ಮ ಮುಖ್ಯ ಚಿಂತನೆಯಾಗಬೇಕು. ಉಳಿದ ವಿಷಯಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಆಹಾರ- ನಿದ್ರಾ-ಭಯ-ಮೈಥುನ ಚ – ಆಹಾರ, ನಿದ್ರೆ, ಭಯ, ಲೈಂಗಿಕ ಸುಖ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬಾರದು.

ಇವೆಲ್ಲವೂ ಇದ್ದಿದ್ದೇ. ಇವು ನಮಗೆ ಅವಶ್ಯವೇ ಆದರೂ, ಅವೂ ಕೂಡ ಧರ್ಮಾಧಾರಿತವಾಗಿಯೇ ಇರಬೇಕು. ಧರ್ಮ ಎಂದರೆ ಉತ್ತಮ ನಡವಳಿಕೆ, ಅಥವಾ ಒಂದು ನೈತಿಕ ಚೌಕಟ್ಟು ನಾವು ಅದಕ್ಕೆ ಬದ್ಧರಾಗಿರಬೇಕು. ಉತ್ತಮ ನಾಗರಿಕರು ಹೇಗೆ ಆ ರಾಜ್ಯದ ಕಾನೂನು-ಕಟ್ಟಳೆಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಾರೋ ಹಾಗೆ ನಾವು ನಡೆದುಕೊಳ್ಳಬೇಕು.

ಆದ್ದರಿಂದ ಧರ್ಮ ಎಲ್ಲಕ್ಕಿಂತ ಮೊದಲು. ಅಂದರೆ ನಾವು ಮೊದಲು ದೇವ ಪ್ರಜ್ಞೆಗಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಮಾನವ ಸಮಾಜದ ಮೊದಲ ಕರ್ತವ್ಯ ಇದು. ಆದರೆ ಜನ ಈಗ ಧರ್ಮವನ್ನೇ ತಿರಸ್ಕರಿಸಿದ್ದಾರೆ. ಎಲ್ಲರೂ ಧರ್ಮನಿರಪೇಕ್ಷರಾಗುತ್ತಿದ್ದಾರೆ. ಧರ್ಮ ನಿರಪೇಕ್ಷತೆ ಅಥವಾ ಸರಳವಾಗಿ ಹೇಳಬೇಕೆಂದರೆ ಜಾತ್ಯತೀತವಾದ, ಹಾಗೆಂದರೇನು? ಅಂದರೆ ಯಾವುದೇ ಧರ್ಮಕ್ಕೆ, ಧಾರ್ಮಿಕ ಆಚರಣೆಗಳಿಗೆ ಬೆಲೆ ಕೊಡದೇ ಇರುವುದು.

ಅವುಗಳನ್ನು ನಿರ್ಲಕ್ಷಿಸುವುದು. ಹಗಲು ರಾತ್ರಿ ಆರ್ಥಿಕ ಬೆಳವಣಿಗೆಗೋಸ್ಕರ ಹೆಣಗಾಡುವುದು. ಇದು ಆಧುನಿಕ ನಾಗರಿಕತೆ. ತಪ್ಪು, ಇದು ಸಮಾಜವನ್ನು ಹಾದಿ ತಪ್ಪಿಸುವಂಥದ್ದು. ಪ್ರಹ್ಲಾದ ಮಹಾರಾಜ ಹೇಳಿದಂತೆ, ಕೌಮಾರಂ ಆಚರೇತ್ ಪ್ರಜ್ಞೋ ಧರ್ಮಾನ್ ಭಗವತಾನ್ ಇಹ – (ಭಾಗವತ 7.6.1) ಜೀವನದ ಆರಂಭಿಕ ಹಂತದಿಂದಲೇ ಮಕ್ಕಳಲ್ಲಿ ಧರ್ಮ ಪ್ರಜ್ಞೆ ಮೂಡಿಸಬೇಕು.

ಆಗ ಪ್ರಹ್ಲಾದ ಕೇವಲ ಐದು ವರ್ಷದ ಬಾಲಕನಾಗಿದ್ದ. ಆತ ತನ್ನ ಸಹಪಾಠಿಗಳಿಗೆ ಪಾಠ ಹೇಳುತ್ತಿದ್ದ. ವೈಷ್ಣವ ಧರ್ಮ ಎಂದರೆ ಇದು. ಕೇವಲ ಐದು ವರ್ಷದ ಮಗು, ನಮ್ಮ ಸರಸ್ವತಿ ಶ್ಯಾಮಸುಂದರನ ಮಗಳಷ್ಟೇ ವಯಸ್ಸು.. ಅವಳಿಗೂ ಪಾಠ ಮಾಡುವ ಶಕ್ತಿ ಇದೆ. ಕೆಲವೊಮ್ಮೆ ಅವಳು ಕೇಳುತ್ತಾಳೆ, `ಕೃಷ್ಣ ಅಂದರೆ ಯಾರು ಗೊತ್ತಾ?’ ಯಾರಾದರೂ ‘ಗೊತ್ತಿಲ್ಲ’ ಎಂದರೆ, ‘ದೇವೋತ್ತಮ ಪರಮಪುರುಷ’ ಎನ್ನುತ್ತಾಳೆ.

ನೋಡಿ, ಇದು ಸ್ವಾಭಾವಿಕವಾದುದು. ಇಲ್ಲಿ ಪ್ರತಿಯೊಬ್ಬರಿಗೂ ನಾವು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲಿ ನೋಡಿ, ಈ ಚಿಕ್ಕ ಮಗುವಿಗೆ ಕೃಷ್ಣ ಪ್ರಜ್ಞಾ ಆಂದೋಲನದವರ ಜತೆ ಬದುಕುವ ಅವಕಾಶ ದೊರೆತಿದೆ. ಆಕೆ ಅದನ್ನೇ ಅನುಸರಿಸುತ್ತಿದ್ದಾಳೆ. ‘ಓಹ್, ನಾನೂ ಕೃಷ್ಣಪ್ರಜ್ಞೆ ಬೋಧಿಸಬಲ್ಲೆ ಎಂಬ ಆತ್ಮವಿಶ್ವಾಸ ಅವಳಲ್ಲಿ ಬೆಳೆದಿದೆ.

ಕೃಷ್ಣಪ್ರಜ್ಞೆ ಆಂದೋಲನದ ಬೆಳವಣಿಗೆ ಎಂದರೆ ಇದೆ. ಪ್ರತಿಯೊಬ್ಬರಿಗೂ ಬೋಧನೆ ಮಾಡುವುದು ಹೇಗೆ ಎಂಬುದು ತಿಳಿಯಬೇಕು. ಶ್ರವಣೇವ ಕೀರ್ತನಮ್, ಅಂದರೆ ನೀವು ಕೃಷ್ಣಪ್ರಜ್ಞೆ ಬಗ್ಗೆ ಕೇಳಿ ತಿಳಿದುಕೊಂಡರೆ, ಅದನ್ನು ಕೀರ್ತಿಸಬೇಕು, ಅಂದರೆ ಬೇರೆಯವರಿಗೆ ತಿಳಿಹೇಳಬೇಕು.

ಅದಕ್ಕೆ ಹೇಳುವುದು ಶ್ರವಣಂ ಕೀರ್ತನಂ ವಿಷ್ಣೌ- (ಭಾಗವತ 7.5.23).

ಕೌಮಾರಂ ಆಚರೇತ್‌ ಪ್ರಜ್ಞೋ

ಧರ್ಮಾನ್ ಭಾಗವತಾನ್ ಇಹ – (ಭಾಗವತ 7.6.1)

ಆದ್ದರಿಂದ ನಮ್ಮ ಜೀವನದ ಆರಂಭದಿಂದಲೇ ನಾವು ಮಾಡಬೇಕಾದ ಅತಿ ಮುಖ್ಯವಾದ ಕೆಲಸ ಕೃಷ್ಣಪ್ರಜ್ಞೆ ಪ್ರಚಾರ. ಪ್ರಹ್ಲಾದ ಹೇಳುವಂತೆ ಈ ಮಾನವ ಜನ್ಮದುರ್ಲಭ. ಹಲವಾರು ಜನ್ಮಗಳನ್ನು ಎತ್ತಿ, ಲಕ್ಷಾಂತರ ಜೀವಕೋಟಿಗಳ ರೂಪವನ್ನು ಧರಿಸಿ, ಲಕ್ಷಾಂತರ ವರ್ಷಗಳ ಅನಂತರ ನಮಗೆ ಈ ಮಾನವ ಜನ್ಮ ಪ್ರಾಪ್ತಿಯಾಗುತ್ತದೆ.

ಈ ಜನ್ಮದಲ್ಲೂ ನೀವು ಕೇವಲ ತಿನ್ನುವುದು, ನಿದ್ರಿಸುವುದು, ಇಂದ್ರಿಯಗಳು ತೃಪ್ತಿಪಡಿಸುವುದು, ಆತ್ಮರಕ್ಷಣೆ ಮಾಡಿಕೊಳ್ಳುವುದರಲ್ಲಿ ಕಳೆದರೆ ಜೀವನದಲ್ಲಿ ಪ್ರಗತಿ ಹೇಗೆ ಸಾಧ್ಯ? ಖಂಡಿತಾ ಸಾಧ್ಯವಿಲ್ಲ. ಆದ್ದರಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ‘ನಾನು ಯಾರು? ಪ್ರಕೃತಿಯ ನಿಯಮಗಳಿಗೆ ಒಳಪಟ್ಟ ಈ ಐಹಿಕ ಜೀವನದಲ್ಲಿ ಸಿಲುಕಿ ನಾನೇಕೆ ಒದ್ದಾಡುತ್ತಿದ್ದೇನೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

ಮನದಲ್ಲಿ ಇಂಥ ಪ್ರಶ್ನೆ ಉದ್ಭವಿಸದೇ ಇದ್ದಲ್ಲಿ ಅಂಥವರು ಖಂಡಿತಾ ಮನುಷ್ಯರೆನಿಸಿಕೊಳ್ಳುವುದಿಲ್ಲ. ಪ್ರಾಣಿ ಎನಿಸಿಕೊಳ್ಳುತ್ತಾರೆ. ಸನಾತನ ಗೋಸ್ವಾಮಿಯವರನ್ನೊಮ್ಮೆ ನೋಡಿ. ಅವರೊಬ್ಬ ಪ್ರಭಾವಶಾಲಿ ಮಂತ್ರಿ ಮತ್ತು ಪ್ರಕಾಂಡ ಪಂಡಿತರಾಗಿದ್ದರು. ಅಂಥವರು ಸೀದಾ ಚೈತನ್ಯ ಮಹಾಪ್ರಭುಗಳ ಬಳಿ ಹೋಗಿ, ‘ಜನ ನನ್ನನ್ನು ಬಹಳ ದೊಡ್ಡ ಮನುಷ್ಯನೆಂದು, ಮಹಾನ್ ಪಂಡಿತನೆಂದು ಗೌರವಿಸುತ್ತಾರೆ.

ಆದರೆ ನಿಜವಾಗಿಯೂ ನಾನು ಯಾರೆಂಬುದು ನನಗೇ ಗೊತ್ತಿಲ್ಲ. ಇದು ನನ್ನ ಸ್ಥಿತಿ’ ಎಂದು ಹೇಳಿದರು. ಗ್ರಾಮ್ಯ ವ್ಯವಹಾರೇ ಕಹಾ ಯೇ ಪರಿಣತ ತಾಯ್ ಸತ್ಯ ಮಾನಿ – ನೀನು ದೊಡ್ಡ ವಿದ್ವಾಂಸ, ಶ್ರೀಮಂತ, ಮಂತ್ರಿ ಎಂದು ಜನಸಾಮಾನ್ಯರು ಹೇಳುತ್ತಾರೆ. ಆದರೆ ನಾನೊಬ್ಬ ದೊಡ್ಡ ಮೂರ್ಖನೆಂಬುದು ನನಗೆ ಗೊತ್ತಿದೆ. ನಾನು ಏನೆಂಬುದೇ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಇದು ಸನಾತನ ಗೋಸ್ವಾಮಿಗಳ ಪರಿಸ್ಥಿತಿ.

ಅಂದರೆ ಜನಸಾಮಾನ್ಯರು, ಎಲ್ಲರಿಗೂ ಅವರು ಯಾರೆಂಬುದು ತಿಳಿಯಬೇಕು. ಅವನ ಸಂವಿಧಾನಿಕ ಸ್ಥಾನಮಾನವೇನು? ಅವನೇಕೆ ಈ ಕಟ್ಟುಪಾಡುಗಳ ಜೀವನದಲ್ಲಿ ಬಂದಿಯಾಗಿದ್ದಾನೆ? ಇದರಿಂದ ಮುಕ್ತಿ ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ಈ ಪ್ರಶ್ನೆಗಳನ್ನೇ ಬ್ರಹ್ಮ ಜಿಜ್ಞಾಸೆ ಎಂದು ಕರೆಯುವುದು.

ಇದು ವೇದಾಂತದ ಆರಂಭ. ಇಲ್ಲಿ ವೇದ ಎಂದರೆ ಜ್ಞಾನ. ಅಂತ ಅಂದರೆ ಅಂತ್ಯ ಅಥವಾ ಕೊನೆ. ನಾವು ಎಷ್ಟೆಲ್ಲ ವಿಷಯಗಳಿಗೆ ಸಂಬಂಧಿಸಿ ಜ್ಞಾನ ಸಂಪಾದನೆ ಮಾಡಿದ್ದೇವೆ. ಆದರೆ ಅದೆಲ್ಲವೂ ನಿಷ್ಟ್ರಯೋಜಕವಾಗಿದೆ. ಯಾಕೆಂದರೆ ಎಲ್ಲರೂ ಶ್ರೇಷ್ಠ ವಿಜ್ಞಾನಿ ಅಥವಾ ಶ್ರೇಷ್ಠ ಸಸ್ಯಶಾಸ್ತ್ರಜ್ಞ ಅಥವಾ ಶ್ರೇಷ್ಠ ರಾಜನೀತಿಜ್ಞರೆನಿಸಿಕೊಂಡಿದ್ದಾರೆ.

ಅಂದರೆ ಅವರೆಲ್ಲರೂ ಪ್ರಕೃತಿಯ ಐಹಿಕ ನಿಯಮಗಳಲ್ಲಿ ಬಂದಿಯಾಗಿದ್ದಾರೆ. ಪ್ರೊಫೆಸರ್ ಐನ್ಸ್‌ಟೀನ್ ಇರಬಹುದು ಅಥವಾ ನೆಲ್ಸನ್ ಇರಬಹುದು ಅಥವಾ ಕ್ಲೈವ್ ಅಥವಾ ಇನ್ಯಾರೇ ಆಗಿರಬಹುದು. ಎಲ್ಲರೂ ಈ ಐಹಿಕ ಪ್ರಕೃತಿಯ ಅಡಿಯಾಳುಗಳೇ. ಇದನ್ನು ಮೀರಿ ನಿಲ್ಲಲು ಇವರಾರಿಗೂ ಸಾಧ್ಯವಾಗಿಲ್ಲ. ಎಲ್ಲವೂ ಒಂದು ದಿನ ಮುಗಿದುಹೋಗುತ್ತದೆ.

ಆಗ ನೀವು ಇಲ್ಲಿ ಒಂದು ಪ್ರತಿಮೆಯಂತೆ ಟ್ರಫಾಲ್ಗರ್ ಚೌಕದಲ್ಲಿ ನಿಂತಿರುತ್ತೀರಿ. ಯಾರೂ ಆಗ ಐನ್ಸ್‌ಟೀನ್ ಎಲ್ಲಿ ಹೋದರು? ಕೈವ್ ಎಲ್ಲಿ ಹೋದರು? ನೆಲ್ಸನ್ ಎಲ್ಲಿ ಹೋದರು? ಎಂದು ಪ್ರಶ್ನಿಸುವುದಿಲ್ಲ. ಎಲ್ಲವೂ ಮುಗಿದಿರುತ್ತದೆ. ಸರಿ ಅಲ್ಲವೇ?

ಆದ್ದರಿಂದ ಮಾನವ ನಾಗರಿಕತೆ ಯಾವಾಗಲೂ ಧರ್ಮದ ಮೇಲೇ ನಿಂತಿರಬೇಕು. ಧರ್ಮ ಅಂದರೇನು? ಇದನ್ನು ನಾನೀಗಾಗಲೇ ಹಲವು ಬಾರಿ ವಿವರಿಸಿದ್ದೇನೆ. ಪ್ರಹ್ಲಾದ ಮಹಾರಾಜನ ಪ್ರಕಾರ ‘ಧರ್ಮಾನ್ ಭಾಗವತಾನ್’ – ಧರ್ಮ ಎಂದರೆ ದೈವ ಪ್ರಜ್ಞೆ. ಭಗವಂತನ ಬಗ್ಗೆ ಅರಿವು. ಅರ್ಥಾತ್ ಕೃಷ್ಣ ಪ್ರಜ್ಞೆ.

ಆದ್ದರಿಂದ ಜೀವನದ ಪ್ರಾರಂಭದಿಂದಲೇ ಅಂದರೆ ಪ್ರಾಥಮಿಕ ಶಾಲಾ ಹಂತದಲ್ಲೇ ಕೃಷ್ಣಪ್ರಜ್ಞೆಯನ್ನು ಮಕ್ಕಳಿಗೆ ಕಲಿಸಬೇಕು. ನಿಜವಾದ ನಾಗರಿಕತೆ ಎಂದರೆ ಅದು. ದುರದೃಷ್ಟವಶಾತ್ ನಮ್ಮಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಆದ್ದರಿಂದ ನೀವು ಮೂರ್ಖ ಅಧಿಕಾರಗಳ ಬಳಿ ಹೋಗಿ ಈ ಬಗ್ಗೆ ಮಾತನಾಡಿ.

‘ಈ ರೀತಿಯ ಶಿಕ್ಷಣವನ್ನು ಮಕ್ಕಳಿಗೆ ನೀಡಿ. ಇದನ್ನು ಶಾಲೆ, ಕಾಲೇಜುಗಳ ಪಠ್ಯದಲ್ಲಿ ಸೇರಿಸಿ, ಆಗ ಎಲ್ಲೆಡೆ ಶಾಂತಿ ಸಮೃದ್ಧಿ ನೆಲೆಸುತ್ತದೆ. ಇಲ್ಲದಿದ್ದರೆ ಎಲ್ಲೆಡೆ ಬರೀ ಹಿಪ್ಪಿಗಳೇ ತುಂಬಿಕೊಂಡಿರುತ್ತಾರೆ ಅಷ್ಟೇ. ನಿಮ್ಮಲ್ಲಿ ದೊಡ್ಡ ವಿಶ್ವವಿದ್ಯಾಲಯಗಳರಬಹುದು. ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆ ಇರಬಹುದು.

ಆದರೆ ಅದರಿಂದ ತಯಾರಾಗುತ್ತಿರುವವರು ನಿಷ್ಪ್ರಯೋಜಕರು. ಹಿಪ್ಪಿಗಳ ಥರದವರು’ ಎಂದು ಅವರಿಗೆ ಬುದ್ಧಿ ಹೇಳಿ, ‘ಆರಂಭದಿಂದಲೆ ಇಡೀ ವ್ಯವಸ್ಥೆ ಬದಲಾಗಬೇಕು. ಈ ಮೂರ್ಖ ನಾಗರಿಕತೆಗೆ ಲಗಾಮು ಹಾಕಬೇಕು. ಮೊದಲು ಧರ್ಮ, ಅನಂತರ ಪುಣ್ಯಕಾರ್ಯ’ ಎಂದು ಹೇಳಿ. ‘ನಾನು ಇಂಥ ಧರ್ಮಕ್ಕೆ ಸೇರಿದವನು’ ಎಂದು ನೀವು ಹೇಳಿಕೊಳ್ಳುತ್ತೀರಿ.

ಆದರೆ ನೀವು ಮಾಡುತ್ತಿರುವ ಕೆಲಸವಾದರೂ ಎಂಥದ್ದು? ಎಲ್ಲರೂ ಪಕ್ಕಾ ನೀತಿ ಭ್ರಷ್ಟರು. ಧರ್ಮವೆಂದರೆ ದೈವಿಕ ಜೀವನ ಕುಡಿತ, ಮಾಂಸ, ಅನೈತಿಕ ಸಂಗ, ಜೂಜು ಎಲ್ಲದರಿಂದ ದೂರವಿರಬೇಕು.

ಹೀಗೆ ಮಾನವ ಜನ್ಮದಲ್ಲಿ ಮೊದಲ ಸ್ಥಾನದಲ್ಲಿ ಧರ್ಮ ಇರಬೇಕು. ಧರ್ಮವೆಂದರೆ ಪವಿತ್ರವಾದ, ದೈವಿಕ ಜೀವನ, ಎಲ್ಲ ಧರ್ಮಗಳೂ ದೈವಿಕವಾದ, ಧರ್ಮಿಷ್ಠ ಜೀವನವನ್ನೇ ಬೋಧಿಸುತ್ತವೆ. ಕ್ರೈಸ್ತ ಧರ್ಮ ಹೇಳುವುದೂ ಅದನ್ನೇ. ನೀವು ಯಾರನ್ನೂ ಕೊಲ್ಲಬಾರದು’ ಎನ್ನುತ್ತದೆ ಕ್ರೈಸ್ತ ಧರ್ಮ.

ಆದರೆ ನಾನು ದಿನದ 24 ಗಂಟೆಯೂ ಕೊಲ್ಲುತ್ತಿದ್ದೇನೆ. ಅಷ್ಟಾದರೂ ನಾನೊಬ್ಬ ಕ್ರೈಸ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಇದು ಬಹಳ ಸರಳ. ಧರ್ಮ ಎಂದರೆ ಪುಣ್ಯಕರ ಜೀವನ. ಇಂಥ ಜೀವನದಲ್ಲೂ ನೀವು ಜೀವನೋಪಾಯಕ್ಕಾಗಿ ದುಡಿಯುತ್ತೀರಿ. ನಿಮ್ಮ ಜೀವನಕ್ಕೆ ಅಗತ್ಯವಾದದ್ದು ಅಲ್ಲಿದ್ದರೂ ಕೂಡ ನೀವು ದುಡಿಯುತ್ತೀರಿ.

ದುಡಿಯದೇ ಹೋದರೆ ಸುಖವಾಗಿ ಜೀವನ ನಡೆಸುವುದು ಸಾಧ್ಯವಿಲ್ಲ ಎಂದೇ ನೀವು ಭಾವಿಸುತ್ತೀರಿ. ಸರಿ, ಇದನ್ನು ಆರ್ಥಿಕ ಅಭಿವೃದ್ಧಿ ಎನ್ನೋಣ. ಆದರೆ ಧರ್ಮವೇ ಜೀವನದ ತಳಹದಿಯಾಗಿದ್ದು, ನೀವು ಧರ್ಮಿಷ್ಠರಾಗಿರುವುದರಿಂದ, ನಿಮ್ಮ ವಿಭಿನ್ನ ಸ್ಥಾನಮಾನಕ್ಕನುಗುಣವಾಗಿ ದುಡಿಮೆ ಮಾಡಬೇಕು.

ಈ ಸ್ಥಾನಮಾನವನ್ನೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಕರೆಯುವುದು. ಪ್ರತಿಯೊಂದು ಸಮಾಜದಲ್ಲೂ ಈ ವರ್ಗೀಕರಣ ಮೊದಲಿನಿಂದಲೂ ಇದೆ. ಬುದ್ಧಿವಂತ ವರ್ಗದ ಜನರು ಶಾಸ್ತ್ರ ವೇದಗಳನ್ನು ಅಳವಾಗಿ ಅಧ್ಯಯನ ಮಾಡಬೇಕು, ರಾಜಕೀಯ ನೇತಾರರಿಗೆ ಸಲಹೆ, ಸೂಚನೆ ನೀಡಬೇಕು.

ಮಂತ್ರಿ ಮಹೋದಯರಿಗೆ ಬುದ್ಧಿವಾದ, ಮಾರ್ಗದರ್ಶನ ನೀಡಬೇಕು. ಇದು ಬುದ್ಧಿವಂತ ವರ್ಗವಾದ ಬ್ರಾಹ್ಮಣರ ಕೆಲಸ. ಇನ್ನು ಕ್ಷತ್ರಿಯರು, ರಾಜ್ಯಾಡಳಿತ ಇವರ ಕೆಲಸ ಜನರು ಧರ್ಮ ಪಥದಲ್ಲಿ ಸಾಗುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದು ಇವರ ಜವಾಬ್ದಾರಿ. ಈಗ ನೋಡಿ ಪೊಲೀಸರಿದ್ದಾರೆ.

ಜನರಿಗೆ ಕಿರಿಕಿರಿ ಮಾಡುವುದು ಅವರ ಕೆಲಸವಲ್ಲ ಯಾವನೋ ಒಬ್ಬ ಮರದ ಒಂದು ಸಣ್ಣ ಕೊಂಬೆಯನ್ನು ಮುರಿದರೆ ಸಾಕು. ಅಲ್ಲೊಬ್ಬ ಪೊಲೀಸ್ ಹಾಜರಾಗುತ್ತಾನೆ. ‘ಏಯ್ ಅದನ್ನೇಕೆ ಮುರಿದೆ? ನನ್ನ ಜತೆ ಬಾ’ ಎನ್ನುತ್ತಾ ನಿಮ್ಮನ್ನು ಶೋಷಿಸುತ್ತಾನೆ. ಎಲ್ಲರಿಗೂ ಇಂಥ ಅನುಭವಗಳಾಗಿರಬಹುದು.

ಅವರಿಗೆ ಇದು ಬಿಟ್ಟರೆ ಬೇರೆ ಕೆಲಸವೇ ಇರುವುದಿಲ್ಲ ಎನಿಸುತ್ತದೆ. ಈ ಜನ ಜಗತ್ತನ್ನು ನಿತ್ಯ ಶೋಷಿಸುತ್ತಾ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಅವರು ಅಪ್ಪಟ ಮೂರ್ಖರು, ಮುಠ್ಠಾಳರು. ಅವರಿಗೆ ಜಗತ್ತನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದೇ ತಿಳಿದಿಲ್ಲ. ಮರದ ಕೊಂಬೆ ಮುರಿದವರ ಮೇಲೆ ದಬ್ಬಾಳಿಕೆ ನಡೆಸುವ ಇವರು, ನಿಜವಾದ ಅಪರಾಧವನ್ನು ನೋಡಿಯೂ ನೋಡದವರಂತೆ ಇರುತ್ತಾರೆ. ಅಲ್ಲೊಂದು ಪಿಕ್ ಪಾಕೆಟ್ ನಡೆದಿದೆ ಎಂದು ಅವರನ್ನು ಕರೆದು ನೋಡಿ. ಅವರು ತಿರುಗಿಯೂ ನೋಡದೇ ಹೊರಟು ಹೋಗುತ್ತಿದ್ದಾರೆ.

ಧಾರ್ಮಿಕ ಜೀವನ ನಡೆಸದೇ ಆರ್ಥಿಕ ಅಭಿವೃದ್ಧಿಗೆ ಅರ್ಥವೇ ಇಲ್ಲ. ಧರ್ಮವಿಲ್ಲದ ಅರ್ಥ, ಅರ್ಥಹೀನ, ಸಮಾಜ ಧರ್ಮದ ತಳಹದಿ ಮೇಲೆ ನಿಂತಿದ್ದರೆ ಕಳ್ಳರೇಕೆ ಇರುತ್ತಾರೆ? ಇಲ್ಲಿ ತರಬೇತಿ ಕೊರತೆ ಇದೆ. ಇಲ್ಲಿರುವ ಯೂರೋಪ್ ಮತ್ತು ಅಮೆರಿಕದ ಹುಡುಗ-ಹುಡುಗಿಯರು ನಿಮ್ಮ ಈಗಿನ ಮತ್ತು ಹಿಂದಿನ ಜೀವನಗಳನ್ನು ಒಮ್ಮೆ ಹೋಲಿಕೆ ಮಾಡಿಕೊಳ್ಳಿ.

ಎಷ್ಟೊಂದು ವ್ಯತ್ಯಾಸವಿದೆ ಅಲ್ಲವೇ? ಇದು ಧರ್ಮದ ತಳಹದಿ ಮೇಲೆ ನಡೆಯುತ್ತಿರುವ ಜೀವನ. ಆದ್ದರಿಂದ ಮೊದಲು ಧರ್ಮ. ಅನಂತರ ಆರ್ಥಿಕ ಪ್ರಗತಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಶಾಸ್ತ್ರಗಳು ಹೇಳುತ್ತದೆ. ಇಂಗ್ಲಿಷ್‌ ನಲ್ಲಿ ಒಂದು ನಾಣ್ಣುಡಿ ಇದೆ. – ಆತ್ಮಸಂರಕ್ಷಣೆ ಪ್ರಕೃತಿಯ ಮೊದಲ ನಿಯಮ.

ಅದರರ್ಥ ಏನು? ಆತ್ಮಕ್ಕೆ ಸೋಲಾಗಬಾರದು. ಹಾಗಾಗದಂತೆ ನೋಡಿಕೊಳ್ಳುವುದು ನಿಮ್ಮ ಮೊದಲ ಕೆಲಸ. ಆತ್ಮಎಂದರೆ ಚೇತನ. ನಮಗೆ ಶರೀರವೂ ಇದೆ. ನಮ್ಮ ಜನರಿಗೆ ತಮ್ಮ ಶರೀರವನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದೇ ಗೊತ್ತಿಲ್ಲ. ಸಿಕ್ಕಿದ್ದನ್ನೆಲ್ಲಾ ತಿನ್ನುವುದು, ಬೇಕಾಬಿಟ್ಟನಿದ್ರಿಸುವುದು, ಲೈಂಗಿಕ ಸುಖ ಅನುಭವಿಸುವುದು ಹೀಗೆ ದೇಹವನ್ನೇ ನಿಯಂತ್ರಣದಲ್ಲಿಟ್ಟುಕೊಳ್ಳಲಾಗದವರಿಗೆ ಆತ್ಮ ಸಂರಕ್ಷಣೆ ಬಗ್ಗೆ ಹೇಳುವುದೇನು? ಅವರೆಲ್ಲ ಶತಮೂರ್ಖರು.

ಆತ್ಮಾನಾ ಸರ್ವತೋ ರಕ್ಷೇತ್ ತತೋ ಧರ್ಮಾ ತತೋ ಧನಮ್ ಎನ್ನುತ್ತದೆ ವೇದ. ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಿ. ಅನಂತರ ಧರ್ಮ. ಅನಂತರ ಧಾರ್ಮಿಕ ತತ್ತ್ವಗಳು ಅದಾದ ಮೇಲೆ ಹಣ. ಆದರೆ ಇಂದು ಜನರಿಗೆ ಆತ್ಮದ ಮೇಲೆ ಲಕ್ಷ್ಯವಿಲ್ಲ. ಧರ್ಮದ ಕಡೆಗಂತೂ ಗಮನವೇ ಇಲ್ಲ. ಏನಿದ್ದರೂ ದುಡ್ಡೊಂದೇ ಅವರಿಗೆ ಸರ್ವಸ್ವ.

ನಮ್ಮ ಕೃಷ್ಣಪ್ರಜ್ಞಾ ಸ೦ಘದ ಆ೦ದೋಲನ ಏಕಮುಖವಾದುದಲ್ಲ. ಇಲ್ಲಿ ಜನ ಕೇವಲ ಭಾವುಕರಾಗಿ ಮಂತ್ರ ಪಠಿಸುತ್ತಾ ನರ್ತಿಸುವುದಿಲ್ಲ. ಇಲ್ಲಿ ಸಿದ್ಧಾಂತವಿದೆ, ತತ್ತ್ವವಿದೆ, ಧರ್ಮ, ಅರ್ಥ, ಕಾಮ, ಮೋಕ್ಷ ಅಂದರೆ ಧರ್ಮದ ನಾಲ್ಕು ದೃಷ್ಟಿಕೋನಗಳು ಇಲ್ಲಿವೆ. ಮೊದಲು ಧರ್ಮದ ದೃಷ್ಟಿಕೋನ, ಅನಂತರ ಆರ್ಥಿಕ ಬೆಳವಣಿಗೆ, ಆನಂತರ ಇಂದ್ರಿಯ ತೃಪ್ತಿ, ಕೊನೆಗೆ ಮೋಕ್ಷ. ಪರಮ ಧಾಮಕ್ಕೆ ಮರಳುವುದು.

ಹೀಗೆ ಇದೊಂದು ಸುಂದರ ಆಂದೋಲನ. ಈ ಆಂದೋಲನದ ಮಹತ್ವವನ್ನು ನಿಧಾನವಾಗಿಯಾದರೂ ಜನ ಅರ್ಥಮಾಡಿಕೊಳ್ಳುತ್ತಿದ್ದಾರೆ. ನೀವು ಇದರ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಇದೊಂದು ಸಾಮಾನ್ಯ ಚಳವಳಿಯಲ್ಲ. ಇದು ಕೇವಲ ಭಾವನಾತ್ಮಕವಾದುದಲ್ಲ ಇದೊಂದು ಅಧಿಕೃತವಾದ ವೈಜ್ಞಾನಿಕ ಆಂದೋಲನ.

ಇಹ ಮತ್ತು ಪರಲೋಕಗಳಲ್ಲಿ ಜನರನ್ನು ಸಂತೋಷವಾಗಿಡುವುದು ಹೇಗೆ ಎಂಬುದನ್ನು ಕಲಿಸುವ ಆಂದೋಲನವಿದು. ಧರ್ಮ, ಅರ್ಥ, ಕಾಮ, ಮೋಕ್ಷ. ಅಂದರೆ ಅಂತಿಮವಾಗಿ ನಮಗೆ ಸಿಗಬೇಕಾದುದು ಮೋಕ್ಷ ನಮಗೆ ಎಲ್ಲದರಿಂದ ಬಿಡುಗಡೆ ದೊರೆಯಬೇಕು. ಅದನ್ನು ಪಡೆಯಲು ನಮಗಿದೊಂದು ಅವಕಾಶ.

ಈ ಮೋಕ್ಷದಲ್ಲೂ ಹಲವಾರು ವಿಧಗಳಿವೆ. ಐದು ತೆರನಾದ ಮೋಕ್ಷಗಳ ಬಗ್ಗೆ ನಾವು ಕೇಳಿದ್ದೇವೆ. ಸಾಯುಜ್ಯ ಮುಕ್ತಿ, ಸಾರೂಪ್ಯ ಮುಕ್ತಿ, ಸಾಲೋಕ್ಯ ಮುಕ್ತಿ ಮತ್ತು ಸಾರ್ಷ್ಠಿ ಮುಕ್ತಿ. ಇವು ಮುಕ್ತಿಯ ಐದು ವಿಧಗಳು. ಮೊದಲ ರೀತಿಯ ಮೋಕ್ಷವೆಂದರೆ ಪರಮ ಸತ್ಯನಲ್ಲಿ ಸಂಪೂರ್ಣವಾಗಿ ಲೀನವಾಗುವುದು.

ಜ್ಞಾನಿಗಳು ಇದನ್ನೆ ಬಯಸುತ್ತಾರೆ. ಇವರಿಗೆ ಬೇರೆ ವೈವಿಧ್ಯದಲ್ಲಿ ನಂಬಿಕೆ ಇಲ್ಲ. ಈ ಐಹಿಕ ಜಗತ್ತಿನಲ್ಲಿ ಜೀವ ವೈವಿಧ್ಯದಿಂದ ಇವರಿಗೆ ಕೆಟ್ಟ ಅನುಭವಗಳಾಗಿರುತ್ತವೆ. ಆದ್ದರಿಂದ ಇನ್ನೊಮ್ಮೆ ಅಂಥ ಜೀವ ವೈವಿಧ್ಯವೆಂದರೆ ಇವರು ಮೂಗು ಮುರಿಯುತ್ತಾರೆ. ಕೃಷ್ಣನ ಸನ್ನಿಧಿಯಲ್ಲಿ ಹಲವಾರು ಆನಂದ ಮಯವಾದ ವೈವಿಧ್ಯಮಯ ರೂಪಗಳಿವೆ ಎಂಬುದು ಅವರಿಗೆ ತಿಳಿದಿಲ್ಲ.

ಅಲ್ಪಜ್ಞಾನಿಗಳಾದ ಇವರ ಬುದ್ಧಿಗೆ ಅದು ಹೊಳೆಯುವುದಿಲ್ಲ. ಆದ್ದರಿಂದ ಪರಮ ಪುರುಷನಲ್ಲಿ ಲೀನವಾಗಿ ಸಾಯುಜ್ಯ ಮುಕ್ತಿ ಪಡೆಯಲು ಅವರು ಬಯಸುತ್ತಾರೆ. ಇದನ್ನು ಪಡೆಯುವುದು ಸಾಧ್ಯ. ಆದರೆ ನಿಮ್ಮ ವ್ಯಕ್ತಿತ್ವವನ್ನು ಸಂಪೂರ್ಣ ಕಳೆದುಕೊಂಡಾಗ ಮಾತ್ರ ನಿಮಗೆ ಅಮರತ್ವ ಪಡೆಯಲು ಸಾಧ್ಯ.

ಆದರೆ ನಿಮಗೆ ಇಲ್ಲಿ ಆನಂದಮಯವಾದ, ಪರಮೋನ್ನತವಾದ ಜ್ಞಾನ ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಇದೊಂದು ರೀತಿಯಲ್ಲಿ ಆತ್ಮಾಘಾತುಕವಾದುದು. ಒಂದು ಜೀವಿಯು ಪ್ರತ್ಯೇಕ ಆತ್ಮವಾಗಿರುವುದರಿಂದ ಅದು ನಿರಾಕಾರ ಸ್ಥಿತಿಯಲ್ಲಿ ಇರುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಜ್ಞಾನಾರ್ಜನೆ ಮತ್ತು ಪರಮಾನಂದ ಇರುವುದಿಲ್ಲ. ಬರೀ ಐಹಿಕ ಅಂಶಗಳ ತಿರಸ್ಕಾರ. ಇಲ್ಲಿ ಸತ್ ಮಾತ್ರ ಇದೆ. ಆದರೆ ಉಳಿದೆರಡು ಅಂಶಗಳಾದ ಚಿತ್ ಮತ್ತು ಆನಂದ ಇರುವುದಿಲ್ಲ.

ಹೀಗಾಗಿ ಇಲ್ಲಿ ಪರಿಪೂರ್ಣತೆಯ ಕೊರತೆಯಿಂದಾಗಿ ಸಾಯುಜ್ಯ ಮುಕ್ತಿ ಪಡೆದ ಜೀವಿಗಳು ಕಾಲಾಂತರದಲ್ಲಿ ಮತ್ತೆ ಭೂಮಿಯಲ್ಲಿ ಜನ್ಮ ತಾಳುವ ಸಾಧ್ಯತೆ ಇರುತ್ತದೆ. ಆರುಹ್ಯ ಕೃಚ್ಛೇಣ ಪರಮ್ ಪದಂ ತತಃ ಪತನ್ತ್ಯಧಃ ಅನಾದೃತ ಯುಷ್ಯದಂಘ್ರಯಃ (ಭಾಗವತ 10.2.32) ಮಾಯಾವಾದಿಗಳು ಕಠಿಣ ತಪಸ್ಸನ್ನಾಚರಿಸಿ, ಬ್ರಹ್ಮತ್ವ ಪಡೆಯುತ್ತಾರೆ.

ಆತನಲ್ಲಿ ಲೀನವಾಗುತ್ತಾರೆ. ಅನಂತರ ಪತನ ಹೊಂದುತ್ತಾರೆ. ಇದು ಜ್ವಾಲೆಯನ್ನು ಪ್ರವೇಶಿಸುವ ಕಿಡಿಯಂತೆ. ಅದು ಮತ್ತೆ ಜ್ವಾಲೆಯಿಂದ ಹೊರಕ್ಕೆ ಚಿಮ್ಮುವ ಸಾಧ್ಯತೆ ಇದ್ದೇ ಇರುತ್ತದೆ.

ವೈಷ್ಣವರು ಈ ಸಾಯುಜ್ಯ ಮುಕ್ತಿಯನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಸಾರೂಪ್ಯ ಮುಕ್ತಿಯನ್ನು ಬಯಸುತ್ತಾರೆ. ಇದರರ್ಥ ವಿಷ್ಣುವಿನ ದೇಹದಂಥ ದೇಹ ಪಡೆಯುವುದು. ವೈಕುಂಠ ಲೋಕದಲ್ಲಿ ಎಲ್ಲ ಜೀವಿಗಳಿಗೂ ನಾಲ್ಕು ಕೈಗಳಿರುತ್ತವೆ. ಕೃಷ್ಣಲೋಕದಲ್ಲಿ ಮಾತ್ರ ಕೃಷ್ಣ ಮತ್ತು ಅವನ ಸಹಚರರು ಎರಡು ಕೈಗಳನ್ನು ಹೊಂದಿರುತ್ತಾರೆ.

ಇತರ ವೈಕುಂಠ ಲೋಕಗಳಲ್ಲಿ -ಅಲ್ಲಿ ಅಸಂಖ್ಯಾತ ವೈಕುಂಠ ಲೋಕಗಳಿವೆ- ನಾರಾಯಣನೇ ಮುಖ್ಯ ದೇವತೆ ಅಂದರೆ ಲಕ್ಷ್ಮಿ ನಾರಾಯಣ- ಇಲ್ಲಿಗೆ ಪ್ರವೇಶಿಸುವವರೆಲ್ಲ ನಾರಾಯಣನ ರೂಪವನ್ನೇ ಹೊಂದಿರುತ್ತಾರೆ. ಅಜಾಮಿಳನಿಗೆ ಮುಕ್ತಿ ನೀಡಲು ಬಂದ ವಿಷ್ಣುದೂತರ ಚಿತ್ರಗಳನ್ನು ನೀವು ನೋಡಿರಬಹುದು.

ಅವರೆಲ್ಲರೂ ನಾರಾಯಣನಂತೆಯೇ ಇದ್ದರು. ಅದೇ ರೀತಿಯ ಕಿರೀಟ, ಆಭರಣಗಳು, ಎಲ್ಲವೂ ಅದೇ ರೀತಿ. ಉದಾಹರಣೆಗೆ, ನಿಮ್ಮ ರಾಷ್ಟ್ರಾಧ್ಯಕ್ಷರು ಮತ್ತು ರಾಣಿ ಇದ್ದಂತೆ. ಈಗ ನೀವೂ ಅವರಂತೆಯೇ ವೇಷ ಹಾಕಿಕೊಂಡರೆ, ಅದೇ ರೀತಿ ಕಾಣಿಸುವುದಿಲ್ಲವೇ, ಹಾಗೆ. ಅದರರ್ಥ ನೀವೆ ಸ್ವತಃ ರಾಷ್ಟ್ರಾಧ್ಯಕ್ಷ ಅಥವಾ ರಾಣಿ ಎಂದೇನೂ ಅಲ್ಲ.

ಹಾಗೆಯೇ ಭಕ್ತರು ಮತ್ತು ಸಾಮಾನ್ಯ ಜೀವಿಗಳು ವಿಷ್ಣು ನಾರಾಯಣರ ರೂಪದಲ್ಲಿದ್ದರೂ ಅವರೇ ಸ್ವತಃ ವಿಷ್ಣು ಅಥವಾ ನಾರಾಯಣರಲ್ಲ ಇದೇ ಸಾರೂಪ್ಯ. ಇದೇ ರೀತಿ ಸಾಲೋಕ್ಯವೆಂದರೆ ಒಂದೇ ಲೋಕದಲ್ಲಿ ಜೀವಿಸುವುದು. ಸಾಮೀಪ್ಯ ಎಂದರೆ ನಾರಾಯಣನ ಸನಿಹ ಬದುಕುವುದು. ಈಗ ನಾವೆಲ್ಲರೂ ಒಟ್ಟೋಟ್ಟಿಗೆ ಜೀವಿಸುವಂತೆ ನಾರಾಯಣನ ಸಮೀಪವೂ ಜೀವಿಸಬಹುದು. ಇವೆಲ್ಲಾ ಮೋಕ್ಷದ ಕೆಲವು ವಿಧಗಳು.

ಹೀಗೆ ಮುಕ್ತಿ ಅಥವಾ ಮೋಕ್ಷ ಪಡೆಯುವುದು, ಭಗವದ್ಧಾಮಕ್ಕೆ ಮರಳುವುದು, ದೈವತ್ವದೆಡೆಗೆ ಹಿಂದಿರುಗುವುದು ಜೀವನದ ಪರಮೋಚ್ಛಗುರಿ. ಅದೇ ನಮ್ಮ ಧೈಯವಾಗಬೇಕು. ಅದು ಬಿಟ್ಟು ಈ ಆರ್ಥಿಕ ಪ್ರಗತಿಯಂಥ ವಿಷಯಗಳ ಕಡೆಗೆ ಗಮನ ಹರಿಸಬಾರದು. ಅವೆಲ್ಲಾ ಈಗಾಗಲೇ ನಿರ್ಧಾರವಾಗಿರುವ ವಿಷಯಗಳು.

ನಮ್ಮ ಕೃಷ್ಣ ಪ್ರಜ್ಞೆ ಆಂದೋಲನದಲ್ಲೂ ಅಷ್ಟೆ ನಾವು ಆರ್ಥಿಕ ಪ್ರಗತಿ ಬಗ್ಗೆ ಇಂದ್ರಿಯ ತೃಪ್ತಿ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಕೃಷ್ಣ ಪ್ರಜ್ಞೆ ಬೆಳೆಸುವುದು ಹೇಗೆ ಎಂಬುದರ ಕಡೆಗಷ್ಟೇ ನಮ್ಮ ಗಮನ ಆರ್ಥಿಕ ವಿಷಯಗಳು ತಮ್ಮಷ್ಟಕ್ಕೆ ತಾವೇ ಇತ್ಯರ್ಥವಾಗುತ್ತವೆ. ಇದರರ್ಥ ನಾವು ಇಂದ್ರಿಯ ತೃಪ್ತಿಯನ್ನು ಸಂಪೂರ್ಣ ನಿಷೇಧಿಸಿದ್ದೇವೆಂದೇನೂ ಅಲ್ಲ.

ನಮ್ಮಲ್ಲೂ ವಿವಾಹಿತರಿದ್ದಾರೆ. ಇಲ್ಲಿ ಯಾವುದೂ ನಿಷಿದ್ಧವಲ್ಲ ಸಾಮಾನ್ಯ ದಾಂಪತ್ಯ ಜೀವನದ ಎಲ್ಲ ಅಂಶಗಳೂ ಇಲ್ಲಿವೆ. ಆದರೆ ಅದರಲ್ಲಿ ಹೊಂದಾಣಿಕೆ ಇದೆ. ನಾವು ಬೆಕ್ಕು-ನಾಯಿಗಳಂತೆ ಬದುಕುವುದಿಲ್ಲ. ನೀತಿ, ನಿಯಮಗಳಿಗನುಗುಣವಾಗಿ ದಾಂಪತ್ಯ ಜೀವನವನ್ನು ಅಳವಡಿಸಲಾಗಿದೆ. ಅದು ಅತ್ಯಗತ್ಯ. ಅದೇ ನಿಜವಾದ ಧಾರ್ಮಿಕ, ಧರ್ಮಿಷ್ಟ ಜೀವನ. ಅಂಥ ಜೀವನ ನಡೆಸಿದಾಗ ಮಾತ್ರ ನೀವು ಕೃಷ್ಣಪ್ರಜ್ಞೆಯಲ್ಲಿ ಏಳಿಗೆ ಸಾಧಿಸಲು ಸಾಧ್ಯ. ಆ ಮೂಲಕ ಮೋಕ್ಷಗಳಿಸಲು ಸಾಧ್ಯ.

ಪ್ರದ್ಯುಮ್ನ: ಅಧಾರ್ಮಿಕ ಜೀವನ ಅತ್ಯಂತ ಬರ್ಬರ ಸ್ಥಿತಿ ಅಲ್ಲವೇ…?

ಪ್ರಭುಪಾದ: ಹೌದು. ಅದು ನಾಗರಿಕ ಜೀವನವಲ್ಲ. ಅಲ್ಲಿ ಧರ್ಮ ಇರಲೇ ಬೇಕು. ಧರ್ಮ ಎಂದರೆ ಭಗವಂತನ ಕುರಿತು ಅರಿವು. ಪ್ರದ್ಯುಮ್ನ: ವಾಸ್ತವವಾಗಿ ಮಾನವ ಜನ್ಮ ಆರಂಭವಾದಾಗಲೇ ಧರ್ಮವೂ ಆರಂಭವಾಗಿದೆ. ತಿನ್ನುವುದು, ನಿದ್ರಿಸುವುದು, ಹೆದರುವುದು ಮತ್ತು ಲೈಂಗಿಕ ಸುಖ ಅನುಭವಿಸುವುದು ಪ್ರಾಣಿಗಳ ಬದುಕಿನ ನಾಲ್ಕು ಮುಖ್ಯ ತತ್ತ್ವಗಳು.

ಮನುಷ್ಯರಲ್ಲೂ ಇದು ಸಾಮಾನ್ಯವಾಗಿದೆ. ಆದರೆ ಧರ್ಮ ಎಂಬುದು ಮಾನವ ಜೀವನದ ಇನ್ನೊಂದು ಮಹತ್ತರ ಅಂಶ. ಧರ್ಮವಿಲ್ಲದೇ ಹೋದರೆ ಮನುಷ್ಯರಿಗೂ ಪ್ರಾಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಆದ್ದರಿಂದ ಮಾನವನಲ್ಲಿ ಆತ್ಮ ಸಾಕ್ಷಾತ್ಕಾರ ಮೂಡಿಸುವುದು ಮತ್ತು ದೇವರ ಜತೆ ಆತನ ಚಿರಬಾಂಧವ್ಯ ಬೆಸೆಯುವುದೇ ಧರ್ಮ.

ಪ್ರಭುಪಾದ: ಈ ದಿನಗಳಲ್ಲಿ ಧರ್ಮವನ್ನು ತ್ಯಾಗ ಮಾಡಲಾಗುತ್ತಿದೆ. ಹಾಗಾಗಿ ಇದೂ ಪ್ರಾಣಿ ಸಮಾಜವಾಗಿ ಬದಲಾಗಿದೆ. ಮೊನ್ನೆ ಯಾರೋ ಒಬ್ಬರು ಹೇಳುತ್ತಿದ್ದರು, ‘ಹಾಗಾದರೆ ನಾವು ಪ್ರಾಣಿಗಳು’ ಎಂದು. ಅದಕ್ಕೆ ನಾನು ಹೇಳಿದೆ, ‘ನೀವು ಬರೀ ಪ್ರಾಣಿಗಳಲ್ಲ, ಪಾಶ್ಚಾತ್ಯ ಪ್ರಾಣಿಗಳು. ಅವರು ಪೌರಸ್ತ್ಯ ಪ್ರಾಣಿಗಳು’ ಎಂದು.

ಒಟ್ಟಿನಲ್ಲಿ ಎಲ್ಲರೂ ಪ್ರಾಣಿಗಳೇ. ಈ ವಿಷಯದಲ್ಲಿ ನಾನು ಯಾವ ವಿಜ್ಞಾನಿ ಅಥವಾ ತತ್ತ್ವಜ್ಞಾನಿಯ ಜತೆ ಬೇಕಾದರೂ ವಾದಕ್ಕೆ ಸಿದ್ಧ. ಅವರೆಲ್ಲ ಪ್ರಾಣಿಗಳು ಎಂದು ನಾನು  ಸಾಬೀತುಪಡಿಸುತ್ತೇನೆ. ಶಕ್ತಿಯಿದ್ದರೆ ಪ್ರಾಣಿಗಳಲ್ಲ ಎಂದು ಅವರು ಸಾಬೀತುಪಡಿಸಲಿ ನೋಡೋಣ.

ಪ್ರದ್ಯುಮ್ನ: ಕೆಳಸ್ತರದ ನಾಗರಿಕತೆಗಳಲ್ಲಿ ಐಹಿಕ ಪ್ರಕೃತಿ ಮೇಲೆ ನಿಯಂತ್ರಣ ಸಾಧಿಸಲು ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ.

ಪ್ರಭುವಾದ: ಹ್ಞೂ, ಅದು ನಡೆಯುತ್ತಲೇ ಇದೆ. ಯೂರೋಪ್‌ನಲ್ಲಿ ಎರಡು ಮಹಾಯುದ್ಧಗಳು ಆರಂಭವಾಗಿದ್ದೂ ಇದೇ ಕಾರಣಕ್ಕೆ. ಒಂದು ಕಡೆ ಜರ್ಮನ್ನರು ಮತ್ತೊಂದು ಕಡೆ ಬ್ರಿಟಿಷರು. ಈ ಬ್ರಿಟಿಷರು ತಮ್ಮ ವಸಾಹತುಶಾಹಿ ಧೋರಣೆ ಮೂಲಕ ಇಡೀ ಜಗತ್ತಿನ ಭೂಪಟಕ್ಕೆ ಕೆಂಪು ಬಣ್ಣ ಬಳಿದರು.

ಆಫ್ರಿಕಾ, ಏಷ್ಯಾ, ಭಾರತ, ಅಮೆರಿಕ, ಕೆನಡಾ ಹೀಗೆ ಎಲ್ಲೆಡೆ ಹಿಡಿತ ಸಾಧಿಸಿದರು. ಇದು ಜರ್ಮನ್ನರನ್ನು ಕೆರಳಿಸಿತು. ‘ಈ ವ್ಯಾಪಾರಿಗಳ ದೇಶದವರು…’ – ಹಿಟ್ಲರ್ ಬ್ರಿಟಿಷರನ್ನು ಕರೆಯುತ್ತಿದ್ದುದೇ ಹಾಗೆ – … ಅದು ಹೇಗೆ ಇಡೀ ಜಗತ್ತನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು? ನಾವು ಎಷ್ಟೊಂದು ಬುದ್ಧಿವ೦ತರು? ನಾವು ಎಷ್ಟೊಂದು ವಸ್ತುಗಳನ್ನ ತಯಾರಿಸುತ್ತೇವೆ.

ಅದನ್ನು ಮಾರಾಟ ಮಾಡಲು ಮಾರುಕಟ್ಟೆಯೇ ಇಲ್ಲ…’ ಎಂದು ಜರ್ಮನ್ನರು ಕುದ್ದುಹೋದರು. ಈ ಅಂಶವೇ ಎರಡು ಮಹಾಯುದ್ಧಗಳಿಗೆ ಕಾರಣವಾಯಿತು. ಇದು ವಾಸ್ತವ. ಈ ವಿಷಯ ಎಲ್ಲ ರಾಜಕಾರಣಿಗಳಿಗೆ, ಪ್ರತಿಯೊಬ್ಬರಿಗೂ ಗೊತ್ತಿದೆ. ಜರ್ಮನಿಗೆ ಇಂಗ್ಲೆಂಡ್ ಅನ್ನು ಕಂಡರೆ ಮೊದಲಿನಿಂದಲೂ ಹೊಟ್ಟೆಕಿಚ್ಚು ಇದಕ್ಕೆ ಕಾರಣ ಜರ್ಮನಿ ಮೇಲೆ ಹೇಗಾದರೂ ನಿಯಂತ್ರಣ ಸಾಧಿಸಬೇಕೆಂದು ಇಂಗ್ಲೆಂಡ್ ಹೊಂಚು ಹಾಕುತ್ತಿತ್ತು.

ಇತ್ತ ಇಂಗ್ಲೆಂಡ್ ಲಾರ್ಡ್ ಕ್ಲೈವ್‌ ಎಂಬ ಚಾಣಾಕ್ಷನ ಮೂಲಕ ಭಾರತದ ಮಾರುಕಟ್ಟೆ ಮೇಲೆ, ಅನಂತರ ಆಡಳಿತದ ಮೇಲೆ ಹಿಡಿತ ಸಾಧಿಸಿತು. ಇದು ಜರ್ಮನಿಯ ಕಣ್ಣನ್ನು ಮತ್ತಷ್ಟು ಕೆಂಪಗಾಗಿಸಿತು. ಹೀಗೆ ಒಬ್ಬರ ಮೇಲೆ ಮತ್ತೊಬ್ಬರು ನಿಯಂತ್ರಣ ಸಾಧಿಸಬೇಕೆಂಬ ಮೇಲಾಟವೇ ಯುದ್ಧಕ್ಕೆ ಕಾರಣವಾಯಿತು.

ಇದಕ್ಕೆಲ್ಲ ಮೂಲ ಕಾರಣ ಆರ್ಥಿಕ ಬೆಳವಣಿಗೆಯ ಹುಚ್ಚು. ಕಂಡಿದ್ದೆಲ್ಲ ನನ್ನ ಹಿಡಿತದಲ್ಲೇ ಇರಬೇಕೆಂಬ ಹುಚ್ಚು ಆಸೆ ಎಲ್ಲರಿಗೂ ನಿಜ. ಈ ಕೆಳಸ್ತರದ ನಾಗರಿಕತೆಯಲ್ಲಿ ಈ ಐಹಿಕ ಪ್ರಕೃತಿ ಮೇಲೆ ನಿಯಂತ್ರಣ ಸಾಧಿಸಲು ನಿರಂತರ ಹೋರಾಟ ನಡೆಯುತ್ತದೆ. ಆದರೆ ಇದನ್ನೇ ಉನ್ನತ ಮಟ್ಟದ ನಾಗರಿಕತೆ ಎಂದು ಎಲ್ಲರೂ ಭಾವಿಸಿದ್ದಾರೆ.

ಯಾವ ದೇಶ ಪ್ರಕೃತಿಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಅತಿ ಹೆಚ್ಚು ಚಾಣಾಕ್ಷತನದಲ್ಲಿ ಶೋಷಣೆ ಮಾಡುವುದನ್ನು ಕರಗತ ಮಾಡಿಕೊಂಡಿದೆಯೋ ಅಂಥ ದೇಶವನ್ನು ಅತ್ಯಂತ ಅಭಿವೃದ್ಧಿ ಹೊಂದಿದ, ನಾಗರಿಕ ದೇಶ ಎಂದು ಕರೆಯಲಾಗುತ್ತಿದೆ. ವಾಸ್ತವವಾಗಿ ಅದು ಅತಿ ಕೆಳ ಮಟ್ಟದ ನಾಗರಿಕತೆ. ಎಲ್ಲರೂ ಭೂಮಿಯನ್ನು ಕೊರೆದು, ಅಗೆದು, ಗಣಿಗಾರಿಕೆ ನಡೆಸುತ್ತಾ ಆರ್ಥಿಕ ಪ್ರಗತಿ ಸಾಧಿಸುವ ತರಾತುರಿಯಲ್ಲಿದ್ದಾರೆ. ಇದು ಪ್ರಾಣಿಗಳ ನಾಗರಿಕತೆಯಲ್ಲದೇ ಮತ್ತೇನೂ ಅಲ್ಲ.

ಪ್ರದ್ಯುಮ್ನ: ಇಂಥ ಪ್ರಜ್ಞೆ ಇರುವ ಮನುಷ್ಯ ಧರ್ಮವನ್ನು ಅನುಸರಿಸುತ್ತಾನೆಯೇ…?

ಪ್ರಭುಪಾದ: ಊಹೂ… ಇಲ್ಲ ಇಲ್ಲ.

ಪ್ರದ್ಯುಮ್ನ: ಐಹಿಕ ಪ್ರಕೃತಿ ಮೇಲೆ ನಿಯಂತ್ರಣ ಸಾಧಿಸಲು ಅಥವಾ ಇಂದ್ರಿಯವನ್ನು ತೃಪ್ತಿಪಡಿಸಲು ಮನುಷ್ಯ-ಮನುಷ್ಯರ ಮಧ್ಯೆ ನಿರಂತರ ಪೈಪೋಟಿ ನಡೆಯುತ್ತಲೇ ಇದೆ.

ಪ್ರಭುಪಾದ: ಹೌದು. ಇಂದ್ರಿಯ ತೃಪ್ತಿಯೇ ಇಲ್ಲಿನ ಮೂಲ ಉದ್ದೇಶ, ನಮಗೆ ಇಂದ್ರಿಯಗಳಿವೆ. ಆದ್ದರಿಂದ ಅಲ್ಲಿ ಇಂದ್ರಿಯ ತೃಪ್ತಿ ಎನ್ನುವುದು ಇರಲೇಬೇಕು. ಆದರೆ ಅದು ಧರ್ಮವನ್ನು ಅವಲಂಬಿಸಿರಬೇಕು. ಧರ್ಮಕ್ಕನುಗುಣವಾಗಿರಬೇಕು. ಅಂದರೆ ಧರ್ಮ ಮತ್ತು ಅರ್ಥ. ಇಲ್ಲಿ ಧರ್ಮದ ಅನಂತರ ಅರ್ಥ ಅಥವಾ ಆರ್ಥಿಕ ಅಭಿವೃದ್ಧಿ ಬರಬೇಕು.

ಆರ್ಥಿಕ ಅಭಿವೃದ್ಧಿ ಪ್ರಗತಿ ಇಲ್ಲದೇ ಎಂದರೆ ಇಂದ್ರಿಯ ತೃಪ್ತಿಯಲ್ಲದೇ ಬೇರೇನೂ ಅಲ್ಲ. ಆರ್ಥಿಕ ಪ್ರಗತಿ ಇಲ್ಲದೇ ಇಂದ್ರಿಯಗಳನ್ನು ತೃಪ್ತಿಪಡಿಸುವುದು ಸಾಧ್ಯವಿಲ್ಲ. ಆದರೆ ಅದು ಧರ್ಮದ ತಳಹದಿ ಮೇಲೆ ಇರಬೇಕು. ಧರ್ಮವಿಲ್ಲದೇ ಇಂದ್ರಿಯಗಳನ್ನು ತೃಪ್ತಿಪಡಿಸುವುದು, ಅರ್ಥಾತ್ ಧರ್ಮವಿಲ್ಲದ ಅರ್ಥಿಕ ಪ್ರಗತಿ ಪಶುಗಳ ನಾಗರಿಕತೆ ಎಸಿಸಿಕೊಳ್ಳುತ್ತದೆ.

ನಿಮಗೆಲ್ಲರಿಗೂ ಧನ್ಯವಾದಗಳು. ಹರೇಕೃಷ್ಣ ಈಗ ಎಲ್ಲರೂ ಈ ಪಶುಗಳ ನಾಗರಿಕತೆಯಿಂದ ಹೊರಬರಲು ಕೃಷ್ಣ ಹರೇರ್‌‌ ನಾಮೈವ ಕೇವಲಮ್…’ ಪಠಿಸಿರಿ.

ಹರೇಕೃಷ್ಣ…

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi