– ಕೆ.ಎಸ್. ವಸುಂಧರ, ಈಸ್ಟ್ವೆಸ್ಟ್ ಸ್ಕೂಲ್, ಸುಬ್ರಹ್ಮಣ್ಯನಗರ, ಬೆಂಗಳೂರು
ಕೃಷ್ಣ ಅಂದ ಕೂಡಲೆ ಎಲ್ಲರಿಗೂ ಮೊದಲು ನೆನಪಾಗೋದು ಉಡುಪಿ, ಉಡುಪಿ ಕೃಷ್ಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ. ಇದು ನನ್ನ ಮೆಚ್ಚಿನ ಕೃಷ್ಣ ಕ್ಷೇತ್ರವೂ ಹೌದು.

ಉಡುಪಿ ಕೃಷ್ಣ ಬರೀ ದೇವಾಲಯದಲ್ಲಿ ಮಾತ್ರವಲ್ಲ, ಅದರ ಪರಿಧಿಯನ್ನು ಮೀರಿ ನನಗೆ ಇಷ್ಟವಾಗುತ್ತಾನೆ. ಉಡುಪಿ ಕ್ಷೇತ್ರದಲ್ಲಿ ಹರಿದಾಸರು ಹಾಡಿಕೊಂಡು ನಲಿದಿದ್ದಾರೆ.
ಉಡುಪಿ ಕೃಷ್ಣನನ್ನು ಕಂಡ ಸ್ಫೂರ್ತಿಯಿಂದಲೇ ಸಾವಿರಾರು ದಾಸರಪದಗಳು ಹರಿದು ಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಪುರ೦ದರದಾಸರು, ವಿಜಯದಾಸರು, ಕನಕದಾಸರು, ಭೀಮವ್ವ ಮೊದಲಾದ ಹರಿದಾಸರು ಇಲ್ಲಿನ ಶ್ರೀ ಕೃಷ್ಣ ವಿಗ್ರಹದೆದುರು ನಿಂತು, ಹಾಡಿ ಉಡುಪಿಯ ನೆಲವನ್ನು ಭಕ್ತಿಯಿಂದ ತೋಯಿಸಿದ್ದಾರೆ.
ಉಡುಪಿ ಕೃಷ್ಣ ಸಾಮರಸ್ಯದ ಪ್ರತೀಕವೂ ಹೌದು. ಒಳಗೆ ಪ್ರವೇಶ ನಿರಾಕರಿಸಲ್ಪಟ್ಟ ಭಕ್ತ ಕನಕದಾಸನ ಮೊರೆಗೆ ಓಗೊಟ್ಟುತಾನೇ ಮುಖ ತಿರುವಿ ನಿಂತ ಕೃಷ್ಣ ಕಿಂಡಿಯ ಮೂಲಕ ದರ್ಶನ ಕೊಟ್ಟ ಕಥೆ ಇತಿಹಾಸ ಪ್ರಸಿದ್ಧ. ಇಂದಿಗೂ ಉಡುಪಿ ಕೃಷ್ಣನ ದರ್ಶನ ಕನಕನ ಕಿಂಡಿಯಿಂದಲೇ ಲಭ್ಯ.

ಕೃಷ್ಣ ದೇವಸ್ಥಾನದ ಒಳ ಹೊಕ್ಕರೆ, ಅಲ್ಲಿನ ವಾತಾವರಣ ಅಮೋಘ ಶಾಂತತೆಯನ್ನು ಬೀರಿ ಆಧ್ಯಾತ್ಮಿಕ ಅನುಭೂತಿಯನ್ನು ಒದಗಿಸಿಕೊಡುತ್ತದೆ. ಕತ್ತಲು ಕತ್ತಲಾದ ಮಂದಿರದೊಳಗೆ ದೂರದಲ್ಲೆಲ್ಲಿಂದಲೋ ನುಸುಳಿ ಬರುವ ನಸು ಬೆಳಕು, ಆ ಹಿನ್ನೆಲೆಯಲ್ಲಿ ನಾನಾಲಂಕಾರಭೂಷಿತ ಶ್ರೀಕೃಷ್ಣನ ದರ್ಶನ ಮನಸ್ಸಿಗೆ ಮುದ ನೀಡುತ್ತದೆ.
ನಾನು ಉಡುಪಿಗೆ ಹೋಗಿದ್ದು ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ. ಆಗ ಕಡೆಗೋಲು ಕೃಷ್ಣನಿಗೆ ದಿನಕ್ಕೊಂದು ಅಲಂಕಾರ. ಸುತ್ತ ಬಾಳೆದಿಂಡನ್ನು ಸೀಳಿ ಮಾಡಿದ ಮನಮೋಹಕ ಮಂಟಪ. ಕರಿಶಿಲೆಯ ಗರ್ಭಗುಡಿಯಲ್ಲಿ ಅದು ದಂತದ ಮಂಟಪದಂತೆ ಕಾಣುತ್ತದೆ. ದಶಾವತಾರ ಅಲಂಕಾರಗಳು, ವಿಶ್ವರೂಪ ದರ್ಶನ, ಮೋಹಿನಿ ಅಲಂಕಾರ ಪ್ರತಿಯೊಂದೂ ಕಣ್ಣಿಗೆ ಹಬ್ಬ.
ದೇವಾಲಯದ ಆವರಣದೊಳಗೆ ಭಗವದ್ಗೀತಾ ದರ್ಶನ ಮಂದಿರವೂ ಇದೆ. ಕೃಷ್ಣ ಅಂದರೆ ಭಗವದ್ಗೀತೆ ಗೀತೆ. ಗೀತೆ, ಶ್ರೀಕೃಷ್ಣನ ಕರುಣೆಯ ಸಾಹಿತ್ಯರೂಪ. ಜೀವನಕ್ಕೆ ಅಗತ್ಯವಾದ ಪ್ರತಿಯೊಂದನ್ನೂ ಒಂದೇ ಸೂತ್ರದಲ್ಲಿ ಕಟ್ಟಿಕೊಟ್ಟ ಕೃಷ್ಣನ ಮಂದಿರದಲ್ಲಿ ಭಗವದ್ಗೀತೆಗೆ ಪ್ರಮುಖ ಸ್ಥಾನ ಇರಲೇಬೇಕು ಅಲ್ಲವೆ?

ಇನ್ನು ಪುಷ್ಕರಣಿಯ ವಿಷಯ. ಚೌಕಾಕಾರದ ತಿಳಿ ಹಸಿರು ನೀರಿನ ಪುಷ್ಕರಣಿ ನೋಡಲಿಕ್ಕೆ ಬಹಳ ಚಂದ. ಮೆಟ್ಟಲಿಳಿದು ಕೈ ಹಾಕಿದರೆ ಕೊರೆಯುವ ನೀರು, ಈ ಪುಣ್ಯಜಲ, ಪಾಪನಾಶಿನಿಯೂ ಹೌದು. ದಕ್ಷಿಣ ಕನ್ನಡ ಶೈಲಿಯ ದೇವಸ್ಥಾನ, ಅಚ್ಚುಕಟ್ಟಾದ ಭೋಜನಶಾಲೆ, ವಿವಿಧ ಸಂದರ್ಭಗಳಲ್ಲಿ ಎಳೆಯುವ ರಥಗಳು, ಪ್ರತಿಯೊಂದು ಅಪ್ಯಾಯಮಾನವಾಗಿದೆ.
ಇಲ್ಲಿ ವರ್ಷಕ್ಕೊಮ್ಮೆ ರಥವನ್ನು ಎಳೆಯುತ್ತಾರೆ. ರಥೋತ್ಸವ ನಡೆದನಂತರ ಅದನ್ನು ಮುರಿದು ಉರುವಲಾಗಿ ಉಪಯೋಗಿಸುವ ಪ್ರತೀತಿ ಇದೆ. ಮತ್ತೆ ಮುಂದಿನ ಉತ್ಸವಕ್ಕೆ, ಮತ್ತೊಂದು ಕಟ್ಟಿಗೆಯ ರಥ, ಇದೊಂದು ಇಲ್ಲಿನ ವಿಶೇಷ.
ಸಾಮಾನ್ಯವಾಗಿ ಕೃಷ್ಣ ಅಂದರೆ ಕೊಳಲಿನ ಕೃಷ್ಣ ಕಣ್ಮುಂದೆ ಬರುತ್ತಾನೆ. ಬಹುತೇಕ ಕೃಷ್ಣ ಚಿತ್ರಗಳು, ವಿಗ್ರಹಗಳು ಕೊಳಲು ಹಿಡಿದ ಕೃಷ್ಣನದೇ ಇರುತ್ತದೆ. ಆದರೆ ಉಡುಪಿಯಲ್ಲಿ ಕೃಷ್ಣ ಕಡೆಗೋಲು ಹಿಡಿದಿದ್ದಾನೆ, ಶುದ್ಧ ಗೊಲ್ಲನಾಗಿದ್ದಾನೆ. ಈ ಮೂಲಕ ಜನಪದರಿಗೆ ಆಪ್ತನೂ ಆಗಿದ್ದಾನೆ.
ಶ್ರೀಕೃಷ್ಣನ ಉಡುಪಿ ಕ್ಷೇತ್ರ ಬಹಳಷ್ಟು ಕಾರಣಗಳಿಗೆ ವಿಭಿನ್ನವಾಗಿ ನಿಂತು, ನನಗೆ ಮೆಚ್ಚುಗೆಯಾದ ಕೃಷ್ಣ ಕ್ಷೇತ್ರವಾಗಿದೆ.






Leave a Reply