– ಶ್ರೀ ಸ್ತೋಕ ಕೃಷ್ಣದಾಸ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಸ್ಕಾನ್ ಬೆಂಗಳೂರು ಚೈತನ್ಯ ಪಂಥ ಮತ್ತು ದಾಸ ಪಂಥ’ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ನಾಡಿನ ಹತ್ತು ಹಲವು ಪ್ರಾಜ್ಞರು ಸಂಕಿರಣದ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡನೆ ಮಾಡಿದರು. ಆ ಪ್ರಬಂಧಗಳ ಸಾರಾಂಶವನ್ನು ‘ಭಕ್ತಿವೇದಾಂತ ದರ್ಶನ’ ತನ್ನ ಓದುಗರಿಗಾಗಿ ನೀಡುತ್ತಿದೆ.

ಓಂ ಅಜ್ಞಾನತಿಮಿರಾನ್ಧಸ್ಯ ಜ್ಞಾನಾಞ್ಜನಶಲಾಕಯಾ ।
ಚಕ್ಷುರ್ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಶ್ರೀ ಚೈತನ್ಯ ಮನೋಽಭೀಷ್ಟಂ ಸ್ಥಾಪಿತಂ ಯೇನ ಭೂ-ತಲೇ ।
ಸ್ವಯಂ ರೂಪಃ ಕದಾ ಮಹ್ಯಂ ದದಾತಿ ಸ್ಥಪದಾನ್ತಿಕಮ್ ||
ನಮಃ ಓಂ ವಿಷ್ಣುಪಾದಾಯ ಕೃಷ್ಣಪ್ರೇಷ್ಠಾಯ ಭೂತಲೇ |
ಶ್ರೀಮತೇ ಭಕ್ತಿವೇದಾಂತಸ್ವಾಮಿನ್ ಇತಿ ನಾಮಿನೇ।
ನಮಸ್ತೇ ಸಾರಸ್ವತೇ ದೇವೇ ಗೌರ-ವಾಣೀ-ಪ್ರಚಾರಿಣೇ |
ನಿರ್ವಿಶೇಷ ಶೂನ್ಯವಾದಿ ಪಾಶ್ಚಾತ್ಯ-ದೇಶ-ತಾರಿಣೇ ||
ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ |
ಶ್ರೀ ಅದ್ವೈತ ಗದಾಧರ ಶ್ರೀ ವಾಸಾದಿ ಗೌರ ಭಕ್ತವೃಂದ ||

ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ।
ಹರೇರಾಮ ಹರೇರಾಮ ರಾಮರಾಮ ಹರೇಹರೇ ||
ಭಾಗವತದಲ್ಲಿ ಎರಡು ರೀತಿಯ ಸಂತರಿದ್ದಾರೆ ಎಂದು ವಿಶೇಷವಾದ ಮಾತಿದೆ. ಕೆಲವು ಸಂತರು ತಮ್ಮ ಆತ್ಮೋದ್ಧಾರಕ್ಕಾಗಿ, ಮೋಕ್ಷಕ್ಕಾಗಿ ಏಕಾಂತ ಸ್ಥಳಕ್ಕೆ ಹೋಗಿ ಆಧ್ಯಾತ್ಮಿಕ ಅಭ್ಯಾಸಗಳನ್ನು ಮಾಡುತ್ತಾರೆ. ಆದರೆ ಇನ್ನೊಂದು ಬಗೆಯ ಸಂತರಿದ್ದಾರೆ. ಅವರು ಸಮಾಜದಲ್ಲಿ ಸಾಮಾನ್ಯ ಜನರ ದುಃಖವನ್ನು ನೋಡಿ, ಅಂತಹ ಜನರ ದುಃಖಕ್ಕೆ ದುಃಖಪಟ್ಟು, “ಪರ ದುಃಖೇ ದುಃಖಿಃ” ಅವರ ದುಃಖದ ನಿವಾರಣೆಗಾಗಿ ಶ್ರಮಿಸಿ, ತಮ್ಮ ಆಧ್ಯಾತ್ಮಿಕ ಜೀವನವನ್ನು ಅದಕ್ಕಾಗಿ ಮುಡಿಪಿಡುತ್ತಾರೆ.
ಚೈತನ್ಯ ಮಹಾಪ್ರಭುಗಳು ಈ ಸಮಾಜದ ದುಃಖ ನಿವಾರಣೆಗಾಗಿ ಶ್ರಮಿಸಿದಂತಹ ಸಂತರು. ಅವರು, ಸಮಾಜದಲ್ಲಿ ಅನೇಕ ರೀತಿಯಲ್ಲಿ ಸುಧಾರಣೆ ಮಾಡಲಿಕ್ಕೆ ತತ್ತ್ವ ಬೋಧನೆ ಮತ್ತು ಬೇರೆ ಬೇರೆ ಬಗೆಯ ಲೀಲೆಗಳನ್ನು ನಡೆಸಿ, ಸಮಾಜದಲ್ಲಿ ಸುಧಾರಣೆ ತರಲು ಪ್ರಯತ್ನ ನಡೆಸಿದರು. ಅವುಗಳಲ್ಲಿ ಕೆಲವು ಘಟನೆಗಳನ್ನು ನಾನಿಲ್ಲಿ ಸಂಕ್ಷಿಪ್ತವಾಗಿ ಹೇಳಲು ಬಯಸುತ್ತೇನೆ.
ಅವರು ಸಂಕೀರ್ತನ ಪ್ರಚಾರ ಮಾಡಲಿಕ್ಕೆ ಆರಂಭಿಸಿದಾಗ, ಇಡೀ ನವದ್ವೀಪ ಪಟ್ಟಣದಲ್ಲಿ ಅನೇಕ ಜನರು ಸಂಕೀರ್ತನ ಚಳವಳಿಯಲ್ಲಿ ಭಾಗವಹಿಸಿ, ಎಲ್ಲೆಡೆಯೂ ನಾಮ ಸಂಕೀರ್ತನೆ ಮೊಳಗುವಂತಾಗಿತ್ತು. ಹೀಗೆ ಈ ಸಂಕೀರ್ತನೆ ತುಂಬಾ ಜನಪ್ರಿಯವಾಗಿದ್ದನ್ನು ಕಂಡು ಕೆಲವು ಸ್ಥಳೀಯ ಬ್ರಾಹ್ಮಣರು ಅಲ್ಲಿಯ ನ್ಯಾಯಾಧೀಶ ಖಾಜಿಯ ಬಳಿ ಹೋಗಿ ದೂರು ಸಲ್ಲಿಸಿದರು.
ಈ ನಿಮಾಯ್ ಪಂಡಿತ ಮೊದಲು ಒಳ್ಳೆಯ ಹುಡುಗನಾಗಿದ್ದ ಈಗೇನೋ ತಂದೆಯ ಶ್ರಾದ್ಧಕ್ಕೆ ಗಯೆಗೆ ಹೋದ ಮೇಲೆ ಅವನಿಗೆ ಯಾರೋ ಹುಚ್ಚು ಹಿಡಿಸಿ ಬಿಟ್ಟಿದ್ದಾರೆ. ದಿನರಾತ್ರಿ ಕೇವಲ ‘ಹರೇಕೃಷ್ಣʼ ಹೇಳಿಕೊಂಡು ಇದ್ದು ಬಿಡುತ್ತಾನೆ. ಯಾವ ಒಳ್ಳೆಯ ಆಚಾರ, ವಿಚಾರ, ನಡೆ ನುಡಿ ಏನೂ ಇಲ್ಲ ಇವನಿಗೆ, ಮತ್ತೆ ತನಗೆ ಹುಚ್ಚು ಹಿಡಿಸಿಕೊಂಡಿರುವುದಲ್ಲದೆ, ಊರಿಗೆಲ್ಲಾ ಹುಚ್ಚು ಹಿಡಿಸುತ್ತಿದ್ದಾನೆ.”

ವಿಶೇಷವಾಗಿ ಖಾಜಿಗೆ ಬ್ರಾಹ್ಮಣರು ಹೇಳುತ್ತಿದ್ದಾರೆ “ಅವನು ಒಂದು ಮಂತ್ರವನ್ನು ಜನರಿಗೆ ಕೊಡುತ್ತಿದ್ದಾನೆ. ಎಲ್ಲ ವರ್ಗದ ಜನರಿಗೂ ಕೊಡುತ್ತಿದ್ದಾನೆ. ಆ ಮಂತ್ರದಲ್ಲಿ ತುಂಬ ಶಕ್ತಿ ಇದೆ. ಆದರೆ ಆ ಮಂತ್ರವನ್ನು ಎಲ್ಲರೂ ಆ ತರಹ ಜಪ-ಕೀರ್ತನೆ ಮಾಡಬಾರದು. ಅದೂ ಸಾಮಾನ್ಯ ಜನರೆಲ್ಲಾ, ಬೀದೀಲಿ ಹೋಗುವರೆಲ್ಲಾ, ಊರಿನ ಜನರೆಲ್ಲಾ ಆ ಥರ ಆ ಮಂತ್ರವನ್ನು ಜಪಿಸಿದರೆ, ಆ ಮಂತ್ರದಲ್ಲಿರುವ ಶಕ್ತಿ ಎಲ್ಲ ಹೊರಟು ಹೋಗಿಬಿಡುತ್ತದೆ.”
ಹೀಗೆಲ್ಲ ಖಾಜಿಗೆ ದೂರು ಸಲ್ಲಿಸಿ, ಈ ಊರು ಉಳಿಯಬೇಕೆಂದರೆ ಮೊದಲು ಆ ನಿಮಾಯ್ ಪಂಡಿತನ್ನ ಆಚೆ ಹಾಕಬೇಕು. ಮತ್ತು ಅವನ ಅನುಯಾಯಿಗಳನ್ನೆಲ್ಲ ತಡೆಯಬೇಕು. ಅವರು ಬೀದಿ ಬೀದಿಯಲ್ಲಿ ಸಂಕೀರ್ತನ ಮಾಡುವುದನ್ನು ತಡೆಯಬೇಕು ಅಂತ ಕೆಲವು ಬ್ರಾಹ್ಮಣರು ಹೋಗಿ ಯಾರಿಗೆ ಶ್ರೀ ಚೈತನ್ಯರ ಬಗ್ಗೆ ಮತ್ಸರವಿತ್ತೋ ಅವರೆಲ್ಲ ಹೋಗಿ ದೂರು ಸಲ್ಲಿಸಿದಾಗ, ಆ ಖಾಜಿ ಬಂದು ಈ ಸಂಕೀರ್ತನೆಯನ್ನು ನಿಲ್ಲಿಸಿದ, ಸಂಕೀರ್ತನೆಯನ್ನು ನಿಷೇಧಿಸಿದ.
ಆದರೆ ಚೈತನ್ಯ ಮಹಾಪ್ರಭುಗಳು ಎಲ್ಲ ಭಕ್ತರನ್ನು ಸೇರಿಸಿಕೊಂಡು, ಖಾಜಿಯ ಮನೆಗೆ ಹೋಗಿ, ಖಾಜಿ ಜೊತೆಗೆ ಸಂವಾದ ಮಾಡಿ, ಖಾಜಿಯ ಮನಸ್ಸಿನಲ್ಲಿ ಹೃದಯದಲ್ಲಿ ಪರಿವರ್ತನೆ ಆಗುವ ಹಾಗೆ ಅವನ ಜೊತೆ ಚರ್ಚೆ ಮಾಡಿದರು.
ಚೈತನ್ಯ ಚರಿತಾಮೃತದಲ್ಲಿ ಬಹಳ ವಿವರವಾಗಿ ಅದನ್ನು ಕೊಟ್ಟಿದ್ದಾರೆ. ಖಾಜಿ, ಖುರಾನಿನಲ್ಲಿ ಒಬ್ಬ ವಿದ್ವಾಂಸನಾಗಿದ್ದ. ಚೈತನ್ಯ ಮಹಾಪ್ರಭುಗಳು ವೇದದಲ್ಲಿನ ತತ್ತ್ವಗಳನ್ನು ಖಾಜಿಗೆ ಬೋಧನೆ ಮಾಡಿ ಅವನಿಗೆ ಇನ್ನಷ್ಟು ಜ್ಞಾನೋದಯ ಆಗುವ ಹಾಗೆ, ಅವನಿಗೆ ಎಲ್ಲ ಮನವರಿಕೆ ಆಗುವ ಹಾಗೆ ಬೋಧನೆ ಮಾಡಿ, ಅವನಲ್ಲಿ ಪರಿವರ್ತನೆಯಾಗಿ ಅವನೂ ಸಂಕೀರ್ತನೆ ಚಳವಳಿಯನ್ನು ಸೇರುವ ಹಾಗೆ ಮಾಡಿದರು. ಅದಾದ ಮೇಲೆ ಖಾಜಿ, ಸಂಕೀರ್ತನೆಗೆ ಯಾವ ಅಡ್ಡಿಯೂ ಆಗುವುದಿಲ್ಲ ಎಂದು ಘೋಷಣೆ ಮಾಡಿ, ಸಂಕೀರ್ತನೆ ಮುಂದುವರಿಯುವ ಹಾಗಾಯಿತು.
ಇದರಲ್ಲಿ ಗಮನಿಸಬೇಕಿರುವುದು, ಸಮಾಜದಲ್ಲಿನ ಯಾವ ವರ್ಗದ ಜನರಾದರೂ ಸರಿ, ಅವರು ಸಂಕೀರ್ತನೆಯಲ್ಲಿ ಭಾಗವಹಿಸಲು ವಿಶೇಷ ಅರ್ಹತೆ ಬೇಕಿಲ್ಲ, ಈ ಪವಿತ್ರ ನಾಮವನ್ನು ಜಪಿಸಲಿಕ್ಕೆ ಎಲ್ಲರೂ ಅರ್ಹರಾಗಿದ್ದಾರೆ ಎನ್ನುವುದು. ಅದನ್ನೇ ಬ್ರಾಹ್ಮಣರು ಖಾಜಿಗೆ ಹೇಳಿದ್ದು ಎಲ್ಲರೂ ನಾಮವನ್ನು ಜಪ ಮಾಡುತ್ತಿದ್ದಾರೆ, ಎಂದು ದೂರಿದರಲ್ಲ, ಅದು ತಪ್ಪು.

ಎಲ್ಲರೂ ನಾಮವನ್ನು ಜಪಿಸಬಹುದು. ಕೆಲವರು ಮಾತ್ರ ಇದಕ್ಕೆ ಅರ್ಹರಾಗಿದ್ದಾರೆ ಎನ್ನುವುದು ತಪ್ಪು ಎಂದು ಚೈತನ್ಯ ಮಹಾಪ್ರಭುಗಳು ಸ್ಪಷ್ಟವಾಗಿ ತಿಳಿಸಿಕೊಟ್ಟರು. ಎರಡನೆಯದಾಗಿ ಚೈತನ್ಯ ಮಹಾಪ್ರಭುಗಳ ಶಿಷ್ಯರಲ್ಲಿ ಪ್ರಮುಖರಾಗಿರುವ ಶ್ರೀ ರೂಪ ಗೋಸ್ವಾಮಿ, ಶ್ರೀ ಸನಾತನ ಗೋಸ್ವಾಮಿ ಎನ್ನುವ ಇಬ್ಬರು ಸಹೋದರರು.
ಅವರು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ ಆಗ ಬಂಗಾಳದ ರಾಜನಾಗಿದ್ದ ನವಾಬ್ ಹುಸೇನ್ ಷಾಹ್, ಅವನ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತ ಅವರೂ ಸರಿ ಸುಮಾರು ಮುಸಲ್ಮಾನರೇ ಆಗಿಬಿಟ್ಟಿದ್ದರು. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ ವಿದ್ವಾಂಸರಾಗಿದ್ದರೂ ಪರ್ಶಿಯನ್ ಭಾಷೆ ಕಲಿತರು.
ಸಂಸ್ಕೃತದಲ್ಲಿ ವಿದ್ವತ್ತಿತ್ತು. ಬಂಗಾಳಿಯಲ್ಲೂ ಪಾಂಡಿತ್ಯವಿತ್ತು. ಆದರೆ ಪರ್ಶಿಯನ್ ಭಾಷೆ ಕಲಿತು, ಆ ರಾಜನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಾ ಅವರೂ ಸರಿ ಸುಮಾರು ಮುಸಲ್ಮಾನರಾಗಿಬಿಟ್ಟು ಅವರ ಹೆಸರು ಕೂಡ ಬದಲಾಯಿಸಿಕೊಂಡು ಬಿಟ್ಟರು. ದಾಬೀರ್ ಖಾಸ್ ಅಂತ, ಸಾಖರ್ ಮಲ್ಲಿಕ್ ಅಂತ ಅವರ ಹೆಸರು ಬದಲಾಯಿಸಿಕೊಂಡು ಸೇವೆ ಸಲ್ಲಿಸುತ್ತಿದ್ದರು.
ಆದರೆ ಅವರು ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಚಳವಳಿಯ ಸಂಪರ್ಕಕಕ್ಕೆ ಬಂದ ಮೇಲೆ ತಾವೂ ಅದರಲ್ಲಿ ಭಾಗಿಯಾಗಬೇಕೆಂದು ಬಯಸಿದರು. ಆಗ ಅವರು ತಮ್ಮ ಮಂತ್ರಿ ಪದವಿಯಿಂದ ನಿವೃತ್ತರಾಗಿ, ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಚಳವಳಿಯನ್ನು ಸೇರಿಕೊಂಡರು. ಚೈತನ್ಯ ಮಹಾಪ್ರಭುಗಳು ಅವರನ್ನು ಸ್ವೀಕರಿಸಿದ ರೀತಿಯನ್ನು ನಾವು ಗಮನಿಸಬೇಕು.
ಅವರು ಅತ್ಯಂತ ವಿನಮ್ರ ಭಾವದಿಂದ ಬಂದು ಚೈತನ್ಯರಲ್ಲಿ ಹೇಳಿಕೊಂಡರು, “ನಾವು ಅತ್ಯಂತ ಕೀಳು ವರ್ಗದವರು, “ನಾವು ಅತ್ಯಂತ ಪತಿತರು, ನಮ್ಮನ್ನು ಉದ್ಧಾರ ಮಾಡಿ” ಎಂದು. ಚೈತನ್ಯ ಮಹಾಪ್ರಭುಗಳು ಅವರನ್ನು ಅತ್ಯಂತ ಆದರದಿಂದ ಸ್ವೀಕರಿಸಿ, ಅವರಿಗೆ ಬೋಧನೆ ಮಾಡಿ, ಅವರನ್ನು ಗೋಸ್ವಾಮಿ ಹಂತಕ್ಕೆ ಏರಿಸಿದರು.

ಅಂದರೆ, ಅವರಿಗೆ ಸಂನ್ಯಾಸ ಕೊಟ್ಟು, ಮಹತ್ವ ಪೂರ್ಣವಾದ ಸಂಕೀರ್ತನ ಆಂದೋಲನಕ್ಕೆ ಅತ್ಯುನ್ನತ ಕೊಡುಗೆ ನೀಡುವಂತೆ ಅವರನ್ನು ಪ್ರೇರೇಪಿಸಿದರು. ರೂಪ ಮತ್ತು ಸನಾತನ ಗೋಸ್ವಾಮಿಗಳು ಚೈತನ್ಯ ಪಂಥದಲ್ಲಿ ಬಹಳ ಮುಖ್ಯವೆನಿಸಿದ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಏನು ಚೈತನ್ಯ ಮಹಾಪ್ರಭುಗಳು ಬೋಧಿಸಿದ್ದರೋ ಅದನ್ನು ಗ್ರಂಥ ರೂಪದಲ್ಲಿ ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟಿದ್ದಾರೆ.
ಅವರ ಆ ಹೆಸರುಗಳು ಕೂಡ ಶ್ರೀ ಚೈತನ್ಯರು ಸಂನ್ಯಾಸ ಕೊಟ್ಟ ನಂತರ ಬಂದ ಹೆಸರುಗಳೇ. ಮುಂದೆ, ವೃಂದಾವನಕ್ಕೆ ಹೋಗಿ ಅಲ್ಲಿ ಕೃಷ್ಣ ಮಾಡಿದಂಥ ಲೀಲೆಗಳನ್ನು ಲೀಲಾ ಸ್ಥಳಗಳನ್ನು ಎಲ್ಲ ಉತ್ಖನನ ಮಾಡಲಿಕ್ಕೆ ಚೈತನ್ಯ ಮಹಾಪ್ರಭುಗಳು ರೂಪ ಮತ್ತು ಸನಾತನ ಗೋಸ್ವಾಮಿಗಳಿಗೆ ಸಲಹೆ ಮಾಡಿದರು.
ಈ ರೀತಿ, ಸಮಾಜದಲ್ಲಿ ಯಾರು ಸ೦ಪೂರ್ಣ ಮುಸಲ್ಮಾನರಾಗಿ ಪರಿವರ್ತನೆಯಾಗಿದ್ದರೋ ಅಂಥವರನ್ನು ಮತ್ತೆ ನಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವಂತೆ ಮತ್ತೆ ಅವರಲ್ಲಿ ಪರಿವರ್ತನೆ ಉಂಟಾಗುವಂತೆ ಚೈತನ್ಯ ಮಹಾಪ್ರಭುಗಳು ಮಾಡಿದರು.
ಶ್ರೀ ಚೈತನ್ಯ ಮಹಾಪ್ರಭುಗಳ ಮತ್ತೊಬ್ಬ ಶಿಷ್ಯ ಶ್ರೀ ಹರಿದಾಸ ಠಾಕುರರು ಮುಸಲ್ಮಾನ ಕುಟುಂಬದಲ್ಲಿಯೇ ಹುಟ್ಟಿದವರು. ಆದರೆ, ಸಣ್ಣ ವಯಸ್ಸಿನಲ್ಲೇ ಅವರಿಗೆ ಹರೇಕೃಷ್ಣ ಮಂತ್ರದ ಆಕರ್ಷಣೆ ಉಂಟಾಗಿ, ಹರೇಕೃಷ್ಣ ಮಂತ್ರ ಜಪ ಆರಂಭಿಸಿದರು. ಇದಕ್ಕೆ ಅವರ ಜನಾಂಗದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದರು.
ಮುಸಲ್ಮಾನರಾಗಿ ಹುಟ್ಟಿ ಹಿಂದೂ ದೇವತೆಯ ಹೆಸರು ಹೇಳುವನೆಂದು ಅವರನ್ನು ದ್ವೇಷಿಸುತ್ತಿದ್ದರು. ಆದ್ದರಿಂದ, ಅವರೆಲ್ಲ ಹೋಗಿ ರಾಜನಿಗೆ ಹೇಳಿದಾಗ ರಾಜ ಹರಿದಾಸ ಠಾಕುರರನ್ನು ಕರೆದು, ‘ನೀನು ಮುಸಲ್ಮಾನ ಕುಲದಲ್ಲಿ ಹುಟ್ಟಿ ಕೂಡ ಹಿಂದೂ ದೇವರನ್ನು ಏಕೆ ಜಪಿಸುತ್ತಿರುವೆ?” ಎಂದು ಕೇಳಿದಾಗ, ಅವರು ಎಲ್ಲಾ ದೇವರು ಒಂದೇ ಎಂದೆಲ್ಲ ಎಷ್ಟು ಹೇಳಿದರೂ ಕೇಳದೆ, ಹಿಂದೂ ದೇವರ ಹೆಸರನ್ನು ನೀನು ಜಪಿಸಬಾರದು ಎಂದು ಅವರ ಮೇಲೆ ರಾಜ ನಿಷೇಧ ಹೇರಿದ.
ಆದರೆ ಹರಿದಾಸ ಠಾಕುರರು ಅದಕ್ಕೊಪ್ಪಲಿಲ್ಲ. ಅದಕ್ಕೆ ಶಿಕ್ಷೆಯಾಗಿ, ಇಪ್ಪತ್ತೆರಡು ಬೇರೆ ಬೇರೆ ಊರುಗಳಲ್ಲಿ ಅವರನ್ನು ಕರೆದೊಯ್ದು ಚಾವಟಿಯಿಂದ ರಾಜನ ಭಂಟರು ಅವರನ್ನು ಹೊಡೆದರು. ಅಷ್ಟಾದರೂ ಚಾವಟಿಯಿಂದ ಹೊಡೆಯುವವರಿಗೆ ಸುಸ್ತಾಯಿತು ವಿನಾ ಹರಿದಾಸ ಠಾಕುರರು ಮಾತ್ರ ಹರಿನಾಮ ಸಂಕೀರ್ತನೆಯನ್ನು ನಿಲ್ಲಿಸಲಿಲ್ಲ.

ಇದರಿಂದ ತಿಳಿಯುತ್ತದೆ ಅವರೆಷ್ಟು ನಿಷ್ಠೆಯಿಂದ ಸಂಕೀರ್ತನೆ ಮಾಡುತ್ತಿದ್ದರು. ಅದರಲ್ಲಿ ಅವರಿಗೆಷ್ಟು ಶ್ರದ್ಧೆಯಿತ್ತು ಎಂದು. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಈ ಹರಿದಾಸ ಠಾಕುರರು ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದ್ದರೂ ಕೂಡ, ಅವರನ್ನು ‘ನಾಮಾಚಾರ್ಯ’ ಎಂದು ನೇಮಿಸಿದರು.
ಅಂದರೆ, ಹರಿನಾಮ ಸಂಕೀರ್ತನೆ ಮಾಡುವುದರಲ್ಲಿ ಅವರು ಆಚಾರ್ಯರು, ಅವರು ಶ್ರೇಷ್ಠರು. ಅವರದ್ದೇ ಉದಾಹರಣೆಯನ್ನು ಎಲ್ಲರೂ ಅನುಸರಿಸಬೇಕು. ಇಷ್ಟೇ ಅಲ್ಲ ಚೈತನ್ಯ ಮಹಾಪ್ರಭುಗಳು ಪುರಿಯಲ್ಲಿ ವಾಸ ಮಾಡುತ್ತಿರುವಾಗ ಹರಿದಾಸ ಠಾಕುರರು ಕೂಡ ಜಗನ್ನಾಥ ಪುರಿಯಲ್ಲಿ ವಾಸ ಮಾಡುತ್ತ ದಿನಕ್ಕೆ ಮೂರು ಲಕ್ಷ ಬಾರಿ ಕೃಷ್ಣನ ನಾಮವನ್ನು ಜಪಿಸುತ್ತಿದ್ದರು. ಇಂತಹ ಜಪ, ಸಾಮಾನ್ಯರಿಗೆ ಸಾಧ್ಯವಿಲ್ಲ.
ಯಾರಿಗೆ ಹರೇಕೃಷ್ಣ ಹರಿನಾಮ ಸಂಕೀರ್ತನೆಯಲ್ಲಿ ರುಚಿ ಉಂಟಾಗಿದೆಯೋ, ಯಾರು ಮುಕ್ತಾತ್ಮರೋ, ಯಾರು ಭಕ್ತಿಯ ಪರಾಕಾಷ್ಠೆಯನ್ನು ಮುಟ್ಟಿದ್ದಾರೋ, ಅಂಥವರು ಮಾತ್ರ ಈ ರೀತಿಯಲ್ಲಿ ನಾಮ ಸಂಕೀರ್ತನೆ ಮಾಡಲು ಸಾಧ್ಯ. ಅವರು – ಹರಿದಾಸ ಠಾಕುರರು ಅನೇಕ ಜನರಿಗೆ ಹರಿನಾಮ ಸಂಕೀರ್ತನೆಯ ಬೋಧನೆ ಮಾಡಿದರು.
ಅವರು ಬೋಧನೆಯನ್ನೂ ಮಾಡಿದರು, ಪ್ರಚಾರ ಮಾಡಿದರು. ಆಚಾರವನ್ನೂ ಮಾಡಿದರು, ಮತ್ತೆ ಎಲ್ಲ ರೀತಿಯಲ್ಲಿ ಹರೇಕೃಷ್ಣ ಮಂತ್ರದ ತತ್ತ್ವವನ್ನು ಕೂಡ ಚೈತನ್ಯ ಮಹಾಪ್ರಭುಗಳೊಂದಿಗೆ ಚರ್ಚೆ ಮಾಡುವಾಗ ಹರಿನಾಮ ಮಂತ್ರದ ತತ್ತ್ವವನ್ನು ಕೂಡ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಮಹಾಪ್ರಭುಗಳು ಅವರಿಗೆ ನಾಮಾಚಾರ್ಯ ಎಂಬ ಹೆಸರು ಕೊಟ್ಟರು.
ಈ ಬಗೆಯಲ್ಲಿ ಚೈತನ್ಯ ಮಹಾಪ್ರಭುಗಳು ಅನೇಕ ಸಾಮಾಜಿಕ ಸುಧಾರಣೆಯನ್ನು ಮಾಡಿದ್ದಾರೆ. ಮುಖ್ಯವಾಗಿ ಜನ್ಮತಃ ಜಾತಿಪದ್ಧತಿಯನ್ನು ಆಚರಿಸುವುದನ್ನು ಚೈತನ್ಯ ಮಹಾಪ್ರಭುಗಳು ವಿರೋಧಿಸಿದರು. ಗುಣವನ್ನು ಗಮನಿಸಬೇಕು ಹೊರತು ಜಾತಿಯನ್ನಲ್ಲ ಎಂದು ಸ್ಪಷ್ಟವಾಗಿ ಅವರು ಸಾರಿದರು.
ಏಕೆಂದರೆ, ಕೃಷ್ಣ ಕೂಡ ಭಗವದ್ಗೀತೆಯಲ್ಲಿ ಹೇಳಿರುವುದು – ‘ಗುಣಕರ್ಮ ವಿಭಾಗಶಃ’- ” ಚಾತುರ್ವಣ್ಯಮ್ ಮಯಾ ಸೃಷ್ಟ್ಯಮ್ ಗುಣಕರ್ಮ ವಿಭಾಗಶಃ” ” ಗುಣ ಮತ್ತು ಕರ್ಮ’ ಇವುಗಳಿಂದ ನಾವು ವ್ಯಕ್ತಿಯ ಕುರಿತು ನಿರ್ಧಾರ ಮಾಡಬೇಕು ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಅದನ್ನು ಮಹಾಪ್ರಭುಗಳು ಅನುಸರಿಸಿ, ಇತರರಿಗೆ ಮಾರ್ಗದರ್ಶಿಯಾದರು. ಇದು ಅವರ ಸಮಾಜಸುಧಾರಣೆಯ ಬಹುಮುಖ್ಯ ಅಂಶ.
ನಮಸ್ಕಾರ.






Leave a Reply