– ಶ್ರೀಮತಿ ಶಶಿಕಲಾ ಶ್ರೀಧರ
ಸ್ವರೂಪ
ಭಗವಂತನ ಚರಣಾರವಿಂದಗಳ ದರ್ಶನ ಮಾಡುತ್ತಾ ಅವುಗಳನ್ನು ಪೂಜಿಸಿ, ಸೇವಿಸಿ, ಚರಣತೀರ್ಥ ತೆಗೆದುಕೊಳ್ಳುವುದು, ಪಾದಗಳನ್ನು ಶಿರದಲ್ಲಿರಿಸಿಕೊಳ್ಳುವುದು, ಅವುಗಳನ್ನು ಎದೆಗೊತ್ತಿಕೊಳ್ಳುತ್ತಾ ಭಗವತ್ಪ್ರೇಮದಲ್ಲಿ ತನ್ಮಯರಾಗಿ ಹೋಗುವುದೇ ಪಾದಸೇವನ ಭಕ್ತಿಯ ಪ್ರಕಾರವಾಗಿದೆ.
ಪರಮ ದೇವೋತ್ತಮ ಪುರುಷನ ಪಾದದಾಶ್ರಯ ಹೊಂದುವುದೇ ” ಪಾದಸೇವನ,” ನಮ್ಮ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿಕೊಳ್ಳಲು ಸೂರ್ಯ ಪ್ರಕಾಶದಂತಿರುವ ಶ್ರೀಹರಿಯ ಚರಣಗಳಲ್ಲಿ ಶರಣಾಗಬೇಕು. ಪರಮ ದೇವೋತ್ತಮನಿಗೂ ಆತನ ಪಾದಗಳಿಗೂ ಯಾವ ಭೇದವೂ ಇಲ್ಲ.
ಇಂತಹ ದೇವ ದೇವನ ಪಾದಸೇವೆ ಮಾಡುವವರು ದುರಿತಗಳನ್ನು ಕಳೆದುಕೊಂಡು ಮಂಗಳಮಯರಾಗುತ್ತಾರೆ. ಆ ದಿವ್ಯ ಪಾದಗಳ ಮಹಿಮೆಯನ್ನು ಎಲ್ಲ ಭಕ್ತಿ ಸಾಹಿತ್ಯಗಳೂ ಕೊಂಡಾಡಿವೆ. ತ್ರಿಲೋಕ ಪಾವನೆ ಗಂಗೆಯ ಉಗಮಸ್ಥಾನವಾದ ಶ್ರೀಹರಿಯ ಪವಿತ್ರ ಪಾದಗಳನ್ನು ಗರುಡ ಶೇಷಾದಿಗಳು ಭಕ್ತಿಯಿಂದ ಹೊತ್ತು ತಿರುಗಾಡುತ್ತಾ ಆನಂದವನ್ನು ಪಡೆಯುತ್ತಾರೆ.
ಪುರಾಣಗಳಲ್ಲಿ ‘ಪಾದಸೇವನ’: ಶ್ರೀ ಮಹಾಲಕ್ಷ್ಮಿ

ಭಗವಂತನ ನಿರಂತರ ಪಾದಸೇವನ ಮಾಡುತ್ತಿರುವ ಭಕ್ತರಲ್ಲಿ ಅಗ್ರಸ್ಥಾನ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಗೆ ಮೀಸಲಾದುದು. ಏಕೆಂದರೆ ಕೋಟಿ ಕೋಟಿ ಭೃತ್ಯರಿದ್ದರೂ ಚಿತ್ರ ಚರಿತನಾದ ನಾರಾಯಣನ ಪಾದಸೇವೆಯನ್ನು ಅತ್ಯಂತ ಅನುರಾಗದಿಂದ ತಾನೇ ಶ್ರೇಷ್ಠತಮವಾಗಿ ಸಮರ್ಪಕವಾಗಿ, ನಿರಂತರ ಮಾಡುತ್ತಿರುವಳು ಈ ಧನ್ಯೆ!
ಅಮೃತವನ್ನು ಪಡೆಯುವ ಸಲುವಾಗಿ ದೇವದಾನವರು ಕ್ಷೀರ ಸಮುದ್ರ ಮಂಥನ ಕಾರ್ಯ ಕೈಗೊಂಡಾಗ ಮೊದಲು ಹಾಲಾಹಲವಿಷ, ಅನಂತರ ಕಾಮಧೇನು, ಉಚ್ಚೈತ್ರವಸ್ಸು, ಐರಾವತ, ಕೌಸ್ತುಭಮಣಿ, ಕಲ್ಪವೃಕ್ಷ, ಅಪ್ಸರೆಯರು ಹುಟ್ಟಿದರು. ಅನಂತರ ಸಂಪತ್ತೇ ಮೂರ್ತಿವೆತ್ತ ಸ್ವಯಂ ಭಗವತಿ ಲಕ್ಷ್ಮಿದೇವಿಯು ಪ್ರಕಟವಾದಳು.
ಸ್ಫಟಿಕ ಪರ್ವತದ ಮೇಲೆ ಬೀಳುವ ಮಿಂಚಿನಂತೆ ತನ್ನ ದಿವ್ಯವಾದ ಕಾಂತಿಯಿಂದ ದಶದಿಕ್ಕುಗಳನ್ನು ಬೆಳಗಿಸುತ್ತಾ ಬಂದಾಗ ದೇವದಾನವರೆಲ್ಲರೂ ಅವಳನ್ನು ಪಡೆಯಲು ಬಯಸಿ ನಾನಾ ವಿಧವಾದ ಪೂಜೆ, ಸೇವೆ, ಸನ್ಮಾನಗಳನ್ನು ಮಾಡಿದರು. ಆದರೆ ಶ್ರೀದೇವಿಯು ಅರಸಿಹೊರಟಿದುದು ಅನಂತ ಕಲ್ಯಾಣಗುಣ ಸಂಪನ್ನನೂ, ನಾಶವಿಲ್ಲದವನೂ, ದೋಷವಿಲ್ಲದವನೂ, ಪರಮಾಶ್ರಯನೂ ಆದ ಪರಮಪುರುಷ ಶ್ರೀಮನ್ನಾರಾಯಣನನ್ನು.
ಅವನನ್ನು ಕಾಣುತ್ತಲೇ ಕಮಲಪುಷ್ಪಗಳ ಮಾಲೆಯನ್ನು ಶ್ರೀ ಹರಿಯ ಕೊರಳಿಗೆ ಹಾಕಿದಳು. ಅವನನ್ನು ವರಿಸಿದ ಆ ದಿನದಿಂದಲೇ ಪರಮಲಾವಣ್ಯಗುಣ ಸಂಪನ್ನಳಾದ ಶ್ರೀಲಕ್ಷ್ಮಿಯು ಶ್ರೀಮನ್ನಾರಾಯಣನ ಚರಣವು ತನ್ನ ಸರ್ವಸ್ವವೆಂದು ತಿಳಿದು, ಅಭಿಮಾನವನ್ನು ತೊರೆದು ತಾನು ಈ ಮಹಾಪುಣ್ಯಕ್ಕೆ ಪಾತ್ರಳಾದುದು ತನ್ನ ಅದೃಷ್ಟವೇ ಎಂದು ಬಗೆದು ಭಕ್ತಿಯಿಂದ ಸೇವೆ ಮಾಡುತ್ತಾ ಅವನ ಆಜ್ಞಾಧಾರಕಳಾಗಿ ‘ಪಾದಸೇವನ’ ಭಕ್ತಿಗೆ ಪರಮ ಆದರ್ಶಳೆನಿಸಿದಳು ಈ ಜಗನ್ಮಾತೆ!
ಶ್ರೀಮದ್ಭಾಗವತದಲ್ಲಿ ‘ಪಾದಸೇವನ’ ದ ಪ್ರಶಂಸೆ
ಶ್ರೀಮದ್ಭಾಗವತದಲ್ಲಿ ಪೃಥು ಚಕ್ರವರ್ತಿ ಶ್ರೀಹರಿಯ ಪಾದಗಳ ಮಹಿಮೆಯನ್ನು ತನ್ನ ಪ್ರಜೆಗಳಿಗೆ ವರ್ಣಿಸುತ್ತಾ,
ಯತ್ಪಾದಸೇವಾಭಿರುಚಿಸ್ತಪಸ್ವಿನಾ
ಮಶೇಷಜನ್ಮೋಪಚಿತಂ ಮಲಂ ಧಿಯಃ ||
ಸದ್ಯಃ ಕ್ಷಿಣೋತ್ಯನ್ವಹಮೇಧತೀ ಸತೀ
ಯಥಾ ಪದಾಂಗುಷ್ಠವಿನಿಃಸೃತಾ ಸರಿತ್ ||
ವಿನಿರ್ಧುತಾಶೇಷಮನೋಮಲಃ ಪುಮಾ
ನಸಂಗ ವಿಜ್ಞಾನ ವಿಶೇಷವೀರ್ಯವಾನ್ |

ಯದಂಘ್ರಿಮೂಲೇ ಕೃತಕೇತನಃ ಪುನರ್
ನ ಸಂಸೃತಿಂ ಕ್ಲೇಶವಹಾಂ ಪ್ರಪದ್ಯತೇ ।। (4-21-31.32)
ಶ್ರೀಹರಿಯ ಪಾದೋದ್ಭವೆಯಾದ ಗಂಗೆಯು ಹೇಗೆ ಹರಿಯುತ್ತಾ ಹರಿಯುತ್ತಾ ವಿಸ್ತಾರವಾಗುತ್ತಾ ಸಕಲ ಲೋಕದ ಪಾಪಗಳನ್ನು ನಾಶಪಡಿಸುತ್ತಾಳೋ ಹಾಗೆಯೇ ಈ ಭವದಲ್ಲಿ ಬೆಂದ ಜೀವಿಗಳಿಗೆ ಒಮ್ಮೆ ಪರಮ ಪುರುಷನ ಪಾದಾರವಿಂದದ ರುಚಿ ಹತ್ತಿದರೆ ಅದು ಅಭಿವೃದ್ಧಿ ಹೊಂದಿ ಬುದ್ಧಿಗತವಾದ ಅನಂತ ಜನ್ಮದ ಪಾಪ ಸಂಸ್ಕಾರಗಳನ್ನು ಇಲ್ಲವಾಗಿಸುತ್ತದೆ.
ಒಮ್ಮೆ ಮನಸ್ಸಿನ ಮಲವು ತೊಳೆದು ಹೋದರೆ ವೈರಾಗ್ಯವು ಪ್ರಾಪ್ತವಾಗಿ ಬ್ರಹ್ಮ ಸಂಪೂರ್ಣವಾಗಿ ಸಾಕ್ಷಾತ್ಕಾರ ಉಂಟಾಗುತ್ತದೆ. ಶ್ರೀ ಹರಿಯ ಪಾದಗಳ ನಿಜವಾದ ಸಾಮರ್ಥ್ಯವೂ ಅದೇ ಆಗಿದೆ. ಹರಿಚರಣಗಳನ್ನು ದೃಢವಾಗಿ ಆಶ್ರಯಿಸಿದ ವ್ಯಕ್ತಿಯು ಜನನ ಮರಣಗಳ ಉರುಳಾಟದಲ್ಲಿ ಸಿಲುಕುವುದಿಲ್ಲ – ಎಂದು ‘ಪಾದ ಸೇವನ ಭಕ್ತಿʼಯ ಪ್ರಶಂಸೆ ಮಾಡುತ್ತಾನೆ.
ಹರಿದಾಸರು ಕೊಂಡಾಡುವ ಪಾದಸೇವನ
ದಾಸವರ ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ ಏನೇ ಕಷ್ಟ ಬಂದರೂ ಭಗವಂತನ ಪಾದವನ್ನು ಬಿಡುವುದಿಲ್ಲ ಎಂಬ ತಮ್ಮ ದೃಢ ನಿರ್ಧಾರವನ್ನು ಭಗವಂತನ ದಶಾವತಾರಗಳಲ್ಲಿ ಒಂದೊಂದು ಅವತಾರ ಲೀಲೆಯನ್ನು ಸ್ಮರಿಸುತ್ತಾ ಭಗವಂತನನ್ನು ಆಗ್ರಹಿಸುತ್ತಾ ಭವಾಟವಿಯಿಂದ ಪಾರುಗಾಣಿಸಲು ಹೀಗೆ ಪ್ರಾರ್ಥಿಸುತ್ತಾರೆ.
ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ
ಕೊಡು ಮನದಿಷ್ಟವ ಕೋಪವಿನ್ನೇಕೋ || ಪ ||
ನೀರ ಹೊಕ್ಕರೂ ಬಿಡೆ ಬೆನ್ನಿನೊಳಗೆ ಬಹು (ಮತ್ಸ್ಯಾವತಾರ)
ಭಾರ ಬಿತ್ತೆನೆಂದರೂ ಬಿಡೆನೋ (ಕೂರ್ಮಾವತಾರ)
ಕೋರೆಯ ಮಸೆಯುತ ಕೆಸರಗೊಂಡರೂ ಬಿಡ (ವರಾಹಾವತಾರ)
ಘೋರ ರೂಪತಾಳಿ ಘುರುಘುರಿಸಲು ನಾನು || ಬಿಡೆ || (ನರಸಿಂಹಾವತಾರ)
ತಿರುಕನೆಂದರೂ ಬಿಡೆ ತಿಳಿದು ತಾಯ್ ಕೊರಳ (ವಾಮನಾವತಾರ)
ತರಿಕನೆಂದರೂ ನಿನ್ನ ನಾ ಬಿಡನೋ (ಪರಶುರಾಮಾವತಾರ)

ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡ (ರಾಮಾವತಾರ)
ದುರುಳ ಮಡುವಿನಲ್ಲಿ ಧುಮುಕಿದರೆಯೂ ನಾನು ||ಬಿಡೆ|| (ಕೃಷ್ಣಾವತಾರ)
ಕಡು ಬತ್ತಲಾಗಿ ಕೈಲಿ ಕಾಸಿಲ್ಲೆಂದರೂ (ಬುದ್ಧವತಾರ)
ಒಡನೆ ಹಯವೇರಿ ಓಡಿದರೂ ಬಿಡೆನು (ಕಲ್ಕ್ಯಾವತಾರ)
ಪೊಡವಿಯೊಳಗೆ ನಮ್ಮ ಪುರಂದರ ವಿಠಲನೆ
ಕಡೆಹಾಯಿಸುವ ಭಾರ ನಿನ್ನದದಕೆ ನಾನು ||ಬಿಡೆ||
ಮತ್ತು ತಮ್ಮ ನವವಿಧ ಭಕ್ತಿ ಸುಳಾದಿಯಲ್ಲಿ
ಹರಿಪಾದ ಸೇವನಾ ಧ್ಯಾನವ ಬಲ್ಲಣ್ಣ
ವರಪುಟವಿಟ್ಟ ಚಿನ್ನವು ಮುಖ ಬಣ್ಣ
ದುರುಚಿ ದುರ್ವಿಷಯಕ್ಕೆ ಎತ್ತನು ಕಣ್ಣ
ಹರಿಗುರುಗಳಿಗಲ್ಲದೆ ಶರಣೆನ್ನ
ಪುರಂದರವಿಠಲರಾಯ ಪತಿತಪಾವನ್ನ
ಚರಣಾಬ್ಬರಸವೀಂಟಿ ಮೊಲೆವಾಲನುಣ್ಣ
ಎಂಬುದಾಗಿ ಹರಿ ‘ಪಾದಸೇವನಭಕ್ತಿ’ಯ ಸಾಧಕನ ರೂಪ ಗುಣಗಳನ್ನು ವರ್ಣಿಸುತ್ತಾರೆ.
ಭಗವದ್ಗೀತೆಯಲ್ಲಿ ಪಾದಸೇವನ
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಸಿ ಯುಕ್ವ್ತೈವಮಾತ್ಮಾನಂ ಮತ್ಪರಾಯಣಃ ||
(ಭ.ಗೀ 9.34)
ಸದಾ ನನ್ನನ್ನು ಚಿಂತಿಸುವುದರಲ್ಲಿ ಮನಸ್ಸನ್ನು ತೊಡಗಿಸು, ನನ್ನ ಭಕ್ತನಾಗು, ನನಗೆ ನಮಸ್ಕಾರ ಮಾಡು ಮತ್ತು ನನ್ನನ್ನು ಪೂಜಿಸು. ಆಗ ನನ್ನಲ್ಲಿ ಸಂಪೂರ್ಣವಾಗಿ ಮಗ್ನನಾಗಿ ನಿಶ್ಚಯವಾಗಿಯೂ ನೀನು ನನ್ನಲ್ಲಿಗೆ ಬರುವೆ.

ಭಗವಂತನನ್ನು ಹೇಗೆ ಸೇವಿಸಬೇಕು ಎಂಬುದನ್ನು ಶ್ರೀ ಕೃಷ್ಣ ಪರಮಾತ್ಮ ಈ ಶ್ಲೋಕದಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾನೆ. ಎರಡು ವಸ್ತುಗಳು ಏಕಕಾಲದಲ್ಲಿ ಒಂದು ಸ್ಥಳವನ್ನು ಆಕ್ರಮಿಸಿಕೊಳ್ಳುವುದಿಲ್ಲ ಎಂದು ಪ್ರಕೃತಿ ನಿಯಮವೇ ಇದೆ. ದೇವರಿರುವೆಡೆ ಕಾಮ ಕಾಂಚನ ಇರಲಾರದು.
ಅವನ ಭಕ್ತನಾಗಿದ್ದ ಮೇಲೆ ಅವನ ಮನಸ್ಸಿನಲ್ಲಿ ಭಗವಂತನಲ್ಲದೆ ಬೇರೆ ಯಾರೂ ಯಾವುದೂ ಇರಲಾರದು. ಅವನ ಭಕ್ತನಾಗಿ ಅವನ ಸೇವೆಗೇ ಬಾಳನ್ನು ಮುಡುಪಾಗಿಡಬೇಕು. ಅವನ ಪಾದದ್ವಯಗಳೇ ಭಕ್ತನಿಗೆ ಪರಮಾಶ್ರಯವು, ಅದನ್ನು ಭದ್ರವಾಗಿ ಹಿಡಿದು ಭವದಿಂದ ಪಾರಾಗಿ ನೀರಿನ ಹನಿ ಸಾಗರದಲ್ಲಿ ಒಂದಾಗುವಂತೆ ಅವನಲ್ಲಿ ಒಂದಾಗಬೇಕು.
ಪಾದಸೇವನ ಭಕ್ತಿಗೆ ಪ್ರತ್ಯಕ್ಷ ದೃಷ್ಟಾಂತ
ರಾಮಾಯಣದಲ್ಲಿ ‘ಪಾದಸೇವನ ಭಕ್ತಿʼಗೆ ಪ್ರತ್ಯಕ್ಷ ಉದಾಹರಣೆ ನಿಷಾದರಾಜ ಗುಹನ ನಾವಿಕ.
ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲನೆಗಾಗಿ ಸೀತಾ ಲಕ್ಷ್ಮಣರ ಸಮೇತ ವನವಾಸಕ್ಕೆ ಹೊರಟಾಗ ಮಂತ್ರಿ ಸುಮಂತ್ರ ಗಂಗಾನದಿಯ ದಡದವರೆಗೂ ಇವರನ್ನು ರಥದಲ್ಲಿ ಕರೆತಂದು ಬಿಟ್ಟು ಹಿಂದಿರುಗುತ್ತಾನೆ. ಶ್ರೀರಾಮನು ಗಂಗಾನದಿಯನ್ನು ದಾಟಲು ನಿಷಾದ ರಾಜ ಗುಹನ ಸಹಾಯ ಕೇಳುತ್ತಾನೆ.
ನಿಷಾದ ರಾಜ ತನ್ನ ಸೇವಕರಲ್ಲಿ ಅಂಬಿಗನೊಬ್ಬನಿಗೆ ನಾವೆಯನ್ನು ತರಲು ಆಜ್ಞಾಪಿಸುತ್ತಾನೆ. ಉತ್ತಮ ಸಂಸ್ಕಾರವಿದ್ದ ಅಂಬಿಗೆ ನಾವೆಯನ್ನು ತಂದು ರಾಮನ ಬಳಿ ಬಂದು ‘ಪ್ರಭು, ನಿನ್ನ ಪಾದಧೂಳಿಯ ಸ್ಪರ್ಶದಿಂದ ಶಿಲೆಯೊಂದು ಸುಂದರ ಹೆಣ್ಣಾಯಿತಂತೆ, ನನ್ನ ಈ ನಾವೆಯೂ ಒಬ್ಬ ಕನ್ಯೆಯಾಗಿ ಬಿಟ್ಟರೆ ಮನೆಯಲ್ಲಿರುವ ನನ್ನ ಧರ್ಮಪತ್ನಿ ಎದುರು ನನ್ನ ಗತಿಯೇನು?
ಮೇಲಾಗಿ ಇದನ್ನೇ ನಂಬಿ ನಾನು ನನ್ನ ಪರಿವಾರವನ್ನು ಕಾಪಾಡುತ್ತಿದ್ದೇನೆ. ಆದ್ದರಿಂದ ನೀನು ನಾವೆಗೆ ಏರುವ ಮೊದಲು ನಿನ್ನ ಚರಣಗಳನ್ನು ತೊಳೆಯಲು ಅನುಮತಿ ನೀಡು ಪ್ರಭು” ಎಂದು ಕೇಳುತ್ತಾನೆ. ಅಂಬಿಗನ ಭಕ್ತಿಯನ್ನು ಜಾಣ್ಮೆಯನ್ನು ಇಂಗಿತವನ್ನು ಅರಿತ ರಾಮಪ್ರಭು “ಹಾಗೆಯೇ ಆಗಲಿ” ಎಂದು ಸಮ್ಮತಿಸಿದಾಗ ಅಂಬಿಗನಿಗಾದ ಆನಂದ ಅಷ್ಟಿಷ್ಟಲ್ಲ.
ಒಡನೆಯೇ ಅವನು ಮರದ ಮೊರಗಿಯಲ್ಲಿ ನೀರನ್ನು ತಂದು ಶ್ರೀರಾಮನ ಪಾದಗಳನ್ನು ತೊಳೆದು, ಆ ಪಾವನ ಪಾದೋದಕವನ್ನು ಪರಿವಾರ ಸಮೇತ ತಾನೂ ಸೇವಿಸಿ ಧನ್ಯನಾದನು. ಅವನ ವಂಶದ ಪಿತೃ ಪಿತಾಮಹರೂ ಧನ್ಯರಾದರು. ಭಕ್ತರನ್ನು ಭವಸಾಗರದಿಂದ ಪಾರುಗಾಣಿಸುವ ಪ್ರಭುವನ್ನು ಅಂಬಿಗ ತನ್ನ ಚಿಕ್ಕ ನಾವೆಯಲ್ಲಿ ಕುಳ್ಳಿರಿಸಿ ಗಂಗಾನದಿಯನ್ನು ದಾಟಿಸಿದನು.
ದಡ ಸೇರಿದ ಮೇಲೆ ಅಂಬಿಗ ಸೀತಾರಾಮರನ್ನು ನಮಸ್ಕರಿಸಿದಾಗ ಸೀತೆ ವಂದಿತ ಮನದಿಂದ ತನ್ನ ಕೈ ಬೆರಳ ರತ್ನದುಂಗುರವನ್ನು ಕೊಡಲು ಹೋದಾಗ ಅಂಬಿಗನು ಭಕ್ತಿಭಾವದಿಂದ ರಾಮನ ಚರಣಗಳನ್ನು ಹಿಡಿದು “ಪ್ರಭು ನಿನ್ನ ಕೃಪೆಯಿಂದ ನನಗೆ ಅತ್ಯಂತ ಅಗತ್ಯವಾದುದೆಲ್ಲವೂ ನನ್ನ ಬಳಿ ಸಾಕಷ್ಟಿವೆ.

ನಿನ್ನ ಪಾದಪದ್ಮಗಳಲ್ಲಿ ನಿಶ್ಚಲವಾದ ಭಕ್ತಿಯನ್ನು ಮಾತ್ರ ಅನುಗ್ರಹಿಸು” ಎಂದು ಪ್ರಾರ್ಥಿಸಿದನು. ಕರುಣಾನಿಧಾನ ಶ್ರೀರಾಮ ಆ ಅಂಬಿಗನಿಗೆ ನಿರ್ಮಲ ಭಕ್ತಿಯ ವರವನ್ನಿತ್ತು ಅನುಗ್ರಹಿಸಿದನು. ಯಾವ ಚರಣರಜಕ್ಕಾಗಿ ಬ್ರಹ್ಮಾದಿದೇವತೆಗಳೂ ಸದಾಕಾಲ ಆಶಿಸುತ್ತಿರುವರೋ ಅದನ್ನು ಕೇವಲ ಪಾದಸೇವನ ಭಕ್ತಿಯಿಂದ ಪಡೆದುಕೊಂಡು ಧನ್ಯವಾದ ಈ ಅಂಬಿಗ!
ಹೀಗೆ ಭಗವಂತನ ಚರಣಗಳ ಆಶ್ರಯ ಪಡೆಯುವುದರಿಂದ ಮಾನವನ ಎಲ್ಲ ದೋಷಗಳೂ, ವಿಪತ್ತುಗಳೂ ನಾಶವಾಗಿ ಹೋಗುವುದು. ಅಪಾರ ಸಂಸಾರ ಸಾಗರದಲ್ಲಿ ಮುಳುಗುತ್ತಿರುವವನಿಗೆ ದೇವದೇವನ ಚರಣಕಮಲಗಳೆಂಬ ನೌಕೆಯೇ ಏಕಮಾತ್ರ ಆಸರೆ.
ಪಾದಸೇವನ ಭಕ್ತಿಯ ಮಹಿಮೆ
ಸಂಗೀತ ಕ್ಷೇತ್ರದ ಚಕ್ರವರ್ತಿ ಎನಿಸಿದ ಶ್ರೀ ತ್ಯಾಗರಾಜರಿಗೆ ‘ಪಾದಸೇವನ ಭಕ್ತಿ’ ಯಿಂದ ಬ್ರಹ್ಮಾನಂದ ಪಡೆದ ಭರತ ಮತ್ತು ಇತರ ಮುನಿಶ್ರೇಷ್ಠರೇ ಆದರ್ಶ.
ಏಕೆಂದರೆ ಮುನಿಶ್ರೇಷ್ಠರು ಭಗವಂತನ ಪಾದಸೇವೆಯಿಂದ ಸತ್ಪದವನ್ನು ಪಡೆದರು ಭರತನು ಪಾದುಕಾ ಸೇವೆಯಿಂದ ಶ್ರೀರಾಮನನ್ನೇ ಪಡೆದನು ಎಂದು ತಮ್ಮ ʼಸಂದೇಹಮುನು’ ಎಂಬ ಕೀರ್ತನೆಯಲ್ಲಿ ಹಾಡಿದ್ದಾರೆ. ಯಾವ ಪಾದಗಳು ಭಕ್ತಳಾದ ಅಹಲ್ಯೆಯ ಶಾಪವಿಮೋಚನೆ ಮಾಡಿತೋ, ಯಾವ ಪಾದಗಳು ಅದ್ಭುತವಾಗಿ ರಾಜ್ಯವಾಳಿತೋ ಅಂತಹ ಹಿರಿಮೆ, ಮಹಿಮೆಯುಳ್ಳ ದಿವ್ಯ ಪಾದಗಳ ಸೇವೆಗಾಗಿ ತಮ್ಮ ಅನೇಕ ಕೀರ್ತನೆಗಳಲ್ಲಿ ಸಂತ ತ್ಯಾಗರಾಜರು ವಿಧ ವಿಧವಾಗಿ ಶ್ರೀರಾಮಪ್ರಭುವನ್ನು ಪ್ರಾರ್ಥಿಸಿದ್ದಾರೆ.
ಹೀಗೆ ಭಗವಂತನ ಚರಣರಜದಲ್ಲಿ ಶರಣಾದ ಪ್ರೇಮಿ ಭಕ್ತರು ಸ್ವರ್ಗಾದಿಗಳ ಮಾತೇನು, ಮೋಕ್ಷವನ್ನು ತಿರಸ್ಕಾರ ಮಾಡಿ ಚರಣಸೇವೆ ಮಾಡಿಕೊಂಡಿರಲು ಬಯಸುತ್ತಾರೆ.
ಪಾದಸೇವನ ಭಕ್ತಿಗೆ ಮಂಗಳ ಶ್ಲೋಕ:
ಮುಕುಂದ ಮೂರ್ಧ್ನಾ ಪ್ರಣಿಪತ್ಯ ಯಾಚೇ
ಭವಂತಮೇಕಾಂತಮಿಯಂತೇ ಮರ್ಥಮ್
ಅವಿಸ್ಮೃತಿ ಸ್ತ ಚ್ಛರಣಾರವಿಂದೇ
ಭವೇ ಭವೇಮ್ಮೇಮ್ಯೇಸ್ತು ಭವತ್ಪ್ರಸಾದಾತ್
ಹೇ ಮುಕುಂದ ನಿನಗೆ ತಲೆಬಾಗಿ ನಮಸ್ಕರಿಸಿ ಇಷ್ಟನ್ನು ಮಾತ್ರ ಏಕಾಂತದಲ್ಲಿ ಪ್ರಾರ್ಥಿಸುತ್ತೇನೆ; ನಿನ್ನ ಅನುಗ್ರಹದಿಂದ ನನಗೆ ಜನ್ಮ ಜನ್ಮದಲ್ಲಿಯೂ ನಿನ್ನ ಚರಣಾರವಿಂದಗಳ ವಿಸ್ಮೃತಿಯಾಗದಿರಲಿ.
– ಮುಕುಂದಮಾಲಾ ಸ್ತೋತ್ರ (ಶ್ರೀ ಕುಲಶೇಖರ ಆಳ್ವಾರ್ )
(ಮುಂದುವರಿಯುವುದು)






Leave a Reply