ಭಕ್ತಿ ಸಾಮ್ರಾಜ್ಯದ ಚಕ್ರವರ್ತಿ: ಶ್ರೀ ಚೈತನ್ಯ ಮಹಾಪ್ರಭು

ಸನಾತನ ಧರ್ಮದ ಇತಿಹಾಸದಲ್ಲಿ ಯುಗ ಯುಗಗಳಲ್ಲೂ ಭಗವಂತನು ಧರ್ಮ ಸಂಸ್ಥಾಪನೆಗಾಗಿ ಅವತರಿಸುತ್ತಾನೆ ಎಂಬ ನಂಬಿಕೆಯಿದೆ. “ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್” ಎಂಬ ಗೀತಾ ವಾಕ್ಯದಂತೆ, ಕಲಿಯುಗದಲ್ಲಿ ಕಲ್ಕಿ ಅವತಾರಕ್ಕೂ ಮುನ್ನ ಭಗವಂತನು ಭಕ್ತನ ರೂಪದಲ್ಲಿ ಧರೆಗಿಳಿದ ಪರ್ವವೇ ಶ್ರೀ ಚೈತನ್ಯ ಮಹಾಪ್ರಭುಗಳ ಅವತಾರ.

ಈ ಅವತಾರದಲ್ಲಿ ಭಗವಂತನು ಯಾವುದೇ ಭೌತಿಕ ಅಸ್ತ್ರಗಳನ್ನು ಹಿಡಿಯಲಿಲ್ಲ, ಬದಲಿಗೆ ‘ಹರಿನಾಮ’ ಎಂಬ ಅಹಿಂಸಾತ್ಮಕ ಹಾಗೂ ಶಕ್ತಿಯುತ ಅಸ್ತ್ರದ ಮೂಲಕ ಜನರ ಹೃದಯವನ್ನು ಗೆದ್ದನು. ಜನರಲ್ಲಿ ಸುಪ್ತವಾಗಿರುವ ಕೃಷ್ಣಪ್ರೇಮವನ್ನು ಜಾಗೃತಗೊಳಿಸುವುದೇ ಈ ಅವತಾರದ ವೈಶಿಷ್ಟ್ಯ.

ಸುಮಾರು 5000 ವರ್ಷಗಳ ಹಿಂದೆ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಜೀವನದ ಪರಮ ಸತ್ಯವನ್ನು ಬೋಧಿಸಿದನು. ಆದರೆ ಕಲಿಯುಗದ ಪ್ರಭಾವದಿಂದ ಮನುಷ್ಯರು ಮಂದಬುದ್ಧಿಯವರಾಗುತ್ತಾರೆ, ಅಲ್ಪಾಯುಷಿಗಳಾಗುತ್ತಾರೆ ಮತ್ತು ಸುಲಭವಾಗಿ ಲೌಕಿಕ ಆಕರ್ಷಣೆಗಳಿಗೆ ವಿಚಲಿತರಾಗುತ್ತಾರೆ ಎಂಬುದು ಭಗವಂತನಿಗೆ ತಿಳಿದಿತ್ತು.

ಭಗವದ್ಗೀತೆಯ ಸಿದ್ಧಾಂತಗಳನ್ನು ಸಾಮಾನ್ಯ ಜನರು ಹೇಗೆ ಪಾಲಿಸಬಲ್ಲರು ಎಂದು ತೋರಿಸಿಕೊಡಲು, ಕರುಣೆಯಿಂದ, ಶ್ರೀಕೃಷ್ಣನೇ ಸ್ವತಃ ಭಕ್ತನ ಭಾವವನ್ನು (ರಾಧಾ ಭಾವ) ತಾಳಿ ಸುಮಾರು 500 ವರ್ಷಗಳ ಹಿಂದೆ ನವದ್ವೀಪದಲ್ಲಿ ಅವತರಿಸಿದನು. ಇದೇ ‘ಗೌರ ಅವತಾರ’.

ಜನ್ಮ ವೃತ್ತಾಂತ

ಕ್ರಿ.ಶ. 1486ರ ಫಾಲ್ಗುಣ ಮಾಸದ ಪೂರ್ಣಿಮೆಯ ದಿನ, ಬಂಗಾಳದ ನವದ್ವೀಪದ ಮಾಯಾಪುರದಲ್ಲಿ ಒಂದು ಅದ್ಭುತ ಘಟನೆ ನಡೆಯಿತು. ಭಾಗೀರಥೀ ನದಿಯ ತಟದಲ್ಲಿ ವಾಸವಿದ್ದ ಧರ್ಮಿಷ್ಠ ದಂಪತಿಗಳಾದ ಜಗನ್ನಾಥ ಮಿಶ್ರಾ ಮತ್ತು ಶಚೀದೇವಿಯವರ ಪುಣ್ಯಗರ್ಭದಿಂದ ದಿವ್ಯ ತೇಜಸ್ಸಿನ ಮಗು ಜನಿಸಿತು.

ಆ ದಿನ ಚಂದ್ರಗ್ರಹಣವಿದ್ದ ಕಾರಣ, ಅಂದಿನ ಪದ್ಧತಿಯಂತೆ ಇಡೀ ನದಿಯಾದ ಜನರು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾ ‘ಹರೇ ಕೃಷ್ಣ’ ಮಹಾಮಂತ್ರವನ್ನು ಜಗತ್ತೇ ಮರೆಯುವಂತೆ ಪಠಿಸುತ್ತಿದ್ದರು. ಭಗವನ್ನಾಮದ ಈ ಮಂಗಳಕರ ಘೋಷಗಳ ನಡುವೆಯೇ ಭೂಮಿಗೆ ಬಂದ ಈ ಮಗುವನ್ನು ಪುರಾಣವು ಸಾಕ್ಷಾತ್ ಕೃಷ್ಣನ ಅವತಾರವೆಂದು ಬಣ್ಣಿಸುತ್ತದೆ.

ಬೇವಿನ ಮರದ ಕೆಳಗೆ ಜನಿಸಿದ್ದರಿಂದ ಪ್ರೀತಿಯಿಂದ ‘ನಿಮಾಯಿ’ ಎಂದು ಕರೆದರೆ, ಚಿನ್ನದಂತೆ ಹೊಳೆಯುವ ಮೈಬಣ್ಣದಿಂದಾಗಿ ‘ಗೌರಾಂಗ’ ಎಂಬ ಹೆಸರು ಪ್ರಸಿದ್ಧಿಯಾಯಿತು. ಶೈಶವಾವಸ್ಥೆಯಲ್ಲೇ ನಿಮಾಯಿ ವಿಚಿತ್ರ ಮತ್ತು ದಿವ್ಯ ಲಕ್ಷಣಗಳನ್ನು ಹೊಂದಿದ್ದನು.

ಮಗು ಅಳುವಾಗ ಯಾರಾದರೂ ‘ಹರಿಬೋಲ್’ ಎಂದು ನಾಮಸ್ಮರಣೆ ಮಾಡಿದರೆ ಸಾಕು, ತಕ್ಷಣ ಅಳು ನಿಲ್ಲಿಸಿ ಮಂದಹಾಸ ಬೀರುತ್ತಿದ್ದನು. ಇದು ಮುಂದೆ ಅವರು ಜಗತ್ತಿಗೆ ನೀಡಲಿರುವ ‘ಸಂಕೀರ್ತನಾ ಚಳವಳಿ’ಯ ಮುನ್ಸೂಚನೆಯಾಗಿತ್ತು.

ಜ್ಞಾನ ಮತ್ತು ಪಾಂಡಿತ್ಯದ ಪರಾಕಾಷ್ಠೆ

ಬಾಲ್ಯದಲ್ಲೇ ನಿಮಾಯಿ ಅಸಾಧಾರಣ ಬುದ್ಧಿಶಕ್ತಿಗೆ ಹೆಸರಾಗಿದ್ದನು. ಪಂಡಿತ ನೀಲಾಂಬರ ಚಕ್ರವರ್ತಿಯವರು ಈ ಬಾಲಕ ಮುಂದೆ ವಿಶ್ವವಿಖ್ಯಾತ ಮಹಾಪುರುಷನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರು. ಸುವರ್ಣ ಕಾಂತಿಯಿಂದ ಕಂಗೊಳಿಸುತ್ತಿದ್ದ ನಿಮಾಯಿಯನ್ನು ನೋಡಿದವರಿಗೆ, ಇದು ಭೂಲೋಕದ ಮಗುವಲ್ಲ, ಸಾಕ್ಷಾತ್ ದೈವಸ್ವರೂಪಿಯೇ ಇಳಿದು ಬಂದಂತಿದೆ ಎಂದು ಭಾಸವಾಗುತ್ತಿತ್ತು.

ಕೇವಲ ಭಕ್ತಿಯಷ್ಟೇ ಅಲ್ಲದೆ, ಜ್ಞಾನಾರ್ಜನೆಯಲ್ಲೂ ನಿಮಾಯಿ ಅಗ್ರಗಣ್ಯನಾಗಿದ್ದನು. ಸಂಸ್ಕೃತ ವ್ಯಾಕರಣ, ಸ್ಮೃತಿ ಮತ್ತು ನ್ಯಾಯಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯ ಸಾಧಿಸಿದ್ದ. ಅಷ್ಟೇ ಅಲ್ಲದೆ ಘಟಾನುಘಟಿ ವಿದ್ವಾಂಸರನ್ನ ವಾದದಲ್ಲಿ ಸೋಲಿಸುತ್ತಿದ್ದ. ಇದರಿಂದಾಗಿ ಆತನಿಗೆ ‘ನಿಮಾಯಿ ಪಂಡಿತ’ ಎಂಬ ಬಿರುದು ಲಭಿಸಿತು. ಆ ಕಾಲದ ಘನಪಾಠಿ ಪಂಡಿತರೆಲ್ಲರೂ ಚೈತನ್ಯರೊಂದಿಗೆ ಚರ್ಚೆ ಮತ್ತು ವಾದಕ್ಕಿಳಿಯಲು ಭಯಪಡುತ್ತಿದ್ದರು.

ನಿಮಾಯಿ 14ನೇ ವಯಸ್ಸಿನಲ್ಲಿ ತಮ್ಮ ತಂದೆ ಜಗನ್ನಾಥ ಮಿಶ್ರಾ ಅವರನ್ನು ಕಳೆದುಕೊಳ್ಳುತ್ತಾರೆ. ತಾಯಿ ಶಚೀದೇವಿಯವರು ವಿಧವೆಯಾಗುತ್ತಾರೆ. ಹೀಗಿರುವಾಗ ಯೌವನದಲ್ಲಿ ಅವರು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಾರೆ. ವಲ್ಲಭಾಚಾರ್ಯರ ಪುತ್ರಿ ಲಕ್ಷ್ಮಿದೇವಿಯನ್ನು ನಿಮಾಯಿ ವಿವಾಹವಾಗುತ್ತಾರೆ.

ಗೃಹಸ್ಥಾಶ್ರಮದ ಜೀವನಕ್ಕೆ ಕಾಲಿಟ್ಟ ನಂತರ, ಜೀವನೋಪಾಯಕ್ಕಾಗಿ ಪೂರ್ವ ಬಂಗಾಳಕ್ಕೆ ಪ್ರಯಾಣಿಸುತ್ತಾರೆ. ಅಲ್ಲಿಂದಲೇ ಅವರು ತಮ್ಮ ಆಧ್ಯಾತ್ಮಿಕ ಬೋಧನೆ ಮತ್ತು ಪ್ರಚಾರ ಕಾರ್ಯಗಳನ್ನು ಆರಂಭಿಸುತ್ತಾರೆ. ಅನೇಕ ಬಂಗಾಳಿಗಳಿಗೆ ವೈಷ್ಣವ ಧರ್ಮದ ತತ್ವಗಳನ್ನು ಬೋಧಿಸುತ್ತಾರೆ.

ಚೈತನ್ಯರು ಪೂರ್ವ ಬಂಗಾಳದಲ್ಲಿದ್ದ ಸಂದರ್ಭದಲ್ಲಿಯೇ, ಅವರ ಪತ್ನಿ ಲಕ್ಷ್ಮಿದೇವಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದುತ್ತಾರೆ. ಚೈತನ್ಯ ಮಹಾಪ್ರಭುಗಳು ಮನೆಗೆ ಹಿಂದಿರುಗಿದಾಗ ತಮ್ಮ ತಾಯಿಯು ದುಃಖದಲ್ಲಿರುವುದನ್ನು ಕಾಣುತ್ತಾರೆ. ಅವರನ್ನು ಸಮಾಧಾನಪಡಿಸಲು ಈ ಲೌಕಿಕ ಪ್ರಪಂಚದ ನೈಜ ಸ್ವರೂಪದ ಬಗ್ಗೆ ವಿವರಿಸುತ್ತಾರೆ.

ತದನಂತರ, ತಾಯಿಯ ಆಜ್ಞೆಯಂತೆ ಅವರು ಪಂಡಿತ ಸನಾತನ ಮಿಶ್ರರ ಸುಪುತ್ರಿಯಾದ ಶ್ರೀಮತಿ ವಿಷ್ಣುಪ್ರಿಯಾದೇವಿಯನ್ನ ವಿವಾಹ ಮಾಡಿಕೊಳ್ಳುತ್ತಾರೆ.

ಗೃಹಸ್ಥಾಶ್ರಮದ ಧರ್ಮವನ್ನು ಪಾಲಿಸುತ್ತಲೇ, ಭಕ್ತಿಸೇವೆಯೂ ನಡೆದಿರುತ್ತದೆ. ಹೀಗಿರುವಾಗ ಅದೊಂದು ದಿನ ದಿಗ್ವಿಜಯಿ ಪಂಡಿತರೆಂದೇ ಪ್ರಖ್ಯಾತರಾಗಿದ್ದ ಕಾಶ್ಮೀರದ ಕೇಶವ ಮಿಶ್ರಾ ಎಂಬುವವರು ನವದ್ವೀಪಕ್ಕೆ ಆಗಮಿಸುತ್ತಾರೆ. ಮಾಯಾಪುರದ ಗಂಗಾತೀರದಲ್ಲಿ ನಡೆದ ಶಾಸ್ತ್ರ ಚರ್ಚೆಯಲ್ಲಿ ಮಹಾಪ್ರಭುಗಳು ಅವರ ಪಾಂಡಿತ್ಯದ ಅಹಂಕಾರವನ್ನು ಇಳಿಸುತ್ತಾರೆ.

ಸೋಲಿನಿಂದ ಜ್ಞಾನೋದಯ ಪಡೆದ ಆ ಪಂಡಿತ ಅತ್ಯಂತ ವಿನಮ್ರನಾಗಿ ಅಲ್ಲಿಂದ ಹೊರಟುಹೋದರು. ಇದು ಚೈತನ್ಯರ ಪಾಂಡಿತ್ಯಕ್ಕೆ ಹಿಡಿದ ಮತ್ತೊಂದು ಕನ್ನಡಿ ಎಂದೇ ಹೇಳಬಹುದು.

ಆಧ್ಯಾತ್ಮಿಕ ಪರಿವರ್ತನೆ ಮತ್ತು ಸನ್ಯಾಸತ್ವ

ತಮ್ಮ 16ನೇ ವಯಸ್ಸಿನಲ್ಲಿ ಗಯಾ ಕ್ಷೇತ್ರಕ್ಕೆ ಹೋದಾಗ, ಅಲ್ಲಿ ಮಾಧವೇಂದ್ರ-ಪುರಿಗಳ ಶಿಷ್ಯರಾದ ಶ್ರೀ ಈಶ್ವರ-ಪುರಿ ಎಂಬ ಸನ್ಯಾಸಿಗಳಿಂದ ದೀಕ್ಷೆ ಪಡೆದರು. ಈ ಘಟನೆಯು ಅವರ ಜೀವನದ ದಿಕ್ಕನ್ನೇ ಬದಲಿಸಿತು. ನವದ್ವೀಪಕ್ಕೆ ಮರಳಿದ ನಂತರ ಮಹಾಪ್ರಭುಗಳ ವರ್ತನೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು.

ಪಾಂಡಿತ್ಯದ ಹಸಿವು ಮಾಯವಾಗಿ, ಕೃಷ್ಣ ಪ್ರೇಮದ ದಾಹ ಶುರುವಾಗಿತ್ತು. ಹಗಲಿರುಳು ಕೃಷ್ಣನ ನಾಮಸ್ಮರಣೆಯಲ್ಲಿ ಕಣ್ಣೀರು ಹಾಕುತ್ತಾ, ಭಕ್ತರೊಂದಿಗೆ ಸೇರಿ ನಗರ-ಸಂಕೀರ್ತನೆಯನ್ನು ಆರಂಭಿಸಿದರು.

ನವದ್ವೀಪವು ವೈಷ್ಣವ ಭಕ್ತಿಯ ಕೇಂದ್ರವಾಯಿತು. ನಿತ್ಯಾನಂದ ಪ್ರಭುಗಳು (ಬಲರಾಮನ ಅವತಾರ), ಅದ್ವೈತ ಆಚಾರ್ಯರು, ಗದಾದರ ಪಂಡಿತರು ಮತ್ತು ಶ್ರೀವಾಸ್ ಠಾಕೂರರೊಂದಿಗೆ ಸೇರಿ ಅವರು ‘ಪಂಚತತ್ವ’ ರೂಪದಲ್ಲಿ ಭಕ್ತಿಯನ್ನು ಪ್ರಸಾರ ಮಾಡಿದರು.

ಆದರೆ ಸಮಾಜದ ಕೆಲವು ದುಷ್ಟರು ಮತ್ತು ನಾಸ್ತಿಕರು ಈ ಚಳವಳಿಯನ್ನು ವಿರೋಧಿಸಿದಾಗ, ಇಡೀ ಜಗತ್ತನ್ನು ಉದ್ದರಿಸಲು ತಾನು ಸನ್ಯಾಸಿಯಾಗಲೇಬೇಕು ಎಂದು ನಿರ್ಧರಿಸಿದರು. ಕೇವಲ 24ನೇ ವಯಸ್ಸಿನಲ್ಲಿ ಯೌವನದ ಹೊಸ್ತಿಲಲ್ಲಿರುವ ಪತ್ನಿ ಮತ್ತು ವೃದ್ಧ ತಾಯಿಯನ್ನು ಬಿಟ್ಟು, ಕೇಶಮುಂಡನ ಮಾಡಿಸಿಕೊಂಡು ಕೇಸರಿ ವಸ್ತ್ರ ಧರಿಸಿ ‘ಶ್ರೀ ಕೃಷ್ಣ ಚೈತನ್ಯ’ ಎಂಬ ನಾಮದೊಂದಿಗೆ ಸನ್ಯಾಸಿಯಾದರು.

ಸನ್ಯಾಸ ಸ್ವೀಕರಿಸಿದ ನಂತರ ಅವರು ಜಗನ್ನಾಥ ಪುರಿಗೆ ತೆರಳಿದರು. ಅಲ್ಲಿನ ರಥಯಾತ್ರೆಯ ಸಂದರ್ಭದಲ್ಲಿ ಮಹಾಪ್ರಭುಗಳು ತೋರಿದ ನೃತ್ಯ ಮತ್ತು ಭಕ್ತಿ ಭಾವಾವೇಶಗಳು ವರ್ಣನಾತೀತ. ಇಡೀ ಒಡಿಶಾ ರಾಜ್ಯವೇ ಮಹಾಪ್ರಭುಗಳ ಗುಣಗಾನ ಮಾಡಿತು.

ಅಷ್ಟೇ ಅಲ್ಲದೆ ಜನರು ಅವರ ಅನುಯಾಯಿಗಳಾಗತೊಡಗಿದರು. ಸಾವಿರಾರು ಜನರು ಅವರ ದಿವ್ಯ ಸ್ವರೂಪಕ್ಕೆ ಮಾರುಹೋಗಿ ವೈಷ್ಣವರಾದರು. ತದನಂತರ ಅವರು ದಕ್ಷಿಣ ಭಾರತದ ಯಾತ್ರೆಯನ್ನು ಕೈಗೊಂಡರು. ಈ ಯಾತ್ರೆಯಲ್ಲಿ ಅವರು ಪ್ರತಿ ಹಳ್ಳಿಯಲ್ಲೂ ಹರಿನಾಮವನ್ನು ಹರಡಿದರು. ಮುಂದೆ ಅವರು ಕಾಡಿನ ಹಾದಿಯಲ್ಲಿ ಒಮ್ಮೆ ಸಾಗುವಾಗ ಪ್ರಾಣಿಗಳೂ ಸಹ ಅವರ ಸಂಕೀರ್ತನೆಯ ದನಿಗೆ ಓಗೊಟ್ಟು ನೃತ್ಯ ಮಾಡುತ್ತಿದ್ದವು ಎಂಬುದು ಅವರ ದಿವ್ಯ ಶಕ್ತಿಗೆ ಸಾಕ್ಷಿ.

ಪಠಾಣ್ ವೈಷ್ಣವರು

ವೃಂದಾವನಕ್ಕೆ ಹೋಗುವ ಹಾದಿಯಲ್ಲಿ ಪ್ರಯಾಗ್‌ನಲ್ಲಿ (ಅಲಹಾಬಾದ್) ಅವರು ಪಠಾಣ್ ಮುಸ್ಲಿಮರನ್ನು ಭೇಟಿಯಾದರು. ಅಲ್ಲಿ ಅವರು ಕುರಾನ್‌ನ ಆಳವಾದ ಅರ್ಥಗಳನ್ನು ವಿವರಿಸಿ, ದೇವರು ನಿರಾಕಾರನಲ್ಲ, ಬದಲಿಗೆ ಸಾಕಾರ ಸ್ವರೂಪಿಯಾದ ಪ್ರೇಮಮಯಿ ಎಂದು ಸಾಬೀತುಪಡಿಸಿದರು.

ಈ ತರ್ಕಬದ್ಧ ವಾದ ಮತ್ತು ಭಕ್ತಿ ಪೂರ್ವಕ ಮಾತುಗಳನ್ನು ಕೇಳಿದ ಪಠಾಣರು ಪ್ರಭಾವಿತರಾಗಿ, ಮಹಾಪ್ರಭುಗಳ ಶಿಷ್ಯರಾದರು. ಅನೇಕರು ‘ಪಠಾಣ್ ವೈಷ್ಣವರು’ ಎಂದು ಹೆಸರು ಪಡೆದರು.

ಬನಾರಸ್‌ಗೆ ಆಗಮಿಸುವ ಚೈತನ್ಯ ಮಹಾಪ್ರಭುಗಳು ಶಂಕರಾಚಾರ್ಯರ ‘ನಿರಾಕಾರ’ ತತ್ವವನ್ನು ಖಂಡಿಸಿ, ದೇವರ ಸಾಕಾರರೂಪ ಮತ್ತು ಭಕ್ತಿಯ ಸಿದ್ಧಾಂತವನ್ನು ಪ್ರತಿಪಾದಿಸಿದರು. ಪ್ರಕಾಶಾನಂದ ಸರಸ್ವತಿಯವರ ನೇತೃತ್ವದ ಸಾವಿರಾರು ಸನ್ಯಾಸಿಗಳಿಗೆ “ವೇದಾಂತದ ನಿಜವಾದ ಅರ್ಥ ಕೃಷ್ಣಪ್ರೇಮ” ಎಂದು ಮನವರಿಕೆ ಮಾಡಿಕೊಟ್ಟು, ಜ್ಞಾನ ಮಾರ್ಗಕ್ಕಿಂತ ಭಕ್ತಿ ಮಾರ್ಗವೇ ಶ್ರೇಷ್ಠವೆಂದು ತಿಳಿಸಿಕೊಟ್ಟರು.

ವೃಂದಾವನದ ಪುನರುತ್ಥಾನ

ತಮ್ಮ ಪ್ರಯಾಣದ ಸಮಯದಲ್ಲಿ ಚೈತನ್ಯ ಮಹಾಪ್ರಭುಗಳು ಅನೇಕ ಶಿಷ್ಯರಿಗೆ ಮಾರ್ಗದರ್ಶನ ಮಾಡುತ್ತಾರೆ. ಅವರಲ್ಲಿ ರೂಪ ಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿ ಪ್ರಮುಖರು. ಇವರಿಬ್ಬರಿಗೂ ಮಹಾಪ್ರಭುಗಳು ವೃಂದಾವನವನ್ನು ಮರುಸ್ಥಾಪಿಸುವ ಜವಾಬ್ದಾರಿ ನೀಡಿದರು.

ಅಂದು ಕಾಡಿನಂತಿದ್ದ ವೃಂದಾವನದಲ್ಲಿ ಕೃಷ್ಣನ ಲೀಲಾ ಕ್ಷೇತ್ರಗಳನ್ನು ಪತ್ತೆಹಚ್ಚಿ, ಭಕ್ತಿ ಗ್ರಂಥಗಳನ್ನು ರಚಿಸಿ, ಇಂದು ನಾವು ಕಾಣುವ ಸುಂದರ ವೃಂದಾವನವನ್ನು ನಿರ್ಮಿಸಿದ ಕೀರ್ತಿ ಈ ಗೋಸ್ವಾಮಿಗಳಿಗೆ ಸಲ್ಲುತ್ತದೆ. ಮಹಾಪ್ರಭುಗಳು ಈ ಗೋಸ್ವಾಮಿಗಳಿಗೆ ನೀಡಿದ ಉಪದೇಶವೇ ‘ಗೌಡೀಯ ವೈಷ್ಣವ’ ತತ್ವಶಾಸ್ತ್ರದ ಬುನಾದಿ.

ಚೈತನ್ಯ ಮಹಾಪ್ರಭುಗಳು ನೀಡಿದ ಮತ್ತೊಂದು ದಾರ್ಶನಿಕ ಕೊಡುಗೆ ಎಂದರೆ ‘ಅಚಿಂತ್ಯ ಭೇದಾಭೇದ’ ತತ್ತ್ವ. ಭಗವಂತ ಮತ್ತು ಜೀವಾತ್ಮರು ಗುಣದಲ್ಲಿ ಒಂದೇ ಆಗಿದ್ದಾರೆ, ಆದರೆ ಪ್ರಮಾಣದಲ್ಲಿ ಭಿನ್ನವಾಗಿದ್ದಾರೆ. ಉದಾಹರಣೆ ಮೂಲಕ ತಿಳಿಯುವುದಾದರೆ, ಸೂರ್ಯನ ಕಿರಣ ಮತ್ತು ಸೂರ್ಯ.

ಕಿರಣವು ಸೂರ್ಯನ ಭಾಗವೇ ಆಗಿದ್ದರೂ, ಅದು ಸೂರ್ಯನಲ್ಲ. ಹಾಗೆಯೇ ನಾವೆಲ್ಲರೂ ಭಗವಂತನ ಅಂಶಗಳಾಗಿದ್ದರೂ, ಭಗವಂತರಲ್ಲ. ಮಹಾಪ್ರಭುಗಳು ಯಾವುದೇ ದೊಡ್ಡ ಗ್ರಂಥವನ್ನು ಬರೆಯಲಿಲ್ಲ. ಆದರೆ ಅವರು ಬರೆದರು ಎನ್ನಲಾದ ಎಂಟು ಶ್ಲೋಕಗಳು “ಶಿಕ್ಷಾಷ್ಟಕ” ಇಡೀ ವೇದಾಂತದ ಸಾರವನ್ನು ಒಳಗೊಂಡಿದೆ.

ಅಂತರ್ಧಾನ

ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಮಹಾಪ್ರಭುಗಳು ಪುರಿಯಲ್ಲಿ ಕಳೆದರು. ಅವರು ಸದಾ ‘ಗಂಭೀರಾ’ ಎಂಬ ಸಣ್ಣ ಕೋಣೆಯಲ್ಲಿ ಕೃಷ್ಣನ ವಿರಹ ವೇದನೆಯಲ್ಲಿ ಮುಳುಗಿರುತ್ತಿದ್ದರು. ಕ್ರಿ.ಶ. 1534ರಲ್ಲಿ, ತಮ್ಮ 48ನೇ ವಯಸ್ಸಿನಲ್ಲಿ ಅವರು ಈ ಲೋಕದಿಂದ ಮರೆಯಾಗಿ, ಪುರಿಯ ‘ತೋಟಾ ಗೋಪಿನಾಥ’ ಎಂಬ ಕೃಷ್ಣನ ವಿಗ್ರಹದೊಳಗೆ ಪ್ರವೇಶಿಸಿದರು.

ಇಂದಿಗೂ ಆ ವಿಗ್ರಹದ ಕಾಲಿನ ಬಳಿ ಒಂದು ಸಣ್ಣ ಗುರುತಿದ್ದು, ಅದು ಮಹಾಪ್ರಭುಗಳು ವಿಗ್ರಹದೊಳಗೆ ಪ್ರವೇಶಿಸಿದ ಜಾಗ ಎಂದು ಕರೆಯಲಾಗುತ್ತದೆ.

ಚೈತನ್ಯ ಮಹಾಪ್ರಭುಗಳು ಯಾವುದೇ ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ; ಬದಲಿಗೆ ಮನುಷ್ಯನ ಸಹಜ ಧರ್ಮವಾದ ‘ಪ್ರೇಮ’ವನ್ನು ಬೋಧಿಸಿದರು. ಈ ಕಲಿಯುಗದಲ್ಲಿ ಕಠಿಣ ಯೋಗ ಅಥವಾ ತಪಸ್ಸು ಮಾಡುವುದು ಅಸಾಧ್ಯ. ಆದ್ದರಿಂದಲೇ ಅವರು “ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ” ಎಂಬ ಮಹಾಮಂತ್ರದ ಜಪವೇ ಈ ಯುಗದ ಧರ್ಮ ಎಂದು ಸಾರಿದರು.

ಜಾತಿ, ಮತ, ಪಂಥಗಳ ಬೇಲಿಯಿಲ್ಲದೆ ಭಗವಂತನ ನಾಮ ಸ್ಮರಿಸುವ ಪ್ರತಿಯೊಬ್ಬನೂ ಮುಕ್ತಿಯನ್ನು ಪಡೆಯಬಲ್ಲ ಎಂಬ ಅವರ ಸಂದೇಶವು ಇಂದಿಗೂ ವಿಶ್ವದಾದ್ಯಂತ ಸಾವಿರಾರು ಜನರಿಗೆ ದಾರಿದೀಪವಾಗಿದೆ. ಮಾನವ ಜೀವನದ ಅಂತಿಮ ಗುರಿ ಕೇವಲ ಮುಕ್ತಿಯಲ್ಲ, ಬದಲಿಗೆ ಕೃಷ್ಣನ ನಿಷ್ಕಲ್ಮಶ ಪ್ರೇಮ ಎಂದು ತೋರಿಸಿಕೊಟ್ಟ ಚೈತನ್ಯ ಮಹಾಪ್ರಭುಗಳು ನಿಜಕ್ಕೂ ‘ಭಕ್ತಿ ಸಾಮ್ರಾಜ್ಯದ ದೊರೆ’.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi