ಬೇಸಿಗೆ ಬೇಗೆಗೆ ಐಸ್‌ಕ್ರೀಮ್‌ಗಳು

ಕೃಷ್ಣ ಪಾಕಶಾಲೆ

– ಶ್ರೀಮತಿ ಸುಜಾತ ರಾಮಚಂದ್ರ

ಬೇಸಿಗೆ ಕಾಲ ಬಂದರೆ ಐಸ್‌ ಕ್ರೀಮ್ ತಿನ್ನೋಣ ಎನಿಸುವುದು ಸಹಜ. ಸ್ವಾದಿಷ್ಟ ಐಸ್ ಕ್ರೀಮ್ ಎಂದರೆ ಯಾರಿಗಾದರೂ ಬಾಯಲ್ಲಿ ನೀರೂರುತ್ತದೆ. ಯಾವುದೇ ಕಾಲದಲ್ಲಿಯಾಗಲಿ ಐಸ್ ಕ್ರೀಮ್ ಪ್ರಿಯವಾಗುತ್ತದೆ. ರುಚಿಕರ, ಮಧುರ, ಪೌಷ್ಟಿಕವಾದ ಆಹಾರ ಐಸ್ ಕ್ರೀಮ್. ಪ್ರೊಟೀನ್‌ ಭರಿತ ಪದಾರ್ಥಗಳನ್ನು ಬಳಸಿ ಐಸ್ ಕ್ರೀಮ್ ನ್ನು ಹೆಚ್ಚು ಪುಷ್ಟಿಕರವಾದ ಆಹಾರವನ್ನಾಗಿಸಬಹುದು.

ಫ್ರಿಜ್ ಇದ್ದ ಮನೆ ಐಸ್ ಕ್ರೀಮ್’ನ ತವರಿನಂತೆ. ಐಸ್ ಕ್ರೀಮ್ ಗಳು ಹಲವು, ಹತ್ತು ಬಗೆ. ಸಿಹಿಯೊಂದೇ ಆದರೂ ಪದಾರ್ಥಗಳು ಬೇರೆ. ದ್ರಾಕ್ಷಿ, ಗೋಡಂಬಿ, ಚೆರಿ ಮೊದಲಾದವನ್ನು ಬಳಸಿ ಐಸ್‌ಕ್ರೀಮ್ ನ್ನು ಹೆಚ್ಚು ಹೆಚ್ಚು ಆಕರ್ಷಕವನ್ನಾಗಿಸಬಹುದು. ಒಂದಷ್ಟು ಐಸ್‌ ಕ್ರೀಮ್ ಗಳನ್ನು ತಯಾರಿಸುವ ವಿಧಾನವನ್ನು ಪರಿಚಯ ಮಾಡಿಕೊಳ್ಳೋಣ.

ಪೈನಾಪಲ್ ಐಸ್ ಕ್ರೀಮ್

ಬೇಕಾಗುವ ಪದಾರ್ಥಗಳು :

ಅನಾನಸ್ – 1 ದೊಡ್ಡದು

ಹಾಲು – 1/2 ಲೀಟರ್

ಪುಡಿಮಾಡಿದ ಸಕ್ಕರೆ – 1/4 ಕೆ.ಜಿ.

ಸಾಂದ್ರೀಕರಿಸಿದ ಹಾಲು – 2 ಊಟದ ಚಮಚ

ಒಣದ್ರಾಕ್ಷಿ- 10 ಗ್ರಾಂ

ಕೆನೆ -100 ಗ್ರಾಂ

ಗೋಡಂಬಿ, ಬಾದಾಮಿ ಮತ್ತು ಪಿಸ್ತಾ – 25 ಗ್ರಾಂ

ವೆನಿಲ್ಲಾ ಎಸೆನ್ಸ್, ಚೆರ್ರಿಗಳು

ಮಾಡುವ ವಿಧಾನ : ಸಿಪ್ಪೆತೆಗೆದ ಅನಾನಸನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ. ಹಾಲುಕುದಿಸಿ, ಸಕ್ಕರೆ ಬೆರೆಸಿ ಅದು ಕರಗುವವರೆಗೂ ಕಲಕಿ. ಎಸೆನ್ಸ್ ಮತ್ತು ಸಾಂದ್ರೀಕರಿಸಿದ ಹಾಲು ಸೇರಿಸಿ ಕೈಯಾಡಿಸಿ. ತಣ್ಣಗಾದ ಮೇಲೆ ಕೆನೆ, ಅನಾನಸ್ ತುಂಡುಗಳನ್ನು ಸೇರಿಸಿ ಮಿಕ್ಸರಿನಲ್ಲಿ 5 ನಿಮಿಷಗಳ ಕಾಲ ಬೆರೆಯುವಂತೆ ಮಾಡಿ.

ಮಿಶ್ರಣ ಹದಕ್ಕೆ ಬಂದ ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಸುರಿಯಿರಿ. ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಎಲ್ಲಾ ಸಾಮಾನುಗಳನ್ನು ಚೆನ್ನಾಗಿ ಬೆರೆಸಿ ಬಾದಾಮಿ ಮತ್ತು ಪಿಸ್ತಾಗಳಿಂದ ಅಲಂಕರಿಸಿ. ಫ್ರಿಜ್‌ನಲ್ಲಿಟ್ಟು ಹದಮಾಡಿ, ಚೆರ್ರಿಗಳಿಂದ ತುಂಬಿ ತಣ್ಣಗಿರುವಾಗ ಸೇವಿಸಲು ಕೊಡಿ.

ಮಾವಿನ ಹಣ್ಣಿನ ಐಸ್ ಕ್ರೀಮ್

ಬೇಕಾಗುವ ಪದಾರ್ಥಗಳು:

ರಸಭರಿತ ಮಾವಿನಹಣ್ಣು – 6

ಹಾಲು – 1/2 ಲೀಟರ್

ಪುಡಿ ಸಕ್ಕರೆ – 1/4 ಕೆ.ಜಿ

ಸಾಂದ್ರೀಕರಿಸಿದ ಹಾಲು – 2 ಊಟದ ಚಮಚ

ಗೋಡಂಬಿ – 50 ಗ್ರಾಂ (ಕತ್ತರಿಸಿದ್ದು)

ವೆನಿಲ್ಲಾ ಎಸೆನ್ಸ್, ಚೆರ್ರಿಗಳು

ಮಾಡುವ ವಿಧಾನ : ಸಕ್ಕರೆ ಬೆರೆತ ಹಾಲು ಕಾಯಿಸಿ (ನಿಧಾನವಾದ ಉರಿಯಲ್ಲಿ) ಹಾಲು ಸಾಂದ್ರೀಕರಿಸುವವರೆಗೂ ಕಲಕುತ್ತಿರಿ. ವೆನಿಲ್ಲಾ ಎಸೆನ್ಸ್‌ ಮತ್ತು ಸಾಂದ್ರೀಕರಿಸುವವರೆಗೂ ಹಾಲನ್ನು ಸೇರಿಸಿ ಇಡಿ. ಅನಂತರ ಮಾವಿನ ಹಣ್ಣುಗಳ ಸಿಪ್ಪೆ ತೆಗೆದು ಕತ್ತರಿಸಿ ಹೋಳುಮಾಡಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ. ಮಾವಿನ ತಿರುಳನ್ನು ಹಾಲಿನ ಮಿಶ್ರಣಕ್ಕೆ ಸೇರಿಸಿ, ಮಿಶ್ರಣ ಹದಕ್ಕೆ ಬರುವವರೆಗೂ ಕಲಕಿ.

ತುಂಡು ಮಾಡಿದ ಗೋಡಂಬಿಗಳನ್ನು ಸೇರಿಸಿ. ಎಲ್ಲವನ್ನು ಸಣ್ಣ ಸಣ್ಣ ಐಸ್ ಕ್ರೀಮ್ ಬಟ್ಟಲುಗಳಲ್ಲಿ ತುಂಬಿ ಫ್ರಿಜ್ ನಲ್ಲಿಡಿ. ತಣ್ಣಗಾದ ಮೇಲೆ ಚೆರ್ರಿಗಳಿಂದ ಅಲಂಕರಿಸಿ, ಈಗ ಸೇವಿಸಲು ಕೊಡಿ.

ವೆನಿಲ್ಲಾ ಐಸ್ ಕ್ರೀಮ್

ಬೇಕಾಗುವ ಪದಾರ್ಥಗಳು :

ಹಾಲು –  4 ಕಪ್ಪು

ಸಾಂದ್ರೀಕರಿಸಿದ ಹಾಲು – 2 ಕಪ್ಪು ಅಥವಾ ಮಿಲ್ಸ್‌ ಮೇಡ್ – 3/4 ಟಿನ್

ಕಸ್ಟರ್ಡ್ ಪೌಡರ್ – 2 ದೊಡ್ಡ ಚಮಚ

ವೆನಿಲ್ಲಾ ಎಸೆನ್ಸ್ – ಸಣ್ಣ ಚಮಚ

ಮಾಡುವ ವಿಧಾನ : ಮಿಲ್ಕ್‌ಮೇಡ್ ಮತ್ತು ಹಾಲನ್ನು ಬೆರೆಸಿ ಒಂದೇ ಸಮನೆ ಕಲಸುತ್ತಾ ಮರಳಿಸಿ. ಅದಕ್ಕೆ ಹಾಲು ಹಾಗೂ ಕಸ್ಟರ್ಡ್ ಪೌಡರ್‌ನ (1/4 ಕಪ್ ಹಾಲಿನಲ್ಲಿ ಬೆರೆಸಿದ) ಮಿಶ್ರಣವನ್ನು ಹಾಕಿ ಎರಡು ನಿಮಿಷ ಬೇಯಿಸಿ, ಅನಂತರ ಆರಲು ಬಿಡಿ. ಈಗ ವೆನಿಲ್ಲಾ ಎಸೆನ್ಸ್ ಹಾಕಿ ಫ್ರಿಜ್‌ನಲ್ಲಿಡಿ. ಒಂದು ಗ೦ಟೆಯ ಅನಂತರ ಅದನ್ನು ಫ್ರಿಜ್‌ನಿಂದ ಹೊರತೆಗೆದು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ ಮತ್ತೆ ಒಂದೆರಡು ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಅನಂತರ ಸೇವಿಸಿರಿ.

ಸಪೋಟಾ ಐಸ್ ಕ್ರೀಮ್

ಬೇಕಾಗುವ ಪದಾರ್ಥಗಳು :

ಸಕ್ಕರೆ – 150 ಗ್ರಾಂ

ಸಪೋಟ – 1 ಡಜನ್ (12)

ಹಾಲು – I/4 ಲೀಟರ್

ಕಸ್ಟರ್ಡ್ ಪೌಡರ್ – 50 ಗ್ರಾಂ

ವೆನಿಲ್ಲಾ ಎಸೆನ್ಸ್ – 1 ಟೀ ಚಮಚ

ಬಾದಾಮಿ ಪಿಸ್ತಾ – ಅಲಂಕರಿಸಲು

ಮಾಡುವ ವಿಧಾನ : ಒಂದು ಸಣ್ಣ ಬಟ್ಟಲಿನಲ್ಲಿ ಹಾಲು ತೆಗೆದುಕೊಂಡು ಅದಕ್ಕೆ ಕಸ್ಟರ್ಡ್ ಪುಡಿ ಸೇರಿಸಿ. ಒಂದು ಕಡೆ ಇಟ್ಟುಕೊಳ್ಳಿ. ಸಕ್ಕರೆ ಮತ್ತು ಹಾಲು ಬೆರೆಸಿ ಕುದಿಯಲು ಬಿಡಿ. ಹಾಲು ಕುದಿಯಲಾರ೦ಭಿಸಿದಾಗ ಅದಕ್ಕೆ ಕಸ್ಟರ್ಡ್ ಪೌಡರ್ ಸೇರಿಸಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಒಲೆಯ ಮೇಲಿಂದ ಕೆಳಗಿಳಿಸಿ.

ಸ್ವಲ್ಪ ತಣ್ಣಗಾದ ಅನಂತರ ಸಪೋಟಾ ಹಣ್ಣುಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ, ಮಿಶ್ರಣಕ್ಕೆ ಸಪೋಟ, ಕೆನೆ, ಎಸೆನ್ಸ್ ಸೇರಿಸಿ ಕಡೆಯಿರಿ. ಸಣ್ಣ ಪಾತ್ರೆಗಳಿಗೆ ಹಾಕಿಡಿ. ಫ್ರಿಜ್‌ನಲ್ಲಿ ಹದವಾಗಲು ಬಿಡಿ. ಬಾದಾಮಿ ಪಿಸ್ತಾಗಳಿಂದ ಅಲಂಕರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಅನಂತರ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi