ಪ್ರಭುಗಳು ಉತ್ತರಿಸಿದರು, ”ಅವರು ಕೃಷ್ಣನ ಪುಣ್ಯ ಪದ್ಮ ಪಾದಗಳಲ್ಲಿ ಅಪಚಾರ ಮಾಡುತ್ತಿರುವುದರಿಂದ ಅವರ ಮುಖವಾಣಿಯಿಂದೆಂದೂ ಕೃಷ್ಣ ಎಂಬ ಪವಿತ್ರ ನಾಮವು ಹೊರಡುವುದಿಲ್ಲ. ಪುಣ್ಯ ನಾಮ ಮತ್ತು ಕೃಷ್ಣ ಸ್ವರೂಪ, ಇವೆರಡೂ ಅವನಿಂದ ಭಿನ್ನವಲ್ಲ.

ಅವು ಒಂದೇ ಪಾರಮಾರ್ಥಿಕ ಸತ್ಯ, ಆನಂದ ಪೂರ್ಣ ಮತ್ತು ದೈವಿ ವಾಸ್ತವ. ಹಲವಾರು ರೀತಿಯಲ್ಲಿ ಭಕ್ತರಿಗೆ ಹೀಗೆಂದು ಉಪದೇಶ ನೀಡಿ ಪ್ರಭುಗಳು ಮತ್ತೆ ಬೃಂದಾವನಕ್ಕೆ ತಮ್ಮ ದೀರ್ಘ ಯಾತ್ರೆಯನ್ನು ಮುಂದುವರಿಸಿದರು. ಅವರು ಕಾಶಿಯನ್ನು ಕೃಷ್ಣನ ಕೃಪೆಯಿಂದ ಮುಕ್ತಗೊಳಿಸಿ ತದನಂತರ ಜಗನ್ನಾಥಪುರಿಗೆ ವಾಪಸ್ಸಾದರು.
ಮತ್ತು ಬೃಂದಾವನಕ್ಕೆ ಹೊರಟರು. ಸ್ವಲ್ಪ ಕಾಲ ಬೃಂದಾವನದಲ್ಲಿ ಓಡಾಡುತ್ತಾ ಕೃಷ್ಣ ಪ್ರೇಮದ ಆನಂದವನ್ನು ಸವಿಯುತ್ತಾ ಪ್ರಭು ಕಾಶಿಧಾಮಕ್ಕೆ ಮರಳಿದರು. ಒಂದು ದಿನ ಅವರು ಪ್ರಕಾಶಾನಂದ ಸರಸ್ವತಿಯವರನ್ನು ಸ್ವತಃ ಭೇಟಿ ಮಾಡಿದರು. ಅವರು ಪ್ರಭುವಿನ ಅಸಾಮಾನ್ಯ ಸೌಂದರ್ಯ, ಮಗುವಿನಂತಹ ಮುಗ್ಧತೆ, ವಿನಮ್ರತೆ, ಔದಾರ ಮತ್ತು ಶ್ರೇಷ್ಠತೆ ನೋಡಿದರು.
ಪ್ರಕಾಶಾನಂದ ಸರಸ್ವತಿಯವರೊಂದಿಗೆ ಚರ್ಚೆ ನಡೆಸಿದನಂತರ, ಎಲ್ಲ ಸಂನ್ಯಾಸಿಗಳು ಪ್ರಭುವಿನ ಪಾದಗಳಿಗೆರಗಿ, ಕೃಷ್ಣನ ಪುಣ್ಯ ನಾಮದಿಂದ ನೆರೆದ ಪ್ರತಿಯೊಬ್ಬರನ್ನು ವಿಮುಕ್ತರನ್ನಾಗಿಸಿದ ಪ್ರಭುಗಳ ಮಹಿಮೆಯನ್ನು ಕೊಂಡಾಡಿದರು. ಪುಣ್ಯ ನಾಮದಿಂದ ಹೊಳೆಯಂತೆ ಹರಿದ ಅಮೃತಧಾರೆಯಿಂದ ಕಾಶಿ ತುಂಬಿ ತುಳುಕಿತು. ಎಲ್ಲ ಅನುಯಾಯಿಗಳಲ್ಲಿ ಮಾಯಾವಾದದ ಮಿಥ್ಯಾ ತತ್ತ್ವದ ವಿಚಾರ ತೊಡೆದು ಹೋಯಿತು.
ಆ ಸಮಯದಲ್ಲಿ ಪ್ರಭುವು ಕಾಶಿಯಲ್ಲಿ ಹತ್ತುದಿನಗಳ ಕಾಲ ಕಳೆದರು. ಇದರಿಂದ ಭಕ್ತರ ಮತ್ತು ಅನುಯಾಯಿಗಳ ಆನಂದಕ್ಕೆ ಎಣೆಯೇ ಇಲ್ಲದಂತಾಯಿತು. ತಪನ ಮಿಶ್ರ, ಚಂದ್ರಶೇಖರ ಮತ್ತು ಮಹಾರಾಷ್ಟ್ರದ ಬ್ರಾಹ್ಮಣರು ಮತ್ತಿತರ ಭಕ್ತರೆಲ್ಲರೂ ಅವರ ಜೀವನದ ಪುನಶ್ಚೇತನವಾದಂತೆ, ಶ್ರೀಮಾನ್ ಮಹಾಪ್ರಭುಗಳ ವೈಯಕ್ತಿಕ ಸೇವೆಯಲ್ಲಿ ತೊಡಗಲು ಅವಕಾಶ ದೊರಕಿದಂತೆ ಭಾವಿಸಿದರು.
ತಪನ ಮಿಶ್ರರ ಮಗ ರಘುನಾಥ ತನ್ನ ಪ್ರಭು ಮತ್ತು ಗುರುಗಳಾದ ಶ್ರೀ ಚೈತನ್ಯ ಮಹಾಪ್ರಭುಗಳಿಗೆ 10 ದಿನಗಳ ಕಾಲ ಸೇವೆ ಮಾಡುವಂತಹ ಸೌಭಾಗ್ಯ ತನಗೆ ಸಿಕ್ಕಿತೆಂದು ಭಾವಿಸಿದರು.
ಕೊನೆಗೆ ಮತ್ತೊಮ್ಮೆ ತಾವು ಜಗನ್ನಾಥ ಪುರಿಗೆ ಹೋಗಬೇಕೆಂದು ಎಲ್ಲ ಭಕ್ತರಿಗೆ ವಿದಾಯ ಹೇಳುವ ಸಮಯ ಬಂದಿತು. ಪ್ರಭುವಿನಿಂದ ಆಗಲುವ ಕ್ಷಣವನ್ನು ನೆನೆಸಿಕೊಂಡು ಎಲ್ಲ ಭಕ್ತರ ಹೃದಯದಲ್ಲಿ ನೋವು ಉಕ್ಕೇರಿತು. ತಪನ ಮಿಶ್ರರ ಮಗ ರಘುನಾಥ ಭಟ್ಟ ಪ್ರಭುಗಳನ್ನು ಬಿಟ್ಟು ಹೋಗಬಾರದೆಂದು ಅವರ ಪಾದಕಮಲಗಳನ್ನು ಹಿಡಿದು ಬಿಕ್ಕಿ ಬಿಕ್ಕಿ ಅತ್ತನು.
ಪ್ರಭುಗಳು ಹುಡುಗನನ್ನು ತೊಡೆಯ ಮೇಲೆ ಕೂಡಿಸಿ ಆಶ್ವಾಸನೆಗಳೊಂದಿಗೆ ಅವನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. “ನೀನು ನಿನ್ನ ತಂದೆ ತಾಯಿಗಳ ಸೇವೆಯನ್ನು ಇಲ್ಲಿದ್ದು ಮಾಡು, ಆಗಾಗ್ಗೆ ಪುರಿಧಾಮಕ್ಕೆ ಬಂದು ನನ್ನನ್ನು ನೋಡು” ಆಗ, ತಪನ ಮಿಶ್ರ ಮತ್ತು ಚಂದ್ರಶೇಖರರನ್ನು ಆಲಿಂಗಿಸಿ ಕೃಷ್ಣಪ್ರಜ್ಞೆಯ ಕೆಲವು ಸತ್ಯಗಳನ್ನು ಭಕ್ತರಿಗೆ ಉಪದೇಶಿಸಿ ಶ್ರೀ ಚೈತನ್ಯ ಮಹಾಪ್ರಭುಗಳು ಕಾಶಿಗೆ ಶಾಶ್ವತವಾಗಿ ವಿದಾಯ ಹೇಳಿ ಕಾಲ್ನಡಿಗೆಯಲ್ಲಿಯೇ ಜಗನ್ನಾಥ ಪುರಿಗೆ ದೀರ್ಘ ಪ್ರಯಾಣ ನಡೆಸಿದರು.
ಸ್ವಲ್ಪ ಕಾಲದಲ್ಲಿ ಶ್ರೀ ರಘುನಾಥರು ಸಂಸ್ಕೃತ, ವ್ಯಾಕರಣ, ಸಾಹಿತ್ಯ, ಮಹಾಕಾವ್ಯಗಳಲ್ಲಿ ಪಾಂಡಿತ್ಯ ಸಾಧಿಸಿದರು. ಕ್ರಮೇಣವಾಗಿ ಅವರು ಅಪೌರುಷ ಧರ್ಮ ಗ್ರಂಥಗಳಲ್ಲಿ ಉನ್ನತ ಸಾಧನೆ ಗಳಿಸಿದರು. ಅವರು ತಮ್ಮ ತಂದೆ ಮತ್ತು ತಾಯಿಯವರ ವೃದ್ಧಾಪ್ಯದಲ್ಲಿ ಅವರ ಸೇವೆಯನ್ನು ಮುಂದುವರಿಸಿದರು.
ವರ್ಷಗಳು ಉರುಳುತ್ತಿದ್ದಂತೆ ಮಗ ಬೆಳೆದ ನಂತರ ತಪನ ಮಿಶ್ರಾ ಅವರು ಮಗನನ್ನು ಪುರಿಧಾಮದಲ್ಲಿ ಶ್ರೀಚೈತನ್ಯ ಮಹಾಪ್ರಭುಗಳನ್ನು ಭೇಟಿಮಾಡಲು ನಿರ್ದೇಶಿಸಿದರು. ರಘುನಾಥರ ಸಂತೋಷಕ್ಕೆ ಎಲ್ಲೆ ಮೀರಿದಂತಾಯಿತು. ಅವರ ತಾಯಿ ಪ್ರಭುಗಳ ಸೇವೆಯಲ್ಲಿ ಹಲವಾರು ವಿಧಗಳ ತಿಂಡಿಗಳನ್ನು ತಯಾರಿಸಿ ಮಿಶ್ರಾ ಅವರ ಪರವಾಗಿ ನೀಡೆಂದು ರಘುನಾಥರಿಗೆ ಹೇಳಿದರು. ಆ ಎಲ್ಲ ತಿಂಡಿಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ಜಾಗರೂಕತೆಯಿಂದ ಕಟ್ಟಿ ನೀಡಿದರು.
ತಂದೆ ತಾಯಿಯವರ ಆದೇಶ ಮತ್ತು ಆಶೀರ್ವಾದವನ್ನು ಸ್ವೀಕರಿಸಿದನಂತರ, ರಘುನಾಥರು ಒಬ್ಬ ಸೇವಕನೊಂದಿಗೆ ಪುರಿಗೆ ಹೊರಟರು. ರಸ್ತೆಯಲ್ಲಿ ರಾಮಭಕ್ತನೊಬ್ಬನನ್ನು ಭೇಟಿಯಾದರು. ಆತ ಅವರೊಂದಿಗೆ ಪುರಿಗೆ ಹೊರಟನು. ಆತನ ಹೆಸರು ಶ್ರೀರಾಮದಾಸ.
ಅವನು ಜನ್ಮತಃ ಕಾಯಸ್ಥನಾಗಿದ್ದು, ಆತನ ವಂಶದವರು ರಾಜನ ಸೇವೆಯಲ್ಲಿ ಕೆಲಸ ಮಾಡುವವರು. ಆತ ರಾಮಾಯಣದಂತಹ ಮಹಾಕಾವ್ಯದ ವ್ಯಾಖ್ಯೆಯಲ್ಲಿ ಅತ್ಯಂತ ಶ್ರೇಷ್ಠ ಪಂಡಿತನಾಗಿದ್ದನು. ರಾಮದಾಸ ರಘುನಾಥರಿಗೆ ನಮಸ್ಕರಿಸಿ ಅವರ ಪಾದಗಳ ಧೂಳನ್ನು ಎತ್ತಿಕೊಂಡರು. ರಘುನಾಥರ ಸೇವಕನ ಬಳಿಯಿರುವ ಬುತ್ತಿಯನ್ನೇ ಎತ್ತಿಕೊಂಡು ತಮ್ಮ ತಲೆಯ ಮೇಲಿಟ್ಟುಕೊಂಡರು.
ರಘುನಾಥರು ಹೇಳಿದರು, ”ತಾವು ಓರ್ವ ಪಂಡಿತರು, ಏನು ಮಾಡುತ್ತಿರುವಿರಿ?” ರಾಮದಾಸರು ಹೇಳಿದರು, “ಭಟ್ಟರೇ, ನಾನು ಕೀಳು ಶೂದ್ರನು. ಒಬ್ಬ ಬ್ರಾಹ್ಮಣನ ಸೇವೆಯಲ್ಲಿ ನಾನು ಒಳ್ಳೆಕಾರ್ಯವನ್ನು ಮಾಡುವೆ.” ಆಗ ರಘುನಾಥರು, “ಪಂಡಿತರೇ, ನಾನು ನಿಮ್ಮನ್ನು ಬೇಡುವೆ. ನನ್ನ ಸೇವಕ ಈ ಭಾರವಾದ ಬುತ್ತಿಯನ್ನು ಹೊರಲಿ.” ಆಗ ರಾಮದಾಸರು ರಘುನಾಥರ ಸೇವಕರಿಗೆ ಬುತ್ತಿಯನ್ನು ನೀಡಿದರು.
ಶ್ರೀ ರಘುನಾಥ ಭಟ್ಟರು ಜಗನ್ನಾಥ ಪುರಿಗೆ ಬಂದು ಶ್ರೀಚೈತನ್ಯ ಮಹಾಪ್ರಭುಗಳ ಪದ್ಮ ಪಾದಗಳಿಗೆರಗಿ ನಮಸ್ಕಾರವನ್ನು ಆರ್ಪಿಸಿದರು. ಆ ಸಮಯದಲ್ಲಿ ಪ್ರಭುಗಳು ಅವರಿಗೆ ಸ್ವಾಗತವನ್ನು ಕೋರಿ, “ರಘುನಾಥ’ ಎಂದು ಆಹ್ವಾನವಿತ್ತರು. ಮತ್ತು ನೆಲದಿಂದ ಅವರನ್ನು ಎತ್ತಿ ಆಲಿಂಗಿಸಿದರು.

ಪ್ರಭುಗಳು ತಪನ ಮಿಶ್ರ ಮತ್ತು ಅವರ ಪತ್ನಿಯ ಆರೋಗ್ಯ ಮತ್ತು ಕುಶಲವನ್ನು ವಿಚಾರಿಸಿದರು. ಮತ್ತು ಬನಾರಸ್ಸಿನ ಚಂದ್ರಶೇಖರ ಮತ್ತು ಇತರ ಭಕ್ತರ ಕುಶಲವನ್ನು ಕೇಳಿದರು. ರಘುನಾಥರು ಎಲ್ಲವನ್ನು ತಿಳಿಸಿದರು. ಶ್ರೀರಾಮದಾಸನನ್ನು ಮಹಾಪ್ರಭುಗಳ ಸಾನ್ನಿಧ್ಯಕ್ಕೆ ಕರೆದೊಯ್ಯಲಾಯಿತು.
ಶ್ರೀರಾಮದಾಸರು ಪ್ರಭುಗಳ ಪಾದಗಳಿಗೆ ಎರಗಿ ನಮಸ್ಕರಿಸಿದರು ಆದರೆ ಎಲ್ಲ ಜೀವಿಗಳಲ್ಲಿ ಪರಮಾತ್ಮವಾಗಿದ್ದ ಪ್ರಭುವು ರಾಮದಾಸರು ವಿಮುಕ್ತಿಯ ಆಕಾಂಕ್ಷೆಗಳನ್ನು ತನ್ನ ಹೃದಯದಲ್ಲೇ ಇಟ್ಟುಕೊಂಡಿರುವುದನ್ನು ಕಂಡು ಹಿಡಿದರು. ಹೀಗಾಗಿ ಅವರು ಆತನೊಂದಿಗೆ ಮಮಕಾರ ತೋರಿಸಲಿಲ್ಲ.
ಸಾಗರದಲ್ಲಿ ಸ್ನಾನ ಮಾಡಿದನಂತರ ಪ್ರಭು ಜಗನ್ನಾಥನ ವಿಗ್ರಹವನ್ನು ನೋಡಬೇಕೆಂದು ಪ್ರಭುಗಳು ರಘುನಾಥರಿಗೆ ಆದೇಶವಿತ್ತರು. ರಘುನಾಥರು ತೀರಕ್ಕೆ ಇತರ ಎಲ್ಲ ಭಕ್ತರೊಂದಿಗೆ ಹೋದರು. ಅಲ್ಲಿ ಎಲ್ಲರೂ ಹೋಗಿ ಸ್ನಾನ ಮುಗಿಸಿ ಪ್ರಭು ಜಗನ್ನಾಥನನ್ನು ನೋಡಲು ಹೊರಟರು.
ಅನಂತರ ಅವರು ಪ್ರಭುವಿನ ಸಾನ್ನಿಧ್ಯಕ್ಕೆ ಬಂದಾಗ ಮಹಾಪ್ರಭುಗಳು ರಘುನಾಥ ಭಟ್ಟರಿಗೆ ಪ್ರಸಾದವನ್ನು ನೀಡಬೇಕೆಂದು ಸೇವಕ ಗೋವಿಂದನಿಗೆ ಆದೇಶವಿತ್ತರು. ಪ್ರಭುಗಳೇ ಸ್ವತಃ ರಘುನಾಥರ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿದರು. ಅಲ್ಲಿ ರಘುನಾಥರು ಉಳಿದು ಪ್ರಭುಗಳಿಗೆ ಪ್ರತಿದಿನ ಅಡುಗೆ ಮಾಡುತ್ತಿದ್ದರು.
ಅವರು ಸತತವಾಗಿ ಜಗನ್ನಾಥ ಪುರಿಯಲ್ಲಿಯೇ ಉಳಿದು 8 ತಿಂಗಳ ಕಾಲ ಪ್ರಭುವಿನ ಸೇವೆಯಲ್ಲಿ ನಿರತರಾದರು ಮತ್ತು ತನ್ಮೂಲಕ ಮಹದಾನಂದವನ್ನು ಅನುಭವಿಸಿದರು. ಅವರು ಪ್ರಭು ಜಗನ್ನಾಥನ ರಥದ ಮುಂದೆ ಪ್ರಭುಗಳು ವಿವಿಧ ದೈವಿಕ ಆನಂದದ ಭಾವಗಳಲ್ಲಿ ಸಂತೋಷಭರಿತರಾಗಿ ಹಾಡುವುದನ್ನು ಮತ್ತು ನರ್ತನ ಮಾಡುವುದನ್ನು ನೋಡಿದರು.
ಕೆಲ ಕಾಲದನಂತರ ಪ್ರಭುಗಳು ರಘುನಾಥರಿಗೆ ಕಾಶಿಗೆ ಮರಳಬೇಕೆಂದು ಆದೇಶಿಸಿದರು. ಅವರ ತಂದೆ ತಾಯಿಗಳು ವೈಷ್ಣವರಾಗಿದ್ದರಿಂದ ಇಳಿ ವಯಸ್ಸಿನಲ್ಲಿ ಅವರನ್ನು ನಿರ್ಲಕ್ಷಿತರಾಗಬಾರದು ಆದ್ದರಿಂದ ರಘುನಾಥರು ವಾಪಸ್ಸು ಮನೆಗೆ ಹೋಗಬೇಕೆಂದು ಹೇಳಿದರು.
ರಘುನಾಥ ಭಟ್ಟರು ಪ್ರಭುಗಳ ಈ ಆದೇಶವನ್ನು ಬಹಳ ಗಂಭೀರವಾಗಿ ಪರಿಗಣಿಸಿದರು. ಪ್ರಭುಗಳು ಹಲವಾರು ಅಂಶಗಳ ಬಗ್ಗೆ ರಘುನಾಥರಿಗೆ ಉಪದೇಶಿಸಿದರು. ರಘುನಾಥರು ಗೃಹಸ್ಥರಾಗಬಾರದೆಂದು, ಶಾಸ್ತ್ರಗಳ ಅಧ್ಯಯನ ನಡೆಸಬೇಕೆಂದು ಹೇಳಿದರು. ಸ್ವಲ್ಪಕಾಲದ ಅನಂತರ ಜಗನ್ನಾಥಪುರಿಗೆ ಬಂದು ಜಗನ್ನಾಥ ವಿಗ್ರಹವನ್ನು ನೋಡಬೇಕೆಂದೂ ಹೇಳಿದರು.
ಇಷ್ಟು ಹೇಳಿ ಮಹಾಪ್ರಭುಗಳು ತಮ್ಮ ಕೊರಳಲ್ಲಿದ್ದ ತುಳಿಸಿ ಮಾಲೆಯನ್ನು ರಘುನಾಥರಿಗೆ ಹಾಕಿದರು. ಪ್ರಭುಗಳು ತಪನ ಮಿಶ್ರ ಮತ್ತು ಕಾಶಿಯ ಚಂದ್ರಶೇಖರರ ಜೊತೆಯಲ್ಲಿದ್ದ ಎಲ್ಲ ಭಕ್ತರಿಗೂ ವಿತರಿಸಬೇಕೆಂದು ಮಹಾಪ್ರಸಾದವನ್ನು ನೀಡಿದರು. ವಿದಾಯ ಹೇಳುವಾಗ ರಘುನಾಥ ಭಟ್ಟರ ಹೃದಯ ತುಂಬಿ ಬಂದಿತು.
ಅವರು ಮಹಾಪ್ರಭುಗಳ ಪದ್ಮ ಪಾದಗಳಿಗೆ ಎರಗಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಪ್ರಭುಗಳು ರಘುನಾಥರನ್ನು ಎಬ್ಬಿಸಿ ಅವರನ್ನು ಹೃದಯ ಪೂರ್ವಕವಾಗಿ ಅಪ್ಪಿದರು. ಮಹಾಪ್ರಭುಗಳಿಗೆ ಹಾಗೂ ಜಗನ್ನಾಥಪುರಿಗೆ ವಿದಾಯ ಹೇಳಿ ರಘುನಾಥರು ಕಾಶಿಗೆ ಹೊರಟರು.
ಕಾಶಿಗೆ ಬಂದನಂತರ ರಘುನಾಥ ಭಟ್ಟರು ತಂದೆ ತಾಯಿಗಳನ್ನು ಅಕ್ಕರೆಯಿಂದ ನೋಡಿಕೊಂಡು ಅವರ ಸೇವೆ ಮಾಡಿದರು ಮತ್ತು ಮುತುವರ್ಜಿಯಿಂದ, ಶ್ರದ್ಧಾಭಕ್ತಿಯಿಂದ ಶ್ರೀಮದ್ ಭಾಗವತದ ಅಧ್ಯಯನವನ್ನು ಮಾಡಲಾರಂಭಿಸಿದರು. ಸ್ವಲ್ಪ ಕಾಲದನಂತರ ಅವರ ತಂದೆ ತಾಯಿಗಳು ದೇಹತ್ಯಾಗ ಮಾಡಿದರು.
ರಘುನಾಥರು ಬಹಳ ಶಿಸ್ತಿನಿಂದ ಶ್ರೀ ಚೈತನ್ಯರ ಆದೇಶಗಳನ್ನು ಪಾಲಿಸಿ ಎಂದೂ ಮದುವೆಯಾಗಲಿಲ್ಲ. ಇನ್ನು ಮುಂದೆ ಯಾವುದೇ ಕೌಟುಂಬಿಕ ಜವಾಬ್ದಾರಿಯ ಹೊರೆಯಿಲ್ಲದ ಅವರು ಪ್ರಭುಗಳ ಪದ್ಮ ಪಾದಗಳಿಗೆರಗಿ ಜಗನ್ನಾಥಪುರಿಗೆ ಹೊರಟರು. ಪ್ರಭುಗಳು ಬಹಳ ಕಾಲದನಂತರ ರಘುನಾಥರನ್ನು ನೋಡಿ ತುಂಬ ಸಂತುಷ್ಟರಾದರು.
ತಪನ ಮಿಶ್ರ ಮತ್ತು ಅವರ ಸದ್ಗುಣಶೀಲ ಪತ್ನಿಯ ದೇಹತ್ಯಾಗದ ವಿಚಾರ ಕೇಳಿದ ಪ್ರಭುಗಳು ಆ ದಂಪತಿಯ ಪರಮ ಭಕ್ತಿಯ ಬಗ್ಗೆ ದೀರ್ಘವಾಗಿ ಹೇಳಿ ಅವರಿಬ್ಬರನ್ನು ಪ್ರಶಂಸಿಸಿದರು. ಪ್ರಭುವಿನ ಸಾನ್ನಿಧ್ಯಕ್ಕೆ ಪುನಃ ಬಂದಿದ್ದರಿಂದ ರಘುನಾಥ ಭಟ್ಟರು ತುಂಬ ಸಂತೃಪ್ತರಾದರು.

ಅವರು ಪುರಿಯಲ್ಲಿ ಉಳಿದ ಎಂಟು ತಿಂಗಳ ಕಾಲ ನಿಷ್ಠೆಯಿಂದ ಪ್ರಭುಗಳ ಸೇವೆ ಮಾಡಿದರು. ಒಮ್ಮೆ ಪ್ರಭುಗಳು ಹೇಳಿದರು, “ನೀನು ಬೃಂದಾವನಕ್ಕೆ ಹೋಗಬೇಕು. ನೀನು ಬೃಂದಾವನದಲ್ಲಿ ಕೆಲಸ ಮಾಡಬೇಕು. ನಾನು ಪುರಿಯಲ್ಲಿಯೇ ಉಳಿಯಬೇಕೆಂದು ನನ್ನ ತಾಯಿಯವರಿಂದ ಆದೇಶಿಸಲ್ಪಟ್ಟಿದ್ದೇನೆ. ಇದರಿಂದಾಗಿ ನಾನು ಬೃಂದಾವನದಲ್ಲಿ ನನ್ನ ಕೆಲಸವನ್ನು ಮುಗಿಸಲಾಗುವುದಿಲ್ಲ ನನ್ನ ಕೆಲಸವನ್ನು ಮುಗಿಸಲು ನೀನು ಸಹಾಯ ಮಾಡಬೇಕಾಗಿದೆ.’
ಈ ಮಾತುಗಳನ್ನು ಕೇಳಿ ರಘುನಾಥ ಭಟ್ಟರು ಪ್ರಭುಗಳನ್ನು ಅಗಲಬೇಕೆಂಬ ವಿಷಯದಿಂದ ದುಃಖಿತರಾದರು. ಪ್ರಭುಗಳು ರೂಪ ಮತ್ತು ಸನಾತನ ಗೋಸ್ವಾಮಿಗಳನ್ನು ಭೇಟಿ ಮಾಡಬೇಕೆಂದು ರಘುನಾಥರಿಗೆ ಹೇಳಿದರು. ಅವರು ಶ್ರೀಮದ್ ಭಾಗವತವನ್ನು ಮತ್ತು ಸಂಬಂಧಿತ ಅಪೌರುಷ ಧರ್ಮ ಗ್ರಂಥಗಳನ್ನು ಅವರ ಮಾರ್ಗದರ್ಶನದಲ್ಲಿ ಓದಬೇಕೆಂದರು.
ಪ್ರಭುಗಳ ಆದೇಶದಂತೆ ರಘುನಾಥ ಭಟ್ಟರು ಬೃಂದಾವನಕ್ಕೆ ಹೊರಡಲು ಸಿದ್ಧರಾದರು. ವೈಷ್ಣವರಿಗೆ ವಿದಾಯ ಹೇಳಿ, ಪ್ರಭುಗಳ ಪುಣ್ಯ ಪಾದಗಳ ಮೇಲೆ ಕೊನೆ ಬಾರಿ ಎರಗಿದರು. ಮಹಾಪ್ರಭುಗಳು ರಘುನಾಥ ಭಟ್ಟರಿಗೆ ವಿದಾಯ ಹೇಳಿ ಅವರಿಗೆ ಒಂದು ದೊಡ್ಡ ಪ್ರಸಾದ ಮಾಲೆ ಮತ್ತು ಸ್ವಲ್ಪ ತಾಂಬೂಲ ಮಹಾಪ್ರಸಾದವನ್ನು ನೀಡಿ ಅಪ್ಪಿಕೊಂಡರು.
ವಿದಾಯ ಹೇಳಿ, ರಘುನಾಥ ಭಟ್ಟರು ಚೈತನ್ಯ ಮಹಾಪ್ರಭುಗಳು ಹೋದ ದಾರಿಯಲ್ಲೆ ಬೃಂದಾವನಕ್ಕೆ ಹೋದರು. ಹೀಗೆ ಹೋಗುವಾಗ ಪ್ರಭುಗಳು ತಮ್ಮ ಬೃಂದಾವನ ಪರ್ಯಟನೆಯಲ್ಲಿ ನಡೆಸಿದ ಲೀಲೆಗಳ ಬಗ್ಗೆ ಕೇಳಿದರು. ಕೊನೆಗೆ, ಬೃಂದಾವನಕ್ಕೆ ಬಂದಾಗ ಅವರು ರೂಪ ಮತ್ತು ಸನಾತನ ಗೋಸ್ವಾಮಿಯವರಿಗೆ ತುಂಬ ಸಂತೋಷವಾಗಿ ಪ್ರೀತಿಯಿಂದ ರಘುನಾಥರನ್ನು ಅಪ್ಪಿದರು.
ಬೃಂದಾವನದಲ್ಲಿ ವಾಸಿಸುತ್ತಿದ್ದ ಎಲ್ಲ ಗೋಸ್ವಾಮಿಗಳು ಅವರನ್ನು ನೋಡಿ ಆನಂದಿತರಾದರು. ಅವರೆಲ್ಲ ರಘುನಾಥರನ್ನು ದೈವ ಸಹೋದರ ಎಂದು ಅಂಗೀಕರಿಸಿದರು.
ರಘುನಾಥರು ವಿನಮ್ರತೆ ಮತ್ತು ಸಾಧುತ್ವದ ಸದ್ಗುಣಗಳಿ೦ದ ಆಶೀರ್ವದಿಸಲ್ಪಟ್ಟಿದ್ದರು. ರಘುನಾಥ ಭಟ್ಟರು, ರೂಪ ಮತ್ತು ಸನಾತನ ಗೋಸ್ವಾಮಿಗಳ ಮುಂದೆ ಶ್ರೀಮದ್ ಭಾಗವತವನ್ನು ಪಠಿಸುತ್ತಿದ್ದರೆಂದು, ಹೀಗೆ ಮಾಡುತ್ತಿದ್ದಾಗ ಕೃಷ್ಣನ ಭಕ್ತಿ ಆನಂದದಿಂದ ಉದ್ವೇಗ ಹೊಂದುತ್ತಿದ್ದರೆಂದು ಚೈತನ್ಯ ಚರಿತಾಮೃತದಲ್ಲಿ ಉಲ್ಲೇಖಿಸಲಾಗಿದೆ.
ಪ್ರಭುಗಳ ಅನುಕಂಪದಿಂದ ಅವರು ಪರಮ ಪ್ರಭುವಿನ ಆನಂದ ಪ್ರೇಮದ ಎಲ್ಲ ಲಕ್ಷಣಗಳಿಂದ ತುಂಬಿರುತ್ತಿದರು. ಕಣ್ಣೀರು, ಗದ್ಗದ ಕಂಠ ಮತ್ತು ಕಂಪನ ಈ ಉದ್ವೇಗದಿಂದ ಪ್ರೇರೇಪಿತರಾದ ಅವರಿಗೆ ಓದಲು ಆಗುತ್ತಿರಲಿಲ್ಲ. ಅವರ ಧ್ವನಿಯು ಕೋಗಿಲೆಯಂತಿತ್ತು ಮತ್ತು ಅವರು ಭಾಗವತವನ್ನು ಓದುವಾಗ ಹಲವಾರು ರಾಗಗಳಲ್ಲಿ ಶ್ಲೋಕಗಳನ್ನು ಹಾಡುತ್ತಿದ್ದರೆಂದು ಹೇಳಲಾಗಿದೆ.
ಈ ರೀತಿ, ಅವರ ಓದು ತುಂಬ ಮಧುರವಾಗಿತ್ತು. ರಘುನಾಥ ಭಟ್ಟರು ಗೌರ ಗೋವಿಂದರ ಕಮಲ ಪಾದಗಳಿಗೆ ಸಂಪೂರ್ಣವಾಗಿ ವಶವಾಗಿದ್ದರು. ಆ ಪದ್ಮ ಪಾದಗಳು ಅವರ ಜೀವನ ಮತ್ತು ಆತ್ಮವಾಗಿದ್ದವು.
ಸ್ವಲ್ಪ ಕಾಲದನಂತರ ಬೃಂದಾವನದಲ್ಲಿ ಗೋವಿಂದನ ಒಂದು ದೇವಾಲಯವನ್ನು ನಿರ್ಮಿಸಲು ಶ್ರೀಲ ರೂಪ ಗೋಸ್ವಾಮಿಗಳು ನಿರ್ಧರಿಸಿದರು. ರಘುನಾಥರು ಗೋವಿಂದನಿಗೆ ಕೊಳಲು, ಕರ್ಣಕುಂಡಲಗಳನ್ನು ಒಳಗೊಂಡಂತೆ ಹಲವಾರು ಆಭರಣಗಳನ್ನು ತಯಾರಿಸಿದರು.
ರಘುನಾಥ ಭಟ್ಟರು ಯಾವುದೇ ಐಹಿಕ ವಿಷಯಗಳ ಕುರಿತು ಕೇಳುತ್ತಿರಲಿಲ್ಲ ಅಥವಾ ಮಾತನಾಡುತ್ತಿರಲಿಲ್ಲ. ಅವರು ಹಗಲು ರಾತ್ರಿ ಕೃಷ್ಣನ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪ್ರಭುಗಳ ಪೂಜೆ ಮಾಡುತ್ತಿದ್ದರು. ಅವರು ವೈಷ್ಣವರ ಕುರಿತು ಕಳಂಕದ ಮಾತುಗಳನ್ನಾಗಲಿ, ವೈಷ್ಣವರ ದುರ್ವತ್ರನೆಗಳ ಕುರಿತು ಕೇಳುವುದಾಗಲಿ ಮಾಡುತ್ತಿರಲಿಲ್ಲ.
ರಘುನಾಥರು ಪ್ರತಿಯೊಬ್ಬರು ಕೃಷ್ಣನ ಸೇವೆಯಲ್ಲಿ ತೊಡಗಿದ್ದಾರೆಂದು ಮಾತ್ರ ತಿಳಿದಿದ್ದರು. ಸದಾ ಪ್ರಭುವಿನ ಸ್ಮರಣೆಯಲ್ಲಿ ಕಾಲವನ್ನು ಕಳೆಯುತ್ತಿದ್ದರು. ಅವರಿಗೆ ಇನ್ನೇನು ಮನಸ್ಸಿಗೆ ಬರುತ್ತಿರಲಿಲ್ಲ. ರಘುನಾಥರು ಪ್ರಭುವಿನ ಸ್ಮರಣಿಕೆಯಲ್ಲಿದ್ದಾಗ ಪ್ರಭುಗಳು ನೀಡಿದ ತುಳಸಿ ಮಾಲೆಯನ್ನು ಮತ್ತು ಜಗನ್ನಾಥನ ಪ್ರಸಾದವನ್ನು ತೆಗೆದುಕೊಂಡು ಅವೆರಡನ್ನು ಸೇರಿಸಿ ತಮ್ಮ ಕತ್ತಿಗೆ ಹಾಕಿಕೊಳ್ಳುತ್ತಿದ್ದರು.
”ಕೃಷ್ಣನ ಬೃಂದಾವನ ಲೀಲೆಯಲ್ಲಿ ರಘುನಾಥ ಭಟ್ಟರು ಶ್ರೀರಾಗ ಮಂಜರಿ” ಎಂದು ಅವರ ಆಧ್ಯಾತ್ಮಿಕ ಸ್ಥಾನಕ್ಕೆ ಸಂಬಂಧಿಸಿದಂತೆ ಗೌರ ಗಣೋದೇಶ ದೀಪಿಕಾದಲ್ಲಿ ಹೇಳಲಾಗಿದೆ.






Leave a Reply