ಮಣ್ಣು ತಿಂದ, ಬ್ರಹ್ಮಾಂಡ ತೋರಿದ

ಕೃಷ್ಣ ಕಥೆ

ಕಥೆ ಹೇಳಿದ್ದು: ಪೂಜಾ ಕರ್ನೀಸ್‌, 6ನೇ ತರಗತಿ, ವಿವೇಕಾನಂದ ಶಾಲೆ, ಮೈಸೂರು.

ಕೃಷ್ಣ ಕಂದನ ಚೇಷ್ಟೆ ಒಂದೆರಡಲ್ಲ. ಅದೋ! ಈಗ ಅಲ್ಲಿ ಬೆಣ್ಣೆ ತಿಂತಿದಾನೆ ಅಂದ್ರೆ, ಆಗ್ಲೇ ಮತ್ತೊಂದ್ಕಡೆ ಕರು ಬಾಲ ಹಿಡ್ಕೊಂಡು ಆಟ ಆಡ್ಲಿಕ್ಕೆ ಶುರು ಮಾಡ್ತಿದ್ದ. ಈಗ ನೋಡಿದ್ರೆ ಮಣ್ಣಿನ ರಾಶೀಲಿ ಕೂತು ಕಪ್ಪೆ ಗೂಡು ಕಟ್ಟಿದ್ದಾನೆ!

ಅಣ್ಣ ಬಲರಾಮನಿಗಂತೂ ಈ ತುಂಟನನ್ನು ಕಾಯೋದೇ ಕೆಲಸ. ಅವನ ತರಲೆಗಳಿಗೆ ಸುಳ್ಳು ಸುಳ್ಳೇ ಕೋಪಿಸ್ಕೊಳ್ತಾ ತಾನೂ ಅವನ ಜೊತೆ ಸೇರಿ ಅದೇ ತಂಟೆಯಲ್ಲಿ ಭಾಗಿಯಾಗಿ ಬಿಡ್ತಿದ್ದ. ಕೃಷ್ಣ ಮಾಡೋ ಯಾವ ಕೆಲಸಾನೂ ಬೇಜಾರೂ ಬರಿಸುವಂಥದ್ದಾಗಿರ್ಲೇ ಇರ್ಲಿಲ್ಲ.

ಮನೆ ಒಳಗೆ ಕೂತು ಆಡಿಕೊಳ್ಳೋದು ಅಂದ್ರೆ ಕೃಷ್ಣಂಗೆ ಭಲೇ ತಲೆ ನೋವು. ಆಗ ತಾನೇ ಅಮ್ಮ ಯಶೋದ ಕೃಷ್ಣನಿಗೆ ಚಂದದ ಅಲಂಕಾರ ಮಾಡಿ, ಒಳ್ಳೆ ಬಟ್ಟೆ ತೊಡಸಿ ಆಡ್ಲಿಕ್ಕೆ ಬಿಟ್ಟಿದ್ಲು. ಅಮ್ಮ ಅತ್ತ ತನ್ನ ಕೆಲಸದಲ್ಲಿ ಮುಳುಗ್ತಿದ್ದ ಹಾಗೆ, ಈ ಪುಟ್ಟನ ಚೇಷ್ಟೆ ಶುರುವಾಯ್ತು.

ಗಂಭೀರ ನಟಿಸ್ತಾ ತನ್ನ ಪಾಡಿಗೆ ತಾನು ಕೂತಿದ್ದ ಬಲರಾಮನತ್ತ ಕಣ್ಣು ಮಿಟುಕಿಸ್ದ ಕೃಷ್ಣ. ಅದಕ್ಕೇ ಕಾಯ್ತಿದ್ನೇನೋ ಅನ್ನೋ ಹಾಗೆ ಬಲರಾಮ ಸಡಗರದಿಂದ ಅವನ ಹಿಂದೆ ಹೊರಟ.

ಮನೆ ಹಿಂದೆ ಹಾಕಿದ ಮಣ್ಣಿನ ಗುಡ್ಡೆ, ಕೃಷ್ಣಂಗೀಗ ಮೆಚ್ಚಿನ ಆಟದ ಜಾಗ. ಆ ಕೆಂಪು ಮಣ್ಣಿನ ಮೇಲೆ ಉರುಳಾಡಿ ಮೈಕೈಯಲ್ಲ ಧೂಳು ಮಾಡ್ಕೊಂಡು ಅಮ್ಮನ ಕಾಡೋದು ಅಂದ್ರೆ ಅವನಿಗೆ ಬಲು ಪ್ರೀತಿ.

ಅಣ್ಣನ್ನ ಕರ್ಕೊಂಡು ಮನೆಯಿಂದ ಹೊರಟ ತಂಟೆಕೋರ ಸೀದಾ ಹೋಗಿದ್ದೇ ಮಣ್ಣು ಗುಡ್ಡೆಗೆ. ಆಡ್ತಾ ಆಡ್ತಾ ಕೃಷ್ಣ ಮಣ್ಣಿನ ಹೆಂಟೆಯನ್ನು ಬಾಯಿಗೆ ಹಾಕ್ಕೊಂಡು ಬಿಟ್ಟ. ಅವನ ಜೊತೇಲೇ ಆಡ್ತಾ ಇದ್ದ ಅಣ್ಣ, ಕೃಷ್ಣನ ಬಾಯಿಗೆ ಕೈ ಹಾಕಿ ಅದನ್ನ ಹೊರತೆಗೀಲಿಕ್ಕೆ ನೋಡ್ದ. ಊಹೂಂ. ಕೃಷ್ಣ ಬಿಡ್ಲೇ ಇಲ್ಲ. ಅದನ್ನು ಉಗಿದು ಬಿಡು ಅಂದ್ರೂ ಕೇಳ್ಲಿಲ್ಲ. ಕೊನೆಗೆ ಬಲರಾಮ ಯಶೋದೆಗೆ ದೂರು ಹೇಳ್ಲಿಕ್ಕೆ ಓಡಿದ.

ಮೊಸರು ಕಡೀತಾ ಕೂತಿದ್ದ ಯಶೋದೆ, “ಕೃಷ್ಣ ಮಣ್ಣು ತಿಂದ” ಅಂದು ಕೂಡ್ಲೆ, ಬೆಣ್ಣೆ ಮೆತ್ತಿಕೊಂಡ ಕೈಲೇ ಕೂದಲು ನೇವರಿಸಿಕೊಳ್ತ ಓಡಿ ಬಂದ್ಲು. ಕೃಷ್ಣ ಅದಾಗಲೇ ಮಣ್ಣಿನ ಗುಡ್ಡೆಯಿಂದ ಕೊಟ್ಟಿಗೆಗೆ ಓಡಿ ಬಂದಿದ್ದ. ಅಲ್ಲಿ ಶುರುವಾಯ್ತು ವಿಚಾರಣೆ.

ಅಮ್ಮ, “ಎಲ್ಲೋ ತುಂಟ, ಬಾಯಿ “ಆ” ಮಾಡು!” ಅಂತ ಗದರಿದ್ಲು. ಕಳ್ಳ ಕೃಷ್ಣ, ಮುಖ ಧುಮ್ಮಿಸಿಕೊಂಡು ನಿಂತೇ ಇದ್ದ. ಅಮ್ಮಂಗೆ ಕೋಪ ಬಂತು. ಅವನ ಹೆಗಲ ಮೇಲೆ ಕೈ ಹಾಕಿ ಮತ್ತೊಂದ್ಸಲ ಕೇಳಿದ್ಲು. ಮತ್ತೂ ಸುಮ್ನಿದ್ರೆ ಪೆಟ್ಟು ಖಂಡಿತ ಅಂತ ಕೃಷ್ಣಂಗೆ ಗೊತ್ತಾಗಿ ಹೋಯ್ತು. ಅಳುಮುಖ ಮಾಡ್ಕೊಂಡು ಮೆಲ್ಲನೆ ಬಾಯಿ ತೆರೆದ. ಅದನ್ನ ನೋಡ್ತಿದ್ದ ಹಾಗೆ ಯಶೋದೆ ದಂಗಾಗಿ ಹೋದ್ಲು!

ಗಿಡ, ಮರ, ನದಿ, ಬೆಟ್ಟ, ಆಕಾಶ, ನಕ್ಷತ್ರ, ಭೂಮಿ, ಗೋಕುಲ, ಎಲ್ಲ, ಎಲ್ಲ ಅವಳಿಗೆ ಆ ಪುಟ್ಟ ಬಾಯಲ್ಲಿ ಕಾಣ್ತಿತ್ತು. ಇಡೀ ಬ್ರಹ್ಮಾಂಡವೇ ಅಲ್ಲಿತ್ತು!

ಯಶೋದೆಗೆ ಏನೂ ತೋಚದೆ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತಿಟ್ಲು. ಕೃಷ್ಣ ಏನೂ ತಿಳಿಯದವರ ಹಾಗೆ ಬಲರಾಮನ ಕೈಹಿಡಿದು ನೆಗೀತಾ ಓಡಿ ಹೋದ. ಮತ್ತೆ ಮಣ್ಣು ಗುಡ್ಡೆಗೆ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi