ಗಿರಿರಾಜ ಗೋವರ್ಧನನನ್ನು ಎರಡು ಬಗೆಯಲ್ಲಿ ಅರಿಯಬೇಕೆಂದು ವೈದಿಕ ಶಾಸ್ತ್ರಗ್ರಂಥಗಳು ಹೇಳಿವೆ. ಮೊದಲನೆಯದಾಗಿ – ಭಗವಾನ್ ಶ್ರೀಕೃಷ್ಣನ ಶ್ರೇಷ್ಠ ಭಕ್ತನೆಂದು, ಎರಡನೆಯದಾಗಿ – ಸ್ವತಃ ಭಗವಂತನಿಗಿಂತ ಅಭಿನ್ನವೆಂದು.

ಒಬ್ಬ ಅತ್ಯುನ್ನತ ಸೇವಕನಂತೆ ಗೋವರ್ಧನ ಗಿರಿರಾಜನು ಶ್ರೀಕೃಷ್ಣ ಬಲರಾಮರಿಗೆ ಮತ್ತು ವೃಂದಾವನದ ನಿವಾಸಿಗಳಿಗೆ ಅತ್ಯಗತ್ಯವೆನಿಸಿದ್ದ ಎಲ್ಲವನ್ನೂ ಒದಗಿಸುತ್ತಿದ್ದನು. ತನ್ನ ಜಲಧಾರೆಗಳಿಂದ ಅವರ ದಾಹ ತಣಿಸುತ್ತಿದ್ದನು. ಬಗೆ ಬಗೆಯ ವೃಕ್ಷಗಳನ್ನು ತನ್ನಲ್ಲಿ ಹೊತ್ತು ಸ್ವಾದಿಷ್ಟವಾದ ಫಲಗಳನ್ನೂ, ಸುಗಂಧ ಪುಷ್ಪಗಳನ್ನೂ ನೀಡುತ್ತಿದ್ದನು. ಗಿಡ ಮೂಲಿಕೆಗಳನ್ನೂ ಪಶುಗಳಿಗೆ ಮೇವನ್ನೂ ಒದಗಿಸುತ್ತಿದ್ದನು.
ಈ ಪವಿತ್ರಗಿರಿಯು ಕೃಷ್ಣ-ಬಲರಾಮರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ತಣ್ಣನೆಯ ಗುಹೆಗಳನ್ನು ಒದಗಿಸುತ್ತಿತ್ತು. ಆಡಿ ದಣಿದ ಗೋಪಬಾಲರೊಡಗೂಡಿದ ಕೃಷ್ಣ ಬಲರಾಮರು ಇಲ್ಲಿ ಕುಳಿತು ಆಯಾಸ ಪರಿಹರಿಸಿಕೊಳ್ಳುತ್ತಿದ್ದರು.
ಗೋವರ್ಧನ ಗಿರಿಯು ಹಸುಗಳಿಗೆ ಅತ್ಯುತ್ತಮವಾದ ಆಹಾರವನ್ನು ಒದಗಿಸುತ್ತಿತ್ತು. ಕೃಷ್ಣನಿಗೆ ಅತ್ಯಂತ ಪ್ರಿಯವಾದ ಗೋವುಗಳು ಯಾವ ಭಯವೂ ಇಲ್ಲದೆ ಗಿರಿರಾಜನ ಮಡಿಲಿನಲ್ಲಿ ಸುಖವಾಗಿ ಮೇಯುತ್ತಿದ್ದವು. ದಷ್ಟಪುಷ್ಟವಾಗಿ ಬೆಳೆದು ಹಾಲಿನ ಹೊಳೆ ಹರಿಸುತ್ತಿದ್ದವು.

ವೃಂದಾವನ ವಾಸಿಗಳ ಆರ್ಥಿಕ ಸಮೃದ್ಧಿಗೆ ಹಾಲು ಮೂಲಾಧಾರವಾಗಿತ್ತು. ಆದ್ದರಿಂದ ಕೃಷ್ಣನು ಇಂದ್ರನಿಗಾಗಿ ಯಜ್ಞನಡೆಸದೆ, ತಮ್ಮ ಹಸುಗಳಿಗೆ ಆಶ್ರಯದಾತನಾದ ಗಿರಿರಾಜನನ್ನು ಪೂಜಿಸಿ ಉತ್ಸವ ನಡೆಸಬೇಕೆಂದು ಸಲಹೆ ನೀಡಿದನು.
ಗೋವರ್ಧನ ಗಿರಿರಾಜನು ಶ್ರೀ ರಾಧಾಕೃಷ್ಣರ ಪ್ರೇಮ ಲೀಲಾ ವಿನೋದಗಳಿಗೂ ಸಾಕ್ಷಿಯಾಗಿದ್ದನು.
ವೇದ ಶಾಸ್ತ್ರಗಳು ಗೋವರ್ಧನ ಗಿರಿಯು ದೇವೋತ್ತಮ ಪರಮ ಪುರುಷನಿಗಿಂತ ಅಭಿನ್ನ ಎಂದು ಹೇಳಿವೆ. ಶ್ರೀ ಚೈತನ್ಯ ಮಹಾಪ್ರಭುಗಳು ವ್ರಜಕ್ಕೆ ಭೇಟಿ ನೀಡಿದಾಗ ಈ ಮಾತನ್ನು ಸ್ಪಷ್ಟ ಪಡಿಸಿದರು.
ಮಹಾಪ್ರಭುಗಳು 1515ರಲ್ಲಿ ಗೋವರ್ಧನ ಗಿರಿಗೆ ಭೇಟಿ ನೀಡಿದರು. ಆದರೆ ಅವರು ಗಿರಿಯನ್ನೇರಲು ಒಪ್ಪಲಿಲ್ಲ. ಏಕೆಂದರೆ, ಕೃಷ್ಣ ಮತ್ತು ಗಿರಿರಾಜರು ಅಭಿನ್ನರೆಂದು ಅವರು ಅರಿತಿದ್ದರು. ಗೋವರ್ಧನ ಗಿರಿಯ ಪ್ರತಿಯೊಂದು ಕಲ್ಲು ಕೂಡ ಪೂಜಾರ್ಹ, ಅವು ಶ್ರೀಕೃಷ್ಣನ೦ದೇ ಪೂಜಿಸಲ್ಪಡಬೇಕು.

ಮಹಾಭಕ್ತರಾದ ಸನಾತನ ಗೋಸ್ವಾಮಿ, ರಘುನಾಥದಾಸ ಗೋಸ್ವಾಮಿ, ಮತ್ತು ಸ್ವತಃ ಶ್ರೀ ಚೈತನ್ಯ ಮಹಾಪ್ರಭುಗಳು ಗೋವರ್ಧನ ಶಿಲೆಯನ್ನು ಪೂಜಿಸಿರುವರು.
ಗೋವರ್ಧನ ಗಿರಿಯ ಆಕಾರವು ನವಿಲಿನಂತಿರುವುದು. ನವಿಲು ತನ್ನ ಕುತ್ತಿಗೆಯನ್ನು ಒಂದು ಬದಿಗೆ ಹೊರಳಿಸಿ ವಿಶ್ರಮಿಸುತ್ತಿರುವಂತೆ ಅದು ತೋರುತ್ತದೆ.
ನವಿಲಿನಾಕಾರದ ಗಿರಿರಾಜನ ಮುಖವು ‘ಕುಸುಮ ಸರೋವರ’ ವೆಂದೂ, ಕುತ್ತಿಗೆಯು ‘ಮಾನಸಿಗಂಗಾ’ ಎಂದೂ, ಬಾಯಿಯು ‘ಮುಖಾರವಿಂದ’ ಎಂದೂ, ಎರಡು ಕಣ್ಣುಗಳು ‘ರಾಧಾಕುಂಡ’ ಮತ್ತು ‘ಶಾಮಕುಂಡ’ ಗಳೆಂದೂ, ಬಾಲದ ಆರಂಭದ ಭಾಗವು ‘ಬಲರಾಮ ಸ್ಥಳ’ ಎಂದೂ, ಅದರ ತುದಿಯು ‘ಪುಂಜರಿ ಕುಂಡ ಅಥವಾ ನವಲಕುಂಡ’ ಎಂದೂ ಕರೆಯಲ್ಪಡುತ್ತವೆ.






Leave a Reply