ಭಕ್ತಿಕ್ರಾಂತಿಯ ಹರಿಕಾರ ಶ್ರೀಚೈತನ್ಯ ಮಹಾಪ್ರಭು

ಶ್ರೀ ಚೈತನ್ಯ ಮಹಾಪ್ರಭುಗಳು ಭಾರತದ ಭಕ್ತಿ ಪರಂಪರೆಯ ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ಚೇತನಗಳಲ್ಲಿ ಒಬ್ಬರು. 16ನೇ ಶತಮಾನದಲ್ಲಿ ಬಂಗಾಳದ ಪುಣ್ಯಭೂಮಿಯಲ್ಲಿ ಅವರು ಹಚ್ಚಿದ ಭಕ್ತಿ ಆಂದೋಲನದ ದೀಪವು, ಮುಂದೆ ಇಡೀ ಭಾರತವನ್ನೇ ಬೆಳಗಿತು. ಬಾಲ್ಯದಲ್ಲಿ ‘ವಿಶ್ವಂಭರ’ ಎಂದು ಕರೆಸಿಕೊಳ್ಳುತ್ತಿದ್ದ ಈ ಮಹಾನ್ ಚೇತನವು, ಮುಂದೆ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಮನುಕುಲಕ್ಕೆ ಅಧ್ಯಾತ್ಮದ ದಾರಿದೀಪವಾದರು.

ಕೇವಲ ‘ಶುದ್ಧ ಭಕ್ತಿ’ಯ ಮೂಲಕ ಪರಮಾತ್ಮನನ್ನು ತಲುಪುವ ಅತ್ಯಂತ ಸರಳ ಮಾರ್ಗವನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು. ಗೌಡೀಯ ವೈಷ್ಣವ ಸಂಪ್ರದಾಯದ ಹರಿಕಾರರಾದ ಇವರು, ಭಕ್ತಿಯ ಮೂಲಕ ದೇವರೊಂದಿಗೆ ನೇರ ಮತ್ತು ಆಂತರಿಕ ಸಂಬಂಧವನ್ನು ಹೊಂದುವ ಬಗ್ಗೆ ಒತ್ತಿಹೇಳಿದರು.

ಇಂದಿಗೂ ಅವರ ಅನುಯಾಯಿಗಳು ಮಹಾಪ್ರಭುಗಳನ್ನು ಶ್ರೀಕೃಷ್ಣನ ಸಾಕ್ಷಾತ್ ಅವತಾರವೆಂದೇ ಆರಾಧಿಸುತ್ತಾರೆ. ದಿವ್ಯ ಪ್ರೇಮ, ವಿನಯ ಮತ್ತು ನಾಮ ಸಂಕೀರ್ತನೆಯ ಮೂಲಕ ಭಕ್ತಿಧರ್ಮವನ್ನು ಪುನರುಜ್ಜೀವನಗೊಳಿಸಿದ ಅವರ ಸಂದೇಶಗಳು ಅಥವಾ ಬೋಧನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ.

ಶ್ರೀ ಚೈತನ್ಯ ಮಹಾಪ್ರಭುಗಳು ಜಗತ್ತಿಗೆ ನೀಡಿದ ಅತ್ಯಂತ ಅಮೂಲ್ಯವಾದ ಕಾಣಿಕೆ ಎಂದರೆ ‘ಶಿಕ್ಷಾಷ್ಟಕ’. ಅವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಬೃಹತ್ ಗ್ರಂಥಗಳನ್ನು ರಚಿಸಲಿಲ್ಲ, ಬದಲಾಗಿ ಕೇವಲ ಎಂಟು ಶ್ಲೋಕಗಳಲ್ಲಿ ಇಡೀ ಅಧ್ಯಾತ್ಮದ ಸಾರವನ್ನು ಅಡಕಗೊಳಿಸಿದರು. ಈ ಎಂಟು ಶ್ಲೋಕಗಳು ಭಕ್ತಿಯ ಹಾದಿಯಲ್ಲಿ ಸಾಗುವ ಸಾಧಕನಿಗೆ ದಾರಿದೀಪಗಳಂತಿವೆ.

1. ಶ್ರೀಕೃಷ್ಣನ ಪವಿತ್ರ ನಾಮ ಸಂಕೀರ್ತನೆಯು ನಮ್ಮ ಮನಸ್ಸೆಂಬ ಕನ್ನಡಿಯ ಮೇಲಿರುವ ಜನ್ಮಜನ್ಮಾಂತರಗಳ ಅಜ್ಞಾನದ ಧೂಳನ್ನು ಅಳಿಸಿ ಹಾಕುತ್ತದೆ. ಈ ಸಂಸಾರವೆಂಬ ಭವದಹನವನ್ನು ಆರಿಸುವ ಮೂಲಕ ನಮಗೆ ಪರಮ ಶಾಂತಿ ನೀಡುತ್ತದೆ. ಇದು ಜಗತ್ತಿನ ಪಾಲಿಗೆ ಹುಣ್ಣಿಮೆ ಚಂದಿರನ ಬೆಳಕಿನಂತೆ ಆಧ್ಯಾತ್ಮಿಕ ಆನಂದವನ್ನು ವೃದ್ಧಿಸುತ್ತದೆ ಮತ್ತು ಪ್ರತಿ ಹೆಜ್ಜೆಯಲ್ಲೂ ನಮಗೆ ಅಮೃತದ ಸವಿಯನ್ನು ಉಣಬಡಿಸುತ್ತದೆ.

2. ಹೇ ಪ್ರಭು, ನಿನ್ನ ನಾಮವೊಂದೇ ಸಕಲ ಜೀವಿಗಳಿಗೆ ಮಂಗಳವನ್ನುಂಟು ಮಾಡಬಲ್ಲದು. ಕೃಷ್ಣ, ಗೋವಿಂದ ಎಂಬ ನಿನ್ನ ಕೋಟ್ಯಂತರ ನಾಮಗಳಲ್ಲಿ ನೀನು ನಿನ್ನ ಸಂಪೂರ್ಣ ಶಕ್ತಿಯನ್ನು ತುಂಬಿರುವೆ. ಈ ನಾಮಗಳನ್ನು ಸ್ಮರಿಸಲು ಅಥವಾ ಜಪಿಸಲು ಯಾವುದೇ ಕಠಿಣ ನಿಯಮಗಳಿಲ್ಲ. ನೀನು ಇಷ್ಟು ಕರುಣೆಯಿಂದ ನಿನ್ನ ಬಳಿ ಬರಲು ಸುಲಭವಾದ ದಾರಿಯನ್ನು ತೋರಿಸಿದ್ದರೂ, ನಿನ್ನ ನಾಮದ ಮೇಲೆ ನನಗೆ ಪ್ರೀತಿ ಹುಟ್ಟದಿರುವುದು ನನ್ನ ದುರಾದೃಷ್ಟವೇ ಸರಿ.

3. ಭಗವಂತನ ನಾಮವನ್ನು ಜಪಿಸುವ ಸಾಧಕನು ಈ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ದಾರಿಯಲ್ಲಿ ಬಿದ್ದಿರುವ ಹುಲ್ಲಿನ ಕಡ್ಡಿಗಿಂತ ತನ್ನನ್ನು ತಾನು ಕೀಳೆಂದು ಭಾವಿಸುವಷ್ಟು ವಿನಮ್ರನಾಗಿರಬೇಕು. ಮರಕ್ಕಿಂತಲೂ ಹೆಚ್ಚು ಸಹನಶೀಲನಾಗಿರಬೇಕು.

ಅಂದರೆ ಮರ ತನಗೆ ತೊಂದರೆ ಕೊಡುವವರಿಗೂ ನೆರಳು ನೀಡಿ ಉಪಕರಿಸುವಂತೆ. ತನಗೆ ಯಾವುದೇ ಗೌರವವನ್ನು ನಿರೀಕ್ಷಿಸದೆ, ಇತರರಿಗೆ ಸದಾ ಗೌರವ ನೀಡಲು ಸಿದ್ಧನಿರಬೇಕು. ಇಂತಹ ಮನಸ್ಥಿತಿ ಉಳ್ಳವರು ಮಾತ್ರ ಭಗವಂತನ ನಾಮವನ್ನು ನಿರಂತರವಾಗಿ ಜಪಿಸಲು ಸಾಧ್ಯ.

4. ಹೇ ಸರ್ವಶಕ್ತನೇ, ನನಗೆ ಲೌಕಿಕ ಸಂಪತ್ತು ಬೇಡ, ಸುಂದರ ಸಂಗಾತಿ ಬೇಡ ಅಥವಾ ಸಾವಿರಾರು ಅನುಯಾಯಿಗಳು ಬೇಡ. ಇವು ಯಾವುದರ ಮೇಲೂ ನನಗೆ ಆಸೆಯಿಲ್ಲ. ನನ್ನ ಏಕೈಕ ಪ್ರಾರ್ಥನೆಯೆಂದರೆ, ಜನ್ಮ ಜನ್ಮಾಂತರಗಳಲ್ಲೂ ನಿನ್ನ ಸೇವೆಯನ್ನು ಮಾಡುವ ಅಹೈತುಕ ಭಕ್ತಿ ಮತ್ತು ಭಾಗ್ಯ ನನಗೆ ಲಭಿಸಲಿ.

5. ಹೇ ನಂದನಂದನ, ನಾನು ನಿನ್ನ ನಿತ್ಯ ದಾಸ. ಆದರೆ ನನ್ನ ಕರ್ಮಫಲದಿಂದ ನಾನು ಈ ಜನನ-ಮರಣಗಳೆಂಬ ಭೀಕರ ಸಾಗರದಲ್ಲಿ ಬಿದ್ದಿದ್ದೇನೆ. ದಯವಿಟ್ಟು ನನ್ನ ಮೇಲೆ ಕರುಣೆ ತೋರು. ಈ ಸಂಸಾರ ಸಾಗರದಿಂದ ನನ್ನನ್ನು ಎತ್ತಿ, ನಿನ್ನ ಪಾದಕಮಲಗಳಲ್ಲಿರುವ ಒಂದು ಪುಟ್ಟ ಧೂಳಿನ ಕಣದಂತೆ ನನ್ನನ್ನು ಸ್ವೀಕರಿಸು.

6. ಹೇ ಪ್ರಭು, ನಿನ್ನ ನಾಮವನ್ನು ಜಪಿಸುವಾಗ ನನ್ನ ಕಣ್ಣುಗಳಿಂದ ಪ್ರೇಮಾಶ್ರುಗಳು ಹರಿಯುವ ದಿನ ಎಂದು ಬರುವುದು? ನಿನ್ನ ನಾಮವನ್ನು ಉಚ್ಚರಿಸುವಾಗ ನನ್ನ ಧ್ವನಿಯು ಗದ್ಗದಿತವಾಗಿ, ಮೈ ರೋಮಾಂಚನಗೊಳ್ಳುವ ಆ ಪರವಶ ಸ್ಥಿತಿಗಾಗಿ ನಾನು ಕಾಯುತ್ತಿದ್ದೇನೆ.

7. ಹೇ ಗೋವಿಂದ, ನಿನ್ನ ಅಗಲಿಕೆಯಿಂದಾಗಿ ನನಗೆ ಈಗ ಒಂದು ಕ್ಷಣವೂ ಹನ್ನೆರಡು ವರ್ಷಗಳ ಸುದೀರ್ಘ ಕಾಲದಂತೆ ಭಾಸವಾಗುತ್ತಿದೆ. ನನ್ನ ಕಣ್ಣುಗಳಿಂದ ಮಳೆಯಂತೆ ಕಣ್ಣೀರು ಹರಿಯುತ್ತಿದೆ. ನೀನಿಲ್ಲದ ಈ ಇಡೀ ಜಗತ್ತೇ ನನಗೆ ಶೂನ್ಯವಾಗಿ ಕಾಣುತ್ತಿದೆ.

8. ಶ್ರೀಕೃಷ್ಣನೇ ನನ್ನ ಏಕೈಕ ನಾಥ. ಅವನು ನನ್ನನ್ನು ಪ್ರೀತಿಯಿಂದ ಆಲಿಂಗಿಸಲಿ ಅಥವಾ ನನ್ನ ಮುಂದೆ ಕಾಣಿಸಿಕೊಳ್ಳದಿರಲಿ, ಅವನಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವನು ನನ್ನನ್ನು ಹೇಗೆ ನಡೆಸಿಕೊಂಡರೂ, ಅವನೇ ನನ್ನ ಆರಾಧ್ಯ ದೈವ ಮತ್ತು ಅವನೇ ನನ್ನ ಸರ್ವಸ್ವ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಕೃಷ್ಣದಾಸ ಕವಿರಾಜ ಗೋಸ್ವಾಮಿಗಳಿಂದ ವಿರಚಿತ “ಶ್ರೀ ಚೈತನ್ಯ ಚರಿತಾಮೃತವು” ಕೇವಲ ಒಂದು ಗ್ರಂಥವಲ್ಲ, ಅದು ಮಹಾಪ್ರಭುಗಳ ಜೀವನ ಬೋಧನೆಗಳನ್ನ ಸಾರುವ ಚರಿತ್ರೆ. ಚೈತನ್ಯ ಎಂದರೆ ಜೀವಕ್ಕಿರುವ ಶಕ್ತಿ. ಒಂದು ಜಡವಾದ ಮೇಜು ಅಥವಾ ಕುರ್ಚಿ ಚಲಿಸಲಾರದು, ಆದರೆ ಒಬ್ಬ ಮನುಷ್ಯ ಅಥವಾ ಪ್ರಾಣಿ ಚಲಿಸುತ್ತದೆ.

ಈ ಚಲನೆ ಮತ್ತು ಕ್ರಿಯಾಶೀಲತೆಯೇ ಜೀವ ಶಕ್ತಿಯ ಕುರುಹು. ಚೈತನ್ಯವಿಲ್ಲದೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ. ಚರಿತ ಎಂದರೆ ಚರಿತ್ರೆ ಅಥವಾ ಸ್ವಭಾವ. ಈ ಜೀವ ಶಕ್ತಿಯು ವ್ಯಕ್ತಪಡಿಸುವ ನಡವಳಿಕೆ ಮತ್ತು ಕಾರ್ಯವೈಖರಿಯೇ ಚರಿತ. ಇನ್ನು ಅಮೃತ ಎಂದರೆ ಅವಿನಾಶಿ ಅಥವಾ ಮರಣವಿಲ್ಲದ್ದು.

ಸಾಮಾನ್ಯವಾಗಿ ನಾವೆಲ್ಲರೂ ಈ ಭೌತಿಕ ಜಗತ್ತಿನಲ್ಲಿ ಜೀವಶಕ್ತಿಯನ್ನು ಹೊಂದಿದ್ದೇವೆ ನಿಜ, ಆದರೆ ಇಲ್ಲಿನ ನಮ್ಮ ಸ್ಥಿತಿ ಅಮೃತವಲ್ಲ, ಅಂದರೆ ಇದು ಶಾಶ್ವತವಲ್ಲ. ಯಾವಾಗ ಈ ಜೀವ ಭೌತಿಕ ಬಂಧನದಿಂದ ಮುಕ್ತವಾಗಿ, ಪರಮಾತ್ಮನ ಸೇವೆಯಲ್ಲಿ ತೊಡಗುತ್ತದೆಯೋ, ಆಗ ಅದು ತನ್ನ ನೈಜವಾದ ಅಮೃತ ಸ್ಥಿತಿಯನ್ನು ತಲುಪುತ್ತದೆ.

ಜೀವನದ ಪರಮ ಗುರಿ: ಶುದ್ಧ ಪ್ರೇಮಭಕ್ತಿ

ಚೈತನ್ಯರ ಉಪದೇಶಗಳ ಅಂತಿಮ ಗುರಿಯೇ ಪ್ರೇಮ. ಆತ್ಮ ನಿತ್ಯ ಭಗವಂತನ ಸೇವೆಯಲ್ಲಿ ತೊಡಗಿರುತ್ತದೆ. ಪ್ರೇಮಭಕ್ತಿ ಎಂದರೆ ಕಿಂಚಿತ್ತೂ ಸ್ವಾರ್ಥವಿಲ್ಲದ ಸೇವಾಭಾವ. ಈ ಪ್ರೇಮ ಬೆಳೆಯುತ್ತಾ ಹೋದಂತೆ, ಭಕ್ತನಿಗೆ ಭಗವಂತನ ಮೇಲಿರುವ ಭಯ ಅಥವಾ ಅವನ ಐಶ್ವರ್ಯದ ಬಗೆಗಿನ ಅರಿವು ಕಡಿಮೆಯಾಗಿ, ಕೇವಲ ಪ್ರೀತಿ ಮತ್ತು ಮಮತೆ ಮಾತ್ರ ಉಳಿಯುತ್ತದೆ.

ಈ ಪ್ರೇಮದ ವಿಕಾಸವನ್ನು ಐದು ಹಂತಗಳಲ್ಲಿ ಕಾಣಬಹುದು. ಮೊದಲನೆಯದಾಗಿ ‘ಶಾಂತ ರಸ’, ಇಲ್ಲಿ ಭಕ್ತನು ಭಗವಂತನ ಮಹಿಮೆಯನ್ನು ಅರಿಯುತ್ತಾನೆ. ನಂತರ ‘ದಾಸ್ಯ ರಸ’ ಇಲ್ಲಿ ತಾನು ಭಗವಂತನ ಸೇವಕನೆಂಬ ಭಾವನೆ ಮೂಡುತ್ತದೆ. ಪ್ರೀತಿ ಹೆಚ್ಚಾದಾಗ ‘ಸಖ್ಯ ರಸ’ ಅಥವಾ ಗೆಳೆತನದ ಭಾವನೆ ಮೂಡುತ್ತದೆ.

‘ವಾತ್ಸಲ್ಯ ರಸ’ ಅಂದರೆ ತಂದೆ-ತಾಯಿಯ ಪ್ರೀತಿಯಾಗಿ ಬೆಳೆಯುತ್ತದೆ, ಅಲ್ಲಿ ಭಗವಂತನನ್ನು ಮಗುವಿನಂತೆ ರಕ್ಷಿಸುವ ಹಂಬಲವಿರುತ್ತದೆ. ಕೊನೆಯದಾಗಿ ‘ಮಾಧುರ್ಯ ರಸ’, ಇದು ಎಲ್ಲಾ ರಸಗಳ ಸಾರವನ್ನು ಒಳಗೊಂಡಿರುವ ಅತ್ಯುನ್ನತ ಹಂತವಾಗಿದೆ.

ನೈಜವಾದ ಪ್ರೇಮಭಕ್ತಿಯು ಲೌಕಿಕ ಆಸೆಗಳಿಂದ ಅಥವಾ ಸ್ವಾರ್ಥದಿಂದ ಮುಕ್ತವಾಗಿರುತ್ತದೆ. ಇದು ಯಾವುದೇ ರೀತಿಯ ಪ್ರತಿಫಲವನ್ನು ಅಪೇಕ್ಷಿಸದ ನಿರಂತರ ಸೇವೆಯಾಗಿದೆ. ಒಬ್ಬ ಭಕ್ತನು ಈ ಹಂತವನ್ನು ತಲುಪಿದಾಗ, ಅವನು ಲೌಕಿಕ ಸುಖ-ದುಃಖಗಳನ್ನು ಮೀರಿ ನಿಲ್ಲುತ್ತಾನೆ. ಈ ಶುದ್ಧ ಪ್ರೇಮಕ್ಕೆ ಸ್ವತಃ ಭಗವಂತನೇ ಮಾರುಹೋಗುತ್ತಾನೆ.

ನಾಮ ಸಂಕೀರ್ತನ

ಶ್ರೀ ಚೈತನ್ಯರ ಉಪದೇಶಗಳ ಕೇಂದ್ರಬಿಂದು ಎಂದರೆ ಭಗವಂತನ ಪವಿತ್ರ ನಾಮಗಳ ಜಪ. ಅದರಲ್ಲೂ ವಿಶೇಷವಾಗಿ ಹರೇ ಕೃಷ್ಣ ಮಹಾಮಂತ್ರ. ಹರೇ ಕೃಷ್ಣ ಮಹಾಮಂತ್ರ ಜಪಿಸುವುದು ಪರಮಾತ್ಮನಿಗೆ ಹತ್ತಿರವಾಗಲು ಅತ್ಯಂತ ಸರಳ ಮತ್ತು ಶಕ್ತಿಶಾಲಿ ಮಾರ್ಗವಾಗಿದೆ.

ಕಲಿಯುಗದಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಈ ನಾಮಸ್ಮರಣೆಯು ಅತ್ಯಂತ ಪ್ರಶಸ್ತವಾದುದು. ಮೊದಲು ಅಧ್ಯಾತ್ಮ ಎಂಬುದು ಕೇವಲ ದೇವಾಲಯಗಳಲ್ಲಿ ಅಥವಾ ಕಟ್ಟುನಿಟ್ಟಾದ ನಿಯಮಗಳಿಗೆ ಸೀಮಿತವಾಗಿತ್ತು. ಆದರೆ ಮಹಾಪ್ರಭುಗಳು ಕೃಪೆ ಮಾಡಿ, ಈ ದಿವ್ಯ ನಾಮವನ್ನು ಸಂಕೀರ್ತನ ರೂಪದಲ್ಲಿ ಮನೆಮನೆಗೆ, ಬೀದಿ ಬೀದಿಗೆ ತೆಗೆದುಕೊಂಡು ಹೋಗಿ ಎಲ್ಲರಿಗೂ ಹಂಚಿದರು.

ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ |

ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ||

ಈ ಮಹಾಮಂತ್ರವನ್ನು ಭಕ್ತಿಯಿಂದ ಜಪಿಸಿದಾಗ, ಕಾಮ, ಕ್ರೋಧ, ಲೋಭದಂತಹ ಕಲ್ಮಶಗಳು ದೂರವಾಗಿ ಹೃದಯವು ಪರಿಶುದ್ಧವಾಗುತ್ತದೆ. ಚೈತನ್ಯ ಮಹಾಪ್ರಭುಗಳ ಉಪದೇಶದ ಪ್ರಕಾರ ಈ ನಾಮ ಸಂಕೀರ್ತನೆಯು ‘ಚೇತೋ-ದರ್ಪಣ-ಮಾರ್ಜನಂ’, ಅಂದರೆ ನಮ್ಮ ಚಿತ್ತ ಕನ್ನಡಿ ಇದ್ದಂತೆ.

ನಾಮ ಸಂಕೀರ್ತನ ಭೌತಿಕ ಆಸೆಗಳನ್ನು ನಿವಾರಿಸಿ, ಅಂತರ್ನಿಹಿತ ದಿವ್ಯ ಪ್ರೇಮವನ್ನು ಜಾಗೃತಗೊಳಿಸುತ್ತದೆ. ಈ ನಾಮ ಮಂತ್ರವು ಮನುಷ್ಯನನ್ನು ಭವಸಾಗರದಿಂದ ಪಾರುಮಾಡುವ ಶಕ್ತಿ ಹೊಂದಿದೆ ಎಂದು ಕಲಿಸಂತರಣ ಉಪನಿಷದ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಚಿಂತ್ಯ ಭೇದಾಭೇದ ತತ್ವ

ಚೈತನ್ಯರ ತಾತ್ವಿಕ ಕೊಡುಗೆಗಳಲ್ಲಿ ಪ್ರಮುಖವಾದುದು “ಅಚಿಂತ್ಯ ಭೇದಾಭೇದ” ತತ್ವ. ಈ ತತ್ತ್ವವು ಜೀವಾತ್ಮ ಮತ್ತು ಪರಮಾತ್ಮನ ನಡುವಿನ ಸಂಬಂಧವನ್ನು ಅತ್ಯಂತ ನಿಖರವಾಗಿ ವಿವರಿಸುತ್ತದೆ. ಇದರ ಸರಳ ಅರ್ಥವೆಂದರೆ, ಜೀವಾತ್ಮವು ಭಗವಂತನೊಂದಿಗೆ ಏಕಕಾಲದಲ್ಲಿ ಒಂದೇ ಆಗಿದೆ (ಅಭೇದ) ಮತ್ತು ಭಗವಂತನಿಗಿಂತ ಭಿನ್ನವೂ ಆಗಿದೆ (ಭೇದ). ಈ ಪರಸ್ಪರ ವಿರೋಧಿಯಂತೆ ಕಾಣುವ ಸತ್ಯವು ಮಾನವ ತರ್ಕಕ್ಕೆ ನಿಲುಕದ ಕಾರಣ ಇದನ್ನು ‘ಅಚಿಂತ್ಯ’ ಎಂದು ಕರೆಯಲಾಗುತ್ತದೆ.

ಉದಾಹರಣೆ ಮೂಲಕ ಅರ್ಥೈಸಿಕೊಳ್ಳುವುದಾದರೇ, ಸಮುದ್ರದ ನೀರು ಮತ್ತು ಒಂದು ಹನಿ ನೀರು ಎರಡೂ ಒಂದೇ, ಅಂದರೆ ಎರಡೂ ಉಪ್ಪಾಗಿರುತ್ತವೆ. ಆದರೆ ಗಾತ್ರ ಮತ್ತು ಶಕ್ತಿಯಲ್ಲಿ ಸಮುದ್ರದ ನೀರು ಅಪಾರವಾದುದು, ಹನಿಯು ಅತ್ಯಂತ ಚಿಕ್ಕದು. ಅದೇ ರೀತಿ, ಜೀವಾತ್ಮವು ಗುಣದಲ್ಲಿ ಭಗವಂತನಂತೆಯೇ ಸಚ್ಚಿದಾನಂದ ಸ್ವರೂಪವಾಗಿದ್ದರೂ, ಶಕ್ತಿಯಲ್ಲಿ ಭಗವಂತನಿಗಿಂತ ಅನಂತ ಪಟ್ಟು ಚಿಕ್ಕದಾಗಿದೆ.

ಮತ್ತೊಂದು ಉದಾಹರಣೆ ಮೂಲಕ ನೋಡುವುದಾದರೆ, ಸೂರ್ಯ ಮತ್ತು ಸೂರ್ಯನ ಕಿರಣಗಳು. ಸೂರ್ಯನ ಕಿರಣಗಳು ಸೂರ್ಯನಿಂದಲೇ ಬರುತ್ತವೆ ಮತ್ತು ಅವುಗಳಲ್ಲಿ ಶಾಖ ಹಾಗೂ ಬೆಳಕು ಇರುತ್ತದೆ, ಹಾಗಾಗಿ ಅವು ಸೂರ್ಯನಿಗಿಂತ ಭಿನ್ನವಲ್ಲ. ಆದರೆ ಕಿರಣವೇ ಸೂರ್ಯನಲ್ಲ. ಸೂರ್ಯನು ಮೂಲ ಆಧಾರವಾದರೆ, ಕಿರಣಗಳು ಅವನ ಶಕ್ತಿಯ ಮೂಲವಾಗಿವೆ. ಹಾಗೆಯೇ ನಾವೆಲ್ಲರೂ ಭಗವಂತನ ಭಿನ್ನಾಂಶಗಳಾಗಿದ್ದು, ಅವನ ಶಕ್ತಿಯಿಂದಲೇ ಅಸ್ತಿತ್ವದಲ್ಲಿದ್ದೇವೆ.

ನಾವು ಭಗವಂತನೊಂದಿಗೆ ಗುಣಾತ್ಮಕವಾಗಿ ಒಂದಾಗಿದ್ದರೂ, ವ್ಯಕ್ತಿಗತವಾಗಿ ಅವನಿಗಿಂತ ಭಿನ್ನರಾಗಿದ್ದೇವೆ ಎಂಬ ಅರಿವು ಆತನಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುತ್ತದೆ. ಈ ಸಂಬಂಧವನ್ನು ಅರಿತುಕೊಳ್ಳುವುದೇ ಜೀವನದ ಪರಮ ಸಿದ್ಧಿಯಾಗಿದೆ.

ರಾಧಾಭಾವ: ಪರಮ ಭಕ್ತಿ

ಗೌಡೀಯ ವೈಷ್ಣವ ಸಂಪ್ರದಾಯದ ಪ್ರಕಾರ, ಶ್ರೀ ಚೈತನ್ಯರು ರಾಧಾ-ಕೃಷ್ಣರ ಸಂಯುಕ್ತ ರೂಪ. ರಾಧೆಯ ಭಾವವನ್ನು ಅನುಭವಿಸಲು ಕೃಷ್ಣನೇ ಚೈತನ್ಯ ರೂಪದಲ್ಲಿ ಅವತರಿಸಿದ್ದಾರೆಂಬ ನಂಬಿಕೆ. ರಾಧೆಯ ಪ್ರೀತಿ ಸಂಪೂರ್ಣ ನಿಷ್ಕಾಮ. ಈ ಭಾವವೇ ಆಧ್ಯಾತ್ಮಿಕ ಜೀವನದ ಶಿಖರ.

ಕೃಷ್ಣನು ಪರಮಾತ್ಮನಾದರೆ, ರಾಧೆಯು ಆ ಪರಮಾತ್ಮನಿಗೆ ಆನಂದವನ್ನು ನೀಡುವ ಪ್ರೇಮದ ಸಾಕಾರ ರೂಪ. ಇವರಿಬ್ಬರ ಸಂಬಂಧವು ಲೌಕಿಕವಾದ ಕಾಮವಲ್ಲ, ಅದು ಅತ್ಯಂತ ಶುದ್ಧವಾದ ಮಹಾಭಾವ. ರಾಧೆಯ ಭಾವವು ಭಗವಂತನನ್ನೂ ತನ್ನ ಪ್ರೇಮದಿಂದ ಕಟ್ಟಿಹಾಕಬಲ್ಲದು.

ಆದ್ದರಿಂದಲೇ ಕೃಷ್ಣನನ್ನು ಪಡೆಯಲು ರಾಧಾರಾಣಿಯ ಕೃಪೆ ಅತ್ಯಗತ್ಯ. ಅವಳ ಪ್ರೇಮವು ಎಷ್ಟೊಂದು ಅಪಾರವೆಂದರೆ, ಸ್ವತಃ ಕೃಷ್ಣನೇ ಅವಳ ಪ್ರೇಮದ ಆಳವನ್ನು ಅಳೆಯಲು ನಿರಂತರವಾಗಿ ಹಂಬಲಿಸುತ್ತಾನೆ. ನಾವು ನಮ್ಮ ಇಂದ್ರಿಯ ಸುಖವನ್ನು ತ್ಯಜಿಸಿ ಭಗವಂತನ ಸಂತೋಷಕ್ಕಾಗಿ ಶ್ರಮಿಸಿದಾಗ ಮಾತ್ರ ಈ ಶುದ್ಧ ಪ್ರೇಮದ ಒಂದು ಹನಿ ನಮಗೆ ದಕ್ಕುವುದು.

ಸನಾತನ ಗೋಸ್ವಾಮಿ

ಶ್ರೀ ಚೈತನ್ಯ ಮಹಾಪ್ರಭುಗಳು ವಾರಾಣಸಿಯಲ್ಲಿ ಸನಾತನ ಗೋಸ್ವಾಮಿಗಳಿಗೆ ನೀಡಿದ ಬೋಧನೆಗಳು ಗೌಡೀಯ ವೈಷ್ಣವ ಧರ್ಮದ ತಳಹದಿಯಾಗಿವೆ. ಸನಾತನ ಗೋಸ್ವಾಮಿಗಳು ನಾನು ಯಾರು? ನನಗೆ ಈ ಸಂಸಾರದ ತಾಪತ್ರಯಗಳು ಏಕೆ ತಟ್ಟುತ್ತಿವೆ? ಎಂದು ಪ್ರಶ್ನಿಸಿದಾಗ ಮಹಾಪ್ರಭುಗಳು ವಿವರಿಸಿದ್ದು ಹೀಗೆ –

“ಜೀವೇರ ಸ್ವರೂಪ ಹಯ ಕೃಷ್ಣೇರ ನಿತ್ಯದಾಸ” – ಅಂದರೆ ಪ್ರತಿಯೊಂದು ಜೀವಿಯ ನೈಜ ಸ್ವರೂಪವೇ ಕೃಷ್ಣನ ನಿತ್ಯ ಸೇವಕನಾಗಿರುವುದು. ಆದರೆ ನಾವು ಈ ಭೌತಿಕ ಜಗತ್ತಿನ ಮಾಯೆಯೊಳಗೆ ಸಿಲುಕಿ ನಮ್ಮ ನಿಜವಾದ ಅಸ್ತಿತ್ವ ಮರೆತಿದ್ದೇವೆ. ಬೆಂಕಿಯಿಂದ ಕಿಡಿ ಹೊರಬಂದಂತೆ, ನಾವೆಲ್ಲರೂ ಭಗವಂತನ ಶಕ್ತಿಯ ಒಂದು ಸಣ್ಣ ಅಂಶ.

ನಾವು ಗುಣದಲ್ಲಿ ದೇವರಂತೆಯೇ ಇದ್ದರೂ, ಗಾತ್ರದಲ್ಲಿ ಪರಮಾಣುವಿನಷ್ಟು ಸಣ್ಣವರು. ಆದ್ದರಿಂದಲೇ ನಾವು ಮಾಯೆಯ ಪ್ರಭಾವಕ್ಕೆ ಒಳಗಾಗುತ್ತೇವೆ. ಹೀಗಾಗಿ ಭಗವಂತನಿಗೆ ಮತ್ತೆ ಹತ್ತಿರವಾಗಲು ಇರುವ ಏಕೈಕ ಮಾರ್ಗವೆಂದರೆ ಭಕ್ತಿ.

ಸನಾತನ ಗೋಸ್ವಾಮಿಗಳಿಗೆ ಪ್ರಭುಗಳು ಭಕ್ತಿಯ ಕುರಿತಾಗಿ ಪಾಲಿಸಬೇಕಾದ ನಿಯಮಗಳನ್ನು ವಿವರಿಸಿದ್ದು, ಅವುಗಳಲ್ಲಿ ಐದು ಅತ್ಯಂತ ಪ್ರಮುಖ –  ಸಾಧುಗಳ ಸಹವಾಸ, ಭಗವಂತನ ನಾಮ ಸ್ಮರಣೆ, ಶ್ರೀಮದ್ ಭಾಗವತದ ಶ್ರವಣ, ಮಥುರಾ ವಾಸ, ಮತ್ತು ವಿಗ್ರಹ ಆರಾಧನೆ.

ಭಕ್ತಿಯ ಗುರಿ ಕೇವಲ ಮುಕ್ತಿಯಲ್ಲ, ಬದಲಾಗಿ ಕೃಷ್ಣ ಪ್ರೇಮ. ಪ್ರೀತಿ ಎಂಬುದು ಸೇವೆಯ ಮೂಲಕ ವ್ಯಕ್ತವಾಗುತ್ತದೆ. ಭಕ್ತಿಯು ಮೊದಲು ಶ್ರದ್ಧೆಯಿಂದ ಶುರುವಾಗಿ, ನಂತರ ಸಾಧು ಸಂಗ, ಭಜನ ಕ್ರಿಯೆ ಕೊನೆಗೆ ಭಾವ ಮತ್ತು ಪ್ರೇಮದ ಹಂತವನ್ನು ತಲುಪುತ್ತದೆ.

ಈ ಶುದ್ಧ ಪ್ರೇಮವನ್ನು ಪಡೆದಾಗ ಮನುಷ್ಯನು ಲೌಕಿಕ ಆಸೆಗಳಿಂದ ಸಂಪೂರ್ಣವಾಗಿ ಮುಕ್ತನಾಗಿ ಸದಾ ಆನಂದವಾಗಿರುತ್ತಾನೆ. ಮಹಾಪ್ರಭುಗಳು ಸನಾತನ ಗೋಸ್ವಾಮಿಗಳಿಗೆ ಈ ಜ್ಞಾನವನ್ನು ಕರುಣಿಸಿ, ವೃಂದಾವನಕ್ಕೆ ಹೋಗಿ ಕಳೆದುಹೋದ ಪವಿತ್ರ ಸ್ಥಳಗಳನ್ನು ಉದ್ಧರಿಸಿ, ಭಕ್ತಿ ಶಾಸ್ತ್ರಗಳನ್ನು ಬರೆಯಲು ಆದೇಶಿಸಿದರು.

ಭಗವಂತನ ಸಾಕ್ಷಾತ್ಕಾರ ಹೇಗೆ?

ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಅಥವಾ ಆತನನ್ನು ತಲುಪಲು ಇರುವ ಏಕೈಕ ಮತ್ತು ನೇರವಾದ ಮಾರ್ಗವೆಂದರೆ ಭಕ್ತಿಸೇವೆ. ಶ್ರೀಮದ್ಭಾಗವತದಲ್ಲಿ ಕೃಷ್ಣನು ಉದ್ಧವನಿಗೆ ನೀಡಿದ ಉಪದೇಶವೂ ಇದನ್ನೇ ಪುಷ್ಟೀಕರಿಸುತ್ತದೆ.

ಭಗವಂತನಿಗೆ ಮತ್ತಷ್ಟು ಹತ್ತಿರವಾಗುವುದು ಹೇಗೆ ಎಂಬ ಪ್ರಶ್ನೆಗೆ ಶ್ರೀ ಚೈತನ್ಯ ಮಹಾಪ್ರಭುಗಳು ಅತ್ಯಂತ ಸರಳ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಭಗವಂತನು ಕೇವಲ ಜ್ಞಾನ ಅಥವಾ ತಪಸ್ಸಿನಿಂದ ಸಿಗುವವನಲ್ಲ, ಅವನು ಒಲಿಯುವುದು ಕೇವಲ ಶುದ್ಧಭಕ್ತಿಗೆ ಮಾತ್ರ. ಸನಾತನ ಗೋಸ್ವಾಮಿಗಳು ಮಂತ್ರಿ ಪದವಿಯಲ್ಲಿದ್ದರೂ, ಮಹಾಪ್ರಭುಗಳ ಮುಂದೆ ಅತ್ಯಂತ ವಿನಯದಿಂದ ಮಾರ್ಗದರ್ಶನ ಬೇಡಿದರು. ಈ ನಮ್ರತೆಯೇ ಭಕ್ತಿಯ ಅಡಿಪಾಯ.

ಆಧ್ಯಾತ್ಮಿಕ ಎನ್ನುವುದು ಒಂದು ತಪಸ್ಸು. ಈ ಹಾದಿಯಲ್ಲಿ ಒಬ್ಬಂಟಿಯಾಗಿ ಸಾಗುವುದು ಬಲುಕಷ್ಟ. ಭಗವಂತನಲ್ಲಿ ನಂಬಿಕೆ ಇರುವವರ ಸಹವಾಸ ಮಾಡುವುದರಿಂದ ನಮ್ಮಲ್ಲಿಯೂ ಭಕ್ತಿ ಜಾಗೃತವಾಗುತ್ತದೆ. ಭಕ್ತರ ಸಂಘವು ನಮ್ಮಲ್ಲಿರುವ ಲೌಕಿಕ ಆಸೆಗಳನ್ನು ಹೋಗಲಾಡಿಸಿ ಆಧ್ಯಾತ್ಮಿಕ ಉನ್ಮೇಷವನ್ನು ನೀಡುತ್ತದೆ.

‘ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ’ ಮಂತ್ರವನ್ನು ಪಠಿಸುವುದರಿಂದ ನಮ್ಮ ಹೃದಯವು ಶುದ್ಧವಾಗುತ್ತದೆ. ನಾಮ ಮತ್ತು ನಾಮಿ ಇಬ್ಬರೂ ಒಂದೇ ಆಗಿರುವುದರಿಂದ, ಜಪ ಮಾಡುವಾಗ ನಾವು ನೇರವಾಗಿ ದೇವರ ಸಾನ್ನಿಧ್ಯದಲ್ಲಿರುತ್ತೇವೆ.

ಹೀಗೆಂದು, ನಾವು ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗಬೇಕಿಲ್ಲ. ಇರುವ ಜಾಗದಲ್ಲೇ, ಮಾಡುವ ಕೆಲಸದಲ್ಲೇ ಭಗವಂತನನ್ನು ನೆನೆಯುತ್ತಾ, ಭಕ್ತಿ ಸೇವೆ ಸಲ್ಲಿಸುತ್ತಾ ಅವನ ಮೇಲಿನ ಪ್ರೀತಿಯನ್ನು ಬೆಳೆಸಿಕೊಳ್ಳುವುದೇ ನಿಜವಾದ ಮಾರ್ಗ ಆಗಿದೆ.

ಸಂಪ್ರದಾಯ ಮತ್ತು ನಂಬಿಕೆಗಳ ಉಳಿವಿಗೆ ತೀವ್ರ ಸಂಘರ್ಷವಿದ್ದ ಕಾಲದಲ್ಲಿ, ಮನುಕುಲಕ್ಕೆ ಹೊಸ ಆಶಾಕಿರಣವಾಗಿ ಮೂಡಿಬಂದವರು ಶ್ರೀ ಚೈತನ್ಯ ಮಹಾಪ್ರಭುಗಳು. ಧರ್ಮದ ಹಾದಿ ಕಷ್ಟವೆಂಬ ಭಾವನೆ ಜನರಲ್ಲಿ ಮನೆಮಾಡಿದ್ದ ಸಂದರ್ಭದಲ್ಲಿ ಅವರು ಭಕ್ತಿಯನ್ನು ಕೇವಲ ಆಚರಣೆಯಾಗಿಸದೆ ಒಂದು ಜನಪದ ಚಳವಳಿಯನ್ನಾಗಿ ಪರಿವರ್ತಿಸಿದರು.

ಕಠಿಣ ತಪಸ್ಸು ಅಥವಾ ವಿಧಿ-ವಿಧಾನಗಳಿಗಿಂತ ಮಿಗಿಲಾಗಿ, ಶುದ್ಧ ಭಕ್ತಿಯಿಂದ ಆತ್ಮೋದ್ಧಾರ ಸಾಧ್ಯ ಎಂಬುದನ್ನು ಅವರು ಸಾಬೀತುಪಡಿಸಿದರು. ಅಧ್ಯಾತ್ಮದ ಉತ್ತುಂಗವನ್ನು ತಲಪಲು ಪ್ರೇಮ ಮತ್ತು ಶರಣಾಗತಿಯೇ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವೆಂದು ತೋರಿಸಿಕೊಡುವ ಮೂಲಕ ದಾರಿ ತಪ್ಪಿದ್ದ ಸಮಾಜವನ್ನು ಶ್ರೀ ಚೈತನ್ಯ ಮಹಾಪ್ರಭುಗಳು ಜಾಗೃತಿಗೊಳಿಸಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi