ಪ್ರಕೃತಿಯ ವರಗಳಿಂದ ಬಾಳುವುದು

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಉಪದೇಶಗಳಿಂದ ಆಯ್ದ ಭಾಗಗಳು.

ಅನುವಾದ: ಈಶ್ವರಚಂದ್ರ

ಅನೇಕ ಶತಮಾನಗಳ ಅನಂತರ ಔದ್ಯಮಿಕ ಕ್ರಾಂತಿಯು ನಮಗೆ ಉಳಿಸಿರುವ ಪೂರ್ವಾರ್ಜಿತ ಸ್ವತ್ತು ಎಂದರೆ ಅತೃಪ್ತಿ, ಸಂಘರ್ಷ ಮತ್ತು ಮಾಲಿನ್ಯ. ಕಾರ್ಖಾನೆಯಿಂದ ದೂರವಾಗಿ, ಭೂಮಿಯೊಡನೆ ಸಾಮರಸ್ಯದಿಂದ ಬಾಳುತ್ತಾ ನಮ್ಮ ಗುರಿಗಳನ್ನು ಐಹಿಕವಲ್ಲದೆ ಆಧ್ಯಾತ್ಮಿಕಗೊಳಿಸಿ ಎಂದು ಶ್ರೀಲ ಪ್ರಭುಪಾದರು ನಮಗೆ ಉಪದೇಶಿಸುತ್ತಾರೆ.

“ಬೃಹತ್ ಕೈಗಾರಿಕೋದ್ಯಮಗಳು ದೈವರಹಿತ ನಾಗರಿಕತೆಯ ಫಲ. ಅವು ಮಾನವ ಜೀವನದ ಉದಾತ್ತ ಗುರಿಗಳನ್ನು ನಾಶಮಾಡಲು ಕಾರಣವಾಗಿವೆ.” ಎಂದು ಹೇಳುತ್ತಾರೆ ಶ್ರೀಲ ಪ್ರಭುಪಾದ.

“ಅಂತಹ ವಿಪತ್ಕಾರಕ ಉದ್ಯಮಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುತ್ತಾ ಹೋದಂತೆಲ್ಲಾ ಮಾನವ ಜೀವಿಯ ಪ್ರಧಾನ ಜೀವಸತ್ತ್ವವನ್ನೇ ನಾವು ಹಿಂಡಿ ಹಾಕುತ್ತೇವೆ. ಜನ ಸಾಮಾನ್ಯರಲ್ಲಿ ಕ್ಷೋಭೆ ಮತ್ತು ಅತೃಪ್ತಿಗಳು ಹೆಚ್ಚಾಗುತ್ತವೆ. ಆದರೆ ಕೆಲವರು ಮಾತ್ರ ಶೋಷಣೆಯಿಂದಾಗಿ ವೈಭವೋಪೇತವಾಗಿ ಜೀವಿಸುತ್ತಾರೆ.” (ಭಾಗವತ 1.8.40)

““ಕಾರ್ಮಿಕನು ಕೈಗಾರಿಕೋದ್ಯಮದಲ್ಲಿ ಮಗ್ನನಾದಾಗ ಅವನ ಉತ್ಪಾದಕಾ ಶಕ್ತಿಯು ದುರುಪಯೋಗವಾಗುತ್ತದೆ. ಯಂತ್ರಗಳು ಮತ್ತು ಯಂತ್ರೋಪಕರಣಗಳ ಉತ್ಪಾದನೆಯು ಪಟ್ಟಭದ್ರ ಹಿತಾಸಕ್ತ ವರ್ಗದ ಜನಗಳ ಕೃತಕ ಜೀವನ ವಿಧಾನದ ಶೈಲಿಯನ್ನು ವರ್ಧಿಸುತ್ತದೆ ಮತ್ತು ಸಹಸ್ರಾರು ಜನರನ್ನು ಹಸಿವು ಮತ್ತು ಕ್ಷೋಭೆಗಳಲ್ಲಿ ಇರಿಸುತ್ತದೆ. ಇದು ನಾಗರಿಕತೆಯ ಮಾನದಂಡವಾಗಬಾರದು.” (ಭಾಗವತ 1.9.6)

ಭಯಂಕರ ಕೈಗಾರಿಕೋದ್ಯಮಗಳು

”ಕಾರ್ಖಾನೆ ಎನ್ನುವುದು ನರಕಕ್ಕೆ ಇನ್ನೊಂದು ಹೆಸರು. ರಾತ್ರಿ ನರಕಸದೃಶವಾದ ಕೆಲಸಗಳಲ್ಲಿ ತೊಡಗಿರುವ ಜನರು ತಮ್ಮ ಬಳಲಿದ ಇಂದ್ರಿಯಗಳನ್ನು ತೃಪ್ತಿಪಡಿಸಲು ಮದ್ಯ, ಮಾನಿನಿಯರ ಮೊರೆ ಹೋಗುತ್ತಾರೆ. ಆದರೆ ಅವರಿಗೆ ಗಾಢವಾಗಿ ನಿದ್ದೆ ಕೂಡ ಮಾಡಲಾಗುವುದಿಲ್ಲ. ಏಕೆಂದರೆ ಅವರ ನಾನಾ ಬಗೆಯ ಊಹಾತ್ಮಕ ಯೋಜನೆಗಳು ಅವರ ನಿದ್ದೆಗೆ ನಿರಂತರವಾಗಿ ತಡೆಯೊಡ್ಡುತ್ತವೆ.” (ಭಾಗವತ 3.9.10)

“ಗಣಿಗಳು, ಕಾರ್ಖಾನೆಗಳು ಮತ್ತು ಕಮ್ಮಟಗಳ ಕಗ್ಗತ್ತಲ ಕೋಣೆಗಳು ಕಾರ್ಮಿಕ ವರ್ಗದಲ್ಲಿ ರಾಕ್ಷಸೀ ಗುಣಗಳನ್ನು ಬೆಳೆಸುತ್ತವೆ. ಈ ಮಧ್ಯೆ ಕಾರ್ಮಿಕ ವರ್ಗದ ದುರ್ಲಾಭ ಪಡೆದು ಪಟ್ಟಭದ್ರ ಹಿತಾಸಕ್ತಿಗಳು ವೃದ್ಧಿಸುತ್ತವೆ. ತತ್ಪರಿಣಾಮವಾಗಿ ಅನೇಕ ಬಗೆಗಳಲ್ಲಿ ಅವರ ನಡುವೆ ಸಂಘರ್ಷಗಳು ಉಂಟಾಗುತ್ತವೆ’ (ಭಾಗವತ 1.11.12)

‘ಜೀವನಾವಶ್ಯಕ ವಸ್ತುಗಳನ್ನು ಕಾರ್ಖಾನೆಗಳಲ್ಲೂ ಕಮ್ಮಟಗಳಲ್ಲೂ ಈ ಯಂತ್ರಯುಗವಾದ ಕಲಿಯುಗದಲ್ಲಿ, ಅಧಿಕ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ಇದೇ ತಮೋಗುಣದ ತುತ್ತತುದಿ. ಏಕೆ? ಏಕೆಂದರೆ ವಸ್ತುಶಃ ಈ ಉತ್ಪಾದಿತ ವಸ್ತುಗಳ ಆವಶ್ಯಕತೆಯೇ ಇರುವುದಿಲ್ಲ.” (ಭಾಗವತ 2.5.30)

”ಕೃತಕ ವೈಭವಗಳಾದ ಚಲನಚಿತ್ರ, ಕಾರು, ರೇಡಿಯೋ, ಮಾಂಸ, ಹೋಟೆಲುಗಳು ಇವೆಲ್ಲ ಏಕೆ ಬೇಕು? ವ್ಯಕ್ತಿ ವ್ಯಕ್ತಿಗಳು ಮತ್ತು ರಾಷ್ಟ್ರ ರಾಷ್ಟ್ರಗಳು ಕಾದಾಡುವಂತಹುದನ್ನು ಬಿಟ್ಟರೆ ನಾಗರಿಕತೆಯು ಬೇರೆ ಏನನ್ನಾದರೂ ಉತ್ಪಾದಿಸಿದೆಯೆ? ಸಾವಿರಾರು ಜನರನ್ನು ನರಕ ಸದೃಶವಾದ ಕಾರ್ಖಾನೆಗಳಿಗೆ ತಳ್ಳುವ ಮೂಲಕ ಮತ್ತು ಒಬ್ಬ ವ್ಯಕ್ತಿಯ ವಿಕ್ಷಿಪ್ತತೆಯ ಕಾರಣದಿಂದ ಯುದ್ಧ ಭೂಮಿಗೆ ಅಟ್ಟುವ ಮೂಲಕ ನಾಗರಿಕತೆಯು ಸಮಾನತೆ ಮತ್ತು ಭ್ರಾತೃತ್ವ ಸಂವರ್ಧಿಸಿದೆಯೆ?” (ಭಾಗವತ 1.10.4)

“ನಿಜವಾದ ಸಮಸ್ಯೆಯೆಂದರೆ ಜನನ, ಮರಣ ಮತ್ತು ಮುಪ್ಪುಗಳ ಬಂಧನದಿಂದ ಪಾರಾಗುವುದು ಹೇಗೆ ಎನ್ನುವುದು. ಈ ಸ್ವಾತಂತ್ರ್ಯವನ್ನು ಗಳಿಸುವುದು ಮತ್ತು ಅನಗತ್ಯವಾದ ಸೌಲಭ್ಯಗಳನ್ನು ಕಂಡು ಹಿಡಿಯದಿರುವುದು – ಇವೇ ವೈದಿಕ ನಾಗರಿಕತೆಯ ಮೂಲಭೂತ ಸೂತ್ರಗಳು… ಆಧುನಿಕ ಐಹಿಕ ನಾಗರಿಕತೆಯು ಆದರ್ಶಮಯ ನಾಗರಿಕತೆಗೆ ತದ್ವಿರುದ್ಧವಾಗಿದೆ.

ಆಧುನಿಕ ಸಮಾಜದ ನಾಯಕರೆನ್ನುವವರು ಜೀವನವನ್ನು ಜಂಜಡಕ್ಕೆ ಸಿಕ್ಕಿಸುವಂತಹ ಏನಾದರೊಂದನ್ನು ಪ್ರತಿದಿನ ಕಂಡು ಹಿಡಿಯುತ್ತಲೇ ಇರುತ್ತಾರೆ. ಅದು ಜನರನ್ನು ಹುಟ್ಟು ಸಾವುಗಳ ಚಕ್ರದಲ್ಲಿ ಹೆಚ್ಚು ಹೆಚ್ಚು ತೊಡಕಿಗೆ ಸಿಕ್ಕಿ ಹಾಕಿಸುತ್ತದೆ.’ (ಭಾಗವತ 7.14.5)

“ಇಂದು ಜನರು ಸಾಗರ ಮಧ್ಯದಲ್ಲಿ ಪೆಟ್ರೋಲಿಯಂ ಅನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ಬಹಳ ಕಾರ್ಯಮಗ್ನರಾಗಿದ್ದಾರೆ. ಭವಿಷ್ಯದ ಪೆಟ್ರೋಲಿಯಂ ಸರಬರಾಜಿಗೆ ವ್ಯವಸ್ಥೆ ಮಾಡಲು ಅವರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಅವರು ಜನನ, ವೃದ್ಧಾಪ್ಯ, ವ್ಯಾಧಿ ಮತ್ತು ಮೃತ್ಯು – ಈ ಪರಿಸ್ಥಿತಿಗಳನ್ನು ಸುಧಾರಿಸಲು ಯಾವುದೇ ಪ್ರಯತ್ನಗಳನ್ನು ಮಾಡುವುದಿಲ್ಲ.” (ಭಾಗವತ 4.28.12)

“ಐಹಿಕವಾದಿಗಳು… ತಾವು ಪ್ರಗತಿ ಸಾಧಿಸುತ್ತಿದ್ದೇವೆಂದು ಭಾವಿಸುತ್ತಾರೆ. ಆದರೆ ಭಗವದ್ಗೀತೆಯ ಪ್ರಕಾರ ಅವರು ಮತಿಹೀನರು ಮತ್ತು ಎಲ್ಲ ತಿಳಿವಳಿಕೆಯಿಂದ ವಿರಹಿತರಾದವರು. ಅವರು ಈ ಐಹಿಕ ಪ್ರಪಂಚವನ್ನು ಗರಿಷ್ಠ ಮಟ್ಟದಲ್ಲಿ ಉಪಭೋಗಿಸಲು ಬಯಸುತ್ತಾರೆ.

ಆದ್ದರಿಂದ ಇಂದ್ರಿಯ ತುಷ್ಟಿಯನ್ನು ನೀಡುವಂತಹ ಯಾವುದಾದರೊಂದನ್ನು ಸಂಶೋಧಿಸುವುದರಲ್ಲಿಯೇ ಸದಾ ಮಗ್ನರಾಗಿರುತ್ತಾರೆ. ಅಂತಹ ಐಹಿಕ ಸಂಶೋಧನೆಗಳನ್ನು ಮಾನವ ನಾಗರಿಕತೆಯಲ್ಲಿ ಸಾಧಿಸಿದ ಪ್ರಗತಿ ಎಂದು ಪರಿಗಣಿಸಲಾಗುತ್ತಿದೆ. ಆದರೆ ಇದರ ಪರಿಣಾಮವೇನೆಂದರೆ ಜನರು ಹೆಚ್ಚು ಹೆಚ್ಚು ಹಿಂಸಾಪ್ರವೃತ್ತಿಯವರೂ, ಹೆಚ್ಚು ಹೆಚ್ಚು ಕ್ರೂರಿಗಳೂ ಆಗುತ್ತಿದ್ದಾರೆ.’ (ಗೀತಾ 16.9)

ಪ್ರಕೃತಿಯ ವರಗಳು

“ವೇದಕಾಲದ ಅರ್ಥವ್ಯವಸ್ಥೆಯ ಪ್ರಕಾರ, ಅಪಾರ ಧಾನ್ಯ ಸಂಗ್ರಹ ಮತ್ತು ಗೋವುಗಳ ಸಂಖ್ಯೆಯಿಂದ ಒಬ್ಬ ವ್ಯಕ್ತಿಯನ್ನು ಶ್ರೀಮಂತ ಎಂದು ಪರಿಗಣಿಸಲಾಗುತ್ತಿತ್ತು. ಹಸುಗಳು ಮತ್ತು ಧಾನ್ಯ ಇವೆರಡರಿಂದಲೇ ಮಾನವರು ತಮ್ಮ ಆಹಾರದ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದರು.

ಇವು ಎರಡನ್ನು ಬಿಟ್ಟು ಉಳಿದವು ಎಲ್ಲ ಕೃತಕ ಆವಶ್ಯಕತೆಗಳು. ಮನುಷ್ಯನಿಂದ ಸೃಷ್ಟಿಯಾದ ಇವು ಮಾನವನ ಹಂತದಲ್ಲಿ ಅಮೂಲ್ಯವಾದ ಜೀವನವನ್ನು ಕೊಲ್ಲುತ್ತವೆ ಮತ್ತು ಅನಗತ್ಯವಾದ ವಿಷಯಗಳಲ್ಲಿ ಅವನ ಕಾಲವನ್ನು ವ್ಯರ್ಥಮಾಡುತ್ತವೆ.” (ಭಾಗವತ 3.2.29)

“ನಮ್ಮಲ್ಲಿ ಸಾಕಷ್ಟು ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಗಿಡಮೂಲಿಕೆಗಳು ಇರುವಾಗ, ಕಸಾಯಿಖಾನೆಗಳನ್ನು ನಡೆಸಿ ಬಡಪಾಯಿ ಪ್ರಾಣಿಗಳನ್ನು ಕೊಲ್ಲುವ ಆವಶ್ಯಕತೆ ಏನಿದೆ? ಒಬ್ಬ ಮನುಷ್ಯನಿಗೆ ತಿನ್ನಲು ಸಾಕಷ್ಟು ಧಾನ್ಯಗಳು ಮತ್ತು ತರಕಾರಿಗಳು ಇದ್ದರೆ ಪ್ರಾಣಿಯೊಂದನ್ನು ಅವನು ಕೊಲ್ಲಬೇಕಾಗಿಲ್ಲ.

ನದಿಯ ಹರಿವು ಮೆಕ್ಕಲು ಮಣ್ಣನ್ನು ತಂದು ಹೊಲಗಳನ್ನು ಫಲವತ್ತನ್ನಾಗಿ ಮಾಡುತ್ತದೆ. ನಮಗೆ ಬೇಕಾದುದಕ್ಕಿಂತ ಎಲ್ಲ ಹೆಚ್ಚಾಗಿದೆ. ಖನಿಜಗಳು ಬೆಟ್ಟಗಳಲ್ಲಿ ಉತ್ಪತ್ತಿಯಾಗುತ್ತವೆ. ರತ್ನಗಳು ಸಾಗರದಲ್ಲಿ ಸಿಗುತ್ತವೆ. ಮಾನವ ನಾಗರಿಕತೆಗೆ ಸಾಕಷ್ಟು ಧಾನ್ಯಗಳು, ಖನಿಜಗಳು, ರತ್ನಗಳು, ನೀರು, ಹಾಲು, ಇತ್ಯಾದಿ ಲಭಿಸಿರುವಾಗ, ಕೆಲವು ದುರದೃಷ್ಟಶಾಲಿ ಕಾರ್ಮಿಕರ ದೇಹಶ್ರಮವನ್ನು ಅವಲಂಬಿಸಿರುವ ಭಯಂಕರ ಕೈಗಾರಿಕೋದ್ಯಮಕ್ಕಾಗಿ ಏಕೆ ಹಪಾಹಪಿಸಬೇಕು?’ (ಭಾಗವತ 1.8.40)

”ಮಾನವನ ನಾಗರಿಕತೆಯ ಪ್ರಗತಿಯು ಕೈಗಾರಿಕೋದ್ಯಮದ ಮೇಲೆ ಅವಲಂಬಿಸಿಲ್ಲ. ಬದಲಿಗೆ ನೈಸರ್ಗಿಕ ಸಂಪತ್ತು ಮತ್ತು ನೈಸರ್ಗಿಕ ಆಹಾರವನ್ನು ಪಡೆಯುವುದರಲ್ಲಿದೆ. ಇದನ್ನೆಲ್ಲ ಸರಬರಾಜು ಮಾಡಿದವನು ದೇವೋತ್ತಮ ಪರಮ ಪುರುಷ ಅದರ ಉದ್ದೇಶ ಆತ್ಮ ಸಾಕ್ಷಾತ್ಕಾರ ಪಡೆಯಲು ಮತ್ತು ಮಾನವ ರೂಪದ ದೇಹವನ್ನು ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ಸಾಕಷ್ಟು ಸಮಯ ಉಳಿಯಲೆಂಬುದು.” (ಭಾಗವತ 4.9.62)

ಶ್ರೀಲ ಪ್ರಭುಪಾದರು ಪ್ರಭು ಕೃಷ್ಣನ ಪುರಾತನ ನಗರವಾದ ದ್ವಾರಕೆಯ ಉದಾಹರಣೆಯನ್ನು ಕೊಡುತ್ತಾರೆ. ದ್ವಾರಕೆಯ ಸುತ್ತ ಹೂವಿನ ತೋಟಗಳು, ಹಣ್ಣಿನ ಮರಗಳ ತೋಪುಗಳು ಮತ್ತು ಕಮಲ ಪುಷ್ಪಗಳು ಅರಳಿರುವ ಜಲಾಶಯಗಳಿದ್ದವು. ಗಿರಣಿಗಳು ಮತ್ತು ಕಾರ್ಖಾನೆಗಳು ಮತ್ತು ಅವುಗಳಿಗೆ ಬೆಂಬಲವಾಗಿ ಕಸಾಯಿಖಾನೆಗಳು ಇವುಗಳ ಪ್ರಸ್ತಾವವಿರಲಿಲ್ಲ. ಇವುಗಳೆಲ್ಲ ಆಧುನಿಕ ನಗರಗಳ ಪರಿವಾರಗಳು…

‘ಇಡೀ ಧಾಮವು ತೋಟಗಳು ಮತ್ತು ಉಪವನಗಳಿಂದ ಸುತ್ತುವರಿದಿತ್ತು. ಅವುಗಳಲ್ಲಿ ಕಮಲ ಪುಷ್ಪಗಳು ಬೆಳೆದಿದ್ದ ಜಲಾಶಯಗಳಿದ್ದವು… ಎಲ್ಲ ಜನರು ಪ್ರಕೃತಿಯ ವರಗಳಾದ ಹಣ್ಣುಗಳು ಮತ್ತು ಹೂವುಗಳನ್ನು ಅವಲಂಬಿಸಿದ್ದರು. ಅಲ್ಲಿ ಕೈಗಾರಿಕೋದ್ಯಮಗಳಿಂದ ಹುಟ್ಟಿಕೊಂಡಂತಹ ಕೊಳಕು ಗುಡಿಸಲು ಮತ್ತು ಕೊಳಚೆ ಪ್ರದೇಶಗಳ ವಸತಿ ಪ್ರದೇಶಗಳು ಇರಲಿಲ್ಲ.” (ಭಾಗವತ 1.11.12)

ರಾಕ್ಷಸೀಯ ನಾಗರಿಕತೆ

“ಧಾನ್ಯಗಳು ಮತ್ತು ತರಕಾರಿಗಳು, ಹಣ್ಣುಗಳು, ನದಿಗಳು, ರತ್ನಗಳು ಮತ್ತು ಖನಿಜಗಳಿಂದ ಕೂಡಿದ ಬೆಟ್ಟಗಳು ಮತ್ತು ಮುತ್ತುಗಳಿಂದ ತುಂಬಿದ ಸಮುದ್ರಗಳು ಇವುಗಳೆಲ್ಲ ಪರಮ ಪುರುಷನ ಆದೇಶದ ಮೇರೆಗೆ ಸರಬರಾಜಾಗಿವೆ. ಅವನು ಇಚ್ಚಿಸಿದಂತೆ ಐಹಿಕ ಪ್ರಕೃತಿಯು ಅವನ್ನು ಸಮೃದ್ಧವಾಗಿ ಉತ್ಪಾದಿಸುತ್ತದೆ ಅಥವಾ ಕೆಲವು ಸಂದರ್ಭಗಳಲ್ಲಿ ನಿಯಂತ್ರಿಸುತ್ತದೆ.

ಪ್ರಾಕೃತಿಕ ನಿಯಮವೇನೆಂದರೆ ಪ್ರಕೃತಿಯು ನೀಡಿದ ಈ ದೇವತಾ ವರಗಳನ್ನು ಮನುಷ್ಯರು ಉಪಯೋಗಿಸಿಕೊಂಡು ಪ್ರವರ್ಧಮಾನಕ್ಕೆ ಬರಬೇಕೇ ವಿನಾ ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವವನ್ನು ಸಾಧಿಸಬೇಕೆಂಬ ಶೋಷಣಾತ್ಮಕ ಉದ್ದೇಶಗಳಿಗೆ ತುತ್ತಾಗಬಾರದು.” (ಭಾಗವತ 1.8.40)

”ಈ ಎಲ್ಲ ಪ್ರಾಕೃತಿಕ ವರಗಳೂ ಪ್ರಭುವಿನ ಅನುಗ್ರಹವನ್ನು ಅವಲಂಬಿಸಿವೆ. ಆದ್ದರಿಂದ ನಾವು ಮಾಡಬೇಕಾದದ್ದೇನೆಂದರೆ ಪ್ರಭುವಿನ ನಿಯಮಗಳಿಗೆ ವಿಧೇಯವಾಗಿರುವುದು ಮತ್ತು ಭಕ್ತಿ ಸೇವೆಯಿಂದ ಮಾನವ ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿ ಸುವುದು”. (ಭಾಗವತ 1.8.40)

‘ಪ್ರತಿಯೊಬ್ಬನು ಐಹಿಕ ಪ್ರಕೃತಿಯ ಪ್ರಭಾವದ ಅಡಿಯಲ್ಲಿ ಪ್ರವರ್ತಿಸುತ್ತಾನೆ. ಕೇವಲ ಮೂರ್ಖರು ಮಾತ್ರ ದೇವರ ಸೃಷ್ಟಿಯನ್ನು ಸುಧಾರಿಸಬಲ್ಲೆವೆಂದು ಯೋಚಿಸುತ್ತಾರೆ.” (ಭಾಗವತ 7.14.7)

”ಮಾನವನ ಏಳಿಗೆಯು ರಾಕ್ಷಸೀಯ ನಾಗರಿಕತೆಯನ್ನು ಅವಲ೦ಬಿಸಿಲ್ಲ. ಅದಕ್ಕೆ ಸಂಸ್ಕೃತಿಯಿಲ್ಲ. ಜ್ಞಾನವಿಲ್ಲ. ಈ ರಾಕ್ಷಸೀಯ ನಾಗರಿಕತೆಯಲ್ಲಿ ಇರುವುದೆಲ್ಲ ಬೃಹದಾಕಾರದ ಗಗನ ಚುಂಬಿಗಳು, ದೊಡ್ಡ ದೊಡ್ಡ ವಾಹನಗಳು ಸದಾ ಹೆದ್ದಾರಿಗಳಲ್ಲಿ ನಾಗಾಲೋಟದಿಂದ ಧಾವಿಸುವುದು ಅಷ್ಟೆ. ಪ್ರಕೃತಿಯ ಉತ್ಪನ್ನಗಳು ಸಾಕಾಗುವಷ್ಟಿವೆ.” (ಭಾಗವತ 5.16.24)

 “ಕೃಷಿ ಉದ್ಯಮದಿಂದ ಹೇರಳವಾದ ಆಹಾರಧಾನ್ಯಗಳನ್ನು ಉತ್ಪಾದಿಸಬಹುದು. ಗೋಪಾಲನೆಯಿಂದ ಪುಷ್ಕಳ ಹಾಲು, ಮೊಸರು, ತುಪ್ಪ ಮೊದಲಾದವನ್ನು ಸಂಗ್ರಹಿಸಬಹುದು. ಕಾಡುಗಳನ್ನು ಸಂರಕ್ಷಿಸಿದರೆ ಯಥೇಷ್ಟವಾದ ಜೇನುತುಪ್ಪವನ್ನು ಪಡೆಯಬಹುದು.”

“ದುರದೃಷ್ಟವಶಾತ್, ಆಧುನಿಕ ನಾಗರಿಕತೆಯಲ್ಲಿ ಮೊಸರು, ಹಾಲು ಮತ್ತು ತುಪ್ಪದ ಆಕರವಾದ ಹಸುಗಳನ್ನು ಕೊಲ್ಲುವುದರಲ್ಲಿ ಜನರು ಮಗ್ನರಾಗಿದ್ದಾರೆ.

ಜೇನುತುಪ್ಪವನ್ನು ಒದಗಿಸುವ ಮರಗಳನ್ನೆಲ್ಲ ಅವರು ಕತ್ತರಿಸುತ್ತಿದ್ದಾರೆ. ಕೃಷಿಯಲ್ಲಿ ತೊಡಗುವುದರ ಬದಲು ನಟ್ಟು ಬೋಲ್ಟು, ವಾಹನಗಳು ಮತ್ತು ದ್ರಾಕ್ಷಾ ಮದ್ಯಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಪ್ರಾರ೦ಭಿಸುತ್ತಿದ್ದಾರೆ. ಇಂತಹ ಜನರು ಸಂತೋಷವಾಗಿರುವುದು ಹೇಗೆ ಸಾಧ್ಯ? ಅವರು ಐಹಿಕವಾದದ ಎಲ್ಲ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಅವರ ದೇಹಗಳು ಸುಕ್ಕುಗಟ್ಟುತ್ತವೆ. ಕ್ರಮೇಣ ಕೃಶಗೊಂಡು ಅವರು ಕುಬ್ಜರಂತಾಗುತ್ತಾರೆ. ಎಲ್ಲ ಬಗೆಯ ಅಸಹ್ಯಕರ ಪದಾರ್ಥಗಳನ್ನು ತಿಂದು ಕೊಳಕು ಬೆವರು ಹರಿಸುವುದರಿಂದ ಅವರ ದೇಹಗಳು ದುರ್ವಾಸನೆಯಿಂದ ನಾರುತ್ತವೆ. ಇದು ಮಾನವ ನಾಗರಿಕತೆ ಅಲ್ಲ.” (ಭಾಗವತ 5.16.25)

ಜೀವನಕ್ಕೊಂದು ಉನ್ನತ ಗುರಿ

“ನಾಗರಿಕತೆಯ ಪ್ರಗತಿಯನ್ನು ಅಳೆಯುವುದು, ಮನುಷ್ಯನ ಸೂಕ್ಷ್ಮ ಪ್ರವೃತ್ತಿಗಳನ್ನು ನಾಶಮಾಡುವ ಗಿರಣಿಗಳು ಮತ್ತು ಕಾರ್ಖಾನೆಗಳ ಪ್ರಗತಿಯಿಂದಲ್ಲ. ಮಾನವರಲ್ಲಿ ಸಮರ್ಥವಾದ ಆಧ್ಯಾತ್ಮಿಕ ಪ್ರವೃತ್ತಿಯನ್ನು ಬೆಳೆಸಿ, ಭಗವದ್ಧಾಮಕ್ಕೆ ಮರಳಿ ಹೋಗಲು ಅವರಿಗೆ ಒಂದು ಅವಕಾಶವನ್ನು ಕೊಡುವುದರಿಂದ.

ಆಧ್ಯಾತ್ಮಿಕ ಅರಿವಿನ ಸೂಕ್ಷ್ಮ ಪ್ರಜ್ಞೆಗಳನ್ನು ಬೆಳೆಸುವುದರಲ್ಲಿ ಮಾನವನ ಶಕ್ತಿಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಬಾಳಿನ ಪರಿಹಾರವು ಇದರಲ್ಲಿ ಅಡಗಿದೆ.” (ಭಾಗವತ 1.11.12)

ಶ್ರೀಲ ಪ್ರಭುಪಾದರು ಹೇಳುತ್ತಾರೆ: “ನಮಗೆ ಆಹಾರವನ್ನು ಒದಗಿಸಲು ಪಕೃತಿಯು ಆಗಲೇ ಒಂದು ಏರ್ಪಾಡು ಮಾಡಿದೆ. ಪ್ರಭುವು ಆನೆಗೂ ಇರುವೆಗೂ ಆಹಾರ ಒದಗಿಸಿದ್ದಾನೆ…

“ಆದ್ದರಿಂದ ಬುದ್ಧಿವಂತನಾದವನು ಐಹಿಕ ಸೌಕರ್ಯಗಳಿಗಾಗಿ ಬಹಳ ಕಷ್ಟಪಟ್ಟು ಕೆಲಸಮಾಡಬಾರದು. ಬದಲಿಗೆ ಕೃಷ್ಣ ಪ್ರಜ್ಞೆಯಲ್ಲಿ ಪ್ರಗತಿಯನ್ನು ಸಾಧಿಸಲು ತನ್ನ ಶಕ್ತಿಯನ್ನು ಉಳಿಸಿಕೊಳ್ಳಬೇಕು.” (ಭಾಗವತ 7.14.14)

‘ಜನರು ಬೆಕ್ಕುಗಳು, ನಾಯಿಗಳು ಮತ್ತು ಹಂದಿಗಳ ಹಾಗೆ ಕಷ್ಟಪಟ್ಟು ಕೆಲಸ ಮಾಡುವಂತೆ ರಾಕ್ಷಸರು ಯೋಜನೆಯೊಂದನ್ನು ರೂಪಿಸಲು ಬಹಳ ಆಸಕ್ತರಾಗಿದ್ದಾರೆ. ಆದರೆ ಕೃಷ್ಣನ ಭಕ್ತರು ಕೃಷ್ಣ ಪ್ರಜ್ಞೆಯನ್ನು ಬೋಧಿಸಲು ಬಯಸುತ್ತಾರೆ.’ (ಭಾಗವತ 9.24.59)

“ಮಾನವ ಸಮಾಜದ ಸಂಕಷ್ಟಗಳಿಗೆ ಜೀವನದ ಕಲುಷಿತ ಗುರಿಯೇ ಕಾರಣ. ಆದೆಂದರೆ ಐಹಿಕ ಸಂಪನ್ಮೂಲಗಳ ಮೇಲೆ ಪ್ರಭುತ್ವ ವನ್ನು ಸಾಧಿಸುವುದು. ಇ೦ದ್ರಿಯ ಸಂತುಷ್ಟಿಗಾಗಿ ಅಭಿವೃದ್ಧಿ ಹೊಂದಿಲ್ಲದ ಐಹಿಕ ಸಂಪನ್ಮೂಲಗಳನ್ನು ಶೋಷಣೆ ಮಾಡುವುದರಲ್ಲಿ ಮಾನವ ಸಮಾಜವು ಹೆಚ್ಚು ಹೆಚ್ಚು ಮಗ್ನವಾದಷ್ಟೂ ಪ್ರಭುವಿನ ಮಾಯಾ ಐಹಿಕ ಶಕ್ತಿಯಲ್ಲಿ ಹೆಚ್ಚು ಹೆಚ್ಚು ಸಿಲುಕಿಕೊಳ್ಳುತ್ತದೆ. ಹೀಗೆ ಜಗತ್ತಿನ ಹತಾಶೆಯು ಕುಗ್ಗುವ ಬದಲು ಹಿಗ್ಗುತ್ತದೆ.” (ಭಾಗವತ 2.2.37)

‘ದೇವರೊಡನೆ ಕಳೆದುಕೊಂಡ ನಮ್ಮ ಸಂಬಂಧವನ್ನು ಮರು ಸ್ಥಾಪಿಸುವ ಗುರಿಯತ್ತ ಮಾನವನ ನಾಗರಿಕತೆಯು ಮುಂದುವರಿಯಬೇಕು. ಮಾನವ ರೂಪದ ಜನ್ಮದ ವಿನಾ ಬೇರೆ ಯಾವ ಜನ್ಮದಲ್ಲೂ ಇದು ಸಾಧ್ಯವಿಲ್ಲ. ವ್ಯಕ್ತಿಯು ಐಹಿಕ ವಿದ್ಯಮಾನದ ಶೂನ್ಯತೆಯನ್ನು ಅರಿತುಕೊಳ್ಳಬೇಕು.

ಅದೊಂದು ಮಾಯಾಜಾಲ ಎಂದು ಪರಿಗಣಿಸಬೇಕು. ಜೀವನದ ಸಂಕಷ್ಟಗಳಿಗೆ ಒಂದು ಪರಿಹಾರವನ್ನು  ಕಂಡುಕೊಳ್ಳಲು ಪ್ರಯತ್ನಿಸಬೇಕು. ಇಂದ್ರಿಯ ಸಂತುಷ್ಟಿಯತ್ತ ಉದ್ದಿಷ್ಟವಾದ ಪಶು ಸದೃಶ ನಾಗರಿಕತೆಯ ಮೆರಗಿನ ಮಾದರಿಯ ” ಸಂತುಷ್ಟಿಯು ಒಂದು ಮಾಯೆ. ಅಂತಹ ನಾಗರಿಕತೆಯು ಅನ್ವರ್ಥವಲ್ಲ.” (ಭಾಗವತ 2.2.4)

“ನಾಗರಿಕತೆಯ ಐಹಿಕ ಪ್ರಗತಿಯು… ಕೊನೆಗೆ ದಾರ್ಶನಿಕನು ದೃಢ ಮನಸ್ಸಿನವನಾಗಿರಬೇಕೆಂದು ಯುದ್ಧ ಮತ್ತು ಬರಗಾಲದಲ್ಲಿ ಮುಕ್ತಾಯವಾಗುತ್ತದೆ. ವಿಶೇಷವಾಗಿ ಎಚ್ಚರಿಸಲಾಗಿದೆ. ಆಗ ಸರಳ ಜೀವನ ಮತ್ತು ಉನ್ನತ ಚಿಂತನದಲ್ಲಿ ಕಷ್ಟವಿದ್ದರೂ ಅವನು ತನ್ನ ದೃಢ ನಿಶ್ಚಯದಿಂದ ಒಂದು ಅಂಗುಲವೂ ಆಚೀಚೆ ಸರಿಯುವುದಿಲ್ಲ.” (ಭಾಗವತ 2.2.3)

‘ಸಮಸ್ತ ಮಾನವ ಸಮಾಜವು ಪ್ರಭು ವಿಷ್ಣುವಿನ ಆರಾಧನೆಗೆ ಉದ್ದಿಷ್ಟವಾಗಿದೆ. ಆದರೆ ಪ್ರಸ್ತುತ ಸಮಯದಲ್ಲಿ ಮಾನವ ಸಮಾಜಕ್ಕೆ ಇದೇ ಜೀವನದ ಅಂತಿಮ ಗುರಿ ಅಥವಾ ಜೀವನದ ಪರಿಪೂರ್ಣತೆ ಎಂದು ತಿಳಿದಿಲ್ಲ. ಆದ್ದರಿಂದ ಪ್ರಭು ವಿಷ್ಣುವನ್ನು ಆರಾಧಿಸುವ ಬದಲು ಐಹಿಕತೆಯನ್ನು ಆರಾಧಿಸಲು ಜನರಿಗೆ ಶಿಕ್ಷಣ ಕೊಡಲಾಗುತ್ತಿದೆ.

“ಆಧುನಿಕ ಸಮಾಜದ ನಿರ್ದೇಶನದ ಪ್ರಕಾರ, ಐಹಿಕ ವಸ್ತುಗಳನ್ನು ಕುಶಲತೆಯಿಂದ ಬಳಸಿಕೊಳ್ಳುವ ಮೂಲಕ ಗಗನ ಚುಂಬಿಗಳು, ಹೆದ್ದಾರಿಗಳು, ವಾಹನಗಳು ಮುಂತಾದವುಗಳನ್ನು ನಿರ್ಮಿಸಿ ನಾಗರಿಕತೆಯಲ್ಲಿ ಪ್ರಗತಿಯನ್ನು ಸಾಧಿಸಬಹುದು ಎಂದು ಮಾನವರು ಯೋಚಿಸುತ್ತಾರೆ. ಅಂತಹ ನಾಗರಿಕತೆಯನ್ನು ಖಂಡಿತವಾಗಿಯೂ ಐಹಿಕವಾದಿ ಎಂದು ಕರೆಯಬೇಕು. ಏಕೆಂದರೆ ಅಂತಹ ಜನರಿಗೆ ಜೀವನದ ಗುರಿ ಏನೆಂದು ಗೊತ್ತಿಲ್ಲ.”

“ಜೀವನದ ಗುರಿಯು ವಿಷ್ಣುವನ್ನು ತಲಪುವುದು. ಆದರೆ ವಿಷ್ಣುವನ್ನು ತಲಪುವ ಬದಲು ಐಹಿಕ ಶಕ್ತಿಯ ಬಾಹ್ಯ ಪ್ರಕಟರೂಪದಿಂದ ದಿಗ್ಭ್ರಮೆಗೊಂಡಿದ್ದಾರೆ. ಆದ್ದರಿಂದ ಐಹಿಕ ಮುನ್ನಡೆಯ ಪ್ರಗತಿಯು ಕುರುಡು. ಅಂತಹ ಐಹಿಕ ಮುನ್ನಡೆಯ ನಾಯಕರೂ ಕುರುಡು. ಅವರು ತಮ್ಮ ಅನುಯಾಯಿಗಳನ್ನು ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. (ಭಾಗವತ 5.1.14)

“ಕೃತಕ ಅಗತ್ಯಗಳಿಂದ ಜೀವನವು ಎಂದೂ ಸುಖಕರವಾಗುವುದಿಲ್ಲ. ಸರಳ ಜೀವನ ಮತ್ತು ಉನ್ನತ ಚಿಂತನೆಗಳಿಂದ ಆಗುತ್ತದೆ.’ (ಭಾಗವತ 2.2.37)

ಕುರುಡ ಮತ್ತು ಹೆಳವ ಒಟ್ಟಿಗೆ

“ಪ್ರಸ್ತುತ ಸನ್ನಿವೇಶದಲ್ಲಿ ಭಾರತವನ್ನು ಹೆಳವನಿಗೂ, ಪಾಶ್ಚಾತ್ಯ ದೇಶಗಳನ್ನು ಕುರುಡನಿಗೂ ಹೋಲಿಸಬಹುದು. ಕಳೆದ ಎರಡು ಸಾವಿರ ವರ್ಷಗಳಿಂದ ಭಾರತವು ವಿದೇಶೀಯರ ಆಳ್ವಿಕೆಗೆ ತುತ್ತಾಗಿದೆ. ಅದರಿಂದ ಅದರ ಪ್ರಗತಿಯ ಕಾಲುಗಳು ಮುರಿದು ಹೋಗಿವೆ. ಪಾಶ್ಚಾತ್ಯ ದೇಶಗಳಲ್ಲಿ ಐಹಿಕ ಸಂಪತ್ತಿನ ಕಣ್ಣು ಕುಕ್ಕುವ ಬೆಳಕಿನಲ್ಲಿ ಜನರ ಕಣ್ಣುಗಳು ಕುರುಡಾಗಿವೆ.”

ಶ್ರೀಲ ಪ್ರಭುಪಾದರು ಹೇಳುತ್ತಾರೆ. ‘ಪಾಶ್ಚಾತ್ಯ ದೇಶಗಳ ಕುರುಡ ಮತ್ತು ಭಾರತದ ಹೆಳವ ಒಟ್ಟುಗೂಡಬೇಕು. ಆಗ ಪಾಶ್ಚಾತ್ಯನ ಸಹಾಯದಿಂದ ದೇಶಗಳ ಕುರುಡ ಮತ್ತು ಭಾರತದ ಹೆಳವ ಮುಂದೆ ಸಾಗಬಲ್ಲ. ಪಾಶ್ಚಾತ್ಯ ಕುರುಡನು, ಹೆಳವನ ಸಹಾಯದಿಂದ ಕಾಣಬಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಪಾಶ್ಚಾತ್ಯ ದೇಶಗಳ ಐಹಿಕ ಪ್ರಗತಿ ಮತ್ತು ಭಾರತದ ಆಧ್ಯಾತ್ಮಿಕ ಸಂಪತ್ತು, ಮಾನವ ಸಮಾಜದ ಏಳಿಗೆಗಾಗಿ ಒಂದಾಗಬೇಕು.” (ಭಾಗವತ 4.25.15)

“ದೇವೋತ್ತಮ ಪರಮ ಪುರುಷನಾದ ಕೃಷ್ಣನ ಉದ್ದೇಶವನ್ನು ಅರಿತುಕೊಂಡ ಮನುಷ್ಯನು ಕೃಷ್ಣ ಪ್ರಜ್ಞಾ ಆಂದೋಲನದ ಮಹತ್ವವನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಮತ್ತು ಗಂಭೀರವಾಗಿ ಅದರಲ್ಲಿ ಪಾಲ್ಗೊಳ್ಳಬೇಕು. ವ್ಯಕ್ತಿಯು ಇಂದ್ರಿಯ ಸಂತುಷ್ಟಿಗಾಗಿ ಉಗ್ರಕರ್ಮ ಅಥವಾ ಅನಾವಶ್ಯಕ ಕಾರ್ಯದಲ್ಲಿ ಪ್ರವೃತ್ತನಾಗಬಾರದು.” (ಭಾಗವತ 9.24.59)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi