ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಶ್ರೀ ನರಸಿಂಹ ಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಲಕ್ಷಾಂತರ ಭಕ್ತರು ಪ್ರತಿನಿತ್ಯವೂ ಈ ಕ್ಷೇತ್ರಗಳಿಗೆ ಭೇಟಿ ನೀಡಿ ಪುನೀತರಾಗುತ್ತಾರೆ.

ಪ್ರಮುಖ ದಿವ್ಯ ಕ್ಷೇತ್ರಗಳಲ್ಲೊಂದು ಅಹೋಬಲ ಕ್ಷೇತ್ರದ ನರಸಿಂಹ ದೇಗುಲಗಳ ಕಿರುಪರಿಚಯವನ್ನು ನೀಡುತ್ತಿದ್ದೇವೆ.
ಶ್ರೀ ನರಸಿಂಹಾವತಾರ ದೇವೋತ್ತಮ ಪರಮಪುರುಷನ ನಾಲ್ಕನೇ ಅವತಾರ. ಆದಿ ದೈತ್ಯರಾದ ಹಿರಣ್ಯಕಶಿಪು, ಹಿರಣ್ಯಾಕ್ಷರ ಉಪಟಳ ಮಿತಿ ಮೀರಿದಾಗ ಭಗವಂತನು ವರಾಹಾವತಾರ ತಾಳಿ ಹಿರಣ್ಯಾಕ್ಷನನ್ನು ಸಂಹರಿಸಿದ್ದನು. ಉಗ್ರ ತಪಸ್ಸು ನಡೆಸಿ ವಿಚಿತ್ರ ವರಗಳನ್ನು ಪಡೆದಿದ್ದ ಹಿರಣ್ಯಕಶಿಪುವನ್ನು ಮಣಿಸಲು ಆತನು ನರಸಿಂಹನಾಗಿ ಬರಬೇಕಾಯಿತು.
ಶ್ರೀ ನರಸಿಂಹ ಭಕ್ತ ವೈಷ್ಣವರಿಂದ ಲಕ್ಷ್ಮೀ ನರಸಿಂಹ, ಉಗ್ರ ನರಸಿಂಹ, ಯೋಗನರಸಿಂಹ, ಪ್ರಹ್ಲಾದ ನರಸಿಂಹ, ಸಾಲಿಗ್ರಾಮ ಇತ್ಯಾದಿ ಬಗೆಬಗೆಯ ರೂಪಗಳಲ್ಲಿ ಅರ್ಚಿಸಲ್ಪಡುವ ಭಗವಂತ. ಭಾರತದಲ್ಲಿ, ಅದರಲ್ಲೂ ದಕ್ಷಿಣ ಪ್ರಾಂತ್ಯದಲ್ಲಿ ನರಸಿಂಹಾರಾಧನೆ ವ್ಯಾಪಕವಾಗಿದೆ. ಆಂಧ್ರ ಪ್ರದೇಶದಲ್ಲಿರುವ ‘ಅಹೋಬಲಂ’ ಅತ್ಯಂತ ಪ್ರಮುಖ ನರಸಿಂಹ ಕ್ಷೇತ್ರವಾಗಿದೆ.
ಅಹೋಬಲ
ಶ್ರೀಮದ್ ಅಹೋಬಲ ಮಹಾಕ್ಷೇತ್ರ ನಿವಾಸಾಯ ಮಹಾತ್ಮನೇ |
ಅಹಂಕಾರ ವಿನಾಶಾಯ ಆದಿದೇವಾಯ ಮಂಗಳಮ್ ||
ನೂರಾ ಎಂಟು ದಿವ್ಯ ದೇಶಗಳಲ್ಲೊಂದಾಗಿರುವ ‘ಅಹೋಬಲ’ ವು ಸುಪ್ರಸಿದ್ಧ ನರಸಿಂಹ ಕ್ಷೇತ್ರವಾಗಿದೆ. ನವನರಸಿಂಹ ಮೂರ್ತಿಗಳು ಇಲ್ಲಿ ನೆಲೆಸಿರುವುದು ಅಹೋಬಲದ ವೈಶಿಷ್ಟ್ಯ. ಇದನ್ನು ಕುರಿತು ಇಲ್ಲಿನ ಸ್ಥಳ ಪುರಾಣ ಹೀಗೆ ವರ್ಣಿಸಿದೆ:
ಜ್ವಾಲಾ ಅಹೋಬಲ ಮಾಲೋಲ ಕ್ರೋಧ ಕಾರಂಚ ಭಾರ್ಗವಃ |
ಯೋಗಾನಂದ ಛತ್ರವಟ ಪಾವನಃ ನವ ಮೂರ್ತಯಃ ||
ಅಹೋಬಲದ ನವನರಸಿಂಹ ಸ್ವರೂಪಗಳು ಇವು –

1. ಜ್ವಾಲಾನರಸಿಂಹ, 2. ಅಹೋಬಲ ನರಸಿಂಹ, 3. ಮಾಲೋಲ ನರಸಿಂಹ, 4. ಕ್ರೋಧ ನರಸಿಂಹ, 5. ಕಾರಂಚ ನರಸಿಂಹ, 6. ಭಾರ್ಗವ ನರಸಿಂಹ, 7. ಯೋಗಾನಂದ ನರಸಿಂಹ, 8. ಛತ್ರವಟ ನರಸಿಂಹ, 9. ಪಾವನ ನರಸಿಂಹ.
ಇವಲ್ಲದೆ, ಕೆಳಗಿನ ಅಹೋಬಲದಲ್ಲಿ “ಪ್ರಹ್ಲಾದವರದ ಸನ್ನಿಧಿ” ಎಂದು ಪ್ರಖ್ಯಾತವಾಗಿರುವ ಪ್ರಮುಖ ನೃಸಿಂಹ ದೇಗುಲವೂ ಇದೆ. ಜೊತೆಗೆ, ಉಗ್ರಸ್ತಂಭ ಮತ್ತು ಪ್ರಹ್ಲಾದ ಮಟ್ಟು ಎನ್ನುವ ಮತ್ತೆರಡು ದೇಗುಲಗಳೂ ಇವೆ. ಹೀಗೆ ಅಹೋಬಲ ಕ್ಷೇತ್ರವು ನರಸಿಂಹ ಸ್ವಾಮಿಯ ಕೃಪೆಯಿಂದ ತುಂಬಿಹೋಗಿದೆ.
ಸ್ಥಳ ಪುರಾಣ : ಸಿಂಹಾಚಲ ದೇವಾಲಯದ ಸ್ಥಳ ಪುರಾಣದಲ್ಲಿ ವಿವರಿಸಿರುವಂತೆ ಭೂಮಿಯ ಮೇಲಿನ ನಾಲ್ಕು ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಅಹೋಬಲವೂ ಒಂದು. ಇನ್ನುಳಿದವು – ಸಿಂಹಾಚಲ, ಕೃತಶೌಚಮ್ ಮತ್ತು ಹರಮ್ ಪಾಪಮ್. ಈ ದೇವಾಲಯದ ಸ್ಥಳ ಪುರಾಣವನ್ನು ಬ್ರಹ್ಮಾಂಡ ಪುರಾಣದ 1046 ಶ್ಲೋಕಗಳ 10ನೇ ಅಧ್ಯಾಯಗಳಿಂದ ಆಯ್ದುಕೊಳ್ಳಲಾಗಿದೆ. ಇದರ ಕರ್ತೃ ಶ್ರೀ ವೇದವ್ಯಾಸರು. ಅಹೋಬಲವು ರಾಮಾಯಣ, ಮಹಾಭಾರತ, ಕೂರ್ಮ ಪುರಾಣ, ಪದ್ಮಪುರಾಣ ಮತ್ತು ವಿಷ್ಣು ಪುರಾಣಗಳಲ್ಲೂ ಪ್ರಸ್ತಾಪಿಸಲ್ಪಟ್ಟಿದೆ.
ಈ ಪವಿತ್ರ ಕ್ಷೇತ್ರವು ಕೃತಯುಗದಲ್ಲಿ ದೈತ್ಯರಾಜ ಹಿರಣ್ಯ ಕಶಿಪುವಿನ ರಾಜಧಾನಿಯಾಗಿತ್ತು. ಅವನ ಸಂಹಾರಕ್ಕೆಂದೇ ಭಗವಂತನು ಅಹೋಬಲದಲ್ಲಿ ನರಸಿಂಹಾವತಾರ ತಾಳಿ ಆವಿರ್ಭವಿಸಿದನು. ಈ ಕ್ಷೇತ್ರಕ್ಕೆ ವೇದಾಚಲ, ಗರುಡಾಚಲ, ಮತ್ತು ವೀರಕ್ಷೇತ್ರ ಎಂಬ ಹೆಸರುಗಳೂ ಇವೆ. ಇದನ್ನು ಸಿಂಗವೇಲ್ ಕುಂದ್ರಮ್ ಎಂದೂ ಕರೆಯಲಾಗುತ್ತದೆ. ಶ್ರೀ ತಿರುಮಂಗೈ ಆಳ್ವಾರರು ಇಲ್ಲಿನ ನರಸಿಂಹನನ್ನು ಸುತ್ತಿಸಿ ಪಾಶುರಗಳನ್ನು ರಚಿಸಿದ್ದಾರೆ.
ಅಹೋಬಲಕ್ಕೆ ಆ ಹೆಸರು ಬರಲು ಕಾರಣಗಳು ಎರಡು. ಭಗವಂತನು ಇಲ್ಲಿ ನಡೆಸಿದ ಉಗ್ರಕಾಲ ಲೀಲೆಯನ್ನು ಕಂಡ ದೇವತಾಗಣ “ಅಹೋಬಲ” (ಪರಮ ಬಲಶಾಲಿ) ಎಂದು ಸ್ತುತಿಸಿದರು. ಆದ್ದರಿಂದ ಈ ಸ್ಥಳಕ್ಕೆ ಅದೇ ಹೆಸರಾಯಿತು. ಇದನ್ನು ನಿರೂಪಿಸುವ ಶ್ಲೋಕವೊಂದು ಹೀಗಿದೆ:
ಅಹೋವೀರ್ಯಮ್ ಅಹೋಶೌರ್ಯಮ್ ಅಹೋಬಾಹುಃ ಪರಾಕ್ರಮಃ |
ನರಸಿಂಹಮ್ ಪರಮ್ ದೈವಮ್ ಅಹೋಬಿಲಮ್ ಅಹೋಬಲಮ್||
ಅಹೋಬಲವನ್ನು ಅಹೋಬಿಲ ಎಂದೂ ಕರೆಯುವುದುಂಟು. ಇದಕ್ಕೆ ಕಾರಣ, ಅಲ್ಲಿನ ಅತಿದೊಡ್ಡ ಗುಹ. ಗರುಡನು ಭಗವಂತನನ್ನು ಪೂಜಿಸಿ ಜ್ಞಾನೋದಯ ಪಡೆದಿದ್ದು ಇಲ್ಲಿಯೇ. ಬ್ರಹ್ಮದೇವನೂ ಕೂಡ ಭಗವಂತನನ್ನು ಅಹೋಬಿಲ ಮಂತ್ರದಿಂದ ಪೂಜಿಸಿದನೆಂದು ಪ್ರತೀತಿಯಿದೆ.
ಅಲ್ಲದೆ, ರುದ್ರ (ಶ್ರೀ ಮಂತ್ರ ರಾಜಪದ ಸ್ತೋತ್ರ, ಅಹಿರ್ಬುಧ್ನ್ಯ ಸಂಹಿತಾ, ಪಾಂಚರಾತ್ರ ಆಗಮ), ರಾಮ (ವಾಲ್ಮೀಕಿ ರಾಮಾಯಣ) ಮತ್ತು ತಿರುಮಲ ತಿರುಪತಿಯೊಡೆಯನಾದ ವೆಂಕಟೇಶ್ವರಸ್ವಾಮಿ, ಇವರೆಲ್ಲರು ಕೂಡ ಅಹೋಬಲ ನರಸಿಂಹ ದೇವರನ್ನು ಪೂಜಿಸಿದ ಉಲ್ಲೇಖಗಳಿವೆ. ತಮಿಳರು ಅಹೋಬಲ ನರಸಿಂಹಸ್ವಾಮಿಯನ್ನು ‘ಪೆರಿಯ ಪರಿಯ ಪೆರುಮಾಳ್ ” ಎಂದು ಕರೆಯುತ್ತಾರೆ.

ಸತ್ಯಯುಗದಲ್ಲಿ ಮಹಾಮಹಾ ಋಷಿಗಳು, ಸಂತರು ಈ ಸ್ಥಳದಲ್ಲಿ ವಾಸಿಸುತ್ತಿದ್ದರು. ಕಲಿಯುಗದಲ್ಲಿ ಪವಿತ್ರ ಕ್ಷೇತ್ರಗಳೆಲ್ಲ ಸಾಮಾನ್ಯ ಜನಪದಗಳಾಗಿ ಬಿಡುತ್ತವೆ ಎಂದು ಮನಗಂಡ ಅವರು ಉತ್ತರ ದಿಕ್ಕಿಗೆ ಹೊರಟು ಹೋದರು ಎಂದು ಐತಿಹ್ಯವಿದೆ.
ಅಹೋಬಲದ ಭೌಗೋಳಿಕ ಸ್ವರೂಪ :
ಶತಶತಮಾನಗಳ ಹಿಂದೆ ತಿರುಮಂಗೈ ಆಳ್ವಾರರು ಸಿಂಗವೇಲ್ ಕುನ್ರಮ್ (ಅಹೋಬಲ)ಕ್ಷೇತ್ರವು ದೇವತೆಗಳಿಗಲ್ಲದೆ ಇನ್ಯಾರಿಗೂ ಸುಲಭಗಮ್ಯವಲ್ಲವೆಂದು ಹಾಡಿದ್ದರು. ಅದು ಇಂದಿಗೂ ಕೂಡ ಸತ್ಯವೆಂದೇ ಹೇಳಬಹುದು. ಏಕೆಂದರೆ, ಇಡಿಯ ಅಹೋಬಲ ಕ್ಷೇತ್ರವು ಘನವಾದ ಗಿಡಗಂಟಿಗಳಿಂದ, ಕಾನನದಿಂದ ಆವೃತವಾಗಿದ್ದು, ದುರ್ಗಮವಾಗಿ ಕಂಗೊಳಿಸುತ್ತದೆ.
ಈ ಕ್ಷೇತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೇಲಿನ ಅಹೋಬಲ, ಕೆಳಗಿನ ಅಹೋಬಲ.
ಮೇಲಿನ ಅಹೋಬಲದಲ್ಲಿ ನವನರಸಿಂಹ ದೇವಾಲಯಗಳಿವೆ. ಕೆಳಗಿನ ಅಹೋಬಲದಲ್ಲಿ ಲಕ್ಷ್ಮಿನರಸಿಂಹ ದೇವಾಲಯವಿದೆ. ಕೆಳ ಅಹೋಬಲದಿಂದ ಮೇಲ್ಭಾಗಕ್ಕೆ ಸಂಪರ್ಕ ಕಲ್ಪಿಸುವ 12-13 ಕಿ.ಮೀ. ರಸ್ತೆಯಿದೆ. ಅಲ್ಲಿಂದ ಇತರ ದೇವಾಲಯಗಳಿಗೆ ಚಾರಣದ ಮೂಲಕವೇ ಸಾಗಬೇಕು.
ಹಾದಿಯುದ್ದಕ್ಕೂ ಧರೆ, ಗುಹೆಗಳು, ಕಾಡು ಇಂತಹ ರುದ್ರರಮಣೀಯ ನಿಸರ್ಗವನ್ನು ಆಸ್ವಾದಿಸಬಹುದು. ಮೇಲಿನ ಅಹೋಬಲದಿಂದ ಮತ್ತೆ 8 ಕಿ. ಮೀ ಮೇಲೆ ಸಾಗಿದರೆ, ಉಗ್ರಸ್ತಂಭ ನರಸಿಂಹ ದೇವಾಲಯ ದರ್ಶನ ಮಾಡಬಹುದು. ಆದರೆ ಈ ಹಾದಿ ಅತ್ಯಂತ ಕಠಿಣ ಮತ್ತು ದುರ್ಗಮ. ಶ್ರೀ ನರಸಿಂಹ ಸ್ವಾಮಿಯು ಸ್ತಂಭದಿಂದ ಆವಿರ್ಭವಿಸಿದ್ದು ಇಲ್ಲಿಯೇ.
ದೇವಾಲಯ ಸನ್ನಿಧಿಗಳ ಕಿರು ವಿವರ :
ಭಾರ್ಗವ ನರಸಿಂಹ ಸನ್ನಿಧಿ : ಈ ದೇಗುಲವು ಕೆಳ ಅಹೋಬಲದಿಂದ ಎರಡು ಕಿ.ಮೀ. ಅಂತರದಲ್ಲಿ ಎದುರಾಗುತ್ತದೆ. ಶ್ರೀ ಪರಶುರಾಮನು ತಪಸ್ಸನ್ನು ಆಚರಿಸಿದ ಪವಿತ್ರ’ ಭಾರ್ಗವ ತೀರ್ಥ’ ದ ಬಳಿಯಲ್ಲೇ ಈ ಸನ್ನಿಧಿಯಿದೆ. ಆ ಕಾರಣದಿಂದಲೇ ಇಲ್ಲಿನ ನರಸಿಂಹ ಮೂರ್ತಿಯನ್ನು ಭಾರ್ಗವ ನರಸಿಂಹ ಸನ್ನಿಧಿ’ ಯೆಂದು ಅರ್ಚಿಸಲಾಗುತ್ತದೆ.

ಯೋಗಾನಂದ ನರಸಿಂಹ ಸನ್ನಿಧಿ : ಈ ದೇಗುಲವು ಕೆಳ ಅಹೋಬಲದ ಆಗ್ನೇಯ ದಿಕ್ಕಿಗೆ ಎರಡು ಕಿ.ಮೀ. ಅಂತರದಲ್ಲಿದೆ. ಈ ಸ್ಥಳದಲ್ಲಿ ಭಗವಾನ್ ನರಸಿಂಹ ಸ್ವಾಮಿಯು ಪ್ರಹ್ಲಾದ ಮಹಾರಾಜನಿಗೆ ವಿವಿಧ ಯೋಗ ವಿಧಾನಗಳನ್ನು ಬೋಧಿಸಿದನೆಂದು ಪ್ರತೀತಿ ಇದೆ. ಈ ಕಾರಣದಿಂದ ಇಲ್ಲಿನ ಮೂರ್ತಿಯನ್ನು ‘ಯೋಗಾನಂದ ನರಸಿಂಹಸ್ವಾಮಿ’ ಎಂದು ಕರೆಯಲಾಗುತ್ತದೆ.
ಛತ್ರವಟ ನರಸಿಂಹ ಸನ್ನಿಧಿ : ಕೆಳ ಅಹೋಬಲದಿಂದ ಮೂರು ಕಿ.ಮೀ ಮೇಲಿದೆ ಈ ಛತ್ರವಟ ನೃಸಿಂಹ ದೇಗುಲ. ಇಲ್ಲಿ ಭಗವಂತನು ಅರಳಿ (ಅಶ್ವತ್ಥ) ವೃಕ್ಷದಡಿಯಲ್ಲಿ ಪ್ರತಿಷ್ಠಾಪನೆಯಾಗಿದ್ದಾನೆ. ದೇವಾಲಯದ ಸುತ್ತದಟ್ಟ ಪೊದೆಗಳಿವೆ. ಅರಳಿ ಮರದ ಕೆಳಗೆ ನೆಲೆಯಾಗಿರುವುದರಿಂದ ಭಗವಂತನು ಇಲ್ಲಿ ಛತ್ರವಟ ನರಸಿಂಹಸ್ವಾಮಿ’ ಎನಿಸಿಕೊಂಡಿದ್ದಾನೆ.
ಅಹೋಬಲ ನರಸಿಂಹ ಸನ್ನಿಧಿ : ಮೇಲಿನ ಅಹೋಬಲದಲ್ಲಿ (ಕೆಳ ಅಹೋಬಲದಿಂದ 8.ಕಿ.ಮೀ. ಮೇಲಕ್ಕೆ) ಈ ದೇಗುಲವಿದೆ. ಇದು ಇಲ್ಲಿನ ಪ್ರಮುಖ ದೇವಾಲಯವೂ ಉಳಿದವೆಲ್ಲಕ್ಕಿಂತ ಪುರಾತನವಾದುದು ಆಗಿದೆ. ಇಲ್ಲಿ ಭಗವಂತನು ತನ್ನ ರೌದ್ರಾವತಾರದಿಂದ “ಉಗ್ರನರಸಿಂಹ”ನಾಗಿ ಆವಿರ್ಭವಿಸಿ, “ಅಹೋಬಲ ನರಸಿಂಹ”ನೆಂದು ಪೂಜಿಸಲ್ಪಡುತ್ತಾನೆ. ಇಲ್ಲಿ ಸ್ವಯಂಭೂವಾಗಿ ಅವತರಿಸುವ ನರಸಿಂಹ ಸ್ವಾಮಿಯು ಅಹೋಬಲದ ಪ್ರಮುಖ ದೇವತೆಯೆನಿಸಿದ್ದಾನೆ.
ಕ್ರೋಧ ನರಸಿಂಹ ಸನ್ನಿಧಿ : ಈ ದೇವಾಲಯವು ಅಹೋಬಲ ನರಸಿಂಹ ದೇವಾಲಯದಿಂದ ಒಂದು ಕಿ.ಮೀ. ದೂರದಲ್ಲಿದೆ. ಇಲ್ಲಿ ನರಸಿಂಹ ಸ್ವಾಮಿಯು ವರಾಹ ಮುಖವನ್ನು ಧರಿಸಿ ಲಕ್ಷ್ಮೀದೇವಿಯೊಂದಿಗೆ ಪ್ರತಿಷ್ಠಾಪಿಸಿದ್ದಾನೆ. ಆದ್ದರಿಂದ ಇಲ್ಲಿ ಭಗವಂತನನ್ನು ಕ್ರೋಧಕರ ನರಸಿಂಹನೆಂದು ಅರ್ಚಿಸಲಾಗುತ್ತದೆ.
ಮಾಲೋಲ ನರಸಿಂಹ ಸನ್ನಿಧಿ : ಮೇಲಿನ ಅಹೋಬಲದ ಪ್ರಮುಖ ದೇವಾಲಯದಿಂದ 2 ಕಿ.ಮೀ. ಅಂತರದಲ್ಲಿ ಪ್ರಖ್ಯಾತವಾದ ಮಾಲೋಲ ನರಸಿಂಹ ದೇಗುಲವಿದೆ. ಇಲ್ಲಿ ನರಸಿಂಹ ಸ್ವಾಮಿಯು ಸೌಮ್ಯ ಮತ್ತು ದಯಾಳುವಾಗಿ ದರ್ಶನ ನೀಡುತ್ತಾನೆ. ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ಪ್ರತಿಷ್ಠಾಪಿತನಾಗಿರುವುದರಿಂದ ‘ಮಾಲೋಲ ನರಸಿಂಹ ಸ್ವಾಮಿ’ ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿನ ಉತ್ಸವ ಮೂರ್ತಿಯು ಶ್ರೀ ಅಹೋಬಲ ಮಠದ ಸಂಸ್ಥಾಪಕರಾದ ಶ್ರೀಮದ್ ಆದಿವನ್ ಶಟ್‌ಕೋಪ ಯತೀಂದ್ರ ಮಹಾದೇಶಿಕರಿಗೆ ದೊರೆತಿದ್ದೆಂದು ಹೇಳಲಾಗುತ್ತದೆ.
ಜ್ವಾಲಾ ನರಸಿಂಹ ಸನ್ನಿಧಿ : ಜ್ವಾಲಾ ನರಸಿಂಹ ದೇವಾಲಯವು ಅಚಲಾಚಲದ ಮೇರು ಗಿರಿಯ ತುದಿಯಲ್ಲಿದೆ. ಇದು ಮೇಲಿನ ಅಹೋಬಲ ದೇವಾಲಯದಿಂದ 4 ಕಿ.ಮೀ ಮೇಲ್ಭಾಗದಲ್ಲಿದೆ. ಈ ಸ್ಥಳದಲ್ಲಿ ಶ್ರೀ ನರಸಿಂಹ ಸ್ವಾಮಿಯ ರೋಷವು ಮಿತಿಮೀರಿ ಹಿರಣ್ಯಕಶಿಪುವಿನ ಕರುಳು ಬಗೆದನೆಂದು ಪ್ರತೀತಿಯಿದೆ. ಈ ಉರಿಯಂತಹ ಕೋಪದ ಕಾರಣಕ್ಕೆ ಇಲ್ಲಿನ ನರಸಿಂಹ ‘ಜ್ವಾಲಾನರಸಿಂಹ’ನಾಗಿದ್ದಾನೆ.
ಪಾವನ ನರಸಿಂಹ ಸನ್ನಿಧಿ : ಜ್ವಾಲಾ ನರಸಿಂಹ ದೇಗುಲದ ಸಮೀಪದಲ್ಲಿಯೇ ಪಾವನ ನರಸಿಂಹ ದೇವಾಲಯವಿದೆ. ಈ ದೇಗುಲವು ‘ಪಾವನ’ ನದಿಯ ತೀರದಲ್ಲಿರುವುದರಿಂದ ಇಲ್ಲಿನ ಶ್ರೀ ನರಸಿಂಹ ಸ್ವಾಮಿಯು ‘ಪಾವನ ನರಸಿಂಹಸ್ವಾಮಿ’ ಎನಿಸಿಕೊಂಡಿದ್ದಾನೆ.
ಕೆಳ ಅಹೋಬಲದ ದೇಗುಲ ಸನ್ನಿಧಿಗಳು

ಪ್ರಹ್ಲಾದ ವರದ ಸನ್ನಿಧಿ : ಭಕ್ತನಾದ ಪ್ರಹ್ಲಾದ ಮಹಾರಾಜನ ಮೇಲೆ ಸುಪ್ರೀತನಾಗಿ ವರದ ಹಸ್ತನಾಗಿರುವ ಶ್ರೀನರಸಿಂಹ ಸ್ವಾಮಿಯು ಇಲ್ಲಿ ಪ್ರಹ್ಲಾದ ವರದ ನರಸಿಂಹಸ್ವಾಮಿ’ ಯಾಗಿದ್ದಾನೆ.
ಉಗ್ರಸ್ತಂಭ ಸನ್ನಿಧಿ : ಮೇಲಿನ ಅಹೋಬಲದಿಂದ 8 ಕಿ.ಮೀ. ದೂರದಲ್ಲಿ ಪರ್ವತವು ಎರಡು ಭಾಗಗಳಾಗಿ ಕವಲೊಡೆದಿರುವುದನ್ನು ಸ್ಪಷ್ಟವಾಗಿ ನಾವು ಗುರುತಿಸಬಹುದು. ಇಲ್ಲಿ ಶ್ರೀನರಸಿಂಹ ಸ್ವಾಮಿಯು ಆವಿರ್ಭವಿಸಿ ಬಂದನೆಂದು ಹೇಳಲಾಗುತ್ತದೆ. ಆದ್ದರಿಂದಲೇ ಇಲ್ಲಿ ನರಸಿಂಹ ಸ್ವಾಮಿಯು ಉಗ್ರಸ್ತಂಭ ನರಸಿಂಹನೆಂದು ಅರ್ಚನೆಗೊಳ್ಳುತ್ತಾನೆ.
ಪ್ರಹ್ಲಾದ ಮೆಟ್ಟು ಸನ್ನಿಧಿ : ಉಗ್ರ ಸ್ತಂಭ ಮತ್ತು ಮೇಲಿನ ಅಹೋಬಲಗಳ ನಡುವೆ ಚಿಕ್ಕ ಗುಹೆಯೊಂದರಲ್ಲಿ ಈ ಸನ್ನಿಧಿಯಿದೆ. ಇದು ಪ್ರಹ್ಲಾದ ನರಸಿಂಹ ಸ್ವಾಮಿಗೆ ಅರ್ಪಿತವಾಗಿರುವ ದೇಗುಲ. ಇಲ್ಲಿನ ಚಿಕ್ಕ ಗುಹೆಯೊಂದರಲ್ಲಿ ಪ್ರಹ್ಲಾದ ಮಹಾರಾಜನ ಚಿತ್ರಪಟವನ್ನಿರಿಸಲಾಗಿದೆ.
ಅಹೋಬಲಕ್ಕೆ ಹೋಗುವ ಮಾರ್ಗ :
ಅಹೋಬಲವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ ತಾಲ್ಲೂಕಿನಲ್ಲಿದೆ. ನಂದ್ಯಾಲದಿಂದ ಅಹೋಬಲಕ್ಕೆ 40 ಕಿ.ಮೀ. ದಾರಿ. ಕರ್ನೂಲಿನಿಂದ ರೈಲು ಸೌಲಭ್ಯವಿದೆ. ಕಡಪದಿಂದಲೂ ಬಸ್ ವ್ಯವಸ್ಥೆಗಳಿವೆ.
ಅಹೋಬಲ ದೇವಾಲಯಗಳು ನಲ್ಲಮಲೈ ಕಾಡುಗಳ ನಡುವೆ ಇರುವುದರಿಂದ ಭಕ್ತರು ಗುಂಪುಗೂಡಿ ಚಾರಣ ಹೋಗುವುದು ಉತ್ತಮ. ನಲ್ಲಮಲೈ ಪರ್ವತ ಶ್ರೇಣಿಯನ್ನು ಆದಿಶೇಷನ ಸ್ವರೂಪಕ್ಕೆ ಹೋಲಿಸಿ, ತಿರುಮಲವು ಶಿರೋಭಾಗವೆಂದೂ, ನಡುವು ಅಹೋಬಲವೆ೦ದೂ, ತುದಿ ಭಾಗವು ಶ್ರೀಶೈಲವೆಂದೂ ಭಕ್ತರು ಭಾವಿಸುತ್ತಾರೆ.
ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ದಕ್ಷಿಣ ಭಾರತ ಯಾತ್ರೆಯ ಸಂದರ್ಭದಲ್ಲಿ ಅಹೋಬಲಕ್ಕೆ ಭೇಟಿ ನೀಡಿದ್ದರು. ಎಲ್ಲ ಬಗೆಯಿಂದಲೂ ಈ ಕ್ಷೇತ್ರವು ಭಕ್ತರ ಅತ್ಯಂತ ಮೆಚ್ಚಿನ ಯಾತ್ರಾಸ್ಥಳವಾಗಿದೆ.
ಪ್ರಮುಖ ನರಸಿಂಹ ಕ್ಷೇತ್ರಗಳು
ಇಲ್ಲಿ ಕೆಲವು ಜನಪ್ರಿಯ ಕ್ಷೇತ್ರಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳು ಹೀಗಿವೆ:
ಅಹೋಬಲಮ್ – ಆಂಧ್ರಪ್ರದೇಶ
ಅಂತರ್ವೇದಿ – ಆಂಧ್ರಪ್ರದೇಶ
ಚಿ೦ತಲವಾಡಿ – ತಮಿಳುನಾಡು
ದೇವರಾಯನ ದುರ್ಗ – ಕರ್ನಾಟಕ
ಘಟಿಕಾಚಲ (ಶೋಲಿಂಗೂರ್)- ತಮಿಳುನಾಡು
ಹೇಮಾಚಲ (ಮಲ್ಲೂರು) – ಆಂಧ್ರ ಪ್ರದೇಶ
ಕದಿರಿ – ಆಂಧ್ರಪ್ರದೇಶ
ಮಂಗಳಗಿರಿ – ಆಂಧ್ರಪ್ರದೇಶ
ಮೇಲುಕೋಟೆ – ಕರ್ನಾಟಕ
ನಾಮಕ್ಕಲ್ – ತಮಿಳುನಾಡು
ನರಸಿಂಹಕೊಂಡ – ಆಂಧ್ರಪ್ರದೇಶ
ನರಸಿಂಹಪುರ – ಮಧ್ಯಪ್ರದೇಶ
ಸಿಂಹಾಚಲ – ಆಂಧ್ರಪ್ರದೇಶ
ಸಾವನದುರ್ಗ – ಕರ್ನಾಟಕ
ಸಾಲಿಗ್ರಾಮ – ಕರ್ನಾಟಕ
ಯಾದಗಿರಿಗುಡ್ಡ – ಆಂಧ್ರಪ್ರದೇಶ
ಕೋಲೆ ನರಸಿಂಹಪುರ – ಮಹಾರಾಷ್ಟ್ರ
ಪೆರಿಕ್ಕಲ್ – ತಮಿಳುನಾಡು
ಗುಧಾ – ರಾಜಸ್ಥಾನ
ವೀರ ನರಸಿಂಹಪುರ – ಮಹಾರಾಷ್ಟ್ರ
ಪೋಖರ್ನಿ – ಮಹಾರಾಷ್ಟ್ರ
ಮುಲ್ತಾನ್( ಮೂಲಸ್ಥಾನ)- ಪಾಕಿಸ್ಥಾನ






Leave a Reply