ಶ್ರೀ ಶ್ಯಾಮಾನಂದ ಪ್ರಭುಗಳು ಶ್ರೀ ಚೈತನ್ಯ ಮಹಾಪ್ರಭುಗಳ ಪವಿತ್ರ ಸಂದೇಶವನ್ನು ಎಲ್ಲೆಡೆ ವಿತರಿಸಲೆಂದೇ ಆವಿರ್ಭವಿಸಿದರು. ಇವರು ಜನಿಸಿದ್ದು ಉತ್ಕಲ ಪ್ರಾಂತ್ಯದ ಧರೇಂದ್ರ ಭದುರ ಪುರ ಎಂಬಲ್ಲಿ, ಅವರ ತಂದೆಯ ಹೆಸರು ಶ್ರೀಕೃಷ್ಣ ಮಂಡಲ್, ಅವರ ತಾಯಿ, ಶ್ರೀಮತಿ ದೂರಿಕಾದೇವಿ.

ಈ ದಂಪತಿಗೆ ಹಲವು ಮಕ್ಕಳು ಜನಿಸಿದರೂ ಯಾವುವೂ ಬದುಕುಳಿಯದೆ ಹೋದ್ದರಿಂದ ಈ ಪುತ್ರನಿಗೆ ದುಃಖಿ’ ಎಂದು ಹೆಸರಿಟ್ಟರು. ಚೈತ್ರ ಮಾಸದ ತುಂಬು ಹುಣ್ಣಿಮೆಯ ದಿನ ಜನಿಸಿದ ಶಿಶುವಿನ ಮಂಗಳಕರ ಚಿಹ್ನೆಗಳನ್ನು ಕಂಡವರೆಲ್ಲರೂ ‘ಈತನೊಬ್ಬ ಮಹಾ ಪುರುಷನಾಗುವನು’ ಎಂದು ಉದ್ಗರಿಸಿದ್ದರು.
ಶ್ರೀಕೃಷ್ಣ ಮಂಡಲರು ಪರಮ ಕೃಷ್ಣಭಕ್ತರಾಗಿದ್ದರು. ಜನ್ಮತಃ ಕೃಷ್ಣನೆಡೆಗೆ ಒಲವುಳ್ಳವರಾಗಿದ್ದ ಶ್ಯಾಮಾನಂದರು ತಾರುಣ್ಯದಲ್ಲಿ ಗೌರಾಂಗ, ನಿತ್ಯಾನಂದರೆಡೆಗೆ ವಿಶೇಷ ಭಕ್ತಿ ಆಸಕ್ತಿ ಬೆಳೆಸಿಕೊಂಡರು. ಇದನ್ನು ಅರಿತ ಮಂಡಲರು ತಮ್ಮ ಪುತ್ರನಿಗೆ ಮಂತ್ರದೀಕ್ಷೆ ತೆಗೆದುಕೊಳ್ಳುವಂತೆ ಸೂಚಿಸಿದರು.
ಅದರಂತೆ ತಮ್ಮ ತಂದೆಯ ಅನುಮತಿ ಪಡೆದು ಅಂಬಿಕಾ ಕಲ್ನದತ್ತ ಪಯಣ ಬೆಳೆಸಿದ ದುಃಖಿ, ಅಲ್ಲಿ ನೆಲೆಸಿದ್ದ ಹೃದಯ ಚೈತನ್ಯ ಪ್ರಭುಗಳನ್ನು ಭೇಟಿಯಾದರು. ಅತ್ಯಂತ ವಿನೀತರಾಗಿ ಅವರಿಂದ ದೀಕ್ಷೆ ಪಡೆದು, ‘ಕೃಷ್ಣದಾಸ’ ಎಂಬ ಹೆಸರನ್ನು ಪಡೆದರು.
ಅನಂತರ ಶ್ರೀ ಹೃದಯ ಚೈತನ್ಯ ಪ್ರಭುಗಳು ಕೃಷ್ಣದಾಸರಿಗೆ ವೃಂದಾವನಕ್ಕೆ ತೆರಳಿ ಶ್ರೀಲ ಜೀವಗೋಸ್ವಾಮಿಗಳ ಸೇವೆಯಲ್ಲಿ ತೊಡಗಿಕೊಂಡು ಶಾಸ್ತ್ರಾಧ್ಯಯನ ನಡೆಸುವಂತೆ ನಿರ್ದೇಶಿಸಿದರು. ಅದರಂತೆ ವೃಂದಾವನಕ್ಕೆ ತೆರಳಿದ ಕೃಷ್ಣದಾಸರು ಜೀವ ಗೋಸ್ವಾಮಿಗಳ ಪದತಲದಲ್ಲಿ ಆಶ್ರಯ ಪಡೆದರು.
ವೃಂದಾವನದಲ್ಲಿ ದುಃಖಿ ಕೃಷ್ಣದಾಸರಿಗೆ ಶ್ರೀಮತಿ ರಾಧಾರಾಣಿ ಮತ್ತು ವಿಶಾಖಾ ದೇವಿಯವರ ದರ್ಶನವಾಯಿತು. ರಾಧಾರಾಣಿಯು ಕೃಷ್ಣದಾಸರಿಗೆ ತಿಲಕವನ್ನು ಅನುಗ್ರಹಿಸಿ, ‘ಶ್ಯಾಮಾನಂದ’ ಎಂಬ ಹೆಸರನ್ನು ನೀಡಿದಳು. ಆ ತಿಲಕವು ಕೃಷ್ಣದಾಸರ ಹಣೆಯ ಮೇಲೆ ಶಾಶ್ವತವಾಗಿ ನೆಲೆಸಿತು. ಹೀಗೆ ದುಃಖಿ ಕೃಷ್ಣದಾಸರು ಶ್ಯಾಮಾನಂದರಾಗಿ ಮಾರ್ಪಾಟಾದರು.

ಶ್ಯಾಮಾನಂದ ಪ್ರಭುಗಳು ಜೀವ ಗೋಸ್ವಾಮಿಯವರ ಆದೇಶದ ಮೇರೆಗೆ ಸಂಕೀರ್ತನದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಮೊತ್ತಮೊದಲು ಪುಸ್ತಕ ಸಂಕೀರ್ತನ ತಂಡದಲ್ಲಿ ಶ್ರೀಲ ಶ್ರೀವಾಸ ಪಂಡಿತ ಮತ್ತು ಶ್ರೀಲ ನರೋತ್ತಮದಾಸ ಠಾಕುರರೊಂದಿಗೆ ಅವರೂ ಭಾಗಿಯಾಗಿದ್ದರು.
ಮಹಾಪ್ರಭುಗಳ ಬೋಧನೆಯನ್ನು ವಿತರಿಸುತ್ತ ಊರಿಂದೂರಿಗೆ ಸಾಗುತ್ತಿದ್ದ ಶ್ರೀ ಶ್ಯಾಮಾನಂದ ಪ್ರಭುಗಳಿಂದ ಆಕರ್ಷಿತರಾದ ಭಕ್ತರು ಅವರ ಚರಣಾಶ್ರಯ ಪಡೆದರು. ಗೋಪಿ ವಲ್ಲಭಪುರದ ಶ್ರೀಮಂತ ಭಕ್ತರನೇಕರು ಸೇರಿ ಸಕಲ ಅನುಕೂಲತೆಗಳಿಂದ ಕೂಡಿದ ದೇಗುಲ ಕಟ್ಟಿಸಿ, ಅಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಪ್ರಭುಗಳನ್ನು ಕೇಳಿಕೊಂಡರು.
ಅದನ್ನು ಮನ್ನಿಸಿದ ಶ್ಯಾಮಾನಂದರು ಶ್ರೀ ಶ್ರೀ ರಾಧಾಗೋವಿಂದನನ್ನು ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿಂದ ಉತ್ಕಲದೇಶಕ್ಕೆ ಹಿಂದಿರುಗಿ ಹಲವಾರು ಶಿಷ್ಯಭಕ್ತರನ್ನು ಉದ್ಧರಿಸಿದರು.
ಹೀಗೆ ಯಶಸ್ವಿಯಾಗಿ ತಮ್ಮ ಗುರುಗಳ ಆದೇಶವನ್ನು ನೆರವೇರಿಸಿದ ಶ್ಯಾಮಾನಂದ ಪ್ರಭುಗಳು ಗೋಪಿ ವಲ್ಲಭಪುರಕ್ಕೆ ಮರಳಿ, ಅಷಾಢ ಮಾಸದ ಕೃಷ್ಣ ಪ್ರತಿಪದೆಯಂದು ಭಗವದ್ಧಾಮಕ್ಕೆ ಹಿಂದಿರುಗಿದರು.






Leave a Reply