ಶಕಟಾಸುರನ ಸೊಂಟ ಮುರಿದ !

(ಕೃಷ್ಣನ ಕಥೆ)

ಕಥೆ ಹೇಳಿದ್ದು: ನಮಿತಾ ಶೆಟ್ಟಿ, 4ನೇ ತರಗತಿ, ಕೈಗಾ, ಕಾರವಾರ

ಪುಟ್ಟ ಕೃಷ್ಣಂಗೆ ವಿಪರೀತ ಹಸಿವು, ಹಸಿವಾದಾಗ ಹಾಲು ಸಿಗಲಿಲ್ಲ ಅಂದ್ರೆ ಕೋಪ ಬಂದಿಡ್ಡಿತ್ತು. ತನ್ ಕೋಪ ತೋರಿಸ್ಕೊಳ್ಳೋಕೆ ಏನಾದ್ರೂ ತುಂಟತನ ಮಾಡಿಯೇ ಮಾಡ್ತಿದ್ದ.

ಅವತ್ತು ಅಷ್ಟಮಿ, ಪ್ರಟಾಣಿ ಕೃಷ್ಣನ ಮೊದಲ ಹುಟ್ಟುಹಬ್ಬ. ಮನೆ ತುಂಬ ಜನವೋಜನ, ಇಡೀ ಊರಲ್ಲೇ ಸಡಗರ-ಸಂಭ್ರಮ. ನಂದಗೋಪನ ಮನೆಗೆ ದೂರದೂರದಿಂದ ಋಷಿ ಮುನಿಗಳು ಕೃಷ್ಣನನ್ನು ನೋಡೋಕೆ ಅಂತಲೇ ಬಂದಿದ್ರು. ಅವರಿಗೆಲ್ಲ ಕಷ್ಟ ಬರೀ ಮಗು ಅಲ್ಲ,  ಸಾಕ್ಷಾತ್ ದೇವೋತ್ತಮನೇ ಅನ್ನೋದು ಗೊತ್ತಿತ್ತು!

ಯಶೋದೆ, ನಂದರಾಜ ಇಬ್ರು ಮನೆಗೆ ಬಂದ ಅತಿಥಿಗಳಿಗೆ ಉಪಚಾರ ಮಾಡೋದ್ರಲ್ಲಿ ಮುಳುಗಿ ಹೋಗಿದ್ರು. ಇನ್ನೊಂದ್ಕಡೆ ಬ್ರಾಹ್ಮಣರು ಬಾಲಕೃಷ್ಣನಿಗೆ ಏನೂ ವಿಪತ್ತು ಬರದೇ ಇರಲಿ, ಅವನಿಗೆ ಒಳ್ಳೆದಾಗ್ಲಿ ಅಂತ ಹೋಮ-ಹವನ ಮಾಡ್ತಿದ್ರು. ಮುದ್ದು ಕೃಷ್ಣನ್ನ ಮಧ್ಯದಲ್ಲಿ ಮಲಗಿಸಿ, ಗೋಪಿಯರೆಲ್ಲ ಸುತ್ತಲೂ ಕುಳಿತುಕೊಂಡು ಮಗುವಿನ ಚೆಲುವನ್ನು ಕಣ್ತುಂಬ ತುಂಬಿಸ್ಕೋಳ್ತಿದ್ರು.

ನೀಲಿ ಬಣ್ಣದ, ಎಳಸು ಕೃಷ್ಣನ ಅಂದಚೆಂದ ಎಷ್ಟು ನೋಡಿದ್ರು ಅವ್ರಿಗೆ ತೃಪ್ತಿನೆ ಇಲ್ಲ! ಅವ್ನನ್ನ ನೋಡ್ತಿದ್ರೆ, ಅದೇ ಕಣ್ಣಿಗೊಂದು ಹಬ್ಬ. ಆ ಹೊತ್ತಿಗಾಗ್ಲೇ ಕೃಷ್ಣ ಮಗುಚಿಕೊಳ್ಳೋದು, ಮುಂದೆ ಹೋಗೋದು ಎಲ್ಲವುದನ್ನು ಶುರುಮಾಡಿದ್ದ. ಗೋಪಿಯರಿಗೆ, ಪುಟ್ಟ ಮಕ್ಕಳಿಗೆಲ್ಲ ಅವನ ಒಂದೊಂದು ನಡೆಯೂ ರಸಭಾವ ಉಕ್ಕೋ ಹಾಗೆ ಮಾಡ್ತಿದ್ದವು.

ಆ ಹೊತ್ತಿಗೆ ಯಶೋದೆ, ಮಗುವಿಗೆ ಅಭ್ಯಂಜನ ಮಾಡಿಸ್ಲಿಕ್ಕೆ ಅಂತ ಎತ್ತಿಕೊಂಡ್ಳು, ತಲೆಗೆ, ಮೈಗೆಲ್ಲ ಎಣ್ಣೆ ಹಚ್ಚಿ, ಬಿಸಿಬಿಸಿ ನೀರೆರೆದು ಸ್ನಾನ ಮಾಡಿಸ್ತಾ ಇರುವಾಗ ಬ್ರಾಹ್ಮಣರು ಮಂತ್ರ ಹೇಳಿ ಆಶೀರ್ವಾದ ಮಾಡಿದ್ರು.

ಅಂದದ ಗೊಂಬೆ ಕೃಷ್ಣನಿಗೆ ಚೆಂದದ ಹೊಸಬಟ್ಟೆ ಹಾಕಿ ವೇದಮಂತ್ರ ಹೇಳ್ತಿದ್ದ ಜಾಗಕ್ಕೆ ಹೋಗಿ ಕುಳಿತುಕೊಂಡು, ಮನೆತುಂಬ ಜನ ಸೇರಿದ್ದರಿಂದ ಉಪಚಾರದ ಸಡಗರ-ಸಂಭ್ರಮದಲ್ಲಿ ಅವಳಿಗೆ ಹಾಲುಕೊಡೋದೇ ಮರೆತುಹೋಗ್ತಿತ್ತು! ಬಂದವೆಲ್ಲಾ ತನ್ನ ಮಗುವನ್ನು ಮುದ್ದಾಡಿ, ಹಾರೈಸ್ತಿದ್ದದ್ದೇ ಅವಳಿಗೆ ವಿಪರೀತ ಖುಷಿ ಕೊಡುವ ವಿಷಯವಾಗಿ ಬಿಟ್ಟಿತು.

ಪಾಪು ಕೃಷ್ಣಂಗೆ ವೇದಘೋಷ ಕೇಳ್ತಾ ಕೇಳ್ತಾ ಹಾಗೇ ನಿದ್ದೆ ಬಂದ ಹಾಗಾಗಿ ಕಣ್ಣು ಮುಚ್ಚಿದ. ಅಮ್ಮ ಅವನನ್ನ ಅಲ್ಲೇ ಕೈಗಾಡಿಯ ಕೆಳಗೆ ನೆರಳಲ್ಲಿ ಮಲಗಿಸಿ, ಕೆಲಸಕ್ಕೆ ಹೊರಟು ಹೋದ್ಲು. ಒಂದೈದು ನಿಮಿಷ ಆಗಿತ್ತೋ ಇಲ್ಲೋ, ಕೃಷ್ಣಂಗೆ ಹಸಿವೆಯಿಂದ ಎಚ್ಚರ ಆಗಿಹೋಯ್ತು. ಕಣ್ ಬಿಟ್ಟು ನೋಡಿದ್ರೆ, ಅಮ್ಮ ಅಲ್ಲಿಲ್ಲ! ಇನ್ನೂ ಪುಟಾಣಿ ತನಗೆ ಹಾಲು ಬೇಕು ಅಂತ ಹೇಳೋದು ಹೇಗೆ? ಇರೋದು ಒಂದೇ ಉಪಾಯ ಅಳೋದು!

ಸರಿ, ಕೃಷ್ಣ ಅಳಕ್ಕೆ ಶುರುಮಾಡ್ಡ, ಆದ್ರೆ ಸುತ್ತ ಸೇರಿದ್ದ ಜನರ ಸದ್ದುಗದ್ದಲದಲ್ಲಿ, ಈ ಪುಟಾಣಿಯ ಅಳು ಯಾರಿಗೂ ಕೇಳಿಸ್ಲಿಲ್ಲ. ಕೃಷ್ಣನ ಜೊತೆ ಆಟವಾಡ್ಲಿಕ್ಕೆ ಅಂತ ಬಂದಿದ್ದ ಮಕ್ಕಳು ಮಾತ್ರ ಏನೂ ಮಾಡಲು ತೋಚದೆ ಅಲ್ಲೇ ನೋಡ್ತಾ ನಿಂತುಬಿಟ್ರು.

ತಾನು ಅಳ್ತಾ ಇದ್ರೂ ಅಮ್ಮ ಬಂದು ಹಾಲು ಕೊಡ್ಲಿಲ್ಲ! ಕೃಷ್ಣನ ಹಸಿವು ಜಾಸ್ತಿಯಾದ ಹಾಗೆ ಕೋಪಾನೂ ಹೆಚ್ತಾ ಹೋಯ್ತು. ಸಿಟ್ಟಿಂದ ನೆಲಕ್ಕೆ ಕಾಲು ಬಡೀತಾ ಅಳು ಜೋರು ಮಾಡಿದ. ಅವನು ಕಾಲು ಝಾಡಿಸ್ತಾ ಇರುವಾಗ ಒಂದು ಸಾರ್ತಿ ಅದು ಕೈಗಾಡಿಯ ಚಕ್ರಕ್ಕೆ ತಗುಲಿಬಿಡ್ತು. ಊಹೂಂ… ಆದ್ರಿಂದ ಪುಟಾಣಿ ಕೃಷ್ಣನ ಪುಟ್ಟ ಪುಟ್ಟ ಪಾದಗಳಿಗೇನೂ ಆಗ್ಲಿಲ್ಲ. ಆಗಿದ್ದೇನು ಗೊತ್ತಾ? ಆ ಗಾಡೀನೇ ಲಟಲಟಾಂತ ಮುರಿದುಬಿತ್ತು!

ಆ ಗಾಡಿ ಮೇಲೆ ಹಿತ್ತಾಳೆ-ತಾಮ್ರದ ಭಾರಭಾರದ ಪಾತ್ರೆಗಳನ್ನ ಇಟ್ಟಿದ್ದು, ಅವೆಲ್ಲ ಧಬಧಬ ಉರುಳಿಬಿದ್ದು ಭಯಂಕರ ಸದ್ದು ಮಾಡಿದ್ವು. ಗಾಡಿಯ ಚಕ್ರ ಕಳಚಿಕೊಂಡು, ಅದರ ಕಡ್ಡಿಗಳೆಲ್ಲ ಅಪ್ಪಚ್ಚಿ ಆಗಿಹೋದ್ವು!

ಈ ಸದ್ದು ಕೇಳಿ ಅಲ್ಲಿದ್ದವ್ರೆಲ್ಲಾ ಓಡೋಡಿ ಬಂದ್ರು. ಅಮ್ಮ ಯಶೋದೆ ಕೂಡಾ ಗಾಬರಿಯಿಂದ ಬಂದು ನಿಂತ್ಲು. ಕಷ್ಟ ತನ್ನ ಪಾಡಿಗೆ ತಾನು ಅಳ್ತಾನೇ ಮಲಗಿಕೊಂಡಿದ್ದ. ಇಷ್ಟಕ್ಕೂ ನಿಜ ಏನು ಗೊತ್ತಾ? ಮುರಿದುಬಿತ್ತಲ್ಲ, ಆ ಗಾಡಿ ಅದು ಶಕಟಾಸುರ ಅನ್ನೋ ರಾಕ್ಷಸ! ಕೃಷ್ಣನ್ನ ಕೊಲ್ಲಕ್ಕೆ ಅಂತ ದುಷ್ಟ ಕಂಸ ಅವನನ್ನ ಕಳಿಸಿದ್ದ. ಪಾಪಚ್ಚಿ ಕೃಷ್ಣನ ಪಾದದ ಒದೆಗೇ ಅವನ ಸೊಂಟ ಮುರಿದುಬಿತ್ತು! ಆದ್ರೆ ಅಲ್ಲಿದ್ದವರಿಗೆ ಇದೊಂದು ಗೊತ್ತಿಲ್ಲ.

ಈ ಗಾಡಿ ಮುರಿದು ಬಿದ್ದಿದ್ದು ಹೇಗೆ? ಎಲ್ರಿಗೂ ಆಶ್ಚರ್ಯ, ಅಲ್ಲಿದ್ದ ಮಕ್ಕಳು, “ಕೃಷ್ಣನ ಕಾಲು ತಾಗಿ ಮುರಿದುಬಿತ್ತು. ನಾವು ಕಣ್ಣಾರೆ ನೋಡಿದ್ವಿ” ಅಂತ ಸಾಕ್ಷಿ ಹೇಳಿದ್ರೂ ಯಾರಿಗೂ ನಂಬಿಕೆ ಇಲ್ಲ. ಪಾಪ! ಅವ್ರಿಗೇನು ಗೊತ್ತು? ಅಲ್ಲಿ ಮಲಗಿರೋದು ಸಾಕ್ಷಾತ್ ಭಗವಂತ ಅನ್ನೋದು? ಅವರೆಲ್ಲರ ಪಾಲಿಗೆ ಕೃಷ್ಣ ಅಚ್ಚುಮೆಚ್ಚಿನ ಮುದ್ದು ಮಗು ಮಾತ್ರ!

ಯಶೋದೆ ಮಗನನ್ನೆತ್ತಿಕೊಂಡು ಲೊಚ ಲೊಚ ಮುತ್ತು ಕೊಟ್ಲು. ಆಮೇಲೆ ಹಾಲೂಡಿಸಲಿಕ್ಕೆ ಅಂತ ತೊಡೆ ಮೇಲೆ ಮಲಗಿಸ್ಕೊಂಡ್ಲು. ಕೃಷ್ಟ ಅವರಮ್ಮನ ಗಾಬರಿಗೆ ಒಳಗೊಳಗೇ ನಗ್ತಾ, ಖುಷಿಯಿಂದ ಹಾಲು ಕುಡೀಲಿಕ್ಕೆ ಶುರುಮಾಡ್ಡ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi