ಆಪದ್ಬಾಂಧವ ಶ್ರೀಕೃಷ್ಣ-4

ಜಯದ್ರಥನ ಸಂಹಾರ

– ಡಾ|| ಬಿ.ಆರ್. ಸುಹಾಸ್

ಯುದ್ಧದ ಹದಿನಾಲ್ಕನೆಯ ದಿನ ದ್ರೋಣರು ಇಡೀ ಸೈನ್ಯವನ್ನು ಚಕ್ರಶಕಟವ್ಯೂಹದಲ್ಲೂ ಅದರ ಹಿಂಭಾಗದಲ್ಲಿ ಪದ್ಮವ್ಯೂಹದಲ್ಲೂ ಆ ಪದ್ಮವ್ಯೂಹದ ಮಧ್ಯದಲ್ಲಿ ಸೂಚಿವ್ಯೂಹವೆಂಬ ಅತ್ಯಂತ ದುರ್ಗಮವ್ಯೂಹದಲ್ಲೂ ನಿಲ್ಲಿಸಿದರು!

ಯುಧಿಷ್ಠಿರನು ಅಂದು ಅರ್ಜುನನಿಗೆ ವಿಜಯ ದೊರಕಿಸಿಕೊಡಬೇಕೆಂದು ಶ್ರೀಕೃಷ್ಣನನ್ನು ಪ್ರಾರ್ಥಿಸಲು, ಕೃಷ್ಣನು ಅವನಿಗೆ ಆಶ್ವಾಸನೆಯಿತ್ತನು. ಅರ್ಜುನನು ರಾತ್ರಿ ತನಗಾದ ವಿಚಿತ್ರ ಸ್ವಪ್ನವನ್ನು ಎಲ್ಲರಿಗೂ ವಿವರಿಸಿ ಆನಂದವುಂಟುಮಾಡಿದನು.

ಯುದ್ಧವು ಆರಂಭವಾಯಿತು! ದ್ರೋಣರು, ಜಯದ್ರಥನನ್ನು ಭೂರಿಶ್ರವಸ, ಕರ್ಣ, ಅಶ್ವತ್ಥಾಮ, ಶಲ್ಯ, ವೃಷಸೇನ, ಮತ್ತು ಕೃಪ ಈ ಆರು ಮಹಾರಥರ ಮತ್ತು ಅವರ ಹಿಂದಿನ ಲಕ್ಷಾಂತರ ಸೈನಿಕರ ಹಿಂದೆ ನಿಲ್ಲಿಸಿ, ವ್ಯೂಹರಕ್ಷಣೆಗಾಗಿ ತಾವೇ ವ್ಯೂಹದ ಮುಂಭಾಗದಲ್ಲಿ ನಿಂತಿದ್ದರು.

ಅರ್ಜುನನು, ದುರ್ಯೋಧನ, ದುರ್ಮಷಣ, ದುಶ್ಯಾಸನ, ಮೊದಲಾದ ವೀರರನ್ನೂ ಅವರ ಸೈನ್ಯವನ್ನೂ ಹಿಮ್ಮೆಟ್ಟಿಸುತ್ತಾ ವ್ಯೂಹದೊಳಗೆ ಪ್ರವೇಶಿಸಿದನು. ಆಗ ಅವನು ತನಗೆದುರಾದ ದ್ರೋಣರಿಗೆ ನಮಸ್ಕರಿಸಿ ಆರ್ಶೀವಾದ ಬೇಡಲು, ಅವರು ತಮ್ಮೊಡನೆ ಯುದ್ಧ ಮಾಡದೇ ಮುಂದೆ ಹೋಗುವಂತಿಲ್ಲ ಎಂದರು!

ಅರ್ಜುನನು ಅವರೊಡನೆ ಕಾದತೊಡಗಿದನು; ಆದರೆ ಸಮಯ ವಿಳಂಬವಾಗುತ್ತಿದ್ದುದನ್ನು ಗಮನಿಸಿ ಕೃಷ್ಣನು, “ಪಾರ್ಥ! ಇಂಥ ಸಮಯದಲ್ಲಿ ನಾವು ಈ ಬ್ರಾಹ್ಮಣನೊಂದಿಗೆ ಕಾದುತ್ತಾ ಕಾಲಕಳೆಯಬಾರದು; ಮುಂದೆ ಹೋಗೋಣ…!”

“ನಿನ್ನಿಚ್ಛೆ ಕೃಷ್ಣ!’ ಅರ್ಜುನನೆಂದನು.

ಕೃಷ್ಣನು ರಥವನ್ನು ದ್ರೋಣರ ಸುತ್ತಲೂ ಪ್ರದಕ್ಷಿಣೆಯಂತೆ ಮುನ್ನಡೆಸಿ ಮುಂದೆ ಹೊರಟುಬಿಟ್ಟನು! ಆಗ ದ್ರೋಣರು, ಹೇ ಪಾರ್ಥ ಏನಿದು? ಶತ್ರುವನ್ನು ಜಯಿಸದೇ ಹೋಗುತ್ತಿರುವೆಯಾ?” ಎಂದು ಕೂಗಲು ಅರ್ಜುನನು, “ತಾವು ನನ್ನ ಗುರುಗಳು, ಶತ್ರುಗಳಲ್ಲ! ಮೇಲಾಗಿ ತಮ್ಮನ್ನು ಜಯಿಸುವ ಗಂಡು ಈ ಲೋಕದಲ್ಲೇ ಇಲ್ಲ!” ಎಂದು ಚಮತ್ಕಾರದಿಂದ ಉತ್ತರಿಸಿ ಮುಂದೆ ಹೋದನು!

ಮುಂದೆ ಮುಂದೆ ಸಾಗಿದ ಅರ್ಜುನನು ಹಲವಾರು ಯೋಧರನ್ನು ಸೋಲಿಸಿ, ಕೆಲವರನ್ನು ಸಂಹರಿಸಿ ಜಯದ್ರಥನನ್ನು ಹುಡುಕುತ್ತಾ ಹೊರಟನು. ಆದರೆ ಆಗ ಅವನು ಕುದುರೆಗಳು ಗಾಯಗೊಂಡು ಬಹಳ ಬಳಲಿದ್ದುದನ್ನು ಗಮನಿಸಿ ಕೃಷ್ಣನಿಗೆ ಹೇಳಿದನು, ‘ಕೃಷ್ಣ ಬಳಲಿರುವ ನಮ್ಮ ಕುದುರೆಗಳನ್ನು ಸ್ವಲ್ಪ ಉಪಚರಿಸೋಣ; ನಾನು ನೆಲದ ಮೇಲೆಯೇ ನಿಂತು ಯುದ್ಧ ಮಾಡುತ್ತಿರುತ್ತೇನೆ!’

ಶ್ರೀಕೃಷ್ಣನು ಒಪ್ಪಲು, ಅರ್ಜುನನು ರಥದಿಂದಿಳಿದು ನೆಲದ ಮೇಲೆಯೇ ನಿಂತು ಕೌರವ ಸೈನಿಕರನ್ನು ತಡೆದನು! ಆಗ ಶ್ರೀಕೃಷ್ಣನು ಕುದುರೆಗಳನ್ನು ರಥದಿಂದ ಬಿಚ್ಚಿ ಉಪಚರಿಸುತ್ತಾ ಅವುಗಳ ಮೈಗಳಿಗೆ ನೆಟ್ಟಿದ್ದ ಬಾಣಗಳನ್ನು ತೆಗೆದುಹಾಕಿ ಅವುಗಳಿಗೆ ಕುಡಿಯಲು ನೀರು ಬೇಕೆಂದು ಅರ್ಜನನನ್ನು ಕೇಳಿದನು;

ಅದ್ಭುತಪರಾಕ್ರಮಿಯಾದ ಅರ್ಜುನನು ಕೂಡಲೇ ಒಂದು ಅಸ್ತ್ರವನ್ನು ಪ್ರಯೋಗಿಸಿ ಸುಂದರ ಕಮಲಪುಷ್ಪಗಳಿಂದಲೂ ಹಂಸ ಕಾರಂಡಕ ಪಕ್ಷಿಗಳಿಂದಲೂ ಕೂಡಿದ್ದ ಶುಭ್ರಜಲದ ನಯನಮನೋಹರ ಸರೋವರವನ್ನೇ ನಿರ್ಮಿಸಿಬಿಟ್ಟನು! ಅಷ್ಟೇ ಅಲ್ಲದೇ ಬಾಣಗಳಿಂದಲೇ ಒಂದು ಮನೆಯನ್ನು ಕಟ್ಟಿದನು!

ಈ ಅದ್ಭುತವನ್ನು ನೋಡಲು ನಾರದರೇ ಧರೆಗಿಳಿದು ಬಂದರು! ಶ್ರೀಕೃಷ್ಣನು “ಭಲೇ! ಭಲೇ!” ಎಂದು ಅರ್ಜುನನನ್ನು ಹೊಗಳುತ್ತಾ ಕುದುರೆಗಳಿಗೆ ನೀರು ಕುಡಿಸಿ ಶರಗೃಹದೊಳಗೆ ಕರೆದೊಯ್ದು ಅವುಗಳನ್ನು ತೀಡುತ್ತಾ ಹುಲ್ಲು, ಹುರಳಿಗಳನ್ನು ತಿನ್ನಿಸಿ ಉಪಚರಿಸಿದನು! ಆ ಸಮಯದಲ್ಲಿ ಅರ್ಜುನನು ನೆಲದ ಮೇಲೆಯೇ ನಿಂತು ಯುದ್ಧ ಮಾಡುತ್ತಾ ಕೌರವ ಸೈನಿಕರನ್ನು ಹಿಮ್ಮೆಟ್ಟಿಸಿದನು!

ಸ್ವಲ್ಪವೂ ಭಯಪಡದೇ, ರಣರಂಗದ ಮಧ್ಯದಲ್ಲಿ, ಹಿಂದೆ ಯಾರೂ ಮಾಡಿರದ, ಮುಂದೆ ಯಾರೂ ಮಾಡಲಾಗದ ಅದ್ಭುತ ಕಾರ್ಯವನ್ನು ಮಾಡಿ ಕೃಷ್ಣಾರ್ಜುನರು ಜಯದ್ರಥನನ್ನು ಹುಡುಕಿಕೊಂಡು ಹೊರಡುವುದನ್ನು ಕಂಡು ಕೌರವ ಸೈನಿಕರು ದಿಗ್ಭ್ರಾಂತರಾದರು!

ಹೀಗೆ ಅವರು ಮುಂದೆ ಹೋಗುತ್ತಾ ಇನ್ನೇನು ಜಯದ್ರಥನನ್ನು ಸಮೀಪಿಸುವಷ್ಟರಲ್ಲಿ ದುರ್ಯೋಧನನು ಅವರನ್ನು ತಡೆದನು! ಆಗ ಕ್ರುದ್ಧನಾದ ಕೃಷ್ಣನು, ‘ಈ ಅನರ್ಥಕ್ಕೆಲ್ಲಾ ಇವನೇ ಕಾರಣ; ಈಗ ತಾನಾಗಿಯೇ ಬಂದಿದ್ದಾನೆ! ಕೊಂದುಬಿಡು ಅವನನ್ನು…!” ಎನ್ನಲು, ಅರ್ಜುನನು ಅಂತೆಯೇ ದುರ್ಯೋಧನನೊಡನೆ ಯುದ್ಧಮಾಡಿದರೂ ಅವನ ಬಾಣಗಳು ದುರ್ಯೋಧನನ ಶರೀರವನ್ನೂ ಮುಟ್ಟಲಿಲ್ಲ!

”ಇದೇನಿದು ಪಾರ್ಥ! ನಿನ್ನ ಬಾಣಗಳು ಅವನನ್ನು ಒಂದಿಷ್ಟೂ ಗಾಯಗೊಳಿಸುತ್ತಿಲ್ಲ…” ಕೃಷ್ಣನು ಆಶ್ಚರ್ಯವನ್ನು ವ್ಯಕ್ತಪಡಿಸಿದನು!

‘ದ್ರೋಣಾಚಾರ್ಯರು ಅವನಿಗೊಂದು ಅಭೇದ್ಯ ಕವಚ ತೊಡಿಸಿದ್ದಾರೆ… ಆದ್ದರಿಂದ ಹೀಗೆ!” ಎಂದು ಅರ್ಜುನನು ಈಗ ದುರ್ಯೋಧನನ ರಥಾಶ್ವಸಾರಥಿಗಳನ್ನೂ ಧನುಸ್ಸನ್ನೂ ಕತ್ತರಿಸಿ ಚೂರು ಚೂರು ಮಾಡಿ ಅವನ ಅಂಗೈಗಳಿಗೂ ಉಗುರಗಳ ಕೆಳಗೂ ಬಾಣಗಳಿಂದ ಪ್ರಹರ್ಷಿಸಿ ಬಹಳ ನೋಯಿಸಿದನು! ದುರ್ಯೋಧನನು ಪಲಾಯನ ಮಾಡಿದನು!

ಈಗ ಅರ್ಜುನನು ಭೂರಿಶ್ರವಸು, ಶಲ್ಯ, ಕರ್ಣ, ಅಶ್ವತ್ಥಾಮ, ಕೃಪ, ವೃಷಸೇನ, ಮೊದಲಾದ ಮಹಾರಥರೊಡನೆ ಏಕಾಂಗಿಯಾಗಿಯೇ ಭಯಂಕರವಾಗಿ ಯುದ್ಧ ಮಾಡತೊಡಗಿದನು!

ಇತ್ತ ದ್ರೋಣರು ಯುಧಿಷ್ಠಿರನನ್ನು ಪರಾಜಯಗೊಳಿಸಿ ಇನ್ನೇನು ಅವನನ್ನು ಸೆರೆಹಿಡಿಯುವಷ್ಟರಲ್ಲಿ ಅವನು ಸಹದೇವನ ರಥವನ್ನು ಹತ್ತಿ ಪಲಾಯನ ಮಾಡಿದನು! ಅನಂತರ ಅವನು ಅರ್ಜುನನ ಬಗ್ಗೆ ಆತಂಕಗೊಂಡು ಸಾತ್ಯಕಿಯನ್ನು ಅರ್ಜುನನ ಬಳಿ ಹೋಗಲು ಕೇಳಿಕೊಂಡನು.

ಸಾತ್ಯಕಿಯು ಒಪ್ಪಿ ಮುಂದೆ ಹೊರಟನು; ದ್ರೋಣಸಹಿತವಾದ ಮಹಾಸೈನ್ಯವನ್ನು ಭೇದಿಸಿಕೊಂಡು ಅರ್ಜುನನಿದ್ದ ಸ್ಥಳಕ್ಕೆ ಆಗಮಿಸಿದನು. ಇದನ್ನು ನೋಡಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು, “ಪಾರ್ಥ! ನೋಡು, ನಿನ್ನ ಸಖನೂ ಪ್ರಿಯಶಿಷ್ಯನೂ ಆದ ಯಾದವ, ಸಾತ್ಯಕಿ, ನಿನ್ನತ್ತಲೇ ಬರುತ್ತಿದ್ದಾನೆ! ಯುಧಿಷ್ಠಿರನು ಅವನನ್ನು ನಿನಗಾಗಿ ಕಳಿಸಿದ್ದಾನೆ…! ಏಕಾಂಗಿಯಾಗಿಯೇ ಅವನು ಕೌರವ ಸೈನ್ಯವನ್ನು ಬಗ್ಗು ಬಡಿದು ಬರುತ್ತಿದ್ದಾನೆ…!’

“ಆದರೆ ಅವನೀಗ ಇಲ್ಲಿಗೆ ಬರಬಾರದಿತ್ತು… ನಾನವನನ್ನು ಅಣ್ಣನ ರಕ್ಷಣೆಗೆಂದೇ ನೇಮಿಸಿದ್ದೆ…”, ಅರ್ಜುನನು ವಿಷಾದದಿಂದ ನುಡಿದನು.

ಅವರಿಬ್ಬರೂ ಹೀಗೆ ಮಾತನಾಡುತ್ತಿರುವಾಗಲೇ ಭೂರಿಶ್ರವಸುವು ಸಾತ್ಯಕಿಯ ಮೇಲೆ ಎರಗಿದನು! ಇಬ್ಬರಿಗೂ ಘೋರ ಯುದ್ಧವು ನಡೆಯಿತು. ಬಹಳ ಬಳಲಿದ್ದ ಸಾತ್ಯಕಿಯು ರಥಾಯುಧಗಳನ್ನು ಕಳೆದುಕೊಂಡು ಭೂರಿಶ್ರವಸಿನೊಡನೆ ಮಲ್ಲಯುದ್ಧದಲ್ಲಿ ತೊಡಗಿದನು!

ಆಗ ಭೂರಿಶ್ರವಸುವು ಸಾತ್ಯಕಿಯನ್ನು ನೆಲಕ್ಕೆ ಕೆಡವಿ ಅವನ ಎದೆಗೆ ಒದ್ದು ಅವನ ಕೇಶವನ್ನು ಹಿಡಿದಳೆದು ಶಿರಚ್ಛೇದನ ಮಾಡಲು ಖಡ್ಗವನ್ನು ಸೆಳೆದನು! ಇದನ್ನು ನೋಡಿದ ಕೃಷ್ಣನು ಕೂಡಲೇ ಅರ್ಜುನನನ್ನು ಎಚ್ಚರಿಸಿದನು, “ಪಾರ್ಥ! ನಿನ್ನ ಸಲುವಾಗಿ ಬಂದ ಸಾತ್ಯಕಿಯ ಗತಿ ಏನಾಗುತ್ತಿದೆ ನೋಡು…!

ಅವನನ್ನು ಎಲ್ಲರೂ ಸತ್ಯಪರಾಕ್ರಮನೆನ್ನುತ್ತಾರೆ! ಆದರೆ ಅವನೀಗ ಸತ್ತರೆ ಪರಾಕ್ರಮವೆಂಬುದೇ ಇಲ್ಲವಾದಂತಾಗುತ್ತದೆ! ಆದ್ದರಿಂದ ಅವನನ್ನು ಬೇಗ ಉಳಿಸು…!”

ಅರ್ಜುನನು ಕೂಡಲೇ ಒ೦ದು ಬಾಣದಿಂದ ಖಡ್ಗ ಹಿಡಿದಿದ್ದ ಭೂರಿಶ್ರವಸುವಿನ ತೋಳನ್ನು ಕತ್ತರಿಸಿದನು! ಇದಕ್ಕಿದಂತೆ ತೋಳು ಕಳೆದುಕೊಂಡ ಭೂರಿಶ್ರವಸು ಸಾತ್ಯಕಿಯನ್ನು ಕೊಲ್ಲಲಾರದೇ ಅವನ ಕೇಶವನ್ನು ಬಿಟ್ಟನು. ಸಾತ್ಯಕಿಯ ಪಾಲಿಗೆ ಕೃಷ್ಣನು  ಆಪದ್ಭಾಂಧವನೇ ಆಗಿದ್ದನು!

ಪರಮಕ್ರುದ್ಧನಾದ ಭೂರಿಶ್ರವಸುವು ಅರ್ಜುನನ ಕಡೆಗೆ ತಿರುಗಿ ಅವನನ್ನು ನಿಂದಿಸತೊಡಗಿದನು, “ಹೇ ಪಾರ್ಥ! ನೀನು ಇಂತ ನೀಚ ಕಾರ್ಯ ಮಾಡುವೆಯಾ…? ಇಂಥ ಕಾರ್ಯವನ್ನು ನೀನು ಯಾರಿಂದ ಕಲಿತೆ? ಇಂದ್ರನಿಂದಲೇ? ರುದ್ರನಿ೦ದಲೇ? ದ್ರೋಣಕೃಪರಿಂದಲೇ?

ಇನ್ನಾರೊಡನೋ ಯುದ್ಧ ಮಾಡುತ್ತಿದ್ದ ನನ್ನನ್ನು ನನಗೆ ತಿಳಿಯದೆಯೇ ಪ್ರಹರಿಸಿದೆಯಲ್ಲಾ..?! ಧರ್ಮರಾಜನ ಬಳಿ ಹೀಗೆಯೇ ಹೇಳುವೆಯಾ? ಯೋಧರಲ್ಲೇ ಬಹಳ ಶ್ರೇಷ್ಠನಾದ ನಿನಗೆ, ಜಾಗರೂಕನಾಗಿಲ್ಲದ, ಭಯಗೊಂಡಿರುವ, ರಥಹೀನನಾಗಿರುವ, ಪ್ರಾಣ ಭಿಕ್ಷೆ ಬೇಡುತ್ತಿರುವ, ಮತ್ತು ಕಷ್ಟದಲ್ಲಿರುವವನನ್ನು ಪ್ರಹರಿಸಬಾರದೆಂಬ ಯುದ್ಧನೀತಿ ತಿಳಿದಿಲ್ಲವೇ?”

“ನೋಡಿದೆಯಾ…? ನಿನ್ನ ಬಾಯಲ್ಲೇ ಯುದ್ಧನೀತಿಯ ಮಾತು…!’ ಅರ್ಜುನನು ಪ್ರತ್ಯುತ್ತರಿಸಿದ, “ಅದನ್ನು ಈಗ ನೀನು ಪಾಲಿಸುತ್ತಿದ್ದೆಯಾ? ಬಳಲಿ ಬೆಂಡಾಗಿ ರಥಹೀನನಾಗಿದ್ದ ಸಾತ್ಯಕಿಯನ್ನು ನೀನೇ ಈಗ ಕೊಲ್ಲುವುದರಲ್ಲಿದ್ದೆ…!

ನನ್ನ ಸಲುವಾಗಿ ದುರ್ಗಮವಾದ ವ್ಯೂಹವನ್ನು ಭೇದಿಸಿಕೊಂಡು ಬ೦ದಿದ್ದ ಅವನು ಬಹಳ ಬಳಲಿ ನಿರುತ್ಸಾಹಿಯಾಗಿದ್ದನು! ಅಂಥವನನ್ನು ಧಿಡೀರನೇ ಆಕ್ರಮಿಸಿ ಕೊಲ್ಲಹೊರಟಿದ್ದು ಸರಿಯೇ? ಯುದ್ಧವೆಂದ ಮೇಲೆ ಕೇವಲ ಇಬ್ಬರಿಗೆ ಮಾತ್ರ ಸೀಮಿತವಾಗಿರಬೇಕಿಲ್ಲ.

ಆದ್ದರಿಂದ ನಾನು ಮಧ್ಯೆ ಪ್ರವೇಶಿಸಿದ್ದು ತಪ್ಪೇನಿಲ್ಲ. ನನ್ನ ನೆಚ್ಚಿನ ಶಿಷ್ಯನೂ ನನ್ನ ಬಲಗೈಯಂತೆಯೂ ಇರುವ ಸಾತ್ಯಕಿಯು ಕೊಲೆಯಾಗುವುದನ್ನು ನೋಡುತ್ತಾ ನಾನು ಸುಮ್ಮನಿದ್ದಿದ್ದರೆ ಮೂರ್ಖನಾಗುತ್ತಿದ್ದೆ! ಆದ್ದರಿಂದ, ರಕ್ಷಿಸಬೇಕಾದ ಅವನನ್ನು ನಾನು ರಕ್ಷಿಸಿದೆ!”

ಅರ್ಜುನನ ಮಾತುಗಳನ್ನು ಕೇಳಿ ಮುಂದೇನೂ ಹೇಳಲಾಗದ ಭೂರಿಶ್ರವಸುವು ಆ ರಣರಂಗದಲ್ಲೇ ಪ್ರಾಯೋಪವೇಶ ಮಾಡುತ್ತ ದೇಹತ್ಯಾಗ ಮಾಡಲು ನಿರ್ಧರಿಸಿದ; ತನ್ನ ಎಡಗೈಯಿಂದಲೇ ಬಾಣಗಳ ಆಸನವೊಂದನ್ನು ಮಾಡಿ ಅದರ ಮೇಲೆ ಕುಳಿತು ಪರಬ್ರಹ್ಮನನ್ನು ಧ್ಯಾನಮಾಡತೊಡಗಿದನು!

ಇದನ್ನು ನೋಡಿ ಕೌರವ ವೀರರು ಕೃಷ್ಣಾರ್ಜುನರನ್ನು ನಿಂದಿಸಲಾರಂಭಿಸಿದರು. ಆಗ ಅರ್ಜುನನು ಅವರನ್ನು ಉದ್ದೇಶಿಸಿ ಹೇಳಿದನ್ನು “ರಾಜರೇ, ನನ್ನ ವ್ರತದ ಬಗ್ಗೆ ನೀವು ತಿಳಿದಿರುವಿರಿ; ಆದರೂ ಹೇಳುತ್ತೇನೆ!

ನನ್ನ ಬಾಣವ್ಯಾಪ್ತಿಯ ಪ್ರದೇಶದಲ್ಲಿರುವ ನನ್ನ ಯಾವ ಆತ್ಮೀಯರನ್ನೂ ಯಾರೂ ಸಂಹರಿಸದಂತೆ ನೋಡಿಕೊಳ್ಳುವೆನೆಂಬುದು ನನ್ನ ವ್ರತವಾಗಿದೆ! ಆದ್ದರಿಂದ ನನ್ನ ಕಾರ್ಯದಲ್ಲಿ ಅಧರ್ಮವನ್ನೆಣಿಸಬೇಡಿ! ಇಷ್ಟಕ್ಕೂ ರಥ, ಶಸ್ತ್ರ ಕವಚಹೀನನಾಗಿದ್ದ ಬಾಲಕ ಅಭಿಮನ್ಯುವನ್ನು ನೀವು ಒಟ್ಟಾಗಿ ಸೇರಿ ಕೊಂದುದನ್ನು ಸ್ಮರಿಸಿಕೊಳ್ಳಿ! ಭೂರಿಶ್ರವಸುವಿನ ಮೇಲೆ ನನಗೆ ಬಹಳ ಗೌರವವಿದೆ…! ಅವನಿಗೆ ಖಂಡಿತವಾಗಿಯೂ ಉತ್ತಮ ಲೋಕಗಳು ಪ್ರಾಪ್ತವಾಗುತ್ತವೆ!”

ಶ್ರೀಕೃಷ್ಣನೂ ಭೂರಿಶ್ರವಸುವನ್ನು ಆಶೀರ್ವದಿಸಿದನು, “ಎಲೈ ಯಜ್ಞಶಿಷ್ಟನಾದ ಭೂರಿಶ್ರವಸುವೇ, ಬ್ರಹ್ಮರುದ್ರಾದಿ ದೇವತೆಗಳೂ ಯಾವ ನನ್ನ ದಿವ್ಯ ಲೋಕಗಳಿಗೆ ಹೋಗಲು ಇಚ್ಛಿಸುವರೋ, ನೀನು ಅಂಥ ಲೋಕಗಳಿಗೆ ಗರುಡನನ್ನೇರಿ ಬೇಗನೆ ಹೋಗು!”

ಬಾಹ್ಲೀಕರಾಜ ಸೋಮದತ್ತನ ಮಗನಾದ ಭೂರಿಶ್ರವಸು ಕೃಷ್ಣಭಕ್ತನೇ ಆಗಿದ್ದರೂ ಯುದ್ಧನಿಮಿತ್ತವಾಗಿ ಶತ್ರುಪಕ್ಷದಲ್ಲಿದ್ದನು. ಇದಕ್ಕೆ ಕಾರಣವೂ ಇತ್ತು. ಹಿಂದೆ, ದೇವಕಿಯ ಸ್ವಯಂವರ ನಡೆದಾಗ, ವಸುದೇವನಿಗಾಗಿ ಅವನ ತಮ್ಮಶಿನಿಯು ದೇವಕಿಯನ್ನು ತನ್ನ ರಥದಲ್ಲಿ ಕೂರಿಸಿಕೊಂಡನು.

ಇದರಿಂದ ಕ್ರುದ್ಧನಾದ ಸೋಮದತ್ತನು ಅವನೊಂದಿಗೆ ಯುದ್ಧ ಮಾಡಿದಾಗ, ಶಿನಿಯು ಸೋಮದತ್ತನನ್ನು ಸೋಲಿಸಿ ಎಲ್ಲರ ಮುಂದೆ ಒದ್ದು ಅವಮಾನಿಸಿ ಪ್ರಾಣವನ್ನು ಮಾತ್ರ ಉಳಿಸಿದನು! ಸೇಡಿಗಾಗಿ ಸೋಮದತ್ತನು ರುದ್ರನನ್ನು ಘೋರ ತಪಸ್ಸಿನಿಂದ ಒಲಿಸಿಕೊಂಡು, ಅನೇಕ ರಾಜರ ಮುಂದೆ, ಶಿನಿಯ ಮಗನನ್ನು ಒದೆಯಬಲ್ಲ ಪುತ್ರನನ್ನು ಕರುಣಿಸುವಂತೆ ವರ ಪಡೆದನು. ಅದರ ಫಲವೇ ಈ ಭೂರಿಶ್ರವಸು, ಮತ್ತು ಅವನಿಂದಾದ ಸಾತ್ಯಕಿಯ ಸೋಲು ಮತ್ತು ಒದೆತ!

ಶ್ರೀಕೃಷ್ಣನು ಭೂರಿಶ್ರವಸುವಿಗೆ ವೈಕುಂಠಲೋಕವನ್ನೇ ದಯಪಾಲಿಸಿದನು!

ಈಗ ಚೇತರಿಸಿಕೊಂಡ ಸಾತ್ಯಕಿಯು ಒಂದು ಅಚಾತುರ್ಯವನ್ನು ಮಾಡಿಬಿಟ್ಟನು! ಕೈಯಲ್ಲಿ ಖಡ್ಗವನ್ನು ಹಿಡಿದು, ಸೈನಿಕರೂ ಕೃಷ್ಣಾರ್ಜುನರೂ ಬೇಡ ಬೇಡವೆನ್ನುತ್ತಿದ್ದರೂ ಕೇಳದೇ, ಯೋಗಾರೂಢನಾಗಿದ್ದ ಭೂರಿಶ್ರವಸುವಿನ ತಲೆಯನ್ನು ಕತ್ತರಿಸಿಬಿಟ್ಟನು!

ಕೌರವರೆಲ್ಲರೂ ನಿಂದಿಸುತ್ತಿರಲು, ಅವನು, “ನಾನು ಮಾಡಿದ್ದು ಅಧರ್ಮವೆನ್ನುವ ಧರ್ಮದ ಸೋಗಿನವರೇ…! ನೀವು ಹೇಗೆ ಅಭಿಮನ್ಯುವನ್ನು ಕೊಂದಿರೆಂದು ಸ್ಮರಿಸಿಕೊಳ್ಳಿ…! ನಾನಾದರೂ, ನನ್ನನ್ನು ಕಾಲಿನಿಂದ ಒದ್ದವನನ್ನು ಅವನು ಯಾರಾದರೂ ಸರಿ, ಕೊಲ್ಲುವೆನೆಂಬ ಪ್ರತಿಜ್ಞೆ ಮಾಡಿದ್ದೆನು! ಅದನ್ನೀಗ ನೆರವೇರಿಸಿದ್ದೇನಷ್ಟೆ!”

ಕೌರವರು ನಿರುತ್ತರರಾದರು; ಭೂರಿಶ್ರವಸು ಪರಲೋಕಕ್ಕೆ ಪ್ರಯಾಣ ಮಾಡಿದನು.

***

ಸೂರ್ಯನು ಅಸ್ತ೦ಗಮಿಸುತ್ತಿದ್ದನು…! ಸಾತ್ಯಕಿ, ಭೂರಿಶ್ರವಸುಗಳ ಜಗಳದಲ್ಲಿ ಅರ್ಜುನನು ಅದನ್ನು ಗಮನಿಸಿಯೇ ಇರಲಿಲ್ಲ! ಈಗ ಅವನಿಗೆ ಆತಂಕವಾಯಿತು!

”ಕೃಷ್ಣ! ನೋಡು…! ಸೂರ್ಯನು ಅಸ್ತಂಗಮಿಸುತ್ತಿದ್ದಾನೆ…! ನಾವಿನ್ನೂ ಸೈಂಧವನನ್ನು ಸಮೀಪಿಸಿರುವುದಿಲ್ಲ…!’ ಅರ್ಜುನನೆಂದನು.

”ಪಾರ್ಥ’ ಸೈಂಧವನು ಆರು ಮಹಾರಥರ ಮಧ್ಯದಲ್ಲಿ ಅಡಗಿಕೊಂಡಿದ್ದಾನೆ! ಅವರನ್ನು ಪರಾಜಯಗೊಳಿಸದೇ ಅವನನ್ನು ವಧಿಸಲಾಗದು…! ಆದ್ದರಿಂದ ನಾನೊಂದು ಉಪಾಯ ಮಾಡುತ್ತಿದ್ದೇನೆ! ಸೂರ್ಯನಿಗೆ ಆವರಣವುಂಟುಮಾಡಿ ಸೂರ್ಯಾಸ್ತಮವಾದಂತೆ ಮಾಡುತ್ತೇನೆ!

ಆಗ ಜಯದ್ರಥನು ತನ್ನ ಭಯವು ದೂರಾಯಿತೆಂದು ಭಾವಿಸಿ ನೀನು ಅಗ್ನಿಪ್ರವೇಶವನ್ನು ಮಾಡುವುದನ್ನು ನೋಡಬೇಕೆಂದು ತಾನಾಗಿಯೇ ತವಕದಿಂದ ಹೊರಬರುತ್ತಾನೆ! ಆಗ ನೀನು ಅಸ್ತ್ರಾನುಸಂಧಾನ ಮಾಡಿ ಅವನ ಶಿರಚ್ಛೇದನ ಮಾಡಿಬಿಡು! ಸೂರ್ಯಾಸ್ತಮವಾಯಿತೆಂದು ತಪ್ಪು ತಿಳಿಯಬೇಡ!’ ಶ್ರೀಕೃಷ್ಣನು ಹೇಳಿದನು!

ಅನಂತರ, ಮಹಾಯೋಗಿಯೂ ಯೋಗಿಗಳಿಗೆ ಈಶ್ವರನೂ ಆದ ಶ್ರೀಕೃಷ್ಣನು ಯೋಗಬಲದಿಂದ ಸೂರ್ಯನನ್ನು ಮುಚ್ಚಿ ಕತ್ತಲನ್ನುಂಟು ಮಾಡಿ ಬಿಟ್ಟನು! ಸೂರ್ಯಾಸ್ತಮವಾಯಿತೆ೦ದೇ ಭಾವಿಸಿ ಕೌರವಯೋಧರೆಲ್ಲರೂ ಸಂತೋಷದಿಂದ ಗರ್ಜಿಸಲು ಜಯದ್ರಥನು ಹೊರಬಂದು ಸೂರ್ಯನ ಕಡೆಗೆ ಮತ್ತೆ ಮತ್ತೆ ನೋಡತೊಡಗಿದನು!

ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ತೋರಿಸಲು ಅರ್ಜುನನು ಒಡನೆಯೇ ಜಯದ್ರಥನನ್ನು ಸಮೀಪಿಸಿ ತನ್ನ ಬಿಲ್ಲಿಗೆ ಪಾಶುಪತಾಸ್ತ್ರವನ್ನು ಹೂಡಿದನು! ಆಗ ಶ್ರೀಕೃಷ್ಣನು ಪುನಃ ಪಾರ್ಥನಿಗೆ ಹೇಳಿದನು, ”ಅರ್ಜುನ! ಇನ್ನೊಂದು ವಿಚಾರವಿದೆ…! ಜಯದ್ರಥನ ತಂದೆಯಾದ ವೃದ್ದಕ್ಷತ್ರನು ಇವನನ್ನು ಬಹುಕಾಲದ ಬಳಿಕ ಮಗನನ್ನಾಗಿ ಪಡೆದನು!

ಇವನು ಹುಟ್ಟಿದಾಗಲೇ ಅಶರೀರವಾಣಿಯಾಗಿ ವೀರಕ್ಷತ್ರಿಯನೊಬ್ಬನು ಯುದ್ಧದಲ್ಲಿ ಇವರ ಶಿರಚ್ಛೇದನ ಮಾಡುವನೆಂದು ಹೇಳಿತು! ಆಗ ಇವನ ತಂದೆ ಇವನಿಗೊಂದು ವರವಿತ್ತ…! ಯಾರು ಇವನ ತಲೆಯನ್ನು ನೆಲದ ಮೇಲುರುಳಿಸುವರೋ ಅವರ ತಲೆಯೇ ಸಾವಿರ ಹೋಳಾಗಿ ಸಿಡಿಯಲಿ ಎಂಬುದೇ ಆ ವರ ಪಾರ್ಥ,

ಈಗ ಆ ಮುದಿ ವೃದ್ಧಕ್ಷತ್ರನು ಸ್ಯಮಂತಪಂಚಕದ ಹೊರಭಾಗದಲ್ಲಿ ಕುಳಿತು ದುಷ್ಕರ ತಪಸ್ಸನ್ನಾಚರಿಸುತ್ತಿದ್ದಾನೆ! ಆದ್ದರಿಂದ ನೀನು ಸೈಂಧವನ ತಲೆಯನ್ನು ತರಿದ ಕೂಡಲೇ ಇತರ ದಿವ್ಯಾಸ್ತ್ರಗಳಿಂದ ಅದನ್ನು ಕೆಳಬೀಳದಂತೆ ದೂರ ದೂರ ಹಾರಿಸಿ ಆ ವೃದ್ಧಕ್ಷತ್ರನ ತೊಡೆಯ ಮೇಲೆಯೇ ಬೀಳುವಂತೆ ಮಾಡು! ಆಗ ಅವನೇ ಆ ತಲೆಯನ್ನು ಕೆಳಗೆ ಬೀಳಿಸಿ ತಾನೇ ಸಾಯುತ್ತಾನೆ! ನಿನಗೆ ಅಸಾಧ್ಯವಾದುದಾವುದಿದೆ…?”

ಶ್ರೀಕೃಷ್ಣನ ಚತುರೋಪಾಯಗಳಿಗೆ ಬೆರಗಾದ ಅರ್ಜುನನು ಹಾಗೆಯೇ ಮಾಡಿದನು! ಪಾಶುಪತಾಸ್ತ್ರದಿಂದ ಜಯದ್ರಥನ ಶಿರಚ್ಛೇದನ ಮಾಡಿ, ಇತರ ಅಸ್ತ್ರಗಳಿಂದ ಆ ಶಿರವನ್ನು ಹೊಡೆಯುತ್ತಾ ಮೇಲೆ ಮೇಲಕ್ಕೆ ಹಾರಿಸಿ ವೃದ್ಧಕ್ಷತ್ರನ ತೊಡೆಯ ಮೇಲೆ ಬೀಳುವಂತೆ ಮಾಡಿದನು!

ಆದರೆ ಜಪಮಾಡುತ್ತಿದ್ದ ವೃದ್ಧಕ್ಷತ್ರನಿಗೆ ಇದು ತಿಳಿಯದೇ ಸ್ವಲ್ಪ ಹೊತ್ತಿನ ಬಳಿಕ ಥಟ್ಟನೆ ಮೇಲೆದ್ದನು! ಆಗ, ಜಯದ್ರಥನ ತಲೆಯೂ ಕೆಳಗೆ ಬೀಳಲು, ಅವನ ತಲೆಯೂ ಛಿದ್ರಛಿದ್ರವಾಯಿತು!

ಆನಂತರ, ಶ್ರೀಕೃಷ್ಣನು ತಾನು ಸೃಷ್ಟಿಸಿದ್ದ ಕತ್ತಲಿನ ಆವರಣವನ್ನು ತೆಗೆಯಲು, ಸೂರ್ಯನು ಇನ್ನೂ ಅಸ್ತಮಿಸದಿದ್ದುದು ಕಂಡ ಕೌರವ ಯೋಧರು ತಾವು ಮೋಸ ಹೋದವೆಂದು ಶೋಕಿಸಿದರು!

ಭೀಕರ ಪ್ರತಿಜ್ಞೆಯಿಂದಲೂ ವೃದ್ಧಕ್ಷತ್ರನ ವರದ ದೆಸೆಯಿಂದಲೂ ಅರ್ಜುನನು ಮಹಾವಿಪತ್ತಿನಲ್ಲಿ ಸಿಲುಕಿಕೊಳ್ಳುತ್ತಿದನು! ಆಪತ್ಭಾಂಧವ ಶ್ರೀಕೃಷ್ಣನು ಅವನನ್ನು ಪುನಃ ಕಾಪಾಡಿದ್ದನು!

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi