ಜಿಂಕೆಯಾದ ಮಹಾರಾಜ

ಭೂಮಿಯು ಹಿಂದೆ ರಾಜ ನಾಭಿಯ ಆಡಳಿತದಲ್ಲಿ ಅಜನಾಭ ಎಂದು ಕರೆಯಲ್ಪಡುತ್ತಿತ್ತು. ಭರತ ಮಹಾರಾಜ ಈ ಭೂಮಿಯನ್ನು ಆಳಿದನಂತರ ಇದು ಭರತವರ್ಷ ಎಂಬ ಖ್ಯಾತಿಯನ್ನು ಪಡೆಯಿತು. ಮಹಾರಾಜ ಭರತನು ಅತ್ಯಂತ ಜ್ಞಾನಿಯೂ ಅನುಭವಿಯೂ ಆದ ರಾಜನಾಗಿದ್ದನು.

ಅವನು ತನ್ನದೇ ಕರ್ತವ್ಯಗಳಲ್ಲಿ ನಿರತನಾಗಿದ್ದು ಪ್ರಜೆಗಳನ್ನು ಅತ್ಯುತ್ತಮವಾಗಿ ಆಳಿದನು. ತನ್ನ ತಂದೆ ಮತ್ತು ತಾತನಂತೆ ಮಹಾರಾಜ ಭರತ ಪ್ರಜೆಗಳೊಂದಿಗೆ ಅತ್ಯಂತ ಆತ್ಮೀಯನಾಗಿದ್ದನು. ಪ್ರಜೆಗಳನ್ನು ತಮ್ಮ ಕಸುಬುಗಳಲ್ಲಿ ನಿರತರಾಗುವಂತೆ ಮಾಡಿ ಭೂಮಿಯನ್ನು ಆಳಿದನು. ಅಪಾರ ನಂಬಿಕೆ ಹಾಗೂ ಸದುದ್ದೇಶದಿಂದ ರಾಜ ಭರತನು ಹಲವಾರು ಯಾಗಗಳನ್ನು ಮಾಡಿದನು.

ವಿಧಿಯು ಮಹಾರಾಜ ಭರತನು ಐಹಿಕ ಐಶ್ವರ್ಯವನ್ನು ಅನುಭೋಗಿಸಲು ಹತ್ತುಸಾವಿರ ವರ್ಷಗಳ ಒಂದು ಸಾವಿರ ಕಾಲವನ್ನು ನಿಗದಿ ಮಾಡಿತು. ಈ ಅವಧಿಯು ಮುಗಿದನಂತರ ಅವನು ಕೌಟುಂಬಿಕ ಜೀವನವನ್ನು ತ್ಯಜಿಸಿ ತನ್ನ ಪೂರ್ವಜರಿಂದ ಸ್ವೀಕರಿಸಿದ ಸಂಪತ್ತನ್ನು ತನ್ನ ಮಕ್ಕಳಿಗೆ ಹಂಚಿದನು.

ಸಕಲ ಐಶ್ವರ್ಯಗಳ ಗಣಿಯಾಗಿದ್ದ ತನ್ನ ಮನೆಯನ್ನು ಬಿಟ್ಟು ಹರಿದ್ವಾರದ ಪುಲಹಾಶ್ರಮಕ್ಕೆ ಆಗಮಿಸಿದನು. ಸಾಲಿಗ್ರಾಮ-ಶಿಲೆಗಳು ಅಲ್ಲಿ ಸಿಗುತ್ತವೆ. ದೇವೋತ್ತಮ ಪರಮ ಪುರುಷನಾದ ಹರಿಯು ತನ್ನ ಭಕ್ತರ ದಿವ್ಯ ಪ್ರೇಮದಿಂದ ಪುಲಹ ಆಶ್ರಮದಲ್ಲಿ ಭಕ್ತರ ಆಕಾಂಕ್ಷೆಯನ್ನು ಪೂರೈಸಲು ಭಕ್ತರಿಗೆ ದರ್ಶನ ನೀಡುತ್ತಾನೆ.

ಭರತ ಮಹಾರಾಜನು ಬಹಳ ಉನ್ನತ ಸ್ಥಾನಕ್ಕೆ ಏರಿದರೂ ಒಂದು ಎಳೆಯ ಜಿಂಕೆಯ ಮೇಲಿನ ವ್ಯಾಮೋಹದಿಂದಾಗಿ ಪತನಕ್ಕೊಳಗಾದನು. ಒಂದುದಿನ ಎಂದಿನಂತೆ ಭರತ ಮಹಾರಾಜ ಗಂಡಕೀ ನದಿಯಲ್ಲಿ ಸ್ನಾನ ಮಾಡಿ ತನ್ನ ಮಂತ್ರಗಳನ್ನು ಪಠಿಸುತ್ತಿದ್ದಾಗ, ನೀರು ಕುಡಿಯಲು ಬಂದ ಒಂದು ಗರ್ಭಿಣಿ ಜಿಂಕೆಯನ್ನು ನೋಡಿದನು.

ಹಠಾತ್ತನೆ ಒಂದು ಸಿಂಹದ ಗರ್ಜನೆಯನ್ನು ಕೇಳಿದ ಜಿಂಕೆ ಎಷ್ಟು ಬೆದರಿತ್ತೆಂದರೆ ತತ್‌ ಕ್ಷಣವೇ ತನ್ನ ಮರಿಗೆ ಜನ್ಮನೀಡಿತು. ಅನಂತರ ನದಿಯನ್ನು ದಾಟಿ ತತ್‌ ಕ್ಷಣವೇ ಸಾವನ್ನಪ್ಪಿತು. ಭರತ ಮಹಾರಾಜ ತಬ್ಬಲಿಯಾದ ಮರಿಯನ್ನಪ್ಪಿಕೊಂಡು ಅದನ್ನು ನೀರಿನಿಂದ ಪಾರು ಮಾಡಿ ಆಶ್ರಮಕ್ಕೆ ಕರೆದೊಯ್ದು ಪ್ರೀತಿಯಿಂದ ಅದನ್ನು ನೋಡಿಕೊಂಡನು.

ಕ್ರಮೇಣವಾಗಿ ಅವನು ಆ ಎಳೆ ಜಿಂಕೆಯ ಬಂಧನದಲ್ಲಿ ಸಿಲುಕಿದನು. ಮತ್ತು ಸದಾ ಅದರ ಬಗ್ಗೆ ಆಲೋಚಿಸಹತ್ತಿದನು. ಅದು ಬೆಳೆದಂತೆ ಭರತ ಮಹಾರಾಜನ ನಿರಂತರ ಸಂಗಾತಿಯಾಯಿತು. ಅವನು ಜಿಂಕೆಯ ಬಗ್ಗೆ ಎಷ್ಟು ತಲ್ಲೀನನಾದನೆಂದರೆ ಅವನ ಮನಸ್ಸು ಚಂಚಲವಾಯಿತು.

ಅವನು ಹೆಚ್ಚು ಹೆಚ್ಚು ಜಿಂಕೆಯಲ್ಲೇ ಮನಸ್ಸಿಟ್ಟನೋ ಅಷ್ಟೇ ಅವರ ಭಕ್ತಿಸೇವೆ ತಗ್ಗಿತು. ಅವರು ತನ್ನ ಸಂಪದ್ಭರಿತ ರಾಜ್ಯವನ್ನು ಬಿಟ್ಟರೂ ಜಿಂಕೆಯೊಂದಿಗೆ ಬಂಧನವನ್ನು ಬಿಡಲಾರದಾದನು. ಹೀಗಾಗಿ ಅವನು ತನ್ನ ಅತೀಂದ್ರಿಯ ಯೋಗ ಸಾಧನೆಯಿಂದ ಕೆಳಗೆ ಬಿದ್ದನು. ಒಮ್ಮೆ ಜಿಂಕೆ ಕಾಣಿಸಲಿಲ್ಲ. ಮಹಾರಾಜ ಭರತನು ಪರಿತಪಿಸಿದನು.

ಅದಕ್ಕಾಗಿ ಹುಡುಕಲಾರಂಭಿಸಿದನು. ಹುಡುಕುತ್ತಾ ಜಿಂಕೆಯ ಕುರಿತು ಚಿಂತಿಸುತ್ತಾ ಭರತರಾಜ ಬಿದ್ದು ಸತ್ತುಹೋದನು. ಅವನು ಮನಸ್ಸಿನ ತುಂಬಾ ಜಿಂಕೆಯ ಆಲೋಚನೆಯೇ ಇದ್ದುದರಿಂದ ಅವನು ಮುಂದಿನ ಜನ್ಮದಲ್ಲಿ ಜಿಂಕೆಯ ಗರ್ಭದಲ್ಲಿ ಹುಟ್ಟಿದನು. ಆದರೆ ಆಧ್ಯಾತ್ಮಿಕವಾಗಿ ಅವನು ಗಣನೀಯ ಸಾಧನೆ ಮಾಡಿದ್ದ ಕಾರಣ ಜಿಂಕೆಯ ದೇಹದಲ್ಲಿದ್ದರೂ ಅವನಿಗೆ ತನ್ನ ಹಿಂದಿನ ಕರ್ಮಗಳು ಗೊತ್ತಿದ್ದವು.

ತನ್ನ ಅತ್ಯುನ್ನತ ಸ್ಥಾನದಿಂದ ಹೇಗೆ ಬಿದ್ದೆನೆಂಬ ಅರಿವು ಅವನಿಗಿತ್ತು. ಇದನ್ನು ನೆನಪಿಸಿಕೊಂಡು ತನ್ನ ತಾಯಿ ಜಿಂಕೆಯನ್ನು ಬಿಟ್ಟು ಮತ್ತೆ ಪುಲಹ-ಆಶ್ರಮಕ್ಕೆ ತೆರಳಿದನು. ಅಂತಿಮವಾಗಿ ಜಿಂಕೆರೂಪದಲ್ಲಿ ತನ್ನ ಫಲಕರ್ಮಗಳನ್ನು ಮುಗಿಸಿ ಸತ್ತಾಗ ಜಿಂಕೆಯ ದೇಹದಿಂದ ಬಿಡುಗಡೆ ಹೊಂದಿದನು.

ಜಿಂಕೆಯ ದೇಹವನ್ನು ಬಿಟ್ಟನಂತರ ಅವನು ಒಬ್ಬ ಬ್ರಾಹ್ಮಣನ ಕೊನೆಯ ಹೆಂಡತಿಯ ಗರ್ಭದಲ್ಲಿ ಜನ್ಮ ತಾಳಿದನು. ಈ ಜೀವನದಲ್ಲೂ ಅವನಿಗೆ ತನ್ನ ಹಿಂದಿನ ಜನ್ಮದ ಕರ್ಮಗಳು ನೆನಪಿನಲ್ಲಿದ್ದವು. ಸಮಾಜದ ಪ್ರಭಾವವನ್ನು ತಪ್ಪಿಸಿಕೊಳ್ಳಲು ಅವನು ಒಬ್ಬ ಕಿವುಡ ಮತ್ತು ಮೂಕನಂತೆ ಇದ್ದುಬಿಟ್ಟನು.

ಅವನು ಮತ್ತೆ ಪತನಕ್ಕೂಳಗಾಗದಿರಲು ತುಂಬಾ ಜಾಗರೂಕನಾಗಿದ್ದನು. ಭಕ್ತರಲ್ಲದ ಯಾರೊಂದಿಗೂ ಅವನು ಬೆರೆಯುತ್ತಿರಲಿಲ್ಲ. ಭರತ ಮಹಾರಾಜನು ಬ್ರಾಹ್ಮಣನ ದೇಹದಲ್ಲಿದ್ದಾಗ ಜನರು ಅವನನ್ನು ಹುಚ್ಚ ಆಲಸಿ ವ್ಯಕ್ತಿ ಎಂದು ಭಾವಿಸಿದರು. ಆದರೆ ಅವನು ಸದಾ ದೇವೋತ್ತಮ ಪರಮ ಪುರುಷನಾದ ವಸುದೇವನನ್ನು ಸ್ತುತಿಸುತ್ತಾ ಧ್ಯಾನದಲ್ಲಿರುತ್ತಿದ್ದನು.

ಅವನ ತಂದೆ ಅವನಿಗೆ ಶಿಕ್ಷಣವನ್ನು ನೀಡಿ, ಉಪನಯನದ ಮೂಲಕ ಪರಿಶುದ್ಧಗೊಳಿಸಿದ್ದರೂ ಅವನು ತಂದೆತಾಯಿಗಳು ತಾನು ಹುಚ್ಚನೆಂದು ಶಾಸ್ತ್ರನಿಧಿಕರ್ಮಗಳಲ್ಲಿ ಆಸಕ್ತರಾಗಿಲ್ಲವೆಂದು ಭಾವಿಸುವಂತೆ ವರ್ತಿಸುತ್ತಿದ್ದನು. ಆದರೆ ಅವನು ಶಾಸ್ತ್ರವಿಧಿಗೆ ಒಳಪಡದ ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ಉಳಿದನು.

ಅವನ ಮೌನವನ್ನು ನೋಡಿ, ಪ್ರಾಣಿ ಸಮಾನದ ಕೆಲವು ಜನರು ಅವನನ್ನು ಹಲವಾರು ರೀತಿಯಲ್ಲಿ ಜರೆದರು. ಆದರೆ ಇದನ್ನು ಅವನು ಸಹಿಸಿಕೊಂಡನು. ತನ್ನ ತಂದೆ ಮತ್ತು ತಾಯಂದಿರ ಸಾವಿನ ಅನಂತರ ಅವನ ಮಲತಾಯಿ ಮತ್ತು ಮಕ್ಕಳು ಅವನನ್ನು ಕೆಟ್ಟದಾಗಿ ನೋಡಿಕೊಂಡರು. ಅವನಿಗೆ ತುಂಬಾ ಕೆಟ್ಟ ಆಹಾರವನ್ನು ನೀಡುತ್ತಿದ್ದರು. ಆತ ಅದನ್ನು ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ. ಅವನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ಮುಳುಗಿದನು.

ಒಂದು ರಾತ್ರಿ ಭತ್ತದ ಹೊಲವನ್ನು ಕಾಪಾಡಲು ಮಲತಾಯಿ ಮತ್ತು ಅವಳ ಮಕ್ಕಳು ಅವನಿಗೆ ಆದೇಶ ನೀಡಿದರು. ಅಂದು ಒಬ್ಬ ಡಕಾಯಿತ ನಾಯಕನು ಅವನನ್ನು ಭದ್ರಕಾಳಿಗೆ ಬಲಿಯಾಗಿ ನೀಡಲು ಎತ್ತಿಕೊಂಡು ಹೋದನು.

ಕಾಳಿದೇವಿಯ ಮುಂದೆ ಅವನನ್ನು ನಿಲ್ಲಿಸಿ ಡಕಾಯಿತರು ಅವನನ್ನು ಕೊಲ್ಲಲು ಕತ್ತಿ ಎತ್ತಿದಾಗ ದೇವಿ ಕಾಳಿ ಭಕ್ತನಿಗೆ ಆಗುತ್ತಿರುವ ದುರ್ವರ್ತನೆಯಿಂದ ವಿಚಲಿತಳಾಗಿ ವಿಗ್ರಹದಿಂದ ಹೊರಗೆ ಪ್ರತ್ಯಕ್ಷಳಾಗಿ ಬಂದು ಆ ಕತ್ತಿಯಿಂದಲೇ ಎಲ್ಲ ಡಕಾಯಿತರನ್ನು ಕೊಂದಳು. ಆದ್ದರಿಂದ ದೇವೋತ್ತಮ ಪರಮ ಪುರುಷನ ಭಕ್ತನೋರ್ವ ಬೇರೆಯವರ ದುರ್ವರ್ತನೆಯಿಂದ ಪ್ರಭಾವಿತನಾಗುವುದಿಲ್ಲ ಎಂದು ಈ ಘಟನೆಯಿಂದ ತಿಳಿದುಕೊಳ್ಳಬಹುದು.

ಸಿಂಧೂ ಮತ್ತು ಸೌವೀರ ರಾಜ್ಯಗಳ ರಾಜನಾದ ರಾಜ ರಹುಗಣನು ಕಪಿಲಾಶ್ರಮಕ್ಕೆ ಹೋಗುತ್ತಿದ್ದನು. ರಾಜನ ಮುಖ್ಯ ಪಲ್ಲಕ್ಕಿ ಹೊತ್ತ ಭಟರು ನದಿ ಇಕ್ಷುಮತಿಯ ದಡವನ್ನು ತಲಪಿದಾಗ ಅವರಿಗೆ ಇನ್ನೊಬ್ಬ ಪಲ್ಲಕ್ಕಿ ಹೊರುವ ಭಟನು ಬೇಕಾಗಿ ಬಂತು. ಅವರು ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಜಡಭರತ ಬಿದ್ದನು.

ಕೂಡಲೇ ಅವನನ್ನು ಪಲ್ಲಕ್ಕಿಯನ್ನು ಹೊರುವಂತೆ ಒತ್ತಾಯ ಮಾಡಿದರು. ಮತ್ತು ಪಲ್ಲಕ್ಕಿಯನ್ನು ಚೆನ್ನಾಗಿ ಹೊರುತ್ತಿಲ್ಲವೆಂದು ದೂಷಿಸಿದರು. ಜಡಭರತನು ಈ ದೂಷಣೆಯನ್ನು ಲೆಕ್ಕಿಸದೇ ವಿನಮ್ರತೆಯಿಂದ ಪಲ್ಲಕ್ಕಿಯನ್ನು ಹೊತ್ತನು. ಪಲ್ಲಕ್ಕಿಯನ್ನು ಹೊರುತ್ತಿದ್ದಾಗ ಒಂದು ಇರುವೆಯ ಮೇಲೂ ಮೆಟ್ಟದಂತೆ ಅವನು ನೋಡಿಕೊಂಡು ನಡೆಯುತ್ತಿದ್ದನು.

ಇರುವೆಯೇನಾದರೂ ಕಂಡುಬಂದಲ್ಲಿ ಅದು ದಾಟುವವರೆಗೆ ಕಾಯುತ್ತಿದ್ದನು. ಹೀಗಾಗಿ ಅವನು ಇತರ ಭಟರಲ್ಲಿ ಸರಿಯಾಗಿ ಹೆಜ್ಜೆ ಹಾಕಲಿಲ್ಲ. ರಾಜನಿಗೆ ತುಂಬಾ ಕೋಪ ಬಂದು ಕೊಳಕು ಭಾಷೆಯಲ್ಲಿ ಅವನನ್ನು ನಿಂದಿಸಿದನು. ತನ್ನ ದೈಹಿಕ ಅಸ್ತಿತ್ವದಿಂದ ಸಂಪೂರ್ಣನಾಗಿ ಮುಕ್ತನಾಗಿದ್ದ ಜಡಭರತನು ವಿರೋಧಿಸದೆ ಇದ್ದುಬಿಟ್ಟನು.

ಅವನು ಪಲ್ಲಕ್ಕಿಯನ್ನು ಹೊರುವುದನ್ನು ಮುಂದುವರಿಸಿದನು. ಆಗ ರಾಜನು ಅವನನ್ನು ಶಿಕ್ಷಿಸುವುದಾಗಿ ಗುಡುಗಿದನು. ರಾಜನ ಬೆದರಿಕೆಯ ಮಾತುಗಳನ್ನು ಕೇಳಿ ಜಡನು ಮಾತನಾಡಲು ಆರಂಭಿಸಿದನು.

ರಾಜನ ಕೆಟ್ಟ ಭಾಷೆಯ ವಿರುದ್ಧ ಪ್ರತಿಭಟಿಸಿದ ಜಡಭರತನ ಮಾತುಗಳನ್ನು ಕೇಳಿ ರಾಜನಿಗೆ ಅವನ ಜ್ಞಾನದ ಅರಿವಾಯಿತು. ತಾನು ಒಬ್ಬ ಮಹಾನ್ ಪಂಡಿತನಾದ ಸಾಧುವಿನಂತಹ ವ್ಯಕ್ತಿಯನ್ನು ಅಗೌರವಿಸಿದೆನೆಂದು ಅರಿತನು. ರಾಜನು ತುಂಬಾ ವಿನಮ್ರತೆಯಿಂದ ಜಡಭರತನಿಗೆ ನಮಿಸಿ ಪ್ರಾರ್ಥಿಸಿಕೊಂಡನು.

ಬ್ರಾಹ್ಮಣ ಜಡಭರತನು ಹೀಗೆಂದನು : ಪ್ರಿಯ ರಾಜನೇ, ನಿನಗೆ ಅನುಭವವಿಲ್ಲದಿದ್ದರೂ ತು೦ಬಾ ಅನುಭವಿಯಂತೆ ಮಾತನಾಡಲು ಪ್ರಯತ್ನಿಸುತ್ತಿರುವೆ. ಇದರಿಂದಾಗಿ ನಿನ್ನನ್ನು ಒಬ್ಬ ಅನುಭವಿ ವ್ಯಕ್ತಿಯೆಂದು ಭಾವಿಸಲಾಗದು. ಒಬ್ಬ ಅನುಭವಿ ವ್ಯಕ್ತಿಯು ನಿನ್ನಂತೆ ಒಡೆಯ ಮತ್ತು ಸೇವಕ ಸಂಬಂಧದ ಬಗ್ಗೆಯಾಗಲಿ ಅಥವಾ ಐಹಿಕ ನೋವು ಮತ್ತು ನಲಿವುಗಳ ಬಗ್ಗೆ ಈ ರೀತಿ ಮಾತನಾಡುವುದಿಲ್ಲ.

ಇವೆಲ್ಲಾ ಕೇವಲ ಬಾಹ್ಯಾಚರಣೆಗಳಷ್ಟೇ. ಯಾವುದೇ ಉನ್ನತ ಮಟ್ಟಕ್ಕೆ ಏರಿದ, ಅನುಭವಿ ವ್ಯಕ್ತಿಯು – ಪರಮ ಸತ್ಯವನ್ನು ಪರಿಗಣಿಸಿ ನಿನ್ನಂತೆ ಮಾತನಾಡುವುದಿಲ್ಲ. ಜಡಭರತನು ಮಹಾರಾಜ ರಹುಗಣನಿಗೆ ಎಲ್ಲವನ್ನೂ ವಿವರಿಸಿದರೂ ಇದನ್ನು ಸ್ಪಷ್ಟವಾಗಿ ಅರಿಯಲು ರಾಜನ ಬುದ್ಧಿಶಕ್ತಿಯು ಪರಿಪೂರ್ಣವಾಗಿರಲಿಲ್ಲವೆಂದು ಕಾಣುತ್ತದೆ. ಹೀಗಾಗಿ ಅವನು ಮತ್ತಷ್ಟು ವಿವರಣೆಯನ್ನು ಕೇಳಿದನು.

ನನ್ನ ಪೂರ್ವ ಜನ್ಮದಲ್ಲಿ ನಾನು ಮಹಾರಾಜ ಭರತನೆಂದು ತಿಳಿಯಲ್ಪಟ್ಟಿದ್ದೆ. ಪ್ರತ್ಯಕ್ಷ ಅನುಭವವನ್ನು ಐಹಿಕ ಕಾವ್ಯಗಳಿಂದ ಪಡೆದು ಸಂಪೂರ್ಣವಾಗಿ ಮುಕ್ತನಾಗಿ ಮತ್ತು ವೇದಗಳಿಂದ ಜ್ಞಾನ ಸಂಪಾದಿಸಿ ಪರೋಕ್ಷ ಅನುಭವವನ್ನು ಗಳಿಸಿದ ನಾನು ಪರಿಪೂರ್ಣತೆಯನ್ನು ಸಾಧಿಸಿದೆ.

ನಾನು ಸಂಪೂರ್ಣವಾಗಿ ಪ್ರಭುವಿನ ಸೇವೆಯಲ್ಲಿ ನಿರತನಾಗಿದ್ದೆ. ಆದರೆ ದುರದೃಷ್ಟವಶಾತ್ ನಾನು ಒಂದು ಸಣ್ಣ ಜಿಂಕೆಯಲ್ಲಿ ತುಂಬಾ ವ್ಯಾಮೋಹಿತನಾಗಿ ನನ್ನ ಆಧ್ಯಾತ್ಮಿಕ ಕರ್ತವ್ಯಗಳನ್ನು ಅಲಕ್ಷಿಸಿದೆ. ಜಿಂಕೆಯ ವ್ಯಾಮೋಹದಿಂದಾಗಿ ನನ್ನ ಮುಂದಿನ ಜನ್ಮದಲ್ಲಿ ನಾನು ಜಿಂಕೆಯ ರೂಪ ತಾಳಿದೆ.

ಜಡಭರತನ ಈ ಮಾತುಗಳನ್ನು ಕೇಳಿ ಮಹಾರಾಜ ರಹುಗಣನು ತನ್ನ ಕೃಷ್ಣ ಪ್ರಜ್ಞೆಯನ್ನು ಪುನಶ್ಚೇತನಗೊಳಿಸಿ ಜಡಭರತನ ಸಂಗದಿಂದ ಉಪಯೋಗ ಪಡೆದನು. ತನ್ನ ಭ್ರಮೆಯು ಕಳೆದುಹೋದದ್ದನ್ನು ಅರಿತು ಅವನು ತನ್ನ ದುರ್ವರ್ತನೆಗಾಗಿ ಜಡಭರತನಲ್ಲಿ ‘ಕ್ಷಮೆಯಾಚಿಸಿದನು.

ಇದನ್ನು ಶುಕದೇವ ಗೋಸ್ವಾಮಿಯವರು ಮಹಾರಾಜ ಪರೀಕ್ಷಿತನಿಗೆ ಹೇಳಿದರು. ಮಹಾನ್ ಭಕ್ತ ಜಡಭರತನಿಂದ ಈ ಪಾಠವನ್ನು ಕಲಿತು ಸೌವೀರ ರಾಜ್ಯದ ರಾಜನಾದ ರಹುಗಣನು ಆತ್ಮದ ಸಹಜ ಸ್ವರೂಪವನ್ನು ಅರಿತನು. ಅನಂತರ ಅವನು ತನ್ನ ದೈಹಿಕ ಭಾವನೆಯನ್ನು ಸಂಪೂರ್ಣವಾಗಿ ತ್ಯಜಿಸಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi