– ಎಸ್.ವಿ. ಗಾಯತ್ರಿ ಶಣೈ
ಒಂದಲೆ ಸೊಪ್ಪಿನ ಚಟ್ನಿ

ಬೇಕಾಗುವ ಪದಾರ್ಥ:
ಒಂದಲೆ ಸೊಪ್ಪು – 1 ಕಟ್ಟು (ಹದಗಾತ್ರದ್ದು)
ಜೀರಿಗೆ – 1 ದೊಡ್ಡ ಚಮಚ
ಹಸಿಮಣಸಿನಕಾಯಿ – 5 (ಅಥವಾ ರುಚಿಗೆ ತಕ್ಕಷ್ಟು)
ತಂಗಿನಕಾಯಿ ತುರಿ – 1 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಹುಣಸೆ ಹಣ್ಣು – ಸ್ವಲ್ಪ ಅಥವಾ ರುಚಿಗೆ ತಕ್ಕಷ್ಟು)
ಅಡಿಗೆ ಎಣ್ಣೆ- 1 ದೊಡ್ಡ ಚಮಚ
ಮಾಡುವ ವಿಧಾನ : ಒ೦ದಲೆ ಸೊಪ್ಪನ್ನು ದಂಟಿನಿಂದ ಬಿಡಿಸಿಕೊಂಡು ಚೆನ್ನಾಗಿ 2-3 ಬಾರಿ ನೀರಿನಲ್ಲಿ ತೊಳೆದು ಶುಭ್ರಮಾಡಿಕೊಳ್ಳಿ, ದಂಟು ತುಂಬಾ ಎಳೆಯದಾಗಿದ್ದರೆ ಅದನ್ನು ಬಳಸಬಹುದು. ಆನ೦ತರ ಒಗ್ಗರಣೆ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಒಗ್ಗರಣೆ ಮಾಡಿಕೊಳ್ಳಿ.
ಉರಿ ಆರಿಸಿ, ಅದೇ ಎಣ್ಣೆಯಲ್ಲಿ ಹಸಿಮೆಣಸಿನಕಾಯಿ ಚೂರು ಹಾಗೂ ತೆಂಗಿನಕಾಯಿ ತುರಿಯನ್ನು ಹಾಕಿ 2-3 ನಿಮಿಷ ಬಾಡಿಸಿ ಅನಂತರ ಒಂದಲೆ ಸೊಪ್ಪು, ಬಾಡಿಸಿದ ಮಸಾಲೆ ಪದಾರ್ಥಗಳನ್ನು ಸೇರಿಸಿ, ಜೊತೆಗೆ ಹುಣಸೆಹಣ್ಣು ಬೆರೆಸಿ ಚಟ್ನಿ ರುಬ್ಬಿ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಒಂದಲೆ ಸೊಪ್ಪಿನ ಚಟ್ನಿ ಸಿದ್ಧ. ಇದನ್ನು ಅನ್ನ, ಅಕ್ಕಿರೊಟ್ಟಿ, ಚಪಾತಿ, ಪೂರಿಯೊಂದಿಗೆ ಸೇವಿಸಬಹುದು.
ಮೆಂತ್ಯ ಸೊಪ್ಪಿನ ಹುಳಿ

ಬೇಕಾಗುವ ಪದಾರ್ಥ
ಮೆಂತ್ಯ ಸೊಪ್ಪು – 1 ಕಟ್ಟು (ಹದಗಾತ್ರದ್ದು) ಚಿಕ್ಕದಾದರೆ 3 ಕಟ್ಟು
ತೆಂಗಿನಕಾಯಿ ತುರಿ -2 ಬಟ್ಟಲು
ತೂಗರಿಬೇಳೆ – 2 ಬಟ್ಟಲು
ಒಣಮೆಣಸಿನಕಾಯಿ – 8-10 (ರುಚಿಗೆ ತಕ್ಕಷ್ಟು)
ಹುಣಸೆ ಹಣ್ಣು – ಅರ್ಧ ನಿಂಬೆಗಾತ್ರದಷ್ಟು
ಅರಿಶಿನ ಪುಡಿ – 1/2 ಚಿಕ್ಕ ಚಮಚ
ಅಡಿಗೆ ಎಣ್ಣೆ-1 ದೊಡ್ಡ ಚಮಚ
ಸಾಸಿವೆ – 1 ಚಿಕ್ಕ ಚಮಚ
ಮಾಡುವ ವಿಧಾನ : (ಮೆಂತ್ಯ ಸೊಪ್ಪಿನ ಬದಲಿಗೆ ಬಸಲೆಸೊಪ್ಪು, ದಂಟಿನ ಸೊಪ್ಪು ಅಥವಾ ಪಾಲಕ್ ಸೊಪ್ಪನ್ನು ಹಾಕಿ ಸಹ ಇದೇ ಮಸಾಲೆ ಪದಾರ್ಥಗಳೊಂದಿಗೆ ಹುಳಿ ತಯಾರಿಸಬಹುದು) ಮೊದಲು ಮೆಂತ್ಯ ಸೊಪ್ಪನ್ನು ಬಿಡಿಸಿಕೊಂಡು 2-3 ಬಾರಿ ನೀರಿನಲ್ಲಿ ಕೊಳೆಯಿರಿ. ಇದರ ದಂಟು ಸ್ವಲ್ಪ ಕಹಿ ಬರುವುದರಿಂದ ಬರೀ ಸೊಪ್ಪನ್ನು ಮಾತ್ರ ಹೆಚ್ಚಿಟ್ಟುಕೊಳ್ಳಿ.
ಕುಕ್ಕರ್ ನ ಒಂದು ಪಾತ್ರೆಯಲ್ಲಿ ತೊಗರಿಬೇಳೆ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಸ್ವಲ್ಪ ಅರಿಶಿನ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಮತ್ತೊಂದು ಪಾತ್ರೆಯಲ್ಲಿ ಹೆಚ್ಚಿಟ್ಟ ಸೊಪ್ಪಿಗೆ ಸ್ವಲ್ಪ ನೀರು ಚಿಮುಕಿಸಿ 3-4 ಸೀಟಿ ಬರುವವರೆಗೂ ಬೇಯಿಸಿ.
ಸೊಪ್ಪು ಮತ್ತು ಬೇಳೆ ಬೇಯುವುದರಲ್ಲಿ ತ೦ಗಿನಕಾಯಿ, ಹುಣಸೆ ಹಣ್ಣು, ಒಣಮೆಣಸಿನಕಾಯಿ (ಬೇಕಾದರೆ ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಬಹುದು)ಯನ್ನು ಮಸಾಲೆ ರುಬ್ಬಿಕೊಳ್ಳಿ.
ರುಬ್ಬಿದ ಮಸಾಲೆ ಹಾಗೂ ಬೆಂದ ಸೊಪ್ಪು ಬೇಳೆಯನ್ನು ಮತ್ತೊಂದು ಪಾತ್ರೆಯಲ್ಲಿ ಹಾಕಿ, ಉಪ್ಪು ಸೇರಿಸಿ ಮತ್ತೆ 7-8 ನಿಮಿಷ ಪದಾರ್ಥಗಳು ಒಂದಕ್ಕೊಂದು ಬೆರೆಯುವಂತೆ ಕುದಿಸಿ. ಹುಳಿಗೆ ಕುದಿ ಬರವುದರಲ್ಲಿ ಒಗ್ಗರಣೆ ಬಾಣಲಿಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಒಗ್ಗರಣೆ ಕೊಟ್ಟು, ಹುಳಿಗೆ ಸೇರಿಸಿ ಈ ಹುಳಿಯನ್ನು ಅನ್ನದೊಂದಿಗೆ ಹೆಚ್ಚಾಗಿ ಸೇವಿಸಬಹುದು.
ಸೊಪ್ಪಿನ ವಿಶೇಷಗಳನ್ನು ನೀವು ಸ್ವೀಕರಿಸುವ ಮೊದಲು ಶ್ರೀ ರಾಧಾಕೃಷ್ಣರಿಗೆ ಅರ್ಪಿಸುವುದನ್ನು ಮರೆಯದಿರಿ.






Leave a Reply