ಸಂಕೀರ್ತನ ಸಾರಥಿ !

ಬಂಗಾರದ ಹಾಗೆ ಕಾಂತಿ ಬೀರುವ ಬಣ್ಣ ಮುದ್ದು ಮುಖದ ಮಗು ಒಂದೇ ಸಮನೆ ಆಳುತ್ತಿತ್ತು. ಅಮ್ಮ ಶಚೀದೇವಿ ಮನೆಯಲ್ಲಿದ್ದ ಆಟಿಕೆಗಳನ್ನೆಲ್ಲ ತಂದು ಎದುರಲ್ಲಿ ಹಾಕಿದಳು. ಊಹೂಂ. ಅಳು ನಿಲ್ಲಲಿಲ್ಲ. ನೆರೆ ಹೊರೆಯ ಹೆಣ್ಣು ಮಕ್ಕಳು ಕೈಗೆ ಸಿಕ್ಕ ಸಿಹಿ ತಿಂಡಿ ತಂದು ಬಾಯಿಗಿಟ್ಟರು. ಇಲ್ಲ! ಅಳು ನಿಲ್ಲಲೇ ಇಲ್ಲ! ಅವರು ಯಾರಿಗೂ ಏನು ಮಾಡಲೂ ತೋಚಲಿಲ್ಲ.

ಅಷ್ಟರಲ್ಲಿ… ಅಷ್ಟರಲ್ಲಿ ಹೊರಗೆ ಯಾರೋ “ಹರೇ ಕೃಷ್ಣ ಕೀರ್ತನೆ ಹೇಳಲಾರಂಭಿಸಿದರು. ಹರೆ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ… ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ… ಆರೇ ! ಏನಾಶ್ಚರ್ಯ!!

ಮಗು ಅಳು ನಿಲ್ಲಿಸಿ ಚಪ್ಪಾಳೆ ತಟ್ಟತೊಡಗಿತು. ಅಂದಿನಿಂದ ಹೆಣ್ಣು ಮಕ್ಕಳಿಗೆ ಅದೊಂದು ರೂಢಿಯೇ ಆಗಿ ಹೋಯ್ತು. ಮಗು ಅಳಲು ಆರಂಭಿಸಿದ್ದೇ ತಡ, ಅವರೆಲ್ಲ ಸೇರಿ ಹರೆ? ಕೃಷ್ಣ’ ಸಂಕೀರ್ತನೆಗೆ ತೊಡಗಿಬಿಡುತ್ತಿದ್ದರು. ಅದನ್ನು ಕೇಳಿ ಉತ್ಸಾಹದಿ೦ದ ಕುಣಿಯುವ ಮಗು ಅವರ ಪಾಲಿಗೊಂದು ವಿಸ್ಮಯ.

ವರ್ಷವೂ ತುಂಬದ ಎಳೆ ವಯಸ್ಸಿನಲ್ಲಿ ಹೆಂಗಸರನ್ನು ಸಂಕೀರ್ತನಕ್ಕೆ ಹಚ್ಚಿದ ಆ ವಿಸ್ಮಯ ಶಿಶು ಯಾರು ಗೊತ್ತೆ? ಅವರೇ ಶ್ರೀ ಚೈತನ್ಯ ಮಹಾಪ್ರಭು! ಮುದ್ದಿನ ಬಾಲಕ ನಿಮಾಯ್‌, ಬಂಗಾರದ ಬಣ್ಣದ ದೇಹ ಹೊತ್ತು ಬಂದ ಶ್ರೀಕೃಷ್ಣ ಗೌರಾಂಗ!

ಪರಮ ಭಾಗವತ

ಬಾಲಕ ಚೈತನ್ಯರು ಅವತರಿಸಿದ್ದು ನಿಂಬಕ (ಬೇವು) ಮರದ ಕೆಳಗೆ ಹೀಗಾಗಿಯೇ ಅವರನ್ನು ಮುದ್ದಿನಿಂದ ‘ ನಿಮಾ’ ಎಂದು ಕರೆದರು. ಪುಟ್ಟ ನಿಮಾ ಎಲ್ಲರ ಗಮನ ಸೆಳೆಯುತ್ತ ಬೆಳೆಯತೊಡಗಿದ. ಶಿಶುವಿಗೆ ಆರು ತಿಂಗಳು ತುಂಬುವ ವೇಳೆಗೆ ಮೊದಲ ಬಾರಿಗೆ ತುತ್ತು ಉಣಿಸುವ ‘ಅನ್ನ ಪ್ರಾಶನ’ ಸಮಾರಂಭ ನಡೆಸಲಾಯ್ತು.

ಆ ದಿನ ಹಿರಿಯರೆಲ್ಲ ಸೇರಿ ಮಗುವಿನ ಗುಣಧರ್ಮವನ್ನು ಪರೀಕ್ಷಿಸುತ್ತಾರೆ. ನಾಲ್ಕು ವಸ್ತುಗಳನ್ನಿಟ್ಟು, ಮಗು ಯಾವುದನ್ನು ಆರಿಸಿಕೊಳ್ಳುತ್ತದೆಯೋ, ಅದನ್ನು ಆಧರಿಸಿ ಮಗುವಿನ ಭವಿಷ್ಯ ನಿರ್ಧರಿಸುತ್ತಾರೆ.

ನಿಮಾಯ್‌ ತಂದೆ ಜಗನ್ನಾಥ ಮಿಶ್ರರು ಮಗುವಿನ ಬಳಿಯಲ್ಲಿ ಒಂದಷ್ಟು ಹಣವನ್ನೂ ಮತ್ತೊಂದು ಕಡೆಯಲ್ಲಿ ಶ್ರೀಮದ್ಭಾಗವತಮ್ ಗ್ರಂಥವನ್ನು ಇರಿಸಿದರು.

ಕೊಂಚ ಹೊತ್ತು ಎರಡನ್ನೂ ಪಿಳಿ ಪಿಳಿ ನಿಟ್ಟಿಸಿದ ನಿಮಾಯ್ ನೇರವಾಗಿ ಭಾಗವತಮ್ ಗ್ರಂಥಕ್ಕೆ ಕೈ ಹಾಕಿದ.

ಅಲ್ಲಿ ಸೇರಿದ್ದವರಿಗೆಲ್ಲ ಅಚ್ಚರಿಯಾಯಿತು. ಅವರಲ್ಲೊಬ್ಬ ಹಿರಿಯರು ”ಈತ ಶ್ರೀಕೃಷ್ಣನ ಭಕ್ತ ಶ್ರೇಷ್ಠನಾಗುತ್ತಾನೆ, ಭಾಗವತವನ್ನು ಬೋಧಿಸುತ್ತಾನೆ” ಎಂದು ಭವಿಷ್ಯ ನುಡಿದರು.

ಈ ಮಾತು ಅಕ್ಷರಶಃ ನಿಜವಾಗಿತ್ತು. ನಿಮಾಯ್‌ ಮುಂದೆ ಕೃಷ್ಣ ಭಕ್ತಿಯಲ್ಲಿಯೇ ಈಜಾಡಿದ. ಪರಮಭಕ್ತನಾದ ಭಾಗವತವನ್ನು ಬೋಧಿಸಿ ಶ್ರೇಷ್ಠ ಆಚಾರ್ಯನಾದ. ಜನ ಈತನನ್ನು “ನಿಮಾಯ್ ಪಂಡಿತ” ಎಂದು ಕರೆದರು.

ಶೇಷ ಶಯನ

ನಿಮಾಯ್‌ ಬಹಳ ತುಂಟ ಹುಡುಗ. ಮನೆಯೊಳಗೆ ನಿಲ್ಲಲ್ಲೊಲ್ಲ. ಸದಾ ಹೊರಗೆ ಅವನ ಆಟ ಪಾಠ.

ಒಂದು ದಿನ ಶಚೀದೇವಿ ನಿಮಾಯ್‌ನನ್ನು ನೆಲದ ಮೇಲೆ ಮಲಗಿಸಿ ತನ್ನ ಕೆಲಸಗಳಲ್ಲಿ ತಲ್ಲೀನಳಾಗಿದ್ದಳು. ಇತ್ತ ನಿಮಾಯ್ ಅಮ್ಮನತ್ತ ಕಳ್ಳನೋಟ ಬೀರುತ್ತ, ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿ ಹೊರಗೆ ಬಂದ. ಅಂಗಳದಲ್ಲಿ ತಲೆ ಎತ್ತಿ ನಿಂತಿದ್ದ ಬೇವಿನ ಮರದ ನರಳಲ್ಲಿ ಆಡಿಕೊಳ್ಳತೊಡಗಿದ.

ಆ ಹೊತ್ತಿಗೆ ಎತ್ತಲಿಂದಲೋ ಒಂದು ನಾಗರ ಹಾವು ಹೆಡೆಯಾಡಿಸುತ್ತ ಅವನತ್ತ ಬಂತು. ಅದನ್ನು ನೋಡಿದ ನಿಮಾಯ್ ಸಂತೋಷದಿಂದ ಕೇಕೆ ಹಾಕಿ ನಕ್ಕ. ಹತ್ತಿರ ಬಂದ ನಾಗರ ಹಾವಿನ ತಣ್ಣನೆ ಮೈಯನ್ನು ಸವರಿದ. ಆ ಹಾವು ಅವನ ಮೈಗೆ ಸುತ್ತಿಕೊಂಡು ಕೊಂಚ ಹೊತ್ತು ಆಟವಾಡಿತು.

‘ನಿಮಾಯ್ ಎಲ್ಲಿಗೆ ಹೋದೆ?’ ಎಂದು ಅರಸುತ್ತ ಬಂದ ಶಚೀದೇವಿ ನಾಗರ ಹಾವು ನಿಮಾಯ್‌ಗೆ ಸುತ್ತಿಕೊಂಡಿರುವುದನ್ನು ನೋಡಿ ಭೀತಳಾದಳು. ಜಗನ್ನಾಥ ಮಿಶ್ರರಿಗೆ ಗಾಬರಿಯಾದರೂ ಕಿರುಚದ ಹಾವು ಮಗುವಿಗೆ ಕಚ್ಚಬಹುದೆಂದು ಬಗೆದು ಸುಮ್ಮನಿರುವಂತೆ ಸೂಚಿಸಿದರು.

ಇತ್ತ ಹಾವಿನೊಡನ ಆಡಿ ದಣಿದ ನಿಮಾಯ್ ಸಿಂಬೆ ಸುತ್ತಿ ಕುಳಿತಿದ್ದ ಅದರ ಮಡಿಲಲ್ಲೇ ಮಲಗಿ ನಿದ್ದೆ ಹೋದ! ಆ ಹೊತ್ತಿಗೆ ಅಲ್ಲಿ ನೆರೆಹೊರೆಯವರೆಲ್ಲ ಸೇರಿದ್ದರು. ನಿಮಾಯ್‌ ಎಚ್ಚರವಾಗುತ್ತಲೇ ಹಾವು ಅಲ್ಲಿಂದ ಸರಿದು, ಪೊದೆಯಲ್ಲಿ ಮರೆಯಾಯ್ತು.

ಸಂತೋಷ, ಸಮಾಧಾನ, ಅಚ್ಚರಿ ಎಲ್ಲವೂ ಅತಿಶಯವಾಗಿ ಭಾವೋದ್ರೇಕಕ್ಕೆ ಒಳಗಾದ ಶಚೀದೇವಿ ಮಗುವನ್ನು ಅಪ್ಪಿಕೊಂಡು ಮುತ್ತಿಟ್ಟಳು. ಜನರೆಲ್ಲ ನಿಮಾಯ್‌ ಧೈರ್ಯಕ್ಕೆ ಮೆಚ್ಚಿ ಹರ್ಷೋದ್ಗಾರ ಮಾಡಿದರು. ಬಹು ದೊಡ್ಡ ವಿಪತ್ತಿನಿಂದ ಪಾರಾದ ಎ೦ದು ಕೊಂಡಾಡಿದರು.

ನಾಗರಹಾವು ನಿಮಾಯ್‌ಗೆ ತೊಂದರೆ ಮಾಡದೇ ಇದ್ದುದು ಸಹಜವೇ. ಏಕೆಂದರೆ ಆ ನಾಗರ ಹಾವೇ ಹಿಂದೆ ದ್ವಾಪರ ಯುಗದಲ್ಲಿ ಬಲರಾಮನಾಗಿದ್ದ ಅನಂತ ಶೇಷ. ಮತ್ತು ನಿಮಾಯ್ ಆತನ ತಮ್ಮನಾಗಿ ಜನಿಸಿದ್ದು ಸಾಕ್ಷಾತ್ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi