ಶ್ರೀ ಮಧ್ವಾಚಾರ್ಯರಿಂದ ಪುನೀತವಾದ ಕ್ಷೇತ್ರಗಳು

ಶ್ರೀ ಕ್ಷೇತ್ರ ಪಾಜಕ:

ಪಾಜಕ, ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ. ಇದು ಉಡುಪಿಯಿಂದ ಏಳು ಮೈಲು ದೂರದಲ್ಲಿ, ದಕ್ಷಿಣ ದಿಕ್ಕಿನಲ್ಲಿದೆ. ಆನಂದ ತೀರ್ಥರ (ಶ್ರೀ ಮಧ್ವಾಚಾರ್ಯರ ಮತ್ತೊಂದು ಹೆಸರು) ಈ ಜನ್ಮಭೂಮಿಯಲ್ಲಿ ತೀರ್ಥಗಳು ಬಹಳ. ಸುಪ್ರಸಿದ್ಧ ದುರ್ಗಾಬೆಟ್ಟದ ನಾಲ್ಕೂ ಬದಿಗಳಲ್ಲಿ ಪರಶುತೀರ್ಥ, ಧನುಸ್ತೀರ್ಥ, ಗದಾತೀರ್ಥ, ಬಾಣತೀರ್ಥಗಳೆಂಬ ಪುಣ್ಯ ತೀರ್ಥಗಳಿವೆ. ಇವುಗಳನ್ನು ಪಾಪ ಪರಿಹಾರಕೆಂದು ಪ್ರಸಿದ್ಧವಾಗಿವೆ.

ಇವುಗಳ ಜೊತೆಗೆ, ಸ್ವತಃ ಶ್ರೀಮಧ್ವಾಚಾರ್ಯರು ತಮ್ಮ ತಾಯಿಗಾಗಿ ನಿರ್ಮಿಸಿಕೊಟ್ಟ ವಾಸುದೇವ (ವಾಸುದೇವ ಮಧ್ವಾಚಾರ್ಯರ ಜನ್ಮನಾಮ) ತೀರ್ಥವೂ ಪಾಜಕ ಕ್ಷೇತ್ರದಲ್ಲಿದೆ.

ಶ್ರೀ ಮಧ್ವಾಚಾರ್ಯರು ಅಸೀಮ ಬಲದ, ತೇಜಸ್ಸಿನ ಬಾಲಕನಾಗಿದ್ದರು. ಅವರ ಬಾಲಲೀಲೆ ಅನೇಕ ಆಕರ್ಷಣೆಗಳಿಂದ ಕೂಡಿತ್ತು. ಆಚಾರ್ಯರ ಕಿಶೋರ ಲೀಲೆಗಳನ್ನು ಸ್ಮರಿಸುವ ಕುರುಹುಗಳು ಇಂದಿಗೂ ಪಾಜಕದಲ್ಲಿದ್ದು ನೋಡುಗರ ಹೃನ್ಮನದಲ್ಲಿ ಭಕ್ತಿಭಾವವನ್ನು ಉದ್ದೀಪಿಸುತ್ತವೆ.

ಶ್ರೀ ಮಧ್ವಾಚಾರ್ಯರ ಹಿರಿಯರು ವಾಸ ಮಾಡಿದ ಮನೆ (ಈಗ ಇದು ಮೂಡುಮಠವೆಂದು ಕರೆಯಲ್ಪಡುತ್ತದೆ), ತಂದೆಯ ಸಾಲಗಾರನೊಬ್ಬನಿಗೆ ಆಚಾರ್ಯರು ಹುಣಸೇಬೀಜಗಳನ್ನಿತ್ತು ತೃಪ್ತಿಪಡಿಸಿದ ಸ್ಥಳ,

ತಾಮಸಿಕ ಮನಸ್ಸಿನ ದುಷ್ಟನೊಬ್ಬ ಹಾವಾಗಿ ಬಂದು ಕಚ್ಚಲು ಯತ್ನಿಸಿದಾಗ ಕಾಲಿನಿಂದಲೇ ಮಟ್ಟಿ ಕೊಂದ ಸ್ಥಳ, ಹೊಸ ತತ್ತ್ವವನ್ನು ತಾನು ಪ್ರಚಾರ ಮಾಡಲಿರುವನೆಂಬುದನ್ನು ತಂದೆ ನಂಬದೆ ಹೋದಾಗ, ಒಣಕೋಲನ್ನು ಚಿಗುರಿಸಿ ಅವರ ನಂಬಿಕೆ ಗಳಿಸಿದ ಸ್ಥಳ, ಮೊಸರು ಕಲ್ಲು, ವಿದ್ಯಾಭ್ಯಾಸದ ಕಲ್ಲು… ಹೀಗೆ ಪಾಜಕದಲ್ಲಿ ಪ್ರತಿಯೊಂದು ಶ್ರೀ ಆಚಾರ್ಯರ ಬಾಲಲೀಲೆಯ ಸಾಕ್ಷಿಗಳಾಗಿ ನಿಂತಿವೆ.

ದಂಡತೀರ್ಥ:

ಇದು ಉಡುಪಿಯಿಂದ 6-7 ಮೈಲು ದೂರದಲ್ಲಿದೆ. ತಮ್ಮ ಬಾಲ್ಯದ ವಿದ್ಯಾ ಗುರುಗಳಿಗೆ ಗುರುದಕ್ಷಿಣೆ ನೀಡುವ ಸಲುವಾಗಿ ಶ್ರೀಮ‍ಧ್ವಾಚಾರ್ಯರು ಒಂದು ತೀರ್ಥವನ್ನು ನಿರ್ಮಿಸಿ, ದಂಡದಿಂದ ಅವರ ಹೊಲಗಳಿಗೆ ನೀರು ಹರಿಯುವಂತೆ ಮಾಡಿದುದರಿಂದ ಇದಕ್ಕೆ “ದಂಡ ತೀರ್ಥ” ಎಂದು ಹೆಸರು. ಇಲ್ಲಿ, ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಧೀಶ ತೀರ್ಥರು ಪ್ರತಿಷ್ಠಾಪಿಸಿದ ಮಠವಿದ್ದು, ಶ್ರೀಪ್ರಾಣದೇವರು ಪೂಜೆಗೊಳ್ಳುತ್ತಾರೆ.

ಒಡಭಾಂಡೇಶ್ವರ:

ಉಡುಪಿಯಿಂದ ನಾಲ್ಕು ಮೈಲಿ ಪಶ್ಚಿಮಕ್ಕೆ ಒಡಭಾಂಡೇಶ್ವರವೆಂಬ ಕ್ಷೇತ್ರವಿದೆ. ಇದೊಂದು ಬಲರಾಮ ಕ್ಷೇತ್ರ. ಇಲ್ಲಿಯೇ ಶ್ರೀಮಧ್ವಾಚಾರ್ಯರು ಸಮುದ್ರದಲ್ಲಿ ಬಿರುಗಾಳಿಗೆ ಸಿಕ್ಕ ಹಡಗನ್ನು ಅಪಾಯದಿಂದ ಪಾರುಮಾಡಿ, ಪ್ರಸ್ತುತ ಉಡುಪಿಯಲ್ಲಿ ಪೂಜೆಗೊಳ್ಳುತ್ತಿರುವ ಕಡಗೋಲು ಕೃಷ್ಣನ ವಿಗ್ರಹವನ್ನು ಸಂಪಾದಿಸಿದುದು.

ಈ ಸ್ಥಳದಲ್ಲಿ ಸಮುದ್ರ ಸ್ನಾನವು ಪುಣ್ಯಪ್ರದವೆಂದು ಪ್ರತೀತಿ. ಆಚಾರ್ಯರ ಈ ಲೀಲೆಯ ವಿಶೇಷ ಅನುಗ್ರಹದ ಪ್ರಭಾವದಿಂದಲೇ ಇಂದಿಗೂ ಕರಾವಳಿ ಹಡಗು ಸಂಚಾರ ಕಾಲದಲ್ಲಿ ಅಪಾಯವೊದಗಿದಾಗ ಈ ‍ಸ್ಥಳದಲ್ಲಿ ಆಶ್ರಯ ಪಡೆದು ಪಾರಾಗುವುದು ಸಾಧ್ಯವಾಗಿದೆ.

ಸುಬ್ರಹ್ಮಣ್ಯ:

ಇದೊಂದು ನಾಗಕ್ಷೇತ್ರ. ಶ್ರೀಮನ್ಮಧ್ವಾಚಾರ್ಯರು ಈ ಕ್ಷೇತ್ರದಲ್ಲಿದ್ದ ಭಾಟ್ಟ ಸಂನ್ಯಾಸಿಗಳೊಬ್ಬರನ್ನು ಪರಾಜಯಗೊಳಿಸಿದರು. ಆಗ ಅವರು ತಮ್ಮ ಮಠವನ್ನು ಆಚಾರ್ಯರಿಗೆ ಒಪ್ಪಿಸಿ ಶರಣಾದರು. ಮುಂದೆ ಶ್ರೀಮ‍ಧ್ವಾಚಾರ್ಯರ ಪೂರ್ವಾಶ್ರಮದ ಸಹೋದರರೂ, ಶಿಷ್ಯರೂ ಆದ ಶ್ರೀ ವಿಷ್ಣುತೀರ್ಥಾಚಾರ್ಯರು ಅದನ್ನು ವಹಿಸಿಕೊಂಡರು.

ತಮ್ಮ ಶಿಷ್ಯರ ಅಪೇಕ್ಷೆಯಂತೆ ವಿಷ್ಣುತೀರ್ಥರು ತಾವು ತಪೋನಿರತರಾಗಿದ್ದ ಸ್ಥಳದಿಂದ ಕುಮಾರಧಾರ ನದಿಯ ಮೂಲಕ ದರ್ಪಣ, ಅಕ್ಷಯಪಾತ್ರೆ ಮತ್ತು ಸಂಪುಟಗಳನ್ನು ಕಳುಹಿಸಿಕೊಟ್ಟರು. ಈ ಕಾರಣದಿಂದಲೇ ಈ ಕ್ಷೇತ್ರವು “ದರ್ಪಣ ತೀರ್ಥ”ವೆಂಬ ಹೆಸರನ್ನೂ ಹೊತ್ತಿದೆ.

ನಡ್ಯಂತಾಡಿ:

ಶ್ರೀಮಧ್ವಾಚಾರ್ಯರು ಸುಬ್ರಹ್ಮಣ್ಯ-ಉಡುಪಿಗಳ ನಡುವೆ ಪ್ರಯಾಣ ಬೆಳೆಸುವಾಗ ಮಧ್ಯಾಹ್ನಿಕಕ್ಕೆ ಅನುಕೂಲವಾಗುವಂತೆ ಒಂದು ಸ್ಥಳವನ್ನು ಗೊತ್ತುಮಾಡಿಕೊಂಡಿದ್ದರು. ಅದೇ ಮಧ್ಯವಾಟಮಠ ಅಥವಾ ನಡ್ಯಂತಾಡಿ. ಶ್ರೀಮ‍ಧ್ವಾಚಾರ್ಯರು ಈ ಸಂದರ್ಭದಲ್ಲಿ ವಿಶ್ರಮಿಸಿಕೊಂಡಿದ್ದ ಮಂಟಪ.

ಗೌತಮಕುಂಡ, ಗದಾತೀರ್ಥಗಳು ಇಂದಿಗೂ ಸುಸ್ಥಿತಿಯಲ್ಲಿವೆ. ಮಂಗಳೂರಿನಿಂದ ಚಾರ್ಮುಡಿಗೆ ಹೋಗುವ ಬಸ್ಸು ದಾರಿಯಲ್ಲಿ ಕಾವಳಕಟ್ಟೆ ಎಂಬಲ್ಲಿ ಇಳಿದು ಎರಡು ಮೈಲು ನಡೆದರೆ, “ನಡ್ಯಂತಾಡಿ” ಎದುರಾಗುತ್ತದೆ.

ಕಣ್ವತೀರ್ಥ:

ಕಣ್ವ ಮಹರ್ಷಿಗಳಿಂದ ಪೂಜಿತರಾದ ಶ್ರೀರಾಮನ ವಿಗ್ರಹವು ಇಲ್ಲಿದ್ದುದರ ಕಾರಣದಿಂದ “ಮಂಜೇಶ್ವರ”ಕ್ಕೆ “ಕಣ್ವತೀರ್ಥ” ಎಂಬ ಹೆಸರೂ ಇದೆ. ಮೊದಲು ಈ ವಿಗ್ರಹವು ಶ್ರೀ ವಿಜಯಧ್ವಜ ತೀರ್ಥರು ಸ್ಥಾಪಿಸಿದ ಮಠದಲ್ಲಿದ್ದು, ಈಗ ಪೇಜಾವರ ಮಠದಲ್ಲಿದೆ. ಕಣ್ವತೀರ್ಥ ಒಂದು ಅತಿಮುಖ್ಯ ಪುಣ್ಯಸ್ಥಳ.

ಶ್ರೀಮಧ್ವಾಚಾರ್ಯರು ತಮ್ಮ ಶಿಷ್ಯರಾಗಿದ್ದ ಅಷ್ಟ ಯತಿಗಳಿಗೆ ಆಶ್ರಮದೀಕ್ಷೆ ನೀಡಿದ್ದು ಇಲ್ಲಿಯೇ. ಅಂದು ಯಾವ ಅಶ್ವತ್ಥ ಕಟ್ಟೆಯ ಮೇಲೆ ಆಚಾರ್ಯರು ದೀಕ್ಷೆ ನೀಡಿದ್ದರೋ, ಅದನ್ನು ಇಂದಿಗೂ ನಾವು ನೋಡಬಹುದು. ಶ್ರೀ ಆಚಾರ್ಯರು ಇಲ್ಲಿ ಚಾತುರ್ಮಾಸ್ಯವನ್ನು ಕಳೆದಿದ್ದರು.

ಸೇತುತಿಲ (ಕಡ್ತಿಲ):

ಶ್ರೀಮಧ್ವಾಚಾರ್ಯರು ತಮ್ಮ ಗ್ರಂಥಗಳನ್ನು ಸ್ಥಾಪಿಸಿ, ಶ್ರೀ ಗೋಪಾಲಕೃಷ್ಣ ದೇವರನ್ನು ಇರಿಸಿರುವ ಪವಿತ್ರ ಸ್ಥಳ-ಸೇತು ತಿಲ. ಈ ಗೋಪಾಲಕೃಷ್ಣನಿಗೆ ಬ್ರಹ್ಮಚಾರಿಗಳಿಂದಲೇ ಪೂಜೆಯಾಗಬೇಕು. ಅದರಲ್ಲೂ ಉಡುಪಿಯ ಯತಿಗಳಿಗೆ ಮಾತ್ರ ಮೂಲ ವಿಗ್ರಹವಿರುವ ಪೀಠವನ್ನು ಮುಟ್ಟಿ ಪೂಜಿಸುವ ಅವಕಾಶ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi