“ಕೃಷ್ಣನಿಲ್ಲದೆ ನನಗೆ ಮೂರು ಲೋಕವೂ ಶೂನ್ಯ” ಎಂದು ಚೈತನ್ಯ ಹೇಳಿದ್ದಾರೆ. ಆಚಾರ್ಯ ಶ್ರೀಲ ಪ್ರಭುಪಾದರು ಕೂಡ ಕೃಷ್ಣನ ಬಗೆಗೆ ಇದೆ ಸ್ತರದಲ್ಲಿ ಚಿಂತಿಸುತ್ತಿದ್ದರು. ಕೃಷ್ಣ ಕಥನ ಎರಡು ಬಗೆಯಾದದ್ದು ಒಂದು ಶ್ರೀಕೃಷ್ಣನೇ ನೇರವಾಗಿ ಹೇಳುವ ಭಗವದ್ಗೀತೆಯಂಥ ಕಥನ.

ಇನ್ನೊಂದು, ಭಾಗವತದ ಆಚಾರ್ಯಶುಕರು ಶ್ರೀಕೃಷ್ಣನ ಬಗೆಗೆ ಮಾಡಿರುವ ಕಥನಗಳು. ಹೀಗೆ “ಶ್ರೀಕೃಷ್ಣನ ಲೀಲೆಗಳು” ಎಂಬ ಪುಸ್ತಕ ಇಮ್ಮೈಯ ಕಾಂತಿಯನ್ನು ಗಳಿಸಿಕೊಂಡಿದೆ. ಯೋಗಾತ್ಮನಾದ ಶ್ರೀಕೃಷ್ಣನ ಅತೀಂದ್ರಿಯ ಭೋಗಾತ್ಮನಾಗಿಯೂ ಮೆರೆದಿರುವ ಸಂಗತಿ ಈ ಲೀಲಾ ವಾಚನದಿಂದ ಸ್ಫುಟವಾಗುತ್ತದೆ. ಬಾಲ್ಯ ತಾರುಣ್ಯ ಮುಪ್ಪುಗಳಲ್ಲಿ ಹಾದು ಹೋಗುವ ಶ್ರೀಕೃಷ್ಣ ಈ ಮೂರು ಸ್ಥಿತಿಗಳಲ್ಲೂ ಒಂದೇ ಜ್ವಲಂತ ಸತ್ತ್ವವನ್ನು ಪ್ರಕಾಶಿಸಿರುವುದು ಈ ಕಥನಗಳಿಂದ ಸ್ಪಷ್ಟವಾಗುತ್ತದೆ.
ಈ ಕಥೆಗಳನ್ನು ಓದಿದವರಿಗೆ “ಪರೀಕ್ಷಿತ ಸ್ಥಿತಿ” ಬರುವುದರಲ್ಲಿ ಸಂಶಯವಿಲ್ಲ. ಗಂಗಾನದಿಯ ದಡದಲ್ಲಿ ನಿರಶನವ್ರತ ಕೈಗೊಂಡು ಪರೀಕ್ಷಿತನು ಶ್ರೀಶುಕರಿಂದ ಈ ಕಥೆಗಳನ್ನು ಕೇಳಿದನಂತೆ. ಆದುದರಿಂದ ಅವನಿಗೆ ಹಸಿವಾಗಲಿ ಆಯಾಸವಾಗಲಿ ಆಗುತ್ತಿರಲಿಲ್ಲವಂತೆ.
ಇಲ್ಲಿ ಬರುವ ಕಥೆಗಳೆಲ್ಲ ನೀವು ಹಿಂದೆ ಕೇಳಿದ ಕಥೆಗಳೇ, ಆದರೆ ಸುಂದರ ವ್ಯಾಖ್ಯಾನದ ಮರುಹುಟ್ಟು ಪಡೆದು ಮೋಹಕವಾಗಿವೆ.
ಉದಾಹರಣೆಗೆ ಪೂತನಿಯ ಕಥೆಯಲ್ಲಿ ಲೇಖಕರು ಶ್ರೀಕೃಷ್ಣನಂಥ ಲೋಕಶ್ರಯನಿಗೆ ಎದೆಹಾಲು ಕುಡಿಸಿದ್ದರಿಂದ ಅವನ ಜನ್ಮ ಪಾವನವಾಯಿತು ಎನ್ನುತ್ತಾರೆ. ತೃಣಾವರ್ತನ ಕಥೆ ಇನ್ನೊಂದು ಸೋಜಿಗ.
ಕಂಸನಿಯುಕ್ತನಾಗಿ ಬಿರುಗಾಳಿಯ ರೂಪದಲ್ಲಿ ಆಕ್ರಮಣ ಮಾಡಿದ ಈತನ ಅಟ್ಟಹಾಸದಿಂದ ಯಶೋದೆಯ ಕಣ್ಣಲ್ಲಿ ಧೂಳು ಮುಸುಕಿದುದನ್ನು ಅವಳು ಕೃಷ್ಣನಿಗಾಗಿ ಹುಡುಕಾಡಿದುದನ್ನು ರೋಚಕವಾಗಿ ಕಥನಿಸಿದ್ದಾರೆ. ಬಿರುಗಾಳಿಗೂ ಉಸಿರು ಸಿಕ್ಕಿಸಿ ಕೃಷ್ಣನು ಕೊಂದ ಸಂಗತಿ ಅದ್ಭುತವಾಗಿ ಚಿತ್ರಿತವಾಗಿದೆ. ನಮ್ಮ ಬದುಕು ಎಬ್ಬಿಸುವ ಕಷ್ಟದ ಬಿರುಗಾಳಿಯನ್ನು ಚಿಕ್ಕಂದಿನಿಂದಲೇ ಹೇಗೆ ಎದುರಿಸಬೇಕು ಎಂದು ಹೇಳಿಕೊಡುವ ಕಥೆ ಇದು.
ಮಣ್ಣು ತಿಂದು ಬಾಯಿ ಬಿಟ್ಟಾಗ ಯಶೋದೆಗೆ ಮಗನ ಪುಟ್ಟ ಬಾಯಲ್ಲಿ ಸಮಸ್ತ ಚರಾಚರ ಜಗತ್ತು ಕಾಣಿಸಿದ್ದು; ಶ್ರೀಕೃಷ್ಣನ ಕಾಟ ತಡೆಯಲಾರದೆ ಒರಳುಕಲ್ಲಿಗೆ ಕಟ್ಟಿಹಾಕಿದ್ದು, ವತ್ಸಾಸುರನನ್ನು ಗಿರಗಿರನೆ ತಿರುಗಿಸಿಕೊಂದದ್ದು, ಅಜಗರ, ಬಕ, ಅಘಾಸುರ ಈ ಪೀಡೆಗಳನ್ನೆಲ್ಲಾ ಮುಗಿಸಿದ್ದು ಮತ್ತು ಧೇನುಕ, ಪ್ರಲಂಬ, ಹೆಬ್ಬಾವು, ಶಂಖಾಸುರ ಇವರೆಲ್ಲರ ಕಥೆ ಮನಸ್ಸಿಗೆ ಮುದ ನೀಡುವಂತಿದೆ.
ವ್ರತ ನಿಷ್ಠರಾದ ಬ್ರಾಹ್ಮಣರು ಕೃಷ್ಣನಿಗೆ ಆಹಾರ ಕೊಡಲು ನಿರಾಕರಿಸಿದಾಗ ಮುಗ್ಧ ಭಕ್ತಿಯ ಹೆಂಗಸರು ಭಾಂಡೀರ ವೃಕ್ಷದ ಬಳಿಗೆ ತಾವೇ ಆಹಾರ ತಂದ ಕಥೆ ಶಾಸ್ತ್ರಮುಖಕ್ಕಿಂತ ಹೃದಯ ಮುಖವೇ ಆಪ್ತವೆಂಬುದನ್ನು ವಿವರಿಸುತ್ತದೆ.
ಈ ಕಥೆಗಳು ತಮ್ಮ ಒಡಲಲ್ಲಿ ಸುಂದರ ಸಂದೇಶಗಳನು ಇಟ್ಟುಕೊಂಡಿದೆ. ಮನುಷ್ಯ ಚಿಕ್ಕಂದಿನಿಂದಲೇ ಧೈರ್ಯಶಾಲಿಯಾಗಿ ಬದುಕಲೇಬೇಕೆಂಬ ಮುಖ್ಯ ಸಂದೇಶ ಶ್ರೀಕೃಷ್ಣನ ಪ್ರಯೋಗಗಳಿಂದ ಧ್ವನಿತವಾಗುತ್ತದೆ.
ಈ ಸುಂದರ ಪುಸ್ತಕದಲ್ಲಿ ಕಥೆಯ ಹೂರಣವನ್ನೆಲ್ಲ ಹೀರಿಕೊಂಡಿರುವ ಚಿತ್ರಕಲಾವಿದನ ಗೆರೆಗಳ ಸೋಗಸನ್ನು ಮೆಚ್ಚಿಕೊಂಡಿದ್ದಾರೆ.
ಕಥೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರ ನೆಪದಲ್ಲಿ ಬದುಕನ್ನು ಉದ್ಬೋಧಗೊಳಿಸುವ ಸೂಕ್ಷ್ಮ ಸಂದೇಶಗಳು ಕಥೆಯಲ್ಲಿದ್ದರೆ ಸುವರ್ಣಕ್ಕೆ ಕಂಪು ಕಟ್ಟಿದಂತಾಗುತ್ತದಲ್ಲವೆ? ಅಂಥ ಕಂಪು ಈ ಕಥೆಗಳಲ್ಲಿ ಲವಲವಿಸಿದೆ.






Leave a Reply