ಸ್ಥಳ: ಲಾಸ್ ಏಂಜಲಿಸ್, ದಿನಾಂಕ 30ನೇ ಡಿಸೆಂಬರ್, 1968
ಶ್ರೀ ಶ್ರೀಮದ್ ಎ.ಸಿ.ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಒಬ್ಬ ಪತ್ರಿಕೋದ್ಯಮಿಯೊಂದಿಗೆ ನಡೆದ ಸಂವಾದ
– ಅನುವಾದ : ಡಾ. ಕೆ.ವೈ.ಬಾಲರಾಜ್
ಪತ್ರಿಕೋದ್ಯಮಿ : ನನಗೆ ತಿಳಿದಿರುವಂತೆ ನಮ್ಮ ಯುನೈಟೆಡ್ ಸ್ಟೇಟ್ಸ್ ರಾಷ್ಟ್ರದಲ್ಲಿ ಬಹಳಷ್ಟು ಜನರಿಗೆ ಅತಿ ಬೇಸರತರಿಸುವಂಥದ್ದು ಏನೆಂದರೆ ಈ ದೇಶಕ್ಕೆ ಬಹಳಷ್ಟು ಭಾರತೀಯರು ತಾವು ಅವತಾರಿಗಳು ಎಂದು ಹೇಳಿಕೊಂಡು ಒಬ್ಬರ ಅನಂತರ ಮತ್ತೊಬ್ಬರು ಬರುವುದು. ಇದನ್ನು ನೋಡಿ ಇಲ್ಲಿನ ಜನರು ಬಹಳ ಗೊಂದಲಕ್ಕೀಡಾಗಿದ್ದಾರೆ.

ಶ್ರೀಲ ಪ್ರಭುಪಾದ : ಅವರೆಲ್ಲರೂ ಅವಿವೇಕಿಗಳು ಎಂದು ನಾನು ಹೇಳಬಲ್ಲೆ.
ಪತ್ರಿಕೋದ್ಯಮಿ : ಇದನ್ನು ಇನ್ನೂ ವಿಸ್ತಾರವಾಗಿ ಹೇಳಬಲ್ಲಿರಾ?
ಶ್ರೀಲ ಪ್ರಭುಪಾದ : ಇನ್ನು ಹೆಚ್ಚಿಗೆ ಹೇಳಬೇಕೆಂದರೆ ಅವರೆಲ್ಲ ಮೂಢರು.
ಪತ್ರಿಕೋದ್ಯಮಿ : ಉದಾಹರಣೆಗೆ ಮಹರ್ಷಿ.
ಶ್ರೀಲ ಪ್ರಭುಪಾದ: ಅವನು ಮೂಢರಲ್ಲಿ ಮೊದಲನೇ ಸ್ಥಾನದಲ್ಲಿದ್ದಾನೆಂದು ನಾನು ಬಹಿರಂಗವಾಗಿ ಹೇಳಬಲ್ಲೆ. ಆದರೆ ಇಷ್ಟೊಂದು ಅಭಿವೃದ್ಧಿ ಹೊಂದಿರುವ ಈ ಪಾಶ್ಚಿಮಾತ್ಯರು ಹೇಗೆ ಈ ಮೂಢರಿಂದ ಮೂರ್ಖರಾಗುತ್ತಿದ್ದಾರೆ?
ಪತ್ರಿಕೋದ್ಯಮಿ : ಜನರು ಏನನ್ನು ನಂಬಬೇಕು ಎಂದು ಅಂದುಕೊಳ್ಳುತ್ತಾರೋ ಅದನ್ನೇ ನಂಬುತ್ತಾರೆ. ಅವರಿಗೆ ಏನುಬೇಕೋ ಅದನ್ನೇ ಅವನು ಕೂಡುತ್ತಿದ್ದಾನೆ.
ಶ್ರೀಲ ಪ್ರಭುಪಾದ : ಹೌದು, ಅವರಿಗೆ ಅಗ್ಗವಾಗಿರುವುದು ಬೇಕಾಗಿದೆ. ಅದು ಅವರ ತಪ್ಪು. ನಾವು ನಮ್ಮ ಶಿಷ್ಯರಿಗೆ ಅಗ್ಗವಾದದ್ದು ಏನೂ ಕೊಡುವುದಿಲ್ಲ. ನೈತಿಕ ನಡತೆಯೇ ನಮ್ಮ ಮೊದಲನೆಯ ನಿಯಮ. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ನೈತಿಕ ನಡತೆಯನ್ನು ಸ್ವೀಕರಿಸುವುದಿಲ್ಲವೋ ಅವನಿಗೆ ನಾವು ದೀಕ್ಷೆಯನ್ನು ಕೊಡುವುದಿಲ್ಲ ಮತ್ತು ನಮ್ಮ ಸಂಸ್ಥೆಯಲ್ಲಿಯೂ ನಾವು ಅವನನ್ನು ಸೇರಿಸಿಕೊಳ್ಳುವುದಿಲ್ಲ.
ಆದರೆ, ಈ ಮಹರ್ಷಿ ಹೇಳುತ್ತಾನೆ – “ನೀವು ಏನು ಬೇಕಾದರೂ ಮಾಡಿ, ನೀವು ಕೇವಲ 35 ಡಾಲರ್ಸ್ ನನಗೆ ಕೊಡಿ, ನಾನು ನಿಮಗೆ ಮಂತ್ರವನ್ನು ಹೇಳಿಕೊಡುತ್ತೇನೆ.” ಏನೂ ತಿಳಿಯದ ಜನರು ವಂಚನೆಗೆ ಒಳಗಾಗಲು ಬಯಸುತ್ತಾರೆ. ಆದ್ದರಿಂದ ಅವರನ್ನು ವಂಚಿಸಲು ಅನೇಕ ವಂಚಕರು ಬರುತ್ತಾರೆ.

ಪತ್ರಿಕೋದ್ಯಮಿ: ತತ್ ಕ್ಷಣದ (ತುರ್ತು) ಸ್ವರ್ಗ.
ಶ್ರೀಲ ಪ್ರಭುಪಾದ : ಹೌದು.
ಪತ್ರಿಕೋದ್ಯಮಿ : ಮಹರ್ಷಿಯಲ್ಲಿ ನನಗೆ ಮತ್ತು ಹಲವು ಜನರಿಗೆ ಇದ್ದ ಆಸಕ್ತಿ ಈಗ ಇಲ್ಲ. ನನ್ನ ಮಗಳು ಕೂಡ ಇಂತಹ ವಿಷಯದಲ್ಲಿ ತೊಡಗಿದ್ದಳು. ಆದರ ಈಗ ಅವಳ ಭ್ರಾಂತಿ ನಿವಾರಣೆಯಾಗಿದೆ.
ಶ್ರೀಲ ಪ್ರಭುಪಾದ : ಪಾಶ್ಚಿಮಾತ್ಯರಲ್ಲಿ, ವಿಶೇಷವಾಗಿ ಯುವಕರ ಮನಸ್ಥಿತಿ ಹೇಗಿದೆ ಎಂದರೆ ಅವರು ಏನನ್ನೂ ಬಯಸುತ್ತಾರೆ, ನೀವು ನೋಡಿದಿರಾ? ಆದರೆ ಯಾರಾದರೂ ನನ್ನ ಬಳಿ ಬಂದು ಸ್ವಾಮೀಜಿ “ನನಗೆ ದೀಕ್ಷೆ ಕೂಡಿ’ ಎಂದು ಕೇಳಿದರೆ ಅವರಿಗೆ ನಾನು ಈ ನಾಲ್ಕು ಉಪದೇಶಗಳನ್ನು ಅನುಸರಿಸಲು ಹೇಳುತ್ತೇನೆ (ಮಾಂಸಾಹಾರ ಭಕ್ಷಿಸದಿರುವುದು, ಅನೈತಿಕ ಕಾಮ ಸಂಬಂಧ ಇರಕೂಡದು, ಜೂಜು ಆಡಬಾರದು ಮತ್ತು ಮದ್ಯಪಾನ ಮಾಡದಿರುವುದು). ಅವರು ಇದನ್ನು ಕೇಳಿ ಸುಮ್ಮನೆ ಹೊರಟು ಹೋಗುತ್ತಾರೆ.
ಆದರೆ ಈ ಮಹರ್ಷಿ ಯಾವುದೇ ನಿರ್ಬಂಧನೆಗಳನ್ನು ಹಾಕುವುದಿಲ್ಲ. ಯಾವ ವೈದ್ಯ “ನೀವು ಏನು ಬೇಕಾದರೂ ಮಾಡಬಹುದು. ಕೇವಲ ಈ ಮಾತ್ರೆಯನ್ನು ತಿನ್ನಿ. ನೀವು ಗುಣಮುಖರಾಗುತ್ತೀರಿ.” ಎಂದು ಹೇಳುತ್ತಾನೋ ಅಂಥವನನ್ನೇ ನಾವು ಇಷ್ಟಪಡುತ್ತೇವೆ.
ಪತ್ರಿಕೋದ್ಯಮಿ : ಹೌದು, ಅವನು ಅನೇಕ ಜನರನ್ನು ಕೊಂದರೂ ನಾವು ಅವನನ್ನೇ ಇಷ್ಟಪಡುತ್ತೇವೆ.
ಶ್ರೀಲ ಪ್ರಭುಪಾದ : ಹೌದು (ನಗುತ್ತ), ಒಂದು ವೇಳೆ ಆ ವೈದ್ಯ ಇದನ್ನು ಮಾಡಬಾರದು, ಅದನ್ನು ನೋಡಬಾರದು ಎಂದು ಹೇಳಿದರೆ ಅದು ನಿಮಗೆ ಗೋಳು ಎನ್ನಿಸುತ್ತದೆ. ಆದ್ದರಿಂದ ಜನರಿಗೆ ಏನೋ ಬೇಕು, ಆದರೆ ಅದು ಅಗ್ಗವಾಗಿರಬೇಕು. ಈ ಜನರು ಮೋಸ ಹೋಗಲು ಬಯಸುತ್ತಾರೆ. “ನಾನು ಈ ಅವಕಾಶ ಉಪಯೋಗಿಸಿ ಲಾಭ ಪಡೆಯುವೆ” ಎಂದುಕೊಂಡು ಅನೇಕ ಮೋಸಗಾರರು ಬಂದು ಅವರಿಗೆ ಮೋಸ ಮಾಡುತ್ತಾರೆ.

ಅವರು ಉಪದೇಶಿಸುತ್ತಾರೆ, “ನೀವು ಮತ್ತು ಪ್ರತಿಯೊಬ್ಬರೂ ಪರಮಾತ್ಮನಾಗಿದ್ದೀರಿ. ಇದನ್ನು ನೀವು ಮರೆತಿದ್ದೀರಿ. ಇದನ್ನು ನೀವು ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕು ಅಷ್ಟೆ. ಈ ಮಂತ್ರ ತೆಗೆದುಕೊಳ್ಳಿ, ನೀವು ಪರಮಾತ್ಮರಾಗುತ್ತೀರಿ ಮತ್ತು ಶಕ್ತಿಶಾಲಿಯಾಗುತ್ತೀರಿ. ಇಂದ್ರಿಯಗಳ ನಿಯಂತ್ರಣದ ಆವಶ್ಯಕತೆ ಇಲ್ಲ. ನೀವು ಏನು ಇಷ್ಟಪಡುತ್ತೀರೋ ಅದನ್ನು ನೀವು ನಿಯಂತ್ರಿಸಬಹುದು. ನೀವು ಕುಡಿಯಬಹುದು, ಅನೈತಿಕ ಕಾಮ ಸಂಬಂಧ ಹೊಂದಬಹುದು ಮತ್ತು ಏನು ಬೇಕಾದರೂ ಮಾಡಬಹುದು.”
ಜನರು ಯೋಚಿಸುತ್ತಾರೆ, ”ಕೇವಲ 15 ನಿಮಿಷ ಧ್ಯಾನ ಮಾಡುವುದರಿಂದ ನಾನು ಭಗವಂತನಾಗುತ್ತೇನೆ. ಇದಕ್ಕೆ ಕೇವಲ 35 ಡಾಲರ್ಸ್ ಖರ್ಚು ಮಾಡಬೇಕಾಗುತ್ತದೆ. ಇದನ್ನು ಮಾಡಲು ಲಕ್ಷಾಂತರ ಜನರು ಬಯಸುತ್ತಾರೆ. 35 ಡಾಲರ್ಸ್ ನಿಮ್ಮ ದೇಶದಲ್ಲಿ ದೊಡ್ಡದೇನೂ ಅಲ್ಲ. ಆದರೆ 35ನ್ನು ಲಕ್ಷದೊಂದಿಗೆ ಗುಣಾಕಾರ ಮಾಡಿದರೆ 35 ಲಕ್ಷ ಡಾಲರ್ಸ್ ಆಗುತ್ತದೆ.
ಆದರೆ ನಮಗೆ ಮೋಸ ಮಾಡಲು ಆಗುವುದಿಲ್ಲ. ಯಾರಿಗಾದರೂ ನಿಜವಾಗಿಯೂ ಆಧ್ಯಾತ್ಮಿಕ ಜೀವನ ಬೇಕಾದರೆ ನಾವು ಅವರಿಗೆ ನಿರ್ಬಂಧನೆಗಳನ್ನು ಅನುಸರಿಸಲು ಹೇಳುತ್ತೇವೆ. “ನೀವು ಕೊಲ್ಲಬಾರದು” ಎಂದು ದೈವಾಜ್ಞೆ ಇದ್ದರೆ ನಾನು “ಪ್ರಾಣಿಗಳಿಗೆ ಆತ್ಮವಿಲ್ಲ, ಭಾವನೆಗಳಿರುವುದಿಲ್ಲ ಅದನ್ನು ಕೊಲ್ಲಬಹುದು” ಎಂದು ಹೇಳಿ ಮೋಸ ಮಾಡಲು ಆಗುವುದಿಲ್ಲ.
ಪತ್ರಿಕೋದ್ಯಮಿ : ಹೌದು, ನಾನು ಇದನ್ನೇ ತಿಳಿಯಬೇಕೆಂದು ಇದ್ದೆ. ಇದು ಅವಮಾನಕರ ಮತ್ತು ಅತಿಬೇಸರ ತರುವಂತಹ ವಿಷಯವಾಗಿದೆ. ಬಹಳಷ್ಟು ಮಕ್ಕಳು, ಯುವಕರು ಈ ಮೋಹದಿಂದ ಬಿಡುಗಡೆಯಾಗಬೇಕು. ಏಕೆಂದರೆ…
ಶ್ರೀಲ ಪ್ರಭುಪಾದ : ಆದ್ದರಿಂದ ನಮಗೆ ಸಹಾಯ ಮಾಡಿ, ಈ ಆಂದೋಲನ ಚೆನ್ನಾಗಿದೆ. ಇದು ಮಾನವೀಯತೆಯನ್ನು ನಿಮ್ಮ ರಾಷ್ಟ್ರವನ್ನು ಮತ್ತು ಇಡೀ ಮಾನವ ಸಮಾಜಕ್ಕೆ ಸಹಾಯಕಾರಿಯಾಗುತ್ತದೆ. ಇದು ನೈಜವಾದ ಆಂದೋಲನವಾಗಿದೆ – ಇದರಲ್ಲಿ ಯಾವುದೇ ಮೋಸ ಅಥವಾ ವಂಚನೆಯಿಲ್ಲ. ಇದು ಪ್ರಮಾಣೀಕೃತವಾಗಿದೆ.
ಪತ್ರಿಕೋದ್ಯಮಿ : ಯಾರಿಂದ ಇದು ಪ್ರಮಾಣೀಕೃತವಾಗಿದೆ?
ಶ್ರೀಲ ಪ್ರಭುಪಾದ : ಇದು ಕೃಷ್ಣನಿಂದ ಪ್ರಮಾಣೀಕೃತವಾಗಿದೆ.






Leave a Reply