ನಾಮ ಸಂಕೀರ್ತನೆಗೆ ಜಯ

(ಶ್ರೀ ಚೈತನ್ಯ ಮಹಾಪ್ರಭುಗಳ ಜೀವನದ ಘಟನೆಯನ್ನಾಧರಿಸಿ ಬರೆದ ಕಿರುಗತೆ)

ಒಮ್ಮೆ ಶ್ರೀ ಕೃಷ್ಣನು ತನ್ನ ರಮಣಿ ರುಕ್ಕಿಣಿಯೊಡನೆ ಪಗಡೆಯಾಟವನ್ನಾಡುತ್ತಿದ್ದನು. ಆಟದಲ್ಲಿ ಸೋತವರು ಗೆದ್ದವರ ಆಸೆಯನ್ನು ಪೂರೈಸಬೇಕೆಂದು ತೀರ್ಮಾನವಾಯಿತು. ರುಕ್ಕಿಣಿಯ ಚೆಲುವನ್ನೇ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದ ಶೃಂಗಾರಪ್ರಿಯ ಕೃಷ್ಣ ಆಟದ ಮೇಲೆ ಸರಿಯಾಗಿ ಗಮನವಿಡದಿದ್ದರಿಂದ ರುಕ್ಕಿಣಿಗೇ ಗೆಲುವಾಯಿತು.

“ನಾಥ ನೀವು ಮೊದಲೇ ಮಾತುಕೊಟ್ಟಂತೆ ಈಗ ನನ್ನ ಆಸೆಯನ್ನು ಪೂರೈಸಬೇಕು” ರುಕ್ಕಿಣಿ ಕೇಳಿದಳು.

“ಕೇಳು ಪ್ರಿಯೆ, ಒಂದಲ್ಲ ನಿನ್ನ ನೂರು ಆಸೆಗಳನ್ನು ಪೂರೈಸಲು ಸಿದ್ಧನಾಗಿದ್ದೇನೆ,” ಕೃಷ್ಣ ಉತ್ಸುಕನಾಗಿ ಕೇಳಿದ.

“ಇಂದಿನ ದಿನಗಳಲ್ಲಿ ಭೂಲೋಕದ ಜನರು ನಿಮ್ಮಲ್ಲಿ ಭಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಯಜ್ಞಯಾಗಾದಿಗಳನ್ನು ಮರೆತುಬಿಟ್ಟಿದ್ದಾರೆ. ದುರ್ವ್ಯಸನಿಗಳಾಗತೊಡಗಿದ್ದಾರೆ. ಸಕಲ ಚರಾಚರ ವಸ್ತುಗಳ ತ೦ದೆಯಾದ ಅವರನ್ನುದ್ಧರಿಸುವುದಕ್ಕಾಗಿ ನೀವು ಮತ್ತೊಮ್ಮೆ ಭೂಮಿಯಲ್ಲಿ ಅವತರಿಸಬೇಕು; ಎಂದು ಆ ಶುಭಾಂಗಿಯು ಬಹಳ ಕಳಕಳಿಯಿಂದ ತನ್ನ ಆಸೆಯನ್ನು ಪತಿಯ ಮುಂದಿಟ್ಟಳು.

“ಒಪ್ಪಿದೆ, ರುಕ್ಕಿಣಿ. ಜಗನ್ಮಾತೆಯಾದ ನೀನು, ನಿನ್ನ ಮಕ್ಕಳ ಒಳಿತನ್ನು ಕುರಿತು ಚಿಂತಿಸುವುದು ಸ್ವಾಭಾವಿಕವೇ. ನಿನ್ನ ಯೋಗ್ಯತೆಗೆ ತಕ್ಕ ವರವನ್ನೇ ಬೇಡಿದೆ. ಮನಃಪೂರ್ತಿಯಾಗಿ ಅದನ್ನು ನೆರವೇರಿಸುತ್ತೇನೆ. ಹಿಂದಿನ ಒಂಬತ್ತು ಅವತಾರಗಳಲ್ಲಿಯೂ ಸಾಧಿಸದ ಮಹತ್ಕಾರ್ಯವನ್ನು ಈಗ ಸಾಮಾನ್ಯ ಮಾನವನ ರೂಪದಲ್ಲಿ ಸಾಧಿಸುತ್ತೇನೆ.

ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಗೌರವಿಸದಿರುವ ಕಾರಣ ಕಲಿಯುಗದಲ್ಲಿ ಯಜ್ಞ ಯಾಗಾದಿಗಳನ್ನು ಇತರ ಯುಗಗಳಲ್ಲಿ ನಡೆಸುತ್ತಿದ್ದಂತೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಕಲಿಯುಗದಲ್ಲಿ ಜನರು ಕೈಗೊಳ್ಳಬಹುದಾದಂತಹ ಸುಲಭವಾದ ಯಜ್ಞವನ್ನು ಅವರಿಗೆ ಕಲಿಸಿಕೊಡುತ್ತೇನೆ. ಅದೇ ಸಂಕೀರ್ತನ ಯಜ್ಞ ಶುಭಸ್ಯ ಶೀಘ್ರಂ. ಇದೋ ಹೊರಟೆ,” ಎಂದು ಶ್ರೀ ಕೃಷ್ಣನು ರುಕ್ಕಿಣಿಯಿಂದ ಬೀಳ್ಕೊಳ್ಳಲನುವಾದ.

“ಇನ್ನೊಂದು ಮಾತು, ದೇವ. ಕೃಷ್ಣಾವತಾರದಲ್ಲಿ ನೀವು ನೀಲಮೇಘ ಶ್ಯಾಮನಾಗಿ ಗೋಪಿಕೆಯರ ಮನಸೆಳೆದಿರಿ. ಈಗಲೂ ಸಹ ಭೂಲೋಕದ ಮೂಢರು ತಾವು ಮಾಡುವ ಅಕಾರ್ಯಕ್ಕೆ ನಿಮ್ಮ ಉದಾಹರಣೆ ಕೊಡುತ್ತಾರೆ. ನೀವು ಈಗ ಬಂಗಾರದ ಮೈ ಬಣ್ಣದ ಮುದ್ದು ಶಿಶುವಾಗಿ ಸಾಮಾನ್ಯ ಕುಟುಂಬದಲ್ಲಿ ಜನಿಸಬೇಕೆಂದು ನನ್ನಾಸೆ. ನಾನು ಸಹ ನಿಮ್ಮನ್ನು ಹಿಂಬಾಲಿಸುತ್ತೇನೆ.” ರುಕ್ಮಿಣಿ ಅರೆಬರೆ ಸಂಕೋಚದಿಂದ ತಲೆ ತಗ್ಗಿಸಿಕೊಂಡು ಹೇಳಿದಳು.

“ಬೇಡ ಮನೋಹರಿ, ನಿನ್ನ ಆರೋಪವನ್ನು ಸುಳ್ಳು ಮಾಡಲು ನಾನು ತಾರುಣ್ಯದಲ್ಲೇ ಸಂನ್ಯಾಸವನ್ನು ಸ್ವೀಕರಿಸುತ್ತೇನೆ. ಚೇತನರ ಉದ್ಧಾರವೇ ಉದ್ದೇಶವಾದ್ದರಿಂದ ಚೈತನ್ಯನಾಗುತ್ತೇನೆ.”

ಹೀಗೆ ಚೈತನ್ಯ ಮಹಾಪ್ರಭುಗಳು ಬಂಗಾಳಕ್ಕೆ ಸೇರಿದ ನವದ್ವೀಪದ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನ್ಮತಾಳಿದರು. ಅಂದಿನ ದಿನಗಳಲ್ಲಿ ಬಂಗಾಳ ಪ್ರದೇಶವು ಪಠಾಣರ ಆಡಳಿತಕ್ಕೊಳಪಟ್ಟಿತ್ತು. ನವಾಬ್‌ ಹುಸೇನ್ ಶಹ ಎನ್ನುವವನು

ರಾಜನಾಗಿದ್ದನು. ನವದ್ವೀಪದಲ್ಲಿಯೂ ಸಹ ಮಹಮ್ಮದೀಯನೇ ನ್ಯಾಯಾಧೀಶನಾಗಿದ್ದನು. ಅವನನ್ನು ಕಾಜಿ ಎಂದು ಕರೆಯುತ್ತಿದ್ದರು.

ಶ್ರೀಕೃಷ್ಣನು ಸಾಂದೀಪನಿ ಮುನಿಯ ಬಳಿ ವಿದ್ಯೆ ಕಲಿತಂತೆ ಜ್ಞಾನ ಭಂಡಾರವೇ ಮೂರ್ತಿವೆತ್ತಂತಿದ್ದ ಚೈತನ್ಯರೂ ಸಹ ಗುರುಗಳ ಬಳಿ ವಿದ್ಯಾಭ್ಯಾಸ ಮಾಡಿದನಂತರ ತಮ್ಮದೇ ಆದ ಶಾಲೆಯನ್ನು ಪ್ರಾರಂಭಿಸಿದರು. ಶಾಲೆಯಲ್ಲಿ (ಚತುಷ್ಪಾಠೀ) ಶ್ರೀ ಕೃಷ್ಣ ಚರಿತೆಯನ್ನೇ ಬೋಧಿಸುತ್ತಿದ್ದರು.

ವ್ಯಾಕರಣ ಪಾಠ ಮಾಡುವಾಗಲೂ ಸಹ ಕೃಷ್ಣ ಪರಮಾತ್ಮನ ಸಂಬಂಧವಾದ ವಾಕ್ಯಗಳನ್ನೇ ಉದಾಹರಿಸುತ್ತಿದ್ದರು. ಅವರ ಸರಳ ಸ್ವಭಾವ, ಪಾಂಡಿತ್ಯ ಮತ್ತು ಬೋಧನಾ ಕ್ರಮದಿಂದ ಆಕರ್ಷಿತರಾಗಿ ಅವರ ಶಿಷ್ಯ ವೃಂದ ಬೆಳೆಯತೊಡಗಿತು. ಅಷ್ಟೇ ಅಲ್ಲದೆ ಅವರು ನವದ್ವೀಪದಲ್ಲಿ ಶ್ರೀಕೃಷ್ಣನಾಮದ ಸಾಮೂಹಿಕ ಜಪವನ್ನು ಪ್ರಾರಂಭಿಸಿದರು.

ಸಹಸ್ರ ಸಂಖ್ಯೆಯಲ್ಲಿ ಜನರು ಶ್ರೀ ಚೈತನ್ಯರನ್ನು ಹಿಂಬಾಲಿಸಿದರು. ಅವರ ಜನಪ್ರಿಯತೆಯನ್ನು ಕ೦ಡು ಅಸೂಯಾಪರರಾದ ಕೆಲ ಬ್ರಾಹ್ಮಣರು ಕಾಜಿಯ ಬಳಿ ದೂರು ಕೊಟ್ಟರು. ದೂರನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಕಾಜಿ ಸಾಹೇಬರು ಸಾಮೂಹಿಕ ಸಂಕೀರ್ತನೆಯ ವಿರುದ್ಧ ಆಜ್ಞೆ ಹೊರಡಿಸಿದರು. ಊರಿನ ಬೀದಿಗಳಲ್ಲಿ ಸರ್ಕಾರದ ಜನ ಡಂಗೂರ ಸಾರಿದರು :

“ಪುರ ಜನರೇ, ಕೇಳಿ, ನಗರದ ಬೀದಿಗಳಲ್ಲಿ ಸಂಕೀರ್ತನೆ ಮಾಡುತ್ತ ಗುಂಪು ಗುಂಪಾಗಿ ಮೆರವಣಿಗೆ ನಡೆಸುವುದರಿ೦ದ ಶಾಂತಿಗೆ ಭಂಗವುಂಟಾಗುತ್ತದೆ. ಆದ್ದರಿಂದ ಇನ್ನು ಮುಂದೆ ಎಲ್ಲರೂ ತಮ್ಮ ಮನೆಗಳಲ್ಲಿ ಪೂಜಾ ಪಾಠಗಳನ್ನು ನಡೆಸಬೇಕೇ ಹೊರತು ಬೀದಿಗಳಲ್ಲಿ ಭಜನೆ ಮಾಡುತ್ತ ಸಾಗುವಂತಿಲ್ಲ. ಇದು ಸರ್ಕಾರದ ಪರವಾಗಿ ಕಾಜಿಯವರ ಆಜ್ಞೆ. ಉಲ್ಲಂಘಿಸಿದವರು ತೀವ್ರ ಶಿಕ್ಷೆಗೊಳಗಾಗುತ್ತಾರೆ.”

ವಿಷಯ ತಿಳಿದ ಚೈತನ್ಯರು ಧೃತಿಗೆಡಲಿಲ್ಲ. ಅವರು ಶ್ರೀ ಕೃಷ್ಣನ ಪರವಾಗಿ ಹೋರಾಡುವ ಧೀರ ವೈಷ್ಣವರಾಗಿದ್ದರು. ನವದ್ವೀಪದ ಮತ್ತು ಸುತ್ತಮುತ್ತಲಿನ ಊರುಗಳ ವೈಷ್ಣವರನ್ನೆಲ್ಲ ಕಲೆಹಾಕಿ ಅವರನ್ನುದ್ದೇಶಿಸಿ ಮಾತನಾಡಿದರು. “ವೈಷ್ಣವನು ಧೀರೋದಾತ್ತನಾದ ಕೃಷ್ಣಭಕ್ತ ಮತ್ತು ಅವನು ಕೃಷ್ಣ ಭಕ್ತಿಯನ್ನು ಪ್ರಸಾರ ಮಾಡುವ ಸತ್ಕಾರ್ಯವನ್ನು ಧೈರ್ಯ ಮತ್ತು ನಿಷ್ಠೆಗಳಿಂದ ಕೈಗೊಳ್ಳಬೇಕು.

ತನ್ನ ಉದ್ದೇಶ ಸಾಧನೆಯ ಮಾರ್ಗದಲ್ಲಿ ಬರುವ ತೊಡಕುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಬೇಕು. ವೈಷ್ಣವನು ಎಂದಿಗೂ ಹೇಡಿಯಲ್ಲ. ಕೃಷ್ಣ ಭಕ್ತನಾದ ಅರ್ಜುನನು ಕೃಷ್ಣವಾಕ್ಯ ಪರಿಪಾಲನೆಗಾಗಿ ಕೌರವರೊಡನೆ ಯುದ್ಧ ಮಾಡಿ ಕೃಷ್ಣ ಕೃಪೆಯಿಂದ ಜಯಗಳಿಸಿದನು.

ರಾಮ ಭಕ್ತನಾದ ಹನುಮಂತನು ಅಭಕ್ತನಾದ ರಾವಣನಿಗೆ ಪಾಠ ಕಲಿಸಿದನು. ಶ್ರೀಕೃಷ್ಣ ಪರಮಾತ್ಮನನ್ನು ಸಂತೃಪ್ತಿಗೊಳಿಸುವುದೇ ವೈಷ್ಣವನ ಧರ್ಮ. ವೈಷ್ಣವನು ಸ್ವಭಾವತಃ ಅಹಿಂಸಾಪರ, ಶಾಂತಿಪ್ರಿಯ ಮತ್ತು ಕೃಷ್ಣನಲ್ಲಿರುವ ಸದ್ಗುಣಗಳೆಲ್ಲ ಅವನಲ್ಲಿವೆ. ಆದರೆ ಅಭಕ್ತನು ಶ್ರೀಕೃಷ್ಣನ ಚರಣಾರವಿಂದಗಳಲ್ಲಿ ದೋಷವನ್ನೆಸಗುವುದನ್ನು ಮಾತ್ರ ಅವನು ಸಹಿಸಲಾರ.

ಕೃಷ್ಣನೂ ಕೃಷ್ಣನಾಮವೂ ಒಂದೇ. ಇಂದಿನ ಪರಿಸ್ಥಿತಿಯಲ್ಲಿ ಸಂಕೀರ್ತನ ಯಜ್ಞವೇ ನಮ್ಮ ಅಜ್ಞಾನವನ್ನು ತೊಡೆದುಹಾಕಬಲ್ಲ ಏಕೈಕ ಸಾಧನ. ಆದ್ದರಿಂದ ಸಾಮೂಹಿಕ ನಾಮ ಸಂಕೀರ್ತನೆಯನ್ನು ಮುಂದುವರಿಸಿ, ಹೆದರಬೇಡಿ” ಎಂದು ಹುರಿದುಂಬಿಸಿದರು.

ಮಾರನೆಯ ದಿನ ಶ್ರೀ ಚೈತನ್ಯ ಪ್ರಭುಗಳ ಮುಖಂಡತ್ವದಲ್ಲಿ ಹತ್ತು ಸಾವಿರ ಜನರು ಕರತಾಲ, ಮೃದಂಗಗಳನ್ನು ನುಡಿಸುತ್ತ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂದು ಸಾಮೂಹಿಕವಾಗಿ ನವದ್ವೀಪದ ರಸ್ತೆಗಳಲ್ಲಿ ಸಂಕೀರ್ತನೆ ಮಾಡುತ್ತ ಕಾಜಿಯ ಮನೆಯ ಮುಂದಿನ ರಸ್ತೆಯಲ್ಲಿ ಸಾಗಿದರು.

ದೊಡ್ಡ ಗುಂಪನ್ನು ನೋಡಿ ಹೆದರಿದ ಕಾಜಿಯು ಮನೆಯ ಮಹಡಿಯಲ್ಲಿ ಬಚ್ಚಿಟ್ಟುಕೊಂಡನು. ಜನರು ಉತ್ತೇಜಿತರಾಗುತ್ತಿರುವುದನ್ನು ಕಂಡ ಶ್ರೀ ಚೈತನ್ಯರು ಶಾಂತಿಯಿಂದಿರುವಂತೆ ಎಲ್ಲರನ್ನೂ ಕೇಳಿಕೊಂಡರು. ತಾವೊಬ್ಬರೇ ಕಾಜಿಯ ಮನೆಯೊಳಗೆ ಹೋಗಿ ಅವರನ್ನು ಕೆಳಗಿಳಿದು ಬರುವಂತೆ ಕರೆದರು.

ಮೊದಲೇ ಹೆದರಿದ್ದ ಕಾಜಿ ಒಳ್ಳೆಯ ಮಾತುಗಳನ್ನಾಡಿ ಶ್ರೀ ಚೈತನ್ಯರನ್ನು ಒಲಿಸಿಕೊಳ್ಳಬೇಕೆಂದು ಯೋಚಿಸುತ್ತ ಕೆಳಗಿಳಿದು ಬಂದನು. “ಮಗೂ, ವಾರೆಯಲ್ಲಿ ನೀನು ನನಗೆ ಸೋದರಳಿಯನಾಗಬೇಕು. ನಾನು ನೀಲಾಂಬರರನ್ನು ಚಿಕ್ಕಪ್ಪ ಎಂದು ಕರೆಯುತ್ತೇನೆ. ಆದ್ದರಿಂದ ಅವರ ಮಗಳು ಮತ್ತು ನಿನ್ನ ತಾಯಿ ಶಚೀದೇವಿ ನನಗೆ ಸಹೋದರಿಯ ಸಮಾನ. ನೀನು ಹೀಗೆ ಸೋದರ ಮಾವನ ಮೇಲೆ ಕೋಪಿಸಿಕೊಳ್ಳುವುದು ಸರಿಯೇ?” ಎಂದು ಬೆಣ್ಣೆಯಂತಹ ಮಾತುಗಳನ್ನಾಡಿದನು.

“ಮಾವಾ, ಸೋದರಳಿಯನು ಮನೆಗೆ ಬಂದಾಗ ಪ್ರೀತಿ, ಆದರಗಳಿಂದ ಅವನನ್ನು ಸ್ವಾಗತಿಸುವುದನ್ನು ಬಿಟ್ಟು, ಮಹಡಿಯ ಮೇಲೆ ಹೋಗಿ ಕುಳಿತುಕೊಳ್ಳುವುದು ನಿಮಗೆ ತರವೇ?” ಎಂದು ಶ್ರೀ ಚೈತನ್ಯರು ಅದೇ ಧಾಟಿಯಲ್ಲಿ ಪ್ರತ್ಯುತ್ತರವನ್ನು ನೀಡಿದರು. ಅನಂತರ ಇಬ್ಬರೂ ಕಾಜಿಯ ಮನೆಯ ಜಗುಲಿಯ ಮೇಲೆ ಕುಳಿತು ಧರ್ಮ ಚರ್ಚೆಯನ್ನು ಪ್ರಾರಂಭಿಸಿದರು.

ಕುರಾನನ್ನು ಚೆನ್ನಾಗಿ ಮನನ ಮಾಡಿಕೊಂಡಿದ್ದ ಕಾಚಿಯ ಪ್ರಶ್ನೆಗಳಿಗೆ ಶ್ರೀ ಚೈತನ್ಯ ಪ್ರಭುಗಳು ವೇದಶಾಸ್ತ್ರಗಳ ಪ್ರಮಾಣಗಳೊಡನೆ ಉತ್ತರಿಸಿದರು. ಅಲ್ಲದೆ ಕಲಿಯುಗದಲ್ಲಿ ಸಂಕೀರ್ತನ ಯಜ್ಞದ ಅವಶ್ಯಕತೆಯನ್ನು ಮತ್ತು ಮಹತ್ವವನ್ನೂ ತಿಳಿಸಿ ಹೇಳಿದರು. ಶ್ರೀ ಚೈತನ್ಯ ಮಹಾಪ್ರಭುಗಳ ಮಾತುಗಳಲ್ಲಿದ್ದ ಸತ್ಯವನ್ನು ಮನಗಂಡ ಕಾಜೆಯ ಅವರ ಅನುಯಾಯಿಯಾದನು ಮತ್ತು ನಾಮ ಸಂಕೀರ್ತನವು ನಿರ್ಬಾಧಿತವಾಗಿ ನಡೆಯುವಂತೆ ಆಜ್ಞೆ ಹೊರಡಿಸಿದನು.

ತನ್ನ ಮುಂದಿನವರೂ ಸಹ ಇದನ್ನು ಪಾಲಿಸಬೇಕೆಂದು ಉಯಿಲನ್ನು ಬರುವು ಈಗಲೂ ಸಹ ನವದ್ವೀಪದಲ್ಲಿ ಕಾಜಿಯ ಸಮಾಧಿಯ ಬಳಿ ಯಾತ್ರಾರ್ಥಿಗಳು ಗೌರವ ಸಲ್ಲಿಸುವುದನ್ನು ಕಾಣಬಹುದು. ಹೀಗೆ ಶ್ರೀ ಚೈತನ್ಯ ಮಹಾಪ್ರಭುಗಳು ಯಾವ ತೊಂದರೆಗಳಿಗೂ ಜಗ್ಗದೆ ಸಂಕೀರ್ತನ ಯಜ್ಞವನ್ನು ಮಾನವಕೋಟಿಗೆ ಉಡುಗೊರೆಯನ್ನಾಗಿ ನೀಡಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi