– ಸುಬ್ರಹ್ಮಣ್ಯ.ಎಂ.ಕೆ
ಆಗಸ್ಟ್ 28, 2026 ಶ್ರೀ ಹಯಗ್ರೀವ ಜಯಂತಿ. ಇದರ ಪ್ರಯುಕ್ತ ನಿಮಗಾಗಿ ಹಯಗ್ರೀವ ದೇವರ ಕುರಿತು ಕಿಂಚಿತ್ ಮಾಹಿತಿ…
ಶ್ರೀಮನ್ನಾರಾಯಣನ ಅವತಾರಗಳಲ್ಲಿ ಜ್ಞಾನಕಾರ್ಯಕ್ಕೆಂದೇ ವಿಶೇಷವಾಗಿ ಅವತರಿಸಿದ ರೂಪವೇ, ಕುದುರೆ ಮುಖ ಹಾಗೂ ನರ ಶರೀರ ಹೊಂದಿರುವ “ಹಯಗ್ರೀವ” / “ಹಯವದನ”. “ಹಯ” ಎಂದರೆ ಕುದುರೆ, ಏಕೆಂದರೆ “ಹಯ ಗತೌ” ಎಂದು ಹೇಳುತ್ತಾರೆ, ಅರ್ಥಾತ್ ಅತ್ಯಂತ ವೇಗವಾಗಿ ಹೋಗುತ್ತದೆ ಎಂದು.

“ಗ್ರೀವ” ಎಂದರೆ ಕುತ್ತಿಗೆ. “ವದನ” ಎಂದರೆ ಮುಖ. ಆದ್ದರಿಂದ ಹಯಗ್ರೀವ / ಹಯವದನ ಎಂದರೆ ಕುದುರೆ ಮುಖವುಳ್ಳ ಎಂದರ್ಥ. ಜೀವಿಗಳಿಗೆ ಅಜ್ಞಾನವನ್ನು ಹೋಗಲಾಡಿಸಿ ಸತ್ಪ್ರಾಪ್ತಿ ಹಾಗೂ ನಿಜವಾದ ಜ್ಞಾನವನ್ನು ನೀಡುವ ಪರಮಾತ್ಮನ ರೂಪವೇ ಹಯಗ್ರೀವ.
ಕುದುರೆಯ ಧ್ವನಿಯನ್ನು “ಹ್ಯೇಷಾ” ಎಂದು ಕರೆಯುತ್ತಾರೆ ಮತ್ತು ಇದು ಸಾಮವೇದದ ಸಾರವಾಗಿದೆ. ಭಗವದ್ಗೀತೆಯಲ್ಲಿ ತಿಳಿಸಿರುವಂತೆ ಭಗವಂತನು ಸಾಮವೇದ ಪ್ರಿಯನು. ಆದ್ದರಿಂದಲೇ ಅವನು ಹಯಗ್ರೀವ ರೂಪದಿಂದ ಅವತಾರ ಮಾಡಿದನು.
ಹಯಗ್ರೀವ ಅವತಾರದ ಹಿನ್ನೆಲೆ:
ಪ್ರಳಯಕಾಲ ಮುಗಿಯಲು ಬಂದು ಸೃಷ್ಟಿಕಾಲ ಶುರುವಾದಾಗ ಮೊದಲು ಚತುರ್ಮುಖ ಬ್ರಹ್ಮನ ಸೃಷ್ಟಿಯಾಯಿತು. ಆಗ ಅವನು ವೇದಗಳನ್ನು ವಿಷ್ಣುವಿನಿಂದ ಪಡೆದುಕೊಂಡನು. ನಂತರ ಬೇರೆ ದೇವತೆಗಳ ಸೃಷ್ಟಿಗಿಂತ ಪೂರ್ವದಲ್ಲಿ, ಪರಮಾತ್ಮನ ಕರ್ಣಪುಟದ (ಕಿವಿಯ) ಬಳಿಯ ಮಲರೂಪ ಬೆವರ ಹನಿಯಿಂದ “ಮಧು” ಮತ್ತು “ಕೖಟಭ”ರೆಂಬ ಇಬ್ಬರು ಮಹಾದೖತ್ಯರು ಹುಟ್ಟಿದರು.
ಶ್ರೀಹರಿಯ ಆದೇಶದಂತೆ ಚತುರ್ಮುಖ ಬ್ರಹ್ಮದೇವರು ಅವರಿಗೆ ಅವಧ್ಯತ್ವ ವರ ನೀಡಿದರು. ಉನ್ಮತ್ತರಾದ ಅವರಿಬ್ಬರೂ ಪ್ರಳಯ ಜಲದಲ್ಲಿ ಬೆಳೆಯತೊಡಗಿದರು. ನಂತರ ಅವರಿಬ್ಬರೂ ಚತುರ್ಮುಖ ಬ್ರಹ್ಮನ ಮುಖದಿಂದ ಹೊರಹೊಮ್ಮಿದ ವೇದಗಳ ಸಮೂಹವನ್ನು ಅಪಹರಿಸಿದರು. ಆಗ ಮನೋವೇಗದಲ್ಲಿ ಅವುಗಳನ್ನು ಚತುರ್ಮುಖ ಬ್ರಹ್ಮನಿಗೆ ಹಿಂತಿರುಗಿಸಿ ಕೊಡಲು ಶ್ರೀಹರಿಯು “ಹಯಗ್ರೀವ” ರೂಪದಿಂದ ಅವತರಿಸಿದ.
ಸಕಲ ವೇದರಾಶಿಗಳನ್ನೂ ಹಯಗ್ರೀವನು, ಚತುರ್ಮುಖ ಬ್ರಹ್ಮನಿಗೆ ಅವರಿಬ್ಬರಿಂದ ಮರಳಿ ತಂದುಕೊಟ್ಟು, ಅವರಿಬ್ಬರನ್ನೂ ತನ್ನ ತೂಡೆಯ ಮೇಲೆ ಹೊಸಕಿ ಕೊಂದುಹಾಕಿದ. ಆ ಅಸುರರ ಮೇದಸ್ಸಿನಿಂದ ಈ ಭೂಮಿಯು ನಿರ್ಮಾಣಗೊಂಡದ್ದರಿಂದ, ಭೂಮಿಗೆ “ಮೇದಿನಿ” ಎಂಬ ಹೆಸರಿದೆ. ಆ ಅಸುರರ ಮೇದಸ್ಸಿನಿಂದ ನಿರ್ಮಾಣವಾದ್ದರಿಂದ ಭೂಮಿಯು ಅಪವಿತ್ರ ಎನಿಸಿಕೊಳ್ಳುತ್ತದೆ. ಆದ್ದರಿಂದ ಅದರ ಪಾವಿತ್ರ್ಯಕ್ಕಾಗಿ “ಗೋಮಯ” ಲೇಪನ ಅತ್ಯವಶ್ಯ ಎಂದು ನಾರದೀಯ ಪುರಾಣ ಹೇಳುತ್ತದೆ.
ಹಯಗ್ರೀವ ರೂಪದ ಮಹತ್ವ:

ಪರಮಾತ್ಮನ ಮೂಲರೂಪಕ್ಕೂ ಹಾಗೂ ಅವನ ಅವತಾರ ರೂಪಗಳಿಗೂ ಯದ್ಯಪಿ ಅಬೇಧವಿದ್ದರೂ, ಅವತಾರ ರೂಪಗಳಲ್ಲಿ ಜನರಿಗೆ ಮಾರ್ಗದರ್ಶನ ನೀಡಲು ತನ್ನ ಅನಂತ ಗುಣಗಳಲ್ಲಿ ಕೆಲವನ್ನು ಹೆಚ್ಚಾಗಿ ವ್ಯಕ್ತಪಡಿಸುತ್ತಾನೆ. ಉದಾಹರಣೆಗೆ, ರಾಮಾದಿ ರೂಪಗಳಲ್ಲಿ “ಬಲ”ಕಾರ್ಯಕ್ಕೆ ಪ್ರಾಧಾನ್ಯತೆ ಕೊಟ್ಟಿದ್ದರೆ, ವೇದವ್ಯಾಸ, ಹಯಗ್ರೀವ ಇತ್ಯಾದಿ ರೂಪಗಳಲ್ಲಿ “ಜ್ಞಾನ”ಕಾರ್ಯಕ್ಕೆ ಪ್ರಾಧಾನ್ಯತೆ ಕೊಟ್ಟಿದೆ.
ಆದ್ದರಿಂದ ವಿದ್ಯೆ, ವೇದೋಪನಿಷತ್, ಪುರಾಣ, ಇತಿಹಾಸ, ಶಾಸ್ತ್ರ ಜ್ಞಾನ ಬೇಕಿದ್ದರೆ ಮನಸ್ಸು ತೀಕ್ಷ್ಣವಾಗಿರಬೇಕು. ಆದಕಾರಣ, ಹಯಗ್ರೀವ ರೂಪದ ಉಪಾಸನೆ ಮಾಡಿದರೆ ಅದನ್ನು ಪಡೆಯಲು ಸಹಾಯವಾಗುತ್ತದೆ. ಶ್ರೀಹಯಗ್ರೀವ ದೇವರು ಸರ್ವವಿದ್ಯಾ ಪ್ರದಾಯಕರು. ಜ್ಞಾನ, ವಿದ್ಯೆ, ಬುದ್ಧಿ ಮತ್ತು ವಾಕ್ಶಕ್ತಿಯನ್ನು ಅನುಗ್ರಹಿಸುತ್ತಾರೆ.
ಹಯಗ್ರೀವ ರೂಪವು ತಮೋಗುಣ ಮತ್ತು ರಜೋಗುಣಗಳನ್ನು ನಿಯಂತ್ರಿಸಿ ಸಾತ್ವಿಕಗುಣಗಳನ್ನು ಅನುಗ್ರಹಿಸುತ್ತದೆ. ಈ ಅವತಾರವು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಯಿತು. ಆದ್ದರಿಂದ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಶ್ರೀಹಯಗ್ರೀವ ಜಯಂತಿಯನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಮುಮುಕ್ಷುಗಳು ಶ್ರೀಹಯಗ್ರೀವ ದೇವರ ಅನುಗ್ರಹ ಪಡೆಯಲು ಹಯಗ್ರೀವ ಜಯಂತಿಯನ್ನು ಆಚರಿಸುವುದು ಅತ್ಯಂತ ಅವಶ್ಯಕ.
ಯತಿಗಳು ತಮ್ಮ ತಪಸ್ಸಿನ / ಜಪದ ಸಮಯದಲ್ಲಿ ಪರಮಾತ್ಮನ ಅನೇಕ ರೂಪಗಳ ಚಿಂತನೆ ಮಾಡುತ್ತಿರುತ್ತಾರೆ. ಇದಕ್ಕೆ ಉದಾಹರಣೆಯಾಗಿ ಅಪ್ಪಣ್ಣಾಚಾರ್ಯರು ಶ್ರೀರಾಘವೇಂದ್ರಸ್ವಾಮಿಗಳ ಸ್ತೋತ್ರ ಮಾಡಿದಾಗ ಬೃಂದಾವನದ ಒಳಗಿಂದ “.. ಸಾಕ್ಷಿ ಹಯಾಸ್ಯೋsತ್ರಹಿ..” ಎಂದು ರಾಯರು ಸೂಚಿಸಿದ್ದಾರೆ. ಇದರಿಂದ ಅಪ್ಪಣ್ಣಾಚಾರ್ಯರು ರಾಯರ ಸ್ತೋತ್ರ ಮುಗಿಸುವ ಸಮಯದಲ್ಲಿ ಪ್ರಾಯಶಃ ರಾಯರು ಹಯಗ್ರೀವ ದೇವರ ಚಿಂತನೆ/ಉಪಾಸನೆ ಮಾಡುತ್ತಿರಬಹುದೆಂದು ತಿಳಿಯುತ್ತದೆ.
ಯತಿಗಳಾದ ಶ್ರೀವಾದಿರಾಜತೀರ್ಥರು ಹಯಗ್ರೀವ ದೇವರ ಪರಮೋಪಾಸಕರಾಗಿದ್ದರು. ಅವರು ಪ್ರತಿದಿನ ಹಯಗ್ರೀವವೆಂಬ ವಿಶೇಷ ಸಿಹಿನೈವೇದ್ಯವನ್ನು (ಕಡಲೆಬಾಳೆ, ಬೆಲ್ಲ, ತುಪ್ಪದ ಮಿಶ್ರಣ) ದೇವರಿಗೆ ಅರ್ಪಿಸಿದಾಗ, ಕುದುರೆ ರೂಪದಲ್ಲಿ ದೇವನು ಪ್ರತ್ಯಕ್ಷವಾಗಿ ಬಂದು ಅದನ್ನು ಸ್ವೀಕರಿಸುತ್ತಿದ್ದನೆಂದು ಐತಿಹಾಸಿಕ ಹಾಗೂ ರೋಚಕ ನಂಬಿಕೆಯಿದೆ.
ಇದನ್ನು ನಾವು ವಾದಿರಾಜರ ಚಿತ್ರದಲ್ಲಿ, ಅವರ ಎರಡೂ ಭುಜಗಳ ಮೇಲೆ ಅವರ ಹಿಂದಿನಿಂದ ತನ್ನ ಎರಡು ಕಾಲುಗಳನ್ನಿಟ್ಟು ಅವರ ತಲೆಯ ಮೇಲಿರಿಸಿಕೊಂಡ ಹಯಗ್ರೀವ ಎಂಬ ಸಿಹಿಯ ನೖವೇದ್ಯ ಸ್ವೀಕರಿಸುತ್ತಿರುವುದನ್ನು ಕಾಣಬಹುದು.
ಗ್ರಂಥಗಳಲ್ಲಿ ಹಯಗ್ರೀವ ರೂಪದ ಉಲ್ಲೇಖ:

- ಛಾಂದೋಗ್ಯ ಉಪನಿಷತ್ ಸಾಕ್ಷಾತ್ ಹಯಗ್ರೀವ ದೇವರ ಮುಖದಿಂದ ಹೊರಹೊಮ್ಮಿದ ವಾಗ್ಝರಿ. ಈ ಉಪನಿಷತ್ತಿನಿಂದಲೇ ರಮಾದೇವಿ ತನ್ನ ಪತಿಯನ್ನು ಹಾಡಿಹೊಗಳಿದ್ದಾಳೆ. ಆದ್ದರಿಂದ ಹಯಗ್ರೀವ ರೂಪಿ ಪರಮಾತ್ಮ ಹಾಗೂ ಲಕ್ಷ್ಮೀದೇವಿ ಈ ಉಪನಿಷತ್ತಿನ ಋಷಿಗಳು. ಶ್ರೀಮನ್ನಾರಾಯಣನೇ ಇದರ ಪ್ರತಿಪಾದ್ಯ ದೇವತೆಯಾಗಿದ್ದಾನೆ.
- ಬೃಹದಾರಣ್ಯಕ ಉಪನಿಷತ್ತಿನಲ್ಲೂ ಹಯಗ್ರೀವ ರೂಪದಿಂದ ವೇದಗಳು, ಇತಿಹಾಸ, ಪುರಾಣ, ಪಂಚರಾತ್ರ ಇತ್ಯಾದಿ ಆದಿಸೃಷ್ಟಿಯಲ್ಲಿ ಹೊರಹೊಮ್ಮುತ್ತವೆ ಎಂಬ ಉಲ್ಲೇಖವಿದೆ.
- ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದಲ್ಲೂ ಹಯಗ್ರೀವ ರೂಪದ ಅವತಾರ ಕಾರಣದ ಉಲ್ಲೇಖವಿದೆ.
- ಭಾಗವತ ತಾತ್ಪರ್ಯ ನಿರ್ಣಯ ಗ್ರಂಥದಲ್ಲಿ ವಿಶೇಷವಾಗಿ ಹಯಗ್ರೀವ ದೇವರ ಬಣ್ಣದ ಬಗ್ಗೆ (ಶ್ವೇತ/ಸುವರ್ಣ ಬಣ್ಣ) ಉಲ್ಲೇಖವಿದೆ.
- ತಂತ್ರಸಾರ ಸಂಗ್ರಹ ಗ್ರಂಥದಲ್ಲಿ ಮನಸ್ಸಿನ ಶುದ್ಧೀಕರಣ ಹಾಗೂ ಬೌದ್ಧಿಕ ಸ್ಮರಣಶಕ್ತಿಯ ವರ್ಧನೆಗಾಗಿ ಹಯಗ್ರೀವ ದೇವರ ಶಕ್ತಿಯನ್ನು ಆವಾಹಿಸಲು ಅಗತ್ಯವಾದ ಆಕಾರಾಂಶಗಳನ್ನು ಕೊಟ್ಟಿದ್ದಾರೆ.
ಹಯಗ್ರೀವ ರೂಪದ ಚಿಂತನೆಯ ಶ್ಲೋಕಗಳು:
“ಜ್ಞಾನಾನಂದಮಯಂ ದೇವಂ ನಿರ್ಮಲಸ್ಪಟಿಕಾಕೃತಿಂ l
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಮುಪಾಸ್ಮಹೇ ll”
ಈ ಶ್ಲೋಕದಿಂದ ಹಯಗ್ರೀವ ರೂಪಿ ಪರಮಾತ್ಮನ ಗುಣ, ರೂಪ, ಅವನ ಒಡೆತನವನ್ನು, ಬಣ್ಣವನ್ನು ವರ್ಣಿಸುತ್ತಾ ಅವನನ್ನು ಪ್ರಾರ್ಥಿಸಬಹುದು.
ಶ್ರೀವಾದಿರಾಜತೀರ್ಥರಿಂದ ರಚಿತವಾದ ಹಯಗ್ರೀವ ಸಂಪದಾ ಸ್ತೋತ್ರವು ಪರಮಾತ್ಮನ ನಾಮಸ್ಮರಣೆಯಿಂದ ಏನು ಫಲವೆಂದು ಬಹಳ ಸುಂದರವಾಗಿ ತಿಳಿಸುತ್ತದೆ.
“ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಂ l
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಶಿತಃ ll (1)
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ l
ತಸ್ಯ ನಿಃಸರತೇ ವಾಣೀ ಜಹ್ನುಕನ್ಯಾಪ್ರವಾಹವತ್ ll (2)
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ!
ವಿಶೋಭತೇ ತು ವೈಕುಂಠ ಕವಾಟೋದ್ಘಾಟನ ಕ್ಷಮಃ ll (3)
ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವ ಪದಾಂಕಿತಂ l
ವಾದಿರಾಜ ಯತಿ ಪ್ರೋಕ್ತಂ ಪಠತಾಂ ಸಂಪದಾಂ ಪದಂ ll” (4)
“ಹಯಗ್ರೀವ ಹಯಗ್ರೀವ ಹಯಗ್ರೀವ” ಎಂದು ನಾಮಸ್ಮರಣೆ ಮಾಡಿದರೆ, ಅಂತಹವನ ಪಾಪಗಳು ಕಡುಬಡವನನ್ನು ಕಾಮಿನಿ ತೊರೆಯುವಂತೆ, ತೊರೆದುಹೋಗುತ್ತದೆ.
“ಹಯಗ್ರೀವ ಹಯಗ್ರೀವ ಹಯಗ್ರೀವ” ಎಂದು ಉಚ್ಚರಿಸುವವರ ಮಾತು ಗಂಗೆಯಂತೆ ಅವಿಚ್ಛಿನ್ನವಾಗಿ ಹರಿಯುತ್ತದೆ.
“ಹಯಗ್ರೀವ ಹಯಗ್ರೀವ ಹಯಗ್ರೀವ” ಎಂಬ ಮಂಗಳ ಧ್ವನಿಯು ವೖಕುಂಠದ ಹೆಬ್ಬಾಗಿಲನ್ನೂ ತೆರೆಯುತ್ತದೆ.
ಶ್ರೀವಾದಿರಾಜಯತಿಗಳು ಕರುಣಿಸಿದ ಈ ಮೂರು ಶ್ಲೋಕಗಳನ್ನು ಭಕ್ತಿಯಿಂದ ಪಠಿಸುವವರು ಸರ್ವ ಸಂಪತ್ತನ್ನೂ ಸೂರೆಗೊಳ್ಳುತ್ತಾರೆ, ಎಂದು.
ಇದೇ ತಿಂಗಳಿನ ಶ್ರಾವಣಮಾಸದ ಹುಣ್ಣಿಮೆಯಂದು ಅಂದರೆ 28-8-2026 ರಂದು ಬರುವ ಶ್ರೀಹಯಗ್ರೀವ ಜಯಂತಿಯಂದು, ಯಥಾಶಕ್ತಿ, ಯಥಾಮತಿ ಹಯಗ್ರೀವ ರೂಪಿ ಪರಮಾತ್ಮನನ್ನು ಭಕ್ತಿಯಿಂದ, ಅವನ ಅನುಗ್ರಹದಿಂದ ಪೂಜಿಸಿ, ಆರಾಧಿಸಿ, ಜ್ಞಾನ, ಭಕ್ತಿ, ವೖರಾಗ್ಯಗಳನ್ನು ಅವನಲ್ಲಿ ಪ್ರಾರ್ಥಿಸೋಣ.






Leave a Reply